|
ಅಸ್ಸಾಂ: ಉಗ್ರವಾದ
ಬೆಂಕಿಯೊಂದಿಗೆ ಸರಸ
ಸರ್ಕಾರದ ಬದ್ಧತೆಯ ಕೊರತೆಯಿಂದ ನೆತ್ತರ ಹೊಳೆ ನಿರಂತರವಾಗಿದೆ
ಅಸ್ಸಾಂನ ಆಡಳಿತ ವೈಫಲ್ಯ ಈಗ ಮತ್ತೊಮ್ಮೆ ಸಾಬೀತಾಗಿದೆ. ಇತ್ತೀಚೆಗೆ ಬೋಡೊ ಪ್ರಾಂತ್ಯದ ಸ್ವಯಂಘೋಷಿತ ಜಿಲ್ಲೆಯಾದ (ಬಿಟಿಎಡಿ) ಚಿರಾಂಗ್‌ನ ಬೆಂಗ್ತೋಲ್ ಎಂಬಲ್ಲಿ ಪೊಲೀಸರು ಪ್ರತಿಭಟನಾನಿರತರ ಮೇಲೆ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟಿರುವುದು ಆ ಪ್ರದೇಶದ ಬಂಡುಕೋರರ ಸಮಸ್ಯೆಗೆ ಪರಿಹಾರ ಒದಗಿಸುತ್ತೇವೆ ಎಂಬ ಸರ್ಕಾರದ ಆಶ್ವಾಸನೆಗೆ ಕೊನೆ ಮೊಳೆ ಹೊಡೆದಂತಾಗಿದೆ. ಸಾವು ಮಾತ್ರವಲ್ಲ, ನಾಗೌನ್ ಜಿಲ್ಲೆಯ ಲುಂಡಿಂಗ್ ಎಂಬಲ್ಲಿ ಕಣ್ಮರೆಯಾದ ೫ ಮಂದಿ ಕಾರ್ಮಿಕರ ಕುರಿತೂ ಸರ್ಕಾರ ಯಾವುದೇ ಮಾಹಿತಿ ಸಂಗ್ರಹಿಸಿಲ್ಲ. ಈ ಮಧ್ಯೆ ಭದ್ರತಾ ಪಡೆ ಅಧಿಕಾರಿಗಳು, ದಿಮಾ ಹಾಲಿಮ್ ದವೋಗಾ ಬಂಡುಕೋರ ಸಂಘಟನೆಗೆ ಸಂಬಂಧಿಸಿದ 'ಜುವೆಲ್ ಗರ್ಲೋಸಾ' ತಂಡ 5 ಮಂದಿ ಕಾರ್ಮಿಕರನ್ನು ಅಪಹರಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಪ್ರದೇಶದ ಒಟ್ಟು 87 ಮಂದಿಯ ಹತ್ಯೆಗೆ ಕಾರಣ ಈ ಸಂಘಟನೆ ಎಂಬುದು ಗಮನಿಸಬೇಕಾದ ಅಂಶ.
"ಬೆಂಗ್ತೋಲ್ ಘಟನೆಗೆ ಬೋಡೊ ಪ್ರಾಂತ್ಯ ಸಮಿತಿಯ ನಾಯಕ ಹಗ್ರಾಮಾ ಮಹಿಲರಿ ಅವರೇ ಕಾರಣ" ಎಂದು ಆರೋಪಿಸುತ್ತಾರೆ ಬೋಡೊ ಪೀಪಲ್ಸ್ ಪ್ರೊಗ್ರೆಸಿವ್ ಫ್ರಂಟ್‌ನ (ಬಿಪಿಪಿಎಫ್) ಬಂಡಾಯ ಗುಂಪಿನ ಮುಖ್ಯಸ್ಥ ರಬಿರಾಮ್ ನರ್ಜಾರಿ. ಸರ್ಕಾರದೊಂದಿಗೆ ಶಾಂತಿ ಮಾತುಕತೆಯಲ್ಲಿ ಭಾಗಿಯಾಗಬೇಕಿದ್ದ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೊಲ್ಯಾಂಡ್ (ಎನ್‌ಡಿಎಫ್‌ಬಿ) ಪ್ರತ್ಯೇಕತಾವಾದಿ ಗುಂಪಿನ ನಿಯೋಜಿತ ಶಿಬಿರವನ್ನು ಎತ್ತಂಗಡಿ ಮಾಡಿದ್ದರ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದ ಗುಂಪಿನ ಮೇಲೆ ಪೊಲೀಸರು ಗುಂಡಿನ ದಾಳಿ ನಡೆಸಿದ್ದರು. ಆದರೆ, ಈ ಬಗ್ಗೆ ಪ್ರತಿಕ್ರಿಯೆ ನೀಡಲು ಬೋಡೊ ಪ್ರಾಂತ್ಯ ಸಮಿತಿಯ ಮಹಿಲರಿ ಸಂಪರ್ಕಕ್ಕೆ ಸಿಗಲಿಲ್ಲ. ವಿಪರ್ಯಾಸವೆಂದರೆ, 'ಬೋಡೊ ಲಿಬರೇಷನ್ ಟೈಗರ್‍ಸ್'ನಿಂದ ಸಿಡಿದುಬಂದ ಗುಂಪಿನ ಸಂಘಟನೆಯೇ ಬೋಡೊ ಪೀಪಲ್ಸ್ ಪ್ರೊಗ್ರೆಸಿವ್ ಫ್ರಂಟ್'.
ಈ ಮಧ್ಯೆ, "ಬೆಂಗ್ತೋಲ್‌ನ ಉದ್ವಿಗ್ನ ಸ್ಥಿತಿಯನ್ನು ನಿಯಂತ್ರಣಕ್ಕೆ ತರುವ ಉದ್ದೇಶದಿಂದ ನಮಗೆ ಗಾಳಿಯಲ್ಲಿ ಗುಂಡು ಹಾರಿಸಲು ಆದೇಶ ನೀಡಲಾಗಿತ್ತು" ಎಂದು ಪೊಲೀಸರು ಘಟನೆಯ ಕುರಿತು ಸಮರ್ಥನೆ ನೀಡುತ್ತಾರೆ. ಜೊತೆಗೆ, ಚಿರಾಂಗ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ್ ಪೂಜಾರಿ, "ಏನೇ ಇರಲಿ, ಪರಿಸ್ಥಿತಿ ಈಗ ನಿಯಂತ್ರಣದಲ್ಲಿದೆ" ಎನ್ನುತ್ತಾರೆ. ಆದರೆ, ಈಗಿನ ಅಸ್ಸಾಂನಲ್ಲಿ "ಸಾಮಾನ್ಯ ಸ್ಥಿತಿ" ಎಂದರೆ, ಬಂಡುಕೋರರು ಮತ್ತೊಮ್ಮೆ ದಾಳಿ ನಡೆಸುವವರೆಗೆ ಮಾತ್ರ ಎಂಬುದಂತೂ ನಿಜ!
ಟಿಎಸ್‌ಐ
ಮೊನಾಲಿಸಾ ಗೊಗೊಯ್
ದಕ್ಷಿಣ ಭಾರತ: ಚಿತ್ರ ಜಗತ್ತು
ಸಿನಿಮಾ ವೀಸಾ ಹಿಂದೆ ನಿಗೂಢ ಜಾಲ
'ಬಣ್ಣದ ಲೋಕ'ದ 200 ಮಂದಿ ಅಮೆರಿಕದ ಕಪ್ಪು ಪಟ್ಟಿಗೆ
ಚಿತ್ರೀಕರಣ ಮತ್ತು ಇತರ ಕಾರ್ಯಕ್ರಮಗಳಿಗಾಗಿ ಅಮೆರಿಕಕ್ಕೆ ತೆರಳುವುದು ದಕ್ಷಿಣ ಭಾರತ ಚಲನಚಿತ್ರ ರಂಗದ ಕಲಾವಿದರಿಗೆ ಇನ್ನು ಮೇಲೆ ಸುಲಭವಾಗಲಿಕ್ಕಿಲ್ಲ. ಏಕೆಂದರೆ, ವೀಸಾ ದುರ್ಬಳಕೆ ಮತ್ತು 'ಅಕ್ರಮ ಮಾನವ ಸಾಗಣೆ ದಂಧೆ' ಹಿನ್ನೆಲೆಯಲ್ಲಿ ದಕ್ಷಿಣ ಭಾರತದ ಬಣ್ಣದ ಲೋಕದ ಸುಮಾರು 200 ಮಂದಿಯನ್ನು ಅಮೆರಿಕ ಕಪ್ಪುಪಟ್ಟಿಗೆ ಸೇರಿಸಿದೆ ಎಂದು ಕಳೆದ ವಾರ ಚೆನ್ನೈನ ಅಮೆರಿಕ ಕಾನ್ಸುಲೇಟ್ ಜನರಲ್ ಡೇವಿಡ್ ಹಾಪರ್ ತಿಳಿಸಿದ್ದಾರೆ. ಜೊತೆಗೆ ಪ್ರಕರಣದ ಸಂಬಂಧ ಈಗಾಗಲೇ ತಮಿಳು, ಮಲಯಾಳಂ, ಕನ್ನಡ, ತೆಲುಗು ಚಿತ್ರ ಜಗತ್ತಿನ ಘಟಾನುಘಟಿಗಳನ್ನು ವಿಚಾರಣೆಗೊಳಪಡಿಸಿದ್ದಾರೆ.
ದಕ್ಷಿಣ ಭಾರತೀಯ ನಟಿ ಫ್ಲೋರಾ ಸನಿಯ ಸಹಾಯಕಿ ಶ್ರೀಲತಾ ಎಂಬ ಯುವತಿ ಚೆನ್ನೈನಲ್ಲಿ ವೀಸಾಕ್ಕೆ ಅರ್ಜಿ ಸಲ್ಲಿಸಿದಾಗ 'ಭಾರತೀಯ ಚಲನಚಿತ್ರ ವೀಸಾ ಹಗರಣ' ಎಂದೇ ಹೇಳಲಾಗುವ ಅಕ್ರಮ ಮಾನವ ಸಾಗಣೆ ದಂಧೆ ಬೆಳಕಿಗೆ ಬಂದಿದೆ. ಫ್ಲೋರಾ ಹಲವು ತಮಿಳು, ಕನ್ನಡ ಮತ್ತು ತೆಲುಗು ಚಿತ್ರಗಳಲ್ಲಿ ನಟಿಸಿದ್ದ ನಟಿ. ಅಮೆರಿಕ ಕಾನ್ಸುಲೇಟ್ ಅಧಿಕಾರಿಗಳು ಶ್ರೀಲತಾಳನ್ನು ಪ್ರಶ್ನಿಸಿದಾಗ ಆಕೆಗೆ ಮೇಕಪ್ ವಿಚಾರದಲ್ಲಿ ಒಂದು ಚೂರೂ ಮಾಹಿತಿ ಇರದೆ ಇರುವುದು ಪತ್ತೆಯಾದಾಗ ಆಕೆಯ ಮೋಸ ಬಹಿರಂಗವಾಗಿತ್ತು. ಈ ಹಿನ್ನೆಲೆಯಲ್ಲಿ ಫ್ಲೋರಾ, ಶ್ರೀಲತಾ ಮತ್ತು ಹೈದರಾಬಾದ್ ಮೂಲದ ಟ್ರಾವೆಲ್ ಏಜೆಂಟ್ ವೆಂಕಟ ರೆಡ್ಡಿ ಅವರನ್ನು ಬಂಧಿಸಲಾಗಿದೆ.
"ಬಹುತೇಕ ಪ್ರಕರಣಗಳೆಲ್ಲಾ ಚಿತ್ರರಂಗದೊಂದಿಗೇ ಸಂಬಂಧ ಹೊಂದಿರುವುದರಿಂದ ಬಣ್ಣದ ಜಗತ್ತಿನ ಅನೇಕರು ಈ ಜಾಲದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದೆ" ಎನ್ನುತ್ತಾರೆ ಡೇವಿಡ್ ಹಾಪರ್. ಆ ಹೆಸರುಗಳನ್ನು ಬಹಿರಂಗಗೊಳಿಸಲು ಅವರು ನಿರಾಕರಿಸಿದರು. ಜಾಲದಲ್ಲಿ ಈಗಾಗಲೇ ಬಂಧಿತನಲ್ಲದೆ, ಇನ್ನಿಬ್ಬರು ಟ್ರಾವೆಲ್ ಏಜೆಂಟರು ಭಾಗಿಯಾಗಿದ್ದು, ಅವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಹೇಳಲಾಗಿದೆ. ನಕಲಿ ಮದುವೆ, ಹಿಂದು ದೇವಾಲಯಗಳಲ್ಲಿ ಅರ್ಚಕನಾಗಿ ಕೆಲಸ ಮಾಡುವುದು ಮತ್ತು ದತ್ತು ತೆಗೆದುಕೊಳ್ಳುವ ನೆಪದಲ್ಲಿ ಭಾರತದಿಂದ ಅಮೆರಿಕಕ್ಕೆ ಅಕ್ರಮ
ಮಾನವ ಸಾಗಣೆ ನಿರಂತರವಾಗಿ ಸಾಗುತ್ತಿದ್ದ ಹಿನ್ನೆಲೆಯಲ್ಲಿ ಅಮೆರಿಕ ಕಾನ್ಸುಲೇಟ್ ಕಠಿಣ ವೀಸಾ ತಪಾಸಣೆಯಲ್ಲಿ ನಿರತವಾಗಿದೆ. ಬಯೋಮೆಟ್ರಿಕ್ ತಪಾಸಣೆ ಮತ್ತು ಕಠಿಣ ಸಂದರ್ಶನ ಮಾದರಿಗಳ ಮೂಲಕ ಅಕ್ರಮ ಜಾಲಕ್ಕೆ ಕಡಿವಾಣ ಹಾಕುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ರಂಗೋಲಿ ಕೆಳಗೇ ನುಸುಳುವ ಚಾಣಾಕ್ಷರಾದ ಮಂದಿ ಕಾನ್ಸುಲೇಟ್ ಕಣ್ಣಿಗೆ ಮಣ್ಣೆರಚುವ ಹೊಸ ಹಾದಿಗಳನ್ನು ಹುಡುಕಿದರು. ಆಗ ಅವರಿಗೆ ಹೊಳೆದದ್ದು ಚಲನಚಿತ್ರ ಮತ್ತು ನೃತ್ಯ ತಂಡಗಳ ಜೊತೆ
ಅಮೆರಿಕಕ್ಕೆ ಹಾರುವ ಉಪಾಯ ಎಂದು ಬಲ್ಲ ಮೂಲಗಳು ಜಾಲದ ಕಾರ್ಯನಿರ್ವಹಣೆ ಬಗ್ಗೆ ವಿವರಿಸುತ್ತವೆ.
"ಸಂಪೂರ್ಣ ಚಿತ್ರರಂಗದ ಮೇಲೆ ಗೂಬೆ ಕೂರಿಸುವ ಬದಲು ಅನುಮಾನಾಸ್ಪದ ವ್ಯಕ್ತಿಗಳ ವಿರುದ್ಧ ನೇರ ಕ್ರಮಕೈಗೊಳ್ಳಿ. ಸಿನಿಮಾ ರಂಗದೊಂದಿಗೆ ಗುರುತಿಸಿಕೊಳ್ಳುವವರು, ಆ ರಂಗದಲ್ಲಿ ಕೆಲಸ ಮಾಡುವವರು
ಹಲವರು ಇದ್ದಾರೆ. ಅವರೆಲ್ಲರೂ ನಟ- ನಟಿಯರೇ ಅಲ್ಲ, ಅಥವಾ ಸಂಘಟನೆಯ ಸದಸ್ಯರೂ ಆಗಿರುವುದಿಲ್ಲ. ಈಗ ಬಂಧಿತರಾಗಿರುವ ನಟಿ ಫ್ಲೋರಾ ಕೂಡ ನಮ್ಮ ಸಂಘದ ಸದಸ್ಯೆಯಲ್ಲ" ಎಂದು ಟಿಎಸ್‌ಐಗೆ ಪ್ರತಿಕ್ರಿಯೆ ನೀಡಿದ ದಕ್ಷಿಣ ಭಾರತ ಚಲನಚಿತ್ರ ಕಲಾವಿದರ ಸಂಘದ ಅಧ್ಯಕ್ಷ ನಟ ಶರತ್ ಕುಮಾರ್ ಹೇಳಿದರು. ಒಟ್ಟಾರೆ, ಫ್ಲೋರಾ ಪ್ರಕರಣದಿಂದಾಗಿ ದಕ್ಷಿಣ ಭಾರತದ ಸಿನಿಮಾ ಮಂದಿಯ ಮೇಲೂ ಅನುಮಾನದ ಕಣ್ಣು ಬಿದ್ದಿದ್ದು, ಯಾರು ಕಪ್ಪು ಪಟ್ಟಿಗೆ ಸೇರಿದ್ದಾರೆ, ಯಾರು ಸೇರಿಲ್ಲ ಎಂಬುದು ಅವರವರು ವೀಸಾಕ್ಕೆ ಅರ್ಜಿ ಸಲ್ಲಿಸಿದ ಬಳಿಕವೇ ಗೊತ್ತಾಗುವುದು. ಹಾಗಾಗಿ ಎಲ್ಲರಿಗೂ ಆಶ್ಚರ್ಯವಂತೂ ಕಾದಿದೆ!
ಟಿಎಸ್‌ಐ
ಎನ್. ಅಶೋಕನ್
ಪಂಜಾಬ್: ಬಜೆಟ್
ಭ್ರೂಣಹತ್ಯೆಯ ನಾಡಿನಲ್ಲಿ ಮಹಿಳಾಭಿವೃದ್ಧಿಗೆ ದೃಢ ಹೆಜ್ಜೆ
ಲಿಂಗತ್ವ ಬಜೆಟ್ ಅನುಷ್ಠಾನಕ್ಕೆ ಒಟ್ಟು ೬೮೪ ಕೋಟಿ ರೂಪಾಯಿ ನಿಗದಿ
ಪಂಜಾಬ್ ತನ್ನ ಎಲ್ಲಾ ಸಮೃದ್ಧಿಯ ಜೊತೆಗೆ ದೇಶದಲ್ಲೇ ಅತ್ಯಂತ ಕಡಿಮೆ ಲಿಂಗಾನುಪಾತ ಹೊಂದಿರುವ ರಾಜ್ಯ ಎಂಬ ಕುಖ್ಯಾತಿಗೆ ಪಾತ್ರವಾಗಿದೆ. ಹಲವಾರು ಕ್ಷೇತ್ರಗಳಲ್ಲಿ ರಾಜ್ಯದ ಮಹಿಳೆಯರ ಪ್ರಗತಿ ಕುಂಠಿತವಾಗುತ್ತಲೇ ಇದೆ. ಅಲ್ಲದೆ ಹೆಣ್ಣು ಭ್ರೂಣಹತ್ಯೆ ಸಂಖ್ಯೆಯೂ ಭಯಾನಕ ಸ್ಥಿತಿಗೆ ತಲುಪಿದೆ. ಹೆಣ್ಣಿನ ಮೇಲೆ ನಡೆಯುತ್ತಿರುವ ದೌರ್ಜನ್ಯದ ಪ್ರಮಾಣ ಕೂಡ ಏರುಗತಿಯಲ್ಲೇ ಇದೆ.
ಇಂಥ ಸಂದಿಗ್ಧ ಸನ್ನಿವೇಶದಲ್ಲಿ ರಾಜ್ಯ ಸರ್ಕಾರ ಈ ಬಾರಿ ಲಿಂಗತ್ವ ಬಜೆಟ್ ಮಂಡಿಸಿದ್ದು ನಿಜವಾಗಿಯೂ ಪ್ರಶಂಸಾರ್ಹ. ಹಣಕಾಸು ಸಚಿವ ಮನ್‌ಪ್ರೀತ್ ಬಾದಲ್ ಮಾರ್ಚ್ 17ರಂದು ಬಜೆಟ್ ಮಂಡಿಸಿದ್ದು, "ಇದು ಕೇವಲ ಆರಂಭವಷ್ಟೇ. ಮುಂದಿನ ವರ್ಷಗಳಲ್ಲಿ ಮಹಿಳಾಪರ ಕಾರ್ಯಕ್ರಮಗಳು, ಯೋಜನೆಗಳಿಗೆ ಇನ್ನಷ್ಟು ಆದ್ಯತೆ ನೀಡಲಿದ್ದೇವೆ" ಎಂದು ಭರವಸೆ ನೀಡಿದ್ದಾರೆ.
ಮಹಿಳೆಯರ ಅಭಿವೃದ್ಧಿಯ ವಿವಿಧ ಯೋಜನೆಗಳಿಗೆ ೬೮೪ ಕೋಟಿ ರೂಪಾಯಿಗಳನ್ನು ನಿಗದಿಪಡಿಸುವ ಮೂಲಕ ಲಿಂಗತ್ವ ಬಜೆಟ್ ಅಂಶಗಳನ್ನು ಅನುಷ್ಠಾನಕ್ಕೆ ಚಾಲನೆ ನೀಡಲಾಗಿದ್ದು, ಮಹಿಳಾ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿರುವ ರಾಜ್ಯದಲ್ಲಿ ಲಿಂಗತ್ವ ಬಜೆಟ್ ಎಂಬ ಕಲ್ಪನೆ ರೂಪ ಪಡೆದಿರುವುದು ಆಶಾದಾಯಕ ಬೆಳವಣಿಗೆ. ಲಿಂಗತ್ವ ಬಜೆಟ್ ಕಲ್ಪನೆ ಎಂಬುದು ಇಡೀ ಜಗತ್ತಿನಲ್ಲಿ ವಿನೂತನವಾದದ್ದು. 1984ರಲ್ಲಿ ಮೊದಲ ಬಾರಿಗೆ ಇದನ್ನು ಆಸ್ಟ್ರೇಲಿಯ ಆರಂಭಿಸಿತ್ತು. ಆ ನಂತರ ದಕ್ಷಿಣ ಆಫ್ರಿಕಾ 1997ರಲ್ಲಿ ಇದನ್ನು ಅನುಸರಿಸಿತು. ಭಾರತದಲ್ಲಿ, 2000ರಲ್ಲಿ 'ವಿಶ್ವಸಂಸ್ಥೆಯ ಮಹಿಳಾ ಅಭಿವೃದ್ಧಿ ನಿಧಿ'(ಯುಎನ್‌ಐಎಫಿಎಂ) ಆಯೋಜಿಸಿದ್ದ 'ಎಂಜೆಂಡರಿಂಗ್ ನ್ಯಾಷನಲ್ ಬಜೆಟ್ ಇನ್ ಸೌತ್ ಏಷಿಯಾ' (ದಕ್ಷಿಣ ಏಷ್ಯಾ ಪ್ರದೇಶದಲ್ಲಿ ರಾಷ್ಟ್ರೀಯ ಬಜೆಟನ್ನು ಲಿಂಗತ್ವದ ಆಧಾರದಲ್ಲಿ ಮಂಡಿಸುವ ಕುರಿತು ವಿಶ್ಲೇಷಣೆ) ಎಂಬ ವಿಚಾರ ಸಂಕಿರಣ ನಡೆದ ನಂತರ ಭಾರತದಲ್ಲಿ ಲಿಂಗತ್ವ ಬಜೆಟ್ ಬಗ್ಗೆ ಚರ್ಚೆಗಳು ಆರಂಭವಾದವು. ಕೇಂದ್ರದ ವಿತ್ತ ಸಚಿವ ಪಿ. ಚಿದಂಬರಂ ಅವರು ಮೊಟ್ಟಮೊದಲ ಬಾರಿಗೆ 2005ರಲ್ಲಿ ಲಿಂಗತ್ವ ದೃಷ್ಟಿಕೋನದ ಬಜೆಟ್ ಮಂಡಿಸಿದ್ದರು. ಆ ನಂತರ ಒಂದಲ್ಲಾ ಒಂದು ರೀತಿಯಲ್ಲಿ ಕೇರಳ, ಕರ್ನಾಟಕ, ಮಧ್ಯಪ್ರದೇಶ, ರಾಜಸ್ತಾನ ಮತ್ತು ಹರಿಯಾಣ ರಾಜ್ಯಗಳು ಲಿಂಗತ್ವ ಬಜೆಟ್ ಕಲ್ಪನೆಯನ್ನು ಜಾರಿಗೊಳಿಸುತ್ತಾ ಬಂದಿವೆ. ಈಗ ಪಂಜಾಬ್ ಕೂಡ ಈ ನಿಟ್ಟಿನಲ್ಲಿ ದೃಢ ಹೆಜ್ಜೆ ಇಟ್ಟಿರುವುದು ಗಮನಾರ್ಹ ಬೆಳವಣಿಗೆ.
ಲಿಂಗತ್ವ ಬಜೆಟ್ ಎಂಬುದು ಮಹಿಳೆಯರಿಗೆ ಅಥವಾ ಪುರುಷರಿಗಾಗಿ ಬಜೆಟ್ ಎಂಬ ಸೀಮಿತ ಅರ್ಥದಲ್ಲಿ ತಪ್ಪಾಗಿ ಅರ್ಥೈಸಿಕೊಳ್ಳಬಾರದು. ಪ್ರಧಾನ ಬಜೆಟ್‌ನಲ್ಲಿ ಸೌಲಭ್ಯವಂಚಿತರನ್ನು ಒಳಗೊಳ್ಳುವ ಮೂಲಕ ಒಟ್ಟಾರೆ, ಸಮಾಜದ ಸಮಗ್ರ ಅಭಿವೃದ್ಧಿಗೆ ನಾಂದಿ ಹಾಡುವುದೇ ಲಿಂಗತ್ವ ಬಜೆಟ್. ಲಿಂಗತ್ವ ಸಮಾನತೆ ದೃಷ್ಟಿಯಲ್ಲಿ ನಾವು ಗಣನೀಯ ಪ್ರಗತಿ ಸಾಧಿಸಿಲ್ಲ. ಅಭಿವೃದ್ಧಿಗಾಗಿ ಯೋಜಿಸಿದ್ದ ಯೋಜನೆಗಳಿಗೆ ಸೂಕ್ತ ಹಣಕಾಸಿನ ವ್ಯವಸ್ಥೆ ಇಲ್ಲದಿರುವುದೇ ಆ ವೈಫಲ್ಯಕ್ಕೆ ಕಾರಣ. ಆ ನಿಟ್ಟಿನಲ್ಲಿ ಪಂಜಾಬ್ ಸರ್ಕಾರದ ವಿನೂತನ ಕ್ರಮವನ್ನು ಅಲ್ಲಿನ 'ವುಮನ್ಸ್ ಪವರ್ ಕನೆಕ್ಟ್' (ಪಂಜಾಬ್ ಮಹಿಳಾ ಸಂಘಟನೆ) ಸ್ವಾಗತಿಸಿದೆ. ಆದರೆ ಬಜೆಟ್‌ನಲ್ಲಿನ ಪ್ರಸ್ತಾವನೆ ಕೇವಲ ಭರವಸೆಯಾಗಿ ಉಳಿಯದೇ, ಕಾರ್ಯರೂಪಕ್ಕೆ ಬರಲಿ ಎಂಬುದು ಅವರ ಆಶಯ.
ಟಿಎಸ್‌ಐ
ನಿರುಪಮಾ ದತ್
|