ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 
ಇತರ ವಿಭಾಗಗಳು
 
ಚಿಲುಮೆ
ಸೇನೆಯ ಲಿಂಗತ್ವ ತಾರತಮ್ಯ
 
ಭಾರತೀಯ ಸೇನಾ ಪಡೆ ವಿಷಯದಲ್ಲಿ ಮಾತ್ರ ಮಹಿಳೆ ಅಬಲೆಯೇ?
Prasoon
ಪ್ರಸೂನ್ ಮಜುಂದಾರ್
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್

ಭಾರತೀಯ ಸೇನಾ ಪಡೆಗೆ ಬಜೆಟ್ ಅನುದಾನಗಳು ಸಂಮಂಜಸವಾಗಿಯೇ ದೊರಕುತ್ತಿವೆ. ಕಾಲಕಾಲಕ್ಕೆ ತಕ್ಕಂತೆ ಅನುದಾನದಲ್ಲಿ ಏರಿಕೆಯೂ ಆಗುತ್ತಿದೆ. ಇನ್ನು ನಮ್ಮ ಸೇನಾ ಪಡೆ ಜಗತ್ತಿನ ಬೃಹತ್ ಸೇನಾ ಪಡೆಗಳಲ್ಲಿ ಒಂದಾಗಿರಬಹುದು, ಅಥವಾ ಸುಮಾರು 13 ಲಕ್ಷದಷ್ಟು ಸೈನಿಕರು ದೇಶಕ್ಕಾಗಿ ದುಡಿಯುತ್ತಿರಬಹುದು. ಆದರೆ, ಏನಾದರೇನಂತೆ. ನಮ್ಮ ಸೇನಾ ಪಡೆಗಳಲ್ಲಿ ಮಹಿಳೆಯರ ಪಾಲು ಶೇ. 2.65 ಮಾತ್ರ! ನೌಕಾಪಡೆ, ವಾಯುಪಡೆಗಳಲ್ಲಿ ಈ ಶೇಕಡಾವಾರು ಅಂಶ ಕ್ರಮವಾಗಿ ಶೇ.3 ಹಾಗೂ ಶೇ.6.7ರಷ್ಟಿದೆ. ಆದರೂ, ಸೇನೆಯ ಮೂರು ವಿಭಾಗದ ಶ್ರೇಣಿಗಳ ವಿಷಯದಲ್ಲಿ ಮಾತ್ರವಲ್ಲ, ಸೇನಾ ವೃತ್ತಿಜೀವನದಲ್ಲೂ ಮಹಿಳೆ ಎದುರಿಸುವ ಸವಾಲು ದೊಡ್ಡದೇ. ಇತ್ತೀಚೆಗೆ ನಡೆದ ಕೆಲವು ಪ್ರಕರಣಗಳು ಕೂಡಾ ಇದನ್ನೇ ಹೇಳುತ್ತವೆ. ಭಾರತೀಯ ಸೇನಾ ಪಡೆಯ ನೀತಿನಿರೂಪಕರಲ್ಲಿ, ಮಹಿಳೆ ಯುದ್ಧ ರಂಗದಲ್ಲಿ ಕಾರ್ಯ ನಿರ್ವಹಿಸಲು ಅಸಮರ್ಥಳು ಎಂಬ 'ಮೂಢ' ನಂಬಿಕೆ ಇನ್ನೂ ಚಾಲ್ತಿಯಲ್ಲಿರುವುದರಿಂದಲೇ ಸೇನೆಯ ವೈದ್ಯಕೀಯ ಹಾಗೂ ಅರೆವೈದ್ಯಕೀಯ ವ್ಯವಸ್ಥೆಯಲ್ಲಿ ಮಾತ್ರ ಮಹಿಳೆಯರನ್ನು ಹೆಚ್ಚು-ಹೆಚ್ಚು ನೇಮಿಸಿಕೊಳ್ಳಲಾಗುತ್ತದೆ. ಉಳಿದವರನ್ನು 'ಅಧಿಕಾರಿಗಳ ತರಬೇತಿ ಸಂಸ್ಥೆ'ಗಳಲ್ಲಿ ಅಥವಾ 'ತಾತ್ಕಾಲಿಕ ಸೇವಾ ಸಮಿತಿ'ಗಳಲ್ಲಿ ಹಾಗೂ ಆಡಳಿತಾಂಗದಲ್ಲಿ ಮಾತ್ರ ಬಳಸಿಕೊಳ್ಳಲಾಗುತ್ತದೆ. ಆದರೆ ಭಾರತೀಯ ಸೇನೆಯ ನೀತಿನಿರೂಪಕರು ಬಿಂಬಿಸಿದಂತೆ ಯುದ್ಧರಂಗದಲ್ಲಿ ಹೋರಾಡಲು ಮಹಿಳೆ ನಿಜಕ್ಕೂ ಅಸಮರ್ಥಳೇ? ಈ ಪ್ರಶ್ನೆಗೆ ಉತ್ತರ ಎಂಬಂತೆ, ಮಹಿಳೆಯ ಸಾಧನೆಯ ಬಗ್ಗೆ ಹೇಳಲು ಎಲ್‌ಟಿಟಿಇ ಅಥವಾ ನಕ್ಸಲ್ ಪಡೆಗಳು ಯೋಗ್ಯ ಉದಾಹರಣೆಯಲ್ಲದಿದ್ದರೂ ಕ್ಷಣ-ಕ್ಷಣವೂ ಹೋರಾಟದ ಮನೋಭಾವದಲ್ಲೇ ಕಳೆಯುವ ಈ ಪಡೆಗಳಲ್ಲಿ ಮಹಿಳೆಯರ ಪಾಲು ಅಧಿಕವಿದೆ ಎಂಬ ಅಂಶವನ್ನು ತಳ್ಳಿಹಾಕಲಾಗದು. ಎಲ್‌ಟಿಟಿಇನಲ್ಲಿ ವಿಶೇಷ ಮಹಿಳಾ ಪಡೆಯೇ ಇದೆ. ಅಷ್ಟು ಮಾತ್ರವಲ್ಲ ಅವರ ಬಹುತೇಕ ಮಾನವ ಬಾಂಬುಗಳೂ ಮಹಿಳೆಯರೇ! ಇದು ಮಹಿಳೆಯರ ಸಾಧನೆಯನ್ನು ಬಿಂಬಿಸುವ ಅಥವಾ ಅವರ ಧೈರ್ಯವನ್ನು ಕೊಂಡಾಡುವ ಪರಿಯಲ್ಲ ಎಂಬುದನ್ನು ಒಪ್ಪತಕ್ಕದ್ದೇ. ಆದರೆ, ಮಹಿಳೆಯರಿಗೆ ಯುದ್ಧರಂಗ ಸರಿಯಾದ ಸ್ಥಾನ ಅಲ್ಲ ಎಂಬ ಓಬಿರಾಯನ ಕಾಲದ ಗೊಡ್ಡು ನಂಬಿಕೆಗೆ ಜೋತುಬಿದ್ದಿರುವ ನಮ್ಮ ನೀತಿನಿರೂಪಕರಿಗೆ ಮಹಿಳೆಯ ಸಾಮರ್ಥ್ಯವನ್ನು ತೋರಿಸುವ ಉದ್ದೇಶ ಮಾತ್ರ ನನ್ನದು. ಇಂದು ಮಾವೋವಾದಿಗಳು ಅಪಾಯಕಾರಿಯಾಗಿ ಬೆಳೆಯುತ್ತಿದ್ದಾರೆ. ಗೆರಿಲ್ಲಾ ಯುದ್ಧದಲ್ಲಿ ಪಳಗಿರುವ ಈ ಪಡೆಯಲ್ಲಿ ಶೇ.೪೦ರಷ್ಟು ಮಹಿಳೆಯರಿದ್ದಾರೆ. ಭಾರತೀಯ ಸೇನಾ ಪಡೆಯಲ್ಲಿರುವಂತೆ ಸಿಪಿಐ(ಮಾವೋವಾದಿ) ಪಡೆಯಲ್ಲಿ ಮಹಿಳೆಯರನ್ನು ಕಚೇರಿ ಕೆಲಸಗಳಿಗೆ ಅಥವಾ ಇನ್ನಿತರ ಸಣ್ಣ-ಪುಟ್ಟ ಕೆಲಸಗಳಿಗೆ ನೇಮಿಸಲಾಗುವುದಿಲ್ಲ. ಪಡೆಯಲ್ಲಿರುವ ಪುರುಷನೊಬ್ಬ ಯಾವೆಲ್ಲಾ ತರಬೇತಿಗಳನ್ನು ಪಡೆಯುತ್ತಾನೋ ಮಹಿಳೆಯೂ ಅವನ್ನೇ ಪಡೆಯುತ್ತಾಳೆ. ಅಪಾಯ ಎದುರಾದಾಗಲೂ ಅಷ್ಟೇ, ಹೆಗಲಿಗೆ ಹೆಗಲು ಕೊಟ್ಟು ಮಹಿಳೆಯೂ ಹೋರಾಡಬೇಕು. ಸಂದರ್ಭ ಬಂದರೆ ಪ್ರಾಣ ತ್ಯಾಗಕ್ಕೂ ಸಿದ್ಧರಾಗಬೇಕು. ಇಲ್ಲಿ ಮಹಿಳೆಯರಿಗೂ ಯಾವುದೇ ತಾರತಮ್ಯವಿಲ್ಲದೆ ವೃತ್ತಿ ಬಡ್ತಿಯೂ ದೊರಕುತ್ತದೆ. ಜೀವಮಾನ ಪೂರ್ತಿ ಕಾಡಲ್ಲೇ ಕಳೆಯುವ ಅವರು ಮದುವೆಯಾಗುವುದೂ ಪಡೆಯಲ್ಲಿರುವ ಪುರುಷರನ್ನೇ. ಅಂದರೆ ನಕ್ಸಲ್ ಪಡೆಯಲ್ಲಿರುವ ಎಲ್ಲಾ ಮಹಿಳೆಯರು ಮಾವೋನ ಕಟ್ಟಾ ಅನುಯಾಯಿಗಳು ಎಂದು ಹೇಳಲಾಗುವುದಿಲ್ಲ ಅಥವಾ ಅವರೆಲ್ಲರೂ ಮಾವೋನ ಸಿದ್ಧಾಂತಗಳನ್ನೆಲ್ಲಾ ಅರೆದು ಕುಡಿದಿದ್ದಾರೆ ಎಂದಲ್ಲ. ಬಡತನ ತಾಂಡವವಾಡುತ್ತಿರುವ ನಮ್ಮ ದೇಶದ ಮಧ್ಯಭಾಗದ ರಾಜ್ಯಗಳಲ್ಲಿ ನಕ್ಸಲ್ ಚಳವಳಿಗೆ ಸೇರುವುದು ಒಂದು ಜೀವನೋಪಾಯ ಅಷ್ಟೇ. ತಮ್ಮ ಜೀವಮಾನ ಪೂರ್ತಿ ಕಾಡಲ್ಲೇ ಕಳೆದರೆ ಏನಂತೆ? ಹಸಿವೆಯಿಂದ ನರಳಿ ಸಾಯುವುದಕ್ಕಿಂತ ಎರಡು ಹೊತ್ತಿನ ಊಟ ಗ್ಯಾರಂಟಿ ಇರುವ ನಕ್ಸಲ್ ಪಡೆಯನ್ನು ಸೇರುವುದೇ ಉತ್ತಮ ಎಂಬ ಹಲವರ ನಿಲುವು ನಕ್ಸಲ್ ಪಡೆಯ ಸದಸ್ಯರ ಸಂಖ್ಯೆಯನ್ನು ಗಣನೀಯವಾಗಿ ಹೆಚ್ಚಿಸಿದೆ. ಒಂದು ವೇಳೆ ಕದನದಲ್ಲಿ ಮೃತರಾದರೆ ಕುಟುಂಬಕ್ಕೆ ಪರಿಹಾರ ಧನವೂ ಸಿಗುತ್ತದೆ! ಎಂಬ ಆಮಿಷಗಳೇ ಮಾವೋ ಪಡೆಯ ವ್ಯಾಪ್ತಿಯನ್ನು ವಿಸ್ತರಿಸುತ್ತಿದೆ. ಆದರೆ, ಇಂಥ ಸೌಲಭ್ಯಗಳನ್ನೆಲ್ಲಾ ನೀಡಿ ಸಾವಿರಾರು ಮಹಿಳೆಯರನ್ನು ನಮ್ಮ ಸರ್ಕಾರ ಸೇನಾ ಪಡೆಗೆ ಸೇರಿಸಿಕೊಳ್ಳಬಾರದೇ ಎಂಬುದು ನನ್ನ ವಾದ. ಇದು ಆ ಮಹಿಳೆಯರ ಕುಟುಂಬಗಳ ಹಸಿವೆ ನೀಗಿಸುವುದರ ಜೊತೆ ಜೊತೆಗೇ ಸೇನಾಪಡೆಯಲ್ಲಿ ಪುರುಷ ಮಹಿಳೆ ಅನುಪಾತವೂ ಸಮತೋಲನದಲ್ಲಿರುತ್ತದೆ. ಅಂದರೆ ಮಾತ್ರ ಲಿಂಗತ್ವ- ವರ್ಗ ತಾರತಮ್ಯಗಳಿಲ್ಲದ ಬಲಿಷ್ಠ ರಾಷ್ಟ್ರ ಕಟ್ಟಲು ಸಾಧ್ಯ. ನಕ್ಸಲ್‌ವಾದದ ಮೂಲ ತತ್ವವೂ ಇದೇ ಅಲ್ಲವೇ!

ಐಐಪಿಎಂ
'ಥಿಂಕ್ ಟ್ಯಾಂಕ್'

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .