|

ಮಾಲೀಕರ ಕರ್ತವ್ಯ
ಸಿಲಿಕಾನ್ ಸಿಟಿ ಬೆಂಗಳೂರಿನ ಮಹಿಳೆಯರ ಕುರಿತಾದ
'ಮಹಿಳಾ ಸುರಕ್ಷತೆ
ಮರೀಚಿಕೆ'
(ಎನ್.ಕೆ.
ಸುಪ್ರಭಾ,
ಚಿತ್ರಾ ಕರ್ಕೇರಾ)
ಮುಖಪುಟ ಲೇಖನ ಸಕಾಲಿಕ.
ಮಹಿಳೆಯರು ಉದ್ಯೋಗ ನಡೆಸಲು ಭದ್ರತೆಯಿಂದ ಕೂಡಿದ ಸೂಕ್ತ
ವಾತಾವರಣ ಇನ್ನೂ ನಿರ್ಮಾಣವಾಗಿಲ್ಲ ಎಂಬುದನ್ನು ಲೇಖನ ಮತ್ತೊಮ್ಮೆ ಸಾಬೀತು ಮಾಡಿದೆ.
ಬೆಂಗಳೂರು ನಗರದ ಪೊಲೀಸ್ ಆಯುಕ್ತರು ತಿಳಿಸಿದಂತೆ ರಾತ್ರಿ
ಪಾಳಿ ಮಾಡುವ ಮಹಿಳೆಯರಿಗೆ ಸಮರ್ಪಕ ಭದ್ರತೆ ಒದಗಿಸುವುದು ಸಂಬಂಧಪಟ್ಟ ಸಂಸ್ಥೆಯ
ಮಾಲೀಕರ ಕರ್ತವ್ಯ.
ಆದರೆ ಎಷ್ಟೋ ಬಾರಿ ಕಂಪನಿಗಳು ಮಹಿಳೆಯರಿಗೆ ಭದ್ರತೆ ನೀಡುವಲ್ಲಿ
ವಿಫಲವಾಗಿವೆ.
ಇದಕ್ಕೆ ಸರಿಯಾಗಿ ಮಹಿಳೆಯರ ನೋವು ಆಲಿಸಬೇಕಾದ ಆಯೋಗ,
ಸಮಿತಿಗಳೂ ಮಕಾಡೆ ಮಲಗಿವೆ.
ಒಂದೇ ಪರಿಹಾರ ಏನೆಂದರೆ,
ಮಹಿಳೆಯರಿಗೆ ರಾತ್ರಿ ಪಾಳಿ ಬದಲಾಗಿ ಬೆಳಗಿನ ಹೊತ್ತಲ್ಲೇ
ಕಾರ್ಯನಿರ್ವಹಿಸುವಂತೆ ಕ್ರಮ ಕೈಗೊಳ್ಳಲು ಮುಂದಾಗಬೇಕು ಅಷ್ಟೆ.
ಸುಕನ್ಯಾ ಮಾದೇಶ್
ಚಿತ್ರದುರ್ಗ
ಮಹಿಳೆ
ಎಚ್ಚೆತ್ತುಕೊಳ್ಳಬೇಕು
ಮಹಿಳೆಯರ ಸುರಕ್ಷತೆ ಕುರಿತಾಗಿ ಪತ್ರಿಕೆಯಲ್ಲಿ
ಪ್ರಕಟವಾದ ಮುಖಪುಟ ಲೇಖನಕ್ಕೆ ಈ ಪ್ರತಿಕ್ರಿಯೆ ನೀಡುತ್ತಿದ್ದೇನೆ .
ಪತ್ರಿಕೆ ಮಹಿಳೆಯರ ಬಗೆಗಿನ ಕಾಳಜಿ ತೋರ್ಪಡಿಸಿದ್ದನ್ನು
ಮೆಚ್ಚಲೇಬೇಕು.
ಮಹಿಳೆಯರ ಪ್ರಗತಿ ಹಾಗೂ ಅವರ ಸ್ಥಿತಿ-ಗತಿಗಳ
ಕುರಿತಾಗಿ ಪತ್ರಿಕೆಯಲ್ಲಿ ಪ್ರಕಟವಾಗುತ್ತಿರುವ ಲೇಖನಗಳನ್ನು ನಾನು ಸದಾ
ಓದುತ್ತಿರುತ್ತೇನೆ.
ಆದರೆ ಒಂದು ವಿಷಯವನ್ನು ನಾನಿಲ್ಲಿ ಸ್ಪಷ್ಟಪಡಿಸಬಯಸುತ್ತೇನೆ.
ಇಂದು ಮಹಿಳೆಯರ ಮೇಲಾಗುತ್ತಿರುವ ಅತ್ಯಾಚಾರ,
ದೌರ್ಜನ್ಯ ಅಥವಾ ಲೈಂಗಿಕ ಕಿರುಕುಳ ಏನೇ ಇರಲಿ,
ಪರೋಕ್ಷವಾಗಿ ಹೆಣ್ಣುಮಕ್ಕಳೂ ಇದಕ್ಕೆ
ಕಾರಣರಾಗುತ್ತಿದ್ದಾರೆ.
ರಾತ್ರಿ ಪಾಳಿ ಮಾಡುವ ಹೆಣ್ಣು ಮಕ್ಕಳು ತಾವು ತೊಡುವ ಉಡುಪಿನ
ಬಗ್ಗೆಯೂ ಕೊಂಚ ಎಚ್ಚರ ವಹಿಸಿದರೆ ಅರ್ಧದಷ್ಟು ದೌರ್ಜನ್ಯ ಪ್ರಕರಣಗಳು
ತನ್ನಿಂತಾನಾಗಿಯೇ ಕಡಿಮೆಯಾಗಲಿವೆ ಎಂಬುದು ನನ್ನ ಅಭಿಪ್ರಾಯ.
ಈ ಮಾತು ಕಾಲೇಜು ವಿದ್ಯಾರ್ಥಿಗಳಿಗೂ ಅನ್ವಯವಾಗುತ್ತದೆ.
ಎಚ್.ಎನ್. ಜಯಪ್ರಕಾಶ್
ಮೈಸೂರು
ನಾಚಿಕೆಗೇಡು
ಮಹಿಳೆಯರ ಅಭಿವೃದ್ಧಿ ಬಗ್ಗೆ ಉದ್ದುದ್ದ
ಮಾತನಾಡುತ್ತಿದ್ದ ಮಹಿಳಾ ಆಯೋಗದ 'ಮುಖವಾಡ'ವನ್ನು
ಕಳಚಿದ್ದಕ್ಕೆ ಟಿಎಸ್‌ಐಗೆ ಅಭಿನಂದನೆಗಳು.
ಸಮಸ್ಯೆಗೆ ಪರಿಹಾರ ಬಯಸಿ ಮಹಿಳಾ ಆಯೋಗಕ್ಕೆ ಬರುವ
ಮಹಿಳೆಯರಿಗೆ ಆಯೋಗದ ಸಿಬ್ಬಂದಿ ಯಾವ ರೀತಿಯಲ್ಲಿ ಪ್ರತಿಕ್ರಿಯಿಸುತ್ತಾರೆ ಎಂಬುದನ್ನು
ಟಿಎಸ್‌ಐ ಪತ್ರಕರ್ತೆಯರು ತೋರಿಸಿಕೊಟ್ಟಿದ್ದಾರೆ.
ಆಯೋಗದ ಕಾರ್ಯದರ್ಶಿ ಪಾರ್ವತಿ ತಿಮ್ಮಯ್ಯ ಅವರ ವರ್ತನೆ
ನಿಜಕ್ಕೂ ಖಂಡನೀಯ.
ಒಂಮಹಿಳೆ ಹತ್ಯೆ ಕುರಿತಾದ ವರದಿಯೂ ಸಾಂದರ್ಭಿಕವಾಗಿತ್ತು.
ಕನಿಷ್ಠ ಅಂಕಿ-ಅಂಶಗಳನ್ನು
ಗಮನಿಸಿಯಾದರೂ ಪೊಲೀಸ್ ಇಲಾಖೆ ಎಚ್ಚೆತ್ತುಕೊಳ್ಳಬೇಕಿದೆ.
ಬೇರೆ ರಾಜ್ಯದಿಂದ ಬಂದ ಮಹಿಳೆಯರಿಗೆ ನಮ್ಮ ರಾಜ್ಯದಲ್ಲಿ
ರಕ್ಷಣೆ ನೀಡಲಾಗುತ್ತಿಲ್ಲ.
ಕನ್ನಡ ನಾಡಿಗೆ ಈ ದುಸ್ಥಿತಿ ಬರಬಾರದಿತ್ತು.
ವಿಮಲಾ ಶೇಖರ್
ಶಿಕಾರಿಪುರ
ಸಕಾಲಿಕ ಸಂದರ್ಶನ
' ಮಹಿಳಾ ಸಂರಕ್ಷಣೆ
ಮರೀಚಿಕೆ'
ಮುಖಪುಟ ಹೊತ್ತು ಬಂದ ಟಿಎಸ್‌ಐ ಮನಸೆಳೆಯಿತು.
ಸಕಾಲಿಕ ಸಂದರ್ಶನಗಳಿಗೆ ಧನ್ಯವಾದ.
'ತಾರೆ ಜಮೀನ್
ಪರ್' ಚಿತ್ರ
ನೋಡುತ್ತಿರುವಾಗಲೇ ನಾನು ಇಂಥ ಅದ್ಭುತ ಕಥೆ ಒಡಮೂಡಿದ ಪರಿಯ ಬಗ್ಗೆ ಚಕಿತನಾಗಿದ್ದೆ.
ಅಮೋಲ್ ಗುಪ್ತೆ ಸಂದರ್ಶನವನ್ನು ಪ್ರಕಟಿಸಿ ನನ್ನ
ಪ್ರಶ್ನೆಗಳಿಗೆಲ್ಲಾ ಉತ್ತರ ನೀಡುತ್ತಾ ಹೋಗಿದ್ದೀರಿ.
ಹೌದು,
ಮಕ್ಕಳೊಂದಿಗೆ ಆಪ್ತ ಒಡನಾಟ ಇದ್ದರೆ ಮಾತ್ರ ಇಂಥ ಒಂದು
ಅಮೋಘ ಕೃತಿ ತೆರೆಕಾಣಲು ಸಾಧ್ಯ.
ಪ್ರಯತ್ನಕ್ಕೆ ತಕ್ಕ ಫಲ ಎಂಬಂತೆ ಈ ಚಿತ್ರ ಗುಪ್ತೆ ಅವರಿಗೆ
ಸಂತೃಪ್ತಿ ಮಾತ್ರವಲ್ಲ,
ಪ್ರೇಕ್ಷಕರಿಗೂ ಖುಷಿ ನೀಡಿದೆ ಎಂಬುದನ್ನು ಮರೆಯುವಂತಿಲ್ಲ.
ಇಂತಹ ಚಿತ್ರವೊಂದರ ಅಗತ್ಯ ಭಾರತೀಯ ಚಿತ್ರರಂಗಕ್ಕಿತ್ತು.
ಸಂದರ್ಶನ ಪ್ರಕಟಿಸಿದ ಟಿಎಸ್‌ಐಗೆ ಅಭಿನಂದನೆಗಳು.
ವಿದ್ಯಾ ಕುಲಕರ್ಣಿ
ಹುಬ್ಬಳ್ಳಿ
ನಿರ್ಲಕ್ಷ್ಯಕ್ಕೆ ಸಾಕ್ಷಿ
ಅರಿಂದಮ್ ಚೌಧುರಿ ಅವರ
'ಪ್ರಪಾತಕ್ಕೆ
ಬಿದ್ದವರ ಆಶಾಕಿರಣ ಎಚ್‌ಐವಿ ಮಸೂದೆ ಅಂಗೀಕಾರ'
ಸಂಪಾದಕೀಯ ಏಡ್ಸ್ ಪೀಡಿತರ ಮೇಲೆ ಸರ್ಕಾರ ತಾಳಿರುವ ನಿರ್ಲಕ್ಷ್ಯ ಧೋರಣೆಗೆ
ಪ್ರತ್ಯಕ್ಷ ಸಾಕ್ಷಿ.
ಏಡ್ಸ್ ಪೀಡಿತರಾಗಿ ಜೀವನದಲ್ಲಿ ಆಸಕ್ತಿಯನ್ನೇ ಕಳೆದುಕೊಂಡ
ಜನರಲ್ಲಿ ಆತ್ಮವಿಶ್ವಾಸ ತುಂಬಬೇಕಾದ ಮಹತ್ತರ ಜವಾಬ್ದಾರಿ ಹೊತ್ತ ಸರ್ಕಾರದ
ಕಾರ್ಯವೈಖರಿ ನಿಜಕ್ಕೂ ಅಚ್ಚರಿ ಮೂಡಿಸುತ್ತದೆ.
ಎಚ್‌ಐವಿ ಪೀಡಿತರನ್ನು ಹಾಗೂ ಅವರ ಮಕ್ಕಳನ್ನು ನಮ್ಮ
ಸಮಾಜ ಈಗಲೂ ಕೀಳು ಮನೋಭಾವದಿಂದ ಕಾಣುತ್ತಿರುವುದು ದುರಂತ.
ಈ ಮಧ್ಯೆ ಸರ್ಕಾರವೂ ರೋಗಿಗಳತ್ತ ಕಾಳಜಿ ತೋರದೆ,
ಅವರ ಬದುಕುವ ಹಕ್ಕನ್ನೂ ಕಿತ್ತುಕೊಳ್ಳುತ್ತಿದೆ ಎಂದೇ
ಹೇಳಬಹುದು.
ಸಂಸತ್‌ನಲ್ಲಿ ಎಚ್‌ಐವಿ ಮಸೂದೆ ಮಂಡಿಸಲು ಸರ್ಕಾರವನ್ನು ಅಂಗಲಾಚಬೇಕಾದ ಅನಿವಾರ್ಯ
ಸ್ಥಿತಿ ಒದಗಿ ಬಂದಿರುವುದು ವಿಪರ್ಯಾಸವೇ ಸರಿ.
ನಿಜ ಹೇಳಬೇಕೆಂದರೆ ಇಂತಹ ವಿಚಿತ್ರಗಳು ಭಾರತದಲ್ಲಿ ಹಾಗೂ
ನಮ್ಮ ಆಡಳಿತ ವ್ಯವಸ್ಥೆಯಲ್ಲಿ ಮಾತ್ರ ನಡೆಯಲು ಸಾಧ್ಯ!
ಮಹಮ್ಮದ್ ಶರೀಫ್
ಬೆಂಗಳೂರು
ಆದರ್ಶಕ್ಕೆ ಧಕ್ಕೆ
ಕ್ರೀಡೆ ಒಂದು ಉದ್ಯಮವಾಗಿ ಪರಿವರ್ತಿತವಾಗಿದೆ
ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಬೇಕೆ ?
ಹರಾಜು ಕೂಗುವುದರ ಮೂಲಕ ಕ್ರಿಕೆಟ್ ಆಟಗಾರರನ್ನು
ಕೊಂಡುಕೊಳ್ಳುವುದು ಕ್ರೀಡೆಗೇ ಅವಮಾನ ಮಾಡಿದಂತಿದೆ.
ಕ್ರಿಕೆಟ್ ಆಗಲಿ ಅಥವಾ ಇನ್ಯಾವುದೇ ಕ್ರೀಡೆಯಾಗಲಿ ಅದಕ್ಕೆ
ಅದರದ್ದೇ ಆದ ಇತಿಹಾಸ ಮತ್ತು ಮಹತ್ವವಿದೆ.
ಅದರೆ ಈ ಸರಕು ಮಾರಾಟದಂತೆ ನಡೆದ
'ಪ್ರತಿಭೆ'ಗಳ
ಮಾರಾಟ 'ಕಾರ್ಪೊರೇಟ್
ತೆಕ್ಕೆಗೆ ಬಿದ್ದ ಕ್ರೀಡೆ'
(ಅಕ್ರಂ ಹಕ್)
ಲೇಖನದಲ್ಲಿ ಸೂಚಿಸಿದಂತೆ ಕ್ರೀಡೆಯ ಆದರ್ಶಕ್ಕೇ ಧಕ್ಕೆ
ತಂದಿದೆ.
ಭಾರತೀಯ ಕ್ರೀಡಾಪ್ರೇಮಿಗಳು ಕ್ರಿಕೆಟ್‌ಗೆ ಮಹತ್ವ ನೀಡುವುದು ಕಡಿಮೆಯಾಗುವವರೆಗೆ
ಇಂಥ ಆಟಾಟೋಪಗಳು ಮುಂದುವರಿಯುತ್ತಲೇ ಇರುತ್ತವೆ.
ಎನ್.ವಿ. ಸಿದ್ಧೇಶ್
ವಿರಾಜಪೇಟೆ
ರಕ್ಷಣಾ ವ್ಯವಸ್ಥೆ ಬಲಗೊಳ್ಳಲಿ
ಮಾದಕ ದ್ರವ್ಯಕ್ಕೆ ಬಲಿಯಾಗುತ್ತಿರುವವರ ಸಂಖ್ಯೆ ದಿನೇ
ದಿನೇ ಹೆಚ್ಚುತ್ತಿದೆ .
ಅದರಲ್ಲೂ ಯುವಕರು ಈ ಚಟದ ದಾಸರಾಗುತ್ತಿರುವುದು ವಿಪರ್ಯಾಸ.
ಬಿಹಾರದಲ್ಲಿ ಕರಾಳಹಸ್ತ ಚಾಚಿರುವ ಮಾದಕ ದ್ರವ್ಯ
ಮಾಫಿಯಾದ ಕುರಿತು ರಾಜನ್ ಪ್ರಕಾಶ್ 'ಮಾರಣಾಂತಿಕ
ಮೈತ್ರಿಗೆ ಮುಕ್ತಿ ಎಂತು?'
ಎಂದು ಪ್ರಶ್ನಿಸಿರಬಹುದು.
ಆದರೆ ಇದು ಕೇವಲ ಒಂದು ಬಿಹಾರದ ಕಥೆಯಲ್ಲ.
ದೇಶದ ಅಂಗುಲ ಅಂಗುಲದಲ್ಲೂ ಮಾದಕ ದ್ರವ್ಯ ವ್ಯಸನ
ಹಾಸುಹೊಕ್ಕಿದೆ.
ಕೇವಲ ಪುರುಷರಷ್ಟೇ ಅಲ್ಲ.
ಮಹಿಳೆಯರೂ ಈ ವಿಷವರ್ತುಲದಲ್ಲಿ ಸಿಕ್ಕಿರುವುದು ಶೋಚನೀಯ.
ಪ್ರತೀ ರಾಜ್ಯದ ಮುಖ್ಯ ನಗರಗಳಲ್ಲಿ ಮಾದಕ ದ್ರವ್ಯ
ಸರಬರಾಜು ನಿರಾತಂಕವಾಗಿ ನಡೆಯುತ್ತಿದೆ.
ನಗರ ಪ್ರದೇಶಗಳಲ್ಲಿ ಮಾತ್ರವಿದ್ದ ಈ ವ್ಯಾಧಿ ಈಗ
ಹಳ್ಳಿಗಳಿಗೂ ವ್ಯಾಪಿಸಿದೆ ಎಂಬ ವಿಚಾರ ಮತ್ತಷ್ಟು ಆತಂಕ ಹುಟ್ಟಿಸಿದೆ.
ಒಂದೆಡೆ ಕಾಲಬುಡದಲ್ಲೇ ಭಯೋತ್ಪಾದನಾ ಕೃತ್ಯಗಳು
ಹೆಚ್ಚುತ್ತಿವೆ.
ಅದು ಸಾಲದೆಂಬಂತೆ ಮಾದಕ ದ್ರವ್ಯ ವ್ಯಸನವೆಂಬ ಭೂತದ ಅಟ್ಟಹಾಸ.
ಇವುಗಳ ನಿರ್ಮೂಲನೆ ಆರಂಭಿಕ ಹಂತದಲ್ಲೇ ಆದಲ್ಲಿ ಒಳ್ಳೆಯದು.
ಈ ನಿಟ್ಟಿನಲ್ಲಿ ರಕ್ಷಣಾ ವ್ಯವಸ್ಥೆ ಸದೃಢಗೊಳ್ಳಲಿ.
ವಿಕಾಸ್ ಕಾಮತ್
ಉಡುಪಿ
ಬದಲಾವಣೆಯ ನಿರೀಕ್ಷೆ
' ದ ಸಂಡೆ ಇಂಡಿಯನ್'
ಪತ್ರಿಕೆ ಉತ್ತಮವಾಗಿ ಮೂಡಿ ಬರುತ್ತಿದೆ ಎಂದರೆ ಖಂಡಿತ ಅತಿಶಯೋಕ್ತಿಯಾಗದು.
ಅಂತರ್ ರಾಷ್ಟ್ರೀಯ ಮತ್ತು ರಾಷ್ಟ್ರೀಯ ವಿಚಾರಗಳನ್ನು
ನಿಯತಕಾಲಿಕ ಪ್ರಕಟಿಸುತ್ತಿರುವುದು ಶ್ಲಾಘನೀಯ.
ಇದರ ಜೊತೆಗೆ ಕರ್ನಾಟಕಕ್ಕೆ ಸಂಬಂಧಿಸಿದ ಇನ್ನಷ್ಟು
ಲೇಖನಗಳಿಗೆ ಹೆಚ್ಚು ಒತ್ತು ನೀಡಿದರೆ ಪತ್ರಿಕೆಗೆ ಮತ್ತಷ್ಟು ಲವಲವಿಕೆ
ನೀಡಿದಂತಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ.
ಕನ್ನಡ ನಾಡಿನ ಇತಿಹಾಸ,
ರಾಜಕೀಯ,
ಕಲೆ,
ಸಂಸ್ಕೃತಿ,
ಸಾಹಿತ್ಯ ಇವೆಲ್ಲವುಗಳಿಗೆ ಪ್ರಾಶಸ್ತ್ಯ ನೀಡಿದರೆ ಇನ್ನೂ ಚೆನ್ನ.
ನನ್ನದು,
ನಮ್ಮೂರಿನದು,
ನನ್ನ ನಾಡಿನದು ಎಂದಾಗ ಓದುಗ ಹೆಚ್ಚು ಉತ್ಸುಕನಾಗಿ
ತೊಡಗಿಕೊಳ್ಳುತ್ತಾನೆ.
ಬರೀ ಅನ್ನ ಅಥವಾ ಸಾರು ಎಂದರೆ ಊಟ ರುಚಿಸುವುದಿಲ್ಲ.
ಹಾಗೆಯೇ ಕೇವಲ ಸಮಸ್ಯೆಗಳ ಬೆನ್ನು ಹತ್ತಿದರೆ ಹೇಗೆ?
ಗಂಭೀರ ಲೇಖನಗಳ ಜೊತೆಜೊತೆಗೆ ಒಂದಷ್ಟು ಸ್ವಾದ ನೀಡಲು
ಕವಿತೆ,
ಚುಟುಕ,
ವ್ಯಂಗ್ಯಚಿತ್ರ,
ನಗೆ ಬರಹ,
ನಾಣ್ಣುಡಿ,
ಮಕ್ಕಳ ಬರಹ ಇತ್ಯಾದಿಗಳಿಗೂ ಅವಕಾಶ ನೀಡಿದರೆ ಉತ್ತಮ.
'ದ ಸಂಡೆ
ಇಂಡಿಯನ್'ಗೆ
ಶುಭವಾಗಲಿ ಎಂದು ಹಾರೈಸುತ್ತಾ ಬದಲಾವಣೆಯ ನಿರೀಕ್ಷೆಗಳೊಂದಿಗೆ ಕಾಯುತ್ತಿರುವೆ.
ವಿ. ಹರಿನಾಥಬಾಬು
ಬಳ್ಳಾರಿ
| ಬಹುಮಾನಿತ ಪತ್ರಗಳು |
ಇದು ಪರಿಹಾರವೇ?
ಆರು ಸಾವಿರ ಕೋಸಾಲ ಮನ್ನಾ ಮಾಡಿರುವುದು ಹೆಚ್ಚುತ್ತಿರುವ ರೈತರ ಆತ್ಮಹತ್ಯೆಗೆ ಪರಿಹಾರವೇನೂ ಅಲ್ಲ. ಬಜೆಟ್ ಮತ್ತು ಬುಂದೇಲ್‌ಖಂಡ್ ವರದಿ ಪ್ರಕಟಿಸಿದ ಟಿಎಸ್‌ಐಗೆ ಕೃತಜ್ಞತೆಗಳು. ಉಳಿದ ಸುದ್ದಿ ಮಾಧ್ಯಮಗಳು ಚಿದಂಬರಂ
ಬಜೆಟ್ ಶ್ರೀಸಾಮಾನ್ಯನ ಪರವಾಗಿದೆ ಎಂದು ಪ್ರಚಾರ ನೀಡುವುದರಲ್ಲಿ ವ್ಯಸ್ತವಾಗಿದ್ದರೆ ಟಿಎಸ್‌ಐ ಹೊಸ ಒಳನೋಟವಿರುವ ಲೇಖನ ಪ್ರಕಟಿಸಿದೆ. ಬುಂದೇಲ್‌ಖಂಡ್‌ನ ರೈತರ ಜಡವಾಗಿರುವ ಬದುಕಿನ ಒಳಹೊಕ್ಕು ನೀಡಿರುವ ಲೇಖನ ಅರ್ಥಪೂರ್ಣ. ಸಮಾಜದ ಮೇಲೆ ಪ್ರಭಾವ ಬೀರುವ ಇಂತಹ ಲೇಖನ ಪ್ರಕಟಿಸುವುದು ಪ್ರತಿ ಮಾಧ್ಯಮದ ಕೆಲಸವಾಗಬೇಕು. ನಮ್ಮ ದೇಶದ ಆರ್ಥಿಕ ಬೆನ್ನೆಲುಬಾಗಿರುವವರ ನೈಜ ಸ್ಥಿತಿ ಬಿಂಬಿಸಲು ಎಸ್‌ಬಿಐನಿಂದ ತೊಡಗಿ ಸಾಧ್ಯವಿರುವ ಎಲ್ಲಾ ಅಪರಾಧಿಗಳನ್ನೂ ಟಿಎಸ್‌ಐ ಬಯಲಿಗೆಳೆಯಲು ಸಮರ್ಥವಾಗಿದೆ. ಒಂದು ವೇಳೆ ಸರ್ಕಾರಕ್ಕೆ ರೈತರ ಸ್ಥಿತಿ ಸುಧಾರಿಸಬೇಕು ಎಂದಿದ್ದರೆ ಹಳ್ಳಿಗಳ ಮೂಲಸೌಕರ್ಯ ಅಭಿವೃದ್ಧಿ ಮತ್ತು ಆದಾಯ ವೃದ್ಧಿಯತ್ತ ಗಮನ ಕೊಡುತ್ತಿದ್ದರು. ಸಾಲ ಮನ್ನಾ ಎಂಬ ಜನಪ್ರಿಯ ಅಸ್ತ್ರ ಬಳಸುತ್ತಿರಲಿಲ್ಲ.
ಪುರುಷೋತ್ತಮ್ ದಾಸ್
ಇ-ಮೇಲ್ ಮೂಲಕ
ಅಂತರ ದೂರಾಗಲಿ
ಉತ್ಪಾದಕ ಮತ್ತು ಸೇವಾ ವಲಯಗಳು ವರ್ಷದಿಂದ ವರ್ಷಕ್ಕೆ ಬೆಳೆಯುತ್ತಾ ಭಾರತೀಯ ಆರ್ಥಿಕತೆ ಅಭಿವೃದ್ಧಿಯಾಗುತ್ತಿದೆ ಎನ್ನುವುದೇನೋ ನಿಜ. (ಅದೇ ಕೃಷಿ ವಲಯ ಕಿರಿದಾಗುತ್ತಾ ಹೋಗುತ್ತಿದೆ) ಆದರೆ ಈ ಅಭಿವೃದ್ಧಿಯ ಲಾಭ ಒಂದಷ್ಟು ವರ್ಗವನ್ನು ಮಾತ್ರ ತಲುಪುತ್ತಿದೆಯೇ ಹೊರತು ಕೃಷಿ ಚಟುವಟಿಕೆಗಳಲ್ಲಿ ತೊಡಗಿರುವ ಶ್ರೀಸಾಮಾನ್ಯನನ್ನು ತಲುಪುತ್ತಿಲ್ಲ. 'ಮಾರ್ಕ್ಸ್ ಮನ ತುಂಬಿ ನಗಲಿ!' (ಪ್ರಸೂನ್ ಮಜುಂದಾರ್) ಅಂಕಣ ಇದನ್ನು ಸರಳವಾಗಿ ಮತ್ತು ಅಷ್ಟೇ ತಾರ್ಕಿಕವಾಗಿ ವಿಷದೀಕರಿಸಿತು.ಚಿದಂಬರಂ ಈ ಬಾರಿ ಮಂಡಿಸಿರುವ ಪ್ರಸಿದ್ಧ ಬಜೆಟ್‌ನಲ್ಲಿ ಸುಂಕ ವಿನಾಯಿತಿ ಮತ್ತು ಸಮಾಜದ ಅಭಿವೃದ್ಧಿಗಾಗಿ ಹಣ ವೆಚ್ಚ ಮಾಡಿರಬಹುದು. ಆದರೆ ರೈತರ ಹಿತ ಕಾಪಾಡುವಲ್ಲಿ ಸೋತಿದೆ.
ತರುಣ್ ಲಲಿತ್
ಚಂಡೀಗಢ್
ಇದು ಗಾಲಿ ಮೇಲಿನ ದುರವಸ್ಥೆ
'ಗಾಲಿಯ ಮೇಲಿನ ಅರಮನೆ' ಕುರಿತು ಟಿಎಸ್‌ಐ ಪ್ರಕಟಿಸಿದ ಲೇಖನವನ್ನು ಓದಿ ನನಗೆ ಅಕ್ಷರಶಃ ದಂಗು ಬಡಿದಂತಾಗಿತ್ತು. ಭಾರತದ ವೈಭವೋಪೇತ ರೈಲು ಎಂಬ ಹೆಗ್ಗಳಿಕೆ ಪಡೆದಿರುವ ಇದರ ನಿಜವಾದ ಪರಿಸ್ಥಿತಿ ಅರಿಯಲು ನನ್ನ ಕುತೂಹಲ ಪ್ರವೃತ್ತಿ ಪ್ರೇರಣೆ ನೀಡಿತು. ಹೀಗಾಗಿ ಅಂತರ್ಜಾಲಗಳಲ್ಲಿ ಈ ಕುರಿತು ಹೆಚ್ಚಿನ ಹುಡುಕಾಟ ನಡೆಸಿದೆ. 2010ರ ತನಕ ಸಂಪೂರ್ಣ ಬುಕ್ ಆಗಿ ಹೋಗಿದೆ... ಇತ್ಯಾದಿ ಇತ್ಯಾದಿ... ಎಂದು ರೈಲಿನ ಸಾಧನೆಗಳ ಪಟ್ಟಿಯೇ ಮೊದಲಿಗೆ ದೊರಕಿತು. ಆದರೆ ಟಿಎಸ್‌ಐ ಓದುಗನಾಗಿ (ಹಾಗೂ ಆಕಸ್ಮಿಕವಾಗಿ ಜೋಧ್‌ಪುರ ನಿವಾಸಿಯಾಗಿ) ನಾನು ಇನ್ನಷ್ಟು ಹೆಚ್ಚಿನ ಮಾಹಿತಿ ಕಲೆ ಹಾಕುವ ಪ್ರಯತ್ನ ಮಾಡಿದೆ. ನನಗೆ ದೊರಕಿದ ಫಲಿತಾಂಶ ಅಷ್ಟೇ ಆಘಾತಕಾರಿಯಾಗಿತ್ತು. ಟಿಎಸ್‌ಐನಲ್ಲಿ ಏನು ಬರೆದಿತ್ತೋ ಅದು ಅಕ್ಷರಶಃ ಸತ್ಯವಾಗಿತ್ತು. ನಾನು ಮಾರುಕಟ್ಟೆ ಸಂಶೋಧಕನಂತೆ ಕೆಲವು ವಿದೇಶೀ ಪ್ರಯಾಣಿಕರ ಬಳಿ ಹೋಗಿ ಗಾಲಿ ಮೇಲಿನ ಅರಮನೆ ಕುರಿತು ಅವರ ಅಭಿಪ್ರಾಯ ತಿಳಿದುಕೊಂಡೆ. ಅವರು ಅಲ್ಲಿ ಟಿವಿ, ದೂರವಾಣಿ ಸೌಕರ್ಯ ಇಲ್ಲದಿರುವುದು ಮತ್ತು ಸಣ್ಣ ಹಾಸಿಗೆಗಳಿರುವುದನ್ನು ತಿಳಿಸಿದರು. (ಆದರೂ ಅವರು ಒಳಾಂಗಣ ವ್ಯವಸ್ಥೆಯನ್ನು ಹೊಗಳಿದರು) ಸಂಕ್ಷಿಪ್ತವಾಗಿ ಹೇಳಬೇಕೆಂದರೆ ಆತಿಥ್ಯ ವ್ಯವಸ್ಥೆಯಲ್ಲಿ ಲೋಪದೋಷಗಳಿದ್ದವು. ಬೇರೆ ಯಾವುದೇ ನಿಯತಕಾಲಿಕವಾಗಿದ್ದರೂ ಅಲ್ಲಿದ್ದ ಪರಿಸ್ಥಿತಿಗಿಂತ ವಿಭಿನ್ನ ಚಿತ್ರಣ ಕೊಡುತ್ತಿತ್ತೇನೋ?
ಪ್ರಮೀಳಾ ರಾಣಾವತ್
ಜೋಧ್‌ಪುರ
|
ಓದುಗರ ಜೀವನಾಡಿ
' ದ ಸಂಡೆ ಇಂಡಿಯನ್'
ಪತ್ರಿಕೆಯ ಹತ್ತಾರು ಸಂಚಿಕೆಗಳನ್ನು ಓದಿದ ನಂತರ ನಾನು ಈ ಪತ್ರ ಬರೆಯುತ್ತಿದ್ದೇನೆ.
ಪತ್ರಿಕೆಯಲ್ಲಿ ಮೂಡಿಬರುವ ಶೇ.
೭೫ರಷ್ಟು ಲೇಖನಗಳು ಉತ್ತಮ ಮಾಹಿತಿಗಳಿಂದ ಕೂಡಿದ್ದು
ಓದುಗರ ಮನಸೆಳೆಯುವಲ್ಲಿ ಯಶಸ್ವಿಯಾಗಿವೆ.
ಅರಿಂದಮ್ ಚೌಧುರಿ ಅವರ ಸಂಪಾದಕೀಯ,
ಶಶಿ ಸಂಪಳ್ಳಿ,
ಸತೀಶ್ ಚಪ್ಪರಿಕೆ,
ಪಥಿಕೃತ್ ಪಾಯ್ನೆ ಹಾಗೂ ಪ್ರಸೂನ್ ಮಜುಂದಾರ್ ಅವರ
ಲೇಖನಗಳನ್ನು ಪ್ರತಿ ವಾರ ತಪ್ಪದೆ ಓದುತ್ತಿರುತ್ತೇನೆ.
ಅಯಸ್ಕಾಂತದಂತೆ ಸೆಳದುಬಿಡುವಂತಹ ಶಕ್ತಿ ಅವರ ಲೇಖನಕ್ಕಿದೆ
ಎಂದು ಹೇಳಬಹುದು.
ಪ್ರಾದೇಶಿಕ ಪತ್ರಿಕೆಯಲ್ಲಿ ರಾಷ್ಟ್ರಮಟ್ಟದ ಲೇಖನಗಳಿಗೆ ಹೆಚ್ಚು
ಅವಕಾಶ ಕಲ್ಪಿಸಿರುವುದು,
ವೈವಿಧ್ಯಮಯವಾದ ಯೋಚನೆಗೆ ಹಚ್ಚುವ ಲೇಖನಗಳನ್ನು ನೀವು
ಪೂರೈಸುತ್ತಿರುವುದು ಓದುಗ ಹೆಚ್ಚು ಇಷ್ಟಪಡಲು ಮತ್ತೊಂದು ಕಾರಣ.
ಪತ್ರಿಕೆಯಲ್ಲಿ ಪ್ರಕಟವಾಗುವ ಒಂದೊಂದು ಕಥೆ,
ಲೇಖನಗಳು,
ಜೀವನದ ಅನುಭವಗಳೇ ಆಗಿದ್ದು ಪ್ರತಿಯೊಬ್ಬ ಓದುಗನ
'ಜೀವನಾಡಿ'ಯಾಗಿದೆ.
ಸಿದ್ಧು ವಗ್ಗನವರ
ಉಗರಗೋಳ
ನಂಬಲರ್ಹ !
ಅತ್ಯುತ್ತಮ ವಿನ್ಯಾಸ ,
ಮುದ್ರಣದೊಂದಿಗೆ ಮತ್ತು ಅಷ್ಟೇ ಕಡಿಮೆ ಬೆಲೆಯಲ್ಲಿ ಟಿಎಸ್‌ಐ
ಪತ್ರಿಕೆ ಕೈಗೆಟಕುತ್ತಿದೆ!
ನಿಜಕ್ಕೂ ಇದು ನಂಬಲರ್ಹ ವಿಚಾರ!
ದೇಶದಾದ್ಯಂತ
13 ಭಾಷೆಗಳಲ್ಲಿ ಪತ್ರಿಕೆ ಹೊರಬರುತ್ತಿದೆ.
ಟಿಎಸ್‌ಐನ ಜನಪ್ರಿಯತೆಗೆ ಇದೇ ಅಲ್ಲವೆ ಸಾಕ್ಷಿ?
ಅರಿಂದಮ್ ಚೌಧುರಿ ಅವರಿಗೆ ಇಲ್ಲಿ ಧನ್ಯವಾದ ಸಮರ್ಪಿಸದೆ
ಇರಲು ಸಾಧ್ಯವೇ ಇಲ್ಲ.
ಕಾಂಗ್ರೆಸ್ ಹಾಗೂ ಬಿಜೆಪಿ ಮೈತ್ರಿ ಕುರಿತ ಅವರ ತಾರ್ಕಿಕ
ಚಿಂತನೆಗೆ ಹ್ಯಾಟ್ಸ್ ಆಫ್ ಅನ್ನಲೇ ಬೇಕು.
ರೋಚಕ ಮಾವೋವಾದಿ ಲೋಕ ಮತ್ತು ಪಾಕಿಸ್ತಾನದ ಕುರಿತಾಗಿ
ಟಿಎಸ್‌ಐನಲ್ಲಿ ಪ್ರಕಟವಾಗುತ್ತಿರುವ ಲೇಖನಗಳು ಚಿಂತನೆಗೆ ಹಚ್ಚಿವೆ.
ಸಂಪೂರ್ಣ ಭಾರತೀಯರನ್ನೇ ಆಕರ್ಷಿಸಿರುವ ಟಿಎಸ್‌ಐ ರಜಾದಿನ
ಭಾನುವಾರವನ್ನು ಓದಿನಲ್ಲಿ ಕಳೆಯುವಂತೆ ಮಾಡಿದೆ.
ಸಿ.ಎಸ್. ನಾಗರಾಜನ್
ಹೊಸೂರು
ನಮಗಿದು ಹೆಮ್ಮೆ
' ದ ಸಂಡೆ ಇಂಡಿಯನ್'
13
ಭಾಷೆಗಳಲ್ಲಿ ಬರುತ್ತಿರುವುದು ಪತ್ರಿಕೆಗೆ ಹೆಗ್ಗಳಿಕೆಯಾದರೆ,
ಅಂತರ್ಜಾಲದಲ್ಲಿ ಸಮಗ್ರ ಕನ್ನಡ ವಾರಪತ್ರಿಕೆ ಓದಲು
ದೊರಕುತ್ತಿರುವುದು ಕನ್ನಡಿಗರಾದ ನಮಗೆ ಹೆಮ್ಮೆಯ ವಿಚಾರ.
ಇಂತಹ ಹೊಸ ಪ್ರಯತ್ನಕ್ಕೆ ಕಾರಣವಾದ ಸಂಪಾದಕೀಯ ತಂಡಕ್ಕೆ
ಶುಭ ಹಾರೈಸುತ್ತೇನೆ.
ಸುಕನ್ಯಾ ಎಂ.ಎಚ್.
ಇ-ಮೇಲ್ ಮೂಲಕ
ರಾತ್ರಿ ಪಾಳಿ ಬೇಡ
|
ಸತ್ಯ,ಪ್ರಾಮಾಣಿಕತೆ ಮತ್ತು ಸಂಪೂರ್ಣ ಸಮರ್ಪಣಾ ಮನೋಭಾವವಿರುವ ಪತ್ರಿಕೋದ್ಯಮ ಇನ್ನೂ ಜೀವಂತವಾಗಿದೆ ಎಂಬುದನ್ನು ತಿಳಿಸಿಕೊಟ್ಟಿದಕ್ಕೆ ತುಂಬಾ ಕೃತಜ್ಞತೆಗಳು. ಮಸಾಲೆ ಬೆರೆಸಿ ಜನರನ್ನು ಗೆಲ್ಲಬಯಸುವ ವ್ಯಾಪಾರೀ ಪ್ರವೃತ್ತಿಯ ಪತ್ರಿಕೋದ್ಯಮವೇ ಎಲ್ಲೆಡೆ ವಿಜೃಂಭಿಸುತ್ತಿರುವಾಗ, ಬದ್ಧತೆ ಮತ್ತು ಶ್ರಮವಹಿಸಿ ಪರಿಣಾಮಕಾರಿ ಸುದ್ದಿ ನೀಡಿರುವ ಸಂಜಯ್ ಬಾಸಕ್ ಮತ್ತು ರಂಜನ್ ಬಸು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ’ರೋಚಕ ಮಾವೋವಾದಿ ಲೋಕ’ ಮುಖಪುಟ ಲೇಖನ ಅತ್ಯುತ್ತಮ ಮಾತ್ರವಲ್ಲ ಮಾವೋವಾದಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದೆ. ನಕ್ಸಲರ ಬಗ್ಗೆ ಸಾಕಷ್ಟು ಕೇಳುತ್ತಿದ್ದೇವೆ. ದಾಳಿಯಲ್ಲಿ ಪೊಲೀಸರು ಮತ್ತು ನಕ್ಸಲರು ಸಾವಿಗೀಡಾಗಿರುವ ಸುದ್ದಿ ಹೊರತುಪಡಿಸಿದರೆ ಇನ್ಯಾವುದೂ ಸುದ್ದಿಯಾಗುವುದಿಲ್ಲ. ಟಿಎಸ್‌ಐ ಈ ಹೋರಾಟಗಾರರ ಮಾನವೀಯ ಮುಖಗಳನ್ನು ತೆರೆದಿಟ್ಟಿದೆ. ನಕ್ಸಲರ ಬಗ್ಗೆ ಸಂಪಾದಕೀಯ ಹಾಗೂ ಪುಸ್ತಕಗಳು ಹೊರಬರುತ್ತಿವೆ. ನಾನು ಉದಯೋನ್ಮುಖ ಪತ್ರಕರ್ತನಾಗಿ ಮಾಧ್ಯಮ ಇಂಥ ವಿಷಯಗಳ ಮೇಲೆ ಬೆಳಕು ಚೆಲ್ಲಬೇಕು ಎಂಬದನ್ನು ನಿರೀಕ್ಷಿಸುತ್ತೇನೆ. ಹಾಗಾದಾಗಲೇ ನಮ್ಮ ಸರ್ಕಾರ ನಕ್ಸಲ್ ಸಮಸ್ಯೆ ನಿವಾರಣೆಗೆ ಮುಂದಡಿಯಿಡುವುದು. ಹತ್ತು ದಿನಗಳ ಕಾಲ ಮಾವೋವಾದಿ ಪಡೆಯ ಜೊತೆಗಿರುವುದು ಅತಿ ಕಷ್ಟದ ಅನುಭವ. ಆದರೆ ಸಂಜಯ್ ಬಾಸಕ್ ಮತ್ತು ರಂಜನ್ ಬಸು ಅವರು ಆ ಸಾಧನೆ ಮಾಡಿರುವುದನ್ನು ಮೆಚ್ಚಲೇಬೇಕು.
ಬಿ. ರಾಮರಾವ
ಗುಲ್ಬರ್ಗಾ
|
|