ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಅಂಕದ ಪರದೆ
 
 

ಜಾಗತಿಕ: ವಿಶ್ವಸಂಸ್ಥೆ

ಶಾಂತಿ ಸ್ಥಾಪನೆಗೆ ಹಣ ಇಲ್ಲ!

ವಿಶ್ವಸಂಸ್ಥೆಗೆ ಅಮೆರಿಕ ತೆರಬೇಕಿರುವ ವಂತಿಗೆ ಬಾಕಿ 1.5 ಶತಕೋಟಿ ಡಾಲರ್

ಜಾಗತಿಕ ಅರ್ಥವ್ಯವಸ್ಥೆಯಲ್ಲಿ ತಮ್ಮ ಪಾಲು ಎಷ್ಟು ಎಂಬುದರ ಆಧಾರದ ಮೇಲೆ ಸದಸ್ಯ ರಾಷ್ಟ್ರಗಳು ನಿರ್ದಿಷ್ಟ ವಂತಿಗೆ ಪಾವತಿಸುವುದು ವಿಶ್ವಸಂಸ್ಥೆಯ ಒಂದು ನಿಬಂಧನೆ. ಅದರೊಂದಿಗೆ ಕೆಲವು ರಾಷ್ಟ್ರಗಳು ಸ್ವಯಂ ಪ್ರೇರಣೆಯಿಂದ ಹೆಚ್ಚಿನ ಅನುದಾನವನ್ನೂ ನೀಡುತ್ತವೆ. ಈ ಎರಡು ಮೂಲಗಳಿಂದ ಸಂಗ್ರಹವಾಗುವ ಹಣಕಾಸೇ ವಿಶ್ವಸಂಸ್ಥೆಯ ಶಾಂತಿ ಕಾರ್ಯಾಚರಣೆಗಳ ಪ್ರಮುಖ ಸಂಪನ್ಮೂಲ. ದುರದೃಷ್ಟವೆಂದರೆ, ಶಾಂತಿ ಸ್ಥಾಪನೆ ಯತ್ನಗಳ ಅಗತ್ಯ ಹೆಚ್ಚುತ್ತಿರುವ ಹೊತ್ತಿನಲ್ಲೇ ಶಾಂತಿಸ್ಥಾಪನೆ ನಿಧಿಯ ಆರ್ಥಿಕ ಸಂಪನ್ಮೂಲ ಕುಸಿಯತೊಡಗಿದೆ. ಅದರಲ್ಲೂ ಅಮೆರಿಕ ಮುಂತಾದ ಅಭಿವೃದ್ಧಿ ಹೊಂದಿದ ರಾಷ್ಟ್ರಗಳೇ ವಂತಿಗೆ ನೀಡುವಲ್ಲಿ ಏಕಪಕ್ಷೀಯ ನಿಲುವು ತೆಗೆದುಕೊಳ್ಳುತ್ತಿರುವುದರಿಂದ ಇಡೀ ಶಾಂತಿ ಕಾರ್ಯಾಚರಣೆಗಳೇ ತೀವ್ರ ಬಿಕ್ಕಟ್ಟಿಗೆ ಸಿಲುಕಿವೆ. ಹಾಗಾಗಿ ಹಣಕಾಸು ಸಂಪನ್ಮೂಲ ಕ್ರೋಡೀಕರಣಕ್ಕಾಗಿ ವಿಶ್ವಸಂಸ್ಥೆ ಪರ್ಯಾಯ ಮೂಲಗಳನ್ನು ಕಂಡುಕೊಳ್ಳುವುದು ಅನಿವಾರ್‍ಯವಾಗಿದೆ. 90ರ ದಶಕದಲ್ಲಿ ವಿಶ್ವಸಂಸ್ಥೆಯ ಶಾಂತಿ ಕಾರ್ಯಾಚರಣೆ ಪ್ರಕ್ರಿಯೆ ಹೆಚ್ಚು ವ್ಯಾಪಕವಾಯಿತು. ಆಗ ರುವಾಂಡ, ಬೋಸ್ನಿಯಾ, ಸೊಮಾಲಿಯಾ ಮುಂತಾದ ರಾಷ್ಟ್ರಗಳಲ್ಲಿ ಒಂದು ದಶಕದಿಂದ ಇದ್ದ ಬಿಕ್ಕಟ್ಟನ್ನು ಇತ್ಯರ್ಥಪಡಿಸುವ ನಿಟ್ಟಿನಲ್ಲಿ ಯಶಸ್ವಿಯಾಗಿತ್ತು. ಆದರೆ, ಅಮೆರಿಕದ ಉದ್ದೇಶಪೂರ್ವಕ ನಿರ್ಲಕ್ಷ್ಯ ಮತ್ತು ವಿಶ್ವಸಂಸ್ಥೆಯ ಶಾಂತಿ ಕಾರ್ಯಾಚರಣೆ ಸಂಸ್ಥೆಗೆ ಸಹಾಯಧನ ಒದಗಿಸಲು ನಿರಂತರವಾಗಿ ಅದು ಹಿಂದೇಟು ಹಾಕುತ್ತಿರುವುದು ವಿಶ್ವಸಂಸ್ಥೆಯ ಶಾಂತಿ ಸ್ಥಾಪನೆ ಕಾರ್ಯಗಳಿಗೆ ಬಲವಾದ ಪೆಟ್ಟನ್ನೇ ನೀಡುತ್ತಿದೆ. ದಾರ್ಫುರ್, ಹೈಟಿ, ಚಡ್, ಪೂರ್ವ ತಿಮರ್‌ನಂತಹ ಸಮಸ್ಯೆಗಳ ಗೂಡಾದ ರಾಷ್ಟ್ರಗಳಲ್ಲಿ ತನ್ನ ಕಾರ್ಯಾಚರಣೆ ನಡೆಸಲು ಈಗ ವಿಶ್ವಸಂಸ್ಥೆ ಹೆಣಗಾಡುತ್ತಿದೆ. ವಿಶ್ವಸಂಸ್ಥೆಯ ಶಾಂತಿ ಕಾರ್ಯಾಚರಣೆಗಳ ಒಟ್ಟು ಬಜೆಟ್‌ನಲ್ಲಿ ಶೇ.26ರಷ್ಟು ಸಂಪನ್ಮೂಲದ ಮೂಲ ಅಮೆರಿಕವೇ. ವಿಪರ್ಯಾಸವೆಂದರೆ, ವಂತಿಗೆ ನೀಡುವಲ್ಲಿ ಮೊದಲ ಸ್ಥಾನದಲ್ಲಿರುವ ಅಮೆರಿಕವೇ ಬಾಕಿದಾರರಲ್ಲೂ ಮೊದಲ ಸ್ಥಾನದಲ್ಲಿರುವುದು. 2008ರ ಆರಂಭಕ್ಕೇ ಅಮೆರಿಕ ವಿಶ್ವಸಂಸ್ಥೆಗೆ ತೆರಬೇಕಾಗಿರುವ ವಂತಿಗೆ ಬಾಕಿ 1.5 ಶತಕೋಟಿ ಡಾಲರ್. ಈ ಮಧ್ಯೆ ಅಮೆರಿಕ, ಬ್ರಿಟನ್, ಜಪಾನ್, ಚೀನಾ ಸೇರಿದಂತೆ 15 ರಾಷ್ಟ್ರಗಳು ವಿಶ್ವಸಂಸ್ಥೆಯ ವಿಶೇಷಧಿಕಾರವಾದ ವೀಟೊ ಪವರ್ ಮೂಲಕ ಹೊಸ ಕಾರ್ಯಯೋಜನೆಯೊಂದನ್ನು ರೂಪಿಸಿದ್ದವು. ಆದರೆ, ವಂತಿಗೆ ಬಾಕಿ ಸಂದಾಯ ಮಾಡಲು ಸಿದ್ಧರಿಲ್ಲದ ಈ ರಾಷ್ಟ್ರಗಳ ವೈಖರಿ, ಇತರ ರಾಷ್ಟ್ರಗಳ ನಿರಾಸಕ್ತಿಗೆ ಕಾರಣವಾಗಿದೆ. ಜಾಗತಿಕ ಮಟ್ಟದಲ್ಲಿ ತನ್ನ ರಾಷ್ಟ್ರೀಯ ಬಲ ಮತ್ತು ಸಾಮರ್ಥ್ಯ ಪ್ರದರ್ಶಿಸಲು ಅಮೆರಿಕ ವಿಶ್ವಸಂಸ್ಥೆಯನ್ನು ಬಳಸಿಕೊಳ್ಳುತ್ತಿರುವುದಕ್ಕೆ ಪ್ರತಿರೋಧ ವ್ಯಕ್ತವಾದಾಗ ಅದು ನ್ಯಾಟೋದತ್ತ ಹೆಚ್ಚಿನ ಆಸಕ್ತಿ ವಹಿಸಿತು. ಜೊತೆಗೆ ವಿಶ್ವಸಂಸ್ಥೆಯ ಧನಸಹಾಯ ಹಂಚಿಕೆಯ ವಿಷಯದಲ್ಲಿ ಕೂಡ ಮೂಗು ತೂರಿಸಿ, ತನ್ನ ನ್ಯಾಟೋ ಸದಸ್ಯ ರಾಷ್ಟ್ರಗಳಿಗೇ ಮಣೆ ಹಾಕತೊಡಗಿತು. ಇಂತಹ ವರ್ತನೆಗಳ ಹಿನ್ನೆಲೆಯಲ್ಲಿ ವಿಶ್ವಸಂಸ್ಥೆ ತನ್ನ ಜಾಗತಿಕ ಸ್ಥಾನ-ಮಾನ ಹಾಗೂ ವಿಶ್ವಾಸವನ್ನು ಉಳಿಸಿಕೊಳ್ಳಲು ತನ್ನದೇ ಆದ ಸುಧಾರಣಾ ಸೂತ್ರಗಳನ್ನು ಅನುಸರಿಕೊಳ್ಳಬೇಕಿದೆ. ಹಾಗೇ ಶಸ್ತ್ರಾಸ್ತ್ರ ವ್ಯಾಪಾರ, ಹಣ ವಿನಿಮಯ ಮತ್ತು ಪರಿಸರ ಹಾನಿ ಮುಂತಾದವುಗಳ ಮೇಲೆ ತೆರಿಗೆ ವಿಧಿಸುವ ಮೂಲಕ ಪರ್ಯಾಯ ಆದಾಯ ಮೂಲಗಳನ್ನು ಕಂಡುಕೊಳ್ಳಬೇಕಿದೆ. ತನ್ನ ಸ್ಥಾನ-ಮಾನದ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳಲು ವಿಶ್ವಸಂಸ್ಥೆಗೆ ಇನ್ನೂ ಕಾಲ ಮೀರಿಲ್ಲ. ಶಾಂತಿ ಕಾರ್ಯಾಚರಣೆ ವಿಷಯದಲ್ಲಿ ತನಗಿರುವ ಅಧಿಕಾರದ ಕುರಿತು ಪುನರ್ ಪರಿಶೀಲನೆ ನಡೆಸಿ ಜಾಗತಿಕ ಅಭಿವೃದ್ಧಿಯ ದೆಸೆಯಲ್ಲಿ ಕಾರ್ಯೋನ್ಮುಖವಾಗಬೇಕು. ಒಂದು ರಾಷ್ಟ್ರದ ಬಲ ಪ್ರದರ್ಶನದ ಬದಲಾಗಿ ಬಹುಪಕ್ಷೀಯ ನಿಲುವು ಮತ್ತು ಜಾಗತಿಕ ನಾಯಕತ್ವವನ್ನು ಕಂಡುಕೊಳ್ಳುವ ತತ್ವ ಸಿದ್ಧಾಂತ ರೂಪಿಸಿಕೊಳ್ಳಬೇಕಿದೆ.

ಐಐಪಿಎಂ
'ಥಿಂಕ್ ಟ್ಯಾಂಕ್

ಅಕ್ರಂ ಹಕ್

ಸಮಸ್ಯೆ: ಕೃಷಿ

ಪುನರುಜ್ಜೀವನದ ನಿರೀಕ್ಷೆಯಲ್ಲಿ...

ಸಂಕಷ್ಟ ಪರಿಹಾರಕ್ಕೆ ಬೇಕು ಹೊಸ ಕಾರ್ಯಶೈಲಿಯ ಹೊಳಹು

ಭಾರತೀಯ ಕೃಷಿ ಕ್ಷೇತ್ರದ ಸಮಸ್ಯೆಗಳಿಗೆ ಪರಿಹಾರವೇನು? ಈ ಪ್ರಶ್ನೆಯನ್ನು ಭಾರತದ ಅಧಿಕಾರಶಾಹಿ ಅಥವಾ ರಾಜಕಾರಣಿಗಳಲ್ಲಿ ಕೇಳಿ ನೋಡಿ... ರೋಗ ಏನು ಎಂಬುದನ್ನು ಬಿಟ್ಟು ರೋಗಲಕ್ಷಣಗಳ ಬಗ್ಗೆ ಗಂಟೆಗಟ್ಟಲೆ ಭಾಷಣ ಬಿಗಿಯುತ್ತಾರೆ. ಬಂಡವಾಳ ಕೊರತೆ, ಇಳುವರಿ ಕುಸಿತ, ಅತಿವೃಷ್ಟಿ- ಅನಾವೃಷ್ಟಿ, ಬಿತ್ತನೆ ಬೀಜ ವೈಫಲ್ಯ, ಬೆಲೆ ಏರಿಳಿಕೆ, ಬೇಡಿಕೆ ವ್ಯತ್ಯಯ... ಹೀಗೆ ಅವರು ನೀಡುವ ಮಾಮೂಲು ಕಾರಣಗಳ ಪಟ್ಟಿಗೆ ಕೊನೆಯೇ ಇಲ್ಲ. ದೇಶದ ಹೆಚ್ಚು ಅನುಕೂಲಸ್ಥ ಜನರು ನೀಡುವ ಈ ಕಾರಣಗಳು, ಕೃಷಿಯನ್ನು ಕಾಡುತ್ತಿರುವ ಸಮಸ್ಯೆಯ ಬಗ್ಗೆ ಅವರೆಷ್ಟು ಹೊಣೆಗೇಡಿಗಳಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಹಿಂದಿನಿಂದಲೂ ದೇಶದ ಕೃಷಿ ಸುಧಾರಣೆ ಎಂಬುದನ್ನು ಕಂಡಿಲ್ಲ. ಅವೈಜ್ಞಾನಿಕ ಕ್ರಮಗಳಿಂದಾಗಿ ನಮ್ಮ ಕೃಷಿ ಅಭಿವೃದ್ಧಿ ಎಂಬುದು ಮರೀಚಿಕೆಯಾಗಿಯೇ ಉಳಿದಿದೆ. ಕೈಗಾರಿಕಾ ಕ್ಷೇತ್ರದ ಪುನರುಜ್ಜೀವನದಿಂದ ಹಿಡಿದು ಇಂದಿನವರೆಗೂ ಕೈಗಾರಿಕೆಗಳ ಪ್ರಮುಖ ಹಾಗೂ ಹೊಸ ಮಾರ್ಪಾಡುಗಳು ಕೃಷಿ ಕ್ಷೇತ್ರಕ್ಕೆ ಯಾವತ್ತೂ ಪೂರಕವಾಗಿಲ್ಲ. ಕಳೆದ ಹಲವಾರು ದಶಕಗಳಿಂದ ಕೈಗಾರಿಕಾ ಸಂಶೋಧನೆಗಳಿಂದ ಕೃಷಿಯನ್ನು ಹೊರಗಿಡಲಾಗಿತ್ತು. ಅದರ ಪರಿಣಾಮ? ಸಾಲದಲ್ಲಿ ಮುಳುಗಿದ ರೈತರ ಆತ್ಮಹತ್ಯೆ ಮತ್ತು ಅಧಿಕ ಇಳುವರಿಯಿಂದ ಬೆಲೆಯಲ್ಲಿ ಕುಸಿತ! ನಿಜ ಹೇಳಬೇಕೆಂದರೆ ಇಂತಹ ವಿಚಿತ್ರಗಳು ಭಾರತದಲ್ಲಿ ಮಾತ್ರ ಸಾಧ್ಯ. ಉತ್ಪಾದನಾ ಮಟ್ಟ ಹೆಚ್ಚಿದಂತೆ ಉತ್ಪನ್ನಗಳ ಬೆಲೆ ಪಾತಾಳಕ್ಕಿಳಿಯುತ್ತವೆ! ಇದರ ನೇರ ಪರಿಣಾಮ ಆಗುವುದು ರೈತರ ಮೇಲೆ. ಲಾಭದ ಮಾತಿರಲಿ; ಕೆಲವೊಮ್ಮೆ ತಾವು ತೊಡಗಿಸಿದ ಬಂಡವಾಳನವನ್ನೂ ಪಡೆಯಲಾಗದ ಸ್ಥಿತಿ ನಮ್ಮ ರೈತರದ್ದು! ಹೌದು, ಈ ಕೃಷಿಕರು ಯಾರು? ಮಹತ್ವಾಕಾಂಕ್ಷೆಯ, ದೂರದೃಷ್ಟಿಯ, ಸುಶಿಕ್ಷಿತ ಮತ್ತು ಕ್ರಿಯಾಶೀಲ ವ್ಯಕ್ತಿಗಳೇ ಅವರು? ಕೃಷಿ ಉತ್ಪಾದನೆಯ ಮಹತ್ತರ ಜವಾಬ್ದಾರಿ ಹೊತ್ತುಕೊಂಡು, ಉತ್ಪನ್ನವನ್ನು ಸುರಕ್ಷಿತವಾಗಿ ದಾಸ್ತಾನುಮಾಡಿ, ಹಣಕಾಸು ಸಂಪನ್ಮೂಲ ಹೊಂದಿಸಿಕೊಂಡು, ಮುಂದಿನ ಹಂಗಾಮಿಗೆ ಬಿತ್ತನೆ ಬೀಜ ಹೊಂದಿಸುವುದು, ಬೆಲೆಗಳ ಏರಿಳಿಕೆಯ ಮೇಲೆ ಸದಾ ಕಣ್ಣಿಟ್ಟು ಸಕಾಲದಲ್ಲಿ ಉತ್ಪನ್ನಗಳನ್ನು ಮಾರುವುದು, ರಸಗೊಬ್ಬರ ಬಳಕೆ ಅರಿಯುವುದು, ಲೇವಾದೇವಿಗಾರರೊಂದಿಗೆ ಜಾಣ್ಮೆಯಿಂದ ವ್ಯವಹರಿಸುವುದು... ಹೀಗೆ ಒಂದೇ ಎರಡೇ? ಅವರ ಕಾರ್ಯಗಳ ಪಟ್ಟಿಗೆ ಕೊನೆಯೇ ಇಲ್ಲ. ಸಾಮಾನ್ಯ ಅಕ್ಷರ ಜ್ಞಾನದ ಅಥವಾ ಅನಕ್ಷರಸ್ಥನೊಬ್ಬ ಮಾಹಿತಿ ತಂತ್ರಜ್ಞಾನ ಅಥವಾ ಕಂಪ್ಯೂಟರ್ ಕುರಿತಾಗಿ ಎಳ್ಳಷ್ಟೂ ಜ್ಞಾನವಿಲ್ಲದೆ ವಿದ್ಯುತ್, ಆರೋಗ್ಯ ವ್ಯವಸ್ಥೆ, ಪ್ರಾಥಮಿಕ ಶಿಕ್ಷಣ, ಸೂಕ್ತ ರಸ್ತೆ ವ್ಯವಸ್ಥೆ, ಶುದ್ಧ ಕುಡಿಯುವ ನೀರು... ಕೊನೆಗೆ ಬದುಕಿನ ಭರವಸೆಯೂ ಸೇರಿದಂತೆ ಎಲ್ಲಾ ಮೂಲಸೌಕರ್ಯಗಳಿಂದ ವಂಚಿತವಾದ ಅತ್ಯಂತ ಹಿಂದುಳಿದ ಕುಗ್ರಾಮಗಳಲ್ಲಿ ಸಂಕಷ್ಟದ ಜೀವನ ಸಾಗಿಸುವ ಮನುಷ್ಯ ಈ ಎಲ್ಲವನ್ನೂ ನಿಭಾಯಿಸಬೇಕಿದೆ. ಆದರೆ, ಸಂಘಟಿತ ವಲಯದಲ್ಲಾದರೆ, ಅಂತಹ ಎಲ್ಲಾ ಕೆಲಸ ಕಾರ್ಯಗಳನ್ನೂ ಪ್ರತ್ಯೇಕವಾಗಿ ಬೇರೆ- ಬೇರೆ ಪರಿಣಿತರಿಗೆ ಹಂಚಲಾಗುತ್ತದೆ. ಅದೂ ಅವರಿಗೆ ಹಲವು ವರ್ಷಗಳ ನಿರಂತರ ತರಬೇತಿ ಮತ್ತು ಅನುಭವದ ಆಧಾರದ ಮೇಲೆ. ಕೃಷಿಯಲ್ಲಿ ನಿರತನಾದ ಒಬ್ಬ ರೈತನಿಗೆ ನೀವು ಇಷ್ಟಪಟ್ಟು ಈ ವೃತ್ತಿಯನ್ನು ಆಯ್ಕೆಮಾಡಿಕೊಂಡಿದ್ದೀರಾ ಎಂದು ಕೇಳಿದರೆ, ಆತ ಖಂಡಿತವಾಗಿಯೂ ಇಲ್ಲ ಎನ್ನುತ್ತಾನೆ. ತನಗೆ ಬೇರೆ ಕೆಲಸ ಮಾಡಲು ಯಾವುದೇ ಪರಿಣತಿ ಇಲ್ಲ, ಹಾಗಾಗಿ ಕೃಷಿ ಮಾಡುತ್ತಿದ್ದೇನೆ ಎನ್ನುತ್ತಾನೆ ಆತ. ಹಾಗೇ ಕೃಷಿ ಎಂಬುದು ಹೇಗೆ ಒಂದಿನಿತೂ ಆದಾಯವಿಲ್ಲದ ಉದ್ಯೋಗ ಎಂಬುದನ್ನೂ ಆತ ನಿಮಗೆ ವಿವರಿಸುತ್ತಾನೆ. ಪ್ರತಿ ಕೆಲಸವನ್ನೂ ವಿಭಾಗಗಳನ್ನಾಗಿ ಮಾಡಿ ಆಯಾ ವಿಭಾಗದಲ್ಲಿ ಪರಿಣತಿ ಪಡೆದವರಿಗೆ ಜವಾಬ್ದಾರಿ ವಹಿಸಿಕೊಟ್ಟರೆ? ಅಥವಾ ತನ್ನ ಹೊಲದ ಮಾಲೀಕನಾಗಿದ್ದುಕೊಂಡು, ಪ್ರತಿ ಕೆಲಸಕ್ಕೂ ಪ್ರತ್ಯೇಕ ತಜ್ಞರನ್ನು ನೇಮಿಸಿಕೊಂಡು ತನ್ನ ಅನುಭವ ಮತ್ತು ಭೂಮಿಯನ್ನು ಉತ್ಪಾದನಾ ಕೊಡುಗೆಯಾಗಿ ನೀಡುವುದು ಸಾಧ್ಯವೇ ಎಂದು ಕೇಳಿ ನೋಡಿ. ಅಥವಾ ಪ್ರತ್ಯೇಕ ಹಣಕಾಸು ಮತ್ತು ಮಾರುಕಟ್ಟೆ ತಜ್ಞರ ತಂಡ ಮಾರಾಟಗಾರ ಮತ್ತು ಬಂಡವಾಳ ಹೂಡಿಕೆ ವ್ಯವಹಾರಗಳನ್ನು ನಿಭಾಯಿಸುವ ವ್ಯವಸ್ಥೆ ಅಳವಡಿಸಿಕೊಳ್ಳಲು ಹೇಳಿ. ಇದನ್ನೆಲ್ಲಾ ಕೇಳಿ ಆತ ದಿಗಿಲುಬಿದ್ದರೂ ಆಶ್ಚರ್ಯವಿಲ್ಲ. ಅಲ್ಲದೆ ಈ ಪ್ರಶ್ನೆಗಳಿಂದ ಆತ ನಿಜಕ್ಕೂ ಆಘಾತಕ್ಕೊಳಗಾಗದೇ ಇರಲಾರ. ನಿಮ್ಮ ಮಾತುಗಳನ್ನು ಕೇಳುತ್ತಿದ್ದಂತೆ ಆ ಅನಕ್ಷರಸ್ಥ ರೈತ "ಹಾಗಾದರೆ ಈ ಎಲ್ಲಾ ಸೌಲಭ್ಯಗಳಿಂದ ಕೃಷಿ ಕ್ಷೇತ್ರವನ್ನು ಏಕೆ ದೂರವಿಡಲಾಗಿದೆ?" ಎಂದು ಪ್ರಶ್ನಿಸದಿರಲು ಸಾಧ್ಯವಿಲ್ಲ. ಆಗ ಈ ಬದಲಾವಣೆಗಳು ಕೃಷಿಯಲ್ಲೂ ಆಗಬೇಕೆ ಅಥವಾ ಬರಿ ಸಾಲ ಮನ್ನಾ ಮಾಡಿದರೆ ಸಾಕೆ? ಎಂದು ಕೇಳಿನೋಡಿ. ಆಗ ಆ ರೈತ ಏನು ಉತ್ತರ ಹೇಳಬಹುದು ಎಂಬುದನ್ನು ಎಲ್ಲರೂ ಊಹಿಸಬಹುದು. ಆದರೆ, ಈ ಮಣ್ಣಿನ ಮಕ್ಕಳಿಗೆ ಅಂತಹ ಪ್ರಶ್ನೆಗಳನ್ನು ಕೇಳುವವರು ಯಾರು?

ಐಐಪಿಎಂ
'ಥಿಂಕ್ ಟ್ಯಾಂಕ್'

ಪಥಿಕೃತ್ ಪಾಯ್ನೆ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .