|
ವಿತ್ತ ಸಚಿವ ಪಿ. ಚಿದಂಬರಂ ಬಜೆಟ್ ಮಂಡಿಸುತ್ತಿದ್ದಂತೆ ಕಳೆದ ರಾತ್ರಿ ಅವರೇನೂ ನಿದ್ದೆ ಕಳೆದುಕೊಂಡಿರಲಿಲ್ಲ ಎನ್ನುವುದು ಖಚಿತವಾಗಿತ್ತು. ಆದರೆ? ಷೇರು ಮಾರುಕಟ್ಟೆ ತಮ್ಮ ಬಜೆಟ್ ಪ್ರಸ್ತಾಪಗಳಿಗೆ ಹೇಗೆ ಪ್ರತಿಕ್ರಿಯೆ ನೀಡಬಹುದು ಎಂಬ ಚಿಂತೆ ಅವರನ್ನು ಕಾಡಿರಲಿಲ್ಲ. ಸಂಶಯ ಬೇಡ, ಕಳೆದ 45 ತಿಂಗಳುಗಳಲ್ಲಿ ಪ್ರತೀಬಾರಿ ಸೆನ್ಸೆಕ್ಸ್ (ಬಾಂಬೆ ಷೇರು ಮಾರುಕಟ್ಟೆ) ಮತ್ತು ನಿಫ್ಟೀ (ನ್ಯೂಯಾರ್ಕ್ ಷೇರು ಮಾರುಕಟ್ಟೆ) ತೀವ್ರ ಕುಸಿತ ಕಂಡಾಗಲೆಲ್ಲ ಮಾರುಕಟ್ಟೆ ರಕ್ಷಣೆಗೆ ಧಾವಿಸಿದ ಅದೇ ವಿತ್ತ ಸಚಿವರು ಅವರು! ಮಾರುಕಟ್ಟೆಯ ಭಾವ ತೀವ್ರತೆಯನ್ನು ಶಮನಗೊಳಿಸುವಲ್ಲಿ ಅವರ ಷೇರು ಪದಗುಚ್ಛಗಳು ಎಷ್ಟು ಅಮೂಲ್ಯವಾಗಿವೆ ಎಂದರೆ, ಆರ್ಥಿಕ ಪರಿಸ್ಥಿತಿ ದೃಢವಾಗಿದೆ ಮತ್ತು ವಿದೇಶಿ ಹೂಡಿಕೆದಾರರ ವಿಶ್ವಾಸಾರ್ಹತೆಯೂ. ಈಗಲೂ ವಿದೇಶಿ ಹೂಡಿಕೆದಾರರು ಭಾರತೀಯ ಸಾಮಾನ್ಯ ಷೇರುಗಳನ್ನು ಖರೀದಿಸುತ್ತಿದ್ದಾರೆ. ಹೀಗಾಗಿ ಈಗ ಷೇರುಗೂಳಿ ಮುಗ್ಗರಿಸಿದೆ ಎಂದು ಬೆದರುವ ಅಗತ್ಯವೇನೂ ಇಲ್ಲ ಬಿಡಿ.
ಇದೆಲ್ಲಾ ಹಾಗಿರಲಿ, ಬಜೆಟ್ ಭಾಷಣ ಕೇಳುತ್ತಲೇ ಕೆಲ ದಿನಗಳ ಮಟ್ಟಿಗೆ ಹೂಡಿಕೆದಾರರ ನಿದ್ದೆ ಹಾರಿ ಹೋಗಿರುವುದರಲ್ಲಿ ಸಂಶಯವಿಲ್ಲ. ಈಗಾಗಲೇ ನಲುಗಿ ಹೋಗಿದ್ದ ಸೂಚ್ಯಂಕಗಳು ಮುಂದಿನ 12 ದಿನಗಳಲ್ಲಿ ಏರು ಪೇರಾಗಲಿವೆ ಎನ್ನುವುದರಲ್ಲೂ ಎರಡು ಮಾತಿಲ್ಲ. ಸ್ಥಿರತೆ ಎಂಬುದು ಇಲ್ಲದೆ ಗೊಂದಲದ ಸನ್ನಿವೇಶ ಸೃಷ್ಟಿಯಾಗುತ್ತದೆ. ಸುಮಾರು 21,000 ಅಂಕಗಳಷ್ಟು ಏರಿಕೆ ಕಂಡ ಬಾಂಬೆ ಷೇರು ಮಾರುಕಟ್ಟೆ ಸೂಚ್ಯಂಕ ಕೊಂಚ ಚೇತರಿಸಿಕೊಳ್ಳುವ ಮುನ್ನ ಸರಿ ಸುಮಾರು 15,000ಗಳಷ್ಟು ಕುಸಿತ ಕಂಡಿದೆ. ಇನ್ನೂ ಕಂತೆಗಟ್ಟಲೆ ಕೆಟ್ಟ ಸುದ್ದಿಗಳೇ ಇವೆ. ಮುಂದಿನ ದಿನಗಳಲ್ಲಿ ಸೂಚ್ಯಂಕ 12,000ದಷ್ಟು ಕುಸಿಯುವ ಸಾಧ್ಯತೆಗಳಿವೆ ಎಂದು ಕೆಲ ಜಾಗತಿಕ ಷೇರು ಪಂಡಿತರು ಭವಿಷ್ಯ ನುಡಿದಿದ್ದಾರೆ. ಕನಿಷ್ಠ 13,000- 14,000ದಷ್ಟು ತಳ ಕಾಣುವುದು ಖಚಿತ ಎನ್ನುವುದು ಬಹುತೇಕ ತಜ್ಞರ ಅಭಿಪ್ರಾಯ.
ಹಾಗಿದ್ದಲ್ಲಿ ಭಾರತೀಯ ಮಾರುಕಟ್ಟೆಯನ್ನು ತಳ ಮಟ್ಟಕ್ಕೆ ದೂಡುತ್ತಿರುವ ಆ ಶಕ್ತಿ ಯಾವುದು? ಬಾಹ್ಯ (ಜಾಗತಿಕ) ವಿದ್ಯಮಾನಗಳ ಪರಿಣಾಮವೆ? ದೇಶದ ಆರ್ಥಿಕ ಜಡತೆ ಕಾರಣವೆ? ರೂ. 60,000 ಕೋಟಿ ಸಾಲ ಮನ್ನಾ ಮತ್ತು ಹಲವು ಯೋಜನೆಗಳಿಗೆ ಬಜೆಟ್‌ನಲ್ಲಿ ಅನುದಾನ ಮಂಜೂರು ಮಾಡುವ ಪ್ರಸ್ತಾಪದ ಪರಿಣಾಮವೆ? ಅಥವಾ ಇದು...? ಕ್ಷಣ ಯೋಚಿಸಿ ನೋಡಿ. ಸನ್ನಿಹಿತವಾಗಿರುವ ಸಾರ್ವತ್ರಿಕ ಚುನಾವಣೆಗಳ ಫಲಿತಾಂಶವೆ? ಸಾಮಾನ್ಯವಾಗಿ ಬಹುತೇಕ ಮಾರುಕಟ್ಟೆಗಳು ಚುನಾವಣೆ ಕ್ರೇಜ್‌ನ ಬಲಿಪಶುಗಳಾಗುವ ಉದಾಹರಣೆಗಳಿವೆ. ಯಾವುದೇ ದೇಶದಲ್ಲಿ ಸಾರ್ವತ್ರಿಕ ಚುನಾವಣೆ ನಡೆದ ಸಂದರ್ಭದಲ್ಲಿ ಮಾರುಕಟ್ಟೆ ಏರಿಳಿತಗಳು ಸಾಮಾನ್ಯ ವಿಚಾರ. ಮುಖ್ಯವಾಗಿ ಯಾವ ಪಕ್ಷ ಬಹುಮತ ಪಡೆಯಬಲ್ಲುದು ಎಂಬ ಪ್ರಶ್ನೆಗೆ ಹೂಡಿಕೆದಾರರಲ್ಲಿ ಸಿದ್ಧ ಉತ್ತರ ಸಿಗದೆ ಇದ್ದಾಗ.
ಚಿದಂಬರಂ ಅವರ ಬಜೆಟ್ ಶೀಘ್ರದಲ್ಲೇ ಚುನಾವಣೆ ಘೋಷಣೆಯಾಗುವ ಸೂಚನೆ ಎನ್ನಬಹುದು. ನಿಗಧಿಯಾಗಿರುವ 2009ರ ಏಪ್ರಿಲ್- ಮೇವರೆಗೆ ಕಾಯುವ ಸಾಧ್ಯತೆಗಳಿಲ್ಲ. ಅವಧಿಗೆ ಮುನ್ನವೇ ಚುನಾವಣೆ ನಡೆಸುವ ನಿರೀಕ್ಷೆಗಳಿವೆ. ಇಂಥ ವರದಿಗಳಿಗೆ ಮಾರುಕಟ್ಟೆ ತತ್ತರಿಸುವುದು ಸಹಜವೇ ತಾನೆ. 1984ರಲ್ಲಿ ಚುನಾವಣಾ ತಿಂಗಳು ಅಕ್ಟೋಬರ್- ನವೆಂಬರ್‌ನಲ್ಲಿ ಸೂಚ್ಯಂಕ ತೀವ್ರ ಕುಸಿತ ಕಂಡಿತ್ತು ಮತ್ತು ನಂತರ ಡಿಸೆಂಬರ್‌ನಲ್ಲಿ ಏರಿಕೆಯಾಗಿತ್ತು. 1989ರಲ್ಲಿ ಚುನಾವಣೆಗೆ ಎರಡು ಮೂರು ತಿಂಗಳ ಮುನ್ನ ಮತ್ತೆ ಸೂಚ್ಯಂಕ ಕುಸಿದಿತ್ತು. 2004ರಲ್ಲೂ ಚುನಾವಣಾ ದಿನಗಳಲ್ಲಿ ಸೂಚ್ಯಂಕ ಜಡವಾಗಿತ್ತು ಮತ್ತು 1996ರಲ್ಲಿ ಏರಿಕೆಯಾಗಿತ್ತು.
ಅಚ್ಚರಿ ಎಂಬಂತೆ 2004ರಲ್ಲಿ ಚುನಾವಣೆ ಫಲಿತಾಂಶ ಪ್ರಕಟವಾದ ಕೆಲ ದಿನಗಳಲ್ಲೇ ಬಾಂಬೆ ಷೇರು ಮಾರುಕಟ್ಟೆ ಸೂಚ್ಯಂಕ ಕುಸಿದಿತ್ತು. ಕಾರಣ? ಎಡರಂಗದ ಬೆಂಬಲದಲ್ಲಿ ಯುಪಿಎ ಸರ್ಕಾರ ರಚಿಸಿದ ಹಿನ್ನೆಲೆಯಲ್ಲಿ ಸಾರ್ವಜನಿಕ ವಲಯಗಳ ಖಾಸಗೀಕರಣಕ್ಕೆ ಅವಕಾಶ ನೀಡಲಾರರು ಎಂಬ ಅಳುಕು ಹೂಡಿಕೆದಾರರಲ್ಲಿ ಬೆಳೆದಿತ್ತು. ಹಿಂದಿನ ಎನ್‌ಡಿಎ ಸರ್ಕಾರ ಬಂಡವಾಳ ಹಿಂತೆಗೆತವನ್ನು ಗಂಭೀರವಾಗಿ ಪರಿಗಣಿಸಿತ್ತು. ಹಿಂದಿನ ಸರ್ಕಾರದ ಬಂಡವಾಳ ಹಿಂತೆಗೆತ ಖಾತೆ ಸಚಿವ ಅರುಣ್ ಶೌರಿ ವಿಜಯ ಪತಾಕೆ ಹಾರಿಸಿದ್ದರು. ಆದರೆ ಇದಕ್ಕೆ ವ್ಯತಿರಿಕ್ತವಾಗಿ ಯುಪಿಎ ಆ ಸಚಿವಾಲಯದಿಂದ ದೂರವೇ ಉಳಿದಿತ್ತು.
ಹೀಗಾಗಿ, ಮುಂಬರುವ ಚುನಾವಣೆಯಲ್ಲಿ ಏನು ಕಾದಿದೆ ಮತ್ತು ಹೂಡಿಕೆದಾರರ ಚಿಂತನೆಗಳು ಏನು ಹೇಳುತ್ತವೆ ಎನ್ನುವುದು ಗೊಂದಲದ ಗೂಡಾಗಿದೆ. ಕೆಲ ಬಾರಿ ಮೂಲಭೂತ ಅಂಶಗಳು ಮತ್ತು ಇನ್ನು ಕೆಲ ಬಾರಿ ಭಾವನೆಗಳು ಅನಿಶ್ಚಿತತೆಯನ್ನು ಬೆಳೆಸುತ್ತವೆ. ಇದು ಬುದ್ಧಿವಂತಿಕೆ ಮತ್ತು ಭಾವನೆಗಳ ಸಂಯೋಜನೆ, ಹೃದಯ ಮತ್ತು ಮನಸ್ಸು, ಮೌಲ್ಯ ಪಡೆಯುವುದು ಮತ್ತು ಸಂಪತ್ತು ನಷ್ಟ, ತಳಹದಿ ಮತ್ತು ತಳ ಕಾಣುವುದು, ಕಾರ್ಪೋರೇಟ್ ಲಾಭ ಮತ್ತು ಸೂಚ್ಯಂಕ ತಲೆ ಕೆಳಗಾಗಿ ಪಯಣಿಸುವಾಗಿನ ಜಡತ್ವ. ಸಮಸ್ಯೆಗಳೂ ವಿಭಿನ್ನ... ಗೃಹ ಮತ್ತು ಜಾಗತಿಕ, ಪೂರ್ವ ಮತ್ತು ಪಶ್ಚಿಮ, ಆಂತರಿಕ ಮತ್ತು ಬಾಹ್ಯ.
ಭಾವನಾತ್ಮಕ ವಿಚಾರಕ್ಕೆ ಬಂದಲ್ಲಿ ಈಗ ಹೂಡಿಕೆದಾರರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ತಿಂಗಳಿಂದ ಅವರು 'ತಿದ್ದುಪಡಿ ಅನಿವಾರ್ಯ' ಎನ್ನುವುದನ್ನು ಕೇಳುತ್ತಲೇ ಬಂದಿದ್ದಾರೆ. "ಬಾಂಬೆ ಷೇರು ಮಾರುಕಟ್ಟೆ ಸೂಚ್ಯಂಕ 12,000ದಷ್ಟು ಕುಸಿತ ಕಾಣಲಿದೆ" ಎನ್ನುತ್ತಾರೆ ಜಾಗತಿಕ ಷೇರು ಲಾಭ-ನಷ್ಟ ತಜ್ಞ ಮಾರ್ಕ್ ಫೇಬರ್. ಇತರ ವಿಶ್ಲೇಷಕರು ಸೂಚ್ಯಂಕ 15,000ದಿಂದ 16,000ದ ಆಚೀಚೆ ಇರುವುದಾಗಿ ಅಭಿಪ್ರಾಯ ಪಟ್ಟಿದ್ದಾರೆ. ಮುಂದಿನ ಹಂತಗಳು ಗೋಜಲಾಗಿದ್ದರೂ ವೈಯಕ್ತಿಕ ಮತ್ತು ಸಾಂಸ್ಥಿಕವಾಗಿ ನಷ್ಟ ಅನುಭವಿಸಿದವರು ಮತ್ತೆ ಹೂಡಿಕೆಗೆ ಇಳಿಯುವ ಸಾಹಸಕ್ಕೆ ಕೈ ಹಾಕಲಾರರು. ಮಧ್ಯವರ್ತಿಗಳು ತಮ್ಮ ಗ್ರಾಹಕರಿಗೆ 'ಲಾಭದಲ್ಲಿರಿ' ಅಥವಾ 'ಹಣ ತೆಗೆಯಿರಿ' ಎಂದೇ ಸಲಹೆ ನೀಡುತ್ತಿದ್ದಾರೆ. ಅಂದರೆ ಈ ಹಂತದಲ್ಲಿ ನಿಮಗೆ ಎಷ್ಟು ಲಾಭ ಸಿಗುವುದೋ ಆ ಲಾಭಕ್ಕೆ ಷೇರು ಮಾರಾಟ ಮಾಡಿ ಬಿಡಿ!
"ಮಾರುಕಟ್ಟೆಯಲ್ಲಿ ಬೆಲೆ ಕುಸಿತದ ಭಾವಾತಿರೇಕಗಳ ಪ್ರಭಾವವಂತೂ ಇದ್ದೇ ಇದೆ" ಎನ್ನುತ್ತಾರೆ 'ಅರಿಹಂಟ್ ಕ್ಯಾಪಿಟಲ್ ಮಾರ್ಕೆಟ್ಸ್'ನ ರಾಜೇಶ್ ಪಾಲ್ವಿಯ. ಮುಂಬೈ ಮೂಲದ ಅಶೋಕ್ ಜೈನಾನಿ ಅವರೂ ಇದೇ ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ. "ಇತ್ತೀಚೆಗೆ ಬೇಡಿಕೆಗಳು ಊಹೆಗಳ ಆಧಾರದಲ್ಲೇ ಸೃಷ್ಟಿಯಾಗುತ್ತಿವೆ" ಎನ್ನುತ್ತಾರೆ ಅಶೋಕ್. ಊಹಾಕಾರರು ತಮ್ಮ ಲಾಭಗಳತ್ತ ಕಣ್ಣಿಟ್ಟಿದ್ದಾರೆ ಎಂದ ಮೇಲೆ ಆದರ್ಶ ಹೂಡಿಕೆದಾರರೂ ಸ್ವಲ್ಪ ದಿನ ದೂರ ಉಳಿಯುವುದೇ ಲೇಸು ಎಂದುಕೊಂಡಿದ್ದಾರೆ -ಕನಿಷ್ಠ ಪ್ರಸಕ್ತ ಸನ್ನಿವೇಶ ಬದಲಾಗುವವರೆಗೆ. ಇಲ್ಲಿನ ಸಮಸ್ಯೆ ಒಂದೇ. ಈ 'ಪ್ರಸಕ್ತ ಸನ್ನಿವೇಶ' ಕೆಲ ತಿಂಗಳುಗಳವರೆಗೆ ಬದಲಾಗುವ ಸೂಚನೆ ಇಲ್ಲ. ವರ್ಷಾರಂಭದ ಜನವರಿ ಮಧ್ಯ ಭಾಗದಲ್ಲಿ ದಲಾಲ್ ಸ್ಟ್ರೀಟ್ ಯಾವಾಗಿನಿಂದ 'ಹಲಾಲ್ ಸ್ಟ್ರೀಟ್' ಆಗಿ ಬದಲಾಯಿತೋ ಬಾಂಬೆ ಷೇರು ಮಾರುಕಟ್ಟೆ ಹೂಡಿಕೆದಾರರಿಗೆ ಕಿರಿ ಕಿರಿ ನೀಡುತ್ತಲೇ ಇದೆ.
ಆರಂಭಿಕ ಸಾರ್ವಜನಿಕ ಮಾರಾಟ (ಐಪಿಒ)ದಲ್ಲಿ ಈ ಗೊಂದಲ ಸ್ಪಷ್ಟವಾಗಿ ಗೋಚರಿಸುತ್ತಿದೆ. ಹೂಡಿಕೆದಾರರ ನಿರಾಸಕ್ತಿಯಿಂದಾಗಿ ಹಲವರು ಹಿಂತೆಗೆತವೇ ಉತ್ತಮ ಹಾದಿ ಎಂದುಕೊಂಡಿದ್ದಾರೆ. ಇತ್ತೀಚೆಗಿನ ಅನೇಕ ಐಪಿಒಗಳು ತಮ್ಮ ದರಪಟ್ಟಿಗಿಂತ ಕೆಳಗಿನ ದರಗಳನ್ನೇ ಕಂಡಿವೆ. ಬಹುತೇಕ ಐಪಿಒಗಳನ್ನು ಹಿಂಪಡೆಯಲಾಗಿದೆ. "ಹೂಡಿಕೆದಾರರು ಪ್ರಿಮಿಯಾ ಕುಸಿತದ ಭಯದಲ್ಲಿದ್ದಾರೆ.(ಇತ್ತೀಚೆಗಿನ ಐಪಿಒಗಳ ವೈಯಕ್ತಿಕ ಷೇರುಗಳ ಮುಖಬೆಲೆಗಿಂತ ಅಧಿಕ) ಈಗಿನ ಪ್ರಿಮಿಯಾ ಸ್ಥಿರವಾಗಿರುತ್ತದೆ ಎನ್ನುವ ನಿಶ್ಚಿತಾಭಿಪ್ರಾಯವಂತೂ ಅವರಲ್ಲಿಲ್ಲ ಎನ್ನುವುದು ಖಚಿತ" ಎನ್ನುತ್ತಾರೆ ಅಶೋಕ್. "ಮುಂದಿನ ಒಂದೆರಡು ತಿಂಗಳ ಮಟ್ಟಿಗೆ ಸಕಾರಾತ್ಮಕ ಭಾವದ ಅಲೆಯನ್ನು ಕಾಣುವುದು ಕನಸೇ ಸರಿ" ಎನ್ನುತ್ತಾರೆ ಪಾಲ್ವಿಯ.
ಇದೇ ಸಂದರ್ಭದಲ್ಲಿ ಭಾರತೀಯ ಅರ್ಥವ್ಯವಸ್ಥೆಯೂ ನಿಧಾನಗತಿಯಲ್ಲಿದೆ. ಅಧಿಕಾರಿಗಳು ಮಾತ್ರ ಈ ವರ್ಷದ ಪ್ರಗತಿ ದರ ಶೇ. 8-9 ಎಂದು ಒತ್ತಿ ಹೇಳುತ್ತಿದ್ದರೂ ಇತರರು ಪ್ರಗತಿ ದರ ಇನ್ನೂ ಶೇ. 7-7.5ರ ಆಜು ಬಾಜಿನಲ್ಲಿದೆ ಎಂದೇ ಅಭಿಪ್ರಾಯ ಪಡುತ್ತಿದ್ದಾರೆ. ಡಾಲರ್ ಎದುರು ರೂಪಾಯಿ ಮೌಲ್ಯ ಹೇಗೆ ಕಾರ್ಯ ನಿರ್ವಹಿಸುತ್ತದೆ ಎನ್ನುವುದು ರಫ್ತು ವ್ಯವಹಾರದ ಮೇಲೂ ಪರಿಣಾಮ ಬೀರಲಿದೆ. ಹಣದುಬ್ಬರ ತೀವ್ರಗತಿಯಲ್ಲಿ ಏರುತ್ತಿದೆ. ಫೆಬ್ರವರಿಯಲ್ಲಿ ದ್ವಿ- ಚಕ್ರ ವಾಹನ ವಲಯ ಋಣಾತ್ಮಕ ಪ್ರಗತಿ ದರ ದಾಖಲಿಸಿದೆ. ಈ ನಡುವೆ ವ್ಯಾಪಕ ವಿದೇಶಿ ಒಳಹರಿವಿನ ಪರಿಶೀಲನೆಗೆ ಹಾದಿ ಹುಡುಕುವುದು ಸೆಂಟ್ರಲ್ ಬ್ಯಾಂಕ್‌ಗೆ ತಲೆನೋವಾಗಿ ಪರಿಣಮಿಸಿದೆ. ಜಾಗತಿಕವಾಗಿ ಅವಲೋಕಿಸಿದಲ್ಲಿ, ಅಮೆರಿಕ ಅರ್ಥವ್ಯವಸ್ಥೆ ಅಪಸರಣದ ಹಾದಿ ಹಿಡಿದಿದೆ. 'ಅಮೆರಿಕ ಫೆಡ್' ಸ್ಥಿರ ವ್ಯವಹಾರದ ಸೂಚನೆ ನೀಡಲಿದೆಯೇ ಎನ್ನುವುದು ಪ್ರಶ್ನೆಯಾಗೇ ಉಳಿದಿದೆ. ಚೀನಾ ಹಣದುಬ್ಬರದ ಸಮಸ್ಯೆಯಲ್ಲಿ ತೊಳಲಾಡುತ್ತಿದೆ. ಜಪಾನ್ ಅರ್ಥವ್ಯವಸ್ಥೆಯ ಭವಿಷ್ಯ ಅನಿಶ್ಚಿತ ಮತ್ತು ತೈಲಬೆಲೆಗಳು ನೆಲಕ್ಕಿಳಿಯುವ ಸೂಚನೆಯಂತೂ ಇಲ್ಲವೇ ಇಲ್ಲ. ಇವೆಲ್ಲಾ ಭಾರತ ಮತ್ತು ಇತರ ಅಭಿವೃದ್ಧಿ ಹೊಂದುತ್ತಿರುವ ಮಾರುಕಟ್ಟೆಗಳ ಮೇಲೆ ನೇರ ಮತ್ತು ಪರೋಕ್ಷ ಪರಿಣಾಮಗಳನ್ನು ಬೀರಲಿವೆ. ಹೀಗಾಗಿ ಗೃಹ ಮತ್ತು ವಿದೇಶಿ ಹೂಡಿಕೆದಾರರು ಈಗ ತಮ್ಮ ಷೇರುಗಳನ್ನು ಮಾರಾಟ ಮಾಡಿ, ನಂತರ ಖರೀದಿಸುವುದೇ ಸದ್ಯದ ಮಟ್ಟಿಗೆ ತರ್ಕಬದ್ಧ ಚಿಂತನೆಯಾಗಲಿದೆ. ಆದರೆ ಹೂಡಿಕೆದಾರರ ತಲೆಯಲ್ಲಿ ಕೊರೆಯುತ್ತಿರುವ ಪ್ರಶ್ನೆ ಒಂದೇ. ಈ 'ನಂತರ' ಬರುವುದು ಯಾವಾಗ? ಏಪ್ರಿಲ್, ಜೂನ್ ಅಥವಾ ಜುಲೈ?
ಆ ಕಾರಣದಿಂದ ಹೂಡಿಕೆದಾರರಿಗೆ ನೀಡುವ ಪ್ರಣಾಳಿಕೆ ಸರಳ ಮತ್ತು ಸ್ಪಷ್ಟ. ಕಾದು ನೋಡಿ; ಈಗ ಹಣ ತೆಗೆದು ಬಿಡಿ. ಮುಂದೆ ಮತ್ತೆ ಹಣ ಹೂಡಬಹುದು. ಭಾರತದಲ್ಲಿ ರಾಜಕೀಯ ಪಕ್ಷಗಳು ಸಾರ್ವತ್ರಿಕ ಚುನಾವಣೆಗೆ ಸಿದ್ಧರಾಗುತ್ತ ಮತದಾರರ ಓಲೈಕೆಯತ್ತ ಗಮನ ಹರಿಸುತ್ತಿದ್ದರೆ, ಮಾರುಕಟ್ಟೆ ಹೂಡಿಕೆದಾರರು ಭವಿಷ್ಯದಲ್ಲಿ ಆಕರ್ಷಕ ಲಾಭ ತರಬಲ್ಲಂತಹ ಮೌಲ್ಯಗಳ ಆಯ್ಕೆ ಮಾಡಿ ಮಾರುಕಟ್ಟೆ ಕಬಳಿಸಲು ತಯಾರಿ ನಡೆಸುತ್ತಿದ್ದಾರೆ.
ಹೂಡಿಕೆದಾರರು ರಿಪಬ್ಲಿಕನ್ನರ ಅಭಿಮಾನಿಗಳು
ಅಮೆರಿಕದಲ್ಲಿ ಅಧ್ಯಕ್ಷೀಯ ಚುನಾವಣೆ ಮತ್ತು ಷೇರು ಮಾರುಕಟ್ಟೆಯದು
ಅವಿನಾಭಾವ ಸಂಬಂಧ! ಡೆಮಾಕ್ರಟಿಕ್ ಅಭ್ಯರ್ಥಿ ಹಿಲರಿ ಕ್ಲಿಂಟನ್ ಮಾರ್ಚ್ 4
ರಂದು ಒಹಿಯೊ ಮತ್ತು ಟೆಕ್ಸಾಸ್ ಪ್ರಾಥಮಿಕ ಚುನಾವಣೆಯಲ್ಲಿ ವಿಜಯ ಪತಾಕೆ
ಹಾರಿಸಿದ ನಂತರದ ಏಳು ದಿನಗಳಲ್ಲಿ 'ಡೌ' ಶೇ. 0.04ರಷ್ಟು ಕುಸಿತ ಕಂಡಿದೆ. "ಕೆಲ
ಮಹತ್ವದ ಅಧ್ಯಕ್ಷೀಯ ಚುನಾವಣೆಯ ನಿರ್ಣಾಯಕ ತಿಂಗಳುಗಳಲ್ಲಿ (ಸೆಪ್ಟೆಂಬರ್-
ಅಕ್ಟೋಬರ್) ಅಮೆರಿಕ ಷೇರು ಮಾರುಕಟ್ಟೆ ಮೌಲ್ಯ ಕುಸಿದ ಪುರಾವೆಗಳಿವೆ.
1944ರಲ್ಲಿ ರೂಸ್‌ವೆಲ್ಟ್ ಅವರು ಡ್ಯೂವೇ ಅವರನ್ನು ಸೋಲಿಸಿದಾಗ ಷೇರು
ಮಾರುಕಟ್ಟೆ ಶೇ.0.3ರಷ್ಟು ಕುಸಿದಿತ್ತು. 1965ರಲ್ಲಿ ಐಸನ್‌ಹೋವರ್ ಅವರು
ಅಡ್ಲೈ ಸ್ಟೀಫನ್‌ಸನ್ ಅವರನ್ನು (2ನೇ ಬಾರಿ) ಪರಾಜಯಗೊಳಿಸಿದಾಗ ಶೇ.4ರಷ್ಟು
ಕುಸಿತ ಕಂಡಿತ್ತು" ಎನ್ನುತ್ತಾರೆ ಬಾಬ್ ಬ್ರಾನ್ಸನ್ (ಬ್ರಾನ್ಸನ್ ಕ್ಯಾಪಿಟಲ್
ಮಾರ್ಕೆಟ್ ರೀಸರ್ಚ್).

'ನ್ಯಾಷನಲ್ ಬ್ಯೂರೋ ಆಫ್ ಎಕನಾಮಿಕ್ ರೀಸರ್ಚ್' ವರದಿಯ ಪ್ರಕಾರ, 1880-
2004ರ ಅವಧಿಯಲ್ಲಿ ರಿಪಬ್ಲಿಕನ್ ವಿಜಯದಿಂದ ಷೇರುಗಳ ಮೌಲ್ಯ ಶೇ. 2ರಷ್ಟು
ಏರಿದೆ. ಈ ನಡುವೆ ರೊನಾಲ್ಡ್ ರೀಗನ್ ಆಡಳಿತಾವಧಿಯ ನಂತರದ ರಿಪಬ್ಲಿಕನ್
ವಿಜಯಗಳ ಸಂದರ್ಭ ಸರ್ಕಾರಿ ಷೇರು ಪತ್ರಗಳ ಮೇಲಿನ ಬಡ್ಡಿದರಗಳು
ಶೇ. 0.12ರಷ್ಟು ಏರಿವೆ. ಎರಿಕ್ ಸ್ನೋಬರ್ಗ್ (ಚುನಾವಣಾ ಫಲಿತಾಂಶ ಮತ್ತು
ಹಣಕಾಸು ಮಾರುಕಟ್ಟೆ ಕುರಿತ ಅಧ್ಯಯನ) ಪ್ರಕಾರ, "1880ರ ನಂತರದ ಎಲ್ಲಾ
ಅಧ್ಯಕ್ಷೀಯ ಚುನಾವಣೆ ವಿಶ್ಲೇಷಣೆಯಲ್ಲಿ ರಿಪಬ್ಲಿಕ್ ಪಕ್ಷದ ಅಭ್ಯರ್ಥಿ
ಅಧ್ಯಕ್ಷ ಸ್ಥಾನಕ್ಕೇರಿದ ಕೂಡಲೇ ಷೇರು ಮಾರುಕಟ್ಟೆ ಶೇ. 2-3ರಷ್ಟು ಏರಿಕೆ
ದಾಖಲಿಸಿದೆ" ಎಂಬ ಅಭಿಪ್ರಾಯವೇ ವ್ಯಕ್ತವಾಗಿದೆ.
2000ದಲ್ಲಿ ರಿಪಬ್ಲಿಕ್ ಅಭ್ಯರ್ಥಿ ಜಾರ್ಜ್ ಬುಷ್ ಜಯ ಕುರಿತ ಅನುಮಾನಗಳು
ಬಗೆ ಹರಿದಾಗ ಪ್ರಮುಖ ಹಣಕಾಸು ಸೂಚ್ಯಂಕಗಳು ತೀವ್ರಗತಿಯಲ್ಲಿ ಏರಿದ್ದವು.
2004ರಲ್ಲಿಯೂ ಇದೇ ಮರುಕಳಿಸಿತ್ತು. "2000ದ ಅಧ್ಯಕ್ಷೀಯ ಚುನಾವಣಾ ಫಲಿತಾಂಶ
ವಿಳಂಬ ಷೇರು ಮಾರುಕಟ್ಟೆಯ ಮೇಲೂ ಪರಿಣಾಮ (ಋಣಾತ್ಮಕ) ಬೀರಿತ್ತು" ಎಂದು
ಟೆಕ್ಸಾಸ್ ವಿಶ್ವವಿದ್ಯಾನಿಲಯದ ಪ್ರೊಫೆಸರ್‌ಗಳಾದ ಶ್ರೀನಿವಾಸ್ ನಿಪ್ಪಾಣಿ
ಮತ್ತು ಆಗಸ್ಟೀನ್ ಸಿ. ಅರೈಜ್ ಅವರು ನಡೆಸಿದ ಪ್ರಾಯೋಗಿಕ ಅಧ್ಯಯನ ವರದಿ
ತಿಳಿಸಿದೆ.
ಚುನಾಯಿತ ಅಧ್ಯಕ್ಷರ ಯೋಜನೆಗಳು, ಪ್ರಸ್ತಾಪಗಳೂ ಷೇರು ಮಾರುಕಟ್ಟೆ ಮೇಲೆ
ಪರಿಣಾಮ ಬೀರುತ್ತವೆ. ತಕ್ಷಣ ಅಲ್ಲದೆ ಇದ್ದರೂ ದೀರ್ಘಾವಧಿಯಲ್ಲಿ ಈ
ಪರಿಣಾಮವನ್ನು ಕಾಣಬಹುದು. "ಹೊಸ ನಿಯಮಾವಳಿಗಳು ಮತ್ತು ಪ್ರಸ್ತಾಪಗಳು
ಶೀಘ್ರವೇ ಅರ್ಥ ವ್ಯವಸ್ಥೆ ಮೇಲೆ ಪರಿಣಾಮ ಬೀರಲಾರದು" ಎಂದು ಮೊತ್ತ ಮೊದಲ
ಬಾರಿ ಬಿಲ್ ಕ್ಲಿಂಟನ್ ಅಧ್ಯಕ್ಷರಾದಾಗ ಲಾರೆನ್ಸ್ ಎ ಕುಡ್ಲೌ ('ಬೀರ್,
ಸ್ಟರ್ನ್ಸ್ ಆಂಡ್ ಕಂಪನಿ'ಯ ಮುಖ್ಯ ಅರ್ಥಶಾಸ್ತ್ರಜ್ಞ) ಅಭಿಪ್ರಾಯ
ಪಟ್ಟಿದ್ದರು. "ಕ್ಲಿಂಟನ್ 'ಅಮೆರಿಕ ಫೆಡ್' ಜೊತೆ ಆಪ್ತವಾಗಿ ಕಾರ್ಯ
ನಿರ್ವಹಿಸಿದಲ್ಲಿ ಮಾತ್ರ ಅಮೆರಿಕದ ಹೂಡಿಕೆಗಳು ಮತ್ತು ಷೇರು ಪತ್ರಗಳ ಮೇಲೆ
ಸಕಾರಾತ್ಮಕ ಮಧ್ಯಂತರ ಪರಿಣಾಮ ಬೀರಬಹುದು" ಎಂದೂ ಲಾರೆನ್ಸ್ ಹೇಳಿದ್ದರು.
ಈಗ ಅಮೆರಿಕ ಮತ್ತೊಮ್ಮೆ ಅಧ್ಯಕ್ಷೀಯ ಚುನಾವಣೆಗೆ ಸಿದ್ಧವಾಗುತ್ತಿದೆ.
ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಪಕ್ಷದ ನಿಲುವುಗಳು,
ಪ್ರಚಾರ ತಂತ್ರ ಹಾಗೂ ಮತದಾರರನ್ನು ಸೆಳೆಯಲು ಪ್ರಕಟಿಸುತ್ತಿರುವ ಯೋಜನೆಗಳು
ಸಂಪೂರ್ಣವಾಗಿ ಅಮೆರಿಕದ ಆರ್ಥಿಕತೆಯ ಸುತ್ತವೇ ಗಿರಕಿ ಹೊಡೆಯುತ್ತಿವೆ.
ಹೀಗಾಗಿ ಮತ್ತೊಮ್ಮೆ 'ಡೌ' ಏರು ಪೇರುಗಳನ್ನು ಅವಲೋಕಿಸುವ ಸಂಭ್ರಮ ಬಂದಿದೆ.
ಟಿಎಸ್‌ಐ |