ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ದೇಸಿ ದನಿ
 
 

ಕೇರಳ: ವೈಮನಸ್ಯ

ಶಿವರಾತ್ರಿಯಲ್ಲಿ ಮೃತ್ಯು ತಾಂಡವ!

ಸಿಪಿಐ(ಎಂ)- ಆರ್‌ಎಸ್‌ಎಸ್ ಘರ್ಷಣೆ: ಆತಂಕದಲ್ಲಿ ನಾಗರಿಕರು

ಅದು ಶಿವರಾತ್ರಿಯ ದಿನವಾಗಿದ್ದರಿಂದ ಎಲ್ಲರೂ ಹಬ್ಬದ ಗುಂಗಿನಲ್ಲೇ ಇದ್ದರು. ಆದರೆ ಅಲ್ಲಿ ಶಿವತಾಂಡವ ನೃತ್ಯ ನಡೆದಿರಲಿಲ್ಲ. ಬದಲಾಗಿ ಮೃತ್ಯು ತಾಂಡವವಾಡಿತ್ತು! ಇಬ್ಬರು ವ್ಯಕ್ತಿಗಳ ಕಗ್ಗೊಲೆಯಾಗಿತ್ತು! ಹೌದು, ಹಲವಾರು ವರ್ಷಗಳಿಂದ ಕೇರಳದ ಕಣ್ಣೂರಿನಲ್ಲಿ ಕೊಲೆಗಡುಕ ಕೃತ್ಯಗಳು ಸಾಮಾನ್ಯವಾಗಿದ್ದು ಅದು ಕಗ್ಗೊಲೆಗಳ ನಾಡಾಗಿ ಪರಿವರ್ತನೆಯಾಗಿದೆ. ಇದು ಸಿಪಿಐ(ಎಂ) ಹಾಗೂ ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕರ್ತರ ನಡುವೆ ನಡೆದ ಕಗ್ಗೊಲೆಗಳ ಸರಣಿಯ ಇತ್ತೀಚಿನ ಉದಾಹರಣೆ ಅಷ್ಟೆ. ಹತ್ಯೆಗೀಡಾದ 7 ಮಂದಿಯಲ್ಲಿ ಐವರು ಬಿಜೆಪಿಗೆ ಸೇರಿದ್ದರೆ, ಉಳಿದ ಇಬ್ಬರು ಸಿಪಿಐ(ಎಂ) ಕಾರ್ಯಕರ್ತರಾಗಿದ್ದರು. ಆದರೆ, ವಿಪರ್ಯಾಸವೆಂದರೆ ಘರ್ಷಣೆಯಲ್ಲಿ ತೀವ್ರ ಗಾಯಗೊಂಡು ಬದುಕುಳಿದ ಕಾರ್ಯಕರ್ತರು ಸ್ಥಿತಿ ತೀರಾ ಯಾತನಾದಾಯಕ. ಏಕೆಂದರೆ, ಕೈ- ಕಾಲು ಕಳೆದುಕೊಂಡಿರುವ ಅವರ ಬದುಕು ಅಕ್ಷರಶಃ ಊನವಾಗಿದೆ. ಈ ಪರಿಯ ಹಿಂಸಾಚಾರದಿಂದಾಗಿ ಕಣ್ಣೂರಿನ ಜನರ ಬದುಕು ಸಂಪೂರ್ಣ ಸ್ಥಗಿತಗೊಂಡಂತಾಗಿದೆ. ದುಡಿದು ತರುತ್ತಿದ್ದ ಗಂಡಸರು ಬಂಧನದ ಭಯದಿಂದ ಮನೆ ತೊರೆದು ತಲೆಮರೆಸಿಕೊಂಡಿದ್ದಾರೆ. ನಿಜಹೇಳಬೇಕೆಂದರೆ ಇದು ಖಂಡಿತ ಇವು ಗುಂಪು ಗಲಭೆಗಳಲ್ಲ, ಬದಲಾಗಿ ಅತ್ಯಂತ ವೃತ್ತಿಪರ ಗುಂಪುಗಳು ನಡೆಸಿರುವ ಯೋಜಿತ ಹತ್ಯೆಗಳು. ಕೊಲೆಯ ವೈಖರಿಯೇ ಅದನ್ನು ಸಾಬೀತುಪಡಿಸುತ್ತದೆ. ಆ ದಿನ ಹತ್ಯೆಗೀಡಾದ ಕಾರ್ಯಕರ್ತರ ತಲೆ ಕಡಿದು ಹಾಕಲಾಗಿದ್ದು, ರುಂಡ-ಮುಂಡಗಳನ್ನು ದೂರ- ದೂರಕ್ಕೆ ಎಸೆಯಲಾಗಿತ್ತು! ಕಣ್ಣೂರು ಸಿಪಿಎಂನ ಭದ್ರಕೋಟೆ. ಗೃಹ ಸಚಿವ ಕೊಡಿಯೇರಿ ಬಾಲಕೃಷ್ಣನ್ ಹಾಗೂ ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿನರಾಯಿ ವಿಜಯನ್ ಅವರ ತವರು ಜಿಲ್ಲೆಯಿದು. ಬಿಜೆಪಿಯ ರಾಷ್ಟ್ರೀಯ ಉಪಾಧ್ಯಕ್ಷ ವೆಂಕಯ್ಯ ನಾಯ್ಡು ಅವರು ತ್ರಿಸೂರ್‌ನಲ್ಲಿ ನಡೆದ ರ್‍ಯಾಲಿಯೊಂದರಲ್ಲಿ, "ಸಿಪಿಐ(ಎಂ)ನ ಕಾರ್ಯಕರ್ತರು ಆರ್‌ಎಸ್‌ಎಸ್-ಬಿಜೆಪಿ ಕಾರ್ಯಕರ್ತರನ್ನು ಕೊಲ್ಲುವುದನ್ನು ಮುಂದುವರಿಸಿದರೆ, ಬಿಜೆಪಿ ಬಲಶಾಲಿಯಾಗಿರುವ ರಾಜ್ಯಗಳಲ್ಲಿ ಸಿಪಿಎಂ ಕಾರ್ಯಕರ್ತರ ಮೇಲೆ ಸೇಡು ತೀರಿಸಿಕೊಳ್ಳದೆ ಬಿಡುವುದಿಲ್ಲ" ಎಂದು ಎಚ್ಚರಿಕೆ ನೀಡಿದ್ದರು. ಹಾಗೆ ಅವರು ಹೇಳಿದ ಕೆಲವೇ ತಾಸುಗಳಲ್ಲೇ ಬಿಜೆಪಿ-ಆರ್‌ಎಸ್‌ಎಸ್ ಸದಸ್ಯರು ನವದೆಹಲಿ ಮತ್ತು ಬೆಂಗಳೂರಿನಲ್ಲಿ ಸಿಪಿಎಂ ಪದಾಧಿಕಾರಿಗಳ ಮನೆ ಮತ್ತು ಕಚೇರಿಗಳ ಮೇಲೆ ದಾಳಿ ನಡೆಸಿದ್ದಾರೆ. ದೆಹಲಿಯ ಸಿಪಿಎಂ ಕೇಂದ್ರ ಕಚೇರಿ ಎಕೆಜಿ ಭವನ್‌ನಲ್ಲಿ ಕೇಂದ್ರೀಯ ಸಮಿತಿಯ ಸಭೆ ನಡೆಯುತ್ತಿದ್ದ ಸಂದರ್ಭದಲ್ಲೇ ಕಚೇರಿ ಎದುರು ರ್‍ಯಾಲಿ ನಡೆಸಿದ ಸಂಘ-ಪರಿವಾರದವರು, ಮರುದಿನವೂ ದಾಳಿಗೆ ಪ್ರಯತ್ನಿಸಿದ್ದರಿಂದ ಕೋಲಾಹಲದ ವಾತಾವರಣವೇ ನಿರ್ಮಾಣವಾಗಿತ್ತು.ಜೊತೆಗೆ ಸಿಪಿಎಂ ಕರ್ನಾಟಕ ರಾಜ್ಯದ ಕಾರ್ಯದರ್ಶಿ ವಿ.ಜಿ.ಕೆ ನಾಯರ್ ಅವರ ಬೆಂಗಳೂರು ನಿವಾಸದ ಮೇಲೆ ದಾಳಿ ನಡೆಸಿದ್ದು ವರದಿಯಾಗಿದೆ. ಕೇರಳ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರು ಎರಡೂ ಪಕ್ಷಗಳ ಕಾರ್ಯಕರ್ತರಲ್ಲಿ ಈ 'ಹುಚ್ಚಾಟ'ವನ್ನು ನಿಲ್ಲಿಸಬೇಕೆಂದು ಮನವಿ ಮಾಡಿದ್ದಾರೆ. ಗೃಹಸಚಿವರು ಎರಡೂ ಪಕ್ಷಗಳ ನಾಯಕರ ಜೊತೆ ಸಮಾಲೋಚನೆ ನಡೆಸಲು ಮುಂದಾಗಿದ್ದಾರೆ. ನ್ಯಾಯಮೂರ್ತಿ ವಿ.ಆರ್. ಕೃಷ್ಣ ಅಯ್ಯರ್ ಅವರು ಎರಡೂ ಕಡೆಯ ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಪರಿಸ್ಥಿತಿ ತಿಳಿಗೊಳಿಸುವ ನಿಟ್ಟಿನಲ್ಲಿ ಮಹತ್ವದ ಕಾರ್ಯ ನಿರ್ವಹಿಸಿದ್ದಾರೆ. ತಮ್ಮ ನಡುವಿನ ಭಿನ್ನಾಭಿಪ್ರಾಯ ಹಾಗೂ ವೈಮನಸ್ಯಗಳನ್ನು ಕೊಲೆ ಮತ್ತು ಹಿಂಸಾಕೃತ್ಯಗಳ ಮೂಲಕ ವ್ಯಕ್ತಪಡಿಸುವುದು ಪ್ರಜಾಪ್ರಭುತ್ವಕ್ಕೆ ಶೋಭೆ ತರುವಂತದ್ದಲ್ಲ.

ಟಿಎಸ್‌ಐ

ಟಿ. ಸತೀಶನ್

ಪಂಜಾಬ್: ಯೋಜನೆ

ರಾವಿ- ಬಿಯಾಸ್ ಜಲ ವಿವಾದ

ಕೋರ್ಟ್ ಕಟಕಟೆಯಲ್ಲಿ ಕೃಷಿ ರಾಜ್ಯಗಳ ಕಾಲಾಹರಣ 

ಹಲವು ಸುತ್ತುಗಳ ಮಾತುಕತೆ, ನಿರ್ಣಯ, ದಾವೆ ಹೂಡುವಿಕೆಗಳ ಬಳಿಕವೂ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳ ನಡುವಿನ ಹಳೆಯ ಜಲ ವಿವಾದ ಕೊನೆಗಾಣುವಂತೆ ಕಾಣುತ್ತಿಲ್ಲ. ಜುಲೈ 2004ರ 'ಪಂಜಾಬ್ ಟರ್ಮಿನೇಷನ್ ವಾಟರ್ ಅಗ್ರಿಮೆಂಟ್ ಆಕ್ಟ್'ನ ಸಾಂವೈಧಾನಿಕ ಕ್ರಮಬದ್ಧತೆಯನ್ನು ಪರಿಶೀಲಿಸುವಂತೆ ರಾಷ್ಟ್ರಪತಿಗಳು ಸೂಚಿಸಿದ ಮೇರೆಗೆ ಸುಪ್ರೀಂಕೋರ್ಟ್ ಮುಂದಿನ ವಾರದಿಂದ ಆ ಕುರಿತ ವಿಚಾರಣೆ ಕೈಗೆತ್ತಿಕೊಳ್ಳಲಿದೆ. ಆ ಮೂಲಕ ಎರಡು ಕೃಷಿ ಪ್ರಧಾನ ರಾಜ್ಯಗಳ ನಡುವೆ ರಾವಿ ಹಾಗೂ ಬಿಯಾಸ್ ನದಿ ನೀರು ಹಂಚಿಕೆಗೆ ಸಂಬಂಧಪಟ್ಟಂತೆ ಬೆಳೆದುಬರುತ್ತಿರುವ ವಿವಾದ ಮತ್ತೊಮ್ಮೆ ಚರ್ಚೆಯ ವಸ್ತುವಾಗಿದೆ. ಆದರೆ, 1955ರ ರಾವಿ, ಬಿಯಾಸ್ ಮತ್ತು ಸಟ್ಲೇಜ್ ನದಿಗಳ ನೀರು ಹಂಚಿಕೆ ಒಪ್ಪಂದದಂತೆ ಹರಿಯಾಣ ಮತ್ತು ಮರುಭೂಮಿ ರಾಜ್ಯ ರಾಜಸ್ತಾನಕ್ಕೆ ಸಲ್ಲಬೇಕಾದ ಪ್ರಮಾಣದಲ್ಲಿ ಒಂದು ಹನಿಯನ್ನೂ ತಾನು ಉಳಿಸಿಕೊಂಡಿಲ್ಲ ಎಂದು ಪಂಜಾಬ್ ಖಡಾಖಂಡಿತವಾಗಿ ಹೇಳಿದೆ. ಈ ಮೂರು ನದಿಗಳಿಂದ ಒಟ್ಟು 15 ಎಂಎಎಫ್ (ಹತ್ತು ಲಕ್ಷ ಎಕರೆ ಪ್ರದೇಶದಲ್ಲಿ ಒಂದು ಅಡಿ ನೀರು ನಿಲ್ಲಿಸಿದರೆ ಎಷ್ಟಾಗುತ್ತದೆಯೋ ಅಷ್ಟು ಪ್ರಮಾಣ)ನಷ್ಟು ನೀರು ಲಭ್ಯವಿದೆ. ನೀರು ಹಂಚಿಕೆ ವಿವಾದಕ್ಕೆ ಮುಕ್ತಿ ಹಾಡುವ ದೃಷ್ಟಿಯಿಂದ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಆಗಿನ ಸರ್ಕಾರ '1976ರ ಒಪ್ಪಂದ'ದ ಮೂಲಕ 7 ಎಂಎಎಫ್ ನೀರನ್ನು ರಾಜಸ್ತಾನಕ್ಕೆ ಮತ್ತು ತಲಾ 3.5 ಎಂಎಫ್ ನೀರನ್ನು ಕ್ರಮವಾಗಿ ಪಂಜಾಬ್ ಹಾಗೂ ಹರಿಯಾಣ ರಾಜ್ಯಗಳು ಹಂಚಿಕೊಳ್ಳಲು ಸೂಚಿಸಿತ್ತು. ಹಾಗೇ ಉಳಿದ ನೀರನ್ನು ರಾಜಧಾನಿ ದೆಹಲಿಯ ಕುಡಿಯುವ ನೀರು ಸರಬರಾಜಿಗೆ ಬಳಸಬೇಕು ಎಂದೂ ಆದೇಶಿಸಲಾಗಿತ್ತು. ಆದರೆ, ಪಂಜಾಬ್ ನದಿ ನೀರು ಹಂಚಿಕೆ ವಿಷಯದಲ್ಲಿ ತನಗೆ ಮೋಸವಾಗಿದೆ ಎಂಬ ವಾದ ಮಂಡಿಸಿತ್ತು. ಪರಿಣಾಮವಾಗಿ ಹರಿಯಾಣಕ್ಕೆ ನೀರು ಹರಿಸುವ ಉದ್ದೇಶದ ಸಟ್ಲೆಜ್- ಯಮುನಾ (ಎಸ್‌ವೈಎಲ್) ನದಿ ಜೋಡಣೆಯ 1000 ಕೋಟಿ ರೂಪಾಯಿ ಯೋಜನೆ ಎರಡು ದಶಕದಿಂದ ನೆನಗುದಿಗೆ ಬಿದ್ದಿದ್ದು, ಅಕ್ಷರಶಃ ನೀರುಪಾಲಾಗಿದೆ. ಅಲ್ಲದೆ, ಪ್ರಾಜೆಕ್ಟ್ ಎಂಜಿನಿಯರ್‌ಗಳನ್ನು ಉಗ್ರರು ಹತ್ಯೆ ಮಾಡಿದ್ದರಿಂದ ನದಿ ಜೋಡಣೆ ಪ್ರಕ್ರಿಯೆಗೆ ಮತ್ತಷ್ಟು ಹಿನ್ನಡೆಯಾಗಿದೆ. ಹಿಂದಿನ ಜಲ ಒಪ್ಪಂದವನ್ನು ಉಲ್ಲಂಘಿಸಿ ಪಂಜಾಬ್ ಹೊಸ ಶಾಸನ ಜಾರಿಗೆ ತಂದಿರುವುದಲ್ಲದೆ, ತನ್ನ ನೆಲದಲ್ಲಿ ಆಗಬೇಕಾಗಿರುವ ಎಸ್‌ವೈಎಲ್ ಯೋಜನೆ ಕಾಮಗಾರಿಗೆ ಕೂಡ ತಡೆ ಒಡ್ಡಿದೆ. ಈ ಮಧ್ಯೆ ಯೋಜನೆಗೆ ಕೇಂದ್ರ ಜಲ ಆಯೋಗ ಅಥವಾ ಪರಿಸರ ಸಚಿವಾಲಯದ ಅನುಮತಿ ಪಡೆಯುವ ಮುನ್ನವೇ ಹರಿಯಾಣ ಭಾಕ್ರಾ ಮುಖ್ಯ ಕಾಲುವೆಯಿಂದ ರಾಜ್ಯದ ದಕ್ಷಿಣ ಭಾಗಕ್ಕೆ ನೀರೊದಗಿಸಲು 250 ಕೋಟಿ ವೆಚ್ಚದ 109 ಕಿ.ಮೀ. ಉದ್ದದ ಹಂಸಿ-ಬುತಾನ ಕಾಲುವೆ ನಿರ್ಮಿಸಿದೆ. ಸಟ್ಲೆಜ್-ಯಮುನಾ ಕಾಲುವೆ ಜೋಡಣೆಯಲ್ಲಿ ಪಂಜಾಬ್‌ನ ವಿಳಂಬ ನೀತಿ ಕುರಿತ ಹರಿಯಾಣದ ಅರ್ಜಿಯ ಹಿನ್ನೆಲೆಯಲ್ಲಿ 'ಪಂಜಾಬ್ ಟರ್ಮಿನೇಷನ್ ಆಫ್ ವಾಟರ್ ಅಗ್ರಿಮೆಂಟ್ ಆಕ್ಟ್' ಕ್ರಮಬದ್ಧತೆಯ ಕುರಿತು ವಿಚಾರಣೆ ನಡೆಸಲು ರಾಷ್ಟ್ರಪತಿಗಳು ಸುಪ್ರೀಂಕೋರ್ಟ್‌ಗೆ ಸೂಚಿಸಿದ್ದರೆ, ಮತ್ತೊಂದು ಕಡೆ ಹರಿಯಾಣ ಹಂಸಿ-ಬುತಾನ ಕಾಲುವೆ ನಿರ್ಮಾಣವನ್ನು ಪ್ರಶ್ನಿಸಿ ಪಂಜಾಬ್ ಸುಪ್ರೀಂಕೋರ್ಟ್‌ನಲ್ಲಿ ಮೊಕದ್ದಮೆ ದಾಖಲಿಸಿದೆ. ಈ ನಡುವೆ ನೆನಗುದಿಗೆ ಬಿದ್ದಿರುವ ನೀರಾವರಿ ಯೋಜನೆಗಳು ಕೃಷಿ ಉತ್ಪಾದನೆಗೆ ಬಲವಾದ ಪೆಟ್ಟನ್ನೇ ನೀಡಲಿವೆ.

ಟಿಎಸ್‌ಐ

ರಮೇಶ್ ಕಪಿಲ

ಒರಿಸ್ಸಾ: ದೌರ್ಜನ್ಯ

ದೇವಾಲಯದ ನಾಡಲ್ಲಿ ಸ್ತ್ರೀ ಬೇಟೆ!

ಮಹಿಳೆಯರಿಗೆ ರಕ್ಷಣೆ ಒದಗಿಸುವಲ್ಲಿ ಸೋತ ಸರ್ಕಾರ

"ಒಂದು ಪ್ರದೇಶದ ಪರಿಸ್ಥಿತಿಯನ್ನು ಅಲ್ಲಿನ ಮಹಿಳೆಯರ ಸ್ಥಾನ-ಮಾನಗಳಿಂದಲೇ ನಿರ್ಧರಿಸಬಹುದು". ದೇಶದ ಮಾಜಿ ಪ್ರಧಾನಿ ಜವಹರಲಾಲ್ ನೆಹರೂ ಅವರ ಈ ಮಾತುಗಳನ್ನು ನೀವು ಒಪ್ಪುವುದಾದರೆ, ಒರಿಸ್ಸಾದ ಪರಿಸ್ಥಿತಿಯಂತೂ ತೀರಾ ಹದಗೆಟ್ಟಿದೆ ಎಂಬುದನ್ನೂ ಒಪ್ಪಲೇಬೇಕು. ಏಕೆಂದರೆ, ಅಲ್ಲಿನ ಮಹಿಳಾ ಆಯೋಗದ ಅಧಿಕೃತ ಮಾಹಿತಿಯ ಪ್ರಕಾರವೇ ರಾಜ್ಯದಲ್ಲಿ ಮಹಿಳೆಯ ಸುರಕ್ಷತೆ ಹಾಗೂ ಭದ್ರತೆ ಎಂಬುದು ಮರೀಚಿಕೆಯಾಗಿದೆ. ಒರಿಸ್ಸಾ ಮಹಿಳಾ ಆಯೋಗ ಇತ್ತೀಚೆಗೆ ಬಿಡುಗಡೆಗೊಳಿಸಿದ ಅಂಕಿ-ಅಂಶಗಳತ್ತ ಕಣ್ಣು ಹಾಯಿಸಿದಲ್ಲಿ ನಿಮಗಿದು ಸ್ಪಷ್ಟವಾಗುತ್ತದೆ. ಮಹಿಳಾ ಆಯೋಗದ ಅಂಕಿ-ಅಂಶಗಳ ಪ್ರಕಾರ 2006ರಲ್ಲಿ ಮಹಿಳೆಯರ ವಿರುದ್ಧದ ಒಟ್ಟು 2778 ಅಪರಾಧ ಪ್ರಕರಣಗಳು ದಾಖಲಾಗಿದ್ದವು. 2007ರಲ್ಲಿ ಆ ಸಂಖ್ಯೆ 2845ಕ್ಕೆ ಏರಿದೆ. 2004 ಹಾಗೂ 2005ರಲ್ಲಿ ಪ್ರಕರಣಗಳ ಸಂಖ್ಯೆ ಅನುಕ್ರಮವಾಗಿ 2651 ಹಾಗೂ 2789ರಷ್ಟಿತ್ತು. ಆದರೆ ವರ್ಷದಿಂದ ವರ್ಷಕ್ಕೆ ಅಪರಾಧ ಪ್ರಕರಣಗಳು ಏರುಗತಿಯನ್ನೇ ಕಾಣುತ್ತಿದ್ದು, ಮಹಿಳೆಯರು ಇಲ್ಲಿಯೂ ಅಸುರಕ್ಷಿತರು ಎಂಬ ಅಂಶ ನಿಜವಾಗಿದೆ. 'ಎನ್‌ಒಡಬ್ಲ್ಯೂ' ಎಂಬ ಮಹಿಳಾ ಪರ ಸಂಘ-ಸಂಸ್ಥೆಯ ಮುಖ್ಯಸ್ಥರಾದ ಲೋಲಿತಾ ಮಿಸಾಲ್ ಅವರು, "ವರದಕ್ಷಿಣೆ ಕೊಲೆ, ವರದಕ್ಷಿಣೆ ಕಿರುಕುಳದಿಂದಾಗಿ ಆತ್ಮಹತ್ಯೆ, ವರದಕ್ಷಿಣೆ ದೌರ್ಜನ್ಯ, ಅತ್ಯಾಚಾರ ಸೇರಿದಂತೆ ಮಹಿಳೆಯರ ಮೇಲಾಗುತ್ತಿರುವ ದೌರ್ಜನ್ಯ ಪ್ರಕರಣಗಳ ಸಂಖ್ಯೆ ವರ್ಧಿಸುತ್ತಲೇ ಇದೆ. ಆದರೆ ಭಯದಿಂದ ಬಹುತೇಕ ದೌರ್ಜನ್ಯ ಪ್ರಕರಣಗಳು ದಾಖಲಾಗುವುದೇ ಇಲ್ಲ" ಎಂದು ಅಭಿಪ್ರಾಯಪಡುತ್ತಾರೆ. ಕಳೆದ ವರ್ಷ ಒರಿಸ್ಸಾ ಸರ್ಕಾರದ ಗೃಹ ಸಚಿವಾಲಯ ಬಿಡುಗಡೆ ಮಾಡಿದ ವರದಿಯೂ ಮಹಿಳೆಯರ ವಿಷಯದಲ್ಲಿ ಇದೇ ದುಸ್ಥಿತಿಯನ್ನೇ ವಿವರಿಸುತ್ತದೆ. "ರಾಜ್ಯ ಗೃಹ ಸಚಿವಾಲಯ ಮುಖ್ಯಮಂತ್ರಿಗಳ ಅಧೀನದಲ್ಲೇ ಇದ್ದರೂ ಮಹಿಳೆಯರಿಗೆ ರಕ್ಷಣೆ ಇಲ್ಲದಾಗಿದೆ. ಅದರರ್ಥ ಇದು ಅತ್ಯಂತ ಕೆಟ್ಟ ಆಡಳಿತದ ಮತ್ತೊಂದು ಮುಖ ಅಲ್ಲದೆ ಬೇರೇನಲ್ಲ" ಎಂದು ಕಿಡಿಕಾರುತ್ತಾರೆ ವಿರೋಧ ಪಕ್ಷ ಕಾಂಗ್ರೆಸ್‌ನ ಉಪಾಧ್ಯಕ್ಷ ಶಿವಾನಂದ ರಾಯ್. ಈ ಮಧ್ಯೆ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು, "ದೌರ್ಜನ್ಯಗಳ ಸಂಖ್ಯೆ ಗಾಬರಿ ಹುಟ್ಟಿಸುವಂಥದ್ದೇನಲ್ಲ. ಹಾಗಿದ್ದರೂ ದುಷ್ಕೃತ್ಯಗಳನ್ನು ಮಟ್ಟಹಾಕಲು ನಾವು ಸೂಕ್ತ ಕ್ರಮ ಕೈಗೊಂಡಿದ್ದೇವೆ" ಎನ್ನುತ್ತಾರೆ. ಈ ಅಂಕಿ-ಅಂಶಗಳನ್ನು ಕೂಲಂಕಷವಾಗಿ ವಿಶ್ಲೇಷಿಸಿದರೆ, ಅತ್ಯಾಚಾರ, ಅಪಹರಣ ಮತ್ತು ದೌರ್ಜನ್ಯದಂತಹ ಪ್ರಕರಣಗಳಲ್ಲಿ ಏರಿಕೆ ಕಂಡುಬಂದಿರುವುದು ಗಮನಕ್ಕೆ ಬರದೇ ಇರದು. 2006ರಲ್ಲಿ 77 ಅತ್ಯಾಚಾರ, 32 ಅಪಹರಣ, 99 ದೌರ್ಜನ್ಯ ಪ್ರಕರಣಗಳು ದಾಖಲಾಗಿದ್ದವು. ಆದರೆ ದುರಂತವೆಂದರೆ 2007ರಲ್ಲಿ ಈ ಸಂಖ್ಯೆ ಕ್ರಮವಾಗಿ 79, 61, 223ಕ್ಕೆ ಏರಿದೆ! ಕಳೆದ ಕೆಲವು ವರ್ಷಳಿಂದ ರಾಜ್ಯದ ಮಹಿಳೆಯರಿಗೆ ರಕ್ಷಣೆ ಒದಗಿಸುವ ನಿಟ್ಟಿನಲ್ಲಿ ಆಡಳಿತಾರೂಢ ಸರ್ಕಾರ ಸಂಪೂರ್ಣ ಸೋತಿದ್ದು, ಇಡೀ ನಾಗರಿಕ ಸಮಾಜವೇ ತಲೆತಗ್ಗಿಸುವಂತಾಗಿದೆ. ಭುವನೇಶ್ವರದಿಂದ 400 ಕಿ.ಮೀ. ದೂರದಲ್ಲಿರುವ ಸಂಬಲ್‌ಪುರ್‌ನಲ್ಲಿ 'ಎಂಸಿಎ' ವಿದ್ಯಾರ್ಥಿನಿಯ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣ ಇತ್ತೀಚೆಗೆ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು. ಮಹಿಳೆಯರ ಭದ್ರತೆಗೆ ಕುತ್ತು ಬಂದಿರುವುದರಿಂದ ಒರಿಸ್ಸಾ ರಾಜ್ಯ ಮಹಿಳಾ ಆಯೋಗ ಮಹಿಳೆಯರ ರಕ್ಷಣೆಯ ದೃಷ್ಟಿಯಿಂದ ಕಾವಲುಪಡೆಯಂತೆ ಕಾರ್ಯನಿರ್ವಹಿಸುತ್ತಿದೆ.

ಟಿಎಸ್‌ಐ

ಧ್ರುತಿಕಂ ಮೊಹಂತಿ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .