|
ಅಂದು ವ್ಯಾಪಾರ ಮಳಿಗೆಗಳ ಶಟರ್‌ಗಳನ್ನು ವ್ಯಾಪಾರಸ್ಥರು ಬಂದ್ ಮಾಡಿದ್ದರು. ಶಾಲೆ, ಕಾಲೇಜುಗಳಿಗೆ ಮುಂಜಾಗ್ರತೆಯಿಂದ ರಜೆ ಘೋಷಿಸಿದ್ದರಿಂದ ಪ್ರಮುಖ ಬೀದಿ, ವೃತ್ತ, ರಸ್ತೆಗಳು ಬಿಕೋ ಎನ್ನುತ್ತಿದ್ದವು. ಆದರೂ ಸಚಿವರ ಮನೆಯ ಮುಂದಿನ ರಸ್ತೆಯಲ್ಲಿ ಇರುವೆ ಸಾಲಿನಂತೆ ಒಂದಾದ ಮೇಲೊಂದರಂತೆ ವಾಹನಗಳು ಸಾಗುತ್ತಿದ್ದವು. ನೂರಾರು ಜನರೂ ತಂಡೋಪತಂಡವಾಗಿ ನಡೆಯುತ್ತಿದ್ದರು. ಸಂತೆ ದಿನವಾದರೂ ನಗರದ ಬಹುತೇಕ ಕಡೆ ಬಂದ್ ವಾತಾವರಣ ಎದ್ದುಕಾಣುತ್ತಿತ್ತು. ರಸ್ತೆಗಳ ಮೇಲೆ ಅಡ್ಡಾಡುತ್ತಿದ್ದವರ ಮುಖದಲ್ಲಿ ಕಳೆಯಿರಲಿಲ್ಲ. ತಮ್ಮ ಮನೆಯಲ್ಲೆ ಯಾರಾದರೊಬ್ಬರು ಸತ್ತಂತೆ ಜೋಲು ಮುಖ ಹೊತ್ತಿದ್ದರು. ನಿನ್ನೆ ರಾತ್ರಿಯಿಂದಲೂ ಬಹುತೇಕರು ಒಂದು ತುತ್ತು ಅನ್ನ ತಿಂದಿರಲಿಲ್ಲ. ಜನರ ಮುಖ ಅಂಬೋವು ರದ್ದಿ ಕಾಗದದಂತೆ ಮುದುಡಿದ್ದವು. ಬೀದಿ ನಾಯಿಗಳನ್ನು ಕಂಡರೆ ಮಾರು ದೂರಹೋಗುವ, ಕೈಯಲ್ಲಿದ್ದ ಪೇಪರ್, ಟವೆಲ್, ಬ್ಯಾಗಿನಿಂದ ಬಡಿಯುವಂತೆ ಎತ್ತಿ ಹೆದರಿಸುವ ಜನರಿಗೆ ಸಚಿವರ ಮನೆಯ ಮುಧೋಳ ನಾಯಿ 'ಕಲ್ಯಾಣಿ' ಎಂದರೆ ವಿಶೇಷ ಪ್ರೀತಿ. ಕಲ್ಯಾಣಿ ಬೀದಿಯಲ್ಲಿ ಥೇಟ್ ಮಂತ್ರಿ ಶಿವಬಸಪ್ಪನವರಂತೆಯೇ ಠೀವಿಯಿಂದ ನಡೆಯುತ್ತಿದ್ದಳು. ಸಚಿವರೇ ಎದುರಿಗೆ ಬಂದರೆ ಎಲ್ಲ ಜನ ಅಂಜುತ್ತಾರೊ ಇಲ್ಲೊ? ಆದರೆ ಕಲ್ಯಾಣಿ ಬಂದಳೆಂದರೆ ಸಾಕು. ಜನ ಎಲ್ಲಿಲ್ಲದ ಭಕ್ತಿ ಭಾವದಿಂದ ವರ್ತಿಸುತ್ತಿದ್ದರು. ರಸ್ತೆ ಪಕ್ಕದಲ್ಲಿ ಸ್ವಲ್ಪ ಸರಿದು ನಿಂತು ದಾರಿಮಾಡಿಕೊಡುತ್ತಿದ್ದರು. ಕಲ್ಯಾಣಿಯ ಬೂದು ಬಣ್ಣಕ್ಕೊ, ಆಕೆ ನಡೆಯುವ ಗತ್ತಿಗೊ ಜನ ಮರುಳಾಗಿದ್ದರು. ಇನ್ನೂ ಏನಾದರೂ ಕಾರಣವಿರಬಹುದೊ?
ಒಂದು ರಾಷ್ಟ್ರೀಯ ಪಕ್ಷದಿಂದ ನಾಲ್ಕು ಬಾರಿ ಎಂ.ಎಲ್.ಎ. ಆಗಿ ಆಯ್ಕೆಯಾಗಿದ್ದ ಶಿವಬಸಪ್ಪ ಈ ಬಾರಿ ಮಂತ್ರಿಯಾದ ಮೇಲೆ ಅವರ ಬಂಗಲೆಯಿರುವ ರಸ್ತೆಗೆ ವಿಶೇಷ ಕಳೆ ಬಂದಿತ್ತು. ಮಿಗಿಲಾಗಿ ಕಲ್ಯಾಣಿಗೂ ಮಂತ್ರಿಗಳ ಮನೆಯವಳು ತಾನು ಎಂಬ ಎಲ್ಲಿಲ್ಲದ ಗರ್ವ ಬಂದಿತ್ತು. ಶಿವಬಸಪ್ಪನವರಿಗೂ ಅಷ್ಟೆ ಕಲ್ಯಾಣಿ ಎಂದರೆ ತನ್ನ ಮನೆಯಲ್ಲೆ ಹುಟ್ಟಿದ ಮಕ್ಕಳಿಗಿಂತಲೂ ಪಂಚಪ್ರಾಣ. ಕ್ರೀಡಾ ಮತ್ತು ಯುವಜನ ಸೇವಾ ಸಚಿವರಾಗಿದ್ದ ಅವರು ಬಾಗಲಕೋಟೆಯಲ್ಲಿ ರಾಜ್ಯ ಮಟ್ಟದ ಕಬಡ್ಡಿ ಪಂದ್ಯಾವಳಿ ಉದ್ಘಾಟನೆಗೆಂದು ಹೋದ ಸಂದರ್ಭದಲ್ಲಿ ಯಾರೊ ಒಬ್ಬರು ಈ ಕಲ್ಯಾಣಿಯನ್ನು ಉಡುಗೊರೆಯಾಗಿ ನೀಡಿದ್ದರು. ಅವರು ಬೀದಿಯಲ್ಲಿ ಗೂಟದ ಕಾರಿನಲ್ಲಿ ಹೊರಟರೆಂದರೆ ಅವರ ಪಕ್ಕದಲ್ಲೆ ಕಲ್ಯಾಣಿ ಕುಳಿತಿರುತ್ತಿದ್ದಳು. ಕಾರಿನ ಕಪ್ಪು ಗಾಜಿನೊಳಗೆ ಮಸುಕು ಮಸುಕಾಗಿ ಕಾಣುತ್ತಿದ್ದ ಮಂತ್ರಿಗಳನ್ನು ಕಂಡು ಜನ ನಮಸ್ಕರಿಸುತ್ತಿದ್ದರೊ ಇಲ್ಲಾ ಕಲ್ಯಾಣಿಗೆ ನಮಸ್ಕರಿಸುತ್ತಿದ್ದರೊ? ಹಾಗೆ ತಲೆ ಬಗ್ಗಿಸಿ, ನಡು ಬಗ್ಗಿಸಿ, ಕೈಮುಗಿದು ಡೊಗ್ಗು ಸಲಾಮು ಹೊಡೆಯುವುದನ್ನು ಕಂಡ ಕಲ್ಯಾಣಿ ತನ್ನ ತಲೆ, ಬಾಲ ಅಲ್ಲಾಡಿಸುತ್ತಾ ನಮಸ್ಕಾರಕ್ಕೆ ಪ್ರತಿಕ್ರಿಯಿಸುತ್ತಿದ್ದಳು. ಕಲ್ಯಾಣಿಯ ಬಗ್ಗೆ ಅದೆಷ್ಟೊಂದು ಕಥೆಗಳು ಹುಟ್ಟುಕೊಂಡಿದ್ದವು. ಜನರ ತುದಿ ನಾಲಿಗೆ ಮೇಲೆ ಕಲ್ಯಾಣಿ ಸದಾ ನಲಿಯುತ್ತಿದ್ದಳು. ತಮ್ಮ ಮನೆಯ ಮಕ್ಕಳನ್ನಾದರೂ ಅಷ್ಟು ಚೆಂದಾಗಿ ಬಾಯ್ತುಂಬ ಕರೆಯುತ್ತಿದ್ದರೊ ಇಲ್ಲೊ, ಕೆಲವರು ಸಚಿವರ ಪಕ್ಕದಲ್ಲಿ ಪರ್ಸ್‌ನಲ್ ಸೆಕ್ರೆಟರಿ ಎಂಬಂತೆ ಇರುತ್ತಿದ್ದ ಕಲ್ಯಾಣಿಯನ್ನು ಅಷ್ಟು ಪ್ರೀತಿಯಿಂದ ಮಾತನಾಡಿಸುತ್ತಿದ್ದರು. ಹಾಗೆ ಜನ ತಮಗಿಂತಲೂ ಯಕಃಶ್ಚಿತ ನಾಯಿಗೆ ಅಪಾರ ಗೌರವ ಕೊಡುತ್ತಿದ್ದನ್ನು, ಅದರ ಪ್ರತಿ ಚಟುವಟಿಕೆಯನ್ನು ರಾಮಾಯಣ, ಮಹಾಭಾರತದ ಕಥೆಗಳಂತೆ ವರ್ಣಿಸುತ್ತಿದ್ದನ್ನು ಕೇಳಿ ಶಿವಬಸಪ್ಪನವರಿಗೇ ಹಲವು ಬಾರಿ ಹೊಟ್ಟೆಕಿಚ್ಚು ಆಗಿದ್ದೂ ಉಂಟು.
ಇಂಥಪ್ಪ ಕಲ್ಯಾಣಿ ಎರಡ್ಮೂರು ದಿನಗಳವರೆಗೆ ಮೈಯಲ್ಲಿ ಹುಷಾರಿಲ್ಲದೆ ಒದ್ದಾಡಿ ಸತ್ತ ಸುದ್ದಿ ಬಹಳ ಜನರಿಗೆ ನಂಬಲಿಕ್ಕೆ ಆಗಲಿಲ್ಲ. ತಮ್ಮ ಇಲಾಖೆಯ ಮಾನ ಮರ್ಯಾದೆ ಪಣಕ್ಕಿಟ್ಟವರಂತೆ ಪಶು ಸಂಗೋಪನಾ ಇಲಾಖೆಯ ಜಿಲ್ಲಾ ಮಟ್ಟದ ವೈದ್ಯಾಧಿಕಾರಿಗಳು ಬಂದು ಕಲ್ಯಾಣಿಯನ್ನು ಸ್ವಲ್ಪ ಹೆಚ್ಚಿಗೆಂಬಂತೆ ಉಪಚರಿಸಿದರೂ ಉಳಿಯಲಿಲ್ಲ. ಕಲ್ಯಾಣಿ ಸತ್ತ ಸುದ್ದಿ ಕೇಳಿದ ಶಿವಬಸಪ್ಪ ತಾಸುಗಟ್ಟಲೆ ಸೊನ್ನೆ ಮುಚ್ಚಿ ಬಿದ್ದರೆಂಬ ಸುದ್ದಿ ದೇಶದ ವಿವಿಧ ಪ್ರಮುಖ ಸುದ್ದಿ ಚಾನೆಲ್‌ಗಳು ಫ್ಲ್ಯಾಶ್ ಸುದ್ದಿಯೆಂಬಂತೆ ಬಿತ್ತರಿಸಿದವು. ನಾಡಿನ ಮೂಲೆ ಮೂಲೆಯಲ್ಲಿದ್ದ ಲಕ್ಷಾಂತರ ಜನ ಕಲ್ಯಾಣಿ ಆತ್ಮಕ್ಕೆ ಶಾಂತಿ ಕೋರಿ ಎಸ್‌ಎಂಎಸ್ ಕಳಿಸಿ ತಮ್ಮ ಮಾನವೀಯ ಕಳಕಳಿ ಮೆರೆದರು. ಎರಡು ದಿನಗಳಿಂದ ನಾಡಿನ ಪ್ರಮುಖ ದೈನಿಕ, ಸುದ್ದಿ ಚಾನೆಲ್‌ಗಳಲ್ಲಿ ಕಲ್ಯಾಣಿಯದೇ ಸುದ್ದಿ. ಅದು ಹಾಗೆ ಇತ್ತೊ ಇಲ್ಲೊ! ಕ್ಷಣಕ್ಕೊಮ್ಮೆ ಸುದ್ದಿ ಚಾನೆಲ್‌ಗಳ ಆಕರ್ಷಕ ಆಂಕರ್‌ಗಳ ವಿವರಣೆಯಲ್ಲಿ ಕಲ್ಯಾಣಿ ಹೊಸ ರೂಪ ಪಡೆಯುತ್ತಿದ್ದಳು. ಟಿ.ವಿ. ಮುಂದೆ ಕುಳಿತ ಜನ ಖುದ್ದಾಗಿ ನಾಯಿಯ ಮುಖವನ್ನೊಮ್ಮೆ ನೋಡಿ ತಮ್ಮ ಜಲುಮ ಸಾರ್ಥಕ ಮಾಡಿಕೊಳ್ಳಬೇಕು. ತಮಗೆ ಪ್ರಾಣಿಗಳ ಅದರಲ್ಲೂ ನಾಯಿಗಳ ಬಗ್ಗೆ ಅಪಾರ ಪ್ರೀತಿಯಿದೆ ಎಂದು ತೋರಿಸಿಕೊಳ್ಳಲು ಸಚಿವ ಶಿವಬಸಪ್ಪನವರ ಮನೆಯತ್ತ ಸಾಗಿದ್ದರು. ಕಲ್ಯಾಣಿಯನ್ನು ಕಳೆದುಕೊಂಡ ಸಚಿವರಿಗೆ ತಲೆ ಮೇಲೆ ಆಕಾಶ ಕಳಚಿ ಬಿದ್ದ ಹಾಗಾಗಿತ್ತು. ಅವರು ತಮ್ಮ ಮಂತ್ರಿಗಿರಿ ಹೋದರೆ ಇಲ್ಲವೆ ಚುನಾವಣೆಯಲ್ಲಿ ಸೋತಿದ್ದರೆ ಇಷ್ಟು ದುಃಖ ಪಡುತ್ತಿದ್ದರೊ ಇಲ್ಲೊ. ಕಲ್ಯಾಣಿ ಸಾವಿನಿಂದ ತೀರಾ ಕಂಗೆಟ್ಟಿದ್ದರು. ಕಲ್ಯಾಣಿಯನ್ನು ಏನೆಲ್ಲಾ ಅತ್ಯಾಧುನಿಕ ಶಸ್ತ್ರಚಿಕಿತ್ಸಾ ತಂತ್ರಜ್ಞಾನ ಉಪಯೋಗಿಸಿ ಬದುಕಿಸಲು ವಿಫಲವಾದ ಜಿಲ್ಲಾ ಪಶು ವೈದ್ಯಾಧಿಕಾರಿ, ತಾಲ್ಲೂಕು ಪಶು ವೈದ್ಯಾಧಿಕಾರಿ ಸೇರಿದಂತೆ ಪಶು ಸಂಗೋಪನಾ ಇಲಾಖೆಯ ನಾಲ್ಕಾರು ನೌಕರರನ್ನು ಕೂಡಲೇ ಸೇವೆಯಿಂದ ಅಮಾನತು ಮಾಡುವಂತೆ ಆರೋಗ್ಯ ಖಾತೆ ಸಚಿವರಿಗೆ ತಮ್ಮ ತೀವ್ರ ನೊಂದ ದನಿಯಲ್ಲೆ ಶಿಫಾರಸು ಮಾಡಿದ್ದರು. ಆರೋಗ್ಯ ಸಚಿವರೂ ಶಿವಬಸಪ್ಪನವರ ಮೇಲಿನ ಪ್ರೀತಿಗೆ ಹಿಂದೆ ಮುಂದೆ ನೋಡದೆ ಕಲ್ಯಾಣಿ ಬದುಕುಳಿಸಲು ವಿಫಲರಾದ ವೈದ್ಯಾಧಿಕಾರಿಗಳು ಮತ್ತು ನಾಲ್ಕು ಜನ ನೌಕರರನ್ನು ಸೇವೆಯಿಂದ ಅಮಾನತಿನಲ್ಲಿಡುವ ಆದೇಶ ಹೊರಡಿಸಿಯೇ ಬಿಟ್ಟರು.
ಕಲ್ಯಾಣಿಯೇ ತಮಗೆ ಸಕಲ ಭಾಗ್ಯ ತಂದ ಭಾಗ್ಯವಂತಿ ಎಂದೇ ಶಿವಬಸಪ್ಪ ನಂಬಿದ್ದರು. ಒಮ್ಮೆ ಕಲ್ಯಾಣಿ ಚಿತ್ತಿ ಮಳೆ ಬೀಳುತ್ತಿದ್ದ ಸಂದರ್ಭದಲ್ಲಿ ಬೀದಿಯ ಗಂಡು ನಾಯಿಯೊಂದಿಗೆ ರತಿಕ್ರೀಡೆಯಲ್ಲಿ ತೊಡಗಿತ್ತು. ಇದನ್ನು ಕಂಡ ಸಚಿವರ ಭಂಟರಿಬ್ಬರು ಗಂಡು ನಾಯಿಯನ್ನು ಹಿಡಿದೆಳೆದು ಕ್ರೀಡೆಗೆ ಭಂಗ ತರುವಲ್ಲಿ ಯಶಸ್ವಿಯಾಗಿದ್ದರು. ತನ್ನ ಮನದಿನಿಯನನ್ನು ಹೀಗೆ ದರದರ ಎಳೆದೊಯ್ಯುತ್ತಿದ್ದನ್ನು ಸಹಿಸದ ಕಲ್ಯಾಣಿ ಭಂಟರ ಮೇಲೆರಗಿ ಎಲ್ಲಿ ಬೇಕಲ್ಲಿ ಕಚ್ಚಿ ಗಾಯಮಾಡಿತ್ತು. ಗಾಯಗೊಂಡ ಭಂಟರಿಗೆ ಕಲ್ಯಾಣಿಯ ಪಾವಿತ್ರ್ಯ ಕಾಪಾಡಿದ್ದಕ್ಕೆ ಶಿವಬಸಪ್ಪ ಶಹಬ್ಬಾಶಗಿರಿ ಕೊಟ್ಟದ್ದಲ್ಲದೆ ಅವರ ಚಿಕಿತ್ಸೆಯ ಎಲ್ಲ ಖರ್ಚನ್ನು ನಿಭಾಯಿಸಿ ಅವರ ಮನೆಯವರ ಪಾಲಿಗೆ ಸಾಕ್ಷತ್ ದೈವವೆನಿಸಿದರು. ಕಲ್ಯಾಣಿ ಜೊತೆಗೆ ಅಕ್ರಮ ಸಂಬಂಧವಿಟ್ಟುಕೊಂಡಿದ್ದ ಬೀದಿಯ ಗಂಡು ನಾಯಿಯನ್ನು ನಗರಸಭೆ ಸಿಬ್ಬಂದಿ ಹಾಡಹಗಲೆ ಕುತ್ತಿಗೆಗೆ ಹಗ್ಗಬಿಗಿದು ಬೇವಿನ ಗಿಡದ ಟೊಂಗಿಗೆ ಕಟ್ಟಿ ಉರುಲು ಹಾಕಿ ಕೊಂದರು. ತನ್ನ ಸಂಗಾತಿ ಚೀರಿ ಸತ್ತಿದ್ದನ್ನು ಅದ್ಹೇಗೆ ಕೇಳಿದಳೊ ಕಲ್ಯಾಣಿ ಕಣ್ಣಲ್ಲಿ ನೀರು ತುಂಬಿಕೊಂಡು ಆರ್ತನಾದ ಮಾಡಿದಳು. ಎರಡು ದಿನ ಉಪವಾಸವಿದ್ದು ಶೋಕಾಚರಣೆ ನಡೆಸಿದಳು. ಹಳೆಯ ಸಂಗಾತಿಯನ್ನು ನಿಧಾನವಾಗಿ ಮರೆತಳು. ಕಲ್ಯಾಣಿಯ ವಯಸ್ಸು, ಭಾವನೆ, ಅಂತರಾಳ ಅರ್ಥಮಾಡಿಕೊಂಡ ಶಿವಬಸಪ್ಪ ತಮ್ಮ ಮನೆಯ ಇಬ್ಬರು ಗಟ್ಟಿಮುಟ್ಟಾದ ಆಳುಗಳನ್ನು ಮುಧೋಳಕ್ಕೆ ಕಳಿಸಿ ಗಂಡು ನಾಯಿಯೊಂದನ್ನು ಖರೀದಿಸಿ ತಂದರು.
ಹೊಸ ನಾಯಿ ಆಗಮನದಿಂದ ಕಲ್ಯಾಣಿಗೆ ಕಸಿವಿಸಿಯಾಯಿತು. ಹೊಸ ನಾಯಿಗೆ ಶಿವಬಸಪ್ಪನವರಿಗೆ ತಮ್ಮ ಆರಾಧ್ಯದೈವ ಬೀರಪ್ಪನ ಹೆಸರನ್ನೆ ಹೊಸ ಶೈಲಿಯಲ್ಲಿ 'ಬೀರ' ಎಂದು ನಾಮಕರಣ ಮಾಡಿದರು. ಬೀರನ ಹುಡುಗಾಟಿಕೆ, ಚೆಲ್ಲಾಟಕ್ಕೆ ಕಲ್ಯಾಣಿ ಬಹುಬೇಗನೆ ಬೇಸತ್ತಳು. ಅವನು ಅದೆಷ್ಟು ಮೈತ್ರಿ ಮಾಡಿಕೊಳ್ಳಬೇಕೆಂದರೂ, ಏನೆಲ್ಲಾ ನಾಟಕ ಮಾಡಿದರೂ ಅವನತ್ತ ತನ್ನ ಮಾಂತ್ರಿಕ ನೋಟ ಬೀರಲಿಲ್ಲ. ಅವನಿಗೆ ತನ್ನ ಮೈಚರ್ಮದ ಕೂದಲೂ ಸೋಕದಂತೆ ಎಚ್ಚರಿಕೆ ವಹಿಸಿದಳು. ಬೀರನ ಕುಚೇಷ್ಟೆಗಳಿಂದ ನೊಂದ ಕಲ್ಯಾಣಿ ಒಂದು ದಿನ ಏಕಾಏಕಿ ಸಚಿವರ ಮೂರಂತಸ್ತಿನ ಬಂಗಲೆಯೇರಿ ಮೇಲಿಂದ ಬಿದ್ದು ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದಳು. ಶಿವಬಸಪ್ಪನವರ ಹಣೆಬರೆಹ ಗಟ್ಟಿಯಾಗಿತ್ತು ಅಂತ ಕಾಣುತ್ತೆ. ಕಲ್ಯಾಣಿ ಮೇಲಿಂದ ಬಿದ್ದರೂ ಮೂರನೆ ಮಹಡಿಯ ವೆಂಟಿಲೇಶನ್ ಮೇಲೆ ಕುಳಿತುಬಿಟ್ಟಳು. ತನ್ನದು ಖೊಟ್ಟಿ ಹಣೆಬರೆಹ, ಸಾಯಬೇಕೆಂದರೂ ಸಾಯಲಿಲ್ಲ ಎಂದು ಮುಖ ತಗ್ಗಿಸಿ, ಬಾಲ ಮುದುರಿಕೊಂಡು ವೆಂಟಿಲೇಶನ್ ಮೇಲೆ ಕುಳಿತ ಕಲ್ಯಾಣಿಯನ್ನು ಆಳುಗಳು ಅದೆಷ್ಟೊ ಕಾಳಜಿಯಿಂದ ಮೇಲೆತ್ತಿ ಬಾಣಂತಿಯಂತೆ ಉಪಚರಿಸಿದರು. ಕಲ್ಯಾಣಿ ಆತ್ಮಹತ್ಯೆ ಮಾಡಿಕೊಳ್ಳುವಂತೆ ಮಾನಸಿಕ ಹಿಂಸೆ ನೀಡಿದ ಬೀರನನ್ನು ಬಂದ ದಾರಿಗೆ ಸುಂಕವಿಲ್ಲವೆಂಬಂತೆ ಮುಧೋಳ ದಾರಿ ಹತ್ತಿಸಿದರು.
ಶಿವಬಸಪ್ಪನವರ ಮನೆಗೆ ನಿನ್ನೆ ರಾತ್ರಿಯಿಂದಲೂ ಸುತ್ತಲಿನ ವಿವಿಧ ಜಿಲ್ಲೆಗಳ ಶಾಸಕರು, ಸಚಿವರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಬಂದು ಕಲ್ಯಾಣಿಯ ಸಾವಿಗೆ ತಮ್ಮ ತೀವ್ರ ಸಂತಾಪ ಸೂಚಿಸಿದರು. ಕಲ್ಯಾಣಿಯ ಸಾವಿನಿಂದ ಇಡೀ ಜಗತ್ತಿಗೇ ತುಂಬಲಾರದ ನಷ್ಟವಾಗಿದೆ ಎಂಬಂತೆ ಪ್ರಮುಖ ಪತ್ರಿಕೆಗಳಲ್ಲಿ ಕಲ್ಯಾಣಿಯ ಚಿಕ್ಕ ಚಿತ್ರದ ಜೊತೆಗೆ ತಮ್ಮ ನಿಂತ ಭಂಗಿಯ ದೊಡ್ಡ ಫೋಟೊ ಹಾಕಿಸಿಕೊಂಡು ರಾಷ್ಟ್ರೀಯ ಪಕ್ಷವೊಂದರ ಮುಖಂಡರು ಕಲ್ಯಾಣಿಯ ಮೇಲಿಟ್ಟಿದ್ದ ಅಪಾರ ಪ್ರೀತಿಯನ್ನು ಪ್ರದರ್ಶಿಸಿದರು. ಆ ದಿನ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದ ಜಾಹೀರಾತುಗಳನ್ನು ಎಲ್ಲರಿಗೂ ಕಾಣುವಂತೆ ಹಿಡಿದುಕೊಂಡಿದ್ದ ಮುಖಂಡರು ಶಿವಬಸಪ್ಪನವರ ಮನೆಯಲ್ಲಿ ಅತ್ತಿಂದಿತ್ತ ಓಡಾಡುತ್ತ ತಮ್ಮ ಇರುವಿಕೆಯನ್ನು ಸಾಬೀತುಪಡಿಸುತ್ತಿದ್ದರು. ಶಿವಬಸಪ್ಪನವರು ಮುಖಂಡರ ಜೊತೆಗೆ ಚರ್ಚಿಸಲು ಕೂಡುತ್ತಿದ್ದ ಸಾಗವಾನಿ ಕಟ್ಟಿಗೆಯಿಂದ ಮಜಬೂತಾಗಿ ಮಾಡಿದ್ದ ಅಲಂಕೃತ ಮಂಚದ ಮೇಲೆ ಕಲ್ಯಾಣಿಯನ್ನು ರಾಶಿಗಟ್ಟಲೆ ಹೂವಿನ ದಂಡೆಗಳ ಮೇಲೆ ಮಲಗಿಸಲಾಗಿತ್ತು. ಕಲ್ಯಾಣಿಯ ಸುತ್ತ ಹೂವುಗಳನ್ನು ಇಟ್ಟು ಅಲಂಕರಿಸಲಾಗಿತ್ತು. ಶಿವಬಸಪ್ಪನವರ ಮನೆಯ ಸುತ್ತಲಿನ ಹತ್ತಿಪ್ಪತ್ತು ಮಹಿಳೆಯರು ಬಂದು ನಾಯಿಯ ಸೌಭಾಗ್ಯ ಕಂಡು ತಮ್ಮ ಕೆದರಿದ ಕೂದಲುಗಳಲ್ಲಿ ಕೈಯಾಡಿಸಿಕೊಂಡು ಒತ್ತರಿಸಿ ಬಂದ ದುಃಖ ತಡೆದುಕೊಳ್ಳಲಾಗದೆ ಬೋರಾಡಿ ಅತ್ತು, ಕಪಾಳದ ಮೇಲಿಂದ ಜಾರುತ್ತಿದ್ದ ಕಣ್ಣೀರ ಹನಿಗಳನ್ನು ಸೆರಗಿಗೆ ಒತ್ತಿಕೊಂಡರು. ಬೆಳಿಗಿನಿಂದಲೂ ಶಿವಬಸಪ್ಪನವರು ಯಾರ ಜೊತೆಗೂ ಮಾತನಾಡಿರಲಿಲ್ಲ. ತಮ್ಮ ಹೆಗಲ ಮೇಲೆ ಹಾಕಿಕೊಂಡಿದ್ದ ಕೇಸರಿ ಮತ್ತು ಹಸಿರು ದಡಿಯ ಜರತಾರಿ ಶಲ್ಯೆಯಿಂದ ಮುಖ ಮುಚ್ಚಿಕೊಂಡು ಕಲ್ಯಾಣಿಯ ಸಮೀಪ ಕುಳಿತಿದ್ದರು. ಒಮ್ಮಿಂದೊಮ್ಮೆಲೆ ಹೊರಗಡೆಯಿದ್ದ ಜನ ಪರಸ್ಪರ ನೂಕಾಟದಲ್ಲಿ ತೊಡಗಿದರು. ಪಕ್ಷದ ರಾಜ್ಯಾಧ್ಯಕ್ಷರು, ಮುಖ್ಯಮಂತ್ರಿ ಬಂದರೆಂಬ ಸುದ್ದಿಯನ್ನು ಶಿವಬಸಪ್ಪನವರ ಕಿವಿಗೆ ಅವರ ಮನೆಯವರು ಮುಟ್ಟಿಸಿದರು. ಕಣ್ಣು, ಮುಖ ಒರೆಸಿಕೊಂಡ ಶಿವಬಸಪ್ಪ ದಿಡಗ್ಗನೆ ಎದ್ದು ನಿಂತು ಪೊಲೀಸ್ ಅಧಿಕಾರಿಗಳ ಮಧ್ಯೆ ಬರುತ್ತಿದ್ದ ಮುಖ್ಯಮಂತ್ರಿ ಮಲ್ಲಿಕಾರ್ಜುನಗೌಡ ಅವರ ಕೈಕುಲುಕಿ ಸ್ವಾಗತಿಸಿದರು. ಪಕ್ಷದ ರಾಜ್ಯಾಧ್ಯಕ್ಷ ರಾಜುಗೌಡ ಪಾಟೀಲ್ ಮನೆಯ ಮಗನನ್ನೇ ಕಳೆದುಕೊಂಡಷ್ಟೆ ದುಃಖಿತರಾಗಿದಾರೇನೊ ಎಂಬಂತಿದ್ದ ಶಿವಬಸಪ್ಪನವರ ಹೆಗಲ ಮೇಲೆ ಕೈಹಾಕಿ ಸಂತೈಸಿದರು. ಶಿವಬಸಪ್ಪನವರು ತಮ್ಮ ಹೆಗಲಮೇಲಿದ್ದ ಶಲ್ಯೆಯಿಂದ ಮತ್ತೆ ಕಣ್ಣು ಒರೆಸಿಕೊಂಡು, 'ನನಗ ಕಲ್ಯಾಣಿಯಂದ್ರ ಪಂಚಪ್ರಾಣ ಸರ್... ನನ್ನ ರಕ್ತ, ಮಾಂಸ ಹಂಚಿಕೊಂಡು ಹುಟ್ಟಿದ ಮಕ್ಕಳಂತೆ ಸಾಕಿದ್ದೆ. ಇದ್ದೊಬ್ಬ ಮಗನ ಸರಿಸಮಾನ ಕಲ್ಯಾಣೀನ ಬೆಳಿಸಿದ್ದೆ. ನಮ್ ಮನೆಯ ದೀಪವಾಗಿದ್ಲು ಕಲ್ಯಾಣಿ...' ಎನ್ನುತ್ತಾ ಹೂವಿನಲ್ಲಿ ಅಡಗಿದ್ದ ಕಲ್ಯಾಣಿಯ ತಲೆ ಮೇಲೆ ಕೈಯಾಡಿಸಿ ನಾಲ್ಕಾರು ಕಣ್ಣೀರು ಹನಿ ಹಾಕಿದರು. ಮುಖ್ಯಮಂತ್ರಿ ಮಲ್ಲಿಕಾರ್ಜುನಗೌಡ ಶಿವಬಸಪ್ಪನವರ ಕಪಾಳ ಮುಟ್ಟಿ ಕಣ್ಣೀರು ಒರೆಸಿ, ಹೆಗಲಮೇಲೆ ಎರಡು ಮೂರು ಸಲ ತಮ್ಮ ಅಮೃತ ಹಸ್ತದಿಂದ ಬಡಿದು ಸುಮ್ಮನಿರುವಂತೆ
ಮೇಲೆ ಕೆಳಗೆ ತಲೆ ಅಲ್ಲಾಡಿಸಿದರು. ಅವರ ಪರ್ಸನಲ್ ಸೆಕ್ರೆಟರಿ ಕೊಟ್ಟ ಹೂಗುಚ್ಛವನ್ನು ಮಹಾನ್ ದೇಶಭಕ್ತರ ಶವದ ಮೇಲೆ ಇರಿಸುವಷ್ಟೆ ಭಕ್ತಿ- ಭಾವದಿಂದ ಇಟ್ಟು, ಚುನಾವಣಾ ಪ್ರಚಾರದ ವೇಳೆ ಮತದಾರರಿಗೆ ಮುಗಿಯುವಂತೆ ಎರಡೂ ಕೈಜೋಡಿಸಿ ನಮಸ್ಕರಿಸಿ, ಶಿವಬಸಪ್ಪನವರ ಕೈಹಿಡಿದು ಕೋಣೆಯಿಂದ ಹೊರಬಂದರು.
ವಿವಿಧ ಸುದ್ದಿ ಮಾಧ್ಯಮಗಳ ವರದಿಗಾರರು ಮುಖ್ಯಮಂತ್ರಿ ಮತ್ತು ಪಕ್ಷದ ರಾಜ್ಯಾಧ್ಯಕ್ಷರ ಸುತ್ತುವರಿದು ತರಾವರಿ ಪ್ರಶ್ನೆಗಳನ್ನು ಕೇಳಿದರು. 'ನಿಮ್ ಸರ್ಕಾರ ಪೂರ್ಣಾವಧಿ ಆಡಳಿತ ನಡೆಸುತ್ತಾ?' 'ನಿಮ್ಮ ಪಕ್ಷದಲ್ಲಿ ಇತ್ತೀಚೆಗೆ ಸೇರ್ಪಡೆಯಾದ ಮುಖಂಡರಿಗೆ ಪಕ್ಷದ ವರಿಷ್ಠರು ಮಣೆ ಹಾಕುತ್ತಿದ್ದಾರೆ, ಹಳೆಯ ಮುಖಂಡರನ್ನು ಕಡೆಗಣಿಸಲಾಗುತ್ತಿದೆ ಎಂಬ ಆಪಾದನೆ ಬಗ್ಗೆ ನಿಮ್ಮ ಅನಿಸಿಕೆಯೇನು?' 'ಬೀದಿ ನಾಯಿಗಳನ್ನು ಕೊಂದು ಇಲ್ಲವೇ ಅವುಗಳಿಗೆ ಸಂತಾನ ನಿಯಂತ್ರಣ ಚಿಕಿತ್ಸೆ ಮಾಡಬೇಕೆಂದು ಆದೇಶಿಸಿ, ನಾಯಿ ವಂಶವನ್ನೇ ನಿರ್ವಂಶ ಮಾಡ ಹೊರಟಿರುವ ಸರ್ಕಾರದ ನಿರ್ಧಾರ ಎಷ್ಟು ಸರಿ?' 'ಈಗ ಕಲ್ಯಾಣಿಯಂತಾ ನಾಯಿ ಬಗ್ಗೆ ಅಪಾರ ಗೌರವ ಹೊಂದಿರುವ ನೀವು, ಮುಂಬರುವ ದಿನಗಳಲ್ಲಿ ನಾಯಿಗಳ ಬದುಕುವ ಹಕ್ಕನ್ನು ರಕ್ಷಿಸಲು ಯಾವ ಹೊಸ ಕಾನೂನು ಜಾರಿಗೆ ತರಲಿದ್ದೀರಿ?' ಎಂದು ಪ್ರಶ್ನೆಯ ಮೇಲೆ ಪ್ರಶ್ನೆ ಕೇಳಿದರು. 'ರಾಜ್ಯ ರಾಜಕಾರಣ ಮತ್ತು ಪಕ್ಷದ ಬಗ್ಗೆ ಪ್ರಶ್ನೆಗಳಿಗೆ ಉತ್ತರಿಸುವ ಸಂದರ್ಭ ಇದಲ್ಲ. ಇಡೀ ನಾಡಿನ ಜನತೆ ಕಲ್ಯಾಣಿ ಸಾವಿನಿಂದ ತೀವ್ರ ದುಃಖದಲ್ಲಿದೆ. ಕಲ್ಯಾಣಿಯ ಸಾವು ತಮಗೂ ಬಹಳ ದುಃಖ ತಂದಿದೆ. ಶಿವಬಸಪ್ಪನವರ ಪ್ರಾಣಿಪ್ರೇಮ ಎಲ್ಲ ಸಚಿವರು ಮತ್ತು ರಾಜಕಾರಣಿಗಳೂ ಮಾದರಿ. ಕಲ್ಯಾಣಿಯ ನೆನಪಲ್ಲಿ ನಾಯಿಗಳ ರಕ್ಷಣೆಗೆ ವಿಶೇಷ ಕಾನೂನನ್ನು ಮುಂದಿನ ಅಧಿವೇಶನದಲ್ಲಿ ಜಾರಿಗೊಳಿಸುತ್ತೇವೆ...' ಎಂದು ಮಲ್ಲಿಕಾರ್ಜುನಗೌಡ ಶಿವಬಸಪ್ಪನವರ ಮುಖ ನೋಡಿದರು. 'ಬೆಂಗಳೂರಿನಲ್ಲಿ ಸಾವಿರಾರು ನಾಯಿಗಳನ್ನು ಕೊಂದ ಪಾಪ ಹೊತ್ತಿರುವ ಸರ್ಕಾರ ಈಗ ಈ ಕಾನೂನನ್ನು ಎಷ್ಟರ ಮಟ್ಟಿಗೆ ಪ್ರಾಮಾಣಿಕವಾಗಿ ಜಾರಿಗೊಳಿಸುತ್ತೆ?' 'ಮನುಷ್ಯರನ್ನು ಕಚ್ಚಿದ್ದೇ ನೆಪಮಾಡಿಕೊಂಡು ಎಲ್ಲ ನಾಯಿಗಳನ್ನು ಕೊಲ್ಲಲು ಹೊರಟಿದ್ದ ಸರ್ಕಾರ ಮುಂದೊಂದು ದಿನ ನಾಲ್ಕಾರು ಜನರು ಪರಸ್ಪರ ಕಚ್ಚಾಡಿದರೆ ಇಡೀ ಮನುಷ್ಯ ಕುಲವನ್ನೇ ನಾಶ ಮಾಡುವ ಕಾನೂನು ರೂಪಿಸಲಿದೆಯೇ?' ಎಂಬ ಚಿತ್ರ ವಿಚಿತ್ರ ಪ್ರಶ್ನೆಗಳು ಎದುರಾದಾಗ, ಪಕ್ಷದ ರಾಜ್ಯಾಧ್ಯಕ್ಷ ರಾಜೂಗೌಡ, 'ಪ್ಲೀಸ್...ಪ್ಲೀಸ್... ನೋ ಮೋರ್ ಕ್ವಶ್ಚನ್ಸ್... ನಾವಿನ್ನೂ ಗುಲ್ಬರ್ಗಾಕ್ಕೆ ಹೋಗಬೇಕು. ಅಲ್ಲಿ ಮುಖ್ಯಮಂತ್ರಿಗಳು ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಅಷ್ಟೇ ಅಲ್ಲದೆ ಹಿಂದಿನ ಸರ್ಕಾರದ ಯುವ ಮುಖ್ಯಮಂತ್ರಿ ಕಾಟಾಚಾರಕ್ಕೆ ಜಾರಿಗೆ ತಂದಿದ್ದ ಗ್ರಾಮ ವಾಸ್ತವ್ಯವನ್ನು ನಮ್ಮ ಮುಖ್ಯಮಂತ್ರಿಗಳು ಪ್ರಾಮಾಣಿಕ ಕಳಕಳಿಯಿಂದ ಮುಂದುವರಿಸಿದ್ದು, ಇವತ್ತು ರಾತ್ರಿ ಗುಲ್ಬರ್ಗಾ ಜಿಲ್ಲೆಯ ಹಳ್ಳಿಯೊಂದರಲ್ಲಿ ಗ್ರಾಮ ವಾಸ್ತವ್ಯ ಮಾಡ್ತಾರೆ.' ಎಂದು ಹೇಳುತ್ತಾ ವರದಿಗಾರರ ಕೈಗಳನ್ನು ಎಳೆದೆಳೆದು ಕುಲುಕುತ್ತಾ, 'ಥ್ಯಾಂಕ್ಯೂ... ಎವರಿಬಡಿ...' ಎನ್ನುತ್ತಾ ಹಾಗೆ ಮುಖ್ಯಮಂತ್ರಿಗಳನ್ನು ಮುಂದೆ ಮಾಡಿಕೊಂಡು ಹೊರ ನಡೆಯುತ್ತಿದ್ದ ಸಂದರ್ಭದಲ್ಲಿ, 'ಸಿ.ಎಂ. ಸಾಹೇಬ್ರಿಗೆ ಲಾಸ್ಟ್ ಕ್ವಶ್ಚನ್. ಹಿಂದಿನ ಮುಖ್ಯಮಂತ್ರಿ ಗ್ರಾಮವಾಸ್ತವ್ಯ ಮಾಡಿದಾಗ ಅದೆಲ್ಲ ನಾಟಕ, ಸ್ಟಂಟ್ ಅಂತ ಟೀಕಿಸುತ್ತಿದ್ದಿರಿ. ಈಗ ನೀವು ಮಾಡೋದು ಏನು?' 'ನಮ್ಮ ಸರ್ಕಾರಕ್ಕೆ ಜನರ ಬಗ್ಗೆ ಅದರಲ್ಲೂ ಗ್ರಾಮೀಣ ಪ್ರದೇಶದ ಜನತೆ ಬಗ್ಗೆ ಅಪಾರ ಕಾಳಜಿಯಿದೆ. ಅವರ ಸಮಗ್ರ ಅಭಿವೃದ್ಧಿನೇ ನಮ್ ಸರ್ಕಾರದ ಮೂಲ ಉದ್ದೇಶ. ಹಿಂದಿನ ಮುಖ್ಯಮಂತ್ರಿ ಮಾಡಿದ್ದು ಕೇವಲ ಪ್ರಚಾರಕ್ಕೆ...' ಎಂದು ಉತ್ತರಿಸುತ್ತ ಕಾರು ಹತ್ತಿದರು. 'ಸಾರ್...ಸಾರ್....ಗ್ರಾಮೀಣ ಪ್ರದೇಶದ ಅಭಿವೃದ್ಧಿ ಎಂದರೆ ವಿಶೇಷ ಆರ್ಥಿಕ ವಲಯ ನೀತಿ ಜಾರಿಗೊಳಿಸುವುದು ಅಂತ... ಅರ್ಥವೇನು?' ಎಂಬ ಪ್ರಶ್ನೆಗಳು ವರದಿಗಾರರಿಂದ ತೂರಿಬಂದವು.
ಶಿವಬಸಪ್ಪನವರ ಮನೆಯಲ್ಲಿ ಕಡಕ್ ಬಿಳಿ ಬಟ್ಟೆ ಉಟ್ಟ ಜನ ರೇಶ್ಮೆ ಹುಳುಗಳಂತೆ ಒಬ್ಬರ ಕಾಲು ತುಳಿಯುತ್ತಾ ಅತ್ತಿಂದಿತ್ತ ಓಡಾಡುತ್ತಿದ್ದರು. ಸಚಿವರ ಹೆಂಡತಿ ಭಾರತಿದೇವಿ ಕಣ್ಣುಗಳಿಂದ ಒಂದು ಹನಿ ಉದುರಿದ್ದನ್ನು ಕಣ್ಣಾರೆ ಕಾಣದ ಸುತ್ತ ನಿಂತಿದ್ದ ಒಬ್ಬಾಕೆ, 'ಯವ್ವೊ ನೋಡ್ರವ್ವೊ... ಇದಕ್ಕವ್ವ ದೊಡ್ಡವರ ಗುಣ ಅನ್ನದು... ಮನ್ಯಾಗಿನ ನಾಯಿ ಸತ್ತಿದ್ದಕ್ಕ ಮಿನಿಸ್ಟ್ರು ಹೇಣ್ತಿ ಅದೆಷ್ಟು ದುಃಖದಿಂದ ಅಳಾಕ ಹತ್ಯಾಳ...' ಇನ್ನೊಬ್ಬಾಕೆ, 'ನೋಡಿಲ್ಲೇನು ಈಕಿನ ಹೋದ ದೀಪಾವಳಿ ಹಬ್ಬಕ್ಕ ನಾಲ್ಕು ದಿನ ಇರುವಾಗ ಶಿವಬಸಪ್ಪನವರ ತಾಯಿ ಹಣ್ಣು ಹಣ್ಣಾಗಿ ಸತ್ಲಲ್ಲ ಅವತ್ತು ಈ ಪುಣ್ಯಾತ್ತಿಗಿತ್ತಿ ಒಂದು ಹನಿಯನ ಕಣ್ಣೀರು ಹಾಕಿದ್ಲನು...' ಪಿಸಿಪಿಸಿ ದನಿಯಲ್ಲಿ ವಟಗುಟ್ಟಿದಳು. 'ನಮಗ್ಯಾಕ ಬೇಕವ್ವ ದೊಡ್ಡೋರ ಉಸಾಬರಿ... ಅವ್ರು ಹೆಂಗಿದ್ರೂ ನಡಿಯುತ್ತ.... ಅವ್ರು ಬಟ್ಟಿ ಬಿಚ್ಗೆಂಡು ಬಜಾರಕ್ಕ ನಿಂತ್ಗಂಡು ಕುಣದ್ರೂ ಫ್ಯಾಶನ್ ಅಂತ ಹೆಸರು ಇಡ್ತಾರ...' ಮತ್ತೊಬ್ಬಾಕೆ ಅವರಿಬ್ಬರ ಕಿವಿಯಲ್ಲಿ ಉಸುರಿದಳು. ಶಿವಬಸಪ್ಪ ಕಲ್ಯಾಣಿ ಮಲಗಿದ್ದ ಮಂಚದ ಸಮೀಪ ಒಂದೆರಡು ನಿಮಿಷ ನಿಂತು ಮತ್ತೆ ಹೊರಗೆ ಬಂದು ಒಂದಿಬ್ಬರಿಗೆ ಕೈಸನ್ನೆ ಮಾಡಿದರು. ಅವರು ಏನು ಅರ್ಥಮಾಡಿಕೊಂಡರೊ, 'ಎಲ್ಲ ತಯಾರಾಗೈತಿ ಧಣಿ. ತಾಲ್ಲೂಕ ಪಂಚಾಯಿತಿ ಜೀಪು ಖಾಲಿ ನಿಂತಿತ್ತು. ಅದನ್ನ ಇಲ್ಲಿಗೆ ತಂದು ಟಾಪ್ ಕಿತ್ತಿ ಹೂವು, ಪರಾರಿ, ಮಿಂಚಿನಿಂದ ಸಿಂಗಾರ ಮಾಡಾಕ ಹತ್ತೀವಿ... ಆದಷ್ಟು ಬೇಗನೆ ಎಲ್ಲಿ ಮಣ್ಣು ಮಾಡ್ಬಕು ಅಂತ ಹೇಳಿಬುಟ್ರ ಇಡೀ ನಗರದಾದ್ಯಂತ ಕಲ್ಯಾಣಿ ಮೆರವಣಿಗೆ ಶುರು ಮಾಡಿಬುಡಮ್ರಿ...' ತಾಲ್ಲೂಕ ಅಧ್ಯಕ್ಷನೂ ಶಿವಬಸಪ್ಪನವರ ಹತ್ತಿರ ಸಂಬಂಧಿಯೂ ಆದ ಅಮರೇಶ, ಅಗತ್ಯವಿಲ್ಲದಿದ್ದರೂ ಸುತ್ತ ನಿಂತ ಜನರಿಗೆ ಕೇಳುವಂತೆ ಕೂಗಿ ಹೇಳಿ, ಯಾವುದೋ ಪಾಠದ ಪ್ರಶ್ನೆ ಉತ್ತರಗಳನ್ನು ಸಹಿ ಮಾಡಿಸಿಕೊಳ್ಳಲು ನಿಂತ ಕನ್ನಡ ಶಾಲೆ ಮಕ್ಕಳಂತೆ ಶಿವಬಸಪ್ಪನವರ ಮುಖವನ್ನೊಮ್ಮೆ ನೋಡಿದ. ಶಿವಬಸಪ್ಪನವರೂ ತಮ್ಮ ಕೆಂಪಾದ ಕಣ್ಣುಗಳಿಂದಲೇ ಗೋಣು ಅಲ್ಲಾಡಿಸಿ ಸಹಿಹಾಕಿದರು.
ಹೋದ ದೀಪಾವಳಿ ಶಿವಬಸಪ್ಪನವರ ಪಾಲಿಗೆ ಕತ್ತಲ ಹಬ್ಬವಾಗಿತ್ತು. ಪ್ರತಿ ವರ್ಷ ಅದೆಷ್ಟ್ಟೊಂದು ಸಂಭ್ರಮದಿಂದ ಹಬ್ಬ ಆಚರಿಸುತ್ತಿದ್ದ ಅವರ ಕುಟುಂಬದವರು ಶಿವಬಸಪ್ಪನವರ ತಾಯಿ ಯಮನಮ್ಮ ಸತ್ತಿದ್ದಕ್ಕ ಹಬ್ಬ ಮಾಡಿರಲಿಲ್ಲ. ಇಡೀ ಊರಿಗೆ ಊರು ಶೋಕದಲ್ಲಿ ಮುಳುಗಿತ್ತು. ದೀಪಾವಳಿಗೆಂದು ದೂರದ ಊರುಗಳಿಂದ ತಂದಿದ್ದ ಕಬ್ಬು, ಬಾಳೆ, ಹೂವುಗಳನ್ನು ಖರೀದಿಸುವರೆ ಗತಿಯಿರಲಿಲ್ಲ. ಶಿವಬಸಪ್ಪನವರೆಂದರೆ ಕೇಳಬೇಕೇನು. ತೀರಾ ಬಡ ಕುಟುಂಬದಲ್ಲಿ ಹುಟ್ಟಿ, ಕೂಲಿ ಪಾಲಿ ಮಾಡಿ ಬೆಳೆದವರು. ಅದೇನು ಲಕ್ಕು ಬಂತೊ ರಾಜಕೀಯಕ್ಕೆ ಕಾಲಿಟ್ಟರು. ಒಂದೊಂದೆ ಹೆಜ್ಜೆ ಮೇಲೆ ಇಡುತ್ತಾ ಹೋದರು. ತಾಯಿ ಕೈತುತ್ತು ತಿಂದು ಬೆಳೆದಿದ್ದಕ್ಕೊ ಅವ್ರು ಮಿನಿಸ್ಟ್ರು ಆದ್ರೂ ತಾಯಿ ಯಮನವ್ವನ್ನ ತಮ್ಮ ದೊಡ್ಡ ಬಂಗಲೆಯಲ್ಲಿ ಪ್ರತ್ಯೇಕ ಕೋಣೆಯಲ್ಲಿ ಇರಿಸಿ ಸಕಲ ಸೌಲಭ್ಯ ಒದಗಿಸಿದ್ದರು. ಕೈಬಾಯಿ ಮಾತು ಕೇಳಲು ನಾಲ್ಕಾರು ಆಳುಗಳು ಯಮನಮ್ಮನ ಸುತ್ತ ಸದಾ ಇರುತ್ತಿದ್ದರು. ಶಿವಬಸಪ್ಪನವರ ಹೆಂಡತಿ ಸಂಡೂರು ರಾಜರ ಮನೆತನದಿಂದ ಬಂದವರಾಗಿದ್ದರಿಂದ ಯಮನಮ್ಮನ್ನ ಮುಟ್ಟಿಸಿಕೊಳ್ಳಾಕೂ ಹೇಸಿಗೆ ಪಡುತ್ತಿದ್ದಳು. ಆಕೆ ಹತ್ತಿರ ತನ್ನ ಮಕ್ಕಳನ್ನಾಗಲಿ, ಮೊಮ್ಮಕ್ಕಳನ್ನಾಗಲಿ ಆಡಲು ಬಿಡುತ್ತಿರಲಿಲ್ಲ. ಎಲ್ಲಿ ಆ ಮಕ್ಕಳ ಮೇಲೆ ಯಮನಮ್ಮನ ನೆರಳು ಬೀಳುತ್ತೇನೊ ಅಂಬ ಆತಂಕದಿಂದ ಆ ಕೋಣೆಗೆ ಅಪ್ಪಿತಪ್ಪಿಯೂ ಕಳಿಸುತ್ತಿರಲಿಲ್ಲ. ದೀಪಾವಳಿ ಪಾಡ್ಯ ಇನ್ನು ನಾಲ್ಕು ದಿನ ಇರುವಾಗ ಯಮನಮ್ಮ ಶಿವನ ಪಾದ ಸೇರಿದ್ದಳು. ಊರ ಜನ ಯಮನಮ್ಮ ಪುಣ್ಯ ಮಾಡ್ಯಾಳ ಅದಕ್ಕೆ ಪಾಡ್ಯದ ಮುಂದ ಸತ್ತಾಳ, ಈ ಸಂದರ್ಭದಲ್ಲಿ ಸತ್ತವರು ಸೀದಾ ಸ್ವರ್ಗಕ್ಕೆ ಹೋಗ್ತಾರೆಂದು ಮಾತನಾಡಿಕೊಳ್ಳುತ್ತಿದ್ದರು. ಆಕಿ ಸತ್ತ ಸುದ್ದಿ ಕೇಳಿ ಊರ ಜನ ಶಿವಬಸಪ್ಪನವರ ಮನೆಗೆ ಧಾವಿಸಿ ಬಂದರು. ಬೋರಾಡಿ ಅತ್ತರು. ಯಮನಮ್ಮ ಸ್ವಲ್ಪ ಅಡ್ಡಾಡುವಂಗ ಗಟ್ಟಿಯಿದ್ದಾಗ ಮನೆ ಸಮೀಪ ಒಂದು ನಾಯಿನ ಸಮೇತ ಬರಲಾರ್‍ದಂಗ ನೋಡಿಕೊಳ್ಳುತ್ತಿದ್ದಳು. ಓಣಿಯ ಸಣ್ಣ ಹುಡಗ್ರು ಏನಾದ್ರೂ ಅವರ ಮನೆ ಮುಂದೆ ಆಟವಾಡುತ್ತಿದ್ದನ್ನು ಕಂಡರೆ ಸಾಕು ಕೆಂಡಮಂಡಲವಾಗುತ್ತಿದ್ದಳು. ಅವರು ಆಡುತ್ತಿದ್ದ ಬುಗರಿ, ಚಿಣ್ಣಿ ದಾಂಡು, ಚೆಂಡುಗಳನ್ನು ಕಸಿದುಕೊಂಡು ಹೋಗಿಬುಡುತ್ತಿದ್ದಳು. ಹುಡಗ್ರು ಕಾಲು ಹಿಡಕಂಡು ಬೇಡಿಕೊಂಡ್ರೂ, ಲಬ್ ಲಬ್ ಹೊಯ್ಕೊಂಡ್ರೂ ಕಸಿದುಕೊಂಡ ವಸ್ತುಗಳನ್ನು ಕೊಡುತ್ತಿರಲಿಲ್ಲ. ಓಣಿಯ ಹುಡಗ್ರು ಮುದುಕಿ ತಮ್ಮತ್ತ ಬರುತ್ತಿದ್ದುದನ್ನೆ ಕಂಡರೆ ಸಾಕು ತಮ್ಮ ಆಟಿಕೆಗಳನ್ನು ಹಿಡಿದುಕೊಂಡು ಸತ್ನ್ಯೋ ಬಿದ್ನ್ಯೋ ಅಂತ ಓಡಿಹೋಗುತ್ತಿದ್ದರು. ಯಮನಮ್ಮ ಓಣಿಯಲ್ಲಿ ಬಂದರೆ ಸಾಕು... ಆಕಿ ಬಡಿಗಿಲಿಂದ ಹೊಡೆಸಿಕೊಂಡ ಹುಡಗರು, 'ಕಾಗಿ ಕಾಗಿ ಕವ್ವ... ಯಾರ ಬಂದಾರ ಅವ್ವ... ಮುದುಕಿ ಬಂದಾಳವ್ವ ...' ಎಂದು ತಮ್ಮದೇ ಧಾಟಿಯಲ್ಲಿ ಹಾಡುತ್ತಿದ್ದರು. ಯಮನಮ್ಮ ಅಂದ್ರ ಅವರ ಪಾಲಿಗೆ ಕಾಗಿಯಾಗಿದ್ದಳು. ಇಂತದ್ದಕ್ಕೆಲ್ಲಾ ಶಿವಬಸಪ್ಪನವರಾಗಲಿ, ಅವರ ಮನೆಯವರಾಗಲಿ ತಲೆಕಡೆಸಿಕೊಂಡವರಲ್ಲ. ಮುದುಕಿ ಕೆಳಗಿನಿಂದ ತನ್ನ ಕೋಣೆಗೆ ಪಾಂಟುಣಗಿ ಹತ್ತಲು ಹೋಗಿ ಕಾಲು ಜಾರಿ ಬಿದ್ದು, ಕಾಲು ಮುರಿದುಕೊಂಡಿದ್ದೇ ನೆವವಾಗಿ ನಾಲ್ಕಾರು ದಿನ ಬೆಂಗಳೂರಿನ ಆಸ್ಪತ್ರೆಗೆ ದಾಖಲಾದಳು. ಇನ್ನೇನು ಆರಾಮ ಆದಳು. ಊರಿಗೆ ಕರೆದುಕೊಂಡು ಬರಬೇಕೆಂದು ಅಂದುಕೊಂಡಾಗಲೇ ಮುದುಕಿ ಇಹಲೋಕ ತ್ಯಜಿಸಿದ್ದಳು.
ದೆಹಲಿಗೆ ಹೊರಟಿದ್ದ ಶಿವಬಸಪ್ಪ ಮುದುಕಿ ಸತ್ತ ಸುದ್ದಿ ತಿಳಿಯುತ್ತಲೆ ಏಕಾಏಕಿ ಬೆಂಗಳೂರಿಗೆ ವಾಪಸು ಹೋದರು. ಊರಿಗೆ ಸುದ್ದಿ ಮುಟ್ಟಿಸಿದರು. ಯಮನಮ್ಮನ ಶವ ತಂದಾಗ ಊರಲ್ಲಿ ನೋಡಬೇಕು. ಶವವನ್ನು ಸ್ವಾಗತ ಮಾಡಿಕೊಳ್ಳಲಿಕ್ಕೆ ಅದೆಷ್ಟು ಜನ ಸೇರಿದ್ದರು. ಶವ ನೋಡುವುದಕ್ಕಿಂತ ಮೊದಲು ಅವರು ಶಿವಬಸಪ್ಪನವರನ್ನೇ ಹುಡುಕುತ್ತಿದ್ದರು. ಅವರ ಬಾಡಿದ ಮುಖ ಕಂಡು ತಮ್ಮ ಮುಖಗಳನ್ನೂ ಬಾಡಿಸಿಕೊಂಡರು. ಕಣ್ಣಾಲಿಗಳು ತೇವಗೊಳ್ಳದಿದ್ದರೂ ಕೆಲವರು ತಿಣುಕಾಡಿ ತೇವಮಾಡಿಕೊಂಡರು. ಇನ್ನೂ ಕೆಲವರು ತಮ್ಮ ಕೈಬೆರಳುಗಳನ್ನು ಬಾಯಿಯಲ್ಲಿಟ್ಟು ಜಿಬುಕಿ ಕಣ್ಣುಗಳಿಗೆ ಉಗುಳು ಒರೆಸಿಕೊಂಡು ತಮಗೂ ದುಃಖವಾಗಿದೆ ಎಂಬುದನ್ನು ಪ್ರದರ್ಶಿಸಿದರು. ಇಡೀ ನಗರದ ಪ್ರತಿ ಓಣಿ, ಬೀದಿಯ ಮೂಲಕ ಹಾದು ಹೋದ ಯಮನಮ್ಮನವರ ಶವ ಹೊತ್ತ ಕಾರು ಬಂದ ಕೂಡಲೇ ಎಲ್ಲರೂ ಎದ್ದು ನಿಂತು ಕಣ್ಣರಳಿಸಿ ನೋಡಿದರು. ಪತ್ರಿಕೆಗಳಲ್ಲಿ ದೊಡ್ಡ ಜಾಹೀರಾತು ಹಾಕಿಸಿಕೊಂಡ ಪಕ್ಷದ ಮುಖಂಡರು ಮಿನಿಸ್ಟ್ರು ಶಿವಬಸಪ್ಪ ಮತ್ತು ಅವರ ಕುಟುಂಬದವರಿಗೆ ಯಮನಮ್ಮನವರ ಸಾವಿನಿಂದ ಉಂಟಾದ ದುಃಖ ತಡೆದುಕೊಳ್ಳುವ ಶಕ್ತಿಕೊಡಲೆಂದು ಭಗವಂತನಲ್ಲಿ ಪ್ರಾರ್ಥಿಸಿದರು. 'ಕೋಡಿ ಯಮನಮ್ಮ ಬದುಕಿದ್ದಾಗ ಇಷ್ಟು ಸಂಭ್ರಮ ಕಂಡಿತ್ತೊ... ಇಲ್ಲೊ... ಸತ್ತಾಗ ನೋಡಿದ್ರ ಅದೆಷ್ಟೆಂದು ಜನ ಬಂದು ನೋಡಿ ಹೋಗಿದ್ದು. ಕಣ್ಣೀರು ಹಾಕಿದ್ದು... ಎಲ್ಲ ಶಿವಬಸಪ್ಪನ ಪುಣ್ಯದಿಂದ ಯಮನಮ್ಮಗ ಇಂಥಾ ಭಾಗ್ಯ ಬಂತು...' ಅಂತ ಸುತ್ತಲಿನ ಜನ ಮಾತನಾಡಿಕೊಂಡರು.
ಯಮನಮ್ಮ ಸತ್ತಾಗ ನಗರದ ವಿವಿಧ ಪ್ರಮುಖ ಬೀದಿಗಳಲ್ಲಿದ್ದ ಶಿವಬಸಪ್ಪನವರ ಒಡೆತನದ ನಾಲ್ಕು ಪೆಟ್ರೋಲ್ ಬಂಕ್‌ಗಳು, ಹತ್ತಾರು ವ್ಯಾಪಾರ ಮಳಿಗೆಗಳಿಗೆ ಬೀಗ ಜಡಿಯಲಾಗಿತ್ತು. ಸರ್ಕಾರಿ ಕಚೇರಿಗಳ ಅಧಿಕಾರಿಗಳು, ಸಿಬ್ಬಂದಿ ಸಮೇತ ಕೆಲಸಕ್ಕೆ ಹೋಗಲಾರ್‍ದ ಶಿವಬಸಪ್ಪನವರ ಮನೆಯಲ್ಲೆ ಆ ದಿನ ಠಿಕಾಣಿ ಹೂಡಿ ತಮ್ಮ ಇಲಾಖೆಯ ಸೇವೆ ಅಲ್ಲಿ ಮುಂದುವರಿಸಿದ್ದರು. ನಗರಸಭೆ ಪೌರಾಯುಕ್ತರಿಂದ ಹಿಡಿದು ಅಲ್ಲಿನ ಪ್ಯೂನ್‌ವರೆಗಿನ ಸಿಬ್ಬಂದಿ ಮನೆಗೆ ಬರುತ್ತಿದ್ದ ಜನರಿಗೆ ಉಪಹಾರ, ನೀರು ಕೊಡುವ ವ್ಯವಸ್ಥೆಯನ್ನು ಅಚ್ಚ್ಚುಕಟ್ಟಾಗಿ ಮಾಡುತ್ತಿದ್ದರು. ನಗರದ ಬೀದಿಗಳ ಕಸ ಗುಡಿಸಬೇಕಿದ್ದ ನೂರಾರು ಸಿಬ್ಬಂದಿ ಆ ದಿನ ಶಿವಬಸಪ್ಪನವರ ಮನೆಯ ಸುತ್ತ ಕಸ ಕಡ್ಡಿ, ಪೇಪರ್ ಆಯುವ ಕೆಲಸವನ್ನು ಬಹು ಶ್ರದ್ಧೆಯಿಂದ ಮಾಡುತ್ತಿತ್ತು. ಹುಬ್ಬಳ್ಳಿಯಿಂದ ವಿಶೇಷವಾಗಿ ತರಿಸಿದ್ದ ಹೂವಿನ ಮಂಟಪದಲ್ಲಿ ಯಮನಮ್ಮನ್ನ ಕೂಡಿಸಿ ಮೆರವಣಿಗೆ ಮಾಡಿ ಶವ ಸಂಸ್ಕಾರ ಮಾಡಲಾಯಿತು. ತಮ್ಮ ಮೇಲೆ ಜನರಿಟ್ಟ ವಿಶ್ವಾಸ, ಪ್ರೀತಿಗೆ ಶಿವಬಸಪ್ಪ ದಂಗಾಗಿ ಹೋಗಿದ್ದರು. ಹೀಗೆ ಗತಕಾಲದ ನೆನಪು ಮಾಡಿಕೊಳ್ಳುತ್ತಾ ಹೊರಗಿನ ತಮ್ಮ ಜೋಕಾಲಿಯಲ್ಲಿ ಕುಳಿತ ಶಿವಬಸಪ್ಪನವರನ್ನು ಯಾರೊ ಮುಟ್ಟಿ ಮಾತನಾಡಿಸಿದಾಗಲೆ ಎಚ್ಚೆತ್ತುಕೊಂಡಿದ್ದು. ರಾಜ್ಯ ಪಶು ಸಂಗೋಪನಾ ಮತ್ತು ಪಾಲನಾ ಖಾತೆ ಸಚಿವ ಚೆನ್ನಿಗಪ್ಪ ಅವರ ಮುಂದೆ ನಿಂತುದ್ದನ್ನು ಕಂಡ ಶಿವಬಸಪ್ಪ ಜೋಕಾಲಿಯಿಂದ ದಿಡಗ್ಗನೆ ಎದ್ದುನಿಂತರು. ಅವರು ನಿಂತ ರಭಸಕ್ಕೆ ಜೋಕಾಲಿ ಹಿಂದಕ್ಕೂ ಮುಂದಕ್ಕೂ ಓಲಾಡಿ ಜೋಕಾಲಿಗೆ ಹೊಂದಿಕೊಂಡೇ ನಿಂತಿದ್ದ ಹತ್ತಾರು ಜನರ ಮೊಣಕಾಲಿಗೆ ಬಡಿಯಿತು. ಅವರಿಗೆ ಅದ್ಯಾವುದೂ ಲೆಕ್ಕಕ್ಕಿರಲಿಲ್ಲ. ಪರಸ್ಪರ ಕೈಕುಲುಕಿದ ಚೆನ್ನಿಗಪ್ಪ ಮತ್ತು ಶಿವಬಸಪ್ಪ ಕಲ್ಯಾಣಿಯಿದ್ದ ಕೋಣೆಗೆ ಹೋದರು. ಹೂವಿನಲ್ಲಿ ಅಡಗಿದ್ದರೂ ಕಲ್ಯಾಣಿಯ ಆಕಾರ ಅರ್ಥಮಾಡಿಕೊಂಡ ಚೆನ್ನಿಗಪ್ಪ, ಹುಲಿಯಂತಾ ನಾಯಿ ಅದೆಷ್ಟು ಚಲೊ ಐತಿ. ಇದಕ್ಕ ಇಂಥಾ ಸಾವು ಬರಬಾರದಾಗಿತ್ತು. ನಿಮ್ಮ ಕಲ್ಯಾಣಿ ಹೆಸರಿನಲ್ಲಿ ಪ್ರತಿ ವರ್ಷ ರಾಜ್ಯ ಮಟ್ಟದಲ್ಲಿ ನಾಯಿಗಳ ಶೌರ್ಯ ಪ್ರಶಸ್ತಿ ಏರ್ಪಡಿಸಿ, ಗೆದ್ದ ನಾಯಿಗೆ ಬಂಗಾರದ ಪದಕ, ಒಂದು ಲಕ್ಷ ರೂಪಾಯಿ ನಗದು ಬಹುಮಾನವನ್ನ ಸರ್ಕಾರದಿಂದ ಕೊಡಿಸಬೇಕು ಎಂದು ಘೋಷಿಸಿದರು. ಸಮೀಪದಲ್ಲಿದ್ದ ಮಾಧ್ಯಮದ ವರದಿಗಾರರು ಚೆನ್ನಿಗಪ್ಪ ಉಸುರಿದ ಪ್ರತಿ ಅಕ್ಷರವನ್ನೂ ಹಾಳೆಯಲ್ಲಿ ಗೀಚಿಕೊಂಡರು.
ಶಿವಬಸಪ್ಪನವರ ಕುಟುಂಬದ ಸದಸ್ಯರು ಮತ್ತು ಪಕ್ಷದ ಮುಖಂಡರು ಕಲ್ಯಾಣಿಯ ಮೆರವಣಿಗೆ ಮಾಡಲು ಅಣಿಯಾದರು. ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಬಾಣ ಬಿರುಸು ತರಿಸಲಾಗಿತ್ತು. ಶಿವಬಸಪ್ಪನವರ ತಾಯಿ ಯಮನಮ್ಮ ಮುದುಕಿ ಸತ್ತಾಗ ತರಿಸಿದ್ದ ಮಂಟಪವನ್ನೇ ತರಿಸಿ, ಅತ್ಯಂತ ಸುಂದರವಾಗಿ ಅಲಂಕಾರ ಮಾಡಲಾಗಿತ್ತು. ನೋಡುಗರ ಕಣ್ಣು ಕುಕ್ಕುವಂತೆ ಮಂಟಪ ಕಾಣುತ್ತಿತ್ತು. ಕಲ್ಯಾಣಿ ಮುಖ ಕಾಣುವಷ್ಟು ಬಿಟ್ಟು ಉಳಿದೆಡೆ ವಿವಿಧ ಹೂಗಳಿಂದ ಸಿಂಗರಿಸಲಾಗಿತ್ತು. ಮಂಟಪ ಹೊತ್ತ ಜನ ಶಿವಬಸಪ್ಪನವರ ಮನೆಯಿಂದ ನಿಧಾನವಾಗಿ ಹೊರಬಂದರು. ಪಕ್ಷದ ಹಿರಿಯ ಮುಖಂಡರಿಬ್ಬರು ಶಿವಬಸಪ್ಪನವರ ತೋಳುಗಳಲ್ಲಿ ಕೈಹಾಕಿ ಗಂಡ ಸತ್ತ ವಿಧವೆಯನ್ನು ಸ್ಮಶಾನಭೂಮಿಗೆ ಕರೆದುಕೊಂಡು ಹೋಗುವಂತೆ ಹಿಡಿದುಕೊಂಡು ನಡೆದಿದ್ದರು. ಪಕ್ಷದ ಚಿಹ್ನೆಯಿದ್ದ ಜರತಾರಿ ಶಲ್ಯೆಯಿಂದಲೇ ಕಣ್ಣು ತಿಕ್ಕಿಕೊಳ್ಳುತ್ತಾ ಮಂಟಪದ ಹಿಂದೆ ಸಾಗಿದ್ದರು. ಬಂಧು ಬಳಗದವರ ದುಃಖದ ಕಟ್ಟೆ ಒಡೆಯಿತು. ಪಕ್ಷದ ಮುಖಂಡರು ಕಾರ್ಯಕರ್ತರು, ಶಿವಬಸಪ್ಪನವರ ಅಪಾರ ಬೆಂಬಲಿಗರು 'ಕಲ್ಯಾಣಿ ಅಮರ ಹೈ.... ಮಿನಿಸ್ಟ್ರು ಶಿವಬಸಪ್ಪನವರಿಗೆ ಜೈ....' ಎಂದು ಮುಗಿಲುಮುಟ್ಟುವಂತೆ ಜಯಘೋಷ ಹಾಕಿದರು.
ಮಂಟಪ ಮಿನಿಸ್ಟ್ರು ಮನೆ ಮುಂದಿನ ದಾರಿಯಿಂದ ಪ್ರಮುಖ ರಸ್ತೆಗೆ ಬಂತು. ಮಂಟಪ ಬರುವ ಮುನ್ಸೂಚನೆ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ನಗರದ ಎಲ್ಲ ಪ್ರಮುಖ ರಸ್ತೆಗಳ ಮೇಲಿನ ಸಂಚಾರವನ್ನು ಕೆಲ ಕಾಲ ಸ್ಥಗಿತಗೊಳಿಸಲಾಗಿತ್ತು. ಊರ ಹೊರವಲಯದಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ಕಾಯುತ್ತಿದ್ದವು. ಮಂಟಪದ ಮೆರವಣಿಗೆ ಸಾಗುತ್ತಿದ್ದ ಹಾದಿಯಲ್ಲಿ ಹೆಜ್ಜೆಗೊಮ್ಮೆ ಕಿವಿಗಡಚಿಕ್ಕುವ ಶಬ್ದದಲ್ಲಿ ಬಾಣಗಳನ್ನು ಸುಡಲಾಯಿತು. ಸಾವಿರಾರು ಅಭಿಮಾನಿಗಳು ಶೋಕದಲ್ಲೂ ಕುಣಿದು ಕುಪ್ಪಳಿಸಿದರು, ಕೇಕೆ ಹಾಕಿದರು. ಮಂಟಪ ನಗರದ ಎಲ್ಲ ಬೀದಿಗಳಲ್ಲಿ ಸಾಗಿದಾಗ ಕೆಲವೆಡೆ ವೃತ್ತಗಳಲ್ಲಿ ಪಕ್ಷದ ಮುಖಂಡರು ಮತ್ತು ಅಭಿಮಾನಿಗಳು ಕಲ್ಯಾಣಿಗೆ ಹೊಸ ಬಟ್ಟೆ ಹಾಕಿ ವಿಶೇಷ ಪೂಜೆ ಸಲ್ಲಿಸಿದರು. ಶಿವಬಸಪ್ಪನವರ ತಾಯಿ ಸತ್ತಾಗಲೂ ಇಷ್ಟೊಂದು ಜನ ಸೇರಿರಲಿಲ್ಲ. ಎಲ್ಲೆಲ್ಲಿಂದಲೊ ಜನ ಸಾಗರವೇ ಹರಿದುಬಂದಿತ್ತು. ಕಿತ್ತೂರು ಚೆನ್ನಮ್ಮ ಸರ್ಕಲ್‌ನಿಂದ ಮಹಾತ್ಮಗಾಂಧಿ ವೃತ್ತದವರೆಗೆ ಒಂದು ಸೂಜಿ ತೂರಲು ಜಾಗವಿರದಂತೆ ಮಂಟಪದ ಹಿಂದೆ ಜನ ಸಾಗುತ್ತಿದ್ದರು. ನಗರದ ಎಲ್ಲ ಬೀದಿ, ವೃತ್ತ, ರಸ್ತೆಗಳನ್ನು ದಾಟಿದ ಮಂಟಪ ಮತ್ತೆ ಶಿವಬಸಪ್ಪನವರ ಮನೆ ಆವರಣ ಸೇರಿತು. ಕಂಪೌಂಡಿನ ಒಳಗೆ ತೋಡಿದ್ದ ಕುಣಿಯಲ್ಲಿ ಕಲ್ಯಾಣಿಯನ್ನು ಮಣ್ಣು ಮಾಡಲು ಶಿವಬಸಪ್ಪ ನಿರ್ಧರಿಸಿದ್ದರು. ಕಲ್ಯಾಣಿಯ ಕುಣಿ ಮೇಲೆ ಅಮೃತ ಶಿಲೆಯಲ್ಲಿ ಸ್ಮಾರಕವೊಂದನ್ನು ನಿರ್ಮಿಸಲು ಅವರ ಬೆಂಬಲಿಗರು ಯೋಚಿಸಿದ್ದರು. ಕಲ್ಯಾಣಿಗೆ ಶಿವಬಸಪ್ಪನವರ ನಂಬಿಕೆಯ ಜಾತಿ, ಧರ್ಮದಂತೆಯೇ ಚಾಚೂತಪ್ಪದೇ ಎಲ್ಲ ವಿಧಿ ವಿಧಾನಗಳ ಮೂಲಕ ಅಂತಿಮ ಪೂಜೆ ಸಲ್ಲಿಸಲಾಯಿತು. ಶಿವಬಸಪ್ಪನವರ ಕಣ್ಣುಗಳಿಂದ ಒಂದೇ ಸವನೆ ಕಣ್ಣೀರು ದಳ- ದಳ ಇಳಿಯುತ್ತಿದ್ದವು. ಶಲ್ಯೆಯಿಂದ ಒರೆಸಿಕೊಳ್ಳುತ್ತ ಹೂವಿನಿಂದ ಮುಚ್ಚಲ್ಪಟ್ಟಿದ್ದ ಕಲ್ಯಾಣಿಯ ಮೇಲೆ ಹಿಡಿ ಮಣ್ಣನ್ನು ತಮ್ಮ ತೇವವಾದ ಕಣ್ಣುಗಳಿಗೆ ಒತ್ತಿಕೊಂಡು ಹಾಕಿ, ಕುಣಿಗೆ ಹಣಿ ಹಚ್ಚಿ ನಮಸ್ಕರಿಸಿದರು. ಮತ್ತೆಲ್ಲಿ ಹೆಚ್ಚುಕಮ್ಮಿಯಾಗಿ ಅವರಿಗೆ ಮೂರ್ಛೆಗೀರ್ಚೆ ಬಂದೀತೆಂಬ ಆತಂಕದಲ್ಲಿ ವೈದ್ಯರು ಅವರ ಸಮೀಪದಲ್ಲೆ ನಿಂತಿದ್ದರು. ಜನ ಪರಸ್ಪರ ಕೈ ಕಾಲು ತುಳಿಯುತ್ತ ಕಲ್ಯಾಣಿಯ ಮೇಲೆ ಹಿಡಿ ಮಣ್ಣು ಹಾಕಿ ಧನ್ಯರಾದರು.
ಶಿವಬಸಪ್ಪನವರಿಗೆ ಕಲ್ಯಾಣಿಯನ್ನು ಮಣ್ಣು ಮಾಡಿದ ರಾತ್ರಿ ಅದೆಷ್ಟು ಹೊತ್ತಾದರೂ ಕಣ್ಣಿಗೆ ನಿದ್ದೆ ಹತ್ತಲಿಲ್ಲ. ಪ್ರತಿ ಕ್ಷಣಕ್ಕೊಮ್ಮೆ ಕಲ್ಯಾಣಿ ಕಣ್ಣು ಮುಂದೆ ಬಂದು ಕುಳಿತಂತೆ ಅನ್ನಿಸಿತು. ಹಾಸಿಗೆಯಲ್ಲಿ ಅತ್ತಿಂದಿತ್ತ ಹಲವು ಬಾರಿ ಉರುಳಾಡಿದರೂ ನಿದ್ದೆ ಬಾರದೆ ಎದ್ದು ಕುಂತರು. ಕಲ್ಯಾಣಿಯನ್ನು ಮಣ್ಣು ಮಾಡಿದ್ದ ಜಾಗದ ಸಮೀಪ ನಾಲ್ಕಾರು ನಾಯಿಗಳು ಪರಸ್ಪರ ಕಚ್ಚಾಡಿದ, ಬೊಗಳಿದ ದನಿಯಿಂದ, ಕುಂತವರು ಎದ್ದು ನಿಂತು ಕಿಟಕಿ ಮೂಲಕ ಕಲ್ಯಾಣಿಯ ಸಮಾಧಿಯತ್ತ ಕಣ್ಣರಳಿಸಿ ನೋಡಿದರು. ಮಂದ ಬೆಳಕಿನಲ್ಲಿ ನಾಲ್ಕಾರು ನಾಯಿಗಳಿದ್ದುದು ಕಂಡು ಬಂತು. ಶಿವಬಸಪ್ಪ ತಮ್ಮ ಮನೆಯ ಆಳುಗಳನ್ನು ಕೂಗಿ ಎಬ್ಬಿಸಿದರು. 'ಏನ್ ಧಣಿ.... ಕರೆದೇನ್ರಿ ಧಣಿ...' ಎಂದು ಕೆಟ್ಟ ಕನಸು ಕಂಡು ಮಿಟಿಗಿ ಬಿದ್ದಂತೆ ಎದ್ದ ಆ |