ಮಧ್ಯಪ್ರಾಚ್ಯ: ಬಿಕ್ಕಟ್ಟು
ಬದಲಾವಣೆಯ ನಿರೀಕ್ಷೆಯಲ್ಲಿ...
ಇಸ್ರೇಲ್- ಪ್ಯಾಲೆಸ್ತೀನ್ ಕದನ ವಿರಾಮ ಯತ್ನ
ಕೊನೆಗೂ ಒಂದು ಬಿಕ್ಕಟ್ಟು ಬಗೆಹರಿಯುವ ಸೂಚನೆ ದೊರೆತಿದೆ. ಹಮಾಸ್- ಇಸ್ರೇಲ್ ನಡುವೆ 'ಹೊಸ ಹೆಸರಿನ ಕದನವಿರಾಮ'ಕ್ಕೆ ಮರು ಪ್ರಯತ್ನಗಳು ಸಾಗುತ್ತಿವೆ. ಏಕೆಂದರೆ ಕದನವಿರಾಮವನ್ನು 'ಕದನವಿರಾಮ' ಎಂದು ಕರೆದಲ್ಲಿ ಪರೋಕ್ಷವಾಗಿ ಇಸ್ರೇಲ್ ತನ್ನ ಪ್ಯಾಲೆಸ್ತೀನ್ ಕುರಿತ ಹಗೆತನವನ್ನು ಒಪ್ಪಿಕೊಂಡಂತೆ ಆಗುತ್ತದೆಯಲ್ಲವೆ?
೧೯೪೮ರಲ್ಲಿ ಇಸ್ರೇಲ್ ಪ್ಯಾಲೆಸ್ತೀನಿಯರನ್ನು ಅವರ ತಾಯ್ನೆಲದಿಂದಲೇ ಹೊರಗಟ್ಟಿದ ಮೇಲೆ ಈ ಕ್ರೂರ ಕೃತ್ಯಗಳಿಗೆ ಕೊನೆ ಇದೆಯೆ ಎಂಬುದು ಪ್ರಶ್ನೆಯಾಗೇ ಉಳಿದಿತ್ತು. ಪ್ರತಿ ಬಾರಿ ಒಂದು ತಂಡ ಮತ್ತೊಂದರ ಮೇಲೆ ಆಕ್ರಮಣ ನಡೆಸಿದ ಕೂಡಲೇ ಮೊದಲು ರಕ್ತಪಾತಕ್ಕಿಳಿದ ಪಕ್ಷದಲ್ಲಿ ಉಲ್ಲಾಸದ ಅಲೆಗಳು ಏಳುತ್ತಿದ್ದವು.
ಇಸ್ರೇಲ್ ರಕ್ತ ಮತ್ತು ಪ್ಯಾಲೆಸ್ತೀನಿ ರಕ್ತದ ಗುಂಪುಗಳು ಹೊಂದಿಕೊಳ್ಳುವ ದಿನಗಳು ಬರಲು ಸಾಧ್ಯವೇ ಇಲ್ಲ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಕಾಲಕಾಲಕ್ಕೆ ಕಂಡುಬರುತ್ತಿದ್ದ ಪ್ರಲೋಭನೆ ಅಥವಾ ರಾಜಕೀಯ ಅಥವಾ ಅಗಾಧ ಜಾಗತಿಕ ಒತ್ತಡದ ತರುವಾಯವೂ ಇದು ಬಿಡಿಸಲಾಗದ ಒಗಟಾಗಿಯೇ ಉಳಿದಿತ್ತು.
ಇದನ್ನು ಗಮನದಲ್ಲಿರಿಸಿಕೊಂಡು ಸಲಾಹ್ ಅಲ್- ನಾಮಿ ಇತ್ತೀಚೆಗೆ ಅಲ್- ಆಹ್ರಮ್ ವಾರಪತ್ರಿಕೆಯಲ್ಲಿ 'ಎಲ್ಲವೂ ಸಾಧ್ಯ': "ಇಸ್ರೇಲ್ ಗಾಜಾ ಪಟ್ಟಿ ಮೇಲೆ ಹಠಾತ್ ದಾಳಿ ನಡೆಸಿದ ಎರಡು ವಾರಗಳ ನಂತರ ಅಮೆರಿಕದ ಆಶ್ರಯದಲ್ಲಿ ಇಸ್ರೇಲ್- ಪ್ಯಾಲೆಸ್ತೀನ್ ಮಾತುಕತೆ ಮುಂದುವರಿದಿದೆ" ಎಂಬ ತಲೆಬರಹದಡಿ ಒಂದು ಲೇಖನ ಪ್ರಕಟವಾಗಿತ್ತು.
ಸ್ಪಷ್ಟವಾಗಿ ಹೇಳಬೇಕೆಂದರೆ ಎರಡೂ ಪಕ್ಷಗಳಲ್ಲೂ ಲೋಪ ದೋಷಗಳಿವೆ. ಆದರೆ ಈ ವಿಚಾರದಲ್ಲಿ ಇಸ್ರೇಲ್ ಪ್ರಮಾದಗಳೇ ಅಧಿಕ ಎನ್ನಬಹುದು. ಸಾರ್ವಜನಿಕವಾಗಿ ಘೋಷಿಸದೆ ಇದ್ದರೂ ಸಹ ಇಸ್ರೇಲ್‌ನ ಪ್ರಮುಖ ಬೆಂಬಲಿಗ ಅಮೆರಿಕವೂ ಇದನ್ನು ಒಪ್ಪಿಕೊಂಡಿದೆ. ಎರಡು ವರ್ಷಗಳ ಹಿಂದೆ ಇಸ್ರೇಲ್ ಗಾಜಾ ಪಟ್ಟಿಯಿಂದ ಹಿಂದೆ ಸರಿದಾಗ ಈ ಪ್ರಾಂತ್ಯದ ಪ್ರಜೆಗಳಿಗೇನೂ ಲಾಭವಾಗಿರಲಿಲ್ಲ. ಗಾಜಾ ಪಟ್ಟಿಯಲ್ಲಿ ಮೂಲ ಸೌಕರ್ಯಗಳೇ ಇಲ್ಲ. ದಶಕಗಳಿಂದ ಆರಾಮವಾಗಿ ಸಂಚರಿಸುತ್ತಿದ್ದ ಪ್ರದೇಶಗಳಿಂದ ಸಂಪರ್ಕ ಕಡಿದುಕೊಂಡಿದೆ. ಗಡಿ ಪ್ರದೇಶಗಳು ಇಸ್ರೇಲ್ ಚೆಕ್ ಪೋಸ್ಟ್‌ಗಳ (ಕಾವಲುಪಡೆ) ನಿಯಂತ್ರಣದಲ್ಲಿರುವ ಪರಿಣಾಮ ಪ್ರತಿ ಬಾರಿ ಇಸ್ರೇಲ್ ಮೇಲೆ ಹಮಾಸ್ ರಾಕೆಟ್ ದಾಳಿ ನಡೆದಾಗಲೂ ಅದು ಗಡಿಯಲ್ಲಿ ದಿಗ್ಬಂಧನ ಹೇರುತ್ತದೆ. ಪ್ಯಾಲೆಸ್ತೀನಿಯರಿಗೆ ಉದ್ಯೋಗ, ಆಹಾರ, ವೈದ್ಯಕೀಯ ಸೇವೆಯೂ ಸಿಗುತ್ತಿಲ್ಲ.
ಹಾಗೆಯೇ ಪ್ರಬಲ ಶತ್ರುಗಳು ತಮ್ಮ ವಿರುದ್ಧ ಯಾವಾಗ ಮತ್ತು ಎಲ್ಲಿ ರಣಕಹಳೆ ಊದುತ್ತಾರೆ ಎನ್ನುವ ಭೀತಿಯಲ್ಲೇ ಪ್ಯಾಲೆಸ್ತೀನಿಯರು ಜೀವನ ನಡೆಸುತ್ತಿದ್ದಾರೆ.
ಹಮಾಸ್ ಅವರ ರಾಕೆಟ್ ದಾಳಿಯ ಹಿನ್ನೆಲೆಯಲ್ಲಿ ಇಸ್ರೇಲ್‌ಗೆ ಅಗತ್ಯವಿದ್ದ ಪ್ರಚೋದನೆ ಸಿಕ್ಕಂತಾಗಿತ್ತು ಮತ್ತು ಗಾಜಾ ಪಟ್ಟಿ ಮೇಲೆ ಮತ್ತೆ ದಿಗ್ಬಂಧನ ಹೇರಿದ್ದಾರೆ. ಈ ಸಂದರ್ಭದಲ್ಲಿ ನೂರಕ್ಕೂ ಅಧಿಕ ಪ್ಯಾಲೆಸ್ತೀನಿಯರು ಬಲಿಯಾಗಿದ್ದಾರೆ. ೧೯೬೭ರ ಯುದ್ಧದ ಬಳಿಕ ಗಾಜಾ ಅತ್ಯಂತ ದುಸ್ಥಿತಿಗೆ ತಲುಪಿದೆ. ಪ್ಯಾಲೆಸ್ತೀನಿಯರು ಬಹುಸಂಖ್ಯಾತರಾಗಿರುವ ಪೂರ್ವ ಜೆರುಸಲೆಂನಲ್ಲಿ ಇಸ್ರೇಲ್‌ನ ಪವಿತ್ರ ವಿಚಾರ ಸಂಕಿರಣವೊಂದರಲ್ಲಿ ಬಂದೂಕುಧಾರಿಯೊಬ್ಬ ಏಳು ಮಂದಿ ಯಹೂದಿಯರನ್ನು ಕೊಲೆ ಮಾಡಿದ ಬಳಿಕ ಗಾಜಾಗೆ ಈ ಸ್ಥಿತಿ ಬಂದಿದೆ.
ಯಹೂದಿ ಧರ್ಮಗುರುಗಳು ಇಸ್ರೇಲಿ ನೇತೃತ್ವದ ಎಲ್ಲಾ ಪ್ರವಚನಗಳಲ್ಲೂ ಪ್ಯಾಲೆಸ್ತೀನಿಯರ ವಿರುದ್ಧ ಜನರನ್ನು ಎತ್ತಿ ಕಟ್ಟುತ್ತಿದ್ದಾರೆ. ಮುಖ್ಯವಾಗಿ ವೆಸ್ಟ್‌ಬ್ಯಾಂಕ್‌ನಲ್ಲಿ ಇದೇ ಇಸ್ರೇಲ್‌ನ ಪ್ರಮುಖ ಗುರಿಯಾಗಿದೆ. ಗಾಜಾದಲ್ಲಿ ಜನಸಂಖ್ಯೆ ಕಡಿಮೆ. ಆದರೆ ವೆಸ್ಟ್ ಬ್ಯಾಂಕ್ ಅತಿ ದೊಡ್ಡ ಪಟ್ಟಣ ಹಾಗೂ ಇಸ್ರೇಲಿಗರ ಆಕ್ರಮಣಶೀಲ ಪುನರ್ವಸತಿ ಕಾರ್ಯಕ್ರಮಗಳಿಂದ ನಲುಗಿ ಹೋಗಿದೆ. ಈ ಕಾರಣದಿಂದಾಗಿಯೇ ಇಸ್ರೇಲ್ ಶಾಂತಿಗಾಗಿ ಹಾತೊರೆಯುತ್ತಿದೆ ಎನ್ನಲಾಗಿದೆ. ಸಾಧ್ಯವಾದಷ್ಟು ಕುತಂತ್ರಗಳನ್ನು ನಡೆಸಿ ಈ ಪುನರ್ವಸತಿ ಕಾರ್ಯಕ್ರಮಗಳನ್ನು ವಿಸ್ತರಿಸಲು ಅದಕ್ಕೆ ಸ್ವಲ್ಪ ಸಮಯಾವಕಾಶ ಬೇಕು.
ಟಿಎಸ್‌ಐ
ಅಮಿಯಾ ಜಾ
ಶ್ರೀಲಂಕಾ: ಪ್ರತಿಭಟನೆ
ಮಾಧ್ಯಮ ಸ್ವಾತಂತ್ರ್ಯಹರಣ
ಸರ್ಕಾರಿ ಒಡೆತನದ 'ರೂಪವಾಹಿನಿ' ಸಿಬ್ಬಂದಿ ಮೇಲೆ ಮಾರಕ ಹಲ್ಲೆ
ಶ್ರೀಲಂಕಾ- ಎಲ್‌ಟಿಟಿಇ ಸಂಘರ್ಷ ಕುರಿತು ವರದಿ ಮಾಡುತ್ತಿರುವ ಮಾಧ್ಯಮದವರ ಮೇಲೆ ಶ್ರೀಲಂಕಾದಲ್ಲಿ ನಡೆಯುತ್ತಿರುವ ದಾಳಿಯನ್ನು ರಾಷ್ಟ್ರೀಯ ಮತ್ತು ಅಂತರ್ ರಾಷ್ಟ್ರೀಯ ಮಾಧ್ಯಮ ಹಕ್ಕು ಸಂಘಟನೆಗಳು ತೀವ್ರವಾಗಿ ಖಂಡಿಸಿವೆ. ಶ್ರೀಲಂಕಾ ಸರ್ಕಾರದ ನಿಯಂತ್ರಣದಲ್ಲಿರುವ 'ರೂಪವಾಹಿನಿ' ಟಿವಿ ಚಾನಲ್ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲಾಗಿದೆ.
ಮಾರ್ಚ್ 14ರ ಬೆಳಿಗ್ಗೆ ಕೊಲಂಬೊ ಉಪನಗರದಲ್ಲಿ ಬಸ್ಸಿಗೆ ಕಾಯುತ್ತಿದ್ದ ಅನುರಾಸಿರಿ ಹೆಟಿಗೆ ಅವರ ಮೇಲೆ ದುಷ್ಟರ ಪಡೆಯೊಂದು ದಾಳಿ ನಡೆಸಿದೆ. ಹೆಟಿಗೆ ಅವರು ವಾಹಿನಿಯ ಸಹಾಯಕ ನಿರ್ದೇಶಕ ಮತ್ತು ನೌಕರರ ಒಕ್ಕೂಟದ ಅಧ್ಯಕ್ಷರೂ ಆಗಿದ್ದಾರೆ. ಹೆಟಿಗೆ ಸೇರಿದಂತೆ ಕಳೆದ ಮೂರು ತಿಂಗಳಲ್ಲಿ ದೇಶದ ಟೆಲಿವಿಷನ್ ನಿಗಮ 'ರೂಪವಾಹಿನಿ'ಯ ಐವರು ಸಿಬ್ಬಂದಿಗಳು ಹಲ್ಲೆಗೊಳಗಾಗಿದ್ದಾರೆ ಅಥವಾ ಜೀವ ಬೆದರಿಕೆ ಎದುರಿಸಿದ್ದಾರೆ.
"ಕೆಲವರನ್ನು ಹೊರತುಪಡಿಸಿ ಉಳಿದ ನೌಕರರು ಸ್ಟುಡಿಯೋ ಪ್ರವೇಶಿಸುವುದಕ್ಕೆ ತಡೆಒಡ್ಡಲಾಗಿದೆ. ಗೂಂಡಾಗಳನ್ನು ಬಿಟ್ಟು ದಾಳಿ ನಡೆಸುವ ಕ್ರಮದ ವಿರುದ್ಧ ಪ್ರತಿಭಟನೆ ನಡೆಸುತ್ತೇವೆ" ಎಂದು ನೌಕರರ ಸಂಘದ ವಕ್ತಾರರು ತಿಳಿಸಿದ್ದಾರೆ.
ಇದಕ್ಕೂ ಮುನ್ನ ಕಳೆದ ಡಿಸೆಂಬರ್ ೨೭ರಂದು ಸಚಿವ ಮೆರ್ವಿನ್ ಸಿಲ್ವಾ ಅವರು 'ರೂಪವಾಹಿನಿ' ಕಚೇರಿಗೆ ನುಗ್ಗಿ ಹಿರಿಯ ಸಿಬ್ಬಂದಿಗೆ ಬೆದರಿಕೆ ಒಡ್ಡಿದ ಪ್ರಕರಣಕ್ಕೂ ಈ ದಾಳಿಗಳಿಗೂ ನೇರ ಸಂಬಂಧವಿದೆ ಎಂದು ಮಾಧ್ಯಮ ಹಕ್ಕು ಸಂಘಟನೆಗಳು ಆರೋಪಿಸಿವೆ. ಈ ವಾಹಿನಿಯ ಸುದ್ದಿಯೊಂದರಿಂದ ರೊಚ್ಚಿಗೆದ್ದ ಸಿಲ್ವಾ ಅವರು ಅಲ್ಲಿನ ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿ, ಕುಪಿತ ವರದಿಗಾರರ ಸೇಡಿನ ವರದಿಗಳಿಗೂ ಗ್ರಾಸವಾಗಿದ್ದರು.
"ಅಧಿಕಾರಿಗಳು ಹಲ್ಲೆ ನಡೆಸಿದವರ ಮೇಲೆ ಕ್ರಮ ಕೈಗೊಳ್ಳಲು ವಿಫಲರಾಗಿದ್ದಾರೆ. ಅದಕ್ಕೆ ಬದಲಾಗಿ 'ರೂಪವಾಹಿನಿ' ಸಿಬ್ಬಂದಿಗಳ ವಿರುದ್ಧ ಸೇಡಿನ ಕ್ರಮಕೈಗೊಳ್ಳುತ್ತಿದ್ದಾರೆ" ಎನ್ನುತ್ತಾರೆ ಕಾರ್ಯನಿರತ ಪತ್ರಕರ್ತ ಸಂಘದ ಕಾರ್ಯದರ್ಶಿ ಪೊದ್ದಲ ಜಯಂತ. 'ರೂಪವಾಹಿನಿ' ಪ್ರಕರಣದ ಬಳಿಕ, ಅಪರಿಚಿತ ಗೂಂಡಾಗಳು ಜಯಂತ ಎಂಬ ಮತ್ತೊಬ್ಬ ಪತ್ರಕರ್ತನ ಮನೆ ಮೇಲೂ ಮಧ್ಯರಾತ್ರಿಯಲ್ಲಿ ದಾಳಿ ನಡೆಸಿದ್ದಾರೆ. ರೂಪವಾಹಿನಿ ಆವರಣದಲ್ಲಿ ಸಿಲ್ವಾ ಅವರ ತೇಜೋವಧೆಯಾಗಿದ್ದ ಸಂದರ್ಭದಲ್ಲಿ ನೆರೆದಿದ್ದ ಪತ್ರಕರ್ತರ ಜೊತೆ ಜಯಂತ ಅವರೂ ಇದ್ದರು. ಒಂದು ಕಡೆ ಶ್ರೀಲಂಕಾ- ಎಲ್‌ಟಿಟಿಇ ಸಮರದಲ್ಲಿ ಬಲಿಯಾದವರ ಕುರಿತು ವ್ಯತಿರಿಕ್ತ ವರದಿಗಳು ಹರಡುತ್ತಿದ್ದರೆ, ಮತ್ತೊಂದೆಡೆ ಸೇಡು ತೀರಿಸಿಕೊಳ್ಳುತ್ತಿರುವ ಸುದ್ದಿಗಳೂ ಅಷ್ಟೇ ವೇಗವಾಗಿ ಹರಡುತ್ತಿವೆ.
"ಪತ್ರಕರ್ತರ ಭದ್ರತೆ ಮತ್ತು ಸುರಕ್ಷೆಯನ್ನು ಗಮನದಲ್ಲಿರಿಸಿಕೊಂಡು ಮಾಧ್ಯಮದ ಮೇಲೆ ವಾಗ್ದಾಳಿ ಅಥವಾ ದೈಹಿಕ ಹಲ್ಲೆ ನಡೆಸುತ್ತಿರುವ ಸರ್ಕಾರಿ ಅಧಿಕಾರಿಗಳ ಮೇಲೆ ಶ್ರೀಲಂಕಾ ಸರ್ಕಾರ ಸೂಕ್ತ ಕ್ರಮಕೈಗೊಳ್ಳಬೇಕು. ಈ ವಿಚಾರದಲ್ಲಿ ವಿಚಾರಣೆ ನಡೆಸುವಂತೆ ಸ್ಥಳೀಯ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು. ರೂಪವಾಹಿನಿ ಸಿಬ್ಬಂದಿಗಳ ಮೇಲೆ ನಡೆದ ಹಲ್ಲೆಯ ಜೊತೆಗೆ ಈ ದ್ವೀಪ ರಾಷ್ಟ್ರದ ಇತರ ಎಲ್ಲಾ ಪತ್ರಕರ್ತರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧವೂ ತನಿಖೆ ನಡೆಸುವ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತರಾಗಬೇಕು" ಎಂದು ಅಂತರ್ ರಾಷ್ಟ್ರೀಯ ಪತ್ರಕರ್ತರ ಒಕ್ಕೂಟ (ಐಎಫ್‌ಜೆ)ದ ಏಷ್ಯಾ ಪೆಸಿಫಿಕ್ ನಿರ್ದೇಶಕ ಜ್ಯಾಕ್‌ಲೀನ್ ಪಾರ್ಕ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಹೆಟಿಗೆ ಮೇಲೆ ದಾಳಿ ನಡೆದ ದಿನವೇ ಅಪರಿಚಿತ ವ್ಯಕ್ತಿಗಳ ಗುಂಪೊಂದು ಮಧ್ಯ ಶ್ರೀಲಂಕಾದ ಗಂಪೋಲಾದ ಪತ್ರಕರ್ತೆ ಎಂ. ಪರಮೇಶ್ವರಿ ಅವರ ಮನೆ ಮೇಲೂ ದಾಳಿ ನಡೆಸಿತ್ತು. ಕಳೆದ ವರ್ಷ 'ಟೆರರಿಸಂ ಇನ್‌ವೆಸ್ಟಿಗೇಶನ್ ಡಿಪಾರ್ಟ್‌ಮೆಂಟ್' (ಭಯೋತ್ಪಾದಕ ತನಿಖಾ ವಿಭಾಗ) ಪರಮೇಶ್ವರಿ ಅವರನ್ನು ವಿಚಾರಣೆಗೆ ಒಳಪಡಿಸಿತ್ತು ಮತ್ತು ಅವರು ಮೂರು ತಿಂಗಳ ಕಾಲ ಬಂಧನದಲ್ಲಿದ್ದರು.
ಟಿಎಸ್‌ಐ
ಸೌರಭ್ ಕುಮಾರ್ ಶಾಹಿ
ಚಡ್: ಘರ್ಷಣೆ
ಡಾಕರ್ ಒಪ್ಪಂದಕ್ಕೆ ಧಕ್ಕೆ
ಡರ್ಫರ್ ಪ್ರಾಂತ್ಯದಲ್ಲಿ ಮರೀಚಿಕೆಯಾಗೇ ಉಳಿದ ಶಾಂತಿ
ಸೂಡಾನ್ ಮತ್ತು ಚಡ್ ಅಧ್ಯಕ್ಷರು ಗಡಿಭಾಗದಲ್ಲಿ ಸಶಸ್ತ್ರ ಪಡೆಗಳ ಘರ್ಷಣೆಗೆ ಇತಿಶ್ರೀ ಹಾಡಲು ಒಪ್ಪಿಕೊಂಡ ಹಿನ್ನೆಲೆಯಲ್ಲಿ ಗಲಭೆಗ್ರಸ್ಥ ಡರ್ಫರ್ ಪ್ರದೇಶದಲ್ಲಿ ಶಾಂತಿ ನೆಲೆಯೂರುವ ಕ್ಷೀಣ ಆಶಯವೊಂದು ಕುಡಿಯೊಡೆದಿತ್ತು.
ಸೂಡಾನ್ ಅಧ್ಯಕ್ಷ ಓಮರ್ ಅಲ್ ಬಶೀರ್ ಮತ್ತು ಚಡ್ ಅಧ್ಯಕ್ಷ ಇದ್ರಿಸ್ ಡೆಬಿ ಅವರು ಈ ಪ್ರಾಂತ್ಯದಲ್ಲಿ ಸ್ಥಿರತೆ ಮೂಡಿಸುವ ನಿಟ್ಟಿನಲ್ಲಿ ನೆನೆಗುದಿಗೆ ಬಿದ್ದಿರುವ ಹಿಂದಿನ ಒಪ್ಪಂದಗಳನ್ನು ಮತ್ತೆ ಅನುಷ್ಠಾನಕ್ಕೆ ತರಲು ಮುಂದೆ ಬಂದಿದ್ದಾರೆ. ಸಶಸ್ತ್ರ ಪಡೆಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸುವುದು ಮತ್ತು ಅನುಕ್ರಮವಾಗಿ ಗಡಿಯಲ್ಲಿ ಮತ್ತೊಂದು ದೇಶವನ್ನು ಅಸ್ಥಿರಗೊಳಿಸಬಲ್ಲ ಚಟುವಟಿಕೆಗಳಿಗೆ ತಡೆಯೊಡ್ಡಲು ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ. ನಿತ್ಯದ ಆಕ್ರಮಣಶೀಲ ಪ್ರವೃತ್ತಿಗೆ ವ್ಯತಿರಿಕ್ತವಾದ ಈ ಒಪ್ಪಂದದಲ್ಲಿ ಎರಡೂ ದೇಶಗಳ ವಿದೇಶಿ ಸಚಿವರನ್ನೊಳಗೊಂಡ ಮೇಲ್ವಿಚಾರಣಾ ತಂಡ ರಚನೆಗೂ ನಿರ್ಧರಿಸಲಾಗಿದೆ. ಸೆನೆಗಲ್ ರಾಜಧಾನಿ ಡಾಕರ್‌ನಲ್ಲಿ 'ಆರ್ಗನೈಸೇಷನ್ ಆಫ್ ದಿ ಇಸ್ಲಾಮಿಕ್ ಕಾನ್ಫೆರೆನ್ಸ್' ಏರ್ಪಡಿಸಿದ್ದ ಶೃಂಗಸಭೆಯ ಹಿನ್ನೆಲೆಯಲ್ಲಿ ಅಲ್ ಬಶೀರ್ ಮತ್ತು ಡೆಬಿ ಈ ಒಪ್ಪಂದಕ್ಕೆ ಸಹಿ ಹಾಕಿದ್ದಾರೆ. ಒಪ್ಪಂದಕ್ಕೆ ಮಧ್ಯವರ್ತಿಗಳಾಗಿದ್ದ ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಬಾನ್- ಕಿ- ಮೂನ್ ಮತ್ತು ಸೆನೆಗಲ್ ಅಧ್ಯಕ್ಷ ಅಬ್ದುಲ್ ಎ ವೇಡ್ ಅವರು ಈ ಒಪ್ಪಂದಕ್ಕೆ ಸಾಕ್ಷಿಯಾಗಿದ್ದರು.
ತಮ್ಮ ದ್ವಿಪಕ್ಷೀಯ ಸಂಬಂಧ ಸುಧಾರಿಸುವ ನಿಟ್ಟಿನಲ್ಲಿ ಸೂಡಾನ್ ಮತ್ತು ಚಡ್ ಅಧ್ಯಕ್ಷರ ಬದ್ಧತೆ ಮತ್ತು ದೃಢತೆಯನ್ನು ಬಾನ್ ಅವರು ಶ್ಲಾಘಿಸಿದ್ದಾರೆ.
"ಈ ಶಾಂತಿ ಪ್ರಕ್ರಿಯೆಗೆ ವಿಶ್ವಸಂಸ್ಥೆ ಬೆಂಬಲವಾಗಿ ನಿಲ್ಲಲಿದೆ. ಡಾಕರ್ ಒಪ್ಪಂದವನ್ನು ಪೂರ್ಣಪ್ರಮಾಣದಲ್ಲಿ ಅನುಷ್ಠಾನಕ್ಕೆ ತರುವ ನಿಟ್ಟಿನಲ್ಲಿ ಸಂಬಂಧಪಟ್ಟ ಎರಡೂ ರಾಷ್ಟ್ರಗಳ ಜೊತೆ ಸಹಕರಿಸಲು ಸರ್ವ ಪ್ರಯತ್ನವನ್ನೂ ಮಾಡಲಾಗುವುದು" ಎಂದು ಬಾನ್ ಹೇಳಿದ್ದಾರೆ. ಆದರೆ ಫ್ರೆಂಚ್ ವಿದೇಶಾಂಗ ವ್ಯವಹಾರ ಸಚಿವಾಲಯ ಉಪ ವಕ್ತಾರರ, "ಸೂಡಾನ್ ಮತ್ತು ಚಡ್ ಸಂಬಂಧ ಸುಧಾರಿಸದೆ ಡರ್ಫರ್‌ನಲ್ಲಿ ಸ್ಥಿರತೆ ಮತ್ತು ಶಾಂತಿ ಕಾಪಾಡುವುದು ಸಾಧ್ಯವಿಲ್ಲ" ಎಂದಿದ್ದಾರೆ.
ಈ ನಡುವೆ ಕಳೆದ ತಿಂಗಳು ಚಡ್ ರಾಜಧಾನಿ ಎನ್‌ಜಮೀನಾ ಮೇಲೆ ದಾಳಿ ಮಾಡಿದ ಕ್ರಾಂತಿಕಾರಿ ಸಂಘಟನೆ 'ಚಡ್ ರಾಷ್ಟ್ರೀಯ ಒಕ್ಕೂಟ' ಚಡ್ ಅಧ್ಯಕ್ಷ ಡೆಬಿ ಅವರ ಮನೆಯನ್ನು ಸುತ್ತುವರಿದು ಎರಡು ದಿನಗಳ ಕಾಲ ಅವರನ್ನು ಗೃಹಬಂಧನದಲ್ಲಿಟ್ಟಿತ್ತು. 'ಡಾಕರ್ ಒಪ್ಪಂದ'ವನ್ನು ಕೈಬಿಡಲು ಒತ್ತಾಯಿಸಿದ್ದಲ್ಲದೆ ಅಧ್ಯಕ್ಷರ ವಿರುದ್ಧ ಪ್ರಚಾರ ಆರಂಭಿಸಿದರು.
ಪ್ರಾಂತ್ಯದಲ್ಲಿ ಪ್ರಕ್ಷುಬ್ಧ ಪರಿಸ್ಥಿತಿಗೆ ಕಾರಣರಾದ ಪ್ರಮುಖ ಜನ್‌ಜಾವಿದ್ (ಬಂದೂಕುಧಾರಿ) ಉಗ್ರರು, ಸರ್ಕಾರ ಸ್ಥಳೀಯ ಉಗ್ರರನ್ನು ಹತ್ತಿಕ್ಕಲು ಶಸ್ತ್ರಧಾರಿ ವ್ಯಕ್ತಿಗಳನ್ನು ನೇಮಿಸಿದೆ ಎಂದು ಖಾರ್ಟೋಮ್ (ಸೂಡಾನ್ ರಾಜಧಾನಿ) ಮೇಲೆ ಆರೋಪಗಳ ಸುರಿಮಳೆಯನ್ನೇ ಸುರಿಸಿದ್ದಾರೆ. ಜನ್‌ಜಾವಿದ್ ಕಮಾಂಡರ್ ಮಹಮ್ಮದ್ ಹಮ್‌ದನ್ ಅವರು ತಮಗೆ ಶಸ್ತ್ರಾಸ್ತ್ರಗಳು ಮತ್ತು ಆದೇಶಗಳು ಸೂಡಾನ್ ಸರ್ಕಾರದಿಂದ ಬರುತ್ತವೆ ಎನ್ನುವುದನ್ನು ಒಪ್ಪಿಕೊಂಡಿದ್ದಾರೆ.
ಡರ್ಫರ್‌ನಲ್ಲಿ ಅಭಿಯಾನ ಕೈಗೊಳ್ಳುವ ಕುರಿತು ಆದೇಶ ಪಡೆಯಲು ಅಲ್ ಬಶೀರ್ ಅವರನ್ನು ಭೇಟಿಯಾಗಿರುವುದನ್ನು ಹಮ್‌ದನ್ ಬಹಿರಂಗ ಪಡಿಸಿದ್ದಾರೆ. ಡರ್ಫರ್‌ನಲ್ಲಿ ನಿರಂತರ ಹಿಂಸೆಗೆ ತಡೆಯೊಡ್ಡುವ ನಿಟ್ಟಿನಲ್ಲಿ ಶಾಂತಿ ಒಪ್ಪಂದ ಒಂದು ಪುಟ್ಟ ಹೆಜ್ಜೆ ಎನ್ನಬಹುದು. ಆದರೆ ಅದೇ ದಿನ ಚಡ್ ಸರ್ಕಾರ ಸೂಡಾನ್ ಮೇಲೆ; ಇತ್ತ ಸೂಡಾನ್ ಚಡ್ ಮೇಲೆ ಆರೋಪ ಪ್ರತ್ಯಾರೋಪ ಹೊರಿಸಿವೆ.
ಟಿಎಸ್‌ಐ
ಅಸದ್