|
ಪ್ರಪಂಚದ ಹೆಸರಾಂತ ಜ್ಯೋತಿಷಿ ಬೇಜಾನ್ ದಾರೂವಾಲ ಮತ್ತು ಕಾಲಜ್ಞಾನಿ ನಾಸ್ಟ್ರಡಾಮಸ್ ಅವರಿಗೆ ಸವಾಲು ಹಾಕುವ ಯತ್ನ ಇದಲ್ಲ. ಇದು ಕನಿಷ್ಠ ಪ್ರಜ್ಞೆ ಹೊಂದಿರುವುದಕ್ಕೆ ಸಂಬಂಧಿಸಿದ ವಿಷಯ. ಮೇ 2009 ಅಥವಾ ಡಿಸೆಂಬರ್ 2008 ಯಾವುದೇ ಸಂದರ್ಭದಲ್ಲಿ ಸಾರ್ವತ್ರಿಕ ಚುನಾವಣೆ ನಡೆಯಬಹುದು. ಸೋನಿಯಾ ಗಾಂಧಿ, ಮನಮೋಹನ್ ಸಿಂಗ್ ಮತ್ತು ಅವರ 'ಜನಸಾಮಾನ್ಯ'ರ ಕುರಿತಾದ ಸಲಹೆಗಾರರು ಯಾವಾಗ ಎಂದು ನಿರ್ಧರಿಸಿದ ಸಂದರ್ಭದಲ್ಲಿ ಮುಂದಿನ ಚುನಾವಣೆ ನಡೆಯುವುದು ಖಚಿತ.
ಕಳೆದ ಬಾರಿ ದೇಶದ ಅತ್ಯಂತ ದೊಡ್ಡ ರಾಷ್ಟ್ರೀಯ ಪಕ್ಷಗಳಾದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಸೇರಿ ಸರ್ಕಾರ ರಚಿಸುವಲ್ಲಿ ಅಗತ್ಯವಾದ 272 ಲೋಕಸಭಾ ಸ್ಥಾನ ಪಡೆಯಲು ಆಗಿರಲಿಲ್ಲ. 1996ರ ಇತಿಹಾಸ ಈ ಬಾರಿಯೂ ಪುನರಾವರ್ತನೆ ಆಗುವುದು ಖಚಿತ. ಕಾಂಗ್ರೆಸ್ ಅಥವಾ ಬಿಜೆಪಿ ಬೆಂಬಲಿತ ತೃತೀಯ ರಂಗ ಸರ್ಕಾರ ಮತ್ತೆ ಅಧಿಕಾರಕ್ಕೆ ಬರುವ ಸಾಧ್ಯತೆಯಿದೆ. ಎಚ್.ಡಿ. ದೇವೇಗೌಡ ಅವರಿಗಿಂತ 'ಬುದ್ಧಿವಂತ' ವ್ಯಕ್ತಿಯೊಬ್ಬರು ಈ ದೇಶದ ಪ್ರಧಾನಿ ಸ್ಥಾನದಲ್ಲಿ ಕೂರುವ ದಿನ ಹತ್ತಿರವಾಗುತ್ತಿದೆ. ನಿಮ್ಮ ಹಾಗೂ ನಮ್ಮ ಊಹೆ ಒಂದೇ ಆಗಿದ್ದರೆ ಅದು ಮಾಯಾವತಿ ಅಥವಾ ಲಾಲೂ ಪ್ರಸಾದ್ ಯಾದವ್ ಅಥವಾ ಶರದ್ ಪವಾರ್ ಪೈಕಿ ಒಬ್ಬರಾಗಿರುತ್ತಾರೆ. 20ಕ್ಕಿಂತ ಆಚೀಚಿನ ಸಂಖ್ಯೆಯ ಸ್ಥಾನವನ್ನು ಪಡೆದ ಎರಡು ಪ್ರಾದೇಶಿಕ ಪಕ್ಷಗಳು ತಮ್ಮ ವೈಯಕ್ತಿಕ ಇಷ್ಟಾನಿಷ್ಟಗಳ ಈಡೇರಿಕೆಗಾಗಿ ಕೇಂದ್ರ ಸರ್ಕಾರದ ಬುಡವನ್ನು ಅಲುಗಾಡಿಸುತ್ತಲೇ ಇರುತ್ತವೆ. ಆ ನಡುವೆ ರಾಷ್ಟ್ರೀಯ ವಾದ ಎಂಬ ವಿಷಯಕ್ಕೆ ಕೊನೆಯ ಪ್ರಾಶಸ್ತ್ಯ. "ಮುಂದಿನ ಲೋಕಸಭಾ ಚುನಾವಣೆಯ ನಂತರ ದೇಶದಲ್ಲಿ ರಾಜಕೀಯ ಅರಾಜಕತೆ ಮತ್ತು ನೆಪಮಾತ್ರದ ಸರ್ಕಾರಗಳು ಅಸ್ತಿತ್ವಕ್ಕೆ ಬಂದಲ್ಲಿ ಅಚ್ಚರಿ ಪಡಬೇಡಿ" ಎಂದು ಹೇಳುತ್ತಾರೆ ಖ್ಯಾತ ಟೆಲಿವಿಷನ್ ಆಂಕರ್ ಹಾಗೂ ಚುನಾವಣಾ ವಿಶ್ಲೇಷಣಾಕಾರ ಯಶವಂತ್ ದೇಶಮುಖ್.
ಇತಿಹಾಸದ ಪುಟಗಳನ್ನು ತೆರೆದು ಆ ವಿಷಯದ ಮುಖಾಮುಖಿಯಾಗೋಣ. 1990ರ ನಂತರ ಅಸ್ತಿತ್ವಕ್ಕೆ ಬಂದ ಕೇಂದ್ರ ಸರ್ಕಾರಗಳು ಮತ್ತು ಪ್ರಧಾನ ಮಂತ್ರಿಗಳನ್ನೇ ಉದಾಹರಣೆಯನ್ನಾಗಿ ತೆಗೆದುಕೊಳ್ಳೋಣ. ಅಧಿಕಾರದಲ್ಲಿ ಇರಬೇಕು ಎಂಬ ಒಂದೇ ಉದ್ದೇಶದಿಂದ ಮಿತ್ರ ಪಕ್ಷಗಳು ಮತ್ತು ಹೊರಗಿನಿಂದ ಬೆಂಬಲ ಘೋಷಿಸಿದ್ದ ಪಕ್ಷಗಳ ಒತ್ತೆಯಾಳುಗಳಂತೆ ಅವರು ಅಧಿಕಾರ ಚಲಾಯಿಸಿದರು. 1990ರಲ್ಲಿ ಪ್ರಧಾನಿಯಾಗಿದ್ದ ವಿ.ಪಿ. ಸಿಂಗ್, ಅವರದ್ದೇ ಮಂತ್ರಿಮಂಡಲದಲ್ಲಿ ಉಪ ಪ್ರಧಾನಿಯಾಗಿದ್ದ ದೇವಿಲಾಲ್ ಒತ್ತೆಯಾಳಾಗಿದ್ದರು. ಮಂಡಲ್ ಭೂತದ ಮೂಲಕ ವಿ.ಪಿ.ಸಿಂಗ್ ಸರ್ಕಾರವನ್ನು ಉರುಳಿಸಿದ ಕೀರ್ತಿ ದೇವಿಲಾಲ್ ಅವರಿಗೆ ಸಲ್ಲಬೇಕು. 1991ರಲ್ಲಿ ಪಿ.ವಿ. ನರಸಿಂಹ ರಾವ್ ಸರ್ಕಾರ ಅದರ ಅಸ್ತಿತ್ವ ಉಳಿಸಿಕೊಳ್ಳುವ ಸಲುವಾಗಿ ಸಂಸತ್ ಸದಸ್ಯರಿಗೆ ಲಂಚ ಕೊಟ್ಟ ಹೆಮ್ಮೆ ಹೊಂದಿದೆ. 1996ರಿಂದ 1998ರ ಅವಧಿಯಲ್ಲಿ ಅಸ್ತಿತ್ವದಲ್ಲಿದ್ದ ದೇವೇಗೌಡ ಮತ್ತು ಐ.ಕೆ. ಗುಜ್ರಾಲ್ ಸರ್ಕಾರಗಳ ಬಗ್ಗೆ ಹೆಚ್ಚಿಗೆ ಹೇಳದಿರುವುದು ಒಳಿತು. 1999 ಏಪ್ರಿಲ್‌ನಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರು ದೇಶದ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡ ಕೆಲವೇ ದಿನಗಳಲ್ಲಿ ಅವರ ಮಿತ್ರ ಪಕ್ಷದ ನಾಯಕಿ ಕಾಲೆಳೆದೇ ಬಿಟ್ಟಿದ್ದರು. ನಂತರ ಆರಂಭವಾಗಿದ್ದೇ ಎನ್‌ಡಿಎ ಆಡಳಿತ. ಆ ಸಂದರ್ಭದಲ್ಲಿ ಕೂಡ ವಾಜಪೇಯಿ ಅವರು ಮಿತ್ರ ಪಕ್ಷಗಳು ನೀಡಿದ ಹಿಂಸೆಯನ್ನು ತಾಳಿಕೊಂಡೇ ಜೀವನ ಸಾಗಿಸಿದರು. ಅದರಲ್ಲಂತೂ ಶಿವಸೇನೆ ಮತ್ತು ಡಿಎಂಕೆ ಪಕ್ಷದ ಮಿತ್ರರು ವಾಜಪೇಯಿ ಅವರನ್ನು ಸಾಕಷ್ಟು ಕಾಡಿದರು. ಇನ್ನೂ ಆರ್‌ಎಸ್‌ಎಸ್ ಅಂತೂ ಸಚಿವ ಸಂಪುಟದಲ್ಲಿ ಯಾರು ಇರಬೇಕು ಮತ್ತು ಯಾರು ಇರಬಾರದು ಎನ್ನುವುದನ್ನು ನಿರ್ಧರಿಸುವಷ್ಟರ ಮಟ್ಟಿಗೆ ಪ್ರಭಾವ ಬೀರಿತ್ತು. ಇನ್ನು ಈಗ ಅಸ್ತಿತ್ವದಲ್ಲಿರುವ ಯುಪಿಎ ಸರ್ಕಾರವಂತೂ ಪ್ರಕಾಶ್ ಕಾರಟ್ ನೇತೃತ್ವದ ಎಡಪಕ್ಷಗಳ ತಾಳಕ್ಕೆ ತಕ್ಕಂತೆ ಕುಣಿಯುತ್ತಿದೆ. "ಈಗಿನ ರಾಜಕೀಯ ವ್ಯವಸ್ಥೆ ನಮ್ಮಲ್ಲಿ ಸರಿಯಾಗಿ ಕಾರ್ಯ ನಿರ್ವಹಿಸುತ್ತಿಲ್ಲ" ಎಂದು ಈ ಲೇಖನಕ್ಕೆ ಸಂಬಂಧಿಸಿದಂತೆ ಅಂಕಣವೊಂದನ್ನು ಬರೆದಿರುವ ಹಿರಿಯ ಕಾಂಗ್ರೆಸ್ ಮುಖಂಡ ವಸಂತ ಸಾಠೆ ಹೇಳುತ್ತಾರೆ.
ಮುಂದಿನ ಚುನಾವಣೆಯಲ್ಲಿ ಪವಾಡ ಸಂಭವಿಸಿದಲ್ಲಿ ಮಾತ್ರ ಕಾಂಗ್ರೆಸ್ ಅಥವಾ ಬಿಜೆಪಿ ಪೈಕಿ ಒಂದು ಪಕ್ಷಕ್ಕೆ 200 ಲೋಕಸಭಾ ಸ್ಥಾನಗಳು ದೊರಕಬಹುದು. ಆನಂತರ ಪ್ರಾದೇಶಿಕ ಪಕ್ಷಗಳ ಕೃಪಾಕಟಾಕ್ಷವನ್ನು ಆಧರಿಸಿಯೇ ಈ ಪಕ್ಷಗಳು ಸಮ್ಮಿಶ್ರ ಸರ್ಕಾರ ರಚಿಸಲು ಮುಂದಾಗಬೇಕು. ಅದೂ ರಾಷ್ಟ್ರೀಯವಾದಕ್ಕೆ ಸಂಪೂರ್ಣ ತಿಲಾಂಜಲಿ ಇಟ್ಟು, ಪ್ರಾದೇಶಿಕ ಆಗು-ಹೋಗುಗಳನ್ನು ಪೂರೈಸುವ ಸಾಧನವಾಗಿ. ಭಾರತ ಮುಂಬರುವ ದಿನಗಳಲ್ಲಿ ಹಲವಾರು ಗಂಭೀರ ವಿಷಯಗಳನ್ನು ಎದುರಿಸಬೇಕಾದ ಈ ಸಂದರ್ಭದಲ್ಲಿ ಅಸ್ಥಿರ ಆಡಳಿತದ ಆಡಂಬೊಲವಾಗಿ ನಿಲ್ಲಲಿದೆ. ಅದರಲ್ಲಂತೂ ಕೆಲವು ವಿಷಯಗಳು ಮುಂಬರುವ ಕೇಂದ್ರ ಸರ್ಕಾರ ಹಾಗೂ ಮುಂದಿನ ಪ್ರಧಾನಿಯ ಪಾಲಿಗೆ ಅಗ್ನಿಪರೀಕ್ಷೆಯಾಗಿರುತ್ತವೆ. ರಾಜಕೀಯ ಅಸ್ಥಿರತೆಯಿಂದಾಗಿ ಅಂತಹ ಸವಾಲುಗಳನ್ನು ಒಂದು ದೇಶವಾಗಿ ನಾವು ಎದುರಿಸುವ ಸಾಮರ್ಥ್ಯ ಕಳೆದುಕೊಳ್ಳುತ್ತೇವೋ ಎಂಬ ಭಯ ಆವರಿಸುತ್ತಿದೆ. ಜಾಗತೀಕರಣದ ಈ ಹೊತ್ತಿನಲ್ಲಿ ಜಾಗತಿಕ ಶಕ್ತಿಗಳಿಗೆ ಭಾರತ ಸವಾಲೊಡ್ಡಬೇಕಾದರೆ ರಾಜಕೀಯವಾಗಿ ಸ್ಥಿರ ಸರ್ಕಾರ ಅತ್ಯಗತ್ಯ. ತೇಪೆ ಹಚ್ಚಿದಂತಹ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದರೆ, ಆ ಸರ್ಕಾರಕ್ಕೆ ಅಂತಹ ಎದೆಗಾರಿಕೆ ಇಲ್ಲದೇ ಹೋಗಬಹುದು. ರಾಷ್ಟ್ರೀಯವಾದ ಇಲ್ಲದ ಆಡಳಿತ ಕೊನೆಗೊಮ್ಮೆ ದೇಶವನ್ನು ಛಿದ್ರ ಮಾಡುವ ಮಟ್ಟಕ್ಕೂ ಬೆಳೆದು ನಿಲ್ಲಬಹುದು.
 ಪಂಜಾಬ್‌ನಲ್ಲಿ ಖಾಲೀಸ್ತಾನ ಚಳವಳಿಯನ್ನು ಹತ್ತಿಕ್ಕಿದ ಸೂಪರ್ ಕಾಪ್ ಕೆ.ಪಿ.ಎಸ್. ಗಿಲ್ "ಭಾರತದ ಹಲವಾರು ಪ್ರದೇಶಗಳಲ್ಲಿ ಸರ್ಕಾರದ ಪ್ರಭಾವ ಇರುವುದೇ ಇಲ್ಲ. ಸರ್ಕಾರಗಳು ಎಚ್ಚೆತ್ತು ಸೂಕ್ತ ಕ್ರಮ ಕೈಗೊಳ್ಳದೇ ಹೋದಲ್ಲಿ ಮುಂದೊಂದು ದಿನ ಅದು ವಿಭಜನೆಯ ದಿಕ್ಕಿನಲ್ಲಿ ಸಾಗಲೂಬಹುದು" ಎಂಬ ಆತಂಕ ವ್ಯಕ್ತಪಡಿಸಿದ್ದಾರೆ. ಇನ್ನು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ಕೂಡ ಅಸ್ಥಿರ ಸರ್ಕಾರದ ಅಸ್ಥಿರ ಆಡಳಿತ ವ್ಯತಿರಿಕ್ತ ಪರಿಣಾಮ ಬೀರುತ್ತದೆ.
ಎಡಪಕ್ಷಗಳು ಹಾಗೂ ಕಾಂಗ್ರೆಸ್ ನೆರವಿನಿಂದ ಮಾಯಾವತಿ ಭಾರತದ ಮುಂದಿನ ಪ್ರಧಾನ ಮಂತ್ರಿಯಾದರು ಎಂದಿಟ್ಟುಕೊಳ್ಳಿ. ಅದೇ ಸಂದರ್ಭದಲ್ಲಿ ಚೀನಾ ಆಕ್ರಮಣಕಾರಿ ಮನೋಭಾವ ತಾಳಿ ಅರುಣಾಚಲ ಪ್ರದೇಶ ಮತ್ತು ಸಿಕ್ಕಿಂ ಅನ್ನು ವಶಪಡಿಸಿಕೊಂಡಿತು ಎಂದುಕೊಳ್ಳಿ. ಚೀನಾವನ್ನು ಪ್ರೀತಿಸುವ ಪ್ರಕಾಶ್ ಕಾರಟ್ ಮತ್ತು ಸಿಪಿಐ(ಎಂ) ಎದುರಾಳಿಗಳ ಮೇಲೆ ಸೇನಾ ದಾಳಿ ನಡೆಸಲು ಮಾಯಾವತಿಗೆ ಅವಕಾಶ ಮಾಡಿಕೊಡುವರೇ? ಅಥವಾ ಶರದ್ ಪವಾರ್ ಅವರು ಭಾರತದ ಪ್ರಧಾನ ಮಂತ್ರಿಯಾದರು ಎಂದಿಟ್ಟುಕೊಳ್ಳಿ. ಅಭಿವೃದ್ಧಿ ಹೊಂದಿದ ದೇಶಗಳ ತೆಕ್ಕೆಯಲ್ಲಿರುವ ಡಬ್ಲ್ಯುಟಿಒ ಒಪ್ಪಂದಕ್ಕೆ ಸಂಬಂಧಿಸಿದಂತೆ ಭಾರತ ಹೋರಾಟ ಮಾಡಲೇಬೇಕಾದ ಪರಿಸ್ಥಿತಿ ಎದುರಾಯಿತು ಎಂದುಕೊಳ್ಳೋಣ. ಮಹಾರಾಷ್ಟ್ರದ ಸಕ್ಕರೆ ಕಾರ್ಖಾನೆ ಮತ್ತು ಡಿಸ್ಟಿಲರಿಗಳ ಸಮಸ್ಯೆ ಪರಿಹಾರ ಮಾಡುವ ನಿಟ್ಟಿನಲ್ಲಿ ತೋರಿದಷ್ಟೇ ಆಸಕ್ತಿಯನ್ನು ಪವಾರ್ ಡಬ್ಲ್ಯುಟಿಒ ಬಗ್ಗೆ ಕೂಡ ತೋರುವ ಮನಸ್ಸು ಮಾಡಿಯಾರೇ? ಬಿಸಿಸಿಐ ಆಗು-ಹೋಗುಗಳ ಬಗ್ಗೆ ಹಗಲು-ರಾತ್ರಿ ತಲೆ ಕೆಡಿಸಿಕೊಳ್ಳುವ ಪವಾರ್ ಅಷ್ಟೇ ಸಮಯವನ್ನು ಅಂತರ್ ರಾಷ್ಟ್ರೀಯ ಮಟ್ಟದಲ್ಲಿ ದೇಶದ ಹಿತ ಕಾಪಾಡಲು ವ್ಯಯ ಮಾಡುವರೇ ಎನ್ನುವುದು ಪ್ರಶ್ನಾರ್ಹ ವಿಷಯ. ಇಂತಹ ಯಾವುದೇ ಉದಾಹರಣೆಗಳನ್ನು ತೆಗೆದುಕೊಂಡರೂ, ರಾಷ್ಟ್ರದ ಹಿತಾಸಕ್ತಿಯನ್ನು ಯಾವುದೋ ಪ್ರಾದೇಶಿಕ ಹಿತಾಸಕ್ತಿಗಾಗಿ ಬಲಿ ಕೊಡುವ ಸನ್ನಿವೇಶ ಎದುರಾಗುವುದು ಸ್ಪಷ್ಟ. ಮುಂದಿನ ಚುನಾವಣೆಯಲ್ಲಿ ಯಾವುದೇ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರ ವಹಿಸಿಕೊಂಡರೂ ಇಂತಹ ಸನ್ನಿವೇಶದ ಸೃಷ್ಟಿಯಾಗುವುದು ಖಚಿತ.
ಪ್ರಪಂಚದೆಲ್ಲೆಡೆ ಪ್ರತಿಯೊಬ್ಬರೂ ಇಂತಹ ಒಂದು ಸಂಕಷ್ಟದ ಸನ್ನಿವೇಶ ಎದುರಾದಾಗ ಅದಕ್ಕೊಂದು ಪರಿಹಾರ ಹುಡುಕುವ ಯತ್ನ ಮಾಡುತ್ತಾರೆ. ಯಾವಾಗ ನಿರೀಕ್ಷಿಸಿದ ಫಲಿತಾಂಶ ಬರುವುದಿಲ್ಲವೋ ಆಗ ಜನಸಾಮಾನ್ಯರು ಮತ್ತು ಸರ್ಕಾರ ವ್ಯವಸ್ಥೆಯಲ್ಲಿ ಬದಲಾವಣೆ ತರಲು ಹಿಂಜರಿಯುವುದಿಲ್ಲ. ಈ ಹಿಂದೆ ಭಾರತ ಸರ್ಕಾರ ಕೂಡ ಇಂತಹ ಒಂದು ಬದಲಾವಣೆ ಮಾಡಿದೆ. ದೇಶಕ್ಕೆ ಸ್ವಾತಂತ್ರ್ಯ ಬಂದ ನಾಲ್ಕು ದಶಕಗಳ ನಂತರ ಸಮಾಜವಾದಿ ಮಾದರಿಯ ವ್ಯವಸ್ಥೆಯನ್ನು ಇಲ್ಲಿ ಅಳವಡಿಸಿಕೊಳ್ಳಲಾಯಿತು. 1980ರ ಹೊತ್ತಿಗೆ ಸಮಾಜವಾದಿ ಮಾದರಿ ನಿರೀಕ್ಷಿಸಿದ ಫಲ ನೀಡುವಲ್ಲಿ ವಿಫಲವಾಯಿತು. 1990-91ರಲ್ಲಿನ ಒಂದು ಆಘಾತ ನಮ್ಮ ಸರ್ಕಾರದ ದೃಷ್ಟಿಕೋನವನ್ನು ಬದಲಿಸಿತು. ಪರಿಣಾಮ ಮಾರುಕಟ್ಟೆ ಸ್ನೇಹಿ ಮಾದರಿ ಅಸ್ತಿತ್ವಕ್ಕೆ ಬಂತು. ಬದಲಾದ ಈ ಮಾದರಿಯ ಫಲಿತಾಂಶದ ಫಲವನ್ನು ಈಗ ಎಲ್ಲರೂ ಉಣ್ಣುತ್ತಿದ್ದಾರೆ.
ನಿರೀಕ್ಷಿಸಿದ ಫಲಿತಾಂಶ ನೀಡುತ್ತಿಲ್ಲ ಎಂಬ ಕಾರಣದಿಂದ ಒಂದು ಆರ್ಥಿಕ ವ್ಯವಸ್ಥೆಯನ್ನು ಬದಲಿಸಿ, ಆ ಮೂಲಕ ಯಶಸ್ಸು ಕಾಣಲು ಸಾಧ್ಯವಾದಲ್ಲಿ ನಾವೇಕೆ ನಮ್ಮ ರಾಜಕೀಯ ವ್ಯವಸ್ಥೆಯನ್ನು ಬದಲಿಸಬಾರದು? ನಮ್ಮ ದೇಶ ಏಕೆ 'ಭಾರತ ಸಂಯುಕ್ತ ಸಂಸ್ಥಾನ' (ಯುನೈಟೆಡ್ ಸ್ಟೇಟ್ಸ್ ಆಫ್ ಇಂಡಿಯಾ) ಆಗಿ ಬದಲಾಗಬಾರದು? ಈ ನಿಟ್ಟಿನಲ್ಲಿ ರಾಜಕೀಯ ಪಕ್ಷಗಳು, ಸಂವಿಧಾನ ತಜ್ಞರು ಮತ್ತು ದೇಶದ ಜನಸಾಮಾನ್ಯರು ಮುಕ್ತ ಮನಸ್ಸಿನ ಚರ್ಚೆ ನಡೆಸಬೇಕು ಎನ್ನುವುದೇ 'ದ ಸಂಡೆ ಇಂಡಿಯನ್' ಆಶಯ. ನಾವೇಕೆ ಅಧ್ಯಕ್ಷೀಯ ಮಾದರಿಯ ವ್ಯವಸ್ಥೆ ಅಳವಡಿಸಿಕೊಂಡು ರಾಜಕೀಯವಾಗಿ ಅಭಿವೃದ್ಧಿ ಹೊಂದಬಾರದು? ಎಂದು ಯೋಚಿಸಲೇಬೇಕಾದ ಕಾಲ ಸನ್ನಿಹಿತವಾಗಿದೆ. 'ದ ಸಂಡೆ ಇಂಡಿಯನ್' ಮಾತ್ರವಲ್ಲ. ಬಿಜೆಪಿ ಅಧ್ಯಕ್ಷ ರಾಜನಾಥ್ ಸಿಂಗ್ ಕೂಡ, "ಬ್ರಿಟಿಷ್ ಪ್ರಭಾವ ಹೊಂದಿದ, ವೆಸ್ಟ್ ಮಿನಿಸ್ಟರ್ ಮಾದರಿ ರಾಜಕೀಯ ವ್ಯವಸ್ಥೆ ನಮ್ಮ ದೇಶಕ್ಕೆ ಸೂಕ್ತವೋ ಅಥವಾ ಅಮೆರಿಕದ ಅಧ್ಯಕ್ಷೀಯ ಮಾದರಿಯ ರಾಜಕೀಯ ವ್ಯವಸ್ಥೆ ಸರಿಯಾದುದೋ ಎನ್ನುವುದರ ಬಗ್ಗೆ ನಮ್ಮ ಪಕ್ಷ ಯಾವುದೇ ಖಚಿತ ನಿರ್ಧಾರಕ್ಕೆ ಇನ್ನೂ ಬಂದಿಲ್ಲ. ಆದರೂ, ಈ ಬಗ್ಗೆ ಮುಕ್ತ ಚರ್ಚೆಯಾಗಬೇಕು ಎನ್ನುವುದನ್ನು ನಾನು ಒಪ್ಪುತ್ತೇನೆ" ಎಂದಿದ್ದಾರೆ.
ಈ ಕುರಿತಾಗಿ ಖಚಿತವಾದ ಚರ್ಚೆಗಳು ನಡೆದು ರಾಷ್ಟ್ರ ಮಟ್ಟದಲ್ಲಿ ಜನಮತ ಸಂಗ್ರಹವಾಗಿ, ಆನಂತರ ಭಾರತ ಅಧ್ಯಕ್ಷೀಯ ಪದ್ಧತಿಯನ್ನು ಅಳವಡಿಸಿಕೊಂಡಿತು ಎಂದು ಭಾವಿಸಿ. ಆಗ ಎಂತಹ ಬದಲಾವಣೆಗಳನ್ನು ನಿರೀಕ್ಷಿಸಬಹುದು? 2009ರ ಚುನಾವಣೆಯಲ್ಲಿ ಮನಮೋಹನ್ ಸಿಂಗ್ ಮತ್ತು ಲಾಲ್ ಕೃಷ್ಣ ಅಡ್ವಾಣಿ ಭಾರತ ಸಂಯುಕ್ತ ಸಂಸ್ಥಾನದ ಅಧ್ಯಕ್ಷೀಯ ಚುನಾವಣೆಯಲ್ಲಿ ಪರಸ್ಪರ ಮುಖಾಮುಖಿಯಾಗಿ ನಿಲ್ಲುವರು. 2014ರಲ್ಲಿ ರಾಹುಲ್ ಗಾಂಧಿ ಮತ್ತು ನರೇಂದ್ರ ಮೋದಿ ಅವರ ನಡುವೆ ಜಿದ್ದಾ ಜಿದ್ದಿನ ಸ್ಪರ್ಧೆ ಏರ್ಪಡಬಹುದು. ಈಗ ಪರಿಸ್ಥಿತಿ ಎಂತಹ ಮಟ್ಟಕ್ಕೆ ಹೋಗಿದೆ ಎಂದರೆ ಕಾಂಗ್ರೆಸ್ ನಾಯಕರು ಕೂಡ ಅಧ್ಯಕ್ಷೀಯ ಮಾದರಿ ಬಗ್ಗೆ ಒಲವು ತೋರಲಾರಂಭಿಸಿದ್ದಾರೆ. ಕಾಂಗ್ರೆಸ್‌ನ ಯುವ ಸಂಸದ ಮಿಲಿಂದ್ ದಿಯೋರ, "ಸಂಪೂರ್ಣ ಅವಧಿ ಮುಗಿಸುವ ಸುಸ್ಥಿರ ಸರ್ಕಾರ ಸ್ಥಾಪನೆಯ ನಿಟ್ಟಿನಲ್ಲಿ ಭಾರತ ಯೋಚನೆ ಮಾಡಬೇಕು. ಆ ನಿಟ್ಟಿನಲ್ಲಿ ಅಧ್ಯಕ್ಷೀಯ ಪದ್ಧತಿ ಕೂಡ ಒಂದು" ಎನ್ನುತ್ತಾರೆ.
ಅಧ್ಯಕ್ಷೀಯ ಪದ್ಧತಿಯ ಮೊದಲ ಲಾಭವೆಂದರೆ ದೇಶದ ಮುಖಂಡ ಯಾರು ಎನ್ನುವುದನ್ನು ಜನರೇ ನೇರವಾಗಿ ಆಯ್ಕೆ ಮಾಡುತ್ತಾರೆ. ಜನರ ಭಾವನೆಗಳಿಗೆ ಅರ್ಥಾತ್ ಮತದಾರನ ಭಾವನೆಗಳಿಗೆ ಅನ್ವಯವಾಗಿ ಒಬ್ಬರು ದೇಶದ ಅಧ್ಯಕ್ಷರಾಗಿ ಆಯ್ಕೆಗೊಳ್ಳುತ್ತಾರೆ. ಪ್ರಸಕ್ತ ಚುನಾವಣಾ ಪದ್ಧತಿಯ ಬಗ್ಗೆ ಖ್ಯಾತ ಪತ್ರಕರ್ತ ಅರುಣ್ ಶೌರಿ ಯಾವಾಗಲೂ ಒಂದು ಮಾತನ್ನು ಹೇಳುತ್ತಲೇ ಇರುತ್ತಾರೆ. "ಈಗಿನ ಚುನಾವಣಾ ಮಾದರಿ ಎಂತಹ ವಿಪರ್ಯಾಸದ ಆಗರ ಎಂದರೆ 1947ರಿಂದ ಇದುವರೆಗೆ ಅಧಿಕಾರಕ್ಕೆ ಬಂದ ಯಾವುದೇ ಪಕ್ಷ ಸಂಪೂರ್ಣ ಜನಮತದ ಬೆಂಬಲ ಮೇಲೆ ಆರಿಸಿ ಬಂದಿಲ್ಲ. ದೇಶದ ಹೆಚ್ಚು ಜನರು ವಿರುದ್ಧವಾಗಿ ಮತ ಚಲಾಯಿಸಿದ ಪಕ್ಷಗಳೇ ಇಲ್ಲಿ ಅಧಿಕಾರ ನಡೆಸಿವೆ. ಉದಾಹರಣೆಗೆ ಈಗಿನ ಲೋಕಸಭೆಯನ್ನೇ ತೆಗೆದುಕೊಳ್ಳಿ. ಕಳೆದ ಚುನಾವಣೆಯಲ್ಲಿ ಮತ ಚಲಾಯಿಸಿದವರ ಪೈಕಿ ಶೇಕಡಾ 26 ಮತದಾರರು ಕಾಂಗ್ರೆಸ್ ಪರ ಒಲವು ವ್ಯಕ್ತಪಡಿಸಿದ್ದಾರೆ. ಒಟ್ಟು ಮತದಾರರ ಸಂಖ್ಯೆಯನ್ನು ತೆಗೆದುಕೊಂಡಲ್ಲಿ ಅದು ಶೇ. 10ರಷ್ಟು ಬೆಂಬಲ ಮಾತ್ರ. ಅದರರ್ಥ ದೇಶದ ಅರ್ಹ ಮತದಾರರ ಪೈಕಿ ಶೇ. 90ರಷ್ಟು ಮಂದಿ ಕಾಂಗ್ರೆಸ್‌ಗೆ ವಿರೋಧವಾಗಿ ಇದ್ದಾರೆ ಎಂದು. ಯುಪಿಎ ಸರ್ಕಾರದಲ್ಲಿ ಭಾಗಿಯಾಗಿರುವ ಎಲ್ಲ ಪಕ್ಷಗಳನ್ನು ಒಟ್ಟಾಗಿಸಿಕೊಂಡು ಶೇಕಡಾವಾರು ಮತಗಳನ್ನು ಲೆಕ್ಕ ಹಾಕಿದರೂ ಆ ಮೊತ್ತ ಶೇ. 30ನ್ನೂ ದಾಟುವುದಿಲ್ಲ. ಇದರರ್ಥ ದೇಶದ ಶೇ. 70ರಷ್ಟು ಅರ್ಹ ಮತದಾರರು 'ಬೇಡ' ಎಂದು ಹೇಳಿದರೂ ಯುಪಿಎ ಮೈತ್ರಿಕೂಟ ಅಧಿಕಾರದ ಗದ್ದುಗೆಯಲ್ಲಿದೆ. ನಾಲ್ಕು ವರ್ಷಗಳಿಂದ ಈ ಸರ್ಕಾರ ದೇಶವನ್ನು ಆಳುತ್ತಲಿದೆ. ಅದಕ್ಕಿಂತಲೂ ವಿಪರ್ಯಾಸವೆಂದರೆ ಜನಮತದಿಂದ ನೇರವಾಗಿ ಆಯ್ಕೆಯಾಗದ ಮನಮೋಹನ್ ಸಿಂಗ್ ಅವರು ಪ್ರಧಾನ ಮಂತ್ರಿ ಸ್ಥಾನದಲ್ಲಿ ಕೂತಿದ್ದಾರೆ. ಅವರು ದೇಶದ ಯಾವುದೇ ಲೋಕಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿಲ್ಲ. ಈ ಹಿಂದೆ ಎನ್‌ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಕೂಡ ಇದೇ ಪರಿಸ್ಥಿತಿ ಇತ್ತು. ಇನ್ನು ಮುಂದೆ ಕೂಡ ಯಾವುದೇ ಮೈತ್ರಿಕೂಟ ಅಧಿಕಾರಕ್ಕೆ ಬಂದರೂ ಇದೇ ಪರಿಸ್ಥಿತಿ ಮುಂದುವರಿಯಲಿದೆ. ಇನ್ನು ರಾಜ್ಯ ಸರ್ಕಾರಗಳು ಮತ್ತು ವಿಧಾನಸಭೆಗಳದ್ದೂ ಕೂಡ ಇದೇ ಕಥೆ. ಆದರೆ, ಪ್ರಧಾನ ಮಂತ್ರಿ ಅಥವಾ ಅಧ್ಯಕ್ಷ ಹಾಗೂ ಮುಖ್ಯಮಂತ್ರಿ ಅಥವಾ ರಾಜ್ಯಪಾಲರನ್ನು ಜನರೇ ನೇರವಾಗಿ ಆರಿಸುವಂತಾದಲ್ಲಿ ಇಂತಹ ಅಸಂಗತಗಳನ್ನು ತಡೆಗಟ್ಟಬಹುದು.
ಇದಲ್ಲದೇ ಅಧ್ಯಕ್ಷೀಯ ಪದ್ಧತಿಯಿಂದ ಇನ್ನೂ ಹಲವಾರು ಅನುಕೂಲಗಳು ಇವೆ. ಈಗಿನ ಪರಿಸ್ಥಿತಿಯನ್ನು ಅವಲೋಕಿಸಿದರೆ ನಿಪುಣರಾದ ವ್ಯಕ್ತಿಗಳನ್ನು ಸಚಿವ ಸಂಪುಟಕ್ಕೆ ಆಯ್ಕೆ ಮಾಡಿಕೊಳ್ಳಲು ಭಾರತದ ಪ್ರಧಾನಮಂತ್ರಿಗಳು ಕಷ್ಟ ಪಡುತ್ತಾರೆ. ಇದು ಏಕೆಂದರೆ ಸಂವಿಧಾನದ ಪ್ರಕಾರ ಲೋಕಸಭೆ ಅಥವಾ ರಾಜ್ಯಸಭಾ ಸದಸ್ಯರನ್ನು ಮಾತ್ರ ಸಚಿವರನ್ನಾಗಿ ಆಯ್ಕೆ ಮಾಡಬಹುದು. ಈಗ ಅಪರಾಧಿಗಳು, ಮಾಫಿಯ, ಭ್ರಷ್ಟಾಚಾರಿಗಳು ಭಾರತದ ರಾಜಕಾರಣದ ಹೈಜಾಕ್ ಮಾಡಿಬಿಟ್ಟಿದ್ದಾರೆ. ಆ ಕಾರಣದಿಂದ ಯಾವೊಬ್ಬ ನಿಪುಣ ವ್ಯಕ್ತಿಯೂ ರಾಜಕಾರಣವನ್ನು ವೃತ್ತಿಪರವಾಗಿ ಸ್ವೀಕರಿಸಲು ಎಂದೂ ಮುಂದಾಗುವುದಿಲ್ಲ. ಅದೇ ಅಧ್ಯಕ್ಷೀಯ ಪದ್ಧತಿ ಇಲ್ಲಿ ಜಾರಿಗೆ ಬಂತು ಎಂದುಕೊಳ್ಳಿ. ಚುನಾಯಿತಗೊಂಡ ಭಾರತ ಸಂಯಕ್ತ ಸಂಸ್ಥಾನದ ಅಧ್ಯಕ್ಷರಿಗೆ ಬೇರೆ, ಬೇರೆ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ, ಅರ್ಹ ವ್ಯಕ್ತಿಗಳನ್ನು ಅವರ ಸಂಪುಟದಲ್ಲಿ ಸೇರಿಸಿಕೊಳ್ಳುವ ಸ್ವಾತಂತ್ರ್ಯ ಇರುತ್ತದೆ. ಒಮ್ಮೆ ಒಂದು ಕನಸು ಕಂಡು ಬಿಡೋಣ: ಮುಂದಿನ ಬಾರಿ ಮನಮೋಹನ್ ಸಿಂಗ್ ಅಥವಾ ಎಲ್.ಕೆ. ಅಡ್ವಾಣಿ ಅಧ್ಯಕ್ಷರಾಗಿ ಆಯ್ಕೆಯಾದರು ಎಂದುಕೊಳ್ಳಿ. ಇಬ್ಬರ ಪೈಕಿ ಯಾರೇ ಅಧ್ಯಕ್ಷರಾದರೂ ನಾರಾಯಣ ಮೂರ್ತಿ ಅವರನ್ನು ಮಾಹಿತಿ ತಂತ್ರಜ್ಞಾನ ಮತ್ತು ದೂರ ಸಂಪರ್ಕ ಸಚಿವರನ್ನಾಗಿ; ರತನ್ ಟಾಟಾ ಅವರನ್ನು ಹಣಕಾಸು ಸಚಿವರನ್ನಾಗಿ; ಮೇಧಾ ಪಾಟ್ಕರ್ ಅವರನ್ನು ಪುನವಸತಿ ಖಾತೆ ಸಚಿವರನ್ನಾಗಿ; ಅರುಣಾ ರಾಯ್ ಅವರನ್ನು ಸಮಾಜ ಕಲ್ಯಾಣ ಸಚಿವರನ್ನಾಗಿ ಆಯ್ಕೆ ಮಾಡಿಕೊಳ್ಳುವ ಅವಕಾಶ ಇರುತ್ತದೆ. ಮುಂದಿನ ದಶಕದಲ್ಲಿ ರಾಹುಲ್ ಗಾಂಧಿ ಅಧ್ಯಕ್ಷರಾಗಿ ಆಯ್ಕೆಯಾದಲ್ಲಿ ಯುವ ನಾಯಕರ ಪಡೆಯನ್ನು ಅವರು ಸಚಿವ ಸಂಪುಟಕ್ಕೆ ಸೇರಿಸಿಕೊಳ್ಳುವ ಅವಕಾಶ ಸಿಗುತ್ತದೆ. 21ನೇ ಶತಮಾನದಲ್ಲಿ ಭಾರತದ ಆಗು-ಹೋಗುಗಳ ಬಗ್ಗೆ ಕಿಂಚಿತ್ತೂ ಅರಿವಿಲ್ಲದ ವ್ಯಕ್ತಿಗಳ ಬದಲು ಈ ಕಾಲದ ಬಗ್ಗೆ ಸ್ಪಂದನೆ ಇರುವ ಯುವಕರನ್ನು ದೇಶ ಮುನ್ನಡೆಸುವ ಕಾಯಕದಲ್ಲಿ ತೊಡಗಿಸಿಕೊಳ್ಳುವಂತೆ ಮಾಡುವ ಅವಕಾಶ ಇದರಿಂದ ಒದಗಿ ಬರುತ್ತದೆ. ಈ ಹಿಂದೆ ಮನೋಹರ್ ಜೋಷಿ ಅವರು ಜವಾಬ್ದಾರಿ ಹೊತ್ತಿದ್ದ ಹಾಗೂ ಈಗ ಅರ್ಜುನ್ ಸಿಂಗ್ ಜವಾಬ್ದಾರಿ ಹೊತ್ತಿರುವ ಕೇಂದ್ರ ಮಾನವ ಸಂಪನ್ಮೂಲ ಖಾತೆ ಜ್ಯೋತಿರಾದಿತ್ಯ ಸಿಂಧಿಯ ಅವರಂತಹ ಪ್ರತಿಭಾನ್ವಿತ ಯುವ ಮುಖಂಡರ ಕೈಗೆ ಸಿಕ್ಕರೆ ಏನಾಗಬಹುದು? ನೀವೇ ಯೋಚಿಸಿ.
ಭಾರತದ ಪ್ರಜಾಪ್ರಭುತ್ವ ಹಾಗೂ ಸಾಮಾಜಿಕ ವ್ಯವಸ್ಥೆಯ ಉನ್ನತಿಯ ನಿಟ್ಟಿನಲ್ಲಿ ಈ ಮೂರನೇ ಉಪಯೋಗ ಬಹಳ ಮಹತ್ವದ್ದು. ಭಾರತ ಸಂಯುಕ್ತ ಸಂಸ್ಥಾನದಲ್ಲಿ ಅಧಿಕಾರಶಾಹಿಗಳನ್ನೂ ಜನರೇ ಆಯ್ಕೆ ಮಾಡುವ ಯತ್ನ ಕೂಡ ಮಾಡಬಹುದು. ಮುಖ್ಯವಾಗಿ ಪೊಲೀಸ್ ಕಮಿಷನರ್, ಜಿಲ್ಲಾ ನ್ಯಾಯಾಧೀಶ, ಜಿಲ್ಲಾಧಿಕಾರಿ, ತಹಶೀಲ್ದಾರ್ ಮತ್ತು ಪ್ರಮುಖ ಹುದ್ದೆಯಲ್ಲಿರುವ ಅಧಿಕಾರಿಗಳನ್ನು ಜನರೇ ನೇರವಾಗಿ ಆಯ್ಕೆ ಮಾಡಬೇಕು. ಈಗಿನ ಪದ್ಧತಿಯಲ್ಲಿ ದೇಶದಲ್ಲಿನ ಸಾಮಾಜಿಕ ಅಭಿವೃದ್ಧಿ ಹಾಗೂ ಸಮಾನತೆಗೆ ಅಡ್ಡಗಾಲಾಗಿರುವುದು ಅಧಿಕಾರಶಾಹಿ. ಸಾರ್ವಜನಿಕರ ಸೇವೆಗೆ ನಾವಿರುವುದು ಎನ್ನುವುದನ್ನು ಸಂಪೂರ್ಣವಾಗಿ ಮರೆತಿರುವ ಅಧಿಕಾರಶಾಹಿ ಯಾವುದೇ ಉತ್ತರದಾಯಿತ್ವ ಇಲ್ಲದಂತೆ ವರ್ತಿಸುತ್ತಿದೆ. 'ಸರ್ಕಾರಿ ಬಾಬು'ಗಳು ಸಾಮಾಜಿಕ ಅಭಿವೃದ್ಧಿಗಾಗಿ ಮೀಸಲಿಟ್ಟ ಹಣವನ್ನು ನುಂಗಿ ನೀರು ಕುಡಿಯುತ್ತಿದ್ದಾರೆ. ಉದಾಹರಣೆಗೆ ಒಬ್ಬ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ಜನರೇ ನೇರವಾಗಿ ಮತ ಚಲಾಯಿಸಿ ಚುನಾಯಿಸಿದರು ಎಂದುಕೊಳ್ಳಿ. ಆ ಅಧಿಕಾರಿಯನ್ನು ಭೇಟಿ ಮಾಡಲು ಜನರು ಚಡಪಡಿಸಬೇಕಾದ ಪ್ರಮೇಯ ಆಗ ಬರಲಾರದು. ಶ್ರೀಮಂತ ಅಪರಾಧಿಗಳ ವಿರುದ್ಧ ಈಗಿನಂತೆ ಆ ಅಧಿಕಾರಿ ಕ್ರಮ ತೆಗೆದುಕೊಳ್ಳದೇ ಇರಲಾಗುವುದಿಲ್ಲ. ಒಬ್ಬ ಗ್ರಾಮ ಲೆಕ್ಕಾಧಿಕಾರಿಯನ್ನು ಮತದಾನದ ಮೂಲಕ ಆಯ್ಕೆ ಮಾಡಿದ್ದಲ್ಲಿ, ಯಾವುದೇ ನಾಚಿಕೆಯಿಲ್ಲದೇ ಆತ ಲಂಚ ಕೇಳಲು ಮುಂದಾಗುತ್ತಾನೆಯೇ? ಈ ಎಲ್ಲ ಕಾರಣಗಳಿಂದಲೇ ಅಧ್ಯಕ್ಷೀಯ ಪದ್ಧತಿ ದೇಶದಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ತರಲಿದೆ ಎಂದು 'ದ ಸಂಡೆ ಇಂಡಿಯನ್' ನಂಬುತ್ತಿದೆ.
ಈ ನಡುವೆಯೂ ಭಾರತದ ಹಲವಾರು ತಜ್ಞರು ಅಧ್ಯಕ್ಷೀಯ ಪದ್ಧತಿ ನಮಗೆ ಸೂಕ್ತವಾದುದಲ್ಲ ಎಂದು ವಾದಿಸುತ್ತಾರೆ. ಸಂವಿಧಾನ ತಜ್ಞ ಸುಭಾಷ್ ಕಶ್ಯಪ್ ಈಗಿರುವ ರಾಜಕೀಯ ವ್ಯವಸ್ಥೆಯೇ ನಮ್ಮ ದೇಶಕ್ಕೆ ಸೂಕ್ತವಾದದ್ದು ಎನ್ನುತ್ತಾರೆ. "ಅಮೆರಿಕದ ಅಧ್ಯಕ್ಷೀಯ ಪದ್ಧತಿ ನಮಗೆ ಹೊಂದುವುದಿಲ್ಲ. ಆ ಪದ್ಧತಿ ಜಾರಿಯಾದಲ್ಲಿ ಯಾವಾಗಲೂ ಉತ್ತರ ಪ್ರದೇಶ ಅಥವಾ ಅದರಂತಹ ದೊಡ್ಡ ರಾಜ್ಯಗಳ ಯಾವುದಾದರೂ ಒಬ್ಬ ಪ್ರತಿನಿಧಿ ನಮ್ಮ ದೇಶದ ಅಧ್ಯಕ್ಷರಾಗಿ ಆಯ್ಕೆಯಾಗುತ್ತಿರುತ್ತಾರೆ. ಈಗಿನ ರಾಜಕೀಯ ವ್ಯವಸ್ಥೆ ನಮ್ಮ ಮಟ್ಟಿಗೆ ಅತ್ಯುತ್ತಮವಾದದ್ದು" ಎನ್ನುವುದು ಸಮಾಜವಾದಿ ಪಕ್ಷದ ಸಂಸತ್ ಸದಸ್ಯರಾದ ನೀರಜ್ ಶೇಖರ್ ಅವರ ಅಂಬೋಣ.
ಕಶ್ಯಪ್ ಮತ್ತು ಶೇಖರ್ ಕಾಳಜಿ ಎಂತಹುದು ಎಂಬ ಸ್ಪಷ್ಟ ಅರಿವು 'ದ ಸಂಡೆ ಇಂಡಿಯನ್'ಗೆ ಇದೆ. ಅಧ್ಯಕ್ಷೀಯ ಪದ್ಧತಿ ಸಂಪೂರ್ಣವಾಗಿ ನಮ್ಮ ದೇಶಕ್ಕೆ ಹೊಂದಿಕೊಳ್ಳುತ್ತದೆ ಎಂದು ನಾವು ವಾದ ಮಾಡುತ್ತಿಲ್ಲ. ಯಾವುದೇ ಒಂದು ವ್ಯವಸ್ಥೆ ನೂರಕ್ಕೆ ನೂರರಷ್ಟು ಸಂಪೂರ್ಣವಾಗಿ ಇರುವುದಿಲ್ಲ. ಪ್ರಜಾಪ್ರಭುತ್ವ ಶೇಕಡಾ ನೂರರಷ್ಟು ಪಕ್ಕಾ ವ್ಯವಸ್ಥೆ ಎಂದು ಯಾವುದೇ ಪ್ರಜ್ಞಾವಂತ ಒಪ್ಪಿಕೊಳ್ಳುವುದಿಲ್ಲ. ಆದರೆ, ಅದು ಸರ್ವಾಧಿಕಾರಕ್ಕಿಂತ ಉತ್ತಮ ಎಂದು ಒಪ್ಪಿಕೊಳ್ಳಲೇಬೇಕು. ಬಂಡವಾಳಶಾಹಿ ಪದ್ಧತಿ ಅತ್ಯುತ್ತಮ ಆರ್ಥಿಕ ವ್ಯವಸ್ಥೆ ಅಲ್ಲದಿದ್ದರೂ ಅದು ಕಮ್ಯುನಿಸಂಗಿಂತ ಉತ್ತಮ. ಆಗಾಗ ಸಮಾಜ ಮತ್ತು ದೇಶ ಕಾಲಕ್ಕೆ ತಕ್ಕಂತೆ ಬದಲಾವಣೆಗಳತ್ತ ಮುಖ ಮಾಡಲೇಬೇಕು. ಭಾರತದ ಮಟ್ಟಿಗೆ ಹೇಳುವುದಾದರೆ ಈಗ ಬದಲಾವಣೆ ಅಗತ್ಯ.
ಟಿಎಸ್‌ಐ
|