ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಪ್ರತಿಧ್ವನಿ
ಓದುಗರ ಪತ್ರ
 

ಓದಿನ ರುಚಿ

'ದ ಸಂಡೆ ಇಂಡಿಯನ್' ಓದಿನ ರುಚಿ ಹೆಚ್ಚಿಸುತ್ತಿದೆ. ಮೌಲ್ಯಯುತ ಪತ್ರಿಕೆಯನ್ನು ನೀಡುತ್ತಿರುವ ನಿಮ್ಮ ಬಳಗಕ್ಕೆ ಹಾರ್ದಿಕ ಅಭಿನಂದನೆಗಳು. ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ.

ಪಿ. ಶೇಷಾದ್ರಿ
ಬೆಂಗಳೂರು

ಭಾರತ ದರ್ಶನ ಅನುಭವ

'ಬೋಗಿಯೊಳಗಿನ ಭಾರತ' ಮುಖಪುಟ ಹೊತ್ತು ಬಂದ ಸಂಚಿಕೆ ಓದುತ್ತಿದ್ದಂತೆ ಭಾರತದ ವ್ಯಾಪಕ ರೈಲು ಸಾಮ್ರಾಜ್ಯದ ಒಳ ಹೊಕ್ಕು ಹೊರ ಬಂದಂತಹ ಹಾಗೂ ಕುಳಿತಲ್ಲಿಯೇ ಸಂಪೂರ್ಣ ಭಾರತದ ದರ್ಶನ ಮಾಡಿದಂತಹ ಅನುಭವವಾಯಿತು. ಆದರೆ ನಮ್ಮ ದೇಶದಲ್ಲಿ ಇನ್ನೂ ರೈಲಿನ ಮುಖವನ್ನೇ ನೋಡದಂತಹ ಅದೆಷ್ಟೋ ಹಳ್ಳಿಗಳಿವೆ. ಲಾಲೂ ಪ್ರಸಾದ್ ಯಾದವರು ಪ್ರತಿ ಬಾರಿ ಬಜೆಟ್‌ನಲ್ಲೂ ಕೇವಲ ಬಿಹಾರಕ್ಕೆ ಮಾತ್ರ ರೈಲು ಬಿಡದೆ, ರೈಲನ್ನೇ ನೋಡದ ಹಳ್ಳಿಗಳಿಗೂ ರೈಲು ಒದಗಿಸುವ ಕೃಪೆ ತೋರಬೇಕಾಗಿದೆ. ಮತ್ತಷ್ಟು ಹೊಸ ರೈಲು ಹಾಗೂ ರೈಲು ಮಾರ್ಗಗಳ ಮೂಲಕ ರೈಲು ಸಾಮ್ರಾಜ್ಯವನ್ನು ಇನ್ನೂ ವಿಸ್ತರಿಸಬೇಕು. ಇದೇ ಸಂಚಿಕೆಯಲ್ಲಿ ಮೂಡಿ ಬಂದ 'ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿ ಅಮಾನವೀಯ ಬಜೆಟ್ ಇದು' (ಅರಿಂದಮ್ ಚೌಧುರಿ) ಸಂಪಾದಕೀಯವೂ ಮನ ಸೆಳೆಯಿತು. ಸಾರ್ವಜನಿಕರಿಂದ ಸಂಗ್ರಹವಾದ ತೆರಿಗೆ ಹಣದಿಂದ ಮಂಡಿಸಲಾಗುವ ಬಜೆಟ್ ಯುಪಿಎ ಸರ್ಕಾರದ ಸ್ವಂತ ಆಸ್ತಿಯಂತಾಗಿದೆ. ಮನೆಯಿಂದ ಹಣ ತಂದು ವಿವಿಧ ವಲಯಗಳಿಗೆ ಭಿಕ್ಷೆ ನೀಡಿದಂತೆ ಅಮಾನವೀಯ ರೀತಿಯಲ್ಲಿ ಹಂಚುವ ಚಿದಂಬರಂ ಬಜೆಟ್ ಅನ್ನು ಎಡಪಕ್ಷಗಳು ಬಾಯಿ ಮುಚ್ಚಿಕೊಂಡು ಒಪ್ಪಿಕೊಂಡಿದ್ದು ತೀರಾ ದುರ್ದೈವ. "ರೈತರ 60 ಸಾವಿರ ಕೋಸಾಲ ಮನ್ನಾ" ಎಂಬ ಪಂಗನಾಮವನ್ನು ರೈತರು ಸ್ವತಃ ಅರಿತು ಕೊಳ್ಳಬೇಕಿದೆ. ಕರ್ನಾಟಕದ ಕಾಲು ಭಾಗ ರೈತರು ಕೂಡ ಈ ಸೌಲಭ್ಯವನ್ನು ಪಡೆಯುವುದಿಲ್ಲ ಎಂಬುವುದು ನಗ್ನ ಸತ್ಯ. ದಲ್ಲಾಳಿ ವ್ಯಾಪಾರಸ್ಥರಿಂದ ಬೀಜಕ್ಕಾಗಿ, ಗೊಬ್ಬರಕ್ಕಾಗಿ ಸಾಲ ಮಾಡಿದ ರೈತರು ನೇರವಾಗಿ ತಾವು ಬೆಳೆದ ಬೆಳೆಯನ್ನು ಎಪಿಎಂಸಿಗೆ ಹಾಕಿ ಬರಿಗೈಯಲ್ಲಿ ನಿರಾಸೆಯಿಂದ ಬರುವುದು ಚಿದಂಬರಂ ಅವರಿಗೆ ತಿಳಿದಿಲ್ಲವೇ? ಬ್ಯಾಂಕುಗಳ ಸಾಲವನ್ನು ಮನ್ನಾ ಮಾಡುವ ನಾಟಕ ಸಾಕು. ರೈತರನ್ನು ದಲ್ಲಾಳಿಗಳ ಕಪಿಮುಷ್ಟಿಯಿಂದ ಬಿಡಿಸುವ ಪ್ರಾಮಾಣಿಕ ಪ್ರಯತ್ನ ಮಾಡದ ಚಿದಂಬರಂ ಅವರ ಬಜೆಟ್‌ಗೆ ಧಿಕ್ಕಾರ.

ಎಸ್.ಎಲ್.ವಿ. ಅನಿಲ ಕುಮಾರ
ಮುದಗಲ್

ರೈಲ್ವೆ ಇಲಾಖೆ ಚುರುಕಾಗಬೇಕು

'ರೈಲ್ವೆ ವಿಶೇಷ' ಸಂಚಿಕೆಯಲ್ಲಿ ಮೂಡಿಬಂದ 'ಹಳಿಗಳ ಮೇಲೆ ರಾಜಕಾರಣ' (ಶಶಿ ಸಂಪಳ್ಳಿ) ಲೇಖನ ಚೆನ್ನಾಗಿತ್ತು. ಲೇಖನದಲ್ಲಿ ಪಯಣದ ಅನುಭವದ ಜೊತೆಗೆ ಪ್ರಸ್ತುತ ಸ್ಥಿತಿಗತಿಯನ್ನು ಸಮರ್ಪಕವಾಗಿ ವಿಶ್ಲೇಷಿಸಲಾಗಿದೆ. ರಾಜ್ಯ ರಾಜಕಾರಣಕ್ಕೆ ಮರಳಿದ ಕೃಷ್ಣ, ಅವರ ಮೇಲಿಟ್ಟಿರುವ ಭರವಸೆ, ರೈತರ ಅಸಹಾಯಕ ಬದುಕಿನ ಕುರಿತಾದ ಒಳನೋಟ... ಹೀಗೆ ಎಲ್ಲವನ್ನೂ ಆಯಾ ನಗರ, ಹಳ್ಳಿಗರ ಭಾಷೆಯಲ್ಲಿಯೇ ವ್ಯಕ್ತಪಡಿಸಿದ್ದು ಬರವಣಿಗೆಗೆ ಇನ್ನಷ್ಟು ಪುಷ್ಟಿ ನೀಡಿದಂತಿತ್ತು. ನಿಜವಾಗಿಯೂ ಈ ಲೇಖನ ರಾಜ್ಯದ ಸಮಗ್ರ ರಾಜಕೀಯ ಚಿತ್ರಣವನ್ನು ನೀಡಿದೆ. 'ರೈಲ್ವೆ ವಿಶೇಷ' ಕೇವಲ ರೈಲು ಪ್ರಯಾಣದ ಅನುಭವ ಮಾತ್ರವಲ್ಲ, ಇಡೀ ದೇಶದಾದ್ಯಂತ ಇರುವ ರೈಲು ನಿಲ್ದಾಣಗಳ ಸ್ಥಿತಿ- ಗತಿಗಳನ್ನು ಕೂಡಾ ಅನಾವರಣಗೊಳಿಸಿದೆ. ನಮ್ಮ ರೈಲ್ವೆ ಇಲಾಖೆ ಇನ್ನಷ್ಟು ಚುರುಕಾಬೇಕು. ರೈಲ್ವೆ ಸಚಿವರಾಗಿರುವ ಲಾಲೂ ಪ್ರಸಾದ್ ಯಾದವ್ ಕೇವಲ ಬಿಹಾರವನ್ನು ಮಾತ್ರ ಗಮನದಲ್ಲಿಟ್ಟುಕೊಳ್ಳದೆ ಇಡೀ ದೇಶದುದ್ದಕ್ಕೂ ಗಮನಹರಿಸಬೇಕಿದೆ.

ಎನ್. ಮುತ್ತುರಾಜು
ತುಮಕೂರು

ಪ್ರಗತಿಗೆ ಮಾರಕ

ಟಿಎಸ್‌ಐನ ರೈಲ್ವೆ ವಿಶೇಷ ಸಂಚಿಕೆಯಲ್ಲಿ, ಬೋಗಿಯೊಳಗಿನ ಕಿಟಕಿಯಿಂದ ಸಮಗ್ರ ಭಾರತ ದರ್ಶನ ಮಾಡಿಸಿದ್ದಲ್ಲದೆ, ರೈಲ್ವೆ ಸಚಿವ ಲಾಲೂ ಅವರ ಸಂದರ್ಶನವನ್ನು ಪ್ರಕಟಿಸಿದ್ದು ಸಕಾಲಿಕ. ಇದಕ್ಕಾಗಿ ಟಿಎಎಸ್‌ಐಗೆ ಆಭಾರಿ. ಆದರೆ ಈ ಬಾರಿಯ ರೈಲ್ವೆ ಬಜೆಟ್ ನಿಜವಾಗಿಯೂ ಬೇಸರ ಮೂಡಿಸಿದೆ. ಜನ ಹಿತದ ನೆಪದಲ್ಲಿ ದೇಶದ ರೈಲ್ವೆ ಜಾಲದ ಅಭಿವೃದ್ಧಿಗೆ ಭಾರೀ ಹೊಡೆತ ಬಿದ್ದಿದೆ ಎಂದೇ ಹೇಳಬಹುದು. ರೈಲ್ವೆ ಸಚಿವರ ತರ್ಕಸಮ್ಮತವಲ್ಲದ ರಿಯಾಯಿತಿಗಳು ಮೇಲ್ನೊಟಕ್ಕೆ ಆಕರ್ಷಕವಾಗಿ ಕಂಡರೂ ಪ್ರಗತಿಗೆ ಮಾರಕ. ನಾವು ನಿಜವಾಗಿಯೂ ಪ್ರಗತಿ ಪಥದತ್ತ ಸಾಗಲು ಹಿಂದೇಟು ಹಾಕುತ್ತಿದ್ದೇವೆ ಎಂಬ ಮಾತಿಗೆ ಪ್ರಸ್ತುತ 'ಲಾಲೂ ಬಜೆಟ್' ಸಾಕ್ಷಿ. ಕನ್ನಡಿಗರಿಗೆ ರೈಲ್ವೆ ಇಲಾಖೆಯಲ್ಲಿ ಕೆಲಸವಿಲ್ಲ, ಕರ್ನಾಟಕಕ್ಕೆ ಹೊಸ ರೈಲು ಮಾರ್ಗಗಳಿಲ್ಲ, ಇದ್ದ ಮಾರ್ಗಗಳು ಮುಂದುವರಿಯುವ ಲಕ್ಷಣಗಳಿಲ್ಲ, ಅವರು ಸೃಷ್ಟಿಸಿದ ವಿವಿಧ ಕಲ್ಪನೆಗಳು, 'ಗರೀಬ್‌ರಥ' ಕೇವಲ ಪ್ರಚಾರದ ಮಾದರಿಗಳೇ ಹೊರತು ಫಲ ಕೊಡುತ್ತಿಲ್ಲ. ಮುಖ್ಯವಾಗಿ 'ರೈಲು ಅಂದರೆ ಲಾಲೂ, ಲಾಲೂ ಅಂದರೆ ರೈಲು' ಎನ್ನುವಂತಾಗಿದೆ. ಲಾಲೂ ಅವರು ಬರೀ 'ರೈಲು' ಬಿಡುತ್ತಿದ್ದಾರೆ ಎನ್ನುವುದು ಶ್ರುತ ಪಟ್ಟಿದೆ.

ಬಿ. ರಾಮರಾವ್
ಗುಲ್ಬರ್ಗಾ

ಮನಸ್ಪರ್ಶಿ ಛಾಯಾಚಿತ್ರ

ಕಳೆದ ಸಂಚಿಕೆಯಲ್ಲಿ ಮೂಡಿಬಂದ 'ಬೋಗಿಯೊಳಗಿನ ಭಾರತ' ಭಾರತದ ರೈಲ್ವೆಯ ಸಮಗ್ರ ಚಿತ್ರಣವನ್ನು ನೀಡಿದೆ. ಇಷ್ಟು ದೀರ್ಘ ಮಾಹಿತಿಯನ್ನು ಯಾವ ಪತ್ರಿಕೆಯೂ ನೀಡಿರಲಿಲ್ಲ, ಓದಿ ಬಹಳಷ್ಟು ಆನಂದವಾಯಿತು. ಪತ್ರಿಕೆಯ ಮುದ್ರಣ ಗುಣಮಟ್ಟದಿಂದ ಹಿಡಿದು, ಅದರೊಳಗಿರುವ ವಸ್ತು- ವಿಷಯ ಎಲ್ಲವೂ ಅದ್ಭುತ. ಉತ್ಕೃಷ್ಟ ಗುಣಮಟ್ಟದ ಪತ್ರಿಕೆ ಕೇವಲ ಹತ್ತು ರೂಪಾಯಿಗೆ ದೊರೆಯುತ್ತಿದೆಯಲ್ಲಾ? ಎಂದು ಅಚ್ಚರಿಗೊಂಡೆ. ಉತ್ತಮ ಛಾಯಚಿತ್ರಗಳು ಮನಸ್ಪರ್ಶಿಸುತ್ತವೆ. ಕರ್ನಾಟದ ಎಲ್ಲಾ ಪತ್ರಿಕೆಗಳಿಂದ ಟಿಎಸ್‌ಐ ವಿಭಿನ್ನ. ಇನ್ನಷ್ಟು ಉತ್ತಮ ಲೇಖನಗಳು ಬರಲಿ ಎಂಬುದೇ ನನ್ನ ಆಶಯ.

ಬಿ. ಅರ್ಜುನ್‌ರಾವ್
ಗುಲ್ಬರ್ಗಾ

ಬಹುಮಾನಿತ ಪತ್ರಗಳು

ನಿಂದಿಸುವುದು ಏಕೆ?

ಈ ಬಾರಿ ಒಲಿಂಪಿಕ್ಸ್ ಅರ್ಹತೆ ಪಡೆಯಲು ವಿಫಲವಾದ ಭಾರತೀಯ ಹಾಕಿ ತಂಡ ಪದಕ ಗೆಲ್ಲುವ ಆಸೆಗೆ ಎಳ್ಳು ನೀರು ಬಿಟ್ಟಿದೆ. ಭಾರತದ ಹಾಕಿ ತಂಡದ ಈ ಹೀನಾಯ ಸೋಲಿಗೆ ಕಾರಣವೇನು? ರಾಷ್ಟ್ರೀಯ ಕ್ರೀಡೆಯನ್ನು ಈ ದುಸ್ಥಿತಿಗೆ ತಂದವರಾರು? ತಪ್ಪು ಯಾರದು? ಎಂಬ ದೊಡ್ಡ ಚರ್ಚೆಯೇ ಈಗ ಆರಂಭವಾಗಿದೆ. ಆಟಗಾರರ ತಪ್ಪಿನಿಂದ ತಂಡ ಸೋಲು ಅನುಭವಿಸಿದೆಯೇ? ತಂಡವನ್ನು ಮುನ್ನಡೆಸಬೇಕಾಗಿದ್ದ ತರಬೇತುದಾರರು ತಪ್ಪೆಸಗಿದ್ದಾರೆಯೇ? ಅಥವಾ ಭಾರತೀಯ ಹಾಕಿ ಒಕ್ಕೂಟ ತಂಡದ ನಿರ್ವಹಣೆಯಲ್ಲಿ ಎಡವಿದೆಯೇ? ಎಂಬ ಪ್ರಶ್ನೆಗಳು ಚರ್ಚೆಗೆ ಗ್ರಾಸವಾಗಿದೆ. ಒಲಿಂಪಿಕ್ಸ್ ಅರ್ಹತಾ ಸುತ್ತಿನಲ್ಲಿ ಭಾರತದ ಹಾಕಿ ತಂಡ ನೀಡಿದ ಕಳಪೆ ಪ್ರದರ್ಶನಗಳನ್ನು ಗಮನಿಸಿದರೆ ನಮ್ಮ ತಂಡದ ಸಾಮರ್ಥ್ಯ ಕುಂದಿದೆ ಎಂದೇ ಹೇಳಬಹುದು. ಹಿಂದಿನ ದಾಖಲೆಗಳನ್ನು ಗಮನಿಸಿದರೆ ಎಲ್ಲಾ ಟೂರ್ನಮೆಂಟ್‌ಗಳಲ್ಲಿ ಹೆಚ್ಚಿನ ಎಲ್ಲಾ ವಿರೋಧಿ ಪಡೆಗಳನ್ನು ಸೋಲಿನ ಸಂಕೋಲೆಯಲ್ಲಿ ಸಿಲುಕಿಸಿ ವಿಜಯದ ನಗೆ ಬೀರುತ್ತಿದ್ದ ನಮ್ಮ ಹಾಕಿ ತಂಡ ಈಗ ಅರ್ಹತಾ ಸುತ್ತಿನಲ್ಲೇ ಸೋತು ಸುಣ್ಣವಾಗಿರುವುದು ನಿಜವಾಗಿಯೂ ದುರಂತ. ಇದೊಂದರಿಂದಲೇ ಭಾರತೀಯ ಹಾಕಿ ಫೆಡರೇಷನ್‌ನ ಕಾರ್ಯವೈಖರಿ ಎಷ್ಟು ಚೆನ್ನಾಗಿದೆ ಎಂಬುದನ್ನು ನಾವು ಅರ್ಥೈಸಿಕೊಳ್ಳಬಹುದು. ಇಷ್ಟಕ್ಕೂ ಕೋಟಿಗಟ್ಟಲೆ ಜನರ ಪದಕ ಗೆಲ್ಲುವ ಕನಸು ನನಸಾಗಿಸಲು ಸಿದ್ಧರಾಗಿರುವ ನಮ್ಮ ಹಾಕಿ ಆಟಗಾರರನ್ನು ನಿಂದಿಸುವುದಾದರೂ ಏಕೆ? (ನನ್ನ ಪ್ರಕಾರ ಅತ್ಯಂತ ನಿರಾಶೆಗೊಂಡವರೆಂದರೆ ಈ ಆಟಗಾರರೇ) ಇನ್ನೊಂದು ವಿಧದಲ್ಲಿ ಗಮನಿಸಿದರೆ ಕ್ರಿಕೆಟ್‌ನಿಂದಾಗಿ ಹಾಕಿ ಮೂಲೆಗುಂಪಾಗಿದೆ ಎಂಬ ಮಾತು ಒಪ್ಪತಕ್ಕದ್ದೆ. ಇದರ ಜೊತೆಗೆ ಧನರಾಜ್ ಪಿಳ್ಳೈ ವಜಾ ಅಥವಾ ರಾಷ್ಟ್ರೀಯ ಕ್ರೀಡೆಯ ಕುರಿತು ಮಾಧ್ಯಮಗಳ ನಿರ್ಲಕ್ಷ್ಯ. ಇದೆಲ್ಲಾ ಸಾಲದು ಎಂಬಂತೆ ಕ್ರಿಕೆಟ್‌ಗೆ ನೀಡುವಷ್ಟೇ ಮಹತ್ವವನ್ನು ಹಾಕಿಗೆ ನೀಡದಿರುವ ಕಾರ್ಪೊರೇಟ್ ಲೋಕ ಈ ಬಗ್ಗೆ ಹೆಚ್ಚಿನ ಪ್ರಚಾರ ನೀಡಲು ವಿಫಲವಾಗಿರುವುದು... ಹೀಗೆ ಎಲ್ಲವೂ ಈ ಸೋಲಿಗೆ ಕಾರಣವಾಗಿದೆ. ಅದೇನೆ ಇರಲಿ, ಈ ಮಾತುಗಳು ಸಂಬಂಧಪಟ್ಟವರಿಗೆ ಕೇಳಿಸದಿದ್ದರೂ, ತಕ್ಷಣವೇ ಭಾರತೀಯ ಹಾಕಿ ಪ್ರಗತಿ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿದೆ.

ಮುಖೇಶ್ ಸಿಂಘಾಲ್
ಇ-ಮೇಲ್ ಮೂಲಕ

ಈಗಲಾದರೂ ಎಚ್ಚೆತ್ತುಕೊಳ್ಳಿ!

ನಿಧಾನವಾಗಿ ದೇಹದ ಶಕ್ತಿ ಕ್ಷೀಣಿಸುವಂತೆ ಮಾಡಿ, ದೇಹದ ರೋಗನಿರೋಧಕ ವ್ಯವಸ್ಥೆಯನ್ನೇ ಹದಗೆಡಿಸಿ, ಆ ಮೂಲಕ ದೇಹವನ್ನು ವಿವಿಧ ರೋಗಾಣುಗಳಿಗೆ ಸುಲಭವಾಗಿ ತುತ್ತಾಗುವಂತೆ ಮಾಡಿ, ಅಂತಿಮವಾಗಿ ಪ್ರಾಣಕ್ಕೆ ಎರವಾಗುವಂತಹ ರೋಗಕ್ಕೆ 'ಏಡ್ಸ್' ಎಂದು ಹೆಸರಿಸಲಾಗಿದೆ. ವೈದ್ಯರು 1981ರಲ್ಲಿ ಮೊದಲ ಬಾರಿಗೆ ಏಡ್ಸ್ ಅನ್ನು ಪತ್ತೆ ಮಾಡಿದ್ದರು. ಇದಾದ ಬಳಿಕ ಒಂದು ತಮಾಷೆಯ ಮಾತು ಹುಟ್ಟಿಕೊಂಡಿತ್ತು: ಏಡ್ಸ್ ಮತ್ತು ಹರ್ಪ್ಸ್ (ಸರ್ಪಸುತ್ತು) ನಡುವಿನ ವ್ಯತ್ಯಾಸವೇನು? ಹರ್ಪ್ಸ್ ಎಂದರೆ ಒಂದು ಪ್ರೇಮ-ಕತೆ. ಏಡ್ಸ್ ಎಂದರೆ ಕಾಲ್ಪನಿಕ ಕಥ! ಹೌದು, ಪ್ರತಿಯೊಬ್ಬರು ಇದನ್ನು ನಂಬಿದ್ದರು. ಆದರೆ ಏಡ್ಸ್ ಗುಣಪಡಿಸಲಾಗದಂಥ ಭೀಕರ ರೋಗವಾಯಿತು. ಹಾಗಾಗಿ ನಮ್ಮ ದೇಶದ ಸರ್ಕಾರ ಹೊರತು ಪಡಿಸಿ ಬೇರೆಲ್ಲಾ ದೇಶದ ಸರ್ಕಾರಗಳು ಕೂಡಲೇ ಎಚ್ಚೆತ್ತು ಏಡ್ಸ್ ಹರಡುವಿಕೆಯನ್ನು ತಡೆಗಟ್ಟಲು ವ್ಯಾಪಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡವು. ಅರಿಂದಮ್ ಚೌಧುರಿ ಅವರು 'ಪ್ರಪಾತಕ್ಕೆ ಬಿದ್ದವರ ಆಶಾಕಿರಣ ಎಚ್‌ಐವಿ ಮಸೂದೆ ಅಂಗೀಕಾರ' ಸಂಪಾದಕೀಯಲ್ಲಿ ಈ ಬಗ್ಗೆ ಅರ್ಥವತ್ತಾಗಿ ವಿವರಿಸಿದ್ದಾರೆ. ಈಗಲಾದರೂ ನಮ್ಮ ಘನ ಸರ್ಕಾರ ನಿದ್ದೆಯಿಂದ ಎಚ್ಚೆತ್ತುಕೊಳ್ಳಬೇಕಿದೆ. ಇಲ್ಲದಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ.

ಅಬ್ರಾರ್ ಎಚ್. ರಶೀದ್
ಪುಣೆ

 

ಹಸಿದವನ ಹೊಟ್ಟೆಗೆ ಅನ್ನ

ಕಳೆದ ಸಂಚಿಕೆಯಲ್ಲಿ ತೆರೆಬೀಳುವ ಮುನ್ನ ಅಂಕಣದಲ್ಲಿ ಮೂಡಿಬಂದ "ಭಯೋತ್ಪಾದನೆ ಇಸ್ಲಾಂ ವಿರೋಧಿ" (ಫಿರೋಜ್ ಬಖ್ತ್ ಅಹ್ಮದ್) ಲೇಖನದಲ್ಲಿ ಮುಸ್ಲಿಂ ಸಂಘಟನೆ ಮತ್ತು ಮುಖಂಡರ ಕೆಲವೊಂದು ಕೊರತೆಗಳನ್ನು ಎತ್ತಿಹಿಡಿಯುತ್ತಾ, ಭಯೋತ್ಪಾದಕರೆಲ್ಲ ಮುಸ್ಲಿಮರು ಎಂಬ ತಪ್ಪು ಕಲ್ಪನೆ ವ್ಯಾಪಕವಾಗಿ ಹರಡದೆ ಇರಲು ಮುಖಂಡರು ಮೊದಲೇ ಪ್ರಯತ್ನಿಸಬೇಕಿತ್ತೆಂದು ವಾದಿಸಲಾಗಿತ್ತು. ಭಯೋತ್ಪಾದಕರೆಲ್ಲರೂ ಮುಸ್ಲಿಮರೆನ್ನುವುದು ಸುಳ್ಳು. ಆದರೆ ಇದನ್ನು ಕಪೋಲ ಕಲ್ಪಿತವಾಗಿ ಪ್ರಚುರಪಡಿಸಲಾಗುತ್ತದೆ. ಮುಸ್ಲಿಂ ಸಮಾಜದಲ್ಲಿ ಪ್ರಬುದ್ಧ ಪ್ರತಿಭೆಗಳಿದ್ದರೂ ಶಿಕ್ಷಣದ ಕೊರತೆಯಿಂದ ಎಲೆಮರೆಯಲ್ಲಿ ಉಳಿಯಬೇಕಾಗಿದೆ. ಶಿಕ್ಷಣ ಪಡೆಯಬೇಕೆಂದು ಹೇಳುತ್ತಾರೆ. ಆದರೆ ಇದಕ್ಕೆ ಸಹಕರಿಸುವವರು ತೀರಾ ಕಡಿಮೆ. ಇಸ್ಲಾಂ ಧರ್ಮ ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ಆದರೂ ಕೆಲವು ಮುಸ್ಲಿಂ ನಾಯಕರು 'ಭಯೋತ್ಪಾದನೆಯನ್ನು ವಿರೋಧಿಸುವುದಿಲ್ಲ' ಎಂಬ ಸುಳ್ಳು ಹೇಳಿಕೆಯನ್ನು ನೀಡುವುದು ತೀರಾ ಅಪಾಯಕಾರಿ ಮತ್ತು ಖಂಡನೀಯ. ಆದರೂ ದೇಶದ ಎಲ್ಲಾ ರಾಜ್ಯಗಳಲ್ಲಿ ಮುಸ್ಲಿಂ ನಾಯಕರೆಲ್ಲಾ ರಾಜಕೀಯ ದಾಳಗಳಲ್ಲ. ಹಾಗೆಯೇ ಕೇಂದ್ರ ಸರ್ಕಾರ ಹಜ್ ಯಾತ್ರೆಗೆ ನೀಡುವ ಹಣವನ್ನು ಮುಸ್ಲಿಮರ ಶಿಕ್ಷಣಕ್ಕೂ ಪ್ರಾಮಾಣಿಕವಾಗಿ ಜಾರಿಗೊಳಿಸಿದರೆ ಹಸಿದವನ ಹೊಟ್ಟೆಗೆ ಅನ್ನ ನೀಡಿದಂತಾದೀತು.

ಶಂಶೀರ್ ಬುಡೋಳಿ
ಬಂಟ್ವಾಳ

ಎಲ್ಲವೂ ದೇಶಕ್ಕಾಗಿ!

'ಭಾರತಕ್ಕೆ ಮರಳಿದ ಕಾಶ್ಮೀರ' (ಶಾಹೀದ್ ಹುಸೇನ್) ಲೇಖನ ಓದಿದೆ. ಇಂದಿನ ನಮ್ಮ ಸರ್ಕಾರಗಳು ಚುನಾಚಣಾ ತಂತ್ರವನ್ನು ರೂಪಿಸುತ್ತವೆ. ಚುನಾವಣೆಯಲ್ಲಿ ಗೆದ್ದ ಮೇಲೆ ನಮ್ಮನ್ನು ಗೆಲ್ಲಿಸಿದ್ದು ಯಾರು? ನಾವು ಮಾಡಬೇಕಾದ ಕರ್ತವ್ಯವೇನೆಂಬುದನ್ನು ಮರೆತ ಜನಪ್ರತಿನಿಧಿಗಳು ಸ್ವಾರ್ಥ ಸಾಧನೆಯಲ್ಲಿ ತೊಡಗುತ್ತಾರೆ. ಕಾಲದ ಪರಿವೆ ಇಲ್ಲದೆ ಕುಟುಂಬವನ್ನೇ ಮರೆತು ದೇಶದ ಸೇವೆಯಲ್ಲಿ ನಿರತರಾಗಿರುವ ನಮ್ಮ ಸೈನಿಕರ ಬಗ್ಗೆ ಸರ್ಕಾರಗಳು ತೋರುವ ಕಾಳಜಿ ಅಷ್ಟಕ್ಕಷ್ಟೇ. ನಮ್ಮ ಸರ್ಕಾರ ಪ್ರಯತ್ನಿಸುತ್ತಿದ್ದರೆ ಕಾಶ್ಮೀರ್ ಸಿಂಗ್ 35 ವರ್ಷಗಳನ್ನು ಪಾಕಿಸ್ತಾನದ ಜೈಲಿನಲ್ಲಿ ಕಳೆಯುವ ದುಸ್ಥಿತಿ ಎದುರಾಗುತ್ತಿರಲಿಲ್ಲ. ಸಿಂಗ್ ಅವರ ಯೌವನವೆಲ್ಲ ಜೈಲಿನಲ್ಲಿ ಕಳೆದು ಹೋಯಿತು. 35 ವರ್ಷ ಪರದೇಶದ ಜೈಲಿನಲ್ಲಿ ಕಳೆದಿದ್ದು ಕೇವಲ ದೇಶಕ್ಕಾಗಿ! ಇಂಥ ಇನ್ನೆಷ್ಟೋ ಮಂದಿ ಸೈನಿಕರು ಪರದೇಶದ ಜೈಲಿನಲ್ಲಿರಬಹುದು. ನಮ್ಮ ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕಿದೆ.

ಜಯಕುಮಾರ್
ಮಂಗಳೂರು

ಚಿಂತನೆಯನ್ನು ಒರೆಗೆ ಹಚ್ಚಿದೆ

ಟಿಎಎಸ್‌ಐ ತುಂಬಾ ಚೆನ್ನಾಗಿ ಮೂಡಿಬರುತ್ತಿದೆ. ಪ್ರಸ್ತುತ ವಿದ್ಯಮಾನಗಳ ಕುರಿತಾದ ಲೇಖನಗಳು ಮತ್ತು ಚಿಂತನೆಯನ್ನು ಒರೆಗೆ ಹಚ್ಚುವ ಅಂಕಣಗಳು ಪ್ರತಿ ಭಾನುವಾರಕ್ಕಾಗಿ ಕುತೂಹಲದಿಂದ ಕಾಯುವಂತೆ ಮಾಡುತ್ತವೆ.

ರಮೇಶ್ ಬಾಬು ಎಸ್.
ಬಳ್ಳಾರಿ

ನೆನಪು ಮರುಕಳಿಸಿತು

ನಾನು ಟಿಎಸ್‌ಐಯ ನಿರಂತರ ಓದುಗ. ಕಳೆದ ವಾರ ಚೆನ್ನೈಯಿಂದ ಈರೋಡ್‌ಗೆ ಇಂಟರ್‌ಸಿಎಕ್ಸ್‌ಪ್ರೆಸ್‌ನಲ್ಲಿ ಪ್ರಯಾಣಿಸುತ್ತಿದ್ದಾಗ ರೈಲ್ವೆ ವಿಶೇಷ ಸಂಚಿಕೆ ಸಂಪೂರ್ಣವಾಗಿ ಓದಿದ್ದೆ. ನಾನು ಇಡೀ ದೇಶವನ್ನು ರೈಲಿನಲ್ಲಿ ಪ್ರಯಾಣಿಸುವವನು. ಕೊಂಕಣ ರೈಲ್ವೆ ಕುರಿತಾಗಿ ಮೂಡಿಬಂದ ಲೇಖನ ಮತ್ತೆ ಹಳೆಯ ನೆನಪುಗಳನ್ನು ಕೆದಕಿತು.

99650*****

ಮುಂದುವರಿದ ದಂಧೆ

'ಪ್ರಪಾತಕ್ಕೆ ಬಿದ್ದವರ ಆಶಾಕಿರಣ ಎಚ್‌ಐವಿ ಮಸೂದೆ ಅಂಗೀಕಾರ' ಸಂಪಾದಕೀಯದಿಂದ ಏಡ್ಸ್ ರೋಗಿಗಳ ಕಂಗಳಲ್ಲಿ ಒಂದಿಷ್ಟು ಬೆಳಕು ಮೂಡುವಂತಾಗಿದೆ. ಗುಜರಾತ್ ರಾಜ್ಯದಲ್ಲಿ ಏಡ್ಸ್ ನಿಧಿ ಸಂಗ್ರಹದಲ್ಲಿ ಮೋಸ ಆಗಿರುವಂತೆಯೇ ಇತರ ರಾಜ್ಯಗಳಲ್ಲಿಯೂ ಈ ಭ್ರಷ್ಟಾಚಾರ ಮುಂದುವರೆದಿದೆ.

94267******

ಕೈಗನ್ನಡಿ

'ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿ ಅಮಾನವೀಯ ಬಜೆಟ್ ಇದು' ಸಂಪಾದಕೀಯ ನೈಜತೆಗೆ ಹಿಡಿದ ಕೈಗನ್ನಡಿ. 2008-09ನೇ ಸಾಲಿನ ಬಜೆಟ್ ಅನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸಲಾಗಿದೆ.

93886*****

ಬ್ರಿಟಿಷರೇ ಲೇಸಲ್ಲವೇ?

'ಹೌದು, ಯಾರು ಈ ಮನ್‌ಮೋಹನ್ ಸಿಂಗ್?' (ರಾಹುಲ್ ಪಂಡಿತ) ವರದಿ ಬೆಚ್ಚಿ ಬೀಳಿಸಿತು. ದೇಶದ ಒಂದು ವರ್ಗವೇ ಊನವಾಗಿದೆಯಲ್ಲ ಎಂದು ವ್ಯಥೆಯಾಯಿತು. ಲೇಖನ ಓದುತ್ತಿದ್ದಂತೆ ಯಾರಿಗೆ ಬಂತು, ಎಲ್ಲಿಗೆ ಬಂತು, ನಲವತ್ತೇಳರ ಸ್ವಾತಂತ್ರ್ಯ? ಪ್ರಶ್ನೆ ಸಹಜವಾಗಿ ಮನದಲ್ಲಿ ಮೂಡುತ್ತಿತ್ತು. ಆ ಅಜ್ಜಿಯ ಚಿತ್ರ ಭಾರತದ ಬಡವರ ದರ್ಶನ ಮಾಡಿಸಿದ್ದಲ್ಲದೆ, ವಿಶ್ವದ ದೊಡ್ಡ ಪ್ರಜಾಪ್ರಭುತ್ವ ವ್ಯವಸ್ಥೆಯ ಹುಳುಕನ್ನು ಅಣಕಿಸುವಂತಿತ್ತು. ಭರವಸೆಯ 'ರಾಷ್ಟ್ರೀಯ ಗಾಮೀಣ ಉದ್ಯೋಗ ಖಾತ್ರಿ ಯೋಜನೆ' ಹೇಗೆ ಭ್ರಷ್ಟರ ಕೈಯಲ್ಲಿ ನಲುಗುತ್ತಿದೆ ಎಂಬುದನ್ನು ಎಳೆಎಳೆಯಾಗಿ ಬಿಡಿಸಿತು. ನಮ್ಮ ಜನರೇ ಅನ್ನ, ನೀರು, ಆರೋಗ್ಯ, ಬೆಳಕು, ಶಿಕ್ಷಣ ಇಲ್ಲದೆ ಪ್ರಾಣಿಗಳಿಗಿಂತ ಕಡೆಯಾಗಿ ಬದುಕುತ್ತಿರುವುದನ್ನು ನೋಡಿದರೆ, ನಮ್ಮವರಿಗಿಂತ ಆ ಬ್ರಿಟಿಷರೇ ಲೇಸಲ್ಲವೇ? ಆ ಅಜ್ಜಿಯ ನೆನಪು, ಆಕೆಯ ಸೊರಗಿದ ಅರೆನಗ್ನ ದೇಹ, ಭಾರತ ಮಾತೆಯ ಇಂದಿನ ದುಸ್ಥಿತಿ ಸಾರಿ ಸಾರಿ ಹೇಳುತ್ತಿತ್ತು. ವೇತನವಿಲ್ಲದೆ ಸತ್ತ ಮುಂಡಾ, ದೇಶದಲ್ಲಿ ದಿನನಿತ್ಯ ಸಾಯುತ್ತಿರುವ ಅದೆಷ್ಟೋ ಮಹಿಳೆಯರು, ಶಿಕ್ಷಣದಿಂದ ವಂಚಿತರಾದ ಮಕ್ಕಳು, ಅಭದ್ರತೆ... ಎಲ್ಲವೂ ದುರಂತಗಳೇ! ತನಗೆ ಆಸರೆಯಾಗದವರ ಹೆಸರು- ಪರಿಚಯ ತಿಳಿದುಕೊಂಡು ಇವರಿಗೆ ದೊರೆಯುವುದಾದರೂ ಏನು? ಇನ್ನಾದರು ಕಣ್ತೆರೆದು ಕಾರ್ಯಪ್ರವೃತ್ತರಾಗದಿದ್ದರೆ, ಖಂಡಿತಾ ಕವಣೆಯ ಸ್ಥಳದಲ್ಲಿರುವ 'ಎ.ಕೆ.47'ಗಳು ಆ ಪ್ರಶ್ನೆಯ ಕಡೆ ಮತ್ತು ನಮ್ಮೆಲ್ಲರ ಕಡೆ ತಿರುಗಿದರೂ ಆಶ್ಚರ್ಯವಿಲ್ಲ!

ಶಿವಾನಂದ ಔರಾದೆ
ಬೀದರ್

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .