ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

ಇತರ ವಿಭಾಗಗಳು
 
 
ಸಂಪಾದಕೀಯ
ಪ್ರಪಾತಕ್ಕೆ ಬಿದ್ದವರ ಆಶಾಕಿರಣ ಎಚ್‌ಐವಿ ಮಸೂದೆ ಅಂಗೀಕಾರ
Arindam Choudhuri
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು, ದ ಸಂಡೆ ಇಂಡಿಯನ್

ಜಾಗತಿಕ ಸಮಸ್ಯೆಯಾಗಿರುವ ಎಚ್‌ಐವಿ/ಏಡ್ಸ್ ಪಿಡುಗಿನ ನಿಯಂತ್ರಣಕ್ಕಾಗಿ ವಿವಿಧ ಸರ್ಕಾರಗಳು, ನೂರಾರು ಉನ್ನತ ಸಂಶೋಧನಾ ಸಂಸ್ಥೆಗಳು ಮತ್ತು ಸ್ವಯಂಸೇವಾ ಸಂಸ್ಥೆಗಳು ನಡೆಸದ ಸಾಹಸಗಳೇ ಇಲ್ಲ. ಆದರೆ, ನಮ್ಮ ದೇಶದ ಎಚ್‌ಐವಿ/ಏಡ್ಸ್ ಪೀಡಿತರ ಸಂಘಟನೆ ತಮ್ಮ ಹಕ್ಕುಗಳನ್ನು ರಕ್ಷಿಸುವ ಮತ್ತು ಸಾಂವೈಧಾನಿಕ ಭದ್ರತೆ ನೀಡುವ ಎಚ್‌ಐವಿ ಮಸೂದೆಯನ್ನು ಸಂಸತ್‌ನಲ್ಲಿ ಮಂಡಿಸುವಂತೆ ಸರ್ಕಾರದ ಮುಂದೆ ಅಕ್ಷರಶಃ ಅಂಗಲಾಚಬೇಕಾಗಿದೆ. ಎಚ್‌ಐವಿ/ ಏಡ್ಸ್ ಪೀಡಿತರ ಹಿತರಕ್ಷಣೆ ಮತ್ತು ಈ ಮಹಾಮಾರಿಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಅಂತರ್ ರಾಷ್ಟ್ರೀಯ ವಕೀಲರು, ಕಾನೂನು ತಜ್ಞರು, ಕಾರ್ಯಕರ್ತರ ಸಂಘಟನೆಯಾದ 'ಲಾಯರ್‍ಸ್ ಕಲೆಕ್ಟಿವ್'ನ ಎಚ್‌ಐವಿ/ ಏಡ್ಸ್ ಘಟಕ ಸಿದ್ಧಪಡಿಸಿರುವ ಈ ಮಸೂದೆಗೆ ಆರೋಗ್ಯ ಸಚಿವಾಲಯ ಒಪ್ಪಿಗೆ ನೀಡಿದೆ. ನಂತರ 2006ರ ಆಗಸ್ಟ್‌ನಲ್ಲೇ ಕಾನೂನು ಸಚಿವಾಲಯಕ್ಕೆ ಸಂಸತ್ ಉಭಯ ಸದನಗಳಲ್ಲಿ ಮಂಡಿಸಲು ಕಳಿಸಿಕೊಡಲಾಗಿದೆ. ಆಗಿನಿಂದಲೂ ಮಸೂದೆ ಮಂಡನೆಯ ಮುಹೂರ್ತಕ್ಕೆ ಮತ್ತು ನಮ್ಮ ಸಂಸದರ ಒಪ್ಪಿಗೆ ಪಡೆಯುವ ಗಳಿಗೆಗೆ ಕಾಯುತ್ತಾ ಕಾನೂನು ಸಚಿವಾಲಯದಲ್ಲಿ ದೂಳು ತಿನ್ನುತ್ತಿದೆ! ಅಂತಹದ್ದನ್ನು ಗಮನಿಸಿ ಪೂರಕ ಕ್ರಮಕೈಗೊಳ್ಳುವುದಿರಲಿ, ದೇಶದಲ್ಲಿರುವ 25ರಿಂದ 30 ಲಕ್ಷ ಎಚ್‌ಐವಿ/ಏಡ್ಸ್ ಪೀಡಿತರ ಬದುಕಿನ ಹಕ್ಕಿನ ಪ್ರಶ್ನೆಯಾಗಿದೆ ಈ ಮಸೂದೆ ಎಂಬುದನ್ನು ಅರಿತೂ ನಮ್ಮ ಸರ್ಕಾರ ತನ್ನ ಎಂದಿನ ವಿಳಂಬ ಧೋರಣೆಗೆ ಶರಣಾಗಿದೆ! ಸಾಮೂಹಿಕ ಅನಕ್ಷರತೆ, ಮಾಹಿತಿ ಅಲಭ್ಯತೆ ಮತ್ತು ತೀರಾ ಸಂಪ್ರದಾಯಸ್ಥ ಸಾಮಾಜಿಕ ಚೌಕಟ್ಟಿನ ನಮ್ಮಂತಹ ದೇಶದಲ್ಲಿ ಎಚ್‌ಐವಿ/ ಏಡ್ಸ್ ಪೀಡಿತರ ವಿರುದ್ಧದ ತಾರತಮ್ಯಗಳು ತೀರಾ ಬದುಕಿನ ಹಕ್ಕನ್ನೇ ಕಿತ್ತುಕೊಳ್ಳುವ ಮಟ್ಟಿಗೂ ಹೋಗಿವೆ. ಇದೆಲ್ಲಾ ಸರ್ಕಾರಕ್ಕೆ ತಿಳಿದಿಲ್ಲವೆಂದೇನೂ ಅಲ್ಲ. ಜೊತೆಗೆ ಎಚ್‌ಐವಿ ಪೀಡಿತರು ಎಂಬುದು ತಿಳಿಯುತ್ತಲೇ ಅಂತಹವರನ್ನು ನಿಷ್ಕರುಣೆಯಿಂದ ಕೆಲಸದಿಂದ ಕಿತ್ತು ಹಾಕುವುದು, ಶಾಲಾ- ಕಾಲೇಜಿನಿಂದ ಹೊರ ಹಾಕುವುದು ಮತ್ತು ಸರ್ಕಾರಿ ಆಸ್ಪತ್ರೆಗಳಿಂದ ಕೂಡ ಹೊರ ಹಾಕಿ ಕನಿಷ್ಠ ಔಷಧೋಪಚಾರವಂಚಿತರನ್ನಾಗಿ ಮಾಡಿರುವ ನೂರಾರು ನಿದರ್ಶನಗಳು ಕೂಡ ನಮ್ಮ ಕಣ್ಮುಂದಿವೆ. ಅದರಲ್ಲೂ ಎಚ್‌ಐವಿ/ ಏಡ್ಸ್ ಪೀಡಿತರಲ್ಲಿ ಶೇ. 33ರಷ್ಟಿರುವ ಮಹಿಳೆಯರು ಮತ್ತು ಮಕ್ಕಳೇ ಬಹುತೇಕ ಸಂದರ್ಭದಲ್ಲಿ ಇಂತಹ ಅಮಾನವೀಯ ತಾರತಮ್ಯಕ್ಕೆ ಒಳಗಾಗುವುದು ಎಂಬುದು ಕೂಡ ಸರ್ಕಾರಕ್ಕೆ ಗೊತ್ತೇ ಇದೆ. ಅಮಾನುಷ ಹಿಂಸೆ, ಅದರ ಹಿಂದೆಯೇ ಮನೆಯಿಂದ ಹೊರದಬ್ಬುವುದು ಸೇರಿದಂತೆ ಇಂತಹ ವಿಷಯಗಳಲ್ಲಿ ಸದಾ ಮಹಿಳೆ ಮತ್ತು ಮಕ್ಕಳೇ ಬಲಿಪಶುಗಳಾಗುವುದು. ಇದು ದೇಶದಲ್ಲಿ ಎರಡು ದಶಕಗಳ ಹಿಂದೆ ಮೊದಲ ಏಡ್ಸ್ ಪ್ರಕರಣ ಪತ್ತೆಯಾದ ದಿನದಿಂದ ಇಲ್ಲಿಯತನಕ ನಡೆದುಕೊಂಡ ಬಂದ ಹೀನಾಯ ಪರಂಪರೆ. ಅಷ್ಟಾಗಿಯೂ ಅಂಥವರಿಗೆ ಭದ್ರತೆ ನೀಡುವ ನಿಟ್ಟಿನಲ್ಲಿ ಏನನ್ನೂ ಮಾಡದ ಸರ್ಕಾರ, ಪರೋಕ್ಷವಾಗಿ ಎಲ್ಲಾ ರೀತಿಯ ತಾರತಮ್ಯ, ನಿಂದನೆ, ಹಿಂಸೆಗಳಿಗೆ ದಾರಿಮಾಡಿಕೊಡುತ್ತಿದೆ. ಇಂತಹ ಸ್ಥಿತಿಯಲ್ಲಿ ಎಚ್‌ಐವಿ ಮಸೂದೆ ಒಂದು ಹೊಸ ಭರವಸೆಯಾಗಿ ಬಂದಿದೆ. ಅದು ಇಂತಹ ತಾರತಮ್ಯ ಮತ್ತು ಹಿಂಸೆಯ ಬಗ್ಗೆ ಮಾತ್ರ ಹೇಳುತ್ತಿಲ್ಲ, ಜೊತೆಗೆ ಅಂತಹ ದೌರ್ಭಾಗ್ಯವಂತರಿಗೆ ಸಾಂವೈಧಾನಿಕ ಬೆಂಬಲವನ್ನೂ ನೀಡಲಿದೆ. ಆ ಮಸೂದೆ ಸಂಸತ್‌ನಲ್ಲಿ ಮಂಡನೆಯಾಗಿ ಕಾನೂನಾಗಿ ಒಮ್ಮೆ ಜಾರಿಗೆ ಬಂದರೆ ಅದನ್ನು ಉಲ್ಲಂಘಿಸಿ ತಮ್ಮ ವಿರುದ್ಧ ಯಾವುದೇ ತಾರತಮ್ಯ ಮಾಡುವ ವ್ಯಕ್ತಿಯ ಮೇಲೆ ಕಾನೂನು ಕ್ರಮಕ್ಕೆ ಒತ್ತಾಯಿಸುವ ಹಕ್ಕು ಎಚ್‌ಐವಿ/ ಏಡ್ಸ್‌ಪೀಡಿತರಿಗೆ ಇರುತ್ತದೆ. ಇಂತಹ ಒಂದು ಮಸೂದೆಯ ಬಗ್ಗೆ ಆಶಾಭಾವನೆಯಿಂದ ಮುಂದುವರಿಯಬೇಕಾಗಿದ್ದ ಸರ್ಕಾರ ದಿವ್ಯ ಮೌನಕ್ಕೆ ಶರಣಾಗಿರುವುದು ಆತಂಕದ ಸಂಗತಿಯೇ ಸರಿ. ಎಚ್‌ಐವಿ/ಏಡ್ಸ್ ಪೀಡಿತ ಜನರ ಬಗ್ಗೆ ಸರ್ಕಾರದ ನಿರ್ಲಕ್ಷ್ಯ ಈ ಮಸೂದೆಯ ವಿಷಯವೊಂದರಲ್ಲೇ ಅಲ್ಲ, ಅವರ ಚಿಕಿತ್ಸೆಗಾಗಿ ನೀಡುವ ಹಣಕಾಸು ವಿಷಯದಲ್ಲೂ ಮುಂದುವರಿದಿದೆ. ದೇಶದ 25-30 ಲಕ್ಷ ಮಂದಿ ಎಚ್‌ಐವಿ/ ಏಡ್ಸ್ ಪೀಡಿತರಲ್ಲಿ ಬಹುಪಾಲು ಮಂದಿ ತೀರಾ ಕಡುಬಡತನದಲ್ಲೇ ಜೀವನ ಸಾಗಿಸುತ್ತಿದ್ದಾರೆ ಮತ್ತು ದುಬಾರಿ ಬೆಲೆಯ ಎಆರ್‌ಟಿ (ಆಂಟಿ- ರೆಟ್ರೋವೈರಲ್ ಥೆರಫಿ) ಪಡೆಯುವುದು ಅವರಿಗೆ ಅಸಾಧ್ಯ ಎಂಬುದನ್ನು ತಿಳಿದೂ ಸರ್ಕಾರ ಬಜೆಟ್ ಅನುದಾನದ ಹೆಸರಲ್ಲಿ ಪುಡಿಗಾಸನ್ನು ನೀಡುತ್ತಿದೆ! ಒಂದು ಅಂದಾಜಿನ ಪ್ರಕಾರ ದೇಶದ ಎಲ್ಲಾ ಎಚ್‌ಐವಿ/ ಏಡ್ಸ್ ಪೀಡಿತರಿಗೆ ಉಚಿತವಾಗಿ ಎಆರ್‌ಟಿ ಒದಗಿಸಲು (ಒಬ್ಬ ಸೋಂಕುಪೀಡಿತರಿಗೆ ವರ್ಷಕ್ಕೆ 5000 ರೂ. ವೆಚ್ಚದ ಪ್ರಕಾರ) 1250 ಕೋಟಿ ರೂಪಾಯಿ ಸಾಕಾಗುತ್ತದೆ. ಒಟ್ಟು ಸೋಂಕಿತರಲ್ಲಿ ಐದು ಲಕ್ಷ ಮಂದಿಗೆ ಸ್ವತಃ ಹಣ ತೆತ್ತು ಎಆರ್‌ಟಿ ಖರೀದಿಸುವ ಸಾಮರ್ಥ್ಯವಿದೆ ಎಂದುಕೊಂಡರೆ, ಇನ್ನುಳಿದವರಿಗೆ ಒಂದು ಸಾವಿರ ಕೋಟಿ ರೂಪಾಯಿ ಸಾಕಾಗುತ್ತದೆ. ಆ ಮೊತ್ತದ ಹಣ ಕ್ರೋಡೀಕರಣ ಸರ್ಕಾರಕ್ಕೆ ದೊಡ್ಡದಲ್ಲ. ಆದರೆ, ಇದಕ್ಕೆ ವ್ಯತಿರಿಕ್ತವಾಗಿ ಕಳೆದ ಬಜೆಟ್‌ನಲ್ಲಿ ಹಣಕಾಸು ಸಚಿವರು ಅನುದಾನ ತೆಗೆದಿರಿಸಿದ್ದು ಕೇವಲ 969 ಕೋಟಿ. ಅದೂ ಎಆರ್‌ಟಿ ಖರೀದಿಸಿ ಉಚಿತ ಚಿಕಿತ್ಸೆ ನೀಡಲಲ್ಲ! ಬದಲಾಗಿ ಏಡ್ಸ್ ನಿಯಂತ್ರಣ ನಿಟ್ಟಿನಲ್ಲಿ ಕೈಗೊಳ್ಳುವ ಉಚಿತ ಕಾಂಡೋಮ್ ವಿತರಣೆ, ರಕ್ತ ತಪಾಸಣೆ, ಸುರಕ್ಷಿತ ರಕ್ತ ನೀಡುವಿಕೆ ಮುಂತಾದ ಕಾರ್ಯಗಳಿಗೆ. ಹಾಗಾಗಿ ಸೋಂಕಿತರ ಚಿಕಿತ್ಸೆಗೆ ಉಳಿದದ್ದು ಬಹುತೇಕ ಶೂನ್ಯವೇ! ಅದಕ್ಕಿಂತ ವಿಚಿತ್ರವೆಂದರೆ, ಮಾನ್ಯ ಹಣಕಾಸು ಸಚಿವರು ಬಜೆಟ್‌ನಲ್ಲಿ ಪ್ರಸ್ತಾಪಿಸಿದ 969 ಕೋಟಿ ಅನುದಾನದಲಿ, ವಾಸ್ತವವಾಗಿ ಬಿಡುಗಡೆಯಾಗಿರುವುದು ಕೇವಲ 720 ಕೋಟಿ ರೂಪಾಯಿ ಮಾತ್ರ. ಇಂತಹ ನಿಕೃಷ್ಟ ಅನುದಾನದ ಪರಿಣಾಮವಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೋ) 25ರಿಂದ 30 ಲಕ್ಷ ಮಂದಿಯ ಪೈಕಿ ಕೇವಲ 1.3 ಲಕ್ಷ ಜನರಿಗೆ ಮಾತ್ರ ಉಚಿತ ಚಿಕಿತ್ಸೆ ಕೊಡಿಸಲು ಸಾಧ್ಯವಾಗಿದೆ. ಮುಂದಿನ 2009ರ ವೇಳೆಗೆ ಹೆಚ್ಚುವರಿಯಾಗಿ 45 ಸಾವಿರ ಜನರಿಗೆ ಉಚಿತ ಚಿಕಿತ್ಸೆಯನ್ನು ವಿಸ್ತರಿಸುವ ನಿರೀಕ್ಷೆಯಲ್ಲಿ ನ್ಯಾಕೋ ಇದೆ! ಇಂತಹ ಸ್ಥಿತಿಯಲ್ಲಿ ಎಚ್‌ಐವಿ ಮಸೂದೆಯನ್ನು ಈ ಬಾರಿಯ ಬಜೆಟ್ ಅಧಿವೇಶನದಲ್ಲೇ ಸಂಸತ್‌ನ ಉಭಯ ಸದನಗಳಲ್ಲಿ ಮಂಡಿಸಿ ಅನುಮೋದನೆ ಪಡೆಯಬೇಕಾದುದು ತುರ್ತಾಗಿ ಆಗಲೇಬೇಕಿರುವ ಮೊದಲನೇ ಕಾರ್ಯ. ಮತ್ತೊಂದು, (ಸರ್ಕಾರಕ್ಕೆ ನಾಚಿಗೆಗೇಡು!) ಪರಿಸ್ಥಿತಿಯ ಗಂಭೀರತೆಯನ್ನು ಅರ್ಥಮಾಡಿಕೊಂಡು, ಎರಡನೇ ಹಂತದ ಚಿಕಿತ್ಸೆಯ ಅಗತ್ಯವಿರುವ ಎಲ್ಲರಿಗೂ ಎರಡು ವರ್ಷಗಳ ಕಾಲ ಉಚಿತ ಚಿಕಿತ್ಸೆ ನೀಡಲು ಮುಂದಾಗಿರುವ ಮೆಲಿಂದಾ ಗೇಟ್ಸ್ ಪ್ರತಿಷ್ಠಾನದ ಕಾರ್ಯವನ್ನು ಶ್ಲಾಘಿಸಬೇಕಿದೆ. ಏಕೆಂದರೆ, ಮೊದಲನೆ ಹಂತದ ಚಿಕಿತ್ಸೆಗೆ ಸ್ಪಂದಿಸದಿರುವವರಿಗೆ ಎರಡನೇ ಹಂತದ ಚಿಕಿತ್ಸೆ ನೀಡಲು ಹೆಚ್ಚಿನ ವೆಚ್ಚ ತಗಲುತ್ತದೆ. ಹಾಗಿದ್ದರೂ ಸಂಸ್ಥೆ ಜೀವನದ ಆಸೆಯನ್ನೇ ಬಿಟ್ಟವರ ಬದುಕಿನಲ್ಲಿ ಕೂಡಾ ನೆಮ್ಮದಿ ಮೂಡಿಸುವ ಪ್ರಯತ್ನ ಮಾಡುತ್ತಿದೆ. ಇದಕ್ಕೆ ಪ್ರೋತ್ಸಾಹ ನೀಡದಿದ್ದರೆ ಹೇಗೆ? ಇದರೊಂದಿಗೆ ನಮ್ಮ ಸರ್ಕಾರ, ಸೋಂಕಿತರ ಅಳಿವು- ಉಳಿವಿನ ಪ್ರಶ್ನೆಯಾಗಿರುವ ಇಂತಹ ವಿಷಯದಲ್ಲಿ ತಾನು ತೋರುವ ಸಣ್ಣ ನಿರ್ಲಕ್ಷ್ಯ ಕೂಡ ಎಚ್‌ಐವಿ ಸೋಂಕಿತರ ಸಾಲಿಗೆ ಹೊಸ ಸೇರ್ಪಡೆಗಳನ್ನು ನೀಡುತ್ತದೆ ಅಥವಾ ಈಗಾಗಲೇ ಸೋಂಕಿನಿಂದ ಜರ್ಜರಿತರಾದವರಿಗೆ ಮತ್ತೊಂದು ಅವಮಾನದ, ನಿಂದನೆಯ ದಿನವನ್ನು ಕೊಡುಗೆಯಾಗಿ ನೀಡುತ್ತದೆ ಎಂಬುದನ್ನು ಅರಿಯಬೇಕಿದೆ. ಹಾಗೇ ನಮ್ಮಂತಹ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬ ನಾಗರಿಕನಿಗೂ ಬದುಕುವ ಹಕ್ಕಿದೆ; ಅದೂ ಗೌರವಯುತ ಬದುಕು ನಡೆಸುವ ಹಕ್ಕಿದೆ. ಅಂತಹ ಪರಮೋಚ್ಛ ಹಕ್ಕನ್ನು ನಿರಾಕರಿಸುವುದು ಘೋರ ಅಪರಾಧ ಎಂಬುದನ್ನಾದರೂ ಅರ್ಥಮಾಡಿಕೊಳ್ಳುತ್ತದೆ ಎಂದು ಆಶಿಸೋಣವೇ!

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .