ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಪತ್ರ ಚರಿತ್ರೆ
ಖಾನ್ ಅವರಿಗೆ ಕೆನಡಿ ಬರೆದ ಪತ್ರ
 

1962ರಲ್ಲಿ ಅಂದಿನ ಪಾಕಿಸ್ತಾನದ ಅಧ್ಯಕ್ಷ ಜನರಲ್ ಆಯೂಬ್ ಖಾನ್ ಅಮೆರಿಕಕ್ಕೆ ಭೇಟಿ ನೀಡಿದ್ದರು. ಖಾನ್ ಅವರು ಶಸ್ತ್ರಾಸ್ತ್ರ ಪೂರೈಕೆಗೆ ಬೇಡಿಕೆ ಇಡಬಹುದು ಎಂದು ಅಮೆರಿಕ ಅಧ್ಯಕ್ಷ ಜಾನ್ ಎಫ್. ಕೆನಡಿ ಚಿಂತೆಗೀಡಾಗಿದ್ದರು. ಏಕೆಂದರೆ, ಒಂದು ವೇಳೆ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಸಿದರೆ, ಭಾರತವೂ ಬೇಡಿಕೆ ಇಡಬಹುದು ಎಂಬುದು ಅವರ ದಿಗಿಲಾಗಿತ್ತು. ಈ ಮಧ್ಯೆ ಕೆನಡಿ ಅವರ ಆಡಳಿತಾಧಿಕಾರಿಗಳು, ಪಾಕಿಸ್ತಾನ ಶಸ್ತ್ರಾಸ್ತ್ರಕ್ಕಿಂತ ಮಿಗಿಲಾದ ಆಹಾರದ ಬೇಡಿಕೆ ಇಟ್ಟಿದೆ ಎಂದು ಅವರಿಗೆ ತಿಳಿಸಿದರು. ಆ ಹಿನ್ನೆಲೆಯಲ್ಲಿ ಕೆನಡಿ ಅವರು ಬರೆದ ಈ ಕೆಳಗಿನ ಪತ್ರದಲ್ಲಿ ಪಾಕಿಸ್ತಾನದ ಆಹಾರದ ಬಿಕ್ಕಟ್ಟು ಮತ್ತು ಅದರಿಂದ ಹೊರಬರಲು ಅಮೆರಿಕ ಹೇಗೆ ನೆರವಾಗಬಹುದು ಎಂಬುದನ್ನು ಚರ್ಚಿಸಿದ್ದಾರೆ.

ಸೆಪ್ಟೆಂಬರ್ 21, 1962

ಆತ್ಮೀಯ ಅಧ್ಯಕ್ಷರೇ, ಪಶ್ಚಿಮ ಪಾಕಿಸ್ತಾನದ ಕೃಷಿ ಭೂಮಿಯ ಜೌಗು ಮತ್ತು ಕ್ಷಾರದ ಸಮಸ್ಯೆ ಅಧ್ಯಯನಕ್ಕೆ ನಾವು ನೇಮಿಸಿದ್ದ ಅಮೆರಿಕದ ವೈಜ್ಞಾನಿಕ ತಂಡ, ಆ ಕುರಿತು ಆಳ ಅಧ್ಯಯನ ಮತ್ತು ವಿಶ್ಲೇಷಣೆ ನಡೆಸಿ ಸವಿವರವಾದ ವರದಿ ಸಲ್ಲಿಸಿದೆ. ಆ ವರದಿ ನೋಡಿದ ಬಳಿಕ ನಾನು ಈ ಪತ್ರ ಬರೆಯುತ್ತಿದ್ದೇನೆ. ನಿಮಗೆ ತಿಳಿದಂತೆ ನನ್ನ ವಿಜ್ಞಾನ ಮತ್ತು ತಂತ್ರಜ್ಞಾನ ವಿಶೇಷ ಸಹಾಯಕ ಡಾ. ಜೆರೋಮ್ ಬಿ ವೈಸ್ನರ್ ಸ್ವತಃ ಆಸಕ್ತಿ ವಹಿಸಿ, ಕೃಷಿ, ಜಲವಿಜ್ಞಾನ, ಎಂಜಿನಿಯರಿಂಗ್, ಆರ್ಥಿಕ ಮತ್ತು ಸಮಾಜವಿಜ್ಞಾನ ರಂಗದ ಅನುಭವಿ ಮತ್ತು ಪರಿಣಿತರನ್ನು ಒಳಗೊಂಡ ವೈಜ್ಞಾನಿಕ ತಂಡ ರಚಿಸಿದ್ದರು. ಹಾಗೇ ನನ್ನ ಆಂತರಿಕ ಆಡಳಿತ ಕಾರ್ಯದರ್ಶಿ ಸ್ಟುವರ್ಟ್ ಯುಡಾಲ್ ಹಾಗೂ ಅವರ ವಿಜ್ಞಾನ ಆಪ್ತ ಸಲಹೆಗಾರ ಮತ್ತು ವೈಜ್ಞಾನಿಕ ತಂಡದ ಮುಖ್ಯಸ್ಥರಾಗಿರುವ ಡಾ. ರೋಜರ್ ರೆವೆಲ್ ಅವರ ಅಭಿಪ್ರಾಯಗಳನ್ನೂ ವರದಿಯಲ್ಲಿ ಪಟ್ಟಿ ಮಾಡಲಾಗಿದೆ. ಅಲ್ಲದೆ, ಅಧ್ಯಯನದಲ್ಲಿ ಅವರ ಅಪಾರ ಶ್ರಮ, ಸಮರ್ಪಣಾ ಮನೋಭಾವ ಹಾಗೂ ಸಹಾಯವನ್ನು ಮರೆಯುವಂತಿಲ್ಲ. ಪಶ್ಚಿಮ ಪಾಕಿಸ್ತಾನಕ್ಕೆ ಕಾಡುತ್ತಿರುವ ಇಳುವರಿ ಕುಸಿತ, ಜೌಗು ಹಾಗೂ ಕ್ಷಾರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸೂಕ್ತ ಹಾಗೂ ಸಾಂದರ್ಭಿಕ ಕ್ರಮಗಳನ್ನು ಕೈಗೊಳ್ಳಬೇಕೆಂದು ಪರಿಣಿತರ ತಂಡ ಸಲಹೆ ನೀಡಿದೆ.ಜೌಗು ಹಾಗೂ ಕ್ಷಾರ ಸಮಸ್ಯೆಗೆ ನಿರ್ದಿಷ್ಟ ಪರಿಹಾರ ಕಂಡುಕೊಂಡಲ್ಲಿ ಕೃಷಿ ಉತ್ಪಾದನಾ ಸಾಮರ್ಥ್ಯವನ್ನು ಗಣನೀಯವಾಗಿ ಮತ್ತು ಶೀಘ್ರವಾಗಿ ಹೆಚ್ಚಿಸುವ ಅವಕಾಶವಿದೆ ಎಂದು ತಜ್ಞರ ತಂಡ ಅಭಿಪ್ರಾಯಪಟ್ಟಿದೆ. ಕೃಷಿ ಉತ್ಪಾದನೆಗೆ ಬೇಕಾದ ಎಲ್ಲಾ ಪೂರಕ ಅಂಶಗಳ ಜೊತೆಗೆ, ಸಂಘಟಿತ ಮಾನವ ಪ್ರಯತ್ನ ಮತ್ತು ಸಾಕಷ್ಟು ಬಂಡವಾಳ ಹೂಡಿಕೆಯಿಂದ ಸಮಸ್ಯೆಗೆ ಅಂತ್ಯ ಹಾಡಿ ಸುಧಾರಣೆ ಸಾಧಿಸಲು ಸಾಧ್ಯ. ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವತ್ತ ಸುಮಾರು ಹತ್ತು ಲಕ್ಷ ಎಕರೆ ವಿಸ್ತೀರ್ಣದ ನಿರ್ದಿಷ್ಟ ಯೋಜಿತ ಪ್ರದೇಶಗಳನ್ನು ಆಯ್ಕೆಮಾಡಿಕೊಂಡು ಪ್ರಾಯೋಗಿಕವಾಗಿ ಮೇಲಿನ ಮಾದರಿಯಲ್ಲಿ ಎಲ್ಲವನ್ನೂ ಅನುಷ್ಠಾನಕ್ಕೆ ತರಬೇಕು. ಆ ಮೂಲಕ ಕೃಷಿಯ ಎಲ್ಲಾ ಸಮಸ್ಯೆಗಳನ್ನು ಏಕಕಾಲಕ್ಕೆ ಎದುರಿಸುವ ಕಾರ್ಯ ಆಗಬೇಕಿದೆ. ಇದೊಂದು ಮಹತ್ವಾಕಾಂಕ್ಷಿ ಯೋಜನೆಯಾಗಲಿದ್ದು, ಅದಕ್ಕೆ ತೀರಾ ಭಿನ್ನವಾದ ಸಮಸ್ಯೆಗಳನ್ನು ಏಕಕಾಲಕ್ಕೆ ಗೆಲ್ಲುವ ಸಂಘಟಿತ ಕಾರ್ಯದ ಅಗತ್ಯವಿದೆ. ವೈಜ್ಞಾನಿಕ ತಂಡ ನೀಡಿದ ವರದಿಯನ್ನು ನಾವು ನಿಮಗೆ ಹಸ್ತಾಂತರಿಸುತ್ತಿದ್ದೇವೆ. ಆದರೆ ಈ ವರದಿ ಕರಡು ಪ್ರತಿಯಲ್ಲಿದ್ದು, ವರದಿಯ ಕುರಿತು ನೀವು ಪುನರ್ ವಿಮರ್ಶೆ ಅಥವಾ ತಿದ್ದುಪಡಿಯನ್ನು ನಮ್ಮ ಗಮನಕ್ಕೆ ತರಬಹುದು. ನಿಮ್ಮ ಅಧಿಕಾರಿಗಳಿಂದ ವರದಿಯ ಕುರಿತಾದ ಅಭಿಪ್ರಾಯ ಹಾಗೂ ಪ್ರತಿಕ್ರಿಯೆಯನ್ನು ನಾವು ನಿರೀಕ್ಷಿಸುತ್ತೇವೆ. ವರದಿಯಲ್ಲಿರುವ ಅಂಕಿ-ಅಂಶಗಳೂ ಪಾಕಿಸ್ತಾನದ ಮೂಲಗಳಿಂದ ದೊರೆತವುಗಳು. ಹಾಗಾಗಿ ನಿಮ್ಮ ತಜ್ಞರ ಸಮಿತಿ ನಮ್ಮ ತಂಡದವರೊಂದಿಗೆ ಅಗತ್ಯವಿದ್ದಲ್ಲಿ ಹೆಚ್ಚಿನ ಚರ್ಚೆ ನಡೆಸಲೂ ಮುಕ್ತ ಅವಕಾಶವಿದೆ. ಜೊತೆಗೆ ಡಾ. ರೋಜರ್ ರೆವೆಲ್ ಮತ್ತು ಅವರ ಸಮಿತಿಯ ಸದಸ್ಯರನ್ನು ನಿಮ್ಮ ಜನರೊಂದಿಗೆ ವಿಚಾರ ವಿನಿಮಯ ನಡೆಸಲು, ನಿಮಗೆ ಅನುಕೂಲವಾಗುವ ಸಮಯಕ್ಕೆ ಕಳುಹಿಸಿಕೊಡುತ್ತೇವೆ ಎಂಬುದನ್ನೂ ಸ್ಪಷ್ಟಪಡಿಸುತ್ತೇನೆ. ಪಾಕಿಸ್ತಾನ ಎದುರಿಸುತ್ತಿರುವ ಆಹಾರದ ಸಮಸ್ಯೆಗೆ ಮುಕ್ತಿ ಕಾಣಿಸಲು ತಜ್ಞರ ಸಮಿತಿ ತೋರಿದ ಕಾಳಜಿ ಹಾಗೂ ಉತ್ಸಾಹವನ್ನು ನಿಮಗೆ ತಿಳಿಸಲು ಬಯಸುತ್ತೇನೆ. ಹಾಗೇ ನಿಮ್ಮ ಪ್ರಯತ್ನ ಯಶಸ್ವಿಯಾಗಲಿ ಎಂದು ಶುಭ ಹಾರೈಸುತ್ತಿದ್ದೇನೆ.

ನಿಮ್ಮ ವಿಶ್ವಾಸಿ
ಜಾನ್ ಎಫ್. ಕೆನಡಿ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .