ಬೆನಿಟೊ ಅಮಿಲ್‌ಕೇರ್ ಆಂಡ್ರಿಯಾ ಮುಸೋಲಿನಿ ಹುಟ್ಟಿದ್ದು 1883ರ ಜುಲೈ 29ರಂದು. ಬಡ ಇಟಾಲಿಯನ್ ಕುಟುಂಬದಲ್ಲಿ ಜನಿಸಿದ ಅವರು 1922ರಲ್ಲಿ ಇಟಲಿಯ ಪ್ರಧಾನ ಮಂತ್ರಿ ಗದ್ದುಗೆ ಏರಿದರು. ಫ್ಯಾಸಿಸಂನ ಹುಟ್ಟಿಗೆ ಕಾರಣವಾದ 'ನ್ಯಾಷನಲ್ ಫ್ಯಾಸಿಸ್ಟ್ ಪಾರ್ಟಿ' ನೇತೃತ್ವ ವಹಿಸಿದ್ದ ಮುಸೋಲಿನಿ ಅವರ ನಿರಂಕುಶ
ಪ್ರಭುತ್ವ 1943ರವರೆಗೂ ಮುಂದುವರಿಯಿತು. 'ಆಕ್ಸಿಸ್' ಬಣಗಳ ಜೊತೆಯಲ್ಲಿ ಜೂನ್ 10, 1940ರಲ್ಲಿ
ಮುಸೋಲಿನಿಯ ಇಟಲಿ ಎರಡನೇ ಮಹಾಯುದ್ಧಕ್ಕೆ ಧುಮುಕಿತು. ಆಕ್ರಮಣಕಾರಿ ಮನೋಭಾವ, ಚಾಣಾಕ್ಷ ಪ್ರತ್ಯೇಕತಾವಾದದಿಂದ ಪರಸ್ಪರ ಉತ್ತೇಜಿತರಾಗಿ ಮುಸೋಲಿನಿ ಹಾಗೂ ಹಿಟ್ಲರ್ ಒಂದಾಗಿದ್ದರು. ಹಿಟ್ಲರ್‌ನ ಹಲವು ಫ್ಯಾಸಿಸ್ಟ್ ಕಲ್ಪನೆಗಳ ಸೃಷ್ಟಿಕರ್ತ ಮುಸೋಲಿನಿ 1939ರಲ್ಲಿ ಈ ಪತ್ರವನ್ನು ಬರೆದರು.
ಅಗಸ್ಟ್ 25, 1939
ಫ್ಯೂರರ್ (ಮುಖಂಡರೇ),
ಅಂಬಾಸಡರ್ ಫನ್ ಮೆಕೆನ್ಸೆನ್ ಮೂಲಕ ಈಗಷ್ಟೇ ತಲುಪಿದ ತಮ್ಮ ಪತ್ರಕ್ಕೆ ಪ್ರತಿಕ್ರಿಯೆ,
(1) ರಷ್ಯಾದೊಂದಿಗಿನ ಒಪ್ಪಂದವನ್ನು ನಾನು ಸಂಪೂರ್ಣವಾಗಿ ಅನುಮೋದಿಸುತ್ತೇನೆ. ಕಳೆದ ಏಪ್ರಿಲ್‌ನಲ್ಲಿ ನಾನು ಮಾರ್ಷಲ್ ಗೋರಿಂಗ್ ಅವರೊಂದಿಗೆ ನಡೆಸಿದ ಮಾತುಕತೆಯ ಬಗ್ಗೆ ಅವರೇ ಖುದ್ದಾಗಿ ತಮಗೆ ತಿಳಿಸಲಿದ್ದಾರೆ. ಪ್ರಜಾಪ್ರಭುತ್ವ ರಾಷ್ಟ್ರಗಳ ಮುತ್ತಿಗೆಯನ್ನು ತಡೆಯುವ ನಿಟ್ಟಿನಲ್ಲಿ ಜರ್ಮನಿ ಹಾಗೂ ರಷ್ಯಾ ನಡುವಿನ ಪುನರ್ ಮೈತ್ರಿ ಉತ್ತಮ ಹೆಜ್ಜೆ ಎಂದು ನಾನು ಹೇಳಿದ್ದೆ.
(2) ಜಪಾನ್‌ನೊಂದಿಗಿನ ಸಂಬಂಧ ಮುರಿಯುವಂಥ ಹೆಜ್ಜೆಗಳು ಬೇಡ. ಅದರಿಂದ ಜಪಾನ್ ಪ್ರಜಾಪ್ರಭುತ್ವ ಧೋರಣೆಗಳಿಗೆ ಹತ್ತಿರದ ನಿಲುವುಗಳನ್ನು ತೆಗೆದುಕೊಳ್ಳುವ ಸಾಧ್ಯತೆಗಳಿವೆ. ಇದನ್ನು ಮನಸ್ಸಿನಲ್ಲಿಟ್ಟುಕೊಂಡೇ ನಾನು ಟೋಕಿಯೋಗೆ ಒಂದು ಟೆಲಿಗ್ರಾಫ್‌ನ್ನೂ ಕಳುಹಿಸಿದ್ದೆ. ಮೊದಲ ಸಾರ್ವಜನಿಕ ಅಭಿಪ್ರಾಯದ ಅಚ್ಚರಿಯ ನಂತರ ಉತ್ತಮವಾದಂಥ ದೃಷ್ಟಿಕೋನವೊಂದು ಒಡಮೂಡಿದೆ.
(3) ಮಾಸ್ಕೋ ಒಡಂಬಡಿಕೆ ರುಮಾನಿಯಾ ಮೇಲೆ ದಿಗ್ಬಂಧನ ಹೇರಬಹುದು. ಹಾಗೂ ಇಂಗ್ಲಿಷರ ಸಾಲವನ್ನು ಒಪ್ಪಿರುವ ಮತ್ತು ಇನ್ನೂ ಮೈತ್ರಿ ರಾಷ್ಟ್ರಗಳ ಒಕ್ಕೂಟ ಸೇರುವ ಒಡಂಬಡಿಕೆಗೆ ಸಹಿ ಹಾಕದ ಟರ್ಕಿಯ ನಿಲುವನ್ನು ಬದಲಿಸಬಹುದು. ಟರ್ಕಿಯ ಧೋರಣೆಗಳು ಬದಲಾದಲ್ಲಿ ಪೌರಾತ್ಯ ಮೆಡಿಟರೇನಿಯನ್ ಭಾಗದ ಇಂಗ್ಲಿಷ್ ಮತ್ತು ಫ್ರೆಂಚರ ಯುದ್ಧತಂತ್ರಗಳು ಅಸ್ತವ್ಯಸ್ತಗೊಳಿಸಬಹುದು.
(4) ಪೋಲಂಡ್ ಬಗ್ಗೆ ಹೇಳಬೇಕೆಂದರೆ, ಜರ್ಮನಿಯ ನಿಲುವಿನ ಪೂರ್ವಾಪರದ ಕುರಿತು ನನಗೆ ಸಂಪೂರ್ಣ ಅರಿವಿದೆ. ಇಟಲಿಯ ವ್ಯಾವಹಾರಿಕ ನಿಲುವಿನ ಬಗ್ಗೆ ಹೇಳಬೇಕೆಂದರೆ, ಮಿಲಿಟರಿ ಆಕ್ರಮಣದ ಸಂದರ್ಭದಲ್ಲಿ ಜರ್ಮನಿ ಪೋಲಾಂಡ್ ಮೇಲೆ ಆಕ್ರಮಣ ಮಾಡುತ್ತದೆ ಮತ್ತು ಆ ಕದನ ಪ್ರಾದೇಶಿಕವಾಗಿಯೇ ಉಳಿಯುತ್ತದೆ. ಜರ್ಮನಿ ಕೇಳುವಂಥ ರಾಜಕೀಯ ಹಾಗೂ ಆರ್ಥಿಕ ಬೆಂಬಲ ನೀಡಲು ಇಟಲಿ ಯಾವಾಗಲೂ ಸಿದ್ಧವಾಗಿರುತ್ತದೆ. ಇಟಲಿಯ ಯುದ್ಧಪೂರ್ವ ಸಿದ್ಧತೆಯನ್ನು ಗಮನದಲ್ಲಿರಿಸಿದರೆ ನಾನು ನಾನು ಮಿಲಿಟರಿ ಚಟುವಟಿಕೆಗಳಿಂದ ದೂರ ಉಳಿದಿದ್ದು ಒಳ್ಳೆಯದೇ ಆಯಿತು. ಈ ಬಗ್ಗೆ ನಾವು ಈ ಹಿಂದೆಯೇ ಆಗಾಗ್ಗೆ ತಮ್ಮ ಹಾಗೂ ಹೆರ್ ಫನ್ ರಿಬ್ಬನ್‌ಟ್ರೊಪ್ ಅವರಿಗೆ ತಿಳಿಸಿದ್ದೇವೆ.
ಫ್ರೆಂಚ್ ಮತ್ತು ಇಂಗ್ಲಿಷರ ಆಕ್ರಮಣಗಳನ್ನು ತಡೆಯಲು ಜರ್ಮನಿ ನಮಗೆ ಸಾಕಷ್ಟು ಮಿಲಿಟರಿ ನೆರವು ಹಾಗೂ ಕಚ್ಚಾ ವಸ್ತುಗಳನ್ನು ನೀಡಿದರೆ ನಾವು ಕೂಡಲೇ ರಂಗಪ್ರವೇಶ ಮಾಡುತ್ತೇವೆ. ನಾವು ನಡೆಸಿದ ಮಾತುಕತೆಯಲ್ಲಿ ಯುದ್ಧದ ಸಾಧ್ಯತೆಗಳು 1942ರ ನಂತರವೇ ಎಂದು ಚಿತ್ರಿಸಿಕೊಂಡಿದ್ದೇವೆ. ಅಷ್ಟರೊಳಗೆ ನಮ್ಮ ಭೂ, ವಾಯು ಹಾಗೂ ಜಲ ಸೇನೆಗಳು ಸಮರ್ಥವಾಗಿರುತ್ತವೆ.
ಈಗಾಗಲೇ ಶುರುವಾಗಿರುವ ಅಪ್ಪಟ ಮಿಲಿಟರಿ ತಯಾರಿಗಳು ಹಾಗೂ ಯುರೋಪ್ ಮತ್ತು ಆಫ್ರಿಕಾದೊಂದಿಗೆ ಕೈ ಜೋಡಿಸಲಿರುವ ಇತರರು ಪ್ರಮುಖ ಬ್ರಿಟಿಷ್ ಹಾಗೂ ಫ್ರೆಂಚ್ ಪಡೆಗಳನ್ನು ಮಟ್ಟ ಹಾಕುವುದರಲ್ಲಿ ಸಂಶಯವಿಲ್ಲ. ಪರಿಸ್ಥಿತಿಯ ಪೂರ್ವಾಪರಗಳನ್ನು ಮುಂಚಿತವಾಗಿಯೇ ತಮ್ಮ ಅವಗಾಹನೆಗೆ ತರುವುದು ಗೆಳೆಯನಾದ ನನ್ನ ಕರ್ತವ್ಯ ಎನ್ನುವುದು ನನ್ನ ಅನಿಸಿಕೆ. ಆ ರೀತಿಯ ಮುನ್ಸೂಚನೆಗಳ ಅಭಾವ ಎಲ್ಲರ ಮೇಲೂ ಪರಿಣಾಮ ಬೀರುತ್ತದೆ. ಇದು ನನ್ನ ಅನಿಸಿಕೆ. ಉಳಿದಿರುವ ಅತಿ ಕಡಿಮೆ ಸಮಯದಲ್ಲಿ ಸರ್ಕಾರದ ಉನ್ನತ ವ್ಯಕ್ತಿಗಳಿಗೆ ಈ ಬಗ್ಗೆ ಆದೇಶಿಸಬೇಕಾಗಿರುವುದರಿಂದ ತಮ್ಮ ಅನಿಸಿಕೆಗಳನ್ನೂ ನನ್ನ ಗಮನಕ್ಕೆ ತರಬೇಕಾಗಿ ಕೇಳಿಕೊಳ್ಳುತ್ತೇನೆ..