ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ವಿಶೇಷ ವರದಿ
ಕಾಂಗ್ರೆಸ್ ತಂತ್ರ v/s ಮೋದಿ ಮಂತ್ರ
 

ರಾಜ್ಯ ವಿಧಾನಸಭಾ ಚುನಾವಣೆಗೆ ಸಿದ್ಧವಾಗಿ ನಿಂತಿರುವ ಕಾಂಗ್ರೆಸ್, ಬಿಜೆಪಿ ಮತ್ತು ಜೆಡಿ(ಎಸ್) ರಣತಂತ್ರಗಳ ಅವಲೋಕನ ಮಾಡಿದ್ದಾರೆ ಟಿಎಸ್‌ಐನ ಶಶಿ ಸಂಪಳ್ಳಿ


ವಾತಾವರಣದಲ್ಲಿ ಬಿಸಿಲಿನ ತಾಪಮಾನ ಹೆಚ್ಚಿದಂತೆ ರಾಜ್ಯದಲ್ಲಿ ಚುನಾವಣಾ ಜ್ವರ ಕೂಡ ಏರಲಾರಂಭಿಸಿದೆ. ಇನ್ನೂ ಅಧಿಕೃತವಾಗಿ ಚುನಾವಣೆ ಘೋಷಣೆಯಾಗದಿದ್ದರೂ ರಾಜ್ಯದ ಮೂರು ಪ್ರಮುಖ ಪಕ್ಷಗಳು ನಡೆಸುತ್ತಿರುವ ಕಸರತ್ತನ್ನು ಕಂಡಾಗ ಮೇ ಒಳಗೆ ಸಮರ ಖಚಿತ. ಇಂತಹ ಸನ್ನಿವೇಶದಲ್ಲಿ ಜೆಡಿ(ಎಸ್) ಮತ್ತು ಕಾಂಗ್ರೆಸ್ 'ತೊಡೆ ತಟ್ಟುವ' ಬಗ್ಗೆ ಬಹಿರಂಗವಾಗಿ ಹೇಳಿಕೆ ಕೊಟ್ಟುಕೊಂಡು ಹಳೇ ಮೈಸೂರು ಪ್ರದೇಶದಲ್ಲಿನ ತಮ್ಮ ಪ್ರಾಬಲ್ಯದ ಪ್ರದರ್ಶನ ಮಾಡುವ ಯತ್ನಕ್ಕೆ ಸೀಮಿತವಾಗಿ ನಿಂತಿವೆ. ಇನ್ನೊಂದೆಡೆ 'ವಚನ ಭ್ರಷ್ಟ'ರ ವಿರುದ್ಧ ಘೋಷಣೆ ಹೊರಡಿಸುತ್ತ ಬಿಜೆಪಿ ಮಧ್ಯ ಹಾಗೂ ಉತ್ತರ ಕರ್ನಾಟಕದಲ್ಲಿ ತನ್ನ ನೆಲಗಟ್ಟು ಭದ್ರ ಮಾಡಿಕೊಳ್ಳುವ ಜಾಣತನ ತೋರಿಸುತ್ತಿದೆ. ಇಲ್ಲಿ ಕಾಂಗ್ರೆಸ್‌ನ ಸ್ಫುರದ್ರೂಪಿ, ವಯೋವೃದ್ಧ ರಾಜಕಾರಣಿ ಎಸ್.ಎಂ.ಕೃಷ್ಣ ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಇಳಿಯುತ್ತಿದ್ದ ಹೊತ್ತಿನಲ್ಲಿಯೇ ಅಲ್ಲಿ ಹುಬ್ಬಳ್ಳಿಯಲ್ಲಿ ಮೋದಿತ್ವದ ಸ್ಥಾಪನೆ ಮಾಡಲು ಬಿಜೆಪಿ ಯಶಸ್ವಿಯಾಗಿತ್ತು.
ಹುಬ್ಬಳ್ಳಿಯಲ್ಲಿ ನಡೆದ ಬಿಜೆಪಿಯ ರೈತ ಸಮಾವೇಶಕ್ಕೆ ಆಗಮಿಸಿದ್ದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ನಿರೀಕ್ಷೆಯಂತೆ 'ಕರ್ನಾಟಕಕ್ಕೆ ಗುಜರಾತ್ ಮಾದರಿಯಾಗಬೇಕು. ಅಲ್ಲಿನ ಮಾದರಿಯ ಸರ್ಕಾರ ಇಲ್ಲೂ ಅಧಿಕಾರಕ್ಕೆ ಬರಬೇಕು' ಎಂದು ಹೇಳಿದ್ದಾರೆ. ಅವರ ಹೇಳಿಕೆ, ಆಗಮನಕ್ಕಿಂತ ಪ್ರಮುಖವಾದ ಅಂಶವೆಂದರೆ, ಬಿಜೆಪಿ ತನ್ನ ಚುನಾವಣಾ ಪ್ರಚಾರಾಂದೋಲನದ ಪ್ರಮುಖ ಮೆಟ್ಟಿಲಾದ ಈ ಸಮಾವೇಶವನ್ನು ನರೇಂದ್ರ ಮೋದಿಯವರಿಂದ ಉದ್ಘಾಟಿಸಿದ್ದರ ಹಿಂದಿರುವ ಸಂದೇಶ. ಹಿಮಾಚಲಪ್ರದೇಶ, ಉತ್ತರಖಂಡ, ಗೋವಾ ಮತ್ತು ಗುಜರಾತ್ ಗೆಲುವಿನ ಬಳಿಕ ಬಿಜೆಪಿಗೆ ಕರ್ನಾಟಕ ವಿಧಾನಸಭಾ ಚುನಾವಣೆ ಪ್ರತಿಷ್ಠೆಯ ಪ್ರಶ್ನೆಯಾಗಿದೆ. ಕರ್ನಾಟಕದ ಮಟ್ಟಿಗೆ ಅಭಿವೃದ್ಧಿಯ ಹೆಸರು ಹೇಳಿಕೊಂಡು ಚುನಾವಣೆ ಗೆಲ್ಲಬಹುದು ಎಂದುಕೊಂಡಿದ್ದ ಬಿಜೆಪಿಯ ರಾಜ್ಯ ಮುಖಂಡರಿಗೆ, ಪ್ರತಿಪಕ್ಷಗಳ ವಾಗ್ದಾಳಿಯಿಂದಾಗಿ ಅದು ಸುಲಭವಲ್ಲ ಎಂಬುದು ಮನವರಿಕೆಯಾದಂತಿದೆ. ಜೊತೆಗೆ ತನ್ನ ಸಾಂಪ್ರದಾಯಿಕ ಮತಬುಟ್ಟಿಯಾದ ಪಟ್ಟಣ ಮತ್ತು ನಗರ ಪ್ರದೇಶದ ಮಧ್ಯಮವರ್ಗದ ಕಣ್ಮಣಿ ಎಸ್.ಎಂ. ಕೃಷ್ಣರ ರಂಗಪ್ರವೇಶವಾಗಿದೆ. ಹಾಗಾಗಿ ಈಗ ನಿಜವಾದ ಚುನಾವಣಾ ಸಮರ ಆರಂಭವಾಗುವ ಹೊತ್ತಿಗೆ ಬಿಜೆಪಿಗೆ ಹೊಸ ಪರ್ಯಾಯ ಕಾರ್ಯತಂತ್ರದ ಅನಿವಾರ್ಯತೆ ಒದಗಿಬಂದಿದೆ.
ಅದೂ, ಎಸ್.ಎಂ. ಕೃಷ್ಣ ರಾಜ್ಯ ರಾಜಕಾರಣಕ್ಕೆ ಮರಳುವುದು ಖಚಿತವಾಗುತ್ತಲೇ ಬಿಜೆಪಿ ಮೋದಿಯನ್ನು ಕರೆತಂದಿದೆ! ಹಾಗಂದ ಮಾತ್ರಕ್ಕೆ, ಮೋದಿಯನ್ನು ಕರೆಸಿ ಪಟ್ಟಣವಾಸಿ ಮಧ್ಯಮ ವರ್ಗವನ್ನು ಮರಳುಮಾಡುವುದು ಮಾತ್ರ ಅವರ ಉದ್ದೇಶವಲ್ಲ. ಅಷ್ಟು ಸರಳವಾಗಿ ಬಿಜೆಪಿ ನಡೆಯನ್ನು ಗ್ರಹಿಸುವುದು ಈಗಿನ ಪರಿಸ್ಥಿತಿಯಲ್ಲಿ ಮೂರ್ಖತನವೇ ಆಗಬಹುದು. ಏಕೆಂದರೆ, ಕಳೆದ 2004ರ ಚುನಾವಣೆಯಲ್ಲಿ ಮೋದಿಯನ್ನು ಕರೆಸಿದ ಪಕ್ಷ ಸಾಕಷ್ಟು ಮತಗಳನ್ನು ಬುಟ್ಟಿಗೆ ಹಾಕಿಕೊಂಡಿತ್ತು. ಅದೂ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಆ ಪ್ರಯೋಗ ಹೆಚ್ಚು ಫಲಪ್ರದವಾಗಿತ್ತು. ಆ ಫಲದ ಅರಿವಿರುವುದರಿಂದ ಈಗ ಕರ್ನಾಟಕ ಬಿಜೆಪಿ ಕೋಮು ವಿಭಜನೆ ಮೂಲಕ ಮತ ಗಳಿಸುವ ಪ್ರಯತ್ನಕ್ಕೆ ಮುಂದಾಗಿದೆ. ಹಾಗಾಗೇ ಈ ಮೋದಿತ್ವದ ಮಂತ್ರ ಪಠಣೆ.
ಅಂತಹ ಪ್ರಯತ್ನಕ್ಕೆ ಅದಕ್ಕೆ ವಿಶ್ವಾಸ ತುಂಬುತ್ತಿರುವುದು ರಾಜ್ಯದ ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಅದಕ್ಕಿರುವ ಭದ್ರ ನೆಲೆ. ಕರಾವಳಿ ಮತ್ತು ಮಲೆನಾಡಿನಲ್ಲಿ ಕೋಮು ಆಧಾರದ ಮೇಲೆ ಮತಗಳನ್ನು ಬುಟ್ಟಿಗೆ ಹಾಕಿಕೊಳ್ಳುವಲ್ಲಿ ಯಶಸ್ಸು ಗಳಿಸಿರುವ ಬಿಜೆಪಿ ಈಗ ಅದೇ ಪ್ರಯೋಗವನ್ನು ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕಕ್ಕೂ ವಿಸ್ತರಿಸುವ ಮೂಲಕ ಮುಂದಿನ ಬಾರಿ ಸ್ವಂತ ಬಲದ ಮೇಲೆ ಅಧಿಕಾರದ ಕುರ್ಚಿಗೆ ಏರುವ ಲೆಕ್ಕಾಚಾರದಲ್ಲಿದೆ. ಆದರೆ, ಅದನ್ನು ಘಂಟಾಘೋಷವಾಗಿ ಹೇಳುವ ಮೂಲಕ ಮತ್ತೊಂದು ಬಗೆಯ ಅಪಾಯವನ್ನು ತಂದುಕೊಳ್ಳಲು ಅದು ಸಿದ್ಧವಿಲ್ಲ. ಏಕೆಂದರೆ, ತನ್ನ ಗೆಲುವಿಗೆ ಬರಿ ಮೋದಿತ್ವವೊಂದೇ ಸಾಲದು ಎಂಬುದನ್ನು ಅವರು ಅರಿತಿದ್ದಾರೆ. ಹಾಗೇ ಮೋದಿತ್ವದ ಮಾತು ಜೋರಾಗಿ ಕೇಳಿಬಂದರೆ, ಯಡಿಯೂರಪ್ಪ ಅವರಿಗೆ ಜೆಡಿ(ಎಸ್)ನಿಂದ ವಂಚನೆಯಾಗಿದೆ ಎಂಬ ಒಂದೇ ಕಾರಣಕ್ಕಾಗಿ ತಮ್ಮ ಬೆನ್ನಿಗಿರುವ ಲಿಂಗಾಯಿತರು ಗಣನೀಯ ಪ್ರಮಾಣದಲ್ಲಿ ದೂರಾಗಬಹುದು ಎಂಬ ಭೀತಿ ಕೂಡ ಇದೆ.
ಜೆಡಿ(ಎಸ್)ನಿಂದ ಯಡಿಯೂರಪ್ಪ ಅವರಿಗಾದ 'ವಿಶ್ವಾಸ ದ್ರೋಹ', ತಮ್ಮ 20 ತಿಂಗಳ ಸಮ್ಮಿಶ್ರ ಸರ್ಕಾರದಲ್ಲಿ ಕೈಗೊಂಡ ಅಭಿವೃದ್ಧಿ, ಮಠ-ಮಾನ್ಯಗಳಿಗೆ ನೀಡಿದ ಅನುದಾನಗಳನ್ನು ಸಾರ್ವಜನಿಕವಾಗಿ ಗಟ್ಟಿ ದನಿಯಲ್ಲಿ ಹೇಳಿದರೂ, ಆಳದಲ್ಲಿ ಮೋದಿತ್ವದ ಅಂಶಗಳನ್ನು ಮುಂದಿಡುವುದು ಬಿಜೆಪಿಯ ಮಟ್ಟಿಗೆ ಈಗ ಅನಿವಾರ್‍ಯ ಎನಿಸಿಬಿಟ್ಟಂತಿದೆ.
ತನ್ನ ಬಲವರ್ಧನೆಯ ಸಾಧ್ಯತೆ ಇರುವ ಪ್ರದೇಶಗಳನ್ನು ಸ್ಪಷ್ಟವಾಗಿ ಗುರುತಿಸಿಕೊಂಡಿರುವ ಬಿಜೆಪಿ, ಕರಾವಳಿ ಮತ್ತು ಮಲೆನಾಡು ಪ್ರದೇಶಗಳಲ್ಲಿ ತನಗೆ ಮೇಲುಗೈ ಶತಸಿದ್ಧ ಎಂದು ಗ್ರಹಿಸಿದೆ. ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಕಳೆದ ಬಾರಿ ಗಣನೀಯ ಪ್ರಮಾಣದಲ್ಲಿ ತಾನು ಗೆಲವು ಸಾಧಿಸಿದ್ದರೂ ಅದು ಧರ್ಮಾಧಾರಿತ ಜನಾದೇಶದ ಕಾರಣದಿಂದಲ್ಲ, ಬದಲಾಗಿ ಜಾತಿಯಾಧಾರಿತ (ಲಿಂಗಾಯಿತ) ಕಾರಣದಿಂದ ಎಂಬುದನ್ನು ಅದು ಅರಿತಿದೆ. ಆದರೆ, ಅಂತಹ ಮತಗಳು ತಮ್ಮದೇ ಜಾತಿಯ ಮತ್ತೊಬ್ಬ ಪ್ರಭಾವಿ ನಾಯಕ ಇನ್ನೊಂದು ಪಕ್ಷದಿಂದ ನಿಂತಾಗ ದೂರ ಸರಿಯಲಿವೆ ಎಂಬ ವಿವೇಕವೂ ಇದೆ. ಹಾಗಾಗೇ, ಜಾತಿಗಿಂತಲೂ ಹೆಚ್ಚು ಪ್ರಚೋದಕವಾದ ಧರ್ಮವನ್ನು ಆಧಾರವಾಗಿರಿಸಿಕೊಂಡು ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದಲ್ಲಿ ಪ್ರಾಬಲ್ಯ ಸಾಧಿಸುವ ನಿಟ್ಟಿನಲ್ಲಿ ನಿರಂತರ ಕಾರ್ಯಶೀಲವಾಗಿದೆ. ತಮ್ಮ ಅಲ್ಪಮತದ ಸರ್ಕಾರ ಕುಸಿದ ದಿನದಿಂದಲೂ ಬಿಜೆಪಿ ರಾಜ್ಯದ ಆ ಭಾಗದಲ್ಲಿ ತನ್ನ ಕಾರ್ಯಚಟುವಟಿಕೆಯನ್ನು ಕೇಂದ್ರೀಕರಿಸಿದೆ. ಅದಕ್ಕೆ ಪೂರಕವಾಗಿ, ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷಗಳೆರಡೂ ತಮ್ಮ ಗಮನವನ್ನು ಹಳೇ ಮೈಸೂರು ಭಾಗಕ್ಕೆ ಮಾತ್ರ ಸೀಮಿತಗೊಳಿಸಿಕೊಂಡಿವೆ.
ಹಾಗೇ ಕಾಂಗ್ರೆಸ್‌ನ ಹೊಸ ಚುನಾವಣಾ ಸಮಿತಿಗಳಲ್ಲಿ ಲಿಂಗಾಯಿತರಿಗೆ ಅವಕಾಶ ನೀಡದಿರುವುದು ಕೂಡ ಬಿಜೆಪಿಗೆ ಕೆಲಮಟ್ಟಿಗೆ ಪೂರಕವಾಗಲಿದೆ. ಜೊತೆಗೆ ಖರ್ಗೆಯವರನ್ನು ಹೊರತುಪಡಿಸಿ, ಈಗ ವಿವಿಧ ಸಮಿತಿ, ಹುದ್ದೆಗಳಲ್ಲಿರುವ ಎಸ್.ಎಂ. ಕೃಷ್ಣ, ಸಿದ್ದರಾಮಯ್ಯ, ಕೃಷ್ಣ ಭೈರೇಗೌಡ ಮುಂತಾದವರೆಲ್ಲಾ ಹಳೇ ಮೈಸೂರು ಭಾಗದವರೇ ಎಂಬುದು ಕೂಡ ಬಿಜೆಪಿಯಂತಹ 'ಪ್ರದೇಶ' ಮತ್ತು 'ಧರ್ಮ'ಗಳ ಜೊತೆ ಗುರುತಿಸಿಕೊಳ್ಳುವ 'ಬ್ರಾಂಡ್ ಪಕ್ಷ'ಗಳಿಗೆ ವರದಾನವಾಗಬಹುದು. ಇನ್ನು ಜೆಡಿ(ಎಸ್) ವಿಷಯದಲ್ಲಂತೂ ಈ ಎರಡೂ ಅಂಶ (ಪ್ರದೇಶವಾಗಿ ಉತ್ತರ ಕರ್ನಾಟಕ ಮತ್ತು ಜಾತಿಯಾಗಿ ಲಿಂಗಾಯಿತ)ಗಳಲ್ಲಿ ಸಾಕಷ್ಟು ಮಿತಿಗಳಿವೆ. ಅಂದರೆ, 'ಆ ಪಕ್ಷ ಒಂದು ಜಾತಿ ಮತ್ತು ಕುಟುಂಬಕ್ಕೆ ಸೀಮಿತವಾಗಿದೆ' ಎಂಬ ಕಾರಣವೊಡ್ಡಿಯೇ ಇತ್ತೀಚೆಗಷ್ಟೇ ಅಲ್ಲಿಯ ಹಿರಿಯ ಪ್ರಭಾವಿ ರಾಜಕಾರಣಿಗಳು ಬೇರೆಡೆಗೆ ವಲಸೆ ಹೋಗಿದ್ದಾರೆ. ಅವರಲ್ಲಿ ಉತ್ತರ ಮತ್ತು ಮಧ್ಯ ಕರ್ನಾಟಕದ ಮಂದಿಯೇ ಹೆಚ್ಚು ಎಂಬುದು ಕಾಕತಾಳೀಯ.
ಪ್ರಜಾಪ್ರಭುತ್ವ ವ್ಯವಸ್ಥೆಯೊಂದರಲ್ಲಿ ಧರ್ಮ ಮತ್ತು ಪ್ರಾದೇಶಿಕ ಅಂಶಗಳ ಆಧಾರದ ಮೇಲೆ ಯಾವ ಚುನಾವಣೆಗಳ ಫಲಿತಾಂಶವೂ ನಿರ್ಧಾರಿತವಾಗಬಾರದು ಎಂಬುದು ಎಷ್ಟು ಅಪೇಕ್ಷಣೀಯವೋ, ವಾಸ್ತವದಲ್ಲಿ ಇಂದು ಅದೇ ನಡೆಯುತ್ತಿದೆ ಎಂಬುದು ಮತ್ತು ಎಲ್ಲಾ ಪಕ್ಷಗಳು ಅದನ್ನೇ ಮಾನದಂಡವಾಗಿಸಿಕೊಂಡೇ ಚುನಾವಣೆ ಎದುರಿಸುತ್ತಿವೆ ಎಂಬುದು ಅಷ್ಟೇ ನಾಚಿಕೆಗೇಡಿನ ಸಂಗತಿ. ಇಂತಹ ಕಟು ವಾಸ್ತವದ ನಡುವೆಯೂ ಈ ಎರಡೂ ವಿಷಯಗಳಲ್ಲಿ ಹಲವು ಮಿತಿಗಳನ್ನು ಹೊಂದಿರುವ ಕಾಂಗ್ರೆಸ್ ಮತ್ತು ಜೆಡಿ(ಎಸ್) ಪಕ್ಷಗಳು ಆ ಅಂಶಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ!
ಕಾಂಗ್ರೆಸ್‌ನಲ್ಲಿ ಕೃಷ್ಣ ಜಪ ಮತ್ತು ಆ ನಂತರದ ಕೃಷ್ಣಾಗಮನದ ಸಂಭ್ರಮವೇ ಮುಖ್ಯವಾಗಿದೆ. ಹಾಗಾಗಿ ಮತ್ತೊಮ್ಮೆ ಅಲ್ಲಿ ಮಲ್ಲಿಕಾರ್ಜುನ ಖರ್ಗೆ, ಎನ್. ಧರ್ಮಸಿಂಗ್, ಎಚ್.ಕೆ. ಪಾಟೀಲ್ ಮುಂತಾದ ಉತ್ತರ ಕರ್ನಾಟಕ ಮತ್ತು ಲಿಂಗಾಯಿತ ಸಮುದಾಯವನ್ನು ಪ್ರತಿನಿಧಿಸುವ ನಾಯಕರು ಬದಿಗೆ ಸರಿಯುವ ಸ್ಥಿತಿ ಇದೆ. ಇನ್ನು ಜೆಡಿ(ಎಸ್)ನಲ್ಲಿ ಈಗಲೂ ಹಳೇ ಮೈಸೂರು ಭಾಗದಲ್ಲಿ ಸಿದ್ದರಾಮಯ್ಯನವರ ವಿರುದ್ಧ ಮೇಲುಗೈ ಸಾಧಿಸುವುದೇ ಇತರೆಲ್ಲಾ ಆದ್ಯತೆಗಳಿಗಿಂತ ಮುಖ್ಯವಾದಂತಾಗಿದೆ. ಜೊತೆಗೆ ದೇವೇಗೌಡರು ಇನ್ನೂ ಪ್ರಚಾರ ಕಣಕ್ಕೆ ಇಳಿಯದೇ 'ಕುಮಾರ'ನನ್ನೇ ಮುಂದೆ ಬಿಟ್ಟು, ತಾವು ಮಂತ್ರಕ್ಕೆ ಮಾವಿನ ಕಾಯಿ ಉರುಳಿಸುವ ಹೋಮ- ಹವನಾದಿ ಪ್ರಯತ್ನದಲ್ಲೇ ತೊಡಗಿಸಿಕೊಂಡಿದ್ದಾರೆ.
ಹೀಗೆ ಈ ಎರಡೂ ಪಕ್ಷಗಳು ಹಳೇ ಮೈಸೂರು ಭಾಗದ 8-10 ಜಿಲ್ಲೆಗಳ ಮತಗಳೇ ನಿರ್ಣಾಯಕ ಎಂಬಂತೆ ಗುದ್ದಾಡುತ್ತಿವೆ. ಆದರೆ, ಬಿಜೆಪಿ ಮಾತ್ರ ಈ ಜಿಲ್ಲೆಗಳ ಮತಗಳನ್ನು ಈ ಎರಡೂ ಪಕ್ಷಗಳೇ ಹಂಚಿಕೊಂಡರೂ ತಮಗೇನೂ ಭಯವಿಲ್ಲ ಎಂಬಂತೆ ಉತ್ತರ ಕರ್ನಾಟಕ ಮತ್ತು ಮಧ್ಯ ಕರ್ನಾಟಕದ ಮತಗಳ ಮೇಲೆ ಕಣ್ಣಿಟ್ಟಿದೆ. ಮಲೆನಾಡು ಭಾಗದ ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ಜೊತೆಗೆ ಮಧ್ಯ ಕರ್ನಾಟಕದ ದಾವಣಗೆರೆ, ಬಳ್ಳಾರಿಗಳಲ್ಲಿ ಸಾಕಷ್ಟು ಬಲ ಹೊಂದಿರುವ ಪಕ್ಷ ಅಲ್ಲಿ ಕಳೆದ ಚುನಾವಣೆಯಲ್ಲಿ ಜಯಸಿದ್ದ ಸ್ಥಾನಗಳನ್ನು ಉಳಿಸಿಕೊಂಡರೆ ಭಯವಿಲ್ಲ ಎಂಬ ವಿಶ್ವಾಸದಲ್ಲಿದೆ. ಹಾಗೇ ಹುಬ್ಬಳ್ಳಿ, ಬೆಳಗಾವಿ, ಬಾಗಲಕೋಟೆ, ಗದಗ, ಕೊಪ್ಪಳ, ರಾಯಚೂರು, ಬೀದರ್‌ಗಳಲ್ಲಿ ತನ್ನ ಸ್ಥಾನಗಳನ್ನು ಹೆಚ್ಚಿಸಿಕೊಂಡಲ್ಲಿ ಸ್ಪಷ್ಟ ಬಹುಮತದ ಸಮೀಪಕ್ಕೆ ಹೋಗುವುದು ಕಷ್ಟವಾಗಲಾರದು ಎಂಬುದು ಬಿಜೆಪಿ ಲೆಕ್ಕಾಚಾರ. ಅದಕ್ಕೆ ಪೂರಕವಾಗಿ ಗುಲ್ಬರ್ಗಾ ಜಿಲ್ಲೆಯ ಖರ್ಗೆಯವರ ಗುರ್‌ಮಿಟ್ಕಲ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಪಾರಂಪರಿಕ ಕ್ಷೇತ್ರಗಳು ಕ್ಷೇತ್ರ ಪುನರ್ ವಿಂಗಡಣೆಯ ಹೊಡೆತಕ್ಕೆ ಸಿಕ್ಕು ಚೆಲ್ಲಾಪಿಲ್ಲಿಯಾಗಿವೆ.
ಒಟ್ಟಾರೆ, ಎಲ್ಲಾ ಲೆಕ್ಕಾಚಾರಗಳ ಹಿನ್ನೆಲೆಯಲ್ಲಿ ಬಿಜೆಪಿ ಸ್ಪಷ್ಟ ಚುನಾವಣಾ ಕಾರ್ಯತಂತ್ರದಿಂದಲೇ ಉತ್ತರ ಕರ್ನಾಟಕದಲ್ಲಿ ದಂಡಯಾತ್ರೆ ಆರಂಭಿಸಿದೆ. ಅದೂ ಉಗ್ರ ಹಿಂದೂವಾದಿಗಳ ಆರಾಧ್ಯ ದೈವ ನರೇಂದ್ರ ಮೋದಿಯವರ ದೀಕ್ಷೆಯೊಂದಿಗೆ! ಅಭಿವೃದ್ಧಿ ಯೋಜನೆಗಳ ಶ್ರೇಯಸ್ಸು, ರೈತರ ಸಾಲ ಮನ್ನಾ, ಬಡ ಮಕ್ಕಳಿಗೆ ಸೈಕಲ್ ವಿತರಣೆ ಮುಂತಾದ ವಿಷಯಗಳಲ್ಲಿ ತನ್ನ 'ಹಿಂದಿನ ಮಿತ್ರ ಮತ್ತು ಹಾಲಿ ಶತ್ರು' ಪಕ್ಷ ಪಾಲು ಕೇಳಬಹುದು. ಆ ಕಾರ್ಯಕ್ರಮಗಳ ನಿಜವಾದ ಪ್ರತಿಪಾದಕ ತಾನೇ ಎಂದು ಜನರಿಗೆ ಸಾರಿ ಹೇಳಬಹುದು. ಆದರೆ, ಪಕ್ಷದ ಆಂತರಿಕ ಅಧಿಕಾರ ಮತ್ತು ನಾಳೆಯ ಮುಖ್ಯಮಂತ್ರಿ ಅಭ್ಯರ್ಥಿ ಬಿಂಬಿಸುವಲ್ಲಿ ಜಾತಿ ಮತ್ತು ಪ್ರದೇಶಗಳ ಆದ್ಯತೆಯ ಪ್ರಶ್ನೆ ಬಂದಾಗ ಅದು ನಡೆಯುವುದಿಲ್ಲ! ಹಾಗೇ ಈ ವಿಷಯದಲ್ಲಿ ಎದೆತಟ್ಟಿ ಹೇಳುವಂತಹ ಅಂಶಗಳು ಕಾಂಗ್ರೆಸ್ ಬತ್ತಳಿಕೆಯಲ್ಲೂ ಇಲ್ಲ! ಜೊತೆಗೆ ಮೋದಿತ್ವದ ಪ್ರತಿಪಾದನೆಯಂತೂ ತಮಗಷ್ಟೇ! ಇದು ಬಿಜೆಪಿಯ ಚುನಾವಣಾ ರಣನೀತಿಯ ಲೆಕ್ಕಾಚಾರ.ಹಾಗಾಗೇ ಕೃಷ್ಣಾಗಮನವಾಗಲೀ, ಕುಮಾರಸ್ವಾಮಿಯವರ ಜೈತ್ರಯಾತ್ರೆಯಾಗಲಿ, ಬಿಜೆಪಿ ತನ್ನ ಉತ್ತರಮುಖಿ ಯಾತ್ರೆಯಿಂದ ವಿಚಲಿತವಾಗುವಂತೆ ತೋರುತ್ತಿಲ್ಲ.
"ಚುನಾವಣೆ ಕೂಡಲೇ ಆಗಬೇಕು. ಆಗದಿದ್ದರೆ ಕೋರ್ಟಿಗೆ ಹೋಗುತ್ತೇವೆ" ಎಂಬ ವಿಶ್ವಾಸದ ಮಾತುಗಳು ಕೂಡ ಅದನ್ನೇ ಹೇಳುತ್ತವೆ ಅಲ್ಲವೇ!?

"ರಾಹುಲ್ ರಾಜ್ಯ ಪ್ರವಾಸ ಗಿಮಿಕ್ ಅಲ್ಲ"

ರಾಜ್ಯ ಯುವ ಕಾಂಗ್ರೆಸ್ ಅಧ್ಯಕ್ಷ ಕೃಷ್ಣ ಬೈರೇಗೌಡ ಮೂಲತಃ ಒಬ್ಬ ಗ್ರಾಮೀಣಾಭಿವೃದ್ಧಿ ತಜ್ಞ. ಅಮೆರಿಕ ಎಂಬ ಕನಸಿನ ಲೋಕದಿಂದ ಅನಿರೀಕ್ಷಿತವಾಗಿ ರಾಜಕೀಯಕ್ಕೆ ಧುಮುಕಿದ ಕೃಷ್ಣ ಅವರ ಜೊತೆ ಟಿಎಸ್‌ಐನ ಚಿತ್ರಾ ಕರ್ಕೇರಾ ನಡೆಸಿದ ಸಂದರ್ಶನದ ಆಯ್ದ ಭಾಗ

ಚುನಾವಣೆ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ರಾಜ್ಯಕ್ಕೆ ಬರುತ್ತಿದ್ದಾರೆಯೇ?

ಇಲ್ಲ. ಅವರ ಭೇಟಿ ಚುನಾವಣಾ ಗಿಮಿಕ್ ಅಲ್ಲ. ರಾಜಕೀಯವನ್ನು ಮೀರಿ ಕರ್ನಾಟಕದ ಸಮಗ್ರ ಚಿತ್ರಣವನ್ನು ಅರಿಯಬೇಕೆಂಬುದೇ ಅವರ ಉದ್ದೇಶ. ರಾಜ್ಯದ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಸ್ಥಿತಿಗತಿ ಹಾಗೂ ರೈತ ಹಾಗೂ ಯುವಕರ ಸಮಸ್ಯೆಗಳು, ಅವರ ಆಶೋತ್ತರಗಳನ್ನು ಅರಿಯುವ ಉದ್ದೇಶದಿಂದ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಪ್ರವಾಸ ಹಮ್ಮಿಕೊಂಡಿದ್ದಾರೆ. ವಿದ್ಯಾರ್ಥಿಗಳು, ಯುವಕರು, ರೈತರು, ಪರಿಸರವಾದಿಗಳು ಮತ್ತು ಮಹಿಳೆಯರ ಜೊತೆ ರಾಜಕೀಯ ರಹಿತ ಸಮಾಲೋಚನೆ ನಡೆಸಲಿದ್ದಾರೆ. ಅದರಲ್ಲಿ ಯುವ ಕಾಂಗ್ರೆಸ್ ಸಂಪೂರ್ಣವಾಗಿ ಭಾಗವಹಿಸಲು ಸಿದ್ಧತೆ ನಡೆಸುತ್ತಿದೆ.

ಆದರೂ, ರಾಹುಲ್ ಭೇಟಿ ಚುನಾವಣಾ ದೃಷ್ಟಿಯಲ್ಲಿ ಕಾಂಗ್ರೆಸ್‌ಗೆ ಎಷ್ಟರ ಮಟ್ಟಿಗೆ ಅನುಕೂಲವಾಗಲಿದೆ?

ಇದು ಚುನಾವಣಾ ಪ್ರವಾಸ ಅಲ್ಲ. ಯುವ ಸಂಪರ್ಕದ ಅಭಿಯಾನದ ಅಡಿಯಲ್ಲಿ ದೇಶದ ವಿವಿಧ ಭಾಗಗಳಿಗೆ ಭೇಟಿ ನೀಡಿ ಅಲ್ಲಿನ ಸಂಪೂರ್ಣ ಸ್ಥಿತಿಗತಿಯನ್ನು ಅರಿಯುವ ಕಾರ್ಯಕ್ರಮ. ಆದರೂ ಉನ್ನತ ನಾಯಕರ ಭೇಟಿಯಿಂದ ರಾಜಕೀಯ ಪಕ್ಷದ ಮೇಲೆ ಪರಿಣಾಮ ಬೀರುತ್ತದೆ. ಇಂದಿರಾ ಗಾಂಧಿ, ರಾಜೀವ್ ಗಾಂಧಿ ಅವರ ಜನರ ಬಳಿ ಹೋಗುವ ಕಾರ್ಯಕ್ರಮವನ್ನು ತುಂಬಾ ಅರ್ಥಪೂರ್ಣವಾಗಿ ಇದೀಗ ರಾಹುಲ್ ಮಾಡುತ್ತಿದ್ದಾರೆ.

ಕೃಷ್ಣಾಗಮನದ ಬಗ್ಗೆ ನೀವೇನು ಹೇಳುತ್ತೀರಿ?

ಸೋನಿಯಾ ಗಾಂಧಿ ಅವರೇ ಎಸ್.ಎಂ. ಕೃಷ್ಣ ಅವರನ್ನು ಸಕ್ರಿಯ ರಾಜಕೀಯಕ್ಕೆ ಮರಳಿ ಕಳುಹಿಸಿದ್ದಾರೆ. ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯಿಟ್ಟಿರುವ ಕಾಂಗ್ರೆಸ್ ಪಕ್ಷದಲ್ಲಿ ಪ್ರತಿಯೊಬ್ಬರ ಅವಶ್ಯಕತೆಯೂ ಇದೆ. ಈ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ.

ಕಾಂಗ್ರೆಸ್‌ನಲ್ಲಿ ಯುವಕರ ಕೊರತೆ ಇದೆಯೇ? ಇಲ್ಲ ಎನ್ನುವುದಾದರೆ ಪಕ್ಷವನ್ನು ಮುನ್ನಡೆಸಲು ಸಕ್ರಿಯ ರಾಜಕೀಯದಿಂದ ದೂರವಾಗಿದ್ದ ವೃದ್ಧ ನಾಯಕರನ್ನು ಮರಳಿ ಕರೆತಂದಿದ್ದು ಏಕೆ?

ದೇಶದ ಹಳ್ಳಿ ಹಳ್ಳಿಯಲ್ಲೂ ಕಾಂಗ್ರೆಸ್ ಯುವಪಡೆ ಇದೆ. ದೇಶದ ಇತಿಹಾಸ ತೆರೆದು ನೋಡಿದರೆ ಯುವ ಕಾಂಗ್ರೆಸ್ ಪಕ್ಷದಲ್ಲಿ ಪ್ರಮುಖ ಜವಾಬ್ದಾರಿ ವಹಿಸಿಕೊಂಡಿದೆ. ಪಕ್ಷಕ್ಕೆ ಹಿರಿಯರ ಅನುಭವ, ವರ್ಚಸ್ಸಿನ ಅಗತ್ಯವಿದೆ. ಆದ್ದರಿಂದಲೇ ಕೃಷ್ಣ ಅವರು ಮರಳಿ ರಾಜ್ಯ ರಾಜಕೀಯಕ್ಕೆ ಬಂದಿದ್ದು.

ಕಾಂಗ್ರೆಸ್ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸದೇ ಚುನಾವಣೆಗೆ ಹೋಗುತ್ತಿರುವುದು ಏಕೆ?

ಕಾಂಗ್ರೆಸ್ ಸಾಮೂಹಿಕ ನಾಯಕತ್ವದಲ್ಲಿ ನಂಬಿಕೆಯಿಟ್ಟಿರುವ ಪಕ್ಷ. ಈವರೆಗೆ ಚುನಾವಣೆಗೆ ಹೋಗುವ ಮೊದಲೇ ಮುಖ್ಯಮಂತ್ರಿಯನ್ನು ಬಿಂಬಿಸುವ ಕಾರ್ಯ ಕಾಂಗ್ರೆಸ್ ಮಾಡಿಲ್ಲ. ಇದೇನಿದ್ದರೂ ಪಕ್ಷದ ಹೈಕಮಾಂಡ್ ನಿರ್ಧರಿಸುತ್ತದೆ.

224 ವಿಧಾನಸಭಾ ಕ್ಷೇತ್ರಗಳ ಪೈಕಿ ಯುವಕರಿಗೆ ಎಷ್ಟು ಸೀಟು ನೀಡುತ್ತೀರಿ?

ಇಂತಿಷ್ಟು ಅಂತ ಇದುವರೆಗೆ ನಿರ್ಧಾರವಾಗಿಲ್ಲ. ಸೋನಿಯಾ ಗಾಂಧಿ ಮಾತ್ರವಲ್ಲ ಖರ್ಗೆ ಅವರು ಕೂಡ ಪಕ್ಷದಲ್ಲಿ ಯುವಕರಿಗೆ ಆದ್ಯತೆ ನೀಡುವುದಾಗಿ ಭರವಸೆ ನೀಡಿದ್ದಾರೆ. ಪ್ರತಿಭಾವಂತ ಯುವಕರಿಗೆ ಪಕ್ಷದಲ್ಲಿ ಹೆಚ್ಚಿನ ಪ್ರಾಶಸ್ತ್ಯ ನೀಡುವುದರಲ್ಲಿ ಎರಡು ಮಾತಿಲ್ಲ.

ಮತದಾರರ ಪಟ್ಟಿಯ ನೆಪವಿಟ್ಟುಕೊಂಡು ಕಾಂಗ್ರೆಸ್ ಚುನಾವಣೆ ಎದುರಿಸಲು ಏಕೆ ಹಿಂಜರಿಯುತ್ತಿದೆ?

ರಾಜ್ಯದ ಪ್ರಜೆಗಳು ಮತದಾನ ಹಕ್ಕಿನಿಂದ ವಂಚಿತರಾಗಬಾರದೆಂಬ ಏಕೈಕ ಉದ್ದೇಶದಿಂದ ಮತದಾರರ ಪಟ್ಟಿ ಸರಿಪಡಿಸಿ ಚುನಾವಣೆ ನಡೆಸುವಂತೆ ಕಾಂಗ್ರೆಸ್ ಕೋರಿದೆ ವಿನಾ ಕಾಂಗ್ರೆಸ್‌ಗೆ ಹಿಂಜರಿಕೆಯಿಲ್ಲ. ನಾಳೆ ಚುನಾವಣೆ ಬಂದರೂ ಎದುರಿಸಲು ಸಿದ್ಧ.

ಹೈಕಮಾಂಡ್ ಸಂಸ್ಕೃತಿ ಇರುವ ಪಕ್ಷದಲ್ಲಿ ಯುವ ಕಾಂಗ್ರೆಸ್ ತೀರಾ ಮಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿದೆ ಅಲ್ಲವೇ?

ಪಕ್ಷದಲ್ಲಿ ಯುವ ಕಾಂಗ್ರೆಸ್‌ಗೆ ಸಾಕಷ್ಟು ಸ್ವಾತಂತ್ರ್ಯವಿದೆ ಅದನ್ನು ಯಾವ ರೀತಿ ಬಳಸಿಕೊಳ್ಳಬೇಕೆಂಬುದು ನಮ್ಮ ಮೇಲಿದೆ. ಯಾವುದೇ ಮಿತಿಯಿಲ್ಲ. ಹಿರಿಯರ ಮತ್ತು ಅನುಭವಿಗಳ ಮಾತಿನಂತೆ ನಡೆಯುವುದು ಯುವ ಕಾಂಗ್ರೆಸ್ ರೂಢಿಸಿಕೊಂಡು ಬಂದಿದೆಯಷ್ಟೇ.

ಕುಮಾರಸ್ವಾಮಿ ಗ್ರಾಮ ವಾಸ್ತವ್ಯವನ್ನು ಟೀಕಿಸಿದ ಕಾಂಗ್ರೆಸ್ ಇದೀಗ ಅದನ್ನೇ ನಕಲು ಮಾಡುತ್ತಿದೆಯಲ್ಲಾ?

ಕುಮಾರಸ್ವಾಮಿ ಗ್ರಾಮ ವಾಸ್ತವ್ಯವನ್ನು ಗುರಿ ಮಾಡಿ ಕಾಂಗ್ರೆಸ್ ಟೀಕಿಸಿಲ್ಲ. ಜೆಡಿ(ಎಸ್) ಅನುಸರಿಸುವ ಮಾರ್ಗ ಸರಿಯಿಲ್ಲ ಎಂದಷ್ಟೇ ಹೇಳಿದೆ. ಮಾತ್ರವಲ್ಲ ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ಮೇಲೆ ಗ್ರಾಮ ವಾಸ್ತವ್ಯ ಕೈಗೊಂಡಿದ್ದು. ರಾಹುಲ್ ಗಾಂಧಿ ಅಧಿಕಾರಕ್ಕೆ ಬರುವ ಮೊದಲೇ ಜನರ ಸಮಸ್ಯೆಗಳನ್ನು ಆಲಿಸುವ ಕಾರ್ಯಕ್ರಮ ಕೈಗೊಂಡಿದ್ದಾರೆ.

ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಗಳಿಸಲಿದೆಯೇ?

ಈ ಬಗ್ಗೆ ಸಂಪೂರ್ಣ ವಿಶ್ವಾಸವಿದೆ.

ಟಿಎಸ್‌ಐ

ಮೇಡಂ ಹೇಳಿದರೆ ಸ್ಪರ್ಧಿಸಲು ಸಿದ್ಧ

ಕಾಂಗ್ರೆಸ್ ಪಕ್ಷದ 'ಆಕಾಂಕ್ಷಿ ನಾಯಕರ' ಸಾಲಿನಲ್ಲಿ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರೂ ಇದ್ದಾರೆಯೇ? ಟಿಎಸ್‌ಐನ ಬಿ.ಎಸ್. ನಾರಾಯಣಸ್ವಾಮಿ ಅವರ ಜೊತೆ ಮಾತನಾಡಿದ ಮೊಯಿಲಿ ಆ ಸೂಚನೆ ನೀಡಿದ್ದಾರೆ

ಕರ್ನಾಟಕದ ಪ್ರಸಕ್ತ ರಾಜಕೀಯ ಪರಿಸ್ಥಿತಿಯ ಬಗ್ಗೆ ನಿಮ್ಮ ಅಭಿಪ್ರಾಯ?

ಕಾಂಗ್ರೆಸ್ ಹೊರತುಪಡಿಸಿದರೆ ಇತರ ಪಕ್ಷಗಳು ಪೂರ್ಣಾವಧಿ ಸರ್ಕಾರ ನಡೆಸುವುದು ದುಃಸ್ಸಾಧ್ಯ ಎಂಬುದು ಮತ್ತೆ ದೃಢಪಟ್ಟಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಮಾತ್ರ ಪೂರ್ಣಾವಧಿ ಸುಭದ್ರ ಸರ್ಕಾರ ನಡೆಸಬಲ್ಲುದು ಎಂಬ ವಿಶ್ವಾಸ ಮತದಾರರಿಗಿದೆ. ಈ ಬಾರಿ ಚುನಾವಣೆಯಲ್ಲಿ ಕಾಂಗ್ರೆಸ್ ಜಯಭೇರಿ ಬಾರಿಸಲಿದೆ.

ಚುನಾವಣೆಗೆ ಯಾವಾಗಲೂ ಸಿದ್ಧ ಎನ್ನುವ ಕಾಂಗ್ರೆಸ್ ಮಾತು ಹುಸಿ ಆತ್ಮವಿಶ್ವಾಸವೇ?

ಕಾಂಗ್ರೆಸ್ ಚುನಾವಣೆಗೆ ಹಿಂಜರಿಯಲು ಯಾವುದೇ ಕಾರಣ ಇಲ್ಲ. ಚುನಾವಣೆ ಎದುರಿಸಲು ಕಾಂಗ್ರೆಸ್ ಉತ್ಸುಕವಾಗಿದೆ. ಇದು ಸುಮ್ಮನೆ ಹೇಳುವ ಮಾತಲ್ಲ. ಜೆಡಿ(ಎಸ್) ಮತ್ತು ಬಿಜೆಪಿ ಮೈತ್ರಿಕೂಟದಿಂದ ಜನ ಬೇಸತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಜನರ ಆಯ್ಕೆ ಕಾಂಗ್ರೆಸ್ ಮಾತ್ರ. ಹೀಗಾಗಿ ಚುನಾವಣೆಯಲ್ಲಿ ಖಂಡಿತ ಕಾಂಗ್ರೆಸ್ ಬಹುಮತ ಗಳಿಸಲಿದೆ.

ಕಾಂಗ್ರೆಸ್ ಯಾರ ನೇತೃತ್ವದಲ್ಲಿ ಚುನಾವಣೆ ಎದುರಿಸಲಿದೆ?

ನಮ್ಮಲ್ಲಿ ನಾಯಕರ ಪಡೆಯೇ ಇದೆ. ಮಲ್ಲಿಕಾರ್ಜುನ ಖರ್ಗೆ, ಧರ್ಮಸಿಂಗ್, ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್ ಇವರೆಲ್ಲಾ ಮಹಾನ್ ನಾಯಕರೇ. ಈಗ ಕೃಷ್ಣ ಅವರೂ ರಾಜ್ಯ ರಾಜಕಾರಣಕ್ಕೆ ಮರಳಿ ಬಂದಿದ್ದಾರೆ. ಹಾಗೆ ನಾನೂ ಕೂಡಾ ನಾಯಕನೇ. ಎಲ್ಲ ನಾಯಕರೂ ಸೇರಿ ಪಕ್ಷವನ್ನು ಮುನ್ನಡೆಸಲಿದ್ದೇವೆ.

ಹಾಗಾದಲ್ಲಿ ನೀವೂ ಕೂಡಾ ರಾಜ್ಯ ವಿಧಾನಸಭೆಗೆ ಸ್ಪರ್ಧಿಸಲು ಉತ್ಸುಕರಾಗಿದ್ದೀರೇ?

ಯಾಕಾಗಬಾರದು? ಪಕ್ಷದ ಅಧ್ಯಕ್ಷೆ ಸೋನಿಯಾ ಅವರು ಸೂಚನೆ ನೀಡಿದರೆ ರಾಜ್ಯದ ವಿಧಾನಸಭಾ ಕ್ಷೇತ್ರದಿಂದಾಗಲೀ, ರಾಜ್ಯಸಭಾ ಕ್ಷೇತ್ರ ಅಥವಾ ಲೋಕಸಭಾ ಕ್ಷೇತ್ರದಿಂದಾಗಲಿ ಸ್ಪರ್ಧಿಸಲು ನಾನು ಸಿದ್ಧ. ಪಕ್ಷದ ಯಾವುದೇ ಹೊಣೆ ಹೊರಲೂ ಸಿದ್ಧ. ಆದರೆ ನಾನು ರಾಜ್ಯದ ಕ್ಷೇತ್ರಗಳಿಂದ ಮಾತ್ರ ಸ್ಪರ್ಧಿಸಬಯಸುತ್ತೇನೆ. ಇನ್ನೊಂದು ರಾಜ್ಯಕ್ಕೆ ತೆರಳಿ ಅಲ್ಲಿನ ಸ್ಪರ್ಧಿಗಳ ಅವಕಾಶ ಕಿತ್ತುಕೊಳ್ಳ ಬಯಸುವುದಿಲ್ಲ.

ಮುಂದಿನ ಚುನಾವಣೆಯಲ್ಲಿ ಪಕ್ಷವನ್ನು ಅಧಿಕಾರಕ್ಕೆ ತರುವುದರತ್ತಲೇ ನಮ್ಮೆಲ್ಲರ ಗಮನ. ಆನಂತರ ಪಕ್ಷದ ಹೈಕಮಾಂಡ್ ಚರ್ಚಿಸಿ ನಾಯಕರನ್ನು ಆಯ್ಕೆ ಮಾಡಲಿದೆ.

ಕಾಂಗ್ರೆಸ್ ಪಕ್ಷದಲ್ಲಿ ಇಷ್ಟೆಲ್ಲಾ ನಾಯಕರು ಇರುವಾಗ ಕೃಷ್ಣ ಅವರನ್ನು ಮತ್ತೆ ರಾಜ್ಯ ರಾಜಕಾರಣಕ್ಕೆ ಕರೆತಂದದ್ದು ಅನಗತ್ಯವಾಗಿತ್ತಲ್ಲವೇ? ಇದು ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಅಲ್ಲವೇ?

ನಮ್ಮ ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ. ಎಲ್ಲಾ ನಾಯಕರೂ ಅನ್ಯೋನ್ಯವಾಗಿದ್ದೇವೆ. ಕೃಷ್ಣ ಅವರು ನುರಿತ ರಾಜಕಾರಣಿ. ಪಕ್ಷವನ್ನು ಮುನ್ನಡೆಸಲು ಅಂತಹ ಹಿರಿಯರ ಅಗತ್ಯ ಇದ್ದೇ ಇದೆ.

ಟಿಎಸ್

ಕೃಷ್ಣಾಗಮನ: ವಿಶೇಷ ಅರ್ಥ, ಮಹತ್ವ ಬೇಡ

ಮತದಾರರನ್ನು ಎದುರಿಸುವ ಧೈರ್ಯವಿಲ್ಲದ ಕಾಂಗ್ರೆಸ್ ಚುನಾವಣೆಗೆ ಹಿಂದೇಟು ಹಾಕುತ್ತಿದೆ ಎಂಬ ಆರೋಪದ ನಡುವೆಯೇ ಹಿರಿಯ ನಾಯಕ ಎಸ್.ಎಂ. ಕೃಷ್ಣ ಅವರನ್ನು ಮತ್ತೆ ರಾಜ್ಯ ರಾಜಕಾರಣಕ್ಕೆ ತರುವ ಮೂಲಕ ಚುನಾವಣೆಗೆ ತಾನು ತಯಾರು ಎಂದು ಕಾಂಗ್ರೆಸ್ ಸೂಚನೆ ನೀಡಿದೆ. ಕರ್ನಾಟಕದ ಉಸ್ತುವಾರಿ ಹೊಣೆ ಹೊತ್ತ ಕೇಂದ್ರ ಸಚಿವ ಎಐಸಿಸಿ ಪ್ರಧಾನ ಕಾರ್ಯದರ್ಶಿ ಪೃಥ್ವಿರಾಜ್ ಚವಾಣ್, ಟಿಎಸ್‌ಐನ ಸುನಿಲ್ ಕುಮಾರ್ ಅವರ ಜೊತೆ ಮಾತನಾಡಿ, 'ಚುನಾವಣೆ ನಿಧಾನವಾದರೂ ಪರವಾಗಿಲ್ಲ, ಆದರೆ ನ್ಯಾಯಸಮ್ಮತವಾಗಿ ನಡೆಯಬೇಕು' ಎಂದಿದ್ದಾರೆ.

ಚುನಾವಣೆ ಎದುರಿಸಲು ಕಾಂಗ್ರೆಸ್ ಯಾವ ರೀತಿಯ ಸಿದ್ಧತೆ ನಡೆಸಿದೆ? ನಿಮ್ಮ ಮುಖ್ಯ ಕಾರ್ಯತಂತ್ರ ಏನು?

ಕಳೆದ ಬಾರಿಯ ತಪ್ಪುಗಳ ಪುನಾರಾವರ್ತನೆಯಾಗದಂತೆ ನೋಡಿಕೊಳ್ಳುವುದೇ ನಮ್ಮ ಮುಖ್ಯ ಕಾರ್ಯತಂತ್ರ. ಕರ್ನಾಟಕದ ಪ್ರತಿ ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸಿ, ಆ ಮೂಲಕ ಚುನಾವಣಾ ಕಣದಲ್ಲಿ ಜಯಭೇರಿ ಬಾರಿಸುವ ವಿಶ್ವಾಸ ನಮ್ಮದು.

ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಸೋಲಲು ಕಾರಣ...

ಕಳೆದ ಚುನಾವಣೆಯಲ್ಲಿ ಜಾತಿ ಆಧಾರದಲ್ಲಿ ಮತಗಳು ಹಂಚಿಹೋದವು. ಕೆಲವು ಆಂತರಿಕ ಕಾರಣಗಳಿಂದ ಕರ್ನಾಟಕದಲ್ಲಿ ಕಾಂಗ್ರೆಸ್ ಪಕ್ಷ ಅಸ್ಥಿರತೆಗೆ ಒಳಗಾಗಿದ್ದೂ ನಮ್ಮ ಸೋಲಿಗೆ ಕಾರಣ ಎನ್ನಬಹುದು. ಮೊದಲಿನಿಂದಲೂ ಕಾಂಗ್ರೆಸ್ ಜನರ ಅಭಿವೃದ್ಧಿಯನ್ನೇ ಧ್ಯೇಯವನ್ನಾಗಿಸಿಕೊಂಡಿರುವ ಪಕ್ಷ. ಕಾಂಗ್ರೆಸ್ ಅಧಿಕಾರದಲ್ಲಿ ಇಲ್ಲದ ಅವಧಿಯಲ್ಲಿ ಕರ್ನಾಟಕ ಅಭಿವೃದ್ಧಿ ಕಾರ್ಯಗಳಿಂದ ವಂಚಿತವಾಗಿದೆ. ಕರ್ನಾಟಕದ ಇಂದಿನ ದುಸ್ಥಿತಿಗೆ ಜೆಡಿ(ಎಸ್) ಮತ್ತು ಬಿಜೆಪಿ ಸರ್ಕಾರವೇ ಕಾರಣ.

ಈ ಬಾರಿ ಕಾಂಗ್ರೆಸ್ ಪಾಳೆಯದಲ್ಲಿ ಪ್ರಮುಖ ನಾಯಕರ ದಂಡೇ ಇದೆ. ಪ್ರತಿಯೊಬ್ಬರೂ ಒಂದಲ್ಲಾ ಒಂದು ರೀತಿಯಲ್ಲಿ ಕಾಂಗ್ರೆಸ್‌ನ ಬಲವರ್ಧನೆಗೆ ಕಾರಣರಾದವರೇ... ಹೀಗಿರುವಾಗ, ಯಾರ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ಕಾಂಗ್ರೆಸ್ ಯೋಚಿಸಿದೆ?

ಸದ್ಯಕ್ಕೆ ಯಾರೊಬ್ಬರ ವೈಯಕ್ತಿಕ ನಾಯಕತ್ವಕ್ಕೂ ಪ್ರಾಮುಖ್ಯ ನೀಡಲಾಗಿಲ್ಲ. ನಮ್ಮದೇನಿದ್ದರೂ ಸಂಘಟಿತ ಸೂತ್ರ. ಈ ಬಾರಿ ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸಲು ನಿರ್ಧರಿಸಿದ್ದೇವೆ. ಮಲ್ಲಿಕಾರ್ಜುನ ಖರ್ಗೆ, ಎಸ್.ಎಂ. ಕೃಷ್ಣ, ಧರ್ಮಸಿಂಗ್, ಸಿದ್ದರಾಮಯ್ಯ, ಎಂ.ಪಿ. ಪ್ರಕಾಶ್... ಹೀಗೆ ಪ್ರತಿಯೊಬ್ಬರೂ ಪಕ್ಷದ ಗೆಲುವಿನಲ್ಲಿ ತಮ್ಮದೇ ಆದ ಪಾತ್ರ ವಹಿಸಲಿದ್ದಾರೆ. ಎಲ್ಲರೂ ಒಂದಾಗಿ ಪಕ್ಷವನ್ನು ಮುನ್ನಡೆಸಿಕೊಂಡು ಹೋಗಲಿದ್ದಾರೆ.

ಯಾರನ್ನಾದರೂ ಮುಖ್ಯಮಂತ್ರಿ ಅಭ್ಯರ್ಥಿಯನ್ನಾಗಿ ಬಿಂಬಿಸುತ್ತೀರಾ?

ಆ ಕುರಿತು ಈಗಲೇ ಏನೂ ಹೇಳಲಾಗುವುದಿಲ್ಲ. ಚುನಾವಣೆಯಲ್ಲಿ ಜಯ ಗಳಿಸಿದ ಬಳಿಕ ಚರ್ಚಿಸಿ ಅರ್ಹತೆಯ ಆಧಾರದ ಮೇಲೆ ಹಾಗೂ ಉನ್ನತ ಮಟ್ಟದ ನಾಯಕರ ನಿರ್ಧಾರಗಳನ್ನು ಅವಲಂಬಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ಸೂಕ್ತ ಪ್ರತಿನಿಧಿಯನ್ನು ಆಯ್ಕೆ ಮಾಡುತ್ತೇವೆ.

ಎಸ್.ಎಂ. ಕೃಷ್ಣ ಅವರು ರಾಜ್ಯ ರಾಜಕಾರಣಕ್ಕೆ ಮರಳಿದ್ದಾರೆ. ಇದರಿಂದ ಕರ್ನಾಟಕದಲ್ಲಿ ಕಾಂಗ್ರೆಸ್‌ಗೆ ಮತ್ತಷ್ಟು ಬಲ ಬಂದಿದೆ ಎಂದೆನಿಸುತ್ತಿದೆಯೇ?

ಮೊದಲೇ ಹೇಳಿದಂತೆ ಈ ಬಾರಿ ನಮ್ಮದು ಸಾಮೂಹಿಕ ನಾಯಕತ್ವ. ಎಸ್.ಎಂ. ಕೃಷ್ಣ ಅವರು ಮಹಾರಾಷ್ಟ್ರದ ರಾಜ್ಯಪಾಲರಾಗಿದ್ದುಕೊಂಡು ಕರ್ನಾಟಕದಲ್ಲಿ ಪಕ್ಷ ಸಂಘಟನೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಅದಕ್ಕಾಗಿ ಅವರು ರಾಜೀನಾಮೆ ನೀಡಿ ಸಕ್ರಿಯ ರಾಜಕಾರಣಕ್ಕೆ ಮರಳಿದ್ದಾರೆ. ಅದಕ್ಕೆ ವಿಶೇಷ ಅರ್ಥಗಳನ್ನಾಗಲೀ, ಅನಗತ್ಯ ಮಹತ್ವವನ್ನಾಗಲೀ ನೀಡಬೇಕಾಗಿಲ್ಲ. ಅವರು ರಾಜ್ಯ ರಾಜಕಾರಣಕ್ಕೆ ಹಿಂದಿರುಗಿರುವುದರಿಂದ ಪಕ್ಷಕ್ಕೆ ಉಪಯೋಗವಾಗಿರುವುದು ಮಾತ್ರ ಸತ್ಯ.

ಕಾಂಗ್ರೆಸ್ ಈ ಬಾರಿ ಬಹುಮತ ಪಡೆದಲ್ಲಿ, ಅದಕ್ಕೆ ಕೃಷ್ಣ ಅವರೇ ಕಾರಣ ಎಂದು ಹೈಕಮಾಂಡ್‌ಗೆ ಮನನವಾದಲ್ಲಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಲಾಗುವುದೇ?

ಅಂತಹ ಯಾವುದೇ ನಿರ್ಧಾರವನ್ನು ಈಗ ಹೈಕಮಾಂಡ್ ತೆಗೆದುಕೊಳ್ಳಲಾರದು. ಒಟ್ಟಾರೆ ಎಲ್ಲರೂ ಸಂಘಟಿತರಾಗಿ ಈ ಚುನಾವಣೆಯಲ್ಲಿ ಪಕ್ಷವನ್ನು ಗೆಲುವಿನ ದಡದತ್ತ ಕೊಂಡೊಯ್ಯಬೇಕು ಎಂದು ನಿರ್ಧಾರವಾಗಿದೆ. ಬಹುಮತ ಬಂದಾದ ಮೇಲೆ ಯಾರು ಮುಖ್ಯಮಂತ್ರಿ ಎನ್ನುವುದನ್ನು ಚುನಾಯಿತ ಪ್ರತಿನಿಧಿಗಳು ಮತ್ತು ಹೈಕಮಾಂಡ್ ಜಂಟಿಯಾಗಿ ನಿರ್ಧರಿಸುತ್ತದೆ.

ಕಾಂಗ್ರೆಸ್‌ನಲ್ಲಿ ಸಿದ್ದರಾಮಯ್ಯ ಅವರ ಪಾತ್ರ ಏನು? ಅವರ ವೈಯಕ್ತಿಕ ವರ್ಚಸ್ಸನ್ನು ಕಾಂಗ್ರೆಸ್ ಹೇಗೆ ಬಳಸಿಕೊಳ್ಳಲಿದೆ?

ಸಿದ್ದರಾಮಯ್ಯ ಅವರು ಅನುಭವಿ ರಾಜಕಾರಣಿ. ಅವರೂ ಕಾಂಗ್ರೆಸ್ ಬಲವರ್ಧನೆಯಲ್ಲಿ ಮಹತ್ವದ ಪಾತ್ರ ವಹಿಸಲಿದ್ದಾರೆ. ಅಂತೆಯೇ ಅವರಿಗೆ ಪಕ್ಷದಲ್ಲಿ ಸೂಕ್ತ ಹಾಗೂ ಜವಾಬ್ದಾರಿಯುತ ಸ್ಥಾನ ನೀಡಲಾಗಿದೆ.

ಈಚೆಗೆ ಕಾಂಗ್ರೆಸ್ ಸೇರಿದ ಎಂ.ಪಿ. ಪ್ರಕಾಶ್ ಅವರ ಸ್ಥಾನಮಾನ ಏನು?

ಎಂ.ಪಿ. ಪ್ರಕಾಶ್ ಅವರು ಹಿರಿಯ ರಾಜಕೀಯ ಧುರೀಣ. ಖಂಡಿತವಾಗಿ ಅವರ ಇರುವಿಕೆ ಕಾಂಗ್ರೆಸ್ ಗೆಲುವಿಗೆ ನೆರವಾಗಲಿದೆ. ಅವರಿಗೆ ಕಾಂಗ್ರೆಸ್‌ನಲ್ಲಿ ಉನ್ನತ ಗೌರವ ಹಾಗೂ ಸ್ಥಾನಮಾನ ಲಭಿಸುತ್ತದೆ.

ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಯಲ್ಲಿ ಭಿನ್ನಾಭಿಪ್ರಾಯಗಳಿವೆ ಎಂಬುದು ರಹಸ್ಯವೇನೂ ಅಲ್ಲ. ಕೃಷ್ಣ ಪುನರಾಗಮನದ ನಂತರವಂತೂ ಇದು ಮತ್ತಷ್ಟು ಸ್ಪಷ್ಟವಾಗಿದೆ. ಇದಕ್ಕೆ ನೀವೇನು ಹೇಳುತ್ತೀರಿ?

ಸುಳ್ಳು. ಕೆಪಿಸಿಸಿಯಲ್ಲಿ ಯಾವುದೇ ಭಿನ್ನಾಭಿಪ್ರಾಯ, ಒಡಕುಗಳಿಲ್ಲ. ಇವೆಲ್ಲಾ ಬಿಜೆಪಿ ಸೃಷ್ಟಿಸಿರುವ ಕಟ್ಟುಕಥೆ. ಕಾಂಗ್ರೆಸ್ ಬಗ್ಗೆ ಜನತೆಯಲ್ಲಿ ಅಪನಂಬಿಕೆ ಉಂಟುಮಾಡಲು ಈ ಹುನ್ನಾರ ನಡೆಸಲಾಗಿದೆ.

ಆದರೆ ಕೃಷ್ಣ ಆಗಮನದ ನಂತರ ಕೆಪಿಸಿಸಿ ಅಧ್ಯಕ್ಷ ಖರ್ಗೆ ಅವರು ನಡೆದುಕೊಂಡ ರೀತಿಯೇ ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿಯಿಲ್ಲ ಎಂಬುದಕ್ಕೆ ಸಾಕ್ಷಿ ಅಲ್ಲವೇ?

ಹಾಗಲ್ಲ. ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಹಾಗೂ ಕಾರ್ಯಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎನ್ನಬಹುದು.

ಮಲ್ಲಿಕಾರ್ಜುನ ಖರ್ಗೆ ಟಿಎಸ್‌ಐ ಬಳಿಯೇ 'ರಾಜ್ಯಪಾಲ ಹುದ್ದೇಲಿ ಆರಾಮವಾಗಿ ಇರಿ ಅಂದ್ರೆ ಅವರು ರಾಜ್ಯ ರಾಜಕೀಯಕ್ಕೆ ಬರ್ತೀನಿ ಅಂದ್ರೆ ನಾನೇನು ಮಾಡಲಿ?' ಎಂದು ಬೇಸರ ವ್ಯಕ್ತಪಡಿಸಿದ್ದಾರಲ್ಲಾ?

ಆ ಬಗ್ಗೆ ನನ್ನ ಕಾಮೆಂಟ್ಸ್ ಇಲ್ಲ.

ಕಾಂಗ್ರೆಸ್ ನಿಜವಾಗಿಯೂ ಚುನಾವಣೆ ಮುಂದೂಡಲು ಯತ್ನಿಸುತ್ತಿದೆಯೇ?

ಖಂಡಿತ ಯತ್ನಿಸುತ್ತಿಲ್ಲ. ಕ್ಷೇತ್ರ ಪುನರ್ ವಿಂಗಡನೆ ಕಾರ್ಯ ಪೂರ್ಣಗೊಂಡ ತಕ್ಷಣ ನ್ಯಾಯ ಸಮ್ಮತವಾದ ಚುನಾವಣೆ ನಡೆದೇ ತೀರುತ್ತದೆ.

ಆದರೆ ಕ್ಷೇತ್ರ ಪುನರ್ ವಿಂಗಡನೆ ಕಾರ್ಯ ಪೂರ್ಣಗೊಂಡಿದ್ದು ಯಾವುದೇ ಸಂದರ್ಭದಲ್ಲಿ ಚುನಾವಣೆ ನಡೆಸಲು ಸಿದ್ಧ ಎಂದು ರಾಜ್ಯ ಚುನಾವಣಾ ಆಯೋಗ ಘೋಷಿಸಿದೆಯಲ್ಲಾ?

ವಿಂಗಡಣೆ ಕಾರ್ಯ ಪೂರ್ಣಗೊಂಡಿರಬಹುದು. ಆದರೆ ಗ್ರಾಮೀಣ ಮತದಾರರ ಪಟ್ಟಿ, ಗುರುತುಪತ್ರ ವಿತರಣೆಯೆಲ್ಲಾ ಇನ್ನೂ ಪೂರ್ಣಗೊಂಡಿಲ್ಲ. ಈ ಕಾರ್ಯಕ್ಕೆ ಇನ್ನೂ ಸ್ವಲ್ಪ ಸಮಯ ಬೇಕಾಗಬಹುದು. ಚುನಾವಣೆ ನಿಧಾನವಾಗಿ ನಡೆದರೂ ಸರಿ, ಯಾವುದೇ ಗೊಂದಲವಿಲ್ಲದೆ, ನ್ಯಾಯ ಸಮ್ಮತವಾಗಿ ನಡೆಯಬೇಕು ಎಂಬುದೇ ಕಾಂಗ್ರೆಸ್‌ನ ಅಭಿಲಾಷೆ.

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .