ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
ಪ್ರಸ್ತುತ

ಹೀಗೊಂದು ಭಾರತ ದರ್ಶನ

 

ರಾಹುಲ್ ಬಳಿ ಸಾಗಲು ಇಂಗ್ಲಿಷ್ ಗೊತ್ತಿರಬೇಕು!

ಕಾಂಗ್ರೆಸ್‌ನ ವರ್ಚಸ್ವಿ ಯುವ ನಾಯಕ ಹಾಗೂ ಭರವಸೆಯ ಸೆಲೆ ರಾಹುಲ್ ಗಾಂಧಿ ಒರಿಸ್ಸಾದಲ್ಲಿ ತಮ್ಮ ಚುನಾವಣಾ ಅಭಿಯಾನಕ್ಕೆ ವಿಧ್ಯುಕ್ತ ಚಾಲನೆ ನೀಡಿದ್ದಾರೆ. ಬುಡಕಟ್ಟು ಮತ ಬ್ಯಾಂಕನ್ನು ಒಲಿಸಿಕೊಳ್ಳುವ ನಿಟ್ಟಿನಲ್ಲಿ ರಾಹುಲ್ ಇಡುತ್ತಿರುವ ಹೆಜ್ಜೆಗಳು ಅಜ್ಜಿ ಇಂದಿರಾಗಾಂಧಿ ಹಾಗೂ ತಂದೆ ರಾಜೀವ್ ಗಾಂಧಿಯವರ ಹಾದಿಯಲ್ಲೇ ಸಾಗಿವೆ. ಕಾಂಗ್ರೆಸ್ ಪ್ರಕಾರ ರಾಹುಲ್ ಗಾಂಧಿಯವರ 'ಡಿಸ್ಕವರ್ ಇಂಡಿಯಾ' ಅಭಿಯಾನ ಹೊಸ ಶಕೆಗೆ ನಾಂದಿ ಹಾಡಲಿದೆ. ರಾಹುಲ್ ಸಂದರ್ಶಿಸಿದ್ದು ಕೆಲವು ಆಯ್ದ ಪ್ರದೇಶಗಳ ಬುಡಕಟ್ಟು ಜನರನ್ನು ಮಾತ್ರ. ಆದರೆ ಆ ಪ್ರದೇಶದಲ್ಲಿರುವ ಕಡು ಬಡತನದ ತೀವ್ರತೆಯನ್ನರಿಯಲು ಆ ಕ್ಷಣಿಕ ಭೇಟಿ ರಾಹುಲ್‌ಗೆ ಸಾಕಷ್ಟಾಯಿತಂತೆ! ದಶಕಗಳ ಹಿಂದೆ ಅಜ್ಜಿ ಹಾಗೂ ತಂದೆ ಅರಿತುಕೊಂಡಷ್ಟೇ ತೀವ್ರವಾಗಿ ರಾಹುಲ್ ಗಾಂಧಿ ಕೂಡ ಈ ಪ್ರದೇಶದ ಬಡತನ ಹಾಗೂ ಹಸಿವಿನ ತೀವ್ರತೆಯನ್ನು ಅನುಭವಿಸಿದರಂತೆ. ತಮ್ಮ 'ಡಿಸ್ಕವರ್ ಇಂಡಿಯಾ' ಅಭಿಯಾನವನ್ನು ರಾಹುಲ್ ಆರಂಭಿಸಿದ್ದು ನುವಾಪರ ಜಿಲ್ಲೆಯಿಂದ. ಮಾರ್ಚ್ 7ರಂದು ನಂಗಲ್‌ಬೋಧ್ ಹಳ್ಳಿಗೆ ಹೆಲಿಕಾಪ್ಟರ್‌ನಲ್ಲಿ ಬಂದಿಳಿದ ರಾಹುಲ್ ಜಿಲ್ಲಾ ಕೇಂದ್ರದಿಂದ 125 ಕಿ.ಮೀ ದೂರದಲ್ಲಿರುವ ತೆಂಗ್ರಿಪಾಡಾ ಕುಗ್ರಾಮ ಬುಡಕಟ್ಟು ಜನರೊಂದಿಗೆ ಕೆಲ ಸಮಯ ಕಳೆದರು. ನಂಗಲ್‌ಬೋಧ್ ದೇಶದ ಅತ್ಯಂತ ಹಿಂದುಳಿದ ಕುಗ್ರಾಮಗಳಲ್ಲೊಂದು ಎಂಬುದು ಗಮನಾರ್ಹ. ಈ ಗ್ರಾಮೀಣರ ಸಂಗಾತಿಯೆಂದರೆ ಕಡು ಬಡತನ ಹಾಗೂ ಕಿತ್ತು ತಿನ್ನುವ ಹಸಿವು. ಗ್ರಾಮೀಣರ ಅಭಿಪ್ರಾಯ ಕಲೆಹಾಕುವ ನಿಟ್ಟಿನಲ್ಲಿ ಟಿಎಸ್‌ಐ ತಂಡ, ರಾಹುಲ್ ಗಾಂಧಿ ಭೇಟಿಯ ಎರಡು ದಿನಗಳ ಬಳಿಕ ನಂಗಲ್‌ಬೋಧ್‌ಗೆ ಭೇಟಿ ನೀಡಿತ್ತು. ನಮ್ಮ ವಾಹನ ಖರಿಯಾರ್ ಎಂಬ ಪುಟ್ಟ ಪಟ್ಟಣವನ್ನು (ನುವಾಪರದ ಉಪ ವಿಭಾಗ) ತಲುಪಿದಾಗ ನಾನು ನಂಗಲ್‌ಬೋಧ್ ಎಂಬ ಕುಗ್ರಾಮಕ್ಕೆ ಹೋಗುವ ದಾರಿ ಕೇಳಿದೆ. "ಅದು ಬಹಳ ದೂರದಲ್ಲಿದೆ, ಕಾರಿನಲ್ಲಿ ಆ ಗ್ರಾಮ ತಲುಪುವುದು ಅಸಾಧ್ಯ" ಯುವಕನೊಬ್ಬ ಮುನ್ನೆಚ್ಚರಿಕೆಯ ದನಿಯಲ್ಲಿ ಹೇಳಿದ. ರಾಹುಲ್ ಗಾಂಧಿ ಭೇಟಿಯ ಗುಂಗಲ್ಲೇ ಇದ್ದ ಆತ "ಹೆಲಿಕಾಪ್ಟರ್ ಮೂಲಕ ಮಾತ್ರ ಆ ಗ್ರಾಮವನ್ನು ಸುರಕ್ಷಿತವಾಗಿ ತಲುಪಲು ಸಾಧ್ಯ" ಎಂದೂ ವ್ಯಂಗ್ಯವಾಡಿದ! ನಾವು ಸಿನಾಪಲಿ ಕಡೆಗೆ ಗಾಡಿ ತಿರುಗಿಸಿದೆವು. ಜಿಲ್ಲಾ ಕೇಂದ್ರದಿಂದ ಅತಿ ದೂರದಲ್ಲಿರುವ ಊರು ಸಿನಾಪಲಿ. ಅಲ್ಲಿನ ಶೇ.70ರಷ್ಟು ಜನ ಬಡತನ ರೇಖೆಗಿಂತ ಕೆಳಗಿನವರೇ. ವಿದ್ಯುತ್, ಆರೋಗ್ಯ ಹಾಗೂ ಶಿಕ್ಷಣ ಸೇರಿದಂತೆ ಪ್ರಾಥಮಿಕ ಅಗತ್ಯಗಳೇ ಇನ್ನೂ ಗಗನ ಕುಸುಮವಾಗಿರುವ ನೂರಾರು ಹಳ್ಳಿಗಳ ತವರು ಈ ಜಿಲ್ಲೆ. ಮಳೆಗಾಲದಲ್ಲಿ ಜಿಲ್ಲಾ ಕೇಂದ್ರದಿಂದ ಸಂಪೂರ್ಣ ಸಂಪರ್ಕ ಕಡಿದುಕೊಳ್ಳುವ ಪ್ರದೇಶ ಬಹುಶಃ ಸಿನಾಪಲಿ ಮಾತ್ರ. ಆದರೆ ನಮ್ಮ ಗುರಿಯ ಕಡೆಗಿನ ನಿಜವಾದ ಪಯಣ ಆರಂಭವಾದ ಮೇಲೆ ಸರ್ಕಾರದ ಕೃಪಾಕಟಾಕ್ಷ ಈ ಜಿಲ್ಲೆಯ ಮೇಲೆ ಎಷ್ಟರಮಟ್ಟಿಗೆ ಬಿದ್ದಿದೆ ಎಂಬುದು ತಿಳಿಯುತ್ತಾ ಹೋಯಿತು. ಏರು- ತಗ್ಗು, ಗುಂಡಿ- ಗಟಾರಗಳಿರುವ ರಸ್ತೆ ಅದು. ಹಲವು ವರ್ಷಗಳಿಂದ ಈ ರಸ್ತೆ ದುರಸ್ತಿಯಾದ ಯಾವುದೇ ಕುರುಹುಗಳು ಕಂಡು ಬರದಿದ್ದರೂ ಅಧಿಕೃತ ವರದಿಗಳಲ್ಲೆಲ್ಲಾ ಈ ರಸ್ತೆ ದುರಸ್ತಿಯ ಉಲ್ಲೇಖವಿದೆ! ನಾವು ನಂಗಲ್‌ಬೋಧ್ ತಲುಪಲು ಎರಡು ಗಂಟೆ ಬೇಕಾಯಿತು! ತಾತ್ಕಾಲಿಕವಾಗಿ ನಿರ್ಮಿಸಲಾಗಿದ್ದ ದೊಡ್ಡ ಹೆಲಿಪ್ಯಾಡ್ 'ಬೆಣ್ಣೆ ನಗೆ' ಬೀರಿ ನಮ್ಮನ್ನು ಸ್ವಾಗತಿಸಿತು. 20ರಿಂದ 25 ಕುಟುಂಬಗಳು ಅಲ್ಲಿವೆ. ತಾವು ರಾಹುಲ್ ಭೇಟಿ ಮಾಡಲು ಪೊಲೀಸರು ಅಡ್ಡಗಾಲು ಹಾಕಿದರು ಎಂಬುದು ಗ್ರಾಮೀಣರ ಆರೋಪ. ಸ್ಥಳೀಯ ಎನ್‌ಜಿಒ ಆಯ್ಕೆಮಾಡಿದ ಕೆಲವರಿಗೆ ಮಾತ್ರ ರಾಹುಲ್ ಜೊತೆ ಮಾತನಾಡುವ ಅವಕಾಶ ಸಿಕ್ಕಿತಂತೆ. "ಈ ಹಳ್ಳಿಯಲ್ಲಿ ಸಮಸ್ಯೆಗಳ ಸರಮಾಲೆಯೇ ಇದೆ, ಆದರೆ ಇವ್ಯಾವುವೂ ರಾಹುಲ್ ಅವರ ಗಮನಕ್ಕೆ ಬರಲೇ ಇಲ್ಲ" ಎನ್ನುತ್ತಾರೆ ಮಿಥಿಲಾ ಮಝಿ. ಅಲ್ಲದೆ ಹಳ್ಳಿಯಲ್ಲಿ ಶುದ್ಧ ಕುಡಿಯುವ ನೀರಿನ ಪೂರೈಕೆ ಇಲ್ಲ ಎಂದೂ ಮಿಥಿಲ ತಿಳಿಸಿದರು. ಹಳ್ಳಿಗರ ಜೀವನದಲ್ಲಿ ಉದ್ಯೋಗ ಎಂಬ ಪದಕ್ಕೇ ಆಸ್ಪದವಿಲ್ಲ. ಅರಣ್ಯೋತ್ಪನ್ನಗಳಿಂದಲೇ ಅವರು ಜೀವನ ಸಾಗಿಸುತ್ತಿದ್ದಾರೆ. ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯಡಿ ಜಾಬ್ ಕಾರ್ಡ್ ನೀಡಲಾಗಿದ್ದರೂ, ಉದ್ಯೋಗ ನೀಡಿರುವ ಬಗ್ಗೆ ಉಲ್ಲೇಖವಿಲ್ಲ. ರಾಹುಲ್ ಗಾಂಧಿ ಭೇಟಿ ನೀಡಿದ್ದಕ್ಕೆ ಜನತೆ ಹರ್ಷ ವ್ಯಕ್ತಪಡಿಸಿದ್ದರೂ, ತಮ್ಮ ಸಮಸ್ಯೆ ಅರ್ಥಮಾಡಿಕೊಳ್ಳಲಿಲ್ಲ ಎಂಬುದು ಅವರಿಗೆ ಬೇಸರ ತರಿಸಿದೆ. ಹಳ್ಳಿಗರಿಗೆ ಇಂಗ್ಲಿಷ್ ಗೊತ್ತಿಲ್ಲ ಎಂಬ ಕಾರಣಕ್ಕೆ ಅವರನ್ನು ರಾಹುಲ್ ಹತ್ತಿರ ಹೋಗಗೊಡಲಿಲ್ಲವಂತೆ. "ಅವರು ಕೊನೆಗೂ ನಮ್ಮ ಸಮಸ್ಯೆಗಳನ್ನು ಅರ್ಥಮಾಡಿಕೊಳ್ಳಲೇ ಇಲ್ಲ, ನಮಗೆ ಇಂಗ್ಲಿಷ್ ಗೊತ್ತಿಲ್ಲ ಎಂಬ ಕಾರಣ ಒಡ್ಡಿ ಅಧಿಕಾರಿಗಳು ರಾಹುಲ್ ಸನಿಹ ಸುಳಿಯಲೂ ಬಿಡಲಿಲ್ಲ" ನೀಲಾಂಬರ್ ಮಝಿ ಮಾತು ಎರಡು ದಿನಗಳ ಹಿಂದೆ ಜನ ಮರುಳೋ ಜಾತ್ರೆ ಮರುಳೋ ಎಂಬಂತಿದ್ದ ಸಭೆಯ ನೈಜ ಚಿತ್ರ ನೀಡಿದವು.

ಟಿಎಸ್‌ಐ

ಅಜಿತ್ ನಾಯಕ್

ಇತರ ಪ್ರಸ್ತುತ ಲೇಖನಗಳು

ಹೀಗೊಂದು ಭಾರತ ದರ್ಶನ : ರಾಹುಲ್ ಬಳಿ ಸಾಗಲು ಇಂಗ್ಲಿಷ್ ಗೊತ್ತಿರಬೇಕು!

‘ಅಸಂಘಟಿತ' ಕಾರ್ಮಿಕರು.. .: ಕಾರ್ಮಿಕರ ಸ್ವರ್ಗವಾಗಿದ್ದ ಪಶ್ಚಿಮ ಬಂಗಾಳದಲ್ಲಿ ತಳ ಹಂತದ ಕಾರ್ಮಿಕರ ಮೇಲಿನ ದೌರ್ಜನ್ಯ ಹೆಚ್ಚುತ್ತಿದೆ

ಫೀನಿಕ್ಸ್ ಪ್ರಭಾಕರನ್ : 4 ತಿಂಗಳ ಅಜ್ಞಾತವಾಸದ ನಂತರ ಸಾರ್ವಜನಿಕವಾಗಿ ಕಾಣಿಸಿಕೊಂಡ ಪ್ರಭಾಕರನ್ ವದಂತಿಗೆ ತೆರೆ ಎಳೆದಿದ್ದಾರೆ

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .