ಕೈರಾ ದನಿ ಕೇಳಬೇಕೆ?
ಚಪ್ಪಾಳೆ.. ಚಪ್ಪಾಳೆ! ಕೈರಾ ನೈಟ್ಲೀ ಅಂತೂ ಇಂತೂ 'ಎಂಪೈರ್ ಮ್ಯಾಗಜೀನ್ ಫಿಲ್ಮ್ ಅವಾರ್ಡ್' ಗಳಿಸಿದ್ದಾಳೆ. ಅದು ಆಕೆಯ ಸಮಕಾಲೀನ 'ಅಟೋನ್‌ಮೆಂಟ್' ಚಿತ್ರಕ್ಕೆ. ಈ ಪುರಸ್ಕಾರ ಆಸ್ಕರ್, ಗೋಲ್ಡನ್ ಗ್ಲೋಬ್, ಬಾಫ್ತಾ ಮಟ್ಟಕ್ಕೆ ಬಾರದಿರಬಹುದು. ಆದರೆ ಪ್ರಶಸ್ತಿ ಪ್ರಶಸ್ತಿಯೇ. ಈಗ ತನ್ನ ದನಿ ಇನ್ನಷ್ಟು ಇಂಪಾಗಲು ಸಾಣೆ ಹಿಡಿದಿದ್ದಾಳೆ. ಕೈರಾಳ ಸೊಂಪಾದ ದನಿ ಕೇಳಬೇಕೆಂದಿದ್ದರೆ 'ದ ಎಜ್ ಆಫ್ ಲವ್' ಸದ್ಯದಲ್ಲೇ ಬಿಡುಗಡೆಯಾಗಲಿದೆ. ಆಸ್ಕರ್ ಪಡೆಯಲು ಕೈರಾ ಈಗ ರೀಸ್ ವಿದರ್‌ಸ್ಪೂನ್ ದಾರಿ ಅನುಸರಿಸಿದ್ದಾಳೆ ಎನ್ನುತ್ತೀರಾ?
ಸಲ್ಮಾನ್ ಬಣ್ಣ!
ತನ್ನ 'ಬ್ಯಾಡ್ ಬಾಯ್' ಇಮೇಜ್‌ನಿಂದಾಗಿ ಸಲ್ಮಾನ್ ಕುಖ್ಯಾತಿಯಾಗಿದ್ದ ಕಾಲವೊಂದಿತ್ತು. ಆದರೆ ಈಗ ಎಲ್ಲವೂ ಬದಲಾಗುತ್ತಿದೆ. ಸದ್ಯಕ್ಕೆ ಸಲ್ಮಾನ್ ಖಾನ್‌ಗಿಂತ ಆತನ ಕುಂಚ ಕೌಶಲ್ಯವೇ ಹೆಚ್ಚು ಪ್ರಸಿದ್ಧಿ ಪಡೆಯುತ್ತಿದೆ! ಸುಖಾಸುಮ್ಮನೆ ಹೀಗೆಲ್ಲಾ ಹೇಳುತ್ತಿಲ್ಲ. ಪ್ರಖ್ಯಾತ ಬರಹಗಾರ ಚೇತನ್ ಭಗತ್ ತಮ್ಮ 'ಥ್ರೀ ಮಿಸ್ಟೇಕ್ಸ್ ಆಫ್ ಮೈ ಲೈಫ್' ಮುಖಪುಟಕ್ಕೆ ಸಲ್ಮಾನ್ ಚಿತ್ರ ಬಳಸಿಕೊಳ್ಳಲು ಅನುಮತಿ ಕೋರಿದ್ದಾರೆ. ಅದೂ ಸಾಲದೆಂಬಂತೆ ತಮ್ಮಿಬ್ಬರ ಕಲಾತ್ಮಕ ಅಭಿವ್ಯಕ್ತಿ ಒಂದೇ ಅನ್ನೋ ಸಮಜಾಯಿಷಿ ಬೇರೆ ನೀಡಿದ್ದಾರೆ. ಭಗತ್ ಸಾಹೇಬರೇ ಸಲ್ಲು ತ್ರಿನೇತ್ರನಾಗುವ ಅವಕಾಶ ಕೊಡಬೇಡಿ ಮತ್ತೆ. ಆಮೇಲೆ ತಮ್ಮ ಜೀವನದ ನಾಲ್ಕನೇ ತಪ್ಪನ್ನೂ ಪಟ್ಟಿ ಮಾಡಬೇಕಾದೀತು!
ಹೀಗೂ ಉಂಟೆ?
ಶ್ರೀಶಾಂತ್ ಎಂಬ ಗುರ್ ಗುರ್ ಆಟಗಾರ ನಮ್ಮ 'ಡಾನ್' ಬೆಡಗಿ ಪ್ರಿಯಾಂಕಾಗೆ ಕ್ಲೀನ್ ಬೌಲ್ಡ್! ಈಗಾಗಲೇ ತನ್ನ ಭಾವನೆಗಳನ್ನು ಆಕೆಯ ಎದುರು ಮನಬಿಚ್ಚಿ ತೋಡಿಕೊಂಡಿದ್ದಾನೆ ಎಂಬ ಅಂತೆಕಂತೆಗಳಿವೆ. ಆದರೆ ಇವೆಲ್ಲಾ ಪ್ರಚಾರಕ್ಕಾಗಿ ಎಂಬುದು ಮತ್ತೊಂದು ಗುಲ್ಲು. ಹೇಗಿದ್ದರೂ ಈ ಎರಡು ತಾರೆಗಳೂ ಸುದ್ದಿಯಲ್ಲಿಲ್ಲದೆ ಸಾಕಷ್ಟು ದಿನಗಳಾದವು. ಜನ ತಮ್ಮನ್ನು ಮರೆಯದೆ ಇರಲು ಏನಾದ್ರೂ ಐಡಿಯಾ ಮಾಡ್ಲೇಬೇಕಲ್ವೇ? ಎಷ್ಟು ದಿನ ನಡೆಯುತ್ತೋ ನಡೆಯಲಿ...
ಕೊಂಕಣಿ ಬಾಲೆ
ಕನ್ನಡ ಹುಡ್ಗೀರ್‍ಗೂ ಮಣೆ ಹಾಕೀಪ್ಪಾ ಎನ್ನುತ್ತಿದ್ದಾಳೆ ಚೆಂದುಳ್ಳಿ ಚೆಲುವೆ ಐಶ್ವರ್ಯಾ ನಾಗ್. ಜಾಹೀರಾತನ್ನೇ ನೆಚ್ಚಿಕೊಂಡಿದ್ದ ಈ ಕೊಂಕಣಿ ಬಾಲೆ ಈಗ 'ದರೋಡೆ' ಮತ್ತು 'ನೀನೇ ನೀನೇ' ಎನ್ನುತ್ತಾ ಬ್ಯುಸಿಯಾಗಿದ್ದಾಳೆ. ಕನ್ನಡ ಚಿತ್ರರಂಗದಲ್ಲಿ ಅವಕಾಶ ಸಿಕ್ಕಿದ್ರೆ ನಟಿಸುತ್ತೇನೆ, ಅದೃಷ್ಟವಿದ್ದರೆ ಇಲ್ಲೇ ಬೆಳೆಯುತ್ತೇನೆ, ಆದರೆ ನಾಯಕಿ ಪ್ರಧಾನ ಚಿತ್ರಗಳಿಗೇ ಆದ್ಯತೆ ಎನ್ನುತ್ತಾ ಕಣ್ಣು ಮಿಟುಕಿಸುತ್ತಾಳೆ. ಗ್ಲಾಮರ್ ಪಾತ್ರಗಳಲ್ಲಿ ನಟಿಸುವ ಕನಸು ಹೊತ್ತು ಬಂದ ಈ ಚಿಗರೆ ಕನ್ನಡದ ಭವಿಷ್ಯದ ನಟಿಯಾಗಬಲ್ಲಳೇ? ಕಾದು ನೋಡೋಣ.
ಕಿರಿಕ್ ಸ್ಮಿತಾ?
ಚಿಕ್ಕ ಪುಟ್ಟ ಪಾತ್ರಗಳಲ್ಲೇ ತೃಪ್ತಿ ಪಡುತ್ತಿದ್ದ ನಟಿ ಸ್ಮಿತಾ 'ಅವ್ವ'ದಲ್ಲಿ ನಾಯಕಿಯಾದಳು. ಅಷ್ಟೇ ಲವ್‌ಲವಿಕೆ ಅಭಿನಯವನ್ನೂ ನೀಡಿದ್ದಳೆನ್ನಿ. ಚಿತ್ರ ತೋಪೆದ್ದು ಹೋದರೂ ಸ್ಮಿತಾ ಹಮ್ಮು ಬಿಮ್ಮು ಮಾತ್ರ ಕಡಿಮೆಯಾಗಿಲ್ಲ ಎಂದು ಸ್ಯಾಂಡಲ್‌ವುಡ್‌ನಲ್ಲಿ ಸುಳ್ಳು ಸುಳ್ಳೇ ಸುದ್ದಿ ಹಬ್ಬಿದೆ! 'ದೀನಾ' ಚಿತ್ರ ತಂಡಕ್ಕೆ ಸ್ಮಿತಾ ಕಾಸ್ಟ್ಯೂಮ್‌ನಿಂದ ಆರಂಭಿಸಿ ಶೂಟಿಂಗ್‌ವರೆಗೆ ಇನ್ನಿಲ್ಲದ ಕಿರಿಕ್ ಮಾಡುತ್ತಿದ್ದಾರೆ ಎಂದು ನಿರ್ಮಾಪಕರು ಗೋಳಿಡುತ್ತಿದ್ದಾರೆ. ಮಾಧ್ಯಮಗಳ ಹೆಸರು ಹೇಳಿ ಬೆದರಿಸ ಹೋದರೆ? ಆಂಗ್ಲ ಪತ್ರಿಕೆಗಳನ್ನೇ ಓದೋ ಈ ನಟಿ 'ಅಯ್ಯೋ ಕನ್ನಡ ಪತ್ರಿಕೆಗಳಿಗೆ ಯಾರು ಹೆದರುತ್ತಾರೆ ಹೋಗೊ...' ಎಂದಿದ್ದಾಳೆ ಎಂದು ಚಿತ್ರ ತಂಡ ಗಾಂಧಿನಗರದಲ್ಲಿ ಡಣಾ ಡಂಗುರ ಹೊಡೆಯುತ್ತಿದ್ದರೆ... ಸ್ಮಿತಾ? 'ನೋ ಕಮೆಂಟ್ಸ್' ಎಂದು ಮುಗುಮ್ಮಾಗಿ ಕುಳಿತಿದ್ದಾಳೆ.
ಕೋಳಿ ಜಗಳ
ಸಲ್ಮಾನ್ ಖಾನ್ ಮೃಗೀಯ ವರ್ತನೆಯನ್ನು ಕತ್ರಿನಾ ಚೆನ್ನಾಗೇ ಕಲಿತಿರುವಂತಿದೆ. ತನ್ನ ಜೊತೆ ಅಭಿನಯಿಸುವ ನಟಿಯರಿಗೆಲ್ಲಾ ಈಗಾಗಲೇ ಚಂಡಿ ರೂಪ ಪರಿಚಯಿಸಿದ್ದಾಳೆ. 'ರೇಸ್' ಚಿತ್ರದ ಸೆಟ್‌ನಲ್ಲಿ ಬಿಪಾಶಾ ಬಸು ಜೊತೆಗೆ ತಾಳ-ಮೇಳ ಕೂಡುತ್ತಲೇ ಇರಲಿಲ್ಲ. ಅಂದಕಾಲತ್ತಿಲ್ ಸಲ್ಲು ಮತ್ತು ಜಾನ್ ನಡುವೆ ಕಲಹವಾದದ್ದೇ ಇದಕ್ಕೆ ಕಾರಣ. ಬಿಪಾಶಾ ಕಡಿಮೆಯೇ? ಆಕೆಯೂ ಕತ್ರಿನಾಳ ಆಂಗ್ಲ ಉಚ್ಛಾರವನ್ನು ಆಡಿಕೊಂಡು ನಕ್ಕಳು. 'ರೇಸ್' ಸೆಟ್‌ಗೆ ಹೋಗಿದ್ದರೆ ಇವರಿಬ್ಬರ ಕಿತ್ತಾಟದ ಮಜಾ ಅನುಭವಿಸಬಹುದಿತ್ತು. ನಟಿಯರಲ್ಲಿ ಆತ್ಮೀಯ ಸ್ನೇಹಿತೆಯರಿರುತ್ತಾರೆ ಎಂದು ಹೇಳಿದ್ದು ಯಾರು? ತದುಕಿ ಆ ನನ್ ಮಗಂಗೆ!
ಮೇಘಗಳ ಬಳಿ 'ಮೇಘವೇ ಮೇಘವೇ'
ಈ ಚಿತ್ರ ತೆರೆ ಕಾಣುವ ಮುನ್ನವೇ ಆಗಸ ಚುಂಬಿಸಿದೆ! ಹೌದು, ಈಗಾಗಲೇ ನೇಪಾಳದಲ್ಲಿ ಚಿತ್ರೀಕರಣ ನಡೆಸಿದ ಪ್ರಥಮ ಕನ್ನಡ ಚಿತ್ರ ಎಂಬ ಕಿರೀಟ ಹೊತ್ತಿದ್ದ 'ಮೇಘವೇ ಮೇಘವೇ' ಚಿತ್ರ ತಂಡ ಮತ್ತೊಂದು ದಾಖಲೆ ಮೆರೆದಿದೆ. ಚಿತ್ರದ ಧ್ವನಿಸುರುಳಿ ಬಿಡುಗಡೆ ಕಾರ್ಯಕ್ರಮ ಲಿಮ್ಕಾ ದಾಖಲೆ ಪುಟಗಳಲ್ಲಿ ಸೇರಲಿದೆ. ಏಕೆಂದಿರಾ? ಧ್ವನಿ ಸುರುಳಿ ಸಂಭ್ರಮ ನಡೆದದ್ದು ಬಾನಂಗಳದಲ್ಲಿ! ಭೂಮಿಗೆ ಸುಮಾರು 35,000 ಅಡಿಗಳಷ್ಟು ಮೇಲೆ. 180 ಮಂದಿ ಮಾಧ್ಯಮ ಮತ್ತು ಚಿತ್ರ ತಂಡದವರನ್ನು ಏರ್‌ಡೆಕ್ಕನ್ ಚಾರ್ಟರ್ಡ್ ವಿಮಾನದಲ್ಲಿ ನಭಕ್ಕೇರಿಸುವ ಎದೆಗಾರಿಕೆ ತೋರಿದವರು ನಿರ್ಮಾಪಕ ರಘು ಕುಮಾರ್. ಅವರಿಗೆ ಸಾಥ್ ನೀಡಿದವರು ನಿರ್ದೇಶಕ ವಿ. ನಾಗೇಂದ್ರ ಪ್ರಸಾದ್. ಅವರ ಈ ಜಂಟಿ ಕನಸಿಗೆ ವೆಚ್ಚವಾದ ಮೊತ್ತ ರೂ. 12 ಲಕ್ಷ. ಮಾಜಿ ಸಚಿವ ಚೆಲುವರಾಯ ಸ್ವಾಮಿ ಧ್ವನಿಸುರುಳಿ ಬಿಡುಗಡೆ ಮಾಡಿದರು. ಐಎಎಸ್ ಅಧಿಕಾರಿ ಸಿ. ಸೋಮಶೇಖರ್ ಕ್ಯಾಸೆಟ್ ಮತ್ತು ನಟ ಪುನೀತ್ ರಾಜ್‌ಕುಮಾರ್ ವೆಬ್‌ಸೈಟ್‌ಗೆ ಚಾಲನೆ ನೀಡಿದರು. ಬೆಳ್ಳಿಯಂಚಿನ ಕಪ್ಪು ಸೀರೆಯಲ್ಲಿ ಧರೆಗಿಳಿದ ಅಪ್ಸರೆಯಾಗಿದ್ದರು ನಾಯಕಿ ಗ್ರೇಸಿ ಸಿಂಗ್.
ಎನ್.ಕೆ. ಸುಪ್ರಭಾ, ಆಕೃತಿ ಭಾರದ್ವಾಜ್