ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಹೆಜ್ಜೆಗಳು
ಹುಲಿ ದರ್ಪಕ್ಕೆ 'ಗನಿನ್' ಮದ್ದು
 
 
Prashantho Banerjee
ಪ್ರಶಾಂತೊ ಬ್ಯಾನರ್ಜಿ
ನುಡಿಚಿತ್ರ ಸಂಪಾದಕ
ದ ಸಂಡೆ ಇಂಡಿಯನ್

ನೀರನ್ನು ತಳ್ಳುತ್ತಾ ದಡ ಸೇರುವ ತವಕದಲ್ಲಿ ದೋಣಿ ಸಾಗುತ್ತಿತ್ತು. ನಮ್ಮ ದೋಣಿ ಹಾಗೂ ಪಥೇರ್ ಪಾರಾದ ದಡದ ನಡುವೆ ಸೊಂಟದೆತ್ತರದ ನೀರು ಮಾತ್ರವಲ್ಲ ಕಣ್ಣಿಗೆ ಕಾಣದ ಅಪಾಯಗಳೂ ಸದ್ದಿಲ್ಲದೆ ಮಲಗಿವೆ ಎಂಬುದು ನಮಗೆ ಗೊತ್ತಿತ್ತು. ಬೆಳದಿಂಗಳಲ್ಲಿ ಮಿಂದ ನದಿಗೆ ಹಾಲಿನ ಬಣ್ಣ. ಅದು ನೀರನ್ನು ಮತ್ತಷ್ಟು ಅಸ್ಪಷ್ಟವಾಗಿಸಿತ್ತು. ಸುಂದರಬನ ಕಾಡಿಗೆ ಹೋದವರಲ್ಲಿ ಹಿಂತಿರುಗಿ ಬರುವವರು ಬೆರಳೆಣಿಕೆಯಷ್ಟು ಮಾತ್ರ. ಕಾಣದ ದೇವರನ್ನು ಸ್ಮರಿಸುತ್ತಾ ಪ್ಯಾಂಟನ್ನು ಎಷ್ಟು ಸಾಧ್ಯವೋ ಅಷ್ಟು ಮೇಲಕ್ಕೆ ಮಡಿಸಿ ಮಾಟ್ಲಾ ನದಿಯ ಉಗುರು ಬೆಚ್ಚಗಿನ ನೀರಲ್ಲಿ ಕಾಲಿಟ್ಟೆ. ಜಗತ್ತಿನ ವಿಷಪೂರಿತ ಹಾವುಗಳು ಈ ನೀರಲ್ಲಿ ಈಜುತ್ತಿರುತ್ತವೆ ಎಂದು ಗೊತ್ತಿದ್ದರೂ ಅದ್ಯಾಕೋ ಆ ಕ್ಷಣ ಅವು ನನ್ನಲ್ಲಿ ಭಯ ಹುಟ್ಟಿಸಲಿಲ್ಲ. ಪಾದಗಳಿಗೆ ನದೀತಳದ ಮೃದು ಸ್ಪರ್ಶ. ಸ್ನಾನಕ್ಕೆಂದು ಬರುವ ಮಕ್ಕಳನ್ನು ನುಂಗುವ ನೀರು ಇದು. ಹಲವು ದಿನಗಳ ಬಳಿಕ ತಲೆಯೋ, ಕಾಲೋ ಅಥವಾ ಛಿದ್ರ- ಛಿದ್ರವಾದ ಇತರ ಭಾಗಗಳೋ ಮೇಲೆದ್ದು ತೇಲುತ್ತವೆ. ಕೊಲೆಗಡುಕ ಷಾರ್ಕ್‌ಗಳು! ಅಂಕಿ ಅಂಶಗಳನ್ನು ಗಮನಿಸುವುದಾದರೆ, ಷಾರ್ಕ್‌ಗಳು ಸಮುದ್ರದ ಮೊಸಳೆಗಳಷ್ಟು ಅಪಾಯಕಾರಿಯಲ್ಲ. ಆದರೆ ಇತ್ತೀಚೆಗಷ್ಟೇ ಮೊಸಳೆಯೊಂದು ವ್ಯಕ್ತಿಯೊಬ್ಬರನ್ನು ಬಲಿ ತೆಗೆದುಕೊಂಡಿರುವುದರಿಂದ ಒಂದು ವಾರದವರೆಗೆ ಈ ನದಿ ತಟದ ಬಗ್ಗೆ ಅಂಥಾ ಭಯ ಬೇಡ. ಅಂಕಿಅಂಶಗಳನ್ನಾಧರಿಸಿ ಮತ್ತೊಂದು ಮಾತು ಹೇಳಬೇಕೆಂದರೆ, ಹೆಜ್ಜೆ ಹೆಜ್ಜೆಗೂ ನನ್ನ ಕಾಲನ್ನು ಕಚಗುಳಿಯಿಡುತ್ತಿರುವ ಅನುಭವವಾಗುತ್ತಿತ್ತು. ಆದರೆ ಆ ಒಂದು ವಾರದ ಗಡುವಿನ ಧೈರ್ಯದಲ್ಲಿ ನಾನು ಮುಂದೆ ಸಾಗುತ್ತಿದ್ದೆ. ಪಥೇರ್ ಪಾರಾದ ದಡ ಸೇರಿದೆವು. "ಮಾಯ ಮಂತ್ರ ಅಥವಾ ಗನಿನ್ ತಂತ್ರಗಳು ಮಾತ್ರ ಸುಂದರಬನದಲ್ಲಿ ನಿಮ್ಮನ್ನು ಕಾಪಾಡಬಲ್ಲದು" ಹುಲಿ ಆಕ್ರಮಣದಿಂದ ಕೂದಲೆಳೆ ಅಂತರದಲ್ಲಿ ತಪ್ಪಿಸಿಕೊಂಡ ಸತ್ಯೋ ಸರ್ದಾರ್ ಎಚ್ಚರಿಕೆಯ ಮಾತುಗಳು. ದಡದಲ್ಲಿ ಕೂತು ಏಡಿ ಹಿಡಿಯುತ್ತಿದ್ದ ವ್ಯಕ್ತಿಯೊಬ್ಬರಲ್ಲಿ ದಾರಿ ಕೇಳಿದೆ. ಹೋಗಬೇಕಾದ ಜಾಗ ಹೇಳಿದೊಡನೆಯೇ ಆತ ನನ್ನೊಂದಿಗೇ ಬಂದು ದಾರಿ ಹೇಳಿಕೊಟ್ಟ. ಅದು ಮೂರನೇ ಗುಡಿಸಲು. "ಜಗತ್‌ಬಂಧು... ಓ ಜಗತ್‌ಬಂಧೂ... ಯಾರೋ ಬಂದಿದ್ದಾರೆ ನೋಡಿ..." ಜಗತ್‌ಬಂಧು ಇನ್ನೂ ನಿದ್ದೆಗೆ ಜಾರಿರಲಿಲ್ಲ. ಕರೆ ಕೇಳಿದೊಡನೆಯೇ ಬಾಗಿಲ ಪರದೆ ಸರಿಸುತ್ತಾ ಹೊರಬಂದರು. ಅವರು ಆಜಾನುಬಾಹುವಾಗಿರಲಿಲ್ಲ. ಸರಿಸುಮಾರು 5 ಅಡಿ 9 ಅಂಗುಲ ಎತ್ತರ, ಗಿರಿಜಾ ಮೀಸೆ, ಪ್ರಶಾಂತ ಕಣ್ಣುಗಳು, ತೆಳ್ಳನೆಯ ದೇಹ. ಆದರೆ ಸದೃಢವಾದ ಹಾಗೂ ಆ ದೇಹ ಪ್ರಕೃತಿಗೆ ಅಸಾಧಾರಣವಾದ ಬಾಹುಗಳು. ಬಹುಶಃ ಬಾಹುಗಳ ಅಸಾಮಾನ್ಯ ಬೆಳವಣಿಗೆಗೆ ಕಾರಣವೂ ಇರಬಹುದು. ಜಗತ್‌ಬಂಧುವಿನ ಸಂರಕ್ಷಣೆಯಿಲ್ಲದೆ ಬೇಟೆಗಾರರು, ಜೇನು ಕುರುಬರು ಅಥವಾ ಮೀನುಗಾರರ್‍ಯಾರೂ ಸುಂದರಬನ ಕಾಡಿನ ಆಳಕ್ಕೆ ಇಳಿಯುವುದಿಲ್ಲ. ಅದು 'ಗನಿನ್' ಸಂರಕ್ಷಣೆ. ಗನಿನ್ ಸುಂದರಬನದ ಅತಿ ಸಮರ್ಥ ವ್ಯಕ್ತಿ. ಮಂತ್ರ ಪಠಣ ಮಾತ್ರದಿಂದ ಹುಲಿಯನ್ನು ಕಟ್ಟಿ ಹಾಕಬಲ್ಲ ಅತಿಮಾನವ ಎಂದು ನಂಬಲಾದ ವ್ಯಕ್ತಿ. ಅರಣ್ಯ ಸಂರಕ್ಷಣಾ ಅಧಿಕಾರಿಗಳು ಹಾಗೂ ಹೊರಗಿನವರು ಈ ನಂಬಿಕೆಯನ್ನು ಅಲ್ಲಗಳೆಯುತ್ತಾರೆ. ಅಲ್ಲದೆ ಸಜ್‌ನೇಖಾಲಿ ಎಂಬ ಹಿರಿಯ ಅಧಿಕಾರಿ ಈ ಗನಿನ್‌ಗಳೇ ಮೊದಲು ಆಕ್ರಮಣಕ್ಕೊಳಗಾಗುತ್ತಾರೆ ಎಂದಿದ್ದರು. ಈ ಅನುಮಾನವನ್ನು ಪ್ರಾಮಾಣಿಕವಾಗಿ ಜಗತ್‌ಬಂಧು ಮುಂದಿಟ್ಟೆ. ಕಿರುನಗೆ ಬೀರುತ್ತಾ ತಮ್ಮನ್ನು ಹಿಂಬಾಲಿಸುವಂತೆ ಜಗತ್‌ಬಂಧು ಸನ್ನೆ ಮಾಡಿದರು. ಕೆಲವು ಗುಡಿಸಲುಗಳನ್ನು ದಾಟಿ ನಾವು ಒಂದು ಗುಡಿಸಲಿನ ಒಳ ಹೊಕ್ಕೆವು. ಮಂಚದ ಮೇಲೆ ಮಲಗಿದ್ದ ವ್ಯಕ್ತಿಯನ್ನು ಜಗತ್ ಮೃದುವಾಗಿ ಕರೆದು ಎಬ್ಬಿಸಿದರು. "ನಿಮಗೆ ಜಗತ್‌ಬಂಧುವಿನ ಕಥೆ ತಿಳಿಯಬೇಕೇ...? ಅದಕ್ಕಿಂತ ಮೊದಲು ನನ್ನ ಕಥೆ ಹೇಳುತ್ತೇನೆ ಕೇಳಿ. ಜಗತ್ ಆಗ ಗನಿನ್ ಆಗಿರಲಿಲ್ಲ. ನಾವೊಂದು ಹತ್ತು ಜನ ಏಡಿ ಹಿಡಿಯಲು ಹೋಗಿದ್ದೆವು. ಏಡಿಯೊಂದಕ್ಕೆ ಹೊಂಚು ಹಾಕುತ್ತಿದ್ದ ನನ್ನ ಬೆನ್ನ ಮೇಲೆ ದೊಪ್ಪನೆ ಏನೋ ಬಿತ್ತು. ಕಚ್ಚುತ್ತಾ, ಪರಚುತ್ತಾ ಅದು ನನ್ನನ್ನು ಗಾಯಗೊಳಿಸುತ್ತಿತ್ತು. ಹಿಂತಿರುಗಿ ನೋಡಲಾಗದಿದ್ದರೂ ಅದು ಹುಲಿ ಎಂಬುದರಲ್ಲಿ ಅನುಮಾನವೇ ಇರಲಿಲ್ಲ. ಒಮ್ಮಲೇ ನನ್ನ ಬೆನ್ನ ಮೇಲಿದ್ದ ಭಾರ ಕಡಿಮೆಯಾದಂತೆನಿಸಿತು. ನನ್ನ ಹಿಂದೆ ಜಗತ್ ನಿಂತಿದ್ದ. ಭಾರೀ ಗಾತ್ರದ ಹುಲಿಯನ್ನು ಆತ ಎತ್ತಿ ಹಿಡಿದಿದ್ದ. ಬೇಟೆ ತಪ್ಪಿದ ಸಿಟ್ಟಲ್ಲಿ ಹುಲಿ ಎಗರಾಡುತ್ತಿತ್ತು. ಕೋರೆ ಹಲ್ಲುಗಳನ್ನು ತೋರಿಸುತ್ತಾ ಘರ್ಜಿಸುತ್ತಿತ್ತು. ಬಾಯಿಂದ ಸುರಿಯುತ್ತಿದ್ದ ಜೊಲ್ಲು ಜಗತ್‌ನ ಮುಖದ ಮೇಲೆಲ್ಲಾ ಹರಿಯುತ್ತಿತ್ತು. ಅಂದರೂ ಆತ ಹುಲಿಯನ್ನು ಬಿಡಲಿಲ್ಲ. ಯಾವಾಗ ಅದು ಜಿಗಿದು ಜೀವಭಯದಿಂದ ಓಡುತ್ತಾ ಕಾಡು ಸೇರಿತೋ ನಮಗೆ ಗೊತ್ತಿಲ್ಲ. ಜಗತ್ ಕುಸಿದು ಕುಳಿತ. ಆದರೆ ಕೆಲವೇ ಕ್ಷಣಗಳಲ್ಲಿ ಚೇತರಿಸಿಕೊಂಡ ಆತ ನನ್ನನ್ನು ಮನೆ ತಲುಪಿಸಿದ. ಜಗತ್ ಹುಲಿಯನ್ನು ಸೆದೆಬಡಿದ ಬಗೆ ನಮಗೆ ಒಗಟಾಗಿತ್ತು. ನಮ್ಮನ್ನು ರಕ್ಷಿಸಬಲ್ಲ 'ಗನಿನ್' ಆತ ಎಂಬುದು ನಮಗೆ ತಿಳಿದಿರಲಿಲ್ಲ." ಆತ ಹಿಂತಿರುಗಿ ನಡೆಯುತ್ತಿದ್ದಂತೆ ಹುಲಿಯ ಆಕ್ರಮಣದ ಸಂಕೇತವಾಗಿ ತಲೆಯ ಹಿಂಭಾಗದಿಂದ ಬೆನ್ನಿನವರೆಗೆ ಇಳಿದ ಭಾರೀ ಕಲೆಯೊಂದನ್ನು ನಾನು ಗಮನಿಸಿದೆ. "ನನ್ನ ಚಿಕ್ಕಪ್ಪ ಗನಿನ್ ಆಗಿದ್ದರು. ಕೆಲವು ವಿಷಯಗಳನ್ನು ಅವರು ಎಳವೆಯಲ್ಲೇ ಕಲಿಸಿದ್ದರು. ಆಗ ನನ್ನ ಪ್ರಕಾರ ಅವೆಲ್ಲಾ ಹೊಸ ಆಟ ಮಾತ್ರವಾಗಿತ್ತು. ಆದರೆ ಅಂದು ಅವೆಲ್ಲಾ ನನ್ನ ಉಪಯೋಗಕ್ಕೆ ಬಂತು. ಇನ್ನೊಮ್ಮೆ ಅದು ಸಾಧ್ಯವೇ ಎಂಬ ಬಗ್ಗೆ ನನಗೇ ಅನುಮಾನವಿದೆ..." ಮುಜುಗರದ ದನಿಯಲ್ಲಿ ಜಗತ್‌ಬಂಧು ಹೇಳಿದರು. "ಅಂಥ ಸಂದರ್ಭ ಮತ್ತೊಮ್ಮೆ ಎದುರಾಗುವುದಿಲ್ಲ ಅಂದುಕೊಂಡಿದ್ದೇನೆ. ಹುಲ್ಲಿನ ಎಳೆಯಿಂದ ಹುಲಿಯನ್ನು ಹೇಗೆ ಕಟ್ಟಿ ಹಾಕಬಹುದು ಎಂಬುದನ್ನು ನಾನು ಕಲಿಯುತ್ತಿದ್ದೇನೆ. ಹೊಸ ಗುರು ಸಿಕ್ಕಿದ್ದಾರೆ..." ಜಗತ್ ಮಾತು ಮುಂದುವರಿಸಿದರು, "ಈಗ ಹುಲಿ ಬರುವುದು ನನಗೆ ಮುಂಚಿತವಾಗಿಯೇ ತಿಳಿಯುತ್ತದೆ. ಹಾಗೆ ಕಾಡಿನಲ್ಲಿರುವವರಿಗೆ ನಾನು ಸೂಚನೆ ನೀಡುತ್ತೇನೆ. ನನಗೆ ಗೊತ್ತು ನೀನು ಹುಲಿ ಹುಡುಕುತ್ತಿದ್ದೀಯ ಆದರೆ ಅದೇ ನಿನ್ನನ್ನು ಹುಡುಕಿ ಬರುತ್ತಿದೆ...!" ಹೋ... ಈ ಮನುಷ್ಯನ ಉದ್ದೇಶವೇನು? ನನ್ನನ್ನು ಭಯಪಡಿಸುವುದೇ? ಆ ಕಣ್ಣುಗಳಲ್ಲಿ ಇಣುಕಿ ನೋಡಿದೆ... ತಿಳಿಗೊಳದಂತಿದ್ದ ಪ್ರಶಾಂತತೆ ಬಿಟ್ಟರೆ ಬೇರೇನೂ ಅಲ್ಲಿರಲಿಲ್ಲ. "ದಾದಾ! ದಾದಾ!" ದೋಣಿ ಹುಟ್ಟು ಹಾಕುತ್ತಿದ್ದ ನಿಖಿಲ್ದಾ ಏದುಸಿರು ಬಿಡುತ್ತಾ ಬರುತ್ತಿದ್ದ. "ಬೇಗ ಬನ್ನಿ ಹುಲಿ ಇಲ್ಲೇ ಇದೆ..." ನಾನು ದಡದತ್ತ ದೌಡಾಯಿಸಿದೆ. ಬೆರಗುಗಣ್ಣುಗಳಿಂದ ಜಗತ್‌ಬಂಧುವನ್ನು ನೋಡಿದೆ. "ಜಾಗ್ರತೆ...." ಮಂದಹಾಸ ಬೀರುತ್ತಾ ಜಗತ್‌ಬಂಧು ಹೇಳಿದರು.

ಅವ್ಯಕ್ತ ಆನಂದಧಾಮ

ಸುಂದರಬನ ದಟ್ಟಾರಣ್ಯ ಮತ್ತು ನದಿ ಅಲ್ಲಿನ ಪ್ರತಿ ಕುಟುಂಬದ ಒಬ್ಬ ವ್ಯಕ್ತಿ ಅಥವಾ ಅವರ ಅವಯವಗಳನ್ನು ಬಲಿ ತೆಗೆದುಕೊಂಡಿದೆ. ನಾನು ಜಗತ್‌ಬಂಧು ಬಳಿ ಹುಲಿ ಮತ್ತು ಮೊಸಳೆಗಳನ್ನು ಸೆರೆಹಿಡಿದು ಇಲ್ಲಿಂದ ಸ್ಥಳಾಂತರಿಸಿದರೆ ನೀವು ಸಂತೋಷವಾಗಿರುತ್ತೀರಾ ಎಂದು ಕೇಳಿದೆ. ಅವರು ಇಲ್ಲಾ ಎಂಬಂತೆ ತಲೆಯಾಡಿಸುತ್ತಾ, "ಹುಲಿಗಳು ಇಲ್ಲಿರುವುದರಿಂದಲೇ ಅರಣ್ಯವಿದೆ. ಅರಣ್ಯ ನಮ್ಮನ್ನು ರಕ್ಷಿಸುತ್ತಿರುವುದರಿಂದ ನಾವಿಲ್ಲಿದ್ದೇವೆ. ಹುಲಿಗಳು ಇಲ್ಲಿ ಇಲ್ಲ ಎಂದಿದ್ದರೆ ಅರಣ್ಯವಿರುತ್ತಿರಲಿಲ್ಲ. ನಾವೂ ಇರುತ್ತಿರಲಿಲ್ಲ." ಇದು ಕೇವಲ ಜಗತ್‌ಬಂಧು ಒಬ್ಬರ ಅನಿಸಿಕೆ ಅಲ್ಲ. ನಾನು ಭೇಟಿ ಮಾಡಿದ ಪ್ರತಿಯೊಬ್ಬ ಹಳ್ಳಿಗನೂ ಒಂದು ವಿಷಯವನ್ನು ಚೆನ್ನಾಗಿ ಅರಿತಿದ್ದಾರೆ. ಅವರಿಗೆ ನದಿ ಮತ್ತು ಅರಣ್ಯ ಜೀವನಾಧಾರವಾಗಿವೆ. ಜೊತೆಗೆ ಬಂಗಾಳಕೊಲ್ಲಿಯಿಂದ ಬೀಸುವ ಬಿರುಗಾಳಿ ಮತ್ತು ಭಾರೀ ಅಲೆಯಿಂದ ಬೆಳೆ, ಮನೆ ಹಾಗೂ ಜೀವಹಾನಿಯಾಗುವುದನ್ನು ತಪ್ಪಿಸುವಲ್ಲಿ ಕಾಂಡ್ಲಾ ಕಾಡು ರಕ್ಷೆ ನೀಡುತ್ತವೆ. ಒಂದು ವೇಳೆ ಹುಲಿ ಅಲ್ಲಿಲ್ಲ ಎಂದಾದಲ್ಲಿ ಅಕ್ರಮ ಮರ ಸಾಗಣೆಗೆ ಅವಕಾಶ ಮಾಡಿಕೊಟ್ಟಂತಾಗಿ ಆ ಜೌಗು ಪ್ರದೇಶ ಬಟಾಬಯಲಾಗಿ ಹೋಗುತ್ತದೆಂಬ ಸತ್ಯದ ಅರಿವೂ ಅವರಿಗಿದೆ. ಸುಂದರಬನ ಜನರು ಹುಲಿಗೆ ಬೆದರುತ್ತಾರೆ. ಜೊತೆಗೇ ಅದನ್ನು ಪೂಜ್ಯಭಾವದಿಂದ ಕಾಣುತ್ತಾರೆ. ಅರಣ್ಯದ ಬಹುದೂರ ಇರುವ ನಾವು ಕಿರುಕೋಣೆಯಲ್ಲಿ ಕುಳಿತು ಈ ಸತ್ಯವನ್ನು ಕೇಳುತ್ತಿದ್ದರೆ ಕ್ಲೀಷೆ ಎಂದೆನಿಸಬಹುದು. ಆದರೆ ಪ್ರಕೃತಿಗೆ ಸಮೀಪವಿರುವ, ಅದರಲ್ಲೂ ಸತ್ಯದ ಸಮೀಪವಿರುವ ಇವರು ನಮ್ಮಿಂದ ಅದೆಷ್ಟೇ ದೂರದಲ್ಲಿರಲಿ, ನಮ್ಮ ಸುರಕ್ಷಿತ ಜೀವನದ ಮೇಲೂ ಪ್ರಭಾವ ಬೀರುತ್ತಾರೆ. ಈ ವಿಶಾಲ ಕಾಂಡ್ಲಾ ಕಾಡಿನಲ್ಲಿರುವ ಹುಲಿಗಳು ಹಾಗೂ ಸುಂದರೀ ಮರಗಳು (ಸುಮಾರು 20ಕ್ಕಿಂತಲೂ ಅಧಿಕ ಜಾತಿಯ) ಮನುಷ್ಯ, ಪ್ರಾಣಿ ಜಗತ್ತು (ಬಹುಶಃ ಜಗತ್ತಿನಲ್ಲೇ ಅತ್ಯಧಿಕ ಸಂಖ್ಯೆಯಲ್ಲಿರುವ ಹುಲಿಗಳು) ಮತ್ತು ಕಾಡಿನ ಉಳಿವಿನ ಭರವಸೆ ನೀಡುತ್ತಿವೆ. ಬಹುಕಾಲದ ತನಕ ಈ ಮೂರರ ಸಹಜೀವನ ಹೀಗೇ ಮುಂದುವರಿಯಲಿ.

ಐಐಪಿಎಂ
ಥಿಂಕ್ ಟ್ಯಾಂಕ್

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .