ಗಾಜಾ: ಬಿಕ್ಕಟ್ಟು
ದಿಗ್ಬಂಧನ: ಬಹಿಷ್ಕಾರದ ಉರಿ
ಕೆಲವರ ತಪ್ಪಿಗೆ ಎಲ್ಲಾ ಪ್ರಜೆಗಳಿಗೂ ಶಿಕ್ಷೆ ನೀಡುವುದು ಯಾವ ನ್ಯಾಯ?
ಇಸ್ರೇಲ್- ಪ್ಯಾಲೆಸ್ತೀನ್ ಸಂಘರ್ಷದ ಕುರಿತ ವರದಿಗಳಂತಹ ವ್ಯತಿರಿಕ್ತ ಮತ್ತು ಪೂರ್ವಗ್ರಹಪೀಡಿತ ವರದಿಗಳು ಆಧುನಿಕ ಇತಿಹಾಸದಲ್ಲಿ ಬೇರೆಲ್ಲೂ ಸಿಗಲಾರದು. ಗಾಜಾ ಪಟ್ಟಿ ಮೇಲಿನ ಇಸ್ರೇಲ್ ಆಕ್ರಮಣವನ್ನು ಜಾಗತಿಕ ಮಾಧ್ಯಮಗಳು 'ರಕ್ಷಣಾತ್ಮಕ ದಾಳಿ' ಎಂದು ಬಣ್ಣಿಸಿದ್ದವು! ಒಂದು ಯಹೂದಿ ವಿಚಾರ ಸಂಕಿರಣದಲ್ಲಿ ಹಮಾಸ್‌ನ (ಇಸ್ರೇಲ್ ವಿರುದ್ಧ ಭಯೋತ್ಪಾದಕ ಕೃತ್ಯ ನಡೆಸುವ ಮುಸ್ಲಿಂ ಸಂಘಟನೆ) ಬಂದೂಕುಧಾರಿಯೊಬ್ಬ 8 ನಾಗರಿಕರನ್ನು ಹತ್ಯೆಗೈದ ನಂತರ ಖಂಡನೆಗಳ ಮಹಾಪೂರವೇ ಹರಿದು ಬಂದಿತ್ತು. ಯಾವುದೇ ಸ್ವರೂಪದ ಹಿಂಸೆಯಾಗಲೀ ಅದು ಅಪರಾಧವೇ. ಆದರೆ ಅಂತಹ ಹಿಂಸೆಯ ಹಿಂದಿರುವ ಕಾರಣಗಳ ಬಗ್ಗೆಯೂ ವಿಚಾರ ಮಂಥನ ನಡೆಸಬೇಕಿದೆ.
ಇಸ್ರೇಲ್ ವಿಧಿಸಿರುವ ದಿಗ್ಬಂಧನ ಮತ್ತು ಅಂತರ್ ರಾಷ್ಟ್ರೀಯ ಸಮುದಾಯದ ಬಹಿಷ್ಕಾರದಿಂದಾಗಿ ಗಾಜಾ ಪಟ್ಟಿ ಪ್ರಾಂತ ಕಳೆದ 40 ವರ್ಷಗಳಲ್ಲೇ ಕಂಡರಿಯದ ದುಸ್ಥಿತಿಗೆ ಇಳಿದಿದೆ ಎನ್ನುತ್ತದೆ ಮಾನವ ಹಕ್ಕು ಸಂಘಟನೆಗಳ ವರದಿಗಳು. "ಇತ್ತೀಚೆಗೆ ಗಾಜಾ ಪಟ್ಟಿಯಲ್ಲಿ ಭುಗಿಲೆದ್ದ ಹಿಂಸೆ ಜೀವನವನ್ನು ನರಕವಾಗಿಸಿದೆ. ನಿರುದ್ಯೋಗ ಸಮಸ್ಯೆ ಏರುಗತಿಯಲ್ಲಿದೆ. 2006ರಲ್ಲಿ ಶೇ. 63ರಷ್ಟು ಮಂದಿ ಆಹಾರೋತ್ಪನ್ನಗಳ ಪರಿಹಾರ ಧನವನ್ನೇ ಆಶ್ರಯಿಸಿದ್ದರೆ ಈಗ ಆ ಮೊತ್ತ ಶೇ. 80ಕ್ಕೆ ತಲಪಿದೆ. ಜಲ ಮತ್ತು ಒಳಚರಂಡಿ ವ್ಯವಸ್ಥೆ ಸಂಬಂಧಿತ ಮೂಲಸೌಕರ್ಯಗಳು ಸಂಪೂರ್ಣ ಕುಲಗೆಟ್ಟು ಹೋಗಿವೆ. ಇಸ್ರೇಲ್ ದಿಗ್ಬಂಧನ ಕೊನೆಗಾಣದೆ ಇದ್ದಲ್ಲಿ ಗಾಜಾವನ್ನು ಈ ದುರಂತದ ಸರಮಾಲೆ ಯಿಂದ ಹೊರ ತರುವುದು ಸಾಧ್ಯವೇ ಇಲ್ಲ ಮತ್ತು ಈ ಪ್ರಾಂತದಲ್ಲಿ ಶಾಂತಿ ನೆಲೆಸುವುದೂ ಕನಸಿನ ಮಾತು" ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ 'ಕೇರ್ ಇಂಟರ್‌ನ್ಯಾಷನಲ್'ನ ಮುಖ್ಯ ಕಾರ್ಯ ನಿವಹಣಾಧಿಕಾರಿ ಜೆಫ್ರಿ ಡೆನ್ನಿಸ್. ಯುರೋಪಿಯನ್ ಒಕ್ಕೂಟದ ವಿದೇಶಾಂಗ ವ್ಯವಹಾರ ಸಭೆಯಲ್ಲಿ ಈ ವರದಿಗೆ ಪ್ರತಿಕ್ರಿಯೆ ನೀಡಿದ ಪ್ರಮುಖ ಮಾನವತಾವಾದಿ ಕಾನೂನು ತಜ್ಞ ಆಂಟನಿ ಡ್ವಾರ್ಕಿನ್ ಅವರು, "ಅಂತರ್ ರಾಷ್ಟ್ರೀಯ ಮಾನವತಾವಾದಿ ಕಾನೂನು ಸಶಸ್ತ್ರ ಹೋರಾಟ ಮತ್ತು ವಶಪಡಿಸಿಕೊಳ್ಳುವ ಪ್ರಕರಣಗಳಿಗೂ ಅನ್ವಯವಾಗುತ್ತವೆ. ಅದು ಅಕ್ರಮ ದಾಳಿಯನ್ನು ನಿಷೇಧಿಸುತ್ತದೆ. ಅಂದರೆ, ಮಿಲಿಟರಿ ದಾಳಿಯಿಂದ ಸಿಗಬಹುದಾದ ಲಾಭಕ್ಕಿಂತ ವ್ಯಾಪಕವಾಗಿ ಪ್ರಜೆಗಳಿಗೆ ಹಾನಿಯುಂಟು ಮಾಡಬಹುದಾದ ಮಿಲಿಟರಿ ನೆಲೆಗಳ ಮೇಲಿನ ದಾಳಿಯನ್ನು ಈ ಕಾನೂನು ತಡೆಯುತ್ತದೆ. ಪ್ರಜೆಗಳನ್ನು ಸಾಮೂಹಿಕವಾಗಿ ಶಿಕ್ಷಿಸುವುದನ್ನೂ ತಡೆ ಹಿಡಿದಿದೆ. ಅಂದರೆ, ಸಮೂಹದ ಕೆಲ ವ್ಯಕ್ತಿಗಳು ಮಾಡಿದ ಅಪರಾಧಕ್ಕಾಗಿ ಸಾಮೂಹಿಕವಾಗಿ ಎಲ್ಲಾ ಪ್ರಜೆಗಳನ್ನೂ ಶಿಕ್ಷೆಗೆ ಗುರಿ ಮಾಡುವುದು ಸಲ್ಲದು. ಹೀಗಾಗಿ ಗಾಜಾ ಪ್ರಜೆಗಳು ಹಮಾಸ್‌ರಿಗೆ ಬೆಂಬಲ ನೀಡುತ್ತಿದ್ದಾರೆ ಅಥವಾ ಅವರನ್ನು ಸಹಿಸುತ್ತಿದ್ದಾರೆ ಎನ್ನುವ ಅಪರಾಧಕ್ಕಾಗಿ ಗಾಜಾ ಪಟ್ಟಿ ಮೇಲೆ ದಾಳಿ ನಡೆಸಿರುವ ಇಸ್ರೇಲ್ ಅಂತರ್‌ರಾಷ್ಟ್ರೀಯ ಮಾನವೀಯ ಕಾನೂನನ್ನು ಉಲ್ಲಂಘಿಸಿದೆ."
ಇಂಗ್ಲೆಂಡ್ ಸರ್ಕಾರ ಮತ್ತು ಯುರೋಪಿಯನ್ ಒಕ್ಕೂಟ ಗಾಜಾ ಪಟ್ಟಿಯ ದಿಗ್ಬಂಧನವನ್ನು ಹಿಂದಕ್ಕೆ ತೆಗೆದುಕೊಳ್ಳುವಂತೆ ಇಸ್ರೇಲ್ ಮೇಲೆ ಒತ್ತಡ ಹೇರಬೇಕು. ಆ ಪ್ರಾಂತ್ಯಕ್ಕೆ ಇಂಧನ ಮತ್ತು ವಿದ್ಯುತ್ ಮರು ವ್ಯವಸ್ಥೆ ಕಳಿಸುವಲ್ಲಿ ಸಹಕರಿಸಬೇಕು ಎಂದು ಅಧ್ಯಯನಕಾರರು ಕೋರಿದ್ದಾರೆ.
ಟಿಎಸ್‌ಐ
ಸೌರಭ್ ಕುಮಾರ್ ಶಾಹಿ
ಧರ್ಮ: ಶಾಂತಿ
ಅಂತರ್ ಧರ್ಮೀಯ ಸೌಹಾರ್ದ ಮಾತುಕತೆ
ಜಾಗತಿಕ ಶಾಂತಿ ಸ್ಥಾಪನೆಗೆ ಪೋಪ್ ಮಹತ್ವದ ಪ್ರಯತ್ನ
ಮೊತ್ತ ಮೊದಲ ಬಾರಿಗೆ 16ನೇ ಪೋಪ್ ಬೆನೆಡಿಕ್ಟ್ ಅವರು ಜಾಗತಿಕ ಶಾಂತಿ ಸ್ಥಾಪನೆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಡಲು ಪ್ರಯತ್ನಿಸಿದ್ದಾರೆ! ನವೆಂಬರ್ 4-5ರಂದು ರೋಮ್‌ನಲ್ಲಿ ಮುಸ್ಲಿಂ ಮತ್ತು ಕ್ರೈಸ್ತರ ನಡುವೆ ಅಂತರ್ ಧರ್ಮೀಯ ಸೌಹಾರ್ದ ಮಾತುಕತೆಯನ್ನು ಆಯೋಜಿಸುವ ಆಶಯವನ್ನು ವ್ಯಕ್ತಪಡಿಸಿದ್ದಾರೆ. ವ್ಯಾಟಿಕನ್‌ನ ಹತ್ತು ಮಂದಿ ಉನ್ನತ ಪದಾಧಿಕಾರಿಗಳು ಮತ್ತು ಮುಸ್ಲಿಂ ಧರ್ಮದರ್ಶಿಗಳ ನಡುವೆ ಮೂರು ದಿನಗಳ ಕಾಲ ನಡೆದ ಪೂರ್ವಭಾವಿ ಮಾತುಕತೆಯ ಫಲಿತಾಂಶವಾಗಿ ನವೆಂಬರ್‌ಗೆ ಈ ಸೌಹಾರ್ದ ಮಾತುಕತೆಯ ದಿನಾಂಕವನ್ನು ಅಂತಿಮಗೊಳಿಸಲಾಗಿದೆ.
ಜಾಗತಿಕ ಶಾಂತಿಯ ನಿಟ್ಟಿನಲ್ಲಿ ಈ ಮಾತುಕತೆ ಸಕಾರಾತ್ಮಕ ಬದಲಾವಣೆಯ ನಿರೀಕ್ಷೆ ಹುಟ್ಟು ಹಾಕಿದೆ. "ಸೌಹಾರ್ದ ಮಾತುಕತೆಗಳು ಪರಸ್ಪರ ಗೌರವಾದರಗಳನ್ನು ಉತ್ತೇಜಿಸುತ್ತವೆ. ಡ್ಯಾನಿಷ್ ಕಾರ್ಟೂನ್‌ನಂತಹ ವಿವಾದಾಸ್ಪದ ವಿಚಾರಗಳನ್ನು ಪರಿಹರಿಸಿಕೊಳ್ಳುವ ವಿಶ್ವಾಸ ಮೂಡಿಸುತ್ತವೆ. ಅಲ್ಪಸಂಖ್ಯಾತರ ಹಕ್ಕುಗಳನ್ನು ಸಂರಕ್ಷಿಸಲು ಮತ್ತು ತಮ್ಮ ನಂಬಿಕೆ- ವಿಶ್ವಾಸಗಳಿಗೆ ಧಕ್ಕೆಯಾಗಲಿದೆ ಎಂಬ ಅವರ ಭೀತಿಯನ್ನು ನಿವಾರಿಸುವಲ್ಲಿ ಸಹಕಾರಿ" ಎನ್ನುತ್ತಾರೆ ಜಮಾತ್-ಇ-ಇಸ್ಲಾಮಿ-ಹಿಂದ್‌ನ ಮಾಜಿ ಅಧ್ಯಕ್ಷ ಅಬ್ದುಲ್ ಹಕ್ ಅನ್ಸಾರಿ.
ಪೂರ್ವಭಾವಿ ಮಾತುಕತೆ ಸಂದರ್ಭದಲ್ಲಿ ವಿಚಾರ ಸಂಕಿರಣ ಏರ್ಪಡಿಸುವ ಬಗ್ಗೆಯೂ ಒಮ್ಮತಕ್ಕೆ ಬರಲಾಗಿದೆ. ಎರಡೂ ಧರ್ಮಗಳಿಗೆ ಸಂಬಂಧಿಸಿದಂತೆ ಸುಮಾರು 24 ವಿಚಾರ ಸಂಕಿರಣಗಳನ್ನು ಏರ್ಪಡಿಸಲಾಗುವುದು. ಶಾಶ್ವತ ಕ್ಯಾಥೊಲಿಕ್- ಮುಸ್ಲಿಂ ವೇದಿಕೆಯೊಂದನ್ನು ರೂಪಿಸಿ ಎರಡು ವರ್ಷಗಳಿಗೊಮ್ಮೆ ಕ್ರಮವಾಗಿ ವ್ಯಾಟಿಕನ್ ಅಥವಾ ಯಾವುದೇ ಮುಸ್ಲಿಂ ಧರ್ಮೀಯ ಕೇಂದ್ರದಲ್ಲಿ ವಿಚಾರ ಮಂಥನ ಏರ್ಪಡಿಸಲು ನಿರ್ಧರಿಸಲಾಗಿದೆ. ಏಕದೈವಾರಾಧನೆಯ ಈ ಎರಡೂ ಧರ್ಮಗಳ ನಡುವಿನ ಸಂಬಂಧ ನಿತ್ಯ ಸಂಕಷ್ಟದ ಸುಳಿಯಲ್ಲೇ ತಿರುಗುತ್ತಿರುತ್ತದೆ. "ಹಲವಾರು ಕ್ರೈಸ್ತ ವಸಾಹತುಶಾಹಿಗಳು ಮುಸ್ಲಿಂ ದೇಶಗಳ ಮೇಲೆ ದಂಡೆತ್ತಿ ಬಂದ ಸಂದರ್ಭದಲ್ಲಿ ಧರ್ಮ ಸಂಘರ್ಷಕ್ಕೆ ಎಡೆ ಮಾಡಿಕೊಟ್ಟಿದ್ದರು" ಎನ್ನುತ್ತಾರೆ ಸಿಪಿಐ(ಎಂ) ನಾಯಕ ಮತ್ತು ಪ್ರಸ್ತುತ ಸಂಸದ ಮಹಮ್ಮದ್ ಸಲೀಂ.
ಈ ಮುನ್ನ ಮುಸ್ಲಿಮರು ತಮ್ಮ ಪ್ರವಾದಿ ಮಹಮ್ಮದರಿಗೆ ನೀಡುವ ಗೌರವವನ್ನೇ ಕ್ರೈಸ್ತ ಪ್ರವಾದಿ ಜೀಸಸ್‌ಗೂ ಮತ್ತು ಪವಿತ್ರ ಗ್ರಂಥ ಬೈಬಲ್‌ಗೂ ನೀಡುತ್ತಿದ್ದರು. ಆದರೆ ಕ್ರೈಸ್ತರು ಪ್ರವಾದಿ ಮಹಮ್ಮದ್ ಅವರನ್ನು ಅಧಿಕಾರ ಲಾಲಸೆಯ, ಸ್ವಾರ್ಥಿ ನಾಯಕ ಮತ್ತು ಖಡ್ಗದ ಮೊನೆಯಲ್ಲಿ ಇಸ್ಲಾಂನ್ನು ಹರಡುವ ವ್ಯಕ್ತಿಯಾಗಿ ಚಿತ್ರಿಸಿದ ಬಳಿಕ ಈ ಗೌರವ ಅಥವಾ ಸಾಮರಸ್ಯ ಉಳಿಯಲಿಲ್ಲ. ಪೋಪ್ ಬೆನ್‌ಡಿಕ್ಟ್ ಅವರು 2006ರಲ್ಲಿ ಜರ್ಮನಿಯಲ್ಲಿ ಮಾಡಿದ ಭಾಷಣದಲ್ಲಿ ಇಸ್ಲಾಂ ಒಂದು 'ಉಗ್ರವಾದ ನಂಬಿಕೆ' ಎಂದು ಬಹಿರಂಗವಾಗಿಯೇ ಹೇಳಿದ ನಂತರ ಎರಡೂ ಧರ್ಮಗಳ ಸಂಬಂಧ ಇನ್ನೂ ಹದಗೆಟ್ಟಿತ್ತು. ಆದರೆ ತಮ್ಮ ಮಾತುಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳಲಾಗಿದೆ ಎಂದು ಬಳಿಕ ಪೋಪ್ ಸಮಜಾಯಿಷಿ ನೀಡಿದ್ದರು. ಅವರು ಟರ್ಕಿಯ ಬ್ಲೂ ಮಾಸ್ಕ್‌ಗೆ (ಮಸೀದಿ) ಭೇಟಿ ನೀಡಿ ಇಮಾಮ್ ಪ್ರಾರ್ಥನೆ ಸಲ್ಲಿಸಿದ್ದರು. ಕಳೆದ ವರ್ಷ ಸುಮಾರು 137 ಮುಸ್ಲಿಂ ಪಂಡಿತರು ಸಲ್ಲಿಸಿದ ಬೇಡಿಕೆಯನ್ನು ಗೌರವಿಸುವ ನಿಟ್ಟಿನಲ್ಲಿ ಅಂತಿಮವಾಗಿ ಅವರು ಈ ಬೃಹತ್ ಸಮಾವೇಶ ಆಯೋಜಿಸಿದ್ದಾರೆ.
ನವೆಂಬರ್‌ನಲ್ಲಿ ನಡೆಯುವ ಮೂರು ದಿನಗಳ ಶೃಂಗ ಸಮ್ಮೇಳನದಲ್ಲಿ ಎರಡೂ ಧರ್ಮಗಳು 'ದೇವರು ಮತ್ತು ನೆರೆಯವರನ್ನು ಪ್ರೀತಿಸುವುದು' ಮತ್ತು 'ಮಾನವೀಯ ಗೌರವ'ಗಳನ್ನು ಚರ್ಚಿಸಲಿವೆ.
ಟಿಎಸ್‌ಐ
ಅಕ್ರಂ ಹಕ್
ನ್ಯಾಟೋ: ಭಿನ್ನಮತ
ಒಮ್ಮತದ ನಿರ್ಣಯ ಸಾಧ್ಯವೆ?
ಕ್ರೊವೇಷಿಯಾಕ್ಕಷ್ಟೇ ನ್ಯಾಟೋ ಸೇರಲು ಸಮ್ಮತಿ
ಯುರೋಪ್‌ನ ಪೂರ್ವ ರಾಷ್ಟ್ರಗಳನ್ನು ನ್ಯಾಟೋ (ನಾರ್ತ್ ಅಟ್ಲಾಂಟಿಕ್ ಟ್ರೀಟಿ ಆರ್ಗನೈಸೇಷನ್) ತೆಕ್ಕೆಗೆ ಸೇರಿಸಿಕೊಳ್ಳುವ ಕುರಿತ ಭಿನ್ನಾಭಿಪ್ರಾಯಗಳನ್ನು ಪರಿಹರಿಸಿಕೊಳ್ಳುವಲ್ಲಿ ಸಂಘಟನೆಯ ಮಿತ್ರ ದೇಶಗಳು ವಿಫಲವಾಗಿವೆ. ಆ ಪ್ರದೇಶಗಳಿಂದ ಸದಸ್ಯತ್ವಕ್ಕಾಗಿ ಹಲವಾರು ಬೇಡಿಕೆಗಳು ಹರಿದು ಬರುತ್ತಿವೆ. ನ್ಯಾಟೋ ಸೇರಲು ಪ್ರಯತ್ನಿಸುತ್ತಿರುವ ಐದು ದೇಶಗಳಲ್ಲಿ ಕ್ರೊವೇಷಿಯಾಕ್ಕೆ ಮಾತ್ರ ಸಂಪೂರ್ಣ ಬೆಂಬಲ ದೊರೆತಿದೆ. ಅದು ಮುಂದಿನ ತಿಂಗಳು ಅಧಿಕೃತ ಆಹ್ವಾನವೂ ಪಡೆಯುವ ಸಾಧ್ಯತೆಗಳಿವೆ. "ಬಹುಮತದ ಆಧಾರದಲ್ಲಿ ಸದಸ್ಯತ್ವ ನೀಡುವುದಿಲ್ಲ, ಒಮ್ಮತದ ನಿರ್ಣಯಕ್ಕೇ ಬೆಲೆ" ಎಂದು ನ್ಯಾಟೋ ಪ್ರಧಾನ ಕಾರ್ಯದರ್ಶಿ ಈಗಾಗಲೇ ತಿಳಿಸಿದ್ದಾರೆ. ಮುಖ್ಯವಾಗಿ ಜಾರ್ಜಿಯಾ ಮತ್ತು ಉಕ್ರೇನ್‌ಗೆ ಮಧ್ಯಂತರ ಸದಸ್ಯತ್ವದ ಪ್ರಸ್ತಾಪವನ್ನು ಮುಂದಿಡಬೇಕೆ ಎಂಬ ವಿಚಾರದಲ್ಲಿ ಒಮ್ಮತವಿಲ್ಲ. ಕೆಲ ಸದಸ್ಯ ರಾಷ್ಟ್ರಗಳು ಈ ನಿಟ್ಟಿನಲ್ಲಿ ಮುಂದುವರಿಯಲು ಒತ್ತಾಯಿಸಿದರೆ, ಇನ್ನೂ ಕೆಲ ರಾಷ್ಟ್ರಗಳು ರಷ್ಯಾ ವಿರೋಧ ಕಟ್ಟಿಕೊಳ್ಳುವ ಕಳವಳ ವ್ಯಕ್ತಪಡಿಸಿವೆ. ಈ ನಡುವೆ "ಅಫ್ಘಾನಿಸ್ತಾನದಲ್ಲಿ ಸೇನಾ ನಿಯೋಜನೆ ಕುರಿತಂತೆ ನ್ಯಾಟೋ ಒಮ್ಮತಕ್ಕೆ ಬರಬೇಕು. ಮೈತ್ರಿ ದೇಶಗಳು ಕೇವಲ ಅಭಿವೃದ್ಧಿ ಕಾರ್ಯಗಳತ್ತ ಮಾತ್ರ ಗಮನ ಹರಿಸುವುದು ತರವಲ್ಲ" ಎಂದು ಅಮೆರಿಕ ಕಾರ್ಯದರ್ಶಿ ಕಾಂಡೊಲಿಸಾ ರೈಸ್ ಒತ್ತಾಯಿಸಿದ್ದಾರೆ.
26 ರಾಷ್ಟ್ರಗಳ ಮೈತ್ರಿ ಕೂಟ ಕಳೆದ ದಶಕದಲ್ಲಿ ವೇಗವಾಗಿ ತನ್ನ ವ್ಯಾಪ್ತಿಯನ್ನು ವಿಸ್ತರಿಸಿದೆ. ಆದರೆ ಪೂರ್ವ ದಿಕ್ಕಿನ ರಾಷ್ಟ್ರಗಳನ್ನು ಸಂಘಟನೆಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ನಿರ್ಣಾಯಕ ನಿರ್ಧಾರ ಕೈಗೊಳ್ಳುವ ಮುನ್ನ ಹಲವು ಅಪಸ್ವರಗಳನ್ನು ಕೇಳಬೇಕಾಗಿ ಬಂದಿದೆ. ಮೆಸಡೋನಿಯಾ ಹೆಸರಿನ ಕುರಿತು ಗ್ರೀಸ್ ಮತ್ತು ಮೆಸಡೋನಿಯಾ ನಡುವಿನ 15 ವರ್ಷಗಳ ಹಳೇ ವೈಷಮ್ಯ ಇನ್ನೂ ಪರಿಹಾರವಾಗಿಲ್ಲ. ಮುಂದಿನ ತಿಂಗಳು ರೊಮಾನಿಯಾದ ಬುಷರೆಸ್ಟ್‌ನಲ್ಲಿ ನಡೆಯುವ ಶೃಂಗ ಸಮ್ಮೇಳನದಲ್ಲಿ ಈ ಪುಟ್ಟ ಬಾಲ್ಕನ್ ಗಣರಾಜ್ಯ ಮೆಸಡೋನಿಯಾ ನ್ಯಾಟೋ ಸದಸ್ಯತ್ವ ಪಡೆಯುವಲ್ಲಿ ಇದೇ ವಿಷಯ ಅಡ್ಡಗಾಲಾಗಿದೆ. ನ್ಯಾಟೋ ಸದಸ್ಯ ಗ್ರೀಸ್ ಈ ಪುಟ್ಟ ಬಾಲ್ಕನ್ ದೇಶ ತನ್ನ ಹೆಸರನ್ನು ಬದಲಾಯಿಸಿಕೊಳ್ಳದೆ ಇರುವುದರಿಂದ ಸದಸ್ಯತ್ವ ಕುರಿತ ಮೆಸಡೋನಿಯಾದ ದೀರ್ಘಾವಧಿ ಬೇಡಿಕೆಯನ್ನು ವಿರೋಧಿಸುವುದಾಗಿ ಹೇಳಿದೆ. ಮಾಜಿ ಸೋವಿಯತ್ ದೇಶಗಳಾದ ಉಕ್ರೇನ್ ಮತ್ತು ಜಾರ್ಜಿಯಾಗಳು ನ್ಯಾಟೋ ಸದಸ್ಯತ್ವ ಪಡೆಯಲು ಒಪ್ಪಿಗೆ ನೀಡಿದಲ್ಲಿ ರಷ್ಯಾದ ವಿರೋಧ ಕಟ್ಟಿಕೊಳ್ಳಬೇಕಾದ ಕಾರಣ ಸದಸ್ಯ ರಾಷ್ಟ್ರಗಳು ಒಪ್ಪಿಗೆ ನೀಡಲು ಹಿಂದೇಟು ಹಾಕಿವೆ. "ಯುರೋಪಿಯನ್ ಒಕ್ಕೂಟದ ಜಾಗತಿಕ ದೃಷ್ಟಿಕೋನ ಮೂಲಭೂತವಾಗಿ ಅಮೆರಿಕಗಿಂತ ಭಿನ್ನವಾಗಿದೆ. ಜಾಗತಿಕ ಸಮಸ್ಯೆಗಳನ್ನು ನಿವಾರಿಸುವ ಸಂದರ್ಭದಲ್ಲಿ ಯುರೋಪಿಯನ್ ಒಕ್ಕೂಟ ಬಹುಪಕ್ಷೀಯ ಕಾರ್ಯಾನುಷ್ಠಾನದಲ್ಲಿ ನಂಬಿಕೆ ಇಟ್ಟಿದೆ" ಎನ್ನುತ್ತಾರೆ ಟಿಎಸ್‌ಐ ಜೊತೆ ಮಾತನಾಡಿದ 'ಹೆರಿಟೇಜ್ ಫೌಂಡೇಶನ್'ನ ನ್ಯಾಟೋ- ಯೂರೋಪ್ ವ್ಯವಹಾರಗಳ ತಜ್ಞ ಸ್ಯಾಲಿ ಮೆಕ್‌ನಮರಾ.
ಅಫ್ಘಾನಿಸ್ತಾನದಲ್ಲಿ ನ್ಯಾಟೋ ನೇತೃತ್ವದ ಸುಮಾರು 43,000 ಸೈನಿಕರಿದ್ದಾರೆ. ಆದರೆ ಅನೇಕರು ದೇಶದ ಶಾಂತಿಯುತ ಪ್ರಾಂತ್ಯಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಹೋರಾಟಕ್ಕೆ ಬೆಂಬಲ ನೀಡುವವರು ಮತ್ತು ಅಭಿವೃದ್ಧಿ ಕಾರ್ಯಕ್ರಮಗಳತ್ತ ಗಮನ ನೀಡುವವರು ಎಂಬ ದ್ವಂದ್ವ ನಿಲುವಿನಿಂದ ನ್ಯಾಟೋ ದೇಶಗಳು ಹೊರಬರಬೇಕು ಮತ್ತು ಹೆಚ್ಚಿನ ಸೇನಾ ಸಹಕಾರ ನೀಡಬೇಕು ಎಂದು ಅಮೆರಿಕ ಒತ್ತಾಯಿಸುತ್ತಲೇ ಇದೆ.
ಟಿಎಸ್‌ಐ
ಸೌರಭ್ ಕುಮಾರ್ ಶಾಹಿ