ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಆರ್ಥಿಕ ಬಿಕ್ಕಟ್ಟು  
 
ವಿವೇಚನೆ ಇಲ್ಲದ ಪರಿಹಾರ ಕ್ರಮ
 

ಕುಸಿತ ಕಂಡ ಹಣಕಾಸು ಸಂಸ್ಥೆಗಳನ್ನು ರಕ್ಷಿಸುವ ಕ್ರಮಕ್ಕೆ ತೆರಿಗೆದಾರರು ಭಾರಿ ಮೊತ್ತವನ್ನೇ ತೆರಬೇಕಿದೆ

ಪಾಲ್ ಕ್ರುಗ್ಮನ್

ಅರ್ಥಶಾಸ್ತ್ರಜ್ಞ,
’ದ ನ್ಯೂಯಾರ್ಕ್ ಟೈಮ್ಸ್’ ಅಂಕಣಕಾರ

ಇಗೋ ಇಲ್ಲಿದೆ ನೋಡಿ: ಕಲ್ಪನಾತೀತವಾದುದೆಂದರೆ ಅನಿವಾರ್ಯವಾಗುವುದು. ಮಾಜಿ ಹಣಕಾಸು ಕಾರ್ಯದರ್ಶಿ ರಾಬರ್ಟ್ ರೂಬಿನ್ ಮತ್ತು ಅಂತರ್ ರಾಷ್ಟ್ರೀಯ ಹಣಕಾಸು ನಿಧಿಯ ಉನ್ನತ ಅಧಿಕಾರಿ ಜಾನ್ ಲಿಪ್‌ಸ್ಕಿ ಅವರಿಬ್ಬರೂ ಅಮೆರಿಕದ ಹಣಕಾಸು ದುಸ್ಥಿತಿ ಸರಿಪಡಿಸಲು ಸಾರ್ವಜನಿಕ ನಿಧಿಯ ಅನಿವಾರ್ಯತೆ ಇದೆ ಎಂದು ಕಳೆದ ವಾರ ಸಲಹೆ ನೀಡಿದ್ದಾರೆ. ತಾನು ದಿವಾಳಿ ಎದ್ದ ಹಣಕಾಸು ಸಂಸ್ಥೆಗಳ ರಕ್ಷಣಾ ಕ್ರಮದ ಬಗ್ಗೆ ಮಾತನಾಡುತ್ತಿಲ್ಲ ಎಂದು ಲಿಪ್‌ಸ್ಕಿ ಹೇಳಿದರೂ ಆತ ಮಾತನಾಡಿದ್ದೆಲ್ಲಾ ಆ ವಿಷಯದ ಕುರಿತಾಗಿಯೇ. ಈಗಿನ ಹಣಕಾಸು ಕಾರ್ಯದರ್ಶಿ ಹೆನ್ರಿ ಪಾಲ್ಸನ್ ಅವರು, ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಸಾರ್ವಜನಿಕರ ಹಣ ಬಳಸಿಕೊಳ್ಳುವ ಯಾವುದೇ ಪ್ರಸ್ತಾಪವೂ 'ಯೋಗ್ಯವಲ್ಲ' ಎಂದು ಈಗಲೂ ಹೇಳುತ್ತಾರೆ, ನಿಜ. ಆದರೆ ಆ ಹೇಳಿಕೆಗಳೆಲ್ಲವೂ ಆರ್ಥಿಕ ಪರಿಸ್ಥಿತಿ ಕುರಿತ ಅವರ ಈ ಹಿಂದಿನ ಹೇಳಿಕೆಗಳಷ್ಟೇ ವಿಶ್ವಾಸಾರ್ಹವಾದವು. ಹೀಗಾಗಿ ನಾವಿಲ್ಲಿ ಕೇಳಲೇಬೇಕಾದ ಪ್ರಶ್ನೆ ಎಂದರೆ: ಆರ್ಥಿಕ ಬಿಕ್ಕಟ್ಟನ್ನು ಪರಿಹರಿಸಲು ಮುಂದಾಗಿರುವ ಫೆಡರಲ್ ರಿಸರ್ವ್ ಬ್ಯಾಂಕ್, ಆರ್ಥಿಕ ಬಿಕ್ಕಟ್ಟಿಗೆ ಕಾರಣರಾದವರನ್ನು ರಕ್ಷಿಸಲು ಪ್ರಯತ್ನಿಸುತ್ತಿಲ್ಲ ಎನ್ನುವುದಕ್ಕೆ ಭರವಸೆ ಏನು? ಅದಕ್ಕೂ ಮುನ್ನ, ಆರ್ಥಿಕ ವ್ಯವಸ್ಥೆಯ ರಕ್ಷಣಾ ಕ್ರಮ ಅದೇಕೆ ಅನಿವಾರ್ಯವಾಯಿತು ಎಂದು ಚರ್ಚಿಸೋಣ. 2002-2007ರ ನಡುವೆ ಖಾಸಗಿ ವಲಯದಲ್ಲಿ 'ದೇಸಿ ಬೆಲೆ ಮಾತ್ರ ಏರಿಕೆಯಾಗಬೇಕು' ಎಂಬ ನಂಬಿಕೆ ಚಾಲ್ತಿಯಲ್ಲಿತ್ತು. ಹಣಕಾಸು ವಲಯದ ನವೀನ ವಿಧಾನಗಳು ಅಪಾಯಕಾರಿ ಅಂಶಗಳಿಂದ ಮುಕ್ತವಾಗಿತ್ತು. ಇದೇ ಅವಧಿಯಲ್ಲಿ ಬಂಡವಾಳ ಹೂಡುವುದರಿಂದ ಯಾವುದೇ ಅಪಾಯ ಇಲ್ಲ ಎಂಬ ಸಲಹೆ ಚಾಲ್ತಿಗೆ ಬಂತು. ಇದರಿಂದ ವ್ಯಾಪಕವಾಗಿ ಹಣ ಹೂಡುವ, ಸಾಲ ನೀಡುವ ಸಂಪ್ರದಾಯ ಆರಂಭವಾಯಿತು. ಇದೇ ಸಂದರ್ಭದಲ್ಲಿ ರಾಜಕೀಯ ವಲಯದಲ್ಲೂ ತಪ್ಪು ನಂಬಿಕೆಗಳು ಮೂಡಿದವು. ಬುಷ್ ಆಡಳಿತದಲ್ಲಿದ್ದ ಅಲನ್ ಗ್ರೀನ್‌ಸ್ಪಾನ್ ಮತ್ತು ಆತನ ಬೆಂಬಲಿಗರು, 'ಮಾರುಕಟ್ಟೆ ಯಾವಾಗಲೂ ತನ್ನಷ್ಟಕ್ಕೇ ಸರಿಯಾದ ಮಾರ್ಗದಲ್ಲಿ ಸಾಗುತ್ತದೆ. ಅದನ್ನು ನಿಯಂತ್ರಿಸುವುದೇ ತಪ್ಪು' ಎಂಬ ಅಭಿಪ್ರಾಯ ಹೊಂದಿದ್ದರು. ಇದರಿಂದ ಅಪಾಯಕಾರಿ ಸೂಚನೆಯನ್ನು ಕೇಂದ್ರದ ಆಡಳಿತ ನಿರ್ಲಕ್ಷಿಸಿಬಿಟ್ಟಿತು. ಗ್ರೀನ್‌ಸ್ಪಾನ್ ಅವರು ಎಲ್ಲಾ ಟೀಕೆಗಳ ಹೊರತಾಗಿ ಈಗಲೂ, 'ಪ್ರಸಕ್ತ ಆರ್ಥಿಕ ಬಿಕ್ಕಟ್ಟಿಗೆ ಅತ್ಯಂತ ವಿಶ್ವಾಸಾರ್ಹ ಪರಿಹಾರ ಕ್ರಮ ಎಂದರೆ ನಿಯಂತ್ರಣವಿಲ್ಲದ ಮಾರುಕಟ್ಟೆ ಮತ್ತು ಮುಕ್ತ ಸ್ಪರ್ಧೆ' ಎಂದೇ ಅಭಿಪ್ರಾಯಪಡುತ್ತಾರೆ. ಅದಿರಲಿ. ನಿಜವಾಗಿ, ಈ ಎಲ್ಲಾ ಅಂಶಗಳನ್ನು ಆಧರಿಸಿ ಮಾಡಲಾದ ತಪ್ಪು ಹೂಡಿಕೆಗಳು ಆರ್ಥಿಕ ವ್ಯವಸ್ಥೆಯ ಟ್ರಿಲಿಯನ್ ಡಾಲರ್ ನಷ್ಟಕ್ಕೆ ಕಾರಣವಾಗಿವೆ. ಈ ನಷ್ಟದ ಬಹುಪಾಲು ಹೊರೆ: ವಾಣಿಜ್ಯ ಬ್ಯಾಂಕ್‌ಗಳು, ಹೂಡಿಕೆ ಬ್ಯಾಂಕ್‌ಗಳಂಥ ಹಣಕಾಸು ಸಂಸ್ಥೆಗಳ ಮೇಲೆಯೇ ಬಿದ್ದಿದೆ. ಮತ್ತೆ ಕೆಲವು ವಿಶ್ಲೇಷಕರು, 'ಹಣಕಾಸು ಬಿಕ್ಕಟ್ಟಿನ ಚಾಟಿ ಏಟು ಬಿಕ್ಕಟ್ಟಿಗೆ ಕಾರಣವಾದ ಸಂಸ್ಥೆಗಳ ಮೇಲೆ ಬೀಳಲಿ ಬಿಡಿ. ಅದರ ನಡುವೆ ಯಾರೂ ಕೈಹಾಕುವುದು ಬೇಡ ಎನ್ನುತ್ತಾರೆ. ಯೋಜಿತವಲ್ಲದ ಅತಿಯಾದ ಸಾಲ ಮಾಡಿದವರು, ಷೇರು ಸಂಗ್ರಹಿಸಿದವರು ಪರಿಣಾಮ ಎದುರಿಸಲಿ ಎನ್ನುವುದು ಅವರ ಅಭಿಪ್ರಾಯ. ಆದರೆ ವಾಸ್ತವವಾಗಿ ಹೀಗಾಗುತ್ತಿಲ್ಲ. ವಿವೇಚನೆ ಇಲ್ಲದೆ ಷೇರು ಸಂಗ್ರಹಿಸಿದ ಸಂಸ್ಥೆಗಳ ಜೊತೆಗೆ ಒಟ್ಟಾರೆ ಆರ್ಥಿಕತೆಯೇ ಕುಸಿತ ಕಾಣುವುದಕ್ಕೆ ಹಣಕಾಸು ಅಧಿಕಾರಿಗಳು ಬಿಡುವುದಿಲ್ಲ. ಕಳೆದ ಶುಕ್ರವಾರ ಹೀಗೇ ಆಯಿತಲ್ಲ: 'ಬೇರ್ ಸ್ಟೀರ್ನ್ಸ್' ಸಂಸ್ಥೆಯ ರಕ್ಷಣೆಗೆ ಫೆಡರಲ್ ರಿಸರ್ವ್ ಬ್ಯಾಂಕ್ ಧಾವಿಸಿ ಬಂದಿತು. ಒಂದು ಹೂಡಿಕೆ ಬ್ಯಾಂಕ್ ಧರ್ಮಛತ್ರದಂತೆ ವರ್ತಿಸುವುದನ್ನು ಯಾರೂ ನಿರೀಕ್ಷಿಸಲಾರರು. ಬೇರ್ ಸಂಸ್ಥೆಗೆ ಒಳ್ಳೆಯ ಹೆಸರೇನೂ ಇಲ್ಲ. ನ್ಯೂಯಾರ್ಕ್ ಟೈಮ್ಸ್‌ನ ಗ್ರೆಚೆನ್ ಮೊರ್ಗೆನ್‌ಸನ್‌ರಂತಹ ವಿಶ್ಲೇಷಕರೂ ಇದೇ ಮಾತನ್ನು ಹೇಳಿದ್ದಾರೆ. ಅತ್ಯಂತ ಪ್ರಶ್ನಾರ್ಹವಾದ 'ಆಸ್ತಿ ಆಧಾರದ ಸಾಲ ನೀಡಿಕೆ'ಯನ್ನು ಬೇರ್ ಸಂಸ್ಥೆ ಪ್ರೋತ್ಸಾಹಿಸಿತು. ಗ್ರಾಹಕರನ್ನು ಸೆಳೆಯಲು ಆ ಸಂಸ್ಥೆ ಆರಂಭಿಸಿದ ಎರಡು ಹಣಕಾಸು ಯೋಜನೆಗಳಲ್ಲಿ ಮೊದಲನೆಯದೇ ಇಂದಿನ ಆರ್ಥಿಕ ದುಸ್ಥಿತಿಗೆ ಮುಖ್ಯ ಕಾರಣ. ಆ ಸಂಸ್ಥೆಯ ಕೆಟ್ಟ ಸಿಬ್ಬಂದಿಯೂ ಅಷ್ಟೇ ಕಾರಣ. ಮೇಲಾಗಿ 1998ರಲ್ಲಿ ದೀರ್ಘಾವಧಿಯ ಬಂಡವಾಳ ನಿರ್ವಹಣೆ ಯೋಜನೆ ವಿಫಲವಾದಾಗ ಇಡೀ ಆರ್ಥಿಕ ವ್ಯವಸ್ಥೆಯೇ ಕುಸಿತ ಕಂಡಿತ್ತು. ಆಗ ಫೆಡರಲ್ ಬ್ಯಾಂಕ್ ಪರಿಹಾರ ಕ್ರಮ ಕೈಗೊಳ್ಳಲು ಮುಂದಾದಾಗ ಇದೇ ಬೇರ್ ಸಂಸ್ಥೆ ಯಾವುದೇ ಸಹಕಾರ ನೀಡಲಿಲ್ಲ. ಹೀಗಾಗಿ ಯಾವ ದೃಷ್ಟಿಯಿಂದ ನೋಡಿದರೂ ಬೇರ್ ಸಂಸ್ಥೆಗೆ ಯಾವುದೇ ನೆರವು ನೀಡುವುದು ಸರಿಯಲ್ಲ. ಅದು ಅಧೋಗತಿಗಿಳಿಯುವುದಕ್ಕೆ ಅರ್ಹ ಸಂಸ್ಥೆ ಎನಿಸುತ್ತದೆ. ಆದರೆ ಹೂಡಿಕೆ ವಲಯದ ಮುಖ್ಯ ಬ್ಯಾಂಕ್ ಒಂದು ಕುಸಿದರೆ ಮಾರುಕಟ್ಟೆಯಲ್ಲಿ ಅಲ್ಲೋಲ-ಕಲ್ಲೋಲವಾಗುತ್ತದೆ; ಇಡೀ ಆರ್ಥಿಕತೆಯೇ ತಲ್ಲಣಗೊಳ್ಳುತ್ತದೆ ಎಂದು ಕೇಂದ್ರದ ಫೆಡರಲ್ ರಿಸರ್ವ್ ಬ್ಯಾಂಕ್ ಅಧಿಕಾರಿಗಳು ಬೇರ್ ಸಂಸ್ಥೆಯನ್ನು ರಕ್ಷಿಸಲು ಮುಂದಾಗಿದ್ದಾರೆ. ಫೆಡರಲ್ ಬ್ಯಾಂಕ್ ಅಧಿಕಾರಿಗಳಿಗೂ ತಾವು ಮಾಡುತ್ತಿರುವುದು ತಪ್ಪು ಎಂದು ಗೊತ್ತು. ಆದರೆ ಯಾವುದೇ ಕ್ರಮ ಕೈಗೊಳ್ಳದೆ ಹಾಗೇ ಬಿಟ್ಟರೆ ಪರಿಸ್ಥಿತಿ ಇನ್ನೂ ಹದಗೆಡುತ್ತದೆ ಎಂಬುದು ಅವರ ಅಭಿಪ್ರಾಯ. ಹೀಗಾಗಿ ಆರ್ಥಿಕತೆಯ ಉಳಿದ ಸಂಸ್ಥೆಗಳಿಗೂ ಬೇರ್ ಸಂಸ್ಥೆಗೆ ನೀಡಲಾದ ಸಹಾಯಹಸ್ತವೇ ಸಿಗುತ್ತದೆ ಎಂದು ನಿರೀಕ್ಷಿಸಬಹುದು. ಅದರರ್ಥ ಈ ಪರಿಹಾರ ಕ್ರಮಕ್ಕೆ ತೆರಿಗೆದಾರರು ಭಾರಿ ಮೊತ್ತವನ್ನೇ ನೀಡಬೇಕಿದೆ. ೧೯೮೦ರಲ್ಲಿ ಸಂಭವಿಸಿದ ಅಮೆರಿಕದ ಉಳಿತಾಯ ಮತ್ತು ಸಾಲ ಸಂಕಷ್ಟ ಪರಿಹಾರ ಕ್ರಮಗಳಿಗೆ ಒಟ್ಟು ಆದಾಯದ ಶೇ. ೩.೨ರಷ್ಟು ಮೊತ್ತ ಅಂದರೆ ೪೫೦ ಶತಕೋಟಿ ಡಾಲರ್ ಬೇಕಾಯಿತು. ಜಪಾನ್ ದೇಶದ ಆರ್ಥಿಕ ಬಿಕ್ಕಟ್ಟಿನ ಪರಿಹಾರ ಕ್ರಮಗಳಿಗೂ ಒಟ್ಟು ಆದಾಯದ ಶೇ. ೨೦ರಷ್ಟು ಹಣ ಬೇಕಾಗಿತ್ತು. ಆ ಮೊತ್ತ ಅಮೆರಿಕದ ಪ್ರಸಕ್ತ ಆರ್ಥಿಕ ಬಿಕ್ಕಟ್ಟಿನ ಮೂರು ಟ್ರಿಲಿಯನ್ ಡಾಲರ್‌ಗೆ ಸಮ ಎಂದು ಕೆಲವು ಸಮೀಕ್ಷೆಗಳು ಹೇಳುತ್ತವೆ. ಈ ಅಂಕಿ-ಸಂಖ್ಯೆಗಳು ನಿಮಗೆ ದಿಗ್ಭ್ರಮೆ ಉಂಟು ಮಾಡಿದರೆ ಅಚ್ಚರಿ ಇಲ್ಲ. ಆದರೆ ಬಿಕ್ಕಟ್ಟಿನ ಬಹುದೊಡ್ಡ ಪರಿಹಾರ ಕ್ರಮ ಜಾರಿಯಾಗುತ್ತಿದೆ. ಇದನ್ನು ಅದೆಷ್ಟು ದಕ್ಷತೆಯಿಂದ ನಿರ್ವಹಿಸಲಾಗುತ್ತದೆ ಎಂಬುದಷ್ಟೇ ಇಲ್ಲಿನ ಪ್ರಶ್ನೆ. ಅಂದರೆ ಇಲ್ಲಿನ ಮುಖ್ಯ ಅಂಶವೆಂದರೆ ಆರ್ಥಿಕ ವ್ಯವಸ್ಥೆಗೆ ನೆರವು ನೀಡುವುದೇ ವಿನಾ ಸಾರ್ವಜನಿಕರಿಗೆ ನೆರವು ನೀಡುವುದಲ್ಲ. ಇದರರ್ಥ ವಿಫಲಗೊಂಡ ಹಣಕಾಸು ಸಂಸ್ಥೆಗಳ ಷೇರುದಾರರನ್ನು ಶುದ್ಧೀಕರಿಸುವುದು, ಬಾಂಡ್ ಹೊಂದಿದವರನ್ನು ನಿಯಂತ್ರಿಸುವುದು ಮತ್ತು ಅಧಿಕಾರಗಳ ಷೇರುಗಳನ್ನು ರಹಸ್ಯವಾಗಿಯೇ ಇಡುವುದು! ಇತ್ತೀಚಿನ ವರದಿಯಂತೆ ಜೆ.ಪಿ. ಮಾರ್ಗನ್ ಚೇಸ್ ಅವರು ಬೇರ್ ಸಂಸ್ಥೆಯನ್ನು ಖರೀದಿಸಲಿದ್ದಾರೆ. ಇದೊಂದು ಪ್ರಕರಣದಲ್ಲಿ ಈ ಪರಿಹಾರ ಕ್ರಮವನ್ನು ಒಪ್ಪಬಹುದೇ ವಿನಾ ಇದನ್ನು ಆದರ್ಶ ಕ್ರಮ ಎಂದು ಪರಿಗಣಿಸಬಾರದು. ಇದರ ಬದಲಿಗೆ ದಿವಾಳಿ ಎದ್ದ ಹಣಕಾಸು ಸಂಸ್ಥೆಗಳ ಆಸ್ತಿ ಹರಾಜು ಹಾಕಿ ತೆರಿಗೆದಾರರ ಬಾಕಿ ತೀರಿಸುವ 'ರೆಸಲ್ಯೂಷನ್ ಟ್ರಸ್ಟ್ ಕಾರ್ಪೊರೇಷನ್'ನಂತಹ ಸಂಸ್ಥೆಗಳ ಕ್ರಮ ಈಗಿನ ಆದರ್ಶ. ಇಂತಹ ಕ್ರಮ ಕೂಡಲೇ ಆಗಬೇಕಿದೆ. ಏಕೆಂದರೆ ನೀವು ಈ ಲೇಖನವನ್ನು ಓದುವ ಅವಧಿಯಲ್ಲೇ ಆರ್ಥಿಕ ಬಿಕ್ಕಟ್ಟು ಮತ್ತಷ್ಟು ಅಧೋಗತಿಗಿಳಿಯಬಹುದು..

ಟಿಎಸ್‌ಐ

 

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .