|

ಬೆಳ್ಸೂರು ಶಾಲೆ ಶತಮಾನೋತ್ಸವ ಆಚರಣೆಯ ಸಿದ್ಧತೆ ಬಲು ಜೋರಾಗಿ ಸಾಗಿರುವಾಗ ಜಯಕ್ಕೋರು ಶಿಕ್ಷಕಿಯಾಗಿ ವರ್ಗವಾಗಿ ಬಂದರು. ವಾರದ ಹಿಂದೆಯೇ ಪಾಠಗಳನ್ನು ರದ್ದುಗೊಳಿಸಿದ್ದರು. ಮಕ್ಕಳೆಲ್ಲ ಊರ ಜಾತ್ರೆಯ ಸಂಭ್ರಮದಲ್ಲಿ ಓಡಾಡಿಕೊಂಡಿದ್ದರು. ಊರ ಸಕಲರೂ ಉತ್ಸವವನ್ನು ಮನೆಮದುವೆಯಂತೆ ಅತಿಯಾಗಿ ಹಚ್ಚಿಕೊಂಡು ಆವೇಶ ತಂದುಕೊಂಡಿದ್ದರು. "ಅಕ್ಕೋರ ಉಪಸ್ಥಿತಿಯಲ್ಲಿ ಉತ್ಸವ ನಡೆಯುತ್ತಿರೋದು ಶುಭ ಸಂಕೇತವೆಂದು ನಾವು ಭಾವಿಸುತ್ತೇವೆ" ಶತಮಾನೋತ್ಸವ ಸಮಿತಿಯ ಅಧ್ಯಕ್ಷರು ಸಭಾ ವೇದಿಕೆಯ ಒಕ್ಕಣಿಕೆಯಲ್ಲೇ ಜಯಕ್ಕೋರನ್ನು ಸ್ವಾಗತಿಸಿದ್ದರು. ನೂರು ವರ್ಷ ಹಳೆಯ ಶಾಲೆ ಸುಣ್ಣ- ಬಣ್ಣ ಬಳಿದುಕೊಂಡು ಗರ್ದಿಯಾಗಿತ್ತು. ಮಂತ್ರಿಮಹೋದಯರ ಸಾರ್ವಜನಿಕ ಸಭೆ, ಇದೇ ಶಾಲೆಯಲ್ಲಿ ಓದಿದ್ದ ಸ್ವಾತಂತ್ರ್ಯ ಹೋರಾಟಗಾರರಿಗೆ ಸನ್ಮಾನ ಮತ್ತು ಸತ್ಯ ಹರಿಶ್ಚಂದ್ರ ಪೌರಾಣಿಕ ಸಂಗೀತ ನಾಟಕದ ಅದ್ದೂರಿ ಪ್ರಯೋಗ- ಈ ಮೂರು ಕಾರ್ಯಕ್ರಮಗಳ ಆಮಂತ್ರಣ ಪತ್ರಿಕೆ ಮತ್ತು ಹ್ಯಾಂಡ್‌ಬಿಲ್‌ಗಳ ಮೇಲೆ ವಿಳಾಸ ಬರೆದು ವಿತರಿಸುವ ಕೆಲಸದ ಜವಾಬ್ದಾರಿ ಜಯಕ್ಕೋರ ಪಾಲಿಗೆ ಬಂತು. ನಾಟಕದ ಪ್ರಧಾನ ಅಂಶ ಸಂಗೀತವಾದ್ದರಿಂದ ಗದಗಿನಿಂದ ಮಹಂತಯ್ಯ ಗವಾಯಿಯವರನ್ನು ಕರೆಯಿಸಿಕೊಂಡಿದ್ದರು. ಅವರ ಜತೆಯಲ್ಲೇ ಹಣೆಗೆ ಸದಾ ವಿಭೂತಿಯ ಅಡ್ಡಗೆರೆಗಳನ್ನು ಎಳೆದುಕೊಂಡಿರುತ್ತಿದ್ದ ತಬಲಾವಾದಕನೊಬ್ಬನಿದ್ದ. ಬಿಳಿ ಶುಭ್ರ ಪಾಯಜಾಮದ ಮೇಲೆ ಮಿನುಗುವ ರೇಷ್ಮೆ ಜುಬ್ಬಾ ಹಾಕಿ ಅದರ ಮೇಲೊಂದು ಖಾದಿ ಜಾಕೀಟು ಧರಿಸುತ್ತಿದ್ದ ಮಹಂತಯ್ಯನವರದ್ದು ಸುಕುಮಾರ ಶರೀರ. ರಸ ತಾಂಬೂಲದಿಂದ ಅವರ ತುಟಿ ಸದಾ ಕೆಂಪಗೆ ಒಡೆಯುವಂತೆ ಕಾಣುತ್ತಿತ್ತು; ಸ್ವಲ್ಪ ಮತ್ತೇರಿದಾಗ ರಕ್ತ ಚುರುಕಾಗಿ ಬೆಚ್ಚಗಾಗಿರುತ್ತಿದ್ದ ಅವರ ಮುಖ ಮಾದಕವೆಂದನಿಸುತ್ತಿತ್ತು. ಹಾಡು, ಬಟ್ಟೆ, ಊಟದ ಬಗ್ಗೆ ಅವರಿಗಿರುವ ವಿಶಿಷ್ಟ ಅಭಿರುಚಿ ನೋಡಿದವರು ಶೋಕಿ ಮನುಷ್ಯನೆಂದು ಕರೆಯುವಂತಿದ್ದರು. ದಿನಾಲೂ ಶೇವ್ ಮಾಡಿಕೊಳ್ಳುತ್ತಿದ್ದರು; ಮುಖದಲ್ಲಿ ಮೀಸೆಯಿಟ್ಟುಕೊಂಡಿರಲಿಲ್ಲ. ಅತ್ತರ ಪೂಸಿದ ಎರಡು ಕರವಸ್ತ್ರಗಳು; ಕಿಸೆಯಲ್ಲೊಂದು, ಕುತ್ತಿಗೆ ಕಾಲರಿನಲ್ಲೊಂದು. ತಾಂಬೂಲದ ಪೆಟ್ಟಿಗೆಯೂ ಅಷ್ಟೇ ಸೊಗಸಾಗಿಟ್ಟಿರುತ್ತಿದ್ದರು. ಸುಳಿ ಎಲೆ, ಹಾಲಡಿಕೆ, ಲವಂಗ, ಏಲಕ್ಕಿ, ಸೋಪು ಎಲ್ಲ ಘಮಘಮಿಸುತ್ತಿರಬೇಕು. ನಡುವೆ ತಿನ್ನಲು ಕಲ್ಲುಸಕ್ಕರೆ, ಉತ್ತುತ್ತಿ, ಬಾದಾಮಿ. ಊಟಕ್ಕೆ ಬಿಸಿ ರೊಟ್ಟಿ, ಕೆನೆ ಮೊಸರು, ತಾಜಾ ಸೊಪ್ಪಿನ ಸಾರು ಮತ್ತು ಆಗಷ್ಟೇ ಕಡೆದ ಮಜ್ಜಿಗೆಯ ಬೆಣ್ಣೆ. ಮಹಂತಯ್ಯನವರ ಮಾತು ಗಡುಸಾಗಿರುತ್ತಿತ್ತು. ಆದರೆ ಹಾಡುವಾಗ ಅದೇ ಗಂಭೀರ ಕರ್ಜಿಗೆ ಮಾಧುರ್ಯ ಪ್ರಾಪ್ತವಾಗಿಬಿಡುತ್ತಿತ್ತು. ತಮ್ಮ ಮನೆಯ ರೇಡಿಯೋದಲ್ಲಿ ಆಗಾಗ ಪ್ರಸಾರವಾಗುವ ಗಾಯನದ ಗಾಯಕರು ಇದೇ ಮಹಂತಯ್ಯನವರೆಂದು ಊರವರಿಗೆ ಅಚ್ಚರಿ, ಅಭಿಮಾನ. ಹದಿನೈದು ದಿನಗಳಿಂದ ನಿರಂತರವಾಗಿ ಮಹಂತಯ್ಯನವರು ನಾಟಕಕ್ಕೆ ಹಾಡುಗಳನ್ನು ಸಂಯೋಜಿಸಿ ಕೊಟ್ಟದ್ದಲ್ಲದೆ ತಾರಾಮತಿಯ ಪಾತ್ರದಲ್ಲೂ ಅವರು ಕಾಣಿಸಿಕೊಂಡಿದ್ದರು.
ಮಹಂತಯ್ಯನವರ ಕುರಿತಾದ ಊರವರ ಅಚ್ಚರಿಯನ್ನು ಜಯಕ್ಕೋರ ಕುತೂಹಲ ಪ್ರವೇಶವು ಸೇರಿಕೊಂಡಿತು. ಪೇಟೆಯಿಂದ ಎರಡು ಮೈಲು ದೂರದಲ್ಲಿರುವ ಬೆಳ್ಸೂರಿಗೆ ಜಯಕ್ಕೋರು ಸೈಕಲ್ ಮೇಲೆ ಬಂದು ಹೋಗುತ್ತಿದ್ದಳು. ಹೆಂಗಸರು ಸೈಕಲ್ ಸವಾರಿ ಮಾಡುವುದನ್ನು ಸರ್ಕಸ್ ಮತ್ತು ಸಿನೆಮಾಗಳಲ್ಲಿ ನೋಡಿದ್ದ ಊರವರಿಗೆ ಅಕ್ಕೋರ ಅವತಾರ ಕ್ರಾಂತಿ ಎಂದನ್ನಿಸಿತು. ಬೆಳ್ಸೂರಿನಂಥ ಸಣ್ಣ ಹಳ್ಳಿಯಲ್ಲಿ ಮಹಂತಯ್ಯ ಮತ್ತು ಜಯಕ್ಕೋರು ಹೊಸ ಶಕೆಯ ಆರಂಭಕ್ಕೆ ಕಾರಣವಾದರೆ ಸೋಜಿಗವೇನೂ ಅಲ್ಲ.
ಮೂವತ್ತರ ಹರೆಯದ ಜಯಕ್ಕೋರ ಜೀವನವನ್ನು ಮಹಂತಯ್ಯ ಶಕಪುರುಷನಂತೆ ಅತ್ಯಂತ ನಾಟಕೀಯವಾಗಿ ಬಂದು ವಿಚಿತ್ರ ಸನ್ನಿವೇಶದಲ್ಲಿ ಪ್ರವೇಶಿಸಿದರು. ನಾಟಕದ ಜೀವಾಳವೇ ಮಹಂತಯ್ಯನವರ ಸಂಗೀತವಾಗಿತ್ತು. ತಾರಾಮತಿಯ ಪಾತ್ರದಲ್ಲಿ ಅಭಿನಯಿಸಲಿರುವ ಮಹಂತಯ್ಯನವರ ಬಗ್ಗೆ ಜಯಕ್ಕೋರಿಗೆ ಹೇಳ ತೀರದ ಕುತೂಹಲವಿತ್ತು. ತಾಲೀಮಿನ ಸಮಯದಲ್ಲಿ ಆಗೀಗ ಜಯಕ್ಕೋರ ನೋಡಿ ಮಂದಹಾಸ ಬೀರಿದ್ದರೆ ವಿನಃ ಹೆಚ್ಚಿಗೆ ಮಾತೇನೂ ಆಡಿರಲಿಲ್ಲ. ನಾಟಕದ ರಾತ್ರಿ ಇಡೀ ಊರು ಶಾಲೆಯ ಹಿಂದಿನ ಆಟದ ಮೈದಾನದಲ್ಲಿ ನಿರ್ಮಿಸಿದ ರಂಗಮಂಟಪದೆದುರು ಸೇರಿತ್ತು. ಹಾರ್‍ಮೋನಿಯಂ ನುಡಿಸುವ ಮೂಲಕ ರಂಗದ ಮೇಲಿನ ನಟರಿಗೆ ಸಂಭಾಷಣೆ ಪ್ರಾಂಪ್ಟ್ ಮಾಡಿಸುವ ಹೊಸ ತಂತ್ರವನ್ನು ಮಹಂತಯ್ಯ 'ಪೆಟ್ಟಿಗಿ ಮಾಸ್ತರಿ'ಗೆ ಕಲಿಸಿಕೊಟ್ಟಿದ್ದರು. ತನ್ನೆಲ್ಲ ದುಃಖವನ್ನು ಹಾಡಿನ ಮೂಲಕ ತಾರಾಮತಿ ಪ್ರಸ್ತುತ ಪಡಿಸಿದ್ದು ಹಳೆಯ ತಲೆಮಾರಿನವರಿಗೆ ಕಂಪನಿ ನಾಟಕ ಮಂಡಳಿಗಳ ಗತ ವೈಭವ ನೆನಪಾಗುವಂತಾಯಿತು. ಕಲೆಯ ಪರಂಪರೆಯಲ್ಲಿ ರೂಢಿಯಲ್ಲಿರುವ ಆಚರಣೆಯೋ, ಬೆಳ್ಸೂರಿನವರ ಸಂಪ್ರದಾಯವೊ ಅಂತು ಯಕ್ಷಗಾನ, ನಾಟಕ ನಡೆದಾಗ ಕಥಾಪ್ರಸಂಗದ ಮುಖ್ಯ ಸ್ತ್ರೀ ವೇಷಧಾರಿ ಕೊನೆಯ ದೃಶ್ಯ ಪ್ರದರ್ಶನಗೊಳ್ಳುವ ಮುಂಚೆ ಆರತಿ ಹರಿವಾಣ ಹಿಡಿದುಕೊಂಡು ಕಾಣಿಕೆಯನ್ನು ಸ್ವೀಕರಿಸಲು ಪ್ರೇಕ್ಷಕರ ನಡುವೆ ಒಂದು ಸುತ್ತು ಹಾದುಹೋಗುವ ಪರಿಪಾಠವಿದೆ. ಅಂತೆಯೇ ತಾರಾಮತಿಯ ಪಾತ್ರಧಾರಿ ಮಹಂತಯ್ಯ ಆರತಿ ಹರಿವಾಣ ಹಿಡಿದು ರಂಗವಿಳಿದಾಗ ಹುಣ್ಣಿಮೆಗೆ ನಾಲ್ಕು ದಿನಗಳು ಸನಿಹದಲ್ಲಿರುವ ಚಳಿ ಚಂದ್ರ ಪಶ್ಚಿಮದ ಅಸ್ತದ ದಾರಿಯಲ್ಲಿದ್ದ. ಮಹಂತಯ್ಯನವರ ಉರುಟು ಮುಖ ಮತ್ತು ಕೈಗಳ ಗಿಡ್ಡ ನಿಲುವಿಗೆ ಸ್ತ್ರೀ ವೇಷ ಅತ್ಯಂತ ಸ್ವಾಭಾವಿಕವಾಗಿ ಒಪ್ಪಿಹೋಗಿತ್ತು. ಸ್ಫುಟವಾದ ಮಧ್ಯಮ ಗಾತ್ರದ ಎದೆ, ಸೊಂಟದ ಡೊಂಕು, ಬಗರುಗಾಲಿನ ನಡಿಗೆ, ಗೆಜ್ಜೆಯ ನಾಜೂಕು ಎಲ್ಲ ಅಸಾಮಾನ್ಯವಾದ ರೀತಿಯಲ್ಲಿ ಮೇಳೈಸಿ ಸುಂದರ ಹೆಣ್ಣಿನ ಮೈಮಾಟ ಒಡಮೂಡಿತ್ತು. ಗಾಳಿಗೆ ದೀಪ ಆರದಂತೆ ಅಂಗೈ ಅಡ್ಡ ಹಿಡಿದು ವೈಯ್ಯಾರದಿಂದ ಹೆಜ್ಜೆಹಾಕುವಾಗ ಎದುರಿನ ಗಂಡಸರು ಗೌರವದಿಂದ ಅಡ್ಡಸರಿದು ಒಂದು ಕ್ಷಣ ಮುಜುಗರವನ್ನು ಅನುಭವಿಸುತ್ತಿದ್ದರು. "ಮಹಂತಯ್ಯನವರಿಗೆ ದೇವರು ಒಂದನ್ನು ತಪ್ಪು ಕೊಟ್ಟುಬಿಟ್ಟ!" ಎಂದು ರಸಿಕ ಕಲಾಭಿಮಾನಿಗಳು ಮಸ್ಕರಿ ಮಾತಾಡಿಕೊಳ್ಳುತ್ತಿದ್ದರು. ಗಂಡಸರ ಗುಂಪಿನ ನಡುವೆ ಆರತಿ ಹಿಡಿದು ಬಾಗಿದ ಮಹಂತಯ್ಯನವರ ನಿತಂಬ ನೋಡಿ ಜಯಕ್ಕೋರಿಗೆ ಅಕ್ಕಪಕ್ಕದವರ ಮಾತು ನಿಜವೆನ್ನಿಸಿಹೋಯಿತು. "ಎಷ್ಟು ಚಂದಕೆ ಸೀರೆ ಉಟ್ಕೊಂಡಿದ್ದಾರೆ ನೋಡ್ರೇ! ಹೊಟ್ಟೆ ಎಷ್ಟು ಸಪೂರ ನೋಡೆ ಮಾರಾಯ್ತಿ. ಬೆನ್ನ ಎಲುಬು ಕಾಣೋದಿಲ್ಲ ಎಷ್ಟು ಚಲೋ ಕುಪ್ಪಸ ಕೂತದೆ ನೋಡು" ಹೆಂಗಸರ ಗುಂಪಿನಿಂದ ಪ್ರಶಂಸೆಯ ಪತಾಕೆಗಳೆದ್ದವು. ತಾರಾಮತಿಗೆ ಅನುಕಂಪ ದುಡಿದುಕೊಟ್ಟ ಮಹಂತಯ್ಯನವರ ಸುತ್ತ ಸಂಗೀತಮಯವಾದ ಪುರಾಣ ಪ್ರಭಾವಳಿ ಕಟ್ಟಿತ್ತು. ಇರುಳು ದೀಪದ ಬೆಳಕಲ್ಲಿ ಗುಲಾಬಿ ಬಣ್ಣದ ನಗು ಚೆಲ್ಲುತ್ತಾ ತಾರಾಮತಿ ಅಕ್ಕೋರ ಸನಿಹ ಬಂದು ನಿಂತಳು. ಜಾರತೊಡಗಿದ ಸೀರೆಯ ಸೆರಗನ್ನು ಎತ್ತಿ ಸರಿಪಡಿಸಿಕೊಳ್ಳುವ ನೆಪದಲ್ಲಿ ಮಹಂತಯ್ಯ ಅದ್ಯಾವ ಮಾಯೆಯಲ್ಲೊ ಮಂಪರಿನಲ್ಲಿರುವ ಪ್ರೇಕ್ಷಕರಿಗೆ ಮಂಕೆರಚಿ, ಹರಿವಾಣದಲ್ಲಿ ಸಂಗ್ರಹವಾದ ಅರ್ಧಕ್ಕಿಂತ ಹೆಚ್ಚು ಕಾಣಿಕೆ ಹಣವನ್ನು ಮೊಗೆದು ಮಡಿಚಿದ ಸಣ್ಣ ಕಾಗದ ಚೀಟಿಯ ಸುರುಳಿಯನ್ನು ಅಕ್ಕೋರ ಮಡಿಲೊಳಗೆ ಸುರುವಿ ಹೋದರು. ಒಂದು ಕನಸಿನಂತೆ ಜರುಗಿದ ಮಿಂಚುಕ್ಷಣವನ್ನು ಯಾರೂ ಗಮನಿಸಲಿಲ್ಲವೆಂದು ಖಾತ್ರಿಪಡಿಸಿಕೊಂಡು ಅಕ್ಕೋರು ನಿಟ್ಟುಸಿರು ಬಿಟ್ಟಳು. ಆ ಚಳಿಯಲ್ಲೂ ಅಕ್ಕೋರು ಬೆವರಿಹೋದಳು. ನೋಟು ಮತ್ತು ಸಂದೇಶವಿರುವ ಚೀಟಿಯನ್ನು ಮುಷ್ಟಿಯಲ್ಲಿ ಬಿಗಿಯಾಗಿ ಹಿಡಿದುಕೊಂಡಳು. ಮುಷ್ಟಿಯೊಳಗಿನ ಬರವಣಿಗೆಯನ್ನು ಓದುವ ಉದ್ವೇಗ, ಭಯ, ತಳಮಳ ಹೆಚ್ಚಾಗಿ ಎದ್ದು ಹೋಗುವ ಮನಸ್ಸಾಯಿತು. ಮೈದಾನದ ಅಂಚಿನಲ್ಲಿರುವ ಶೇಂಗಾ ಅಂಗಡಿಯ ಕಂದೀಲು ಬೆಳಕು ಮಂಜಿಗೆ ಮಬ್ಬಾಗಿ ಗಾಜಿನ ಬುರುಡೆಯಂತೆ ಕಾಣುತ್ತಿತ್ತು. ಮುಂದಿನ ದೃಶ್ಯವನ್ನು ನೋಡಲಾಗಲಿಲ್ಲ. ಬೆಳಗಾಗುವುದನ್ನು ಕಾಯುತ್ತ ರಾತ್ರಿ ಅತಿ ದೀರ್ಘವೆನಿಸತೊಡಗಿತು. ನಾಟಕ ನಸುಕಿಗೆ ಮುಗಿಯಿತು. ಉರಿಯುತ್ತಿದ್ದ ಮಂಟಪದ ದೀಪಗಳು ಬಾನಬೆಳಗಿಗೆ ಬಿಳುಚಿಕೊಂಡವು. ಜಯಕ್ಕೋರು ಮೈದಾನದಲ್ಲಿದ್ದ ಬೆಂಚುಗಳನ್ನು ಶಾಲೆ ಬಳಿಗೆ ಹಾಕಿಸಿ ಸೈಕಲ್ ತುಳಿಯುತ್ತ ಚೀಟಿ ಓದಲು ಏಕಾಂತ ಹುಡುಕಿಕೊಂಡು ಹೋದಳು.
ಜಯಕ್ಕೋರು ಆವೇಶದಲ್ಲಿ ಸೈಕಲ್ ತುಳಿಯುತ್ತ ಊರ ಹೊರಗಿನ ಬೂರಲು ಹತ್ತಿ ಮರದಡಿ ನಿಂತು ಚೀಟಿ ಬಿಡಿಸಿ ಓದಿದಳು: "ಈ ಕಾಗದದಲ್ಲಿ ಬರೆದ ವಿಷಯ ಓದಿ ನಿಮಗೆ ಅಚ್ಚರಿಯೊಂದಿಗೆ ಸಂತೋಷವೂ ಆಗಬಹುದೆಂದು ನನ್ನ ನಿರೀಕ್ಷೆ. ಇದೊಂದು ವಿನಯಪೂರ್ವಕ ನಿವೇದನೆಯೇ ಹೊರತು ಒತ್ತಾಯವಲ್ಲ. ಮೊದಲಿಗೆ ನನ್ನ ಪರಿಚಯ ಮಾಡಿಕೊಳ್ಳುತ್ತೇನೆ. ಗದಗಿನ ಪುಣ್ಯಾಶ್ರಮದ ಅನ್ನ ಉಂಡು ಬೆಳೆದವನು ನಾನು. ಹುಟ್ಟಾ ಕುರುಡರಾಗಿದ್ದ ಗವಾಯಿಗಳು ನನಗೆ ಸಂಗೀತದ ಬೆಳಕನ್ನು ಕೊಟ್ಟರು. ಒಮ್ಮೆ ಗವಾಯಿಗಳು ಹುಬ್ಬಳ್ಳಿಯಿಂದ ಗದಗಿಗೆ ರೇಲ್ವೆಯಲ್ಲಿ ಪ್ರಯಾಣಿಸುತ್ತಿದ್ದರು. ನಾನು ಅದೇ ಲೋಕಲ್ ರೇಲ್ವೆಯಲ್ಲಿ ಹಾಡಿಕೊಂಡು ಕಾಸು ಸಂಪಾದನೆ ಮಾಡುತ್ತಿದ್ದೆ. ಆ ದಿನ ಅವರ ಮುಂದೆ ನಿಂತು ವಚನದ ಕೆಲವು ಸಾಲುಗಳನ್ನು ಹಾಡಿದೆ. ಪಕ್ಕದ ಪ್ರಯಾಣಿಕನೊಬ್ಬ ನನ್ನನ್ನು ಅಸಹನೆಯಿಂದ ನೋಡುತ್ತ "ಏ ತಮ್ಮಾ ಯಾಕೆ ಭಿಕ್ಷಾ ಬೇಡಾಕೆ ಹತ್ತಿದಿ? ನನ್ನ ಸಂಗಾಟ ಬಾ. ನಮ್ಮ ಮನೇಲಿ ದನಪನಾ ನೋಡ್ಕಂಡು ಇರುವಿಯಂತೆ" ಎಂದರು. ನನಗೆ ಅವಮಾನವಾಯಿತು. "ನಾ ಭಿಕ್ಷೆ ಬೇಡಾಕೆ ಹತ್ತಿಲ್ಲ! ಕಲಾ ಪ್ರದರ್ಶನ ಮಾಡಾಕೆ ಹತ್ತೀನಿ. ಇವೆರಡರ ನಡ್ವೆ ನಿಮಗೆ ಫರಕ್ಕು ಗೊತ್ತಾಗಂಗಿಲ್ಲೇನು?" ಎಂದು ತಿರುಗಿ ದಬಾಯಿಸಿದೆ. ಇದನ್ನೆಲ್ಲ ಕೇಳುತ್ತ ಕೂತಿದ್ದ ಕುರುಡು ಗವಾಯಿಗಳು ನನ್ನ ಹತ್ತಿರ ಕರೆದು ತಲೆ ನೇವರಿಸಿ, "ಒಳ್ಳೆ ಕಂಠ ಕೊಟ್ಟಿದ್ದಾನಪ್ಪಾ ದೇವರು. ನನ್ನ ಜತಿ ಬರ್‍ತೀಯೇನು" ಎಂದು ವಾತ್ಸಲ್ಯದಿಂದ ಆಶ್ರಮಕ್ಕೆ ಕರೆದುಕೊಂಡು ಹೋಗಿ ಸಂಗೀತ ಕಲಿಸಿದರು. ಅಂದಿನಿಂದ ನನ್ನ ನಾದ ಯಾತ್ರೆ ಶುರುವಾಯಿತು. ಸದಾ ಬರಗಾಲ ಕಾಡುವ ಊರಲ್ಲಿ ಹೊಲ ನೋಡಿಕೊಳ್ಳುತ್ತಿದ್ದ ಅಪ್ಪ ತೀರಿಕೊಂಡ ನಂತರ ನಾನೊಬ್ಬ ಅಲೆಮಾರಿಯಂತಾಗಿ ಹೋದೆ. ಈ ಕಥೆಯನ್ನು ತನಗೇಕೆ ಹೇಳುತ್ತಿದ್ದಾನೆ ಇವನು ಎಂದು ನಿಮಗೆ ಸಹಜವಾಗಿ ಸೋಜಿಗವೆನಿಸಿದೆ. ನನ್ನೀ ಕಥೆಯ ಸಂಗಾತಿಯಾಗಿ ನೀವಿರಬೇಕೆಂದು ನನ್ನ ಅಭಿಲಾಷೆ. ಜೀವನದಲ್ಲಿ ನನಗೆ ನನ್ನ ಸಾಕಿ-ಸಲುಹಿದ ಗವಾಯಿಗಳನ್ನು ಬಿಟ್ಟರೆ ಉಳಿದಿರುವುದು ಸಂಗೀತವೆಂದು ತಿಳಿದಿದ್ದೆ. ಆದರೀಗ ಅನಿಸುತ್ತಿದೆ ನೀವಿರದೆ ನನ್ನ ಜಗತ್ತು ಅಪೂರ್ಣ ಎಂದು. ಪ್ರೀತಿಗೆ ಕಾರಣ ಹುಡುಕುವುದು ತಪ್ಪಲ್ಲವೇ? ಆರತಿ ಹರಿವಾಣ ಹಣವನ್ನು ಏಕೆ ಕೊಟ್ಟಿರಿ ಎಂಬುದು ನಿಮ್ಮ ಮುಂದಿನ ಪ್ರಶ್ನೆ ಎಂದು ನನಗೆ ಗೊತ್ತು. ನೀವೇಕೆ ಕೊರಳಿಗೆ ಹವಳದ ಸರವನ್ನು ಹಾಕಿಕೊಂಡಿರುತ್ತೀರೆಂದು ನಾನು ಊಹಿಸಬಲ್ಲೆ. ನಾನು ನೀಡಿದ ಹಣ ನನ್ನದಲ್ಲ. ಒಂದೆಳೆಯ ಚಿನ್ನದ ಸರಪಳಿಯನ್ನು ಮಾಡಿಸಿಕೊಳ್ಳಲು ಈ ಹಣ ಸ್ವಲ್ಪ ಸಹಾಯಕಾರಿ ಆದೀತು. ತಪ್ಪಿದ್ದರೆ ಕ್ಷಮಿಸಿ"
ಮಹಂತಯ್ಯನವರ ಅರಿಕೆಯ ನುಡಿಗಳು ಅಕ್ಕೋರ ಹೊಕ್ಕಳಲ್ಲಿ ತಳಮಳದ ಹೂವಾಗಿ ಅರಳಿಹೋಯಿತು. ಸಾರ್ವಜನಿಕ ಸಭೆಯ ಸಮಕ್ಷಮದ ಅರೆಕ್ಷಣವನ್ನು ಖಾಸಗಿ ಏಕಾಂತವನ್ನಾಗಿಸಿಕೊಂಡು ಪ್ರೀತಿಯ ಬಿರುಗಾಳಿಯನ್ನು ಎಬ್ಬಿಸಿ ಹೋದರಲ್ಲ ಎಂಬ ಬೆರಗಿನಲ್ಲಿ ಸೈಕಲ್ ದೂಡುತ್ತಾ ನಡೆದಳು. ದೊಡ್ಡ ಕಲಾವಿದನೊಬ್ಬ ಬಡ ಅಕ್ಕೋರಿಗೆ ಒಲಿದಿರುವ ಪರಿಯನ್ನು ನಂಬಲಾರದೆ ಚಡಪಡಿಸಿದಳು. ಸರಕಾರಿ ಖೈದಿಯಂಥ ನೌಕರರನ್ನು ಮದುವೆಯಾಗಿ ಕಾಲಕಾಲಕ್ಕೆ ವರ್ಗವಾಗುತ್ತಲೇ ಇರುವ ಬಿಡಾರದಲ್ಲಿ ಸಂಸಾರ ತೂಗುವ ಗೋಳಿನ ದಾಂಪತ್ಯ ಜೀವನವನ್ನು ಕಲ್ಪಿಸಿಕೊಂಡಿದ್ದ ಅವಳು, ರೋಮಾಂಚನವನ್ನುಂಟುಮಾಡುವ ರಮ್ಯ ಪ್ರಸಂಗ ಘಟಿಸುತ್ತದೆಯೆಂದು ಕನಸಿನಲ್ಲೂ ಎಣಿಸಿರಲಿಲ್ಲ. ಶಾಲೆಯ ಹಂಚಿನ ಮಾಡಿನಾಚೆ ಅವಿತಿದ್ದ ಚಂದ್ರ, ತಾರಾಮತಿ ಗಂಡು ಸ್ಪರ್ಶವನ್ನು ದಾಟಿಸುತ್ತಿರುವುದನ್ನು ಕದ್ದು ನೋಡಿ ನಕ್ಕದ್ದು ಬಿಟ್ಟರೆ ಬೇರ್‍ಯಾರೂ ನೋಡಿರಲಿಲ್ಲ. ನಸುಕಿನಲ್ಲಿ ನಡೆದ ಸಂಗತಿ ಕನಸೇ, ನಾಟಕದ ಮುಂದುವರಿದ ಭಾಗವೇ, ಮಹಂತಯ್ಯನವರು ನಡೆಸಿದ ಪರೀಕ್ಷೆಯೆ ಅಥವಾ ನಿಜವಾದ ಪ್ರೀತಿಯೆ ಎಂದು ಗೊಂದಲ ಮೀಮಾಂಸೆಯಲ್ಲಿ ಕಳೆದು ಹೋದಳು. ಅಕ್ಕೋರ ಗುಂಗಿನ ಮೌನವನ್ನು ಮುದಿ ತಾಯಿ ರಾತ್ರಿಯಿಡಿ ನಿದ್ದೆಗೆಟ್ಟು ನಾಟಕ ನೋಡಿದ ಫಲವೆಂದು ಭಾವಿಸಿಕೊಂಡಿದ್ದರು. ಶಾಲೆಗೆ ರಜೆ ಸಾರಿದ್ದರಿಂದ ಅಕ್ಕೋರು ಮನೆಯಲ್ಲಿ ಉಳಿದರು. ತಾರಾಮತಿಯಲ್ಲಿ ಅಡಗಿದ ಮಹಂತಯ್ಯ ಅಕ್ಕೋರ ಕಣ್ಣು ರೆಪ್ಪೆಗಳನ್ನು ತೆರೆಯುವ, ಮುಚ್ಚುವ ಬಾಗಿಲ ಬಂಟನಾಗಿ ಹಾಸಿಗೆಯ ಮೇಲೆ ಕುಳಿತುಬಿಟ್ಟರು. "ಗವಾಯಿಗಳ ಪಾರ್ಟು ಅಗ್ದಿ ಚಲೊ ಅಂತ ಮಂದಿ ಹೇಳಾಕ ಹತ್ಯಾರಲ್ಲ" ತಾಯಿ ಮಹಂತಯ್ಯನವರ ನುಡಿಗಟ್ಟಿನಲ್ಲಿ ಘಾಟಿ ದನಿಯಲ್ಲಿ ಮಾತಾಡಿದ್ದು ಅವಳಿಗೇಕೋ ಅನುಮಾನ ಹುಟ್ಟಿಸಿತು. ನಸುಕಿನ ಮಂಪರಿನಲ್ಲಿ ಮಿಂಚಿಹೋದ ಕನಸೆಂದು ಹೇಳಿ ಹಗುರಾಗಲೇ? ಸಂಗೀತದ ಬೆನ್ನೇರಿ ದೇಶಾಂತರ ಸುತ್ತುವ ಮಹಂತಯ್ಯನವರ ಪ್ರಸ್ತಾಪವನ್ನು ತಾಯಿ ಒಪ್ಪಿಯಾಳೆಯೆ? ನಾಟಕದ ಹರಿಶ್ಚಂದ್ರನಲ್ಲಿದ್ದ ಸತ್ಯ ತನ್ನ ಜೀವನದೊಳಗೆ ಜಿಗಿಯಿತೆ? ಅಕ್ಕೋರ ಜಿಜ್ಞಾಸೆ ಮುಗಿಯದಾಯಿತು. ಮುಸ್ಸಂಜೆಯಾಯಿತು.
ಗುಡಿಗಾರ ಗಲ್ಲಿಯಲ್ಲಿ ಹೋದ ಕರೆಂಟ್ ದೀಪ ಬಂದಿರಲಿಲ್ಲ. ಜಯಕ್ಕೋರ ತಾಯಿ ಪಕ್ಕದ ಮನೆಗೆ ಹರಟೆಗೆ ಹೋಗಿದ್ದರು. ರಸ್ತೆಯ ಮೇಲೆ ಓಡಾಡುವವರು ಚಲಿಸುತ್ತಿರುವ ನೆರಳಿನಂತೆ ಕಾಣುತ್ತಿದ್ದರು. ಜಯಕ್ಕೋರು ತೆರೆದ ಜಗಲಿ ಬಾಗಿಲಿಗೊರಗಿಕೊಂಡು ಚಿಂತಾಮಗ್ನಳಾಗಿದ್ದಳು. ಬಿಳಿಯ ವಸ್ತ್ರಧಾರಿಯೊಬ್ಬ ಮಾಯಾವಿಯಂತೆ ಮೆಟ್ಟಿಲಮೇಲೆ ನಿಂತು 'ಅಮ್ಮಾ' ಎಂದು ಕರೆದ. ತುಸು ಆಸರೆಗೆ ಎತ್ತಿದ ಬಲತೊಡೆಯ ಮೇಲೆ ಕೊರಳ ಪಟ್ಟಿಗೆ ಜೋತುಬಿದ್ದ ಪೆಟ್ಟಿಗೆ ಪಿಯಾನೆಂದು ಅವಳು ಗುರುತಿಸಿ, "ಹಾಡೋದು ಬ್ಯಾಡ" ಎಂದಳು. ಅವನು ಯೋಚಿಸುತ್ತ ತನ್ನ ಕಾಯಕವನ್ನು ಕೈಗೊಳ್ಳುವಂತೆ ಚಿಟ್ಟೆಯ ಮೇಲೆ ಕುಳಿತ. ದೀಪ ಹಚ್ಚಿರದ ಮನೆ; ಮುಸ್ಸಂಜೆಯ ವೇಳೆಯಲ್ಲಿ ಬಾಗಿಲಿಗೆ ಬಂದ ಅತಿಥಿ. ಈ ಹಿಂದೆ ಒಂದೆರೆಡು ಸಲ ಹಾನಗಲ್ ಕಡೆಯಿಂದ ಬಂದ ಹಗಲು ವೇಷದವರ ಪೈಕಿಯವನಾಗಿರಬೇಕೆಂದು ಅಕ್ಕೋರು ಪಡಿ ತರಲು ಒಳಗೆದ್ದು ಹೋದಳು. ಒಳಗೆ ಕಿಟಕಿಯ ಮೂಲಕ ಚಂದ್ರನ ಹಸುಳೆ ಬೆಳಕು ಅಂಬೆಗಾಲಿರಿಸಿತ್ತು. ಬಾಗಿಲ ಹೊರಗೆ ಬಂದು ಬಾಗಿ ಅವನ ವಸ್ತ್ರದೊಳಗೆ ಪಡಿಸುರಿಯುವಾಗ ತಟ್ಟನೆ ಕೈಹಿಡಿದುಕೊಂಡ. ಮುತ್ತು ಕೊಡಲು ಮುಖ ಎತ್ತಿದನೋ ಆಕಸ್ಮಿಕವೋ ಎಂಬಂತೆ ಅವನ ಬಿಸಿ ತುಟಿ ಅಕ್ಕೋರ ಗಲ್ಲಕ್ಕೆ ಸೋಕಿತು. ಮನಸ್ಸಿನೊಳಗೆ ಮಹಂತಯ್ಯ ಆಡತೊಡಗಿದ ಆಟದ ಹೊರರೂಪದಂತಿರುವ ಮುಸ್ಸಂಜೆಯ ಕೈ ಮತ್ತು ತುಟಿ ಸ್ಪರ್ಶವನ್ನು ಪ್ರತಿಭಟಿಸಲಾರದೆ ಅಪ್ರತಿಭಳಾಗಿ ನಿಂತಳು. ತಾನು ಅದಾಗಲೇ ಮಹಂತಯ್ಯನವರ ಪ್ರೇಮದೊಂದಿಗೆ ಪಲಾಯನ ಮಾಡುತ್ತಿದ್ದೇನೆಯೆ ಎಂದು ನಾಚಿಕೊಂಡಳು. ಅನುರಾಗದ ಆತ್ಮಕ್ಕೆ ಯಾವ ವೇಷಾಂತರವೂ ಮೋಸಮಾಡಲಾರದೆಂದುಕೊಂಡು ಅಕ್ಕೋರು, "ಪಾತಿವ್ರತ್ಯದ ಪರೀಕ್ಷೆಯ ಗುಟ್ಟನ್ನು ಕಾಪಾಡಲು ನಿಮ್ಮಿಂದಾಗಲಿಲ್ಲ. ಒಳಗೆ ಬಂದು ಕೂತ್ಕೊಳ್ಳಿ" ಎಂದು ಕೈಹಿಡಿದಾತನನ್ನು ಬಯಲು ಮಾಡುವಷ್ಟರಲ್ಲಿ ದೀಪ ಬಂತು. ದೀಪದೊಂದಿಗೆ ಒಳಗೆ ಬಂದ ತಾಯಿಗೆ "ಅಮ್ಮ ಇವರು ಗವಾಯಿಗಳು" ಎಂದು ಪರಿಚಯಿಸಿದಳು. ಮಹಂತಯ್ಯ ಮತ್ತೆ ಮನೆಯಿಂದ ಹೊರಗೆ ಹೋಗಲಿಲ್ಲ.
ಸ್ವಯಂವರ ರಹಸ್ಯವಾಗಿ ಉಳಿದಿದ್ದರಿಂದ ಮಹಂತಯ್ಯ ಮತ್ತು ಜಯಕ್ಕೋರ ವಿವಾಹ ಎಲ್ಲರ ಮನಸ್ಸಿನಲ್ಲೂ ಉದ್ಗಾರ ವಾಚಕವಾಗಿಯೇ ಉಳಿಯಿತು. ನೌಕರಿ ಸಿಕ್ಕಿದೊಡನೆಯೆ ಜಯಕ್ಕೋರು ಯಲ್ಲಾಪುರದ ಗುಡಿಗಾರ ಗಲ್ಲಿಯಲ್ಲಿ ಬಾಡಿಗೆ ಮನೆ ಹಿಡಿದಳು. ಅಂಕಣವಿರದ ಹಂಚಿನ ಮಾಡಿನ ನೇರ ಸಾಲಿನ ಮೂರು ರೂಮುಗಳ ಚಾಳದ ಮನೆಯದು. ಸಂಗೀತ ಕಾರ್ಯಕ್ರಮ ಎನ್ನುತ್ತ ತಿರುಗಾಟದಲ್ಲಿರುವುದು ಮಹಂತಯ್ಯನವರ ಜಂಗಮ ಕಾಯಕವಾಗಿ ಹೋಗಿತ್ತು. ಸಂಸಾರ ಆರಂಭವಾದ ನಂತರ ವಾರದ ಸಂತೆ ಮಾಡಬೇಕು; ಅಂಗಡಿಗೆ ಹೋಗಿ ಕಿರಾಣಿ ವ್ಯಾಪಾರ ಮಾಡಿಕೊಂಡು ಬರಬೇಕು; ರೇಶನ್ ಪಡೆಯಲು, ವಿದ್ಯುತ್ ಪಾವತಿ ಕಟ್ಟಲು ಸರತಿಯ ಸಾಲಲ್ಲಿ ನಿಲ್ಲಬೇಕು; ಆದರೆ ಮಹಂತಯ್ಯ ಮನೆಯ ದೈನಿಕಕ್ಕೆ ಅಂಟಿಕೊಳ್ಳಲಿಲ್ಲ. ಅಕ್ಕೋರು ಕೊಡೆ ಹಿಡಿದು, ಕಂಕುಳಲ್ಲಿ ಪರ್ಸಯಿಟ್ಟುಕೊಂಡು ಕೈ ಚೀಲ ಜೋಲಿಸುತ್ತಾ ಸಂಸಾರದ ಓಣಿಯಲ್ಲಿ ಒಂಟಿ ಓಡಾಡಿದರು. ಮನೆಯಲ್ಲಿರದ ಗಂಡನ ಬಗ್ಗೆ ಬೇಸರವಾದರೂ "ಕಲಾವಿದರಿಗೆ ವ್ಯವಹಾರ ಪ್ರಪಂಚದ ಬಗ್ಗೆ ಜ್ಞಾನ ಕಮ್ಮಿ" ಎಂದು ಸಮಜಾಯಿಸಿ ಹೇಳಿಕೊಂಡಳು. ಸಂಸಾರವೆಂದಾದ ಮೇಲೆ ಮನೆಯ ಜಗಲಿಯಲ್ಲಿ ಕುರ್ಚಿ, ಮೇಜು, ಮಲಗುವ ಕೋಣೆಯಲ್ಲಿ ನವದಂಪತಿಗಳಿಗೊಂದು ಮಂಚ, ನಾಲ್ಕಾರು ಜನರಿಗೆ ಒಟ್ಟಿಗೆ ಬೇಯಿಸಲು ಸಾಕಾಗುವಷ್ಟು ಪಾತ್ರೆ- ಪಗಡಿ, ಎರಡಾದರೂ ಹತ್ತಿಯ ಗಾದಿಗಳು ಇರಬೇಡವೇ ಎಂದು ಅಕ್ಕೋರ ಅಮ್ಮ ಗೃಹಣಿಯ ಮನೆವಾರ್ತೆಯನ್ನು ನೆನಪಿಸಿಕೊಂಡು "ಬರೀ ನೆಲವಿರುವ ಮನೆಗೆ ಯಾವ ಗಂಡಸು ಉಳಿತಾನೆ" ಎಂದು ಕುಟುಂಬ ಕೈಂಕರ್ಯಕ್ಕೆ ಮುಂದಾದರು. ಮಗಳು ಶಾಲೆಗೆ ಹೋಗುತ್ತಿದ್ದ ಕಾಲದಲ್ಲಿ ಪಾಟಿ ತಂದುಕೊಡಲೂ ಹಣವಿರಲಿಲ್ಲ; ಅಕ್ಕಿಗೇರಿದಾಗ ಸಗಣಿಯಿಂದ ಸಾರಿಸಿದ ಚಿಟ್ಟೆಯ ನುಣುಪು ನೆಲದ ಮೇಲೆ ಹರಡಿಕೊಂಡಿದ್ದ ದೂಳಿನ ಮೇಲೆ ಬೆರಳಿಂದ ತೀಡಿ ಮೂಲಾಕ್ಷರ ಬರೆದು ಕಲಿಸಿದ ಅಕ್ಕೋರ ಅಮ್ಮನಿಗೆ ಬಡತನವನ್ನು ನಿರ್ವಹಿಸುವ ವಿದ್ಯೆಯನ್ನು ಯಾರೂ ಹೇಳಿಕೊಡಬೇಕಾಗಿರಲಿಲ್ಲ. "ಜಯಾ ನೀನೇನೂ ಚಿಂತೆ ಮಾಡ್ಬೇಡ. ಆರಾಮಾಗಿ ಶಾಲೆಗೆ ಹೋಗಿ ಬಾ. ನಾನೆಲ್ಲ ವ್ಯವಸ್ಥೆ ಮಾಡ್ತೇನೆ." ಅಮ್ಮನ ಮುದಿ ಕಾಲದ ಜವಾಬ್ದಾರಿಯ ಭಾರ ಹೆಚ್ಚಾಯಿತೆಂದು ಅಕ್ಕೋರಿಗೆ ಖೇದವಾಯಿತು. "ಇದೆಲ್ಲ ಕಟ್ಟಿಕೊಂಡ ಗಂಡ ಮಾಡಬೇಕಾದ ಕೆಲ್ಸ" ಬೇಸರದಿಂದ ನುಡಿದಳು. "ನೀ ಹಾಂಗೆಲ್ಲ ಒರಟು ಮಾತಾಡ್ಬೇಡ. ಮಹಂತಯ್ಯ ಮನೇಲಿ ಖಾಲಿ ಕೂತ್ಕೊಳ್ಳೋದಕ್ಕೆ ಆಗ್ತದೆಯಾ? ಮನೇಲಿ ಇರ್‍ಬೇಕು ಅಂತಾದ್ರೆ ಸಂಗೀತ ಶಾಲೆ ತೆರೆಯೋದಕ್ಕೆ ಹೇಳು" ಸಲಹೆ ನೀಡಿದಳು. ಅತ್ತೆಯ ಉಪಾಯವನ್ನು ಗಂಡ ಒಪ್ಪಿಕೊಂಡರೆಂದು ಅಕ್ಕೋರಿಗೆ ನಿರಾಳವೆನಿಸಿತು. ಭಾವನಾತ್ಮಕ ಕಾರಣಕ್ಕಾಗಿ ಉಳಿಸಿಕೊಂಡ ಮೂಲ ಮನೆಯನ್ನು ಕೆಡವಿ ಅದರಿಂದ ದೊರೆಯುವ ಮರದ ಸಾಮಾನುಗಳನ್ನು ತರಲು ಅಮ್ಮ ಕಿರವತ್ತಿಗೆ ಹೊರಟಾಗ ಅಕ್ಕೋರಿಗೆ ಚಿಂತೆಯಾಗಲಿಲ್ಲ. ಮದುವೆಯ ಹೊಸ ಹುಮ್ಮಸ್ಸಿನಲ್ಲಿ ತಾನು ತನ್ನಜಮಾನರು ಬೆವರು ಸುರಿಸಿ ಕಟ್ಟಿದ ಮನೆಯನ್ನು ಬಿಚ್ಚಿಸಬೇಕಾದರೆ ಅಮ್ಮನಿಗೆ ಸಂಕಟವಾಯಿತು. ಬಾಡಿಗೆ ಎತ್ತಿನ ಗಾಡಿಯೊಂದನ್ನು ಗೊತ್ತು ಮಾಡಿ ಮನೆಯ ಹಳೇ ಹಲಗೆ ಸಾಮಾನುಗಳನ್ನು ಗಾಡಿಯಲ್ಲಿ ಹಾಕಿಕೊಂಡು ಕಿರವತ್ತಿಯಿಂದ ಸ್ವತಃ ತಾನೇ ಮೂರು ಮೈಲಾಚೆಯ ಕಮ್ಮಾರ ಸಾಣೆಗೆ ತೆಗೆದುಕೊಂಡು ಹೋದರು. ಅಲ್ಲೇ ಕೂತು ಬಾಡಿಗೆ ಮನೆಗೆ ಅಗತ್ಯವಿರುವ ಪೀಠೋಪಕರಣಗಳನ್ನು ಮಾಡಿಸಿದರು. ಅದೇ ಬಂಡಿಗಾಡಿಯಲ್ಲಿ ಗುಡಿಗಾರ ಗಲ್ಲಿಯ ಮನೆಗೆ ಆಸನಗಳು ಬಂದವು. ಕಾಗದಪತ್ರ ಓಡಾಡಿಸಲು ಅಮ್ಮ ಅರಣ್ಯಾಧಿಕಾರಿಗಳ ಕಚೇರಿಗೆ ಅಡ್ಡಾಡಿ ಕೆಲಸ ಮಾಡಿಕೊಂಡು ಬಂದದ್ದನ್ನು ನೋಡಿ ಗಲ್ಲಿಗೆ ಗಲ್ಲಿಯೆ "ಮುದುಕಿ ಭಾಳ್ ಜೋರು" ಎಂದು ಪ್ರಶಂಸಿಸಿದರು.
ಮಹಂತಯ್ಯನವರ ನೂತನ ಗೃಹಸ್ಥಾಶ್ರಮದಲ್ಲಿ ಸಂಗೀತ ಶಾಲೆ ಆರಂಭವಾಯಿತು. ಪಕ್ಕದ ರಸ್ತೆಯ ವಾಹನಗಳ ಸದ್ದು, ಹಿಟ್ಟಿನ ಗಿರಣಿಯ ಗಲಾಟೆ, ಗ್ಯಾರೇಜಿನಲ್ಲಿ ಉತ್ಪತ್ತಿಯಾಗುವ ವಿವಿಧ ರೀತಿಯ ಕರ್ಕಶಗಳು ಪರಸ್ಪರ ಡಿಕ್ಕಿಹೊಡೆಯುತ್ತಿರುವ ಮನೆಯ ಜಗಲಿಯಲ್ಲಿ ರಾಗ ಸಂಚಾರವಾಗತೊಡಗಿತು. ಪೆನ್ನು ಮತ್ತು ನೋಟ್ ಬುಕ್ ಹಿಡಿದುಕೊಂಡ ಹುಡುಗರು, ಹುಡುಗಿಯರು, ನಲವತ್ತರ ಆಸುಪಾಸಿನ ಹೆಂಗಸರು ಗುಡಿಗಾರ ಗಲ್ಲಿಯಲ್ಲಿ ಓಡಾಡುವುದು, ಶ್ರುತಿ, ತಬಲಾ ಮತ್ತು ಪಿಯಾನಿನ ಹಿನ್ನೆಲೆಯಲ್ಲಿ ಮಹಂತಯ್ಯನವರೊಂದಿಗೆ ಸ್ವರ ಆಲಾಪಮಾಡುವುದು ಯಲ್ಲಾಪುರ ಪೇಟೆಗೆ ಹೊಸತು. ಸಂಗೀತದ ವ್ಯಾಕರಣದ ನಿರಂತರ ಪಾಠ ಚಾಳಿನ ಉಳಿದ ಧಾರಾವಾಹಿ ಹೆಂಗಸರಿಗೆ ಕಿರಿಕಿರಿಯಾಗತೊಡಗಿತು. "ಏನ್ರಿ ಇದು ಹಗಲೂ ರಾತ್ರಿ ಕಿಸ್‌ಬಾಯಿ ದಾಸನಾಂಗೆ ಅರಚ್ತಾರೆ" "ಶಾಲೇನಾ ಬೇರೆ ಕಡೆ ಹಾಕ್ಕೊಳಲಿ" ನೆರೆಹೊರೆಯ ಹೆಂಗಸರು ದೂರುಗಳನ್ನು ವಿನಿಮಯ ಮಾಡಿಕೊಂಡರು. ಸಂಗೀತವನ್ನು ಎಷ್ಟು ದ್ವೇಷಿಸಲು ತೊಡಗಿದರೆಂದರೆ ಗಿರಣಿ, ಗ್ಯಾರೇಜಿನ ಕರ್ಕಶಗಳು ಸಹನೀಯವಾಗಿಹೋದವು. ಟಿ.ವಿ ವಾಲ್ಯೂಮ್ ದೊಡ್ಡದಾಗಿಡುವುದು, ಬಟ್ಟೆಯನ್ನು ಜೋರಾಗಿ ಸೆಳೆಯುವುದರ ಮೂಲಕ ತಮ್ಮ ಪ್ರತಿಭಟನೆಯನ್ನು ವ್ಯಕ್ತಪಡಿಸಿದರು. "ನೀವೇನೋ ಬೆಳಗ್ಗೆ ಮನೆ ಬಿಟ್ಟು ಸಂಜೆ ಬರ್‍ತೀರಿ. ನಿಮ್ಮೆಜಮಾನರ ಸಂಗೀತದ ತಲೆಬೇನೆ ನಿಮಗೆ ಹೇಗೆ ಗೊತ್ತಾಗಬೇಕು" ಒಂದಿನ ಬೆಳಗ್ಗೆ ಅಕ್ಕೋರ ಸೈಕಲ್ ನಿಲ್ಲಿಸಿ ರೇಗಾಡಿದರು. "ಆಯ್ತು ಅವರಿಗೆ ಹೇಳ್ತೇನೆ" ಅಕ್ಕೋರ ಮಾತಿಗೆ ಹೆಂಗಸೊಬ್ಬಳು, "ಬರೀ ಹೇಳೊದಲ್ಲ. ಬಂದ್ ಮಾಡ್ಬೇಕು" ಎಂದು ಗರ್ಜಿಸಿದಳು.
ಸಂಗೀತ ಶಾಲೆಯ ಸ್ಥಳಾಂತರದ ಬಗ್ಗೆ ಗಲ್ಲಿಯ ಹೆಂಗಸರು ಎಬ್ಬಿಸಿದ ತಕರಾರು ದೊಡ್ಡ ರಾದ್ಧಾಂತವಾಗದ ಹಾಗೆ ಸ್ವಲ್ಪ ಮುಂಗೋಪಿಯಾದ ಮಹಂತಯ್ಯನವರಲ್ಲಿ ಅಕ್ಕೋರು ವಿಲಂಬಿತದಲ್ಲಿ ಪ್ರಸ್ತಾಪಿಸಿದಳು. ಅವರು ಶಿಷ್ಯರಿಗೆ "ಬೇರೆ ಎಲ್ಲಾದ್ರೂ ಜಾಗ ಹುಡುಕ್ರಲೆ" ಎಂದು ಕುಂದಗೋಳ ಸಂಗೀತೋತ್ಸವಕ್ಕೆ ಹೋದರು. ಸಂಗೀತದ ರಿಯಾಜಿಗಿಂತ ಇಂಥ ವ್ಯವಹಾರಗಳಲ್ಲಿ ಪಾರಂಗತರಾದ ಶಿಷ್ಯರಿಬ್ಬರು ಯಲ್ಲಾಪುರದ ಪೇಟೆಯಲ್ಲಿ ಅಪ್ರತಿಮ ಸ್ತ್ರೀವರೇಣ್ಯಳೆನಿಸಿದ ರಮಣಿ ಬಾಯಿಯವರನ್ನು ಭೇಟಿ ಮಾಡಲು ತೀರ್ಮಾನಿಸಿದರು. ಸಾರ್ವಜನಿಕ ಕಾರ್ಯಗಳಿಗೆ ಚಂದಾ ವಸೂಲಿಗೆ ಹೋದಾಗ ಉದಾರ ದೇಣಿಗೆ ನೀಡಿದ್ದರು. ಸ್ವತಃ ರಮಣಿ ಬಾಯಿಯವರೇ ದಿವಂಗತ ತನ್ನ ತಂದೆಯ ಹೆಸರಿನಲ್ಲಿ ವಾಚನಾಲಯವನ್ನು ಮನೆಯ ಮಹಡಿಯಲ್ಲಿ ಕಳೆದ ಹತ್ತು ವರ್ಷಗಳಿಂದ ನಡೆಸುತ್ತ ಬಂದಿದ್ದರು. ನಲವತ್ತರ ಅಂಚಿನ ವಿದ್ಯಾವಂತ ಅವಿವಾಹಿತ ರಮಣಿ ಬಾಯಿಯವರು ತನ್ನ ಹೆಸರಿನ ಹಿಂದೆ ಕುಮಾರಿ ಎಂದು ಬರೆಸಿಕೊಳ್ಳಲು ಮರೆಯುತ್ತಿರಲಿಲ್ಲ. ಅವರ ಸಾಮಾಜಿಕ ಸೇವಾ ಮನೋಭಾವ, ಏಕಮೇವಾದ್ವಿತೀಯ ಪುತ್ರಿಗೆ ತಂದೆ ಬಿಟ್ಟು ಹೋದ ಜಮೀನು, ಮನೆ, ಬಂಗಾರದ ಸಿರಿಯನ್ನು ಗಮನಿಸಿದ ರಾಜಕೀಯ ಮುಖಂಡರು ವಿಧಾನಸಭೆಯ ಚುನಾವಣೆಗೆ ತಮ್ಮ ಪಕ್ಷದಡಿ ಸ್ಪರ್ಧಿಸಲು ಆಮಂತ್ರಣ ನೀಡಿದ್ದರು. ಅದೇಕೊ ರಮಣಿ ಬಾಯಿಯವರು ಪ್ರಲೋಭನೆಗೆ ಒಳಗಾಗಲಿಲ್ಲ. ಸ್ಥಳೀಯ ಸಂಘ- ಸಂಸ್ಥೆಗಳು ಅಥವಾ ಪ್ರಾಯೋಜಕರು ಸಾಹಿತ್ಯ, ಸಂಗೀತ, ನೃತ್ಯ ಕಾರ್ಯಕ್ರಮಗಳನ್ನು ನಡೆಸಲು ಮುಂದಾದರೆ ತನ್ನ ಮಹಡಿ ಮನೆಯ ಹಾಲನ್ನು ನೀಡುತ್ತಿದ್ದರು. ರಮಣಿ ಬಾಯಿಯವರ ಸದಭಿರುಚಿಯನ್ನು ಕಂಡುಕೊಂಡ ಖದೀಮ ಶಿಷ್ಯರು ವಿಶ್ವಾಸದಿಂದ ಹೋಗಿ, "ಕಲಾರಸಿಕರಾದ ತಾವು ಸಂಗೀತ ಆರಾಧನೆಗೆ ತಮ್ಮ ಮನೆಯ ಮಹಡಿಯ ಒಂದು ಭಾಗ ಕೊಟ್ಟಿದ್ದರೆ ಉಪಕಾರವಾಗುತ್ತಿತ್ತು" ಎಂದು ಅತ್ಯಂತ ಪ್ರಯಾಸದಿಂದ ಕಂಠಪಾಠಮಾಡಿದ ಶಬ್ದ ಶೃಂಗಾರವನ್ನು ಒಪ್ಪಿಸಿದರು. ಕೃತ್ರಿಮವಾದ ಗಂಭೀರ ಧಾಟಿಯಲ್ಲಿ ಅಪಹಾಸ್ಯಕ್ಕೀಡಾದ, ಸರಿಯಾಗಿ ತಂಬೂರಿ ತಂತಿಯನ್ನು ಮೀಟಲು ಕಲಿತಿರದ ಶಿಷ್ಯರನ್ನು ನೋಡಿ, "ಇಂಥ ಸೋಗಿನ ಮಾತ ಆಡೋದಕ್ಕೆ ಹೋಗ್ಬೇಡಿ. ಈ ಜಾಗ ಸಂಗೀತಕ್ಕೆ ಬಳಕೆಯಾದರೆ ನನಗೆ ಸಂತೋಷವೇ. ನಾನು ಗವಾಯಿಯವರೊಂದಿಗೆ ಮಾತಾಡ್ತೇನೆ. ನೀವು ಸಂಗೀತದ ಉಪಕರಣಗಳನ್ನು ತಂದಿಟ್ಟುಕೊಳ್ಳಬಹುದು" ಎಂದು ಒಳಗೆ ಹೋಗಿ ಹಿತ್ತಾಳೆಯ ಬೀಗದ ಕೈಯನ್ನು ತಂದುಕೊಟ್ಟರು.
ಮಹಂತಯ್ಯನವರು ಮರಳುವಷ್ಟರಲ್ಲಿ ಸಂಗೀತ ಶಾಲೆಯ ಸ್ಥಳಾಂತರವಾಗಿತ್ತು. ಶಾಲೆಯಿಂದ ಸಂಜೆ ಬಂದಾಗ ಜಯಕ್ಕೋರಿಗೆ ಖಾಲಿ ಮನೆ ಬಿಕೋ ಎನಿಸಿತು. ಶಿಷ್ಯರು ಹುಡುಕಿದ ವಿಶಾಲವಾದ ಹಳ್ಳಿಯ ಏಕಾಂತವಿರುವ ಮನೆ ಮಹಂತಯ್ಯನವರಿಗೆ ಸಂಗೀತಕ್ಕೊಂದು ಧ್ಯಾನದ ವಾಸ್ತು ದೊರಕಿಸಿಕೊಟ್ಟಿದೆ ಎಂದು ಸಂತೋಷವಾಯಿತು. ಮನೆಯಲ್ಲಿದ್ದ ಎಕ್ಸ್‌ಟ್ರಾ ದಿವಾನ್ ಸೆಟ್‌ನ್ನು ರಮಣಿ ಬಾಯಿಯವರು ಹಾಲಿಗೆ ತಂದಿರಿಸಿದಳು. ರವಿವರ್ಮ ರಚಿಸಿದ ಶಾರದೆಯ ಫೋಟೋ ತಂದಿರಿಸಿದರು. ನಾಂದಿ ಪೂಜೆಯಂದು ರಮಣಿ ಬಾಯಿಯವರು ಎಲ್ಲರಿಗೂ ಮನೆಯಲ್ಲಿ ತಯಾರಿಸಿದ ರವೆಲಾಡು, ಚೂಡಾ ಮತ್ತು ಚಹಾ ವಿತರಿಸಿದ್ದಲ್ಲದೆ ಮಹಂತಯ್ಯನವರು ಹಾಡಿದ ತೋಡಿ ರಾಗವನ್ನು ಶ್ರದ್ಧೆ ಮತ್ತು ತಲ್ಲೀನತೆಯಿಂದ ಆಲಿಸಿದರು. ರಾಗಸುಖವನ್ನು ತುಂಬಿಕೊಂಡು ಹೊರಡುವ ಕ್ಷಣ ಮಹಂತಯ್ಯನವರ ಮುಂದೆ ನಿಂತು ಲಕ್ಷಣವಾಗಿ ಕೈಮುಗಿದು ಕೆಳಗಿಳಿದು ಹೋದರು. ಕೈಮುಗಿದ ಉದಾತ್ತ ನಿಲುವಿನ ರಮಣಿ ಬಾಯಿಯವರ ಸ್ತ್ರೀ ಭಂಗಿಯಲ್ಲಿ ಯಾವ ಘರಾಣೆ ಸೂರೆಗೊಂಡು ವಿಜೃಂಭಿಸಿರಬಹುದೆಂದು ತಿಳಿಯದೆ ಮಹಂತಯ್ಯ ಬೆರಗಿನಲ್ಲಿ ಉಳಿದರು.
ಗುಡಿಗಾರ ಗಲ್ಲಿಯ ಇತರ ಹೆಂಗಸರ ಸಂಸಾರದೊಂದಿಗೆ ಸಮವಾಗಿ ಗುರುತಿಸಿಕೊಳ್ಳುವ ಆಸೆಗಿಂತ ಹೆಚ್ಚಿನ ಅಸಾಮಾನ್ಯ ಆಕಾಂಕ್ಷೆಗಳೇನೂ ಜಯಕ್ಕೋರಿಗಿರಲಿಲ್ಲ. ತನ್ನೆಜಮಾನರು ಆಫೀಸಿನಿಂದ ನೇರವಾಗಿ ಮನೆಗೇ ಬರುತ್ತಾರೆ. ದೀಪಾವಳಿಗೆ ಅವರೇ ಮಾಡಿಸಿದ ಬಂಗಾರದ ಬಳೆ ಇದ್ದ ನನ್ನ ಕೈ ಅಡಿಗೆ ರುಚಿ ಬಿಟ್ಟರೆ ಬೇರೆಲ್ಲೂ ಅವರಿಗೆ ಸೇರುವುದಿಲ್ಲ; ಮನೆಯಲ್ಲಿ ತಾನೊಂದು ದಿನ ಇಲ್ಲದಿದ್ದರೆ ಅವರಿಗೆ ವಿಪರೀತ ಬೇಸರವಂತೆ ಎಂದೆಲ್ಲ ಜಂಭ ಕೊಚ್ಚಿಕೊಳ್ಳುವ ಗಲ್ಲಿಯ ಲಲನೆಯರು ಗಂಡಂದಿರನ್ನು ಕರಾರುವಕ್ಕಾದ ವೇಳಾಪತ್ರಿಕೆಯೊಳಗೆ ಪಳಗಿಸಿರುವಾಗ ಮಹಂತಯ್ಯನವರ ಅಕಾಲ ಅಲೆದಾಟ ಜಯಕ್ಕೋರಿಗೆ ಬೇಸರ ಉಂಟುಮಾಡುತ್ತಿತ್ತು. ತಾನು ಸಂಜೆ ಶಾಲೆಯಿಂದ ಜೋಲು ಮುಖ ಹಾಕಿಕೊಂಡು ಬರುವಾಗ ದಾರಿಯಲ್ಲಿ ಎದುರಿಗೆ ರಸಿಕ ಗರತಿಯರು ಗಂಡಂದಿರ ಸೊಂಟ ಬಳಸಿಕೊಂಡು ಬೈಕ್ ಮೇಲೆ ಶೋಕೇಸ್ ಶೃಂಗಾರ ಗೊಂಬೆಗಳಂತೆ ಹಾರಿ ಹೋಗುವುದನ್ನು ನೋಡಿಕೊಂಡು ಬರುವಾಗ ತಾನು ಸಂಪಾದನೆ ಮಾಡುವ ಸ್ವಾವಲಂಬಿ ಹೆಣ್ಣು. ತನ್ನಜಮಾನರು ಸಂಗೀತ ಕಲಾವಿದರು. ಈ ಗಲ್ಲಿಯ ಬಿನ್ನಾಣಗಿತ್ತಿ ಸ್ತ್ರೀಯರಿಗಿಂತ ತಮ್ಮ ದಾಂಪತ್ಯ ಬೇರೆ ಎಂದೆಲ್ಲ ಆತ್ಮವಿಶ್ವಾಸವನ್ನು ತಂದುಕೊಳ್ಳುವಳು. ತನ್ನ ಗಾಂಧರ್ವ ವಿವಾಹ ಗಲ್ಲಿಯ ನಾಲಗೆಯ ಮೇಲೆ ಬೀಳಬಾರದೆಂಬ ಆತಂಕ, ಎಚ್ಚರಿಕೆ ಅವಳನ್ನು ಕಾಡುತ್ತಲೇ ಇತ್ತು. ಹೆಚ್ಚಿನ ಸಮಯ ಮನೆಯಲ್ಲಿ ತಾಯಿ, ಮಗಳು ಇಬ್ಬರೇ ಉಳಿಯುತ್ತಿದ್ದರು. ಮಹಂತಯ್ಯನವರ ವೇಷದಲ್ಲಿ ಗೋಚರಿಸಿದ ಪ್ರೀತಿ ಬಣ್ಣದ ಭ್ರಮೆಯಿರಬಹುದೆ ಎಂದು ಅನುಮಾನವಾಗುತ್ತಿತ್ತು. ರೇಲ್ವೆ ಡಬ್ಬಿ, ಬರಗಾಲದ ಊರು, ಗದಗಿನ ಆಶ್ರಮ, ಸಂಗೀತ ಕಛೇರಿಗಳು ನಡೆಯುವ ಸ್ಥಳಗಳಲ್ಲಿ ಅಲೆದಾಟದ ಕಾರಣದಿಂದಾಗಿ ಮಹಂತಯ್ಯ ಹುಚ್ಚಾ ಅಲೆಮಾರಿಯಂತಾಗಿ ಹೋಗಿದ್ದರು. ಈ ಸಹಜ ಅನಿಕೇತನ ಜಂಗಮ ಮನುಷ್ಯನಿಂದ ಮನೆ ಮಠಗಳ ವಿಪರೀತ ಮೋಹ ಮತ್ತು ವೈರಾಗ್ಯಗಳು ಸಮಾನ ದೂರದಲ್ಲಿದ್ದವು. ಮೂರೂ ಜನ ಬಹಳ ಅಪರೂಪಕ್ಕೆ ಮನೆಯಲ್ಲಿ ಊಟಕ್ಕೆ ಕೂತಿರುವಾಗ, ಯಾವುದೋ ಸಂಗೀತ ಕಾರ್ಯಕ್ರಮದಲ್ಲಿ ನೀಡಿದ ಸಂಭಾವನೆಯ ಖುಷಿಯಲ್ಲಿದ್ದ ಮಹಂತಯ್ಯ, "ಕೊಲ್ಲೂರಿಗೆ ಹೋಗಿ ಮೂಕಾಂಬೆಯ ದರ್ಶನ ಪಡೆದು ಬರೋಣ ನಡೀರಿ" ಎಂದರು. ಮದುವೆಯ ನಂತರ ದಂಪತಿ ಮೊದಲ ಸಲ ಹೊರಗೆ ಹೋಗುತ್ತಿರುವುದು ಜಯಕ್ಕೋರ ಅಮ್ಮನಿಗೆ ಭಾಗ್ಯವೆಂದನಿಸಿ; ನೀವಿಬ್ಬರೂ ಹೋಗಿ ಬನ್ನಿ. ನಾನು ಮನೇಲಿ ಇರ್‍ತೇನೆ" ಎಂದರು.
ದಂಪತಿಗಳು ತೀರ್ಥಯಾತ್ರೆ ಕೈಗೊಳ್ಳುವಷ್ಟು ನಂಬಿಕಸ್ತರಾದ ಭಕ್ತರಾಗಿರಲಿಲ್ಲ. ಶಾಲೆ ಮತ್ತು ಸಂಗೀತವನ್ನು ಅವಿರುವ ಜಾಗದಲ್ಲಿ ಅವುಗಳನ್ನು ಬಿಟ್ಟು ಕ್ಷಣ ಕಾಲ ಅನ್ನದಿಂದ ಬಂದ ದೇಹಗಳಲ್ಲಿ ಸ್ವಚ್ಛಂದವಾಗಿರಲು ಒಂದು ನೆಪ ಬೇಕಾಗಿತ್ತು. ಮಹಂತಯ್ಯ ದೂರದ ಬಸ್ ಪ್ರಯಾಣದಲ್ಲಿ ಅಕ್ಕೋರನ್ನು ತೊಡೆಯ ಮೇಲೆ ಅಕ್ಕರೆಯಿಂದ ಮಲಗಿಸಿಕೊಂಡು ಹೋಗಿದ್ದರು. ಸಾಲಲ್ಲಿ ನಿಂತು ಮೂಕಾಂಬೆಗೆ ಉಡಿ ತುಂಬಿದರು. ಪೂಜೆಯ ನಂತರ ದೇವಳದಲ್ಲಿ ಮೂಕಾಂಬೆಗೆ ಸುತ್ತಿದ್ದ ಸೀರೆಯ ಸವಾಲಿತ್ತು. ಹರಾಜಿನಲ್ಲಿ ಮೂರು ಸಾವಿರ ತೆತ್ತು ಅಮ್ಮನ ಸೀರೆಯನ್ನು ಅಕ್ಕೋರಿಗೆ ಕೊಡಿಸಿದರು. ತನಗೆ ನೀಡಿದ ಮೊದಲ ಚೀಟಿಯಲ್ಲಿ ಬರೆದ ಮಹಂತಯ್ಯನವರ ಬಾಲ್ಯದ ಕಷ್ಟದ ದಿನಗಳನ್ನು ನೆನಪಿಸಿಕೊಂಡು ಅವಳು ಕರಗಿ ಹೋದಳು. ಅದೇನೋ ಲಹರಿ ಬಂದು ಹಾಸಿಗೆಯ ಮೇಲೆ ಅವಳನ್ನು ಕೂರಿಸಿಕೊಂಡು ಛೋಟಾ ಖಯಾಲ್ ಹಾಡಿದರು. "ನನ್ನಲ್ಲಿ ಏನಿದೆ ಎಂದು ನೀವು ಪ್ರೀತಿಸಿದಿರಿ?" ಅವಳಿಗೆ ಉತ್ತರಿಸುವಂತೆ ಅವಳನ್ನು ಬೆತ್ತಲಾಗಿಸಿ ತಾನೂ ಬೆತ್ತಲಾಗಿ ಇಡೀ ರಾತ್ರಿ ಕಳೆದರು. ಮರುದಿನ ಬೆಳಿಗ್ಗೆ ಹಠಮಾಡಿ ಬೆತ್ತಲಲ್ಲೇ ಅವಳಿಗೆ ಸ್ನಾನ ಮಾಡಿಸಿದರು. "ಈಗ ನನಗೊಂದು ರಾಗಕ್ಕೆ ಶರೀರ ಸಿಕ್ತು" ಎಂದು ಅರ್ಧ ತಾಸು ಹಾಡಿದರು. ಗಂಡನ ರಸಿಕತೆಯನ್ನು ನೆನೆನೆನೆದು ಒಳಗೊಳಗೇ ನಗುತ್ತ ಅಕ್ಕೋರು ಮೂಕಾಂಬೆ ಉಟ್ಟ ಸೀರೆಯನ್ನು ಅಮ್ಮನಿಗೆ ತೋರಿಸಿ, ಅದೊಂದು ದೇವಪ್ರಸಾದವೆಂಬಂತೆ ಕಪಾಟಿನಲ್ಲಿರಿಸಿದಳು.
ರಮಣಿಬಾಯಿಯವರ ಮಹಡಿ ಮನೆ ವಿಶ್ರಾಂತ ಯೋಧನ ಶಿಸ್ತುಬದ್ಧವಾದ ಗತ್ತಿನ ಶೈಲಿಯಲ್ಲಿ ಏಕಾಂಗಿಯಾಗಿ ನಿಂತಿತ್ತು. ರಮಣಿಯವರ ತಂದೆ ಅರಣ್ಯಾಧಿಕಾರಿಯಾಗಿದ್ದ ಕಾಲಾವಧಿಯಲ್ಲಿ ಯಥೇಚ್ಛ ಕಟ್ಟಿಗೆ ಬಳಸಿ ಕಟ್ಟಿದ್ದ ಹಂಚಿನ ಮನೆ ಅದು. ಸಾಗವಾನಿ ಬೀಟೆ ಬಳಸಿ ನಿರ್ಮಿಸಲಾದ ದಪ್ಪ ಬಾಗಿಲುಗಳು, ಭಾರವಾದ ಕಿಟಕಿ ಚೌಕಟ್ಟುಗಳು. ಕುಸುರಿ ಕೆತ್ತನೆಯ ದೈತ್ಯ ಕಂಬಗಳು, ಗಜಗಾತ್ರದ ತೊಲೆಗಳು, ದೃಢವಾದ ಅಂಕಣಗಳು, ಸಿಂಹಾಸನದಂಥ ಕುರ್ಚಿಗಳು, ಪಲ್ಲಂಗಗಳು, ದಪ್ಪ ಪಾವಟಿಗೆಗಳ ಮಹಡಿ ಏಣಿಗಳು ಅರಮನೆಯ ವರ್ಚಸ್ಸನ್ನು ನೆನಪಿಸುತ್ತಿದ್ದವು. ಮನೆಯ ಅಸಾಧಾರಣ ವಾಸ್ತು ಶಿಲ್ಪದಿಂದ ಸಂಗೀತಕ್ಕೆ ಆಸ್ಥಾನ ಗಾಂಭೀರ್ಯ ದೊರೆತಿದೆ ಎಂದು ಮಹಂತಯ್ಯ ತಮ್ಮ ಶಿಷ್ಯರಲ್ಲಿ ಹೇಳಿಕೊಂಡಿದ್ದರು. ರಮಣಿ ಬಾಯಿಯವರ ನಿಶ್ಶಬ್ದ ದಿನಚರಿ ನಾದಮಯವಾಯಿತು. ಮಹಂತಯ್ಯನವರ ಸಂಗೀತ ಪಾಠ ನಡೆಯುತ್ತಿರುವಾಗ ರಮಣಿ ಸುಮ್ಮನೆ ಬಂದು ಎಲ್ಲರಂತೆ ನೆಲದ ಮೇಲೆ ಕೂತು ಎದ್ದು ಹೋಗುತ್ತಿದ್ದರು. ಸಂಗೀತದ ಬಗೆಗೆ ರಮಣಿಯವರಿಗಿರುವ ಪ್ರೀತಿ ಮತ್ತು ಅವರ ಅವಿವಾಹಿತ ಒಂಟಿ ಜೀವನ ಮಹಂತಯ್ಯನವರ ಬಿಡುವಿನ ಸಮಯದಲ್ಲಿ ಅಚ್ಚರಿಯಾಗಿ ಕಾಡತೊಡಗಿತು.
ರಮಣಿಯ ತಂದೆ ಚಂದ್ರಹಾಸ ದಾಂಡೇಲಿ ಅರಣ್ಯ ವಿಭಾಗದ ರೇಂಜರ್ ಆಗಿದ್ದರು. ಸಾಮಾಜಿಕ ಅರಣ್ಯಕ್ಕೆ ಸಂಬಂಧಿಸಿದ ನೆಡು ತೋಪಿನ ನರ್ಸರಿ ಸಸಿಗಳ ಕೆಲಸವನ್ನು ನೋಡಿಕೊಳ್ಳುತ್ತಿದ್ದರು. ಸಾಮಾಜಿಕ ಅರಣ್ಯ ಯೋಜನೆಯಲ್ಲಿ ಕಾಡಿನ ಹಳೆ ಮರಗಳನ್ನು ಕಡಿದು ಸಾಗಿಸುವ ಗುತ್ತಿಗೆಯಲ್ಲಿ ಕೇರಳದ ಮಲಬಾರಿಯೊಬ್ಬನಿಗೆ ನೀಡಿದ್ದರು. ಲುಂಗಿ ಮಲಬಾರಿ ಕೋಕಾ, ಲಾರಿ ಮತ್ತು ಲಂಬಾಣಿ ಜನರನ್ನು ಕರೆದುಕೊಂಡು ಬಂದಿದ್ದನು. ಐದಾರು ಲಂಬಾಣಿ ಸಂಸಾರಗಳು ತಟ್ಟಿಹಳ್ಳದ ಸನಿಹ ಟೆಂಟ್ ಕಟ್ಟಿಕೊಂಡು ಉಳಿದರು. ಹಳಿಯಾಳ ಕಡೆಯಿಂದ ನುಗ್ಗುತ್ತಿರುವ ಬಯಲಿಗೆ ಬೇಲಿ ಕಟ್ಟುವಂತೆ ಚಂದ್ರಹಾಸನ ಮುಂದಾಳತ್ವದಲ್ಲಿ ವರ್ಷವಿಡೀ ಗಿಡನೆಡುವ ಹಸಿರು ಚಳವಳಿ ನಡೆಯಿತು. ನೀಳ ಗಂಧದ ಮರದಂತೆ ಬೆಳೆದ ಲಂಬಾಣಿ ಹುಡುಗಿಯೊಂದಿಗೆ ಸಖ್ಯ ಬೆಳೆದು ರಮಣಿ ಹುಟ್ಟಿದ್ದು ಈ ಕ್ರಾಂತಿಕಾರಕ ವನಮಹೋತ್ಸವದಲ್ಲೇ. ತನ್ನ ಜಾತಿ ಬಾಂಧವರ ಸಂಪ್ರದಾಯ, ವೇಷಭೂಷಣ, ಹಾಡುಕುಣಿತ ತೊರೆದು ಬರಲು ವನಮೋಹಿನಿ ಒಪ್ಪಲ |