|
| ಅರ್ಚನಾ ದಾಲ್ಮಿಯಾ
|
ಕಾರ್ಯದರ್ಶಿ
ಅಖಿಲ ಭಾರತ ಕಾಂಗ್ರೆಸ್ ಸಮಿತಿ
|
ಸದ್ಗುಣಗಳಾದ ಶ್ರೇಷ್ಠತೆ ಹಾಗೂ ಗೌರವವನ್ನು ಸಂಪಾದಿಸಬೇಕು ಎಂಬ ನಾಣ್ಣುಡಿಯೊಂದಿದೆ. ಈ ಮಾತಿಗೆ ಪೂರಕ ಎಂಬಂತೆ, ಭಾರತದ ಇತಿಹಾಸದಲ್ಲಿ ತಮ್ಮ ಕಠಿಣ ಪರಿಶ್ರಮ ಹಾಗೂ ಬದ್ಧತೆಯಿಂದಾಗಿ ಔನ್ನತ್ಯಕ್ಕೆ ಏರಿದ ಹಲವಾರು ವಿಶಿಷ್ಟ ಮಹಿಳೆಯರ ಉದಾಹರಣೆ ನಮಗೆ ದೊರಕುತ್ತದೆ. ಅದು ಝಾನ್ಸಿಯ ರಾಣಿ ಲಕ್ಷ್ಮೀಬಾಯಿ ಮತ್ತು ಚಾಂದ್ ಬೀಬಿ ಅವರ ಸಾಹಸಗಾಥೆಗಳಿರಬಹುದು ಅಥವಾ ಅಹಲ್ಯಾ
ಬಾಯಿ ಹೋಳ್ಕರ್ ಹಾಗೂ ಮದರ್ ಥೆರೇಸಾ ಅವರ ನಿಸ್ವಾರ್ಥ ಸೇವೆ ಇರಬಹುದು; ಇವೆಲ್ಲವೂ ಸಂಕಷ್ಟಗಳ ವಿರುದ್ಧ ದೃಢ ಮನಸ್ಸಿನಿಂದ ಹೋರಾಡಿ ಗೆದ್ದ ಆದರ್ಶ ಮಹಿಳೆಯರ ಕಥೆ ಹೇಳುತ್ತವೆ.
ಸೋನಿಯಾ ಗಾಂಧಿ ಅವರು ಕೂಡಾ ಈ ಉದಾತ್ತ ನಾಯಕಿಯರ ವರ್ಗದಿಂದ ಹೊರತಲ್ಲ. ದಿವಂಗತ ರಾಜೀವ್ ಗಾಂಧಿ ಅವರು ಸೋನಿಯಾ ಮಾಯಿನೋ ಅವರನ್ನು ತಮ್ಮ ಬಾಳ ಸಂಗಾತಿಯನ್ನಾಗಿ ಆಯ್ದುಕೊಂಡಾಗ ಜನರು ಈ ಆಯ್ಕೆಯ ಬಗ್ಗೆ ಕೊಂಚ ಅನುಮಾನ ವ್ಯಕ್ತಪಡಿಸಿದ್ದರು. ಆದರೆ ಆಗ ರಾಜೀವ್ ಗಾಂಧಿ ರಾಜಕೀಯ ರಂಗದಿಂದ ಬಹುದೂರ ಉಳಿದಿದ್ದ ಕಾರಣ ಈ ಬಾಂಧವ್ಯದ ಕುರಿತು ಯಾರೂ ತಲೆಕೆಡಿಸಿಕೊಂಡಿರಲಿಲ್ಲ. ಪ್ರಾಯಶಃ ಆ ಸಮಯದಲ್ಲಿ ಸ್ವತಃ ಸೋನಿಯಾ ಗಾಂಧಿ ಅವರು ಕೂಡಾ ಮುಂದೊಂದು ದಿನ ತಾನು ಜಗತ್ತಿನಾದ್ಯಂತ ಇರುವ ಕೋಟ್ಯಂತರ ಮಹಿಳೆಯರಿಗೆ ಆದರ್ಶಪ್ರಾಯಳಾಗುತ್ತೇನೆ ಎಂಬುದನ್ನು ಕಲ್ಪಿಸಿಕೊಂಡಿರಲಿಕ್ಕಿಲ್ಲ.
ಆದರೆ ಸಂಜಯ್ ಗಾಂಧಿ ಹಾಗೂ ಇಂದಿರಾ ಗಾಂಧಿ ಅವರ ಅಕಾಲ ಮರಣ ರಾಜೀವ್ ಗಾಂಧಿ ಅವರನ್ನು ರಾಜಕೀಯ ರಂಗಕ್ಕೆ ಧುಮುಕುವಂತೆ ಮಾಡಿತು. ಯಾವಾಗ ರಾಜೀವ್ ಗಾಂಧಿ ಪ್ರಧಾನ ಮಂತ್ರಿ ಆಗಬೇಕಾಯಿತೋ ಆಗ ಉಳಿದೆಲ್ಲಾ ವಿಷಯಗಳಲ್ಲಿ ಅವರನ್ನು ಇಕ್ಕಟ್ಟಿಗೆ ಸಿಲುಕಿಸುವಲ್ಲಿ ವಿಫಲವಾದ ವಿರೋಧ ಪಕ್ಷಗಳು ಸುಲಭವಾಗಿ ಸೋನಿಯಾ ಗಾಂಧಿ ಅವರನ್ನು ತಮ್ಮ ರಾಜಕೀಯ ಬಲಿಪಶುವನ್ನಾಗಿ ಮಾಡಿಕೊಂಡವು. ಭಯೋತ್ಪಾದಕರ ದಾಳಿಯಲ್ಲಿ ರಾಜೀವ್ ಗಾಂಧಿ ಅವರು ಜೀವತೆತ್ತ ಸಂದರ್ಭದಲ್ಲಂತೂ, ಸೋನಿಯಾ ಅವರ ಕುರಿತಾದ ಸಂದೇಹ ಹಾಗೂ ಅವರ ವೈಯುಕ್ತಿಕ ಬದುಕಿನ ವಿರುದ್ಧದ ಅಪಪ್ರಚಾರ ಮುಗಿಲು ಮುಟ್ಟಿತ್ತು. ಆದರೆ ಅತ್ಯಲ್ಪ ಸಮಯದಲ್ಲೇ ತನ್ನ ಕುಟುಂಬದ ಇಬ್ಬರು ಆಪ್ತರನ್ನು ಕಳೆದುಕೊಂಡಂತಹ ಆ ಸಮಯದಲ್ಲೂ ಸೋನಿಯಾ ತಮ್ಮ ಸಮಚಿತ್ತತೆ ಹಾಗೂ ಆತ್ಮಾಭಿಮಾನವನ್ನು ಕಾಪಾಡಿಕೊಂಡು ಬಂದರು. ಒಬ್ಬ ಜವಾಬ್ದಾರಿಯುತ ತಾಯಿ ಹಾಗೂ ಈ ದೇಶದ ಜವಾಬ್ದಾರಿಯುತ ಸೊಸೆಯಾಗಿ ತಾನು ಪ್ರಮುಖ ಪಾತ್ರ ನಿರ್ವಹಿಸಬೇಕಾಗಿದೆ ಮತ್ತು ಮಹತ್ವದ ಹೊಣೆ ಹೊರಬೇಕಿದೆ ಎಂಬುದನ್ನು ಆಕೆ ಅರಿತಿದ್ದರು.
ಪರಿಸ್ಥಿತಿ ಹೀಗಿರುವಾಗ, ಹಿತೈಷಿಗಳು ಹಾಗೂ ಬೆಂಬಲಿಗರು ಸೋನಿಯಾ ಅವರಿಗೆ ಅತ್ಯುನ್ನತ ಹಾಗೂ ಅಧಿಕಾರಯುತ ಸ್ಥಾನ ಅಲಂಕರಿಸುವಂತೆ ಒತ್ತಾಯಿಸುತ್ತಿದ್ದಾಗ, ತಾನು ಹಿಂದೆ ನಿಂತು ಉಳಿದವರನ್ನು ಮುನ್ನಡೆಸುವುದಷ್ಟೇ ತನ್ನ ಜವಾಬ್ದಾರಿ ಎಂಬುದನ್ನು ಆಕೆ ಅರಿತಿದ್ದರು. ಅಂದಿನ ದಿನಗಳು ಕೇವಲ ಸೋನಿಯಾ ಗಾಂಧಿ ಅವರ ಕುಟುಂಬಕ್ಕೆ ಮಾತ್ರವಲ್ಲದೆ, ಹಲವಾರು ಸರ್ಕಾರಗಳು ಉರುಳಿಬಿದ್ದು ರಾಜಕೀಯ ಅರಾಜಕತೆಯತ್ತ ಮುನ್ನಡೆಯುತ್ತಿದ್ದ ಈ ದೇಶಕ್ಕೂ ಅತ್ಯಂತ ವಿಷಮ ಕಾಲವಾಗಿತ್ತು. ಜೊತೆಗೆ ಭಾರತದ ಅತ್ಯಂತ ಹಳೆಯ ಪಕ್ಷ ಅವನತಿಯತ್ತ ಸಾಗುತ್ತಿದ್ದುದ್ದನ್ನೂ ಸೋನಿಯಾ ಕಂಡುಕೊಂಡಿದ್ದರು. ಈ ಎಲ್ಲಾ ಕಾರಣಗಳಿಂದಾಗಿ ಹಾಗೂ ತಮ್ಮ ಕುಟುಂಬದ ಸದಸ್ಯರು ಬೆವರು ಹಾಗೂ 'ರಕ್ತ ಸುರಿಸಿ' ಬೆಳೆಸಿದ್ದ ಪಕ್ಷವನ್ನು ಉಳಿಸುವುದಕ್ಕಾಗಿ, ಏಳು ವರ್ಷಗಳ ಕಾಲ ರಾಜಕೀಯ ಹಾಗೂ ಅಧಿಕಾರದಿಂದ ದೂರ ಉಳಿದಿದ್ದ ಸೋನಿಯಾ ರಾಜಕೀಯ ರಂಗ ಪ್ರವೇಶಿಸಿದರು.
ಸಕ್ರಿಯ ರಾಜಕಾರಣಕ್ಕೆ ಸೋನಿಯಾ ಅವರ ಪ್ರವೇಶ ಹಲವಾರು ಸಂದೇಹಗಳಿಗೆ ಕಾರಣವಾಯಿತು. ಆ ಸಂದರ್ಭದಲ್ಲಿ ವಿರೋಧ ಪಕ್ಷದಲ್ಲಿದ್ದ ಮಹಾನ್ ನಾಯಕರು ನಮ್ಮ ದೇಶದ ಬಗೆಗಿನ ಸೋನಿಯಾ ಅವರ ಅಲ್ಪ ಜ್ಞಾನವನ್ನು ಟೀಕಿಸಲು ಸಿಕ್ಕ ಯಾವುದೇ ಅವಕಾಶವನ್ನೂ ಕಳೆದುಕೊಳ್ಳಲಿಲ್ಲ. ಆದರೆ ಅದರಿಂದೆಲ್ಲಾ ಧೃತಿಗೆಡದ ಸೋನಿಯಾ ಅಖಿಲ ಭಾರತ ಪ್ರವಾಸ ಕೈಗೊಂಡರು. ಆ ಸಂದರ್ಭದಲ್ಲಿ, ಭಾರತವನ್ನು ಬೇರು ಮಟ್ಟದಿಂದಲೇ ತಿಳಿದುಕೊಳ್ಳುವ ಉದ್ದೇಶದಿಂದ ಅವರು ಹೆಚ್ಚು-ಕಡಿಮೆ ದೇಶದ ಎಲ್ಲಾ ಪ್ರಾಂತ್ಯ ಹಾಗೂ ಹಳ್ಳಿಗಳನ್ನು ಸಂದರ್ಶಿಸಿದರು. ಜನರೊಂದಿಗೆ ಬೆರೆತು ಅವರನ್ನು ಅರಿತುಕೊಳ್ಳಲು ದೇಶದಾದ್ಯಂತ ಸಂಚರಿಸಿದ ರಾಷ್ಟ್ರಮಟ್ಟದ ನಾಯಕರಲ್ಲಿ ಪ್ರಾಯಶಃ ಎರಡನೇ ಸ್ಥಾನ ಸೋನಿಯಾ ಅವರಿಗೆ ಸಲ್ಲುತ್ತದೆ. ಇದಕ್ಕೂ ಮುನ್ನ ಮಹಾತ್ಮ ಗಾಂಧಿ ಅವರು ಜನರೊಂದಿಗೆ ಬೆರೆಯಲು ಪ್ರಖ್ಯಾತ ಭಾರತ ಯಾತ್ರೆಯನ್ನು ಕೈಗೊಂಡಿದ್ದರು.
ಅಧಿಕಾರ ಸೂತ್ರ ಹಿಡಿದಿರುವ ರಾಜಕೀಯ ಪಕ್ಷಗಳಲ್ಲಿರುವ ಗೊಂದಲವೇ ಜನತೆಯ ದುಸ್ಥಿತಿಗೆ ಕಾರಣ ಎಂಬುದನ್ನು ಸೋನಿಯಾ ಅರಿತುಕೊಂಡರು. ಮರಣ ಶಯ್ಯೆಯಲ್ಲಿದ್ದ ಪಕ್ಷಕ್ಕೆ ಆಕೆ ಯಾವ ರೀತಿ ಸಂಜೀವಿನಿ ಶಕ್ತಿಯಾದರೆಂದರೆ, ಪಕ್ಷವನ್ನು ತೊರೆದು ಹೋಗಿದ್ದ ಹಿರಿಯ ನಾಯಕರುಗಳಾದ ಎನ್.ಡಿ. ತಿವಾರಿ, ಅರ್ಜುನ್ ಸಿಂಗ್ ಮೊದಲಾದವರೆಲ್ಲಾ ಪಕ್ಷಕ್ಕೆ ಮರಳಿದರು. ಹೆಚ್ಚುತ್ತಿರುವ ಸೋನಿಯಾ ಗಾಂಧಿ ಅವರ ಜನಪ್ರಿಯತೆಯನ್ನು ಗಮನಿಸಿದ ವಿರೋಧ ಪಕ್ಷಗಳು ಅವರ ಮೇಲೆ ಗಂಭೀರ ವೈಯುಕ್ತಿಕ ದಾಳಿ ಮಾಡಿದವು. ಆದರೆ ನಿಜವಾದ ಕರ್ಮಯೋಗಿಯಂತೆ ಸೋನಿಯಾ ಅವೆಲ್ಲವನ್ನೂ ಸಹಿಸಿಕೊಂಡಿದ್ದು ಮಾತ್ರವಲ್ಲದೆ, ಯಾವತ್ತೂ ಅವುಗಳಿಗೆ ಪ್ರತಿಕ್ರಿಯಿಸಲಿಲ್ಲ. ಕಳೆದ ಸಾರ್ವತ್ರಿಕ ಚುನಾವಣೆಯ ಸಂದರ್ಭದಲ್ಲಂತೂ ವಿರೋಧ ಪಕ್ಷಗಳು ಸೋನಿಯಾ ವಿರೋಧಿ ಅಲೆ ಮೂಡಿಸಲು ವ್ಯರ್ಥ ಪ್ರಯತ್ನ ಮಾಡಿದವು. ಆದರೆ ಭಾರತದ ಜನತೆ ಮತ್ತೆ ಮೋಸ ಹೋಗಲಿಲ್ಲ. ಬದಲಾಗಿ ಈ ಅಪಪ್ರಚಾರವೇ ಜನರನ್ನು ಮನೆಯಿಂದ ಹೊರಗೆಳೆದು ಅವರ ನಿಷ್ಪಕ್ಷಪಾತ ಆಯ್ಕೆಯನ್ನು ದಾಖಲಿಸುವಂತೆ ಮಾಡಿತು.
ಆನಂತರ ಯುಪಿಎ ಬಣ ಸರ್ಕಾರ ರಚಿಸಿ ದೇಶವನ್ನು ಮುನ್ನಡೆಸಲು ಸಜ್ಜಾದಾಗ ಆ ಸರ್ಕಾರದ ಉನ್ನತ ಸ್ಥಾನಕ್ಕೆ ಸೋನಿಯಾ ಅವರು ಜನಪ್ರಿಯ ಆಯ್ಕೆಯಾಗಿದ್ದರು. ಆದರೆ ಪ್ರಧಾನಿ ಪಟ್ಟವನ್ನು ನಿರಾಕರಿಸುವುದರ ಮೂಲಕ ಅವರು ದೇಶದ ಇತಿಹಾಸದಲ್ಲಿಯೇ ಒಂದು ಮಹತ್ವದ ಮೈಲಿಗಲ್ಲನ್ನು ಸ್ಥಾಪಿಸಿದರು. ಅವರ ಈ ನಡೆ ಪ್ರತಿಪಕ್ಷವನ್ನು ತೀವ್ರ ಗೊಂದಲ ಹಾಗೂ ಆಘಾತದಲ್ಲಿ ಕೆಡವಿತು. ಅವರ ಬೆಂಬಲಿಗರಿಂದ ತೀವ್ರ ಒತ್ತಡ ಎದುರಾದರೂ ಮನಮೋಹನ್ ಸಿಂಗ್ ಅವರನ್ನು ಪ್ರಧಾನಿ ಪಟ್ಟಕ್ಕೆ ನಾಮನಿರ್ದೇಶಿಸುವ ಮೂಲಕ ಸೋನಿಯಾ ತಮ್ಮ ದೃಢಸಂಕಲ್ಪ ಹಾಗೂ ನಿಲುವಿಗೆ ಬದ್ಧರಾಗಿ ನಡೆಯುವ ದಿಟ್ಟತನದ ಪರಿಚಯ ಮಾಡಿಸಿದರು. ಅಧಿಕಾರದ ಬಗ್ಗೆ ತಮಗಿರುವ ನಿರ್ಲಿಪ್ತತೆ ಪ್ರದರ್ಶಿಸಿದರು.'ಎನ್‌ಎಸಿ'ಗೆ ಸೋನಿಯಾ ಅಧ್ಯಕ್ಷರಾಗಿದ್ದಾಗ ಅದು ಲಾಭದಾಯಕ ಹುದ್ದೆ (ಒಒಪಿ) ಎಂಬ ಆರೋಪ ಕೇಳಿ ಬಂದಿತ್ತು. ಅದು ಲಾಭದಾಯಕ ಹುದ್ದೆಯ ವ್ಯಾಪ್ತಿಗೆ ಬರದಿದ್ದರೂ ಸೋನಿಯಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ನಂತರ ಮರು ಚುನಾವಣೆಯಲ್ಲಿ ಪ್ರಚಂಡ ವಿಜಯ ಗಳಿಸಿದರು. ಹೀಗೆ ಮತ್ತೊಮ್ಮೆ ತಮ್ಮ ಜನಪ್ರಿಯತೆ ಸಾಬೀತು ಮಾಡಿ ವಿರೋಧಿಗಳಿಗೆ ಚುರುಕು ಮುಟ್ಟಿಸಿದರು.
ಒಬ್ಬ ಚಿಂತಕಿಯಾಗಿ ಮೊದಲ ದಿನದಿಂದಲೇ ಸೋನಿಯಾ ಅವರ ಆದ್ಯತೆಗಳು ಸ್ಪಷ್ಟವಾಗಿವೆ. ಸೋನಿಯಾ ಅವರ ದೃಷ್ಟಿಕೋನ ಅವರ ಪ್ರತಿಯೊಂದು ಕಾರ್ಯಗಳಲ್ಲಿಯೂ ವ್ಯಕ್ತವಾಗಿದೆ. ಅದು ಚುನಾವಣೆಗೆ ಸ್ಪರ್ಧಿಸಲು ಯುವಜನರಿಗೆ ಟಿಕೆಟ್ ನೀಡುವುದೇ ಆಗಿರಬಹುದು ಅಥವಾ ಜನಸಾಮಾನ್ಯರಿಗೆ ನೆರವಾಗುವಂತಹ 'ಎನ್‌ಆರ್‌ಇಜಿಎಸ್' ರೀತಿಯ ಪ್ರಯೋಜನಕಾರಿ ಯೋಜನೆಗಳನ್ನು ಜಾರಿ ಮಾಡುವುದಿರಬಹುದು ಹಾಗೂ ಇತ್ತೀಚೆಗೆ ಘೋಷಿಸಿದ ರೈತರ ಸಾಲ ಮನ್ನಾ ಯೋಜನೆ ಇರಬಹುದು... ಇವೆಲ್ಲವುಗಳ ಮೂಲಕ ಸೋನಿಯಾ ಜನಸಾಮಾನ್ಯರ ಏಳಿಗೆಗಾಗಿ ನಿರಂತರವಾಗಿ ಶ್ರಮಿಸುತ್ತಿದ್ದಾರೆ. ಸೋನಿಯಾ ಗಾಂಧಿ ಒಬ್ಬ ನಿಜವಾದ ಭಾರತೀಯರು. ಅಲ್ಲವೇ?
ಟಿಎಸ್‌ಐ |