ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search

 
ಇತರ ವಿಭಾಗಗಳು
 
ಲಂಗರು:ಮಾದಕ ವ್ಯಸನ  
ಕರಾಳ ಚಕ್ರವ್ಯೂಹ
 

ಮಾದಕ ವ್ಯಸನ ಎನ್ನುವುದು ವ್ಯಕ್ತಿಯೊಬ್ಬನ ಅಥವಾ ಕುಟುಂಬವೊಂದರ ವೈಯಕ್ತಿಕ ಸಮಸ್ಯೆಯಷ್ಟೇ ಆಗಿ ಉಳಿದಿಲ್ಲ. ಅದು ದೇಶದ ರಕ್ಷಣಾ ವ್ಯವಸ್ಥೆಯ ಬುಡಕ್ಕೇ ಕೊಡಲಿಯೇಟು ನೀಡುವಷ್ಟರ ಮಟ್ಟಿಗೆ ಬೆಳೆದು ನಿಂತಿದೆ ಎನ್ನುತ್ತಾರೆ ಟಿಎಸ್'ಐನ ಡಿ.ಎಸ್. ಶ್ರೀಕಲಾ ಮತ್ತು ಚಿತ್ರಾ ಕರ್ಕೇರಾ

ಇದೊಂದು ತರಹ ಮಹಾಭಾರತದಲ್ಲಿನ ಚಕ್ರವ್ಯೂಹವಿದ್ದಂತೆ. ಈ ಲೋಕ ಪ್ರವೇಶಿಸುವಾಗ ರೋಮಾಂಚನ ವಾಗುತ್ತದೆ. ಆದರೆ, ಒಮ್ಮೆ ಈ ಲೋಕದೊಳಕ್ಕೆ ಕಾಲಿಟ್ಟ ಮೇಲೆ ಹೊರಬರುವುದು ಮಾತ್ರ ಅಸಾಧ್ಯದ ಮಾತು. ಕುತೂಹಲದ ನೆಲೆಯಲ್ಲಿ ಆರಂಭವಾಗುವ ಮಾದಕ ವ್ಯಸನ ನಂತರ ಬದುಕನ್ನೇ ಕಬಳಿಸಿ ಬಿಡುವುದು ಸಹಜ. ಈ ನಡುವೆಯೂ ಕೆಲವರು ಆ ಚಕ್ರವ್ಯೂಹದಿಂದ ಹೊರಬರುವ ಯತ್ನದಲ್ಲಿ ನಿರತರಾಗಿದ್ದಾರೆ. ಅಂತಹವರಿಗೆ ಹಲವು ಸಂಘ ಸಂಸ್ಥೆಗಳು ಆಸರೆಯಾಗಿ ನಿಂತಿವೆ. ಬೆಂಗಳೂರಿನಲ್ಲಿರುವ ಅಂತಹ ಒಂದು ಆಸರೆಯ ತಾಣ 'ನ್ಯೂ ಡಾನ್' ಪ್ರವೇಶಿಸಿದಾಗ ಎದುರಾದ ವ್ಯಕ್ತಿ ಪ್ರಶಾಂತ್ (ಹೆಸರು ಬದಲಿಸಲಾಗಿದೆ). ಅಳುಕಿಲ್ಲದ ಮುಖಭಾವ. ಕಣ್ಣುಗಳಲ್ಲಿ ಸಾಧಿಸಲೇಬೇಕೆಂಬ ಛಲ. ನೋಟ ಅಷ್ಟೇ ತೀಕ್ಷ್ಣ. ಆ ಕಂಗಳಲ್ಲಿ ಇದ್ದದ್ದು ಐಎಎಸ್ ಅಧಿಕಾರಿ ಆಗಬೇಕೆಂಬ ಕನಸು. ಆದರೆ ಯೌವ್ವನಕ್ಕೆ ಬಂದಾಗ ಕನಸು ಬದಲಾಯಿತು. ಸ್ಮಗ್ಲರ್ ಆಗಬೇಕೆನ್ನುವ ತುಡಿತ ಹುಟ್ಟಿತು! ಇದು ತನ್ನ 12ನೇ ವರ್ಷದಲ್ಲೇ ಮಾದಕ ದ್ರವ್ಯಗಳ ವ್ಯಸನಕ್ಕೆ ಬಲಿಯಾಗಿ ಅದರಿಂದ ಹೊರಬರಬೇಕೆಂಬ ಪ್ರಯತ್ನದಲ್ಲಿರುವ ಪ್ರಶಾಂತ್ ಎಂಬ 24ರ ಯುವಕನ ಭವಿಷ್ಯ ಎಡವಿ ಬಿದ್ದ ಪರಿ. "ನಾನು 12ರ ವಯಸ್ಸಿನಲ್ಲಿದ್ದಾಗಲೇ ಕುತೂಹಲಕ್ಕಾಗಿ ಸ್ಲಮ್ ಮಕ್ಕಳೊಂದಿಗೆ ಸೇರಿ ಡ್ರಗ್ ಚಟಕ್ಕೆ ಬಲಿಯಾದೆ. ಆಮೇಲೆ ಡ್ರಗ್ ಸೇವನೆಗಾಗಿ ಡ್ರಗ್ ಮಾರಾಟ ಮಾಡಿ ಹಣ ಸಂಪಾದಿಸಲಾರಂಭಿಸಿದೆ. ಗಾಂಜಾ, ಹೆರಾಯಿನ್, ಚರಸ್ ಎಲ್ಲವನ್ನೂ ಮುಂಬೈನಿಂದ ತಂದು ಮಾರುತ್ತಿದ್ದೆ. ಆರಂಭದಲ್ಲಿ ದಿನವೊಂದಕ್ಕೆ 5- 6 ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದೆ. ನಂತರ ಅದು ಹದಿನೈದಾಯಿತು. ಆಮೇಲೆ ಇಪ್ಪತ್ತಾಯಿತು. ಅದೂ ಸಾಕಾಗದೆ ಕೊನೆಗೆ ನಾಲಿಗೆ ಅಡಿ ಭಾಗಕ್ಕೆ ಮರಿನಾಗರಹಾವಿನಿಂದ ಎರಡು ಬಾರಿ ಕಚ್ಚಿಸಿಕೊಂಡಿದ್ದೆ. ಇವೆಲ್ಲವನ್ನೂ ಕೇವಲ ನಶಾ ಅನುಭವಿಸುವುದಕ್ಕಾಗಿಯೇ ಮಾಡುತ್ತಿದ್ದೆ. ಡ್ರಗ್ಸ್ ಇಲ್ಲದೆ ಇದ್ದರೆ ಸತ್ತೇ ಹೋಗುತ್ತೇನೆಂಬ ಸ್ಥಿತಿ ತಲುಪಿದ್ದೆ. ಏಳು ವರ್ಷಗಳ ಕಾಲ ನಿರಂತರವಾಗಿ ಡ್ರಗ್ಸ್ ಇಂಜೆಕ್ಟ್ ಮಾಡಿಕೊಂಡಿದ್ದೇನೆ" ಎನ್ನುತ್ತಾರೆ ಪುನರ್'ವಸತಿ ಕೇಂದ್ರದಲ್ಲಿ ಭವಿಷ್ಯವನ್ನು ಅರಸುತ್ತಿರುವ ಪ್ರಶಾಂತ್. ದೇಶದಲ್ಲಿಂದು ಪ್ರಶಾಂತ್ ತರಹ 'ಚಕ್ರವ್ಯೂಹ' ಪ್ರವೇಶಿಸಿದ 15 ದಶಲಕ್ಷಕ್ಕಿಂತಲೂ ಹೆಚ್ಚು ಮಾದಕವ್ಯಸನಿಗಳಿದ್ದಾರೆ ಎಂಬುದನ್ನು ಸಮೀಕ್ಷೆಯೊಂದು ಹೇಳುತ್ತದೆ. ತಮಿಳುನಾಡು, ಕೇರಳ, ಆಂಧ್ರಪ್ರದೇಶ, ಉತ್ತರ ಪ್ರದೇಶ, ಬಿಹಾರ, ಮಧ್ಯಪ್ರದೇಶ ಮತ್ತು ಕರ್ನಾಟಕ ದೇಶದಲ್ಲಿರುವ ಮಾದಕ ವಸ್ತುಗಳ ಪ್ರಮುಖ ಕಳ್ಳಸಾಗಣೆ ಕೇಂದ್ರಗಳು. ನಾರ್ಕೋಟಿಕ್ ಬ್ಯೂರೋ ಹತ್ತು ವರ್ಷಗಳಲ್ಲಿ (1996- 2006) ತಾವು ವಶಪಡಿಸಿಕೊಂಡ ಮಾದಕ ವಸ್ತುಗಳ ಕುರಿತು ದಾಖಲೆಯನ್ನು ಇತ್ತೀಚೆಗೆ ಬಿಡುಗಡೆಗೊಳಿಸಿತ್ತು. 21,895 ಕೆ.ಜಿ. ಅಫೀಮ್, 8,55,667 ಕೆ.ಜಿ. ಗಾಂಜಾ, 48,278 ಕೆ.ಜಿ. ಹಶಿಶ್ ಮತ್ತು 10,147 ಕೆ.ಜಿ. ಹೆರಾಯಿನ್ ನಾರ್ಕೋಟಿಕ್ ಬ್ಯುರೋ ವಶಪಡಿಸಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ವಿದೇಶಿಯರೂ ಸೇರಿದಂತೆ 1,42,337 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಇವರಲ್ಲಿ 38,030 ಮಂದಿ ತಪ್ಪಿತಸ್ಥರು ಎಂಬ ತೀರ್ಪು ಬಂದಿತ್ತು. ಉಳಿದ 44,656 ಮಂದಿಯನ್ನು ಖುಲಾಸೆಗೊಂಡಿದ್ದರು. ಇಲ್ಲಿ ಗಮನಿಸಬೇಕಾದ ಇನ್ನೊಂದು ಪ್ರಮುಖ ಅಂಶವೆಂದರೆ ಪೊಲೀಸರು ಮತ್ತು ಭದ್ರತಾ ಪಡೆಯ ಕೈಗೆ ಸಿಕ್ಕಿದ್ದು ಇಷ್ಟು. ಇನ್ನು ಸಿಗದೇ ಇದ್ದ ಮಾದಕ ವಸ್ತುವಿನ ಪ್ರಮಾಣ ಎಷ್ಟು!? ದುರಂತವೆಂದರೆ ಆಧುನೀಕರಣ ಹಾಗೂ ಜಾಗತೀಕರಣದ ಹಿನ್ನೆಲೆಯಲ್ಲಿ ಯೌವ್ವನದಲ್ಲಿಯೇ ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ಪಡೆಯುವ ಯುವ ಜನಾಂಗವೇ ಈ ಚಕ್ರವ್ಯೂಹದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬಂಧಿಯಾಗುತ್ತಿರುವುದು. ಕರ್ನಾಟಕದ ಮಟ್ಟಿಗಿನ ದುರಂತವೆಂದರೆ ರಾಜಧಾನಿ ಬೆಂಗಳೂರು ಮಾದಕ ವಸ್ತುವಿನ ಅಡ್ಡಾ ಆಗಿ ಪರಿವರ್ತನೆಗೊಂಡಿರುವುದು. ಬೆಂಗಳೂರು ಮಾದಕ ಚಕ್ರವ್ಯೂಹದ ಕೇಂದ್ರ ಬಿಂದುವಾಗಿ ಹೊರ ಹೊಮ್ಮುತ್ತಿರುವುದು ವಿಷಾದಕರ. ಬೆಂಗಳೂರಿನಲ್ಲಿ 1999ರ ಜೂನ್'ನಲ್ಲಿ ಶ್ರೀಲಂಕಾ ಪ್ರಜೆಯಿಂದ 10.6 ಕೆ.ಜಿ. ಹೆರಾಯಿನ್ ವಶಪಡಿಸಿಕೊಳ್ಳಲಾಗಿತ್ತು. 2005ರಲ್ಲಿ ನೈಜೀರಿಯಾದ ವ್ಯಕ್ತಿಯೊಬ್ಬನಿಂದ 11 ಕೆ.ಜಿ. ಕೊಕೇನ್, 2007ರ ಮೇ ತಿಂಗಳಲ್ಲಿ 1.80 ಕೆ.ಜಿ. ಹಶಿಶ್ ವಶಮಾಡಿಕೊಳ್ಳಲಾಗಿತ್ತು. ಕೇವಲ ಬೆಂಗಳೂರು ಒಂದರಲ್ಲೇ 50ಕ್ಕೂ ಹೆಚ್ಚು ಮಾದಕ ವಸ್ತು ಮಾರಾಟ ಮಾಡುವ ಅಡ್ಡಾಗಳಿವೆ ಎಂದು ಒಬ್ಬ ಹಿರಿಯ ಪೊಲೀಸ್ ಅಧಿಕಾರಿ ಹೇಳುತ್ತಾರೆ. ಆದರೆ ದಾಖಲೆಯಾಗುತ್ತಿರುವ ಪ್ರಕರಣಗಳು ಮಾತ್ರ ಬೆರಳೆಣಿಕೆಯಷ್ಟು. ಪ್ರಶಾಂತ್ ಹೇಳುವಂತೆ ಆತ ಎಷ್ಟೋ ಬಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ. ಡ್ರಗ್ಸ್ ಮಾರುತ್ತಿದ್ದಾಗಲೇ ಪೊಲೀಸರ ಕೈಗೆ ಸಿಕ್ಕು ಒಂದೂವರೆ ಲಕ್ಷ ರೂಪಾಯಿ ಲಂಚ ನೀಡಿ ತಪ್ಪಿಸಿಕೊಂಡಿದ್ದ. ಇನ್ನೂ ಹೆಚ್ಚಿನ ವಿಪರ್ಯಾಸವೆಂದರೆ ಕೆಲವು ಪೊಲೀಸ್ ಅಧಿಕಾರಿಗಳೇ ಪ್ರಶಾಂತ್ ಬಳಿ 'ಸ್ಟಫ್' ಪಡೆದು ಸುಖ ಅನುಭವಿಸುತ್ತಿದ್ದರಂತೆ. ಈ ಕುರಿತು ಬೆಂಗಳೂರು ಕೇಂದ್ರ ವಿಭಾಗದ ಡಿಸಿಪಿ ಬಿ.ಎನ್.ಎಸ್. ರೆಡ್ಡಿ ಅವರನ್ನು ಪ್ರಶ್ನಿಸಿದಾಗ, "ಮಾದಕ ವಸ್ತುಗಳ ಅಕ್ರಮ ಮಾರಾಟ ತಡೆಗಟ್ಟುವ ನಿಟ್ಟಿನಲ್ಲಿ ಸೂಕ್ತ ಪರಿಶೀಲನಾ ವ್ಯವಸ್ಥೆ ಜಾರಿಯಾಗಬೇಕು. ಇಂತಹ ದಂಧೆಯಲ್ಲಿ ತೊಡಗಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು" ಎನ್ನುತ್ತಾರೆ. ಕಳೆದ ಆಗಸ್ಟ್'ನಲ್ಲಿ ಬೆಂಗಳೂರಿನ ಬೇರಿಸ್ ವೃತ್ತದ ಬಳಿ ಬ್ರೌನ್ ಶುಗರ್ ಮಾರುತ್ತಿದ್ದ ರಾಜಸ್ತಾನ ಮೂಲದ ಇಬ್ಬರನ್ನು ಪೊಲೀಸರು ಬಂಧಿಸಿದ್ದರು. ಅವರಿಂದ 6 ಕೋಟಿ ಮೌಲ್ಯದ ಐದು ಕೆ.ಜಿ. ಹೆರಾಯಿನ್ ವಶಪಡಿಸಿಕೊಳ್ಳಲಾಗಿತ್ತು. ತನಿಖೆಗಾಗಿ 'ರಾಷ್ಟ್ರೀಯ ಮಾದಕ ವಸ್ತು ನಿಯಂತ್ರಣ ಕೇಂದ್ರ'ದ ಸಹಕಾರವನ್ನೂ ಕೋರಲಾಗಿತ್ತು. ಅದೇ ತಿಂಗಳಲ್ಲಿ ಬೆಂಗಳೂರಿನ ರೈಲ್ವೆ ನಿಲ್ದಾಣದಲ್ಲಿ ಉದ್ಯಾನ ಎಕ್ಸ್'ಪ್ರೆಸ್ ರೈಲಿನಲ್ಲಿ ಸಾಗಿಸುತ್ತಿದ್ದ ಎರಡು ಕೆ.ಜಿ. ಹೆರಾಯಿನ್ ವಶಪಡಿಸಿಕೊಳ್ಳಲಾಗಿತ್ತು. ಇವುಗಳ ಸರಬರಾಜು ನಡೆಯುತ್ತಿರುವುದು ಶ್ರೀಲಂಕಾ, ಗೋವಾ, ಪಾಕಿಸ್ತಾನ ಹಾಗೂ ಅಫ್ಘಾನಿಸ್ತಾನದಂತಹ ತಾಣಗಳಿಂದ ಎಂಬುದು ಪ್ರತಿಯೊಬ್ಬರೂ (ಪೊಲೀಸರನ್ನೂ ಒಳಗೊಂಡು!) ತಿಳಿದಿರುವ ಸತ್ಯ. ಬೆಂಗಳೂರಿನ 'ರೇವ್' ಪಾರ್ಟಿ, ಅಡ್ಡಾಗಳಲ್ಲಿ ಮಾದಕ ವಸ್ತುವಿನ ಹೊಳೆ ಹರಿಯುವುದು ಸಾಮಾನ್ಯ. ಬೆಂಗಳೂರಿನ ಶಿವಾಜಿನಗರ, ಜೆಸಿ ರಸ್ತೆ, ಗಾಂಧಿನಗರ, ಕೋರಮಂಗಲ, ಕೃಷ್ಣರಾಜಪುರ, ಕೆ.ಆರ್. ಮಾರುಕಟ್ಟೆ, ಕಲಾಸಿ ಪಾಳ್ಯಗಳಲ್ಲಿ ಹಲವು ಅಡ್ಡಾಗಳಿವೆ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಒಬ್ಬ ಹಿರಿಯ ಪೊಲೀಸ್ ಅಧಿಕಾರಿ. ಮಾದಕ ವಸ್ತುಗಳ ಅಕ್ರಮ ಸಾಗಾಣೆ ತಡೆಗಟ್ಟಲು 1985ರಲ್ಲಿ ಭಾರತದಲ್ಲಿ 'ನಾರ್ಕೋಟಿಕ್ ಮತ್ತು ಸೈಕೋಟ್ರೋಪಿಕ್ ಸಬ್'ಸ್ಟೆನ್ಸಸ್ ಆಕ್ಟ್' ಜಾರಿಯಾಗಿದೆ. ಆದರೆ ಆ ಕಾಯಿದೆ 'ಸಮರ್ಥ'ವಾಗಿ ಜಾರಿಯಾಗುತ್ತಿವೆ ಎನ್ನುವುದಕ್ಕೆ ಪ್ರಶಾಂತ್ ನೀಡಿದ ಒಂದೂವರೆ ಲಕ್ಷ ರೂಪಾಯಿ ಲಂಚವೇ ಸಾಕ್ಷಿ! ಈ ನಡುವೆ ಬೆಳಗಾವಿ ಕೂಡ ಮಾದಕ ವಸ್ತುವಿನ 'ಎಂಟ್ರಿ' ಹಾಗೂ 'ಎಕ್ಸಿಟ್' ಪಾಯಿಂಟ್ ಆಗಿ ಹೊರಹೊಮ್ಮಿದೆ. ಕಳೆದ ವರ್ಷ ಮಾದಕ ವಸ್ತುಗಳ ಕಳ್ಳಸಾಗಣೆ ಮಾಡುತ್ತಿದ್ದ ಎಂಟು ಮಂದಿಯನ್ನು ಬೆಳಗಾವಿಯಲ್ಲಿ ಬಂಧಿಸಲಾಗಿತ್ತು. ಅಂತರ್ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಸುಮಾರು 10 ಕೋಟಿ ಬೆಲೆಬಾಳುವ ಹೆರಾಯಿನ್ ಮತ್ತಿತರ ಒಟ್ಟು 50 ಕೆ.ಜಿ. ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಈ ಕುರಿತು ಟಿಎಸ್'ಐ ಬೆಳಗಾವಿಯ ಪೊಲೀಸ್ ವರಿಷ್ಠಾಧಿಕಾರಿ ಹೇಮಂತ್ ನಿಂಬಾಳ್ಕರ್ ಅವರನ್ನು ಪ್ರಶ್ನಿಸಿದಾಗ, "ಬೆಳಗಾವಿಯಲ್ಲಿ ಮಾದಕ ವಸ್ತುಗಳ ಕಳ್ಳಸಾಗಾಣೆ ನಡೆಸುತ್ತಿರುವುದು ನೇಪಾಳ ಹಾಗೂ ಅನ್ಯ ರಾಜ್ಯದವರು. ಸ್ಥಳೀಯರು ಯಾರೂ ಇದರಲ್ಲಿ ತೊಡಗಿಲ್ಲ. ಇದರ ಹಿಂದಿರುವ ರಹಸ್ಯ ಬಯಲಿಗೆಳೆಯಲು ಶತಪ್ರಯತ್ನ ಮಾಡುತ್ತಿದ್ದೇವೆ" ಎಂದರು. ದೊಡ್ಡ ನಗರಗಳೊಂದಿಗೆ ಸಣ್ಣ ಪಟ್ಟಣಗಳಲ್ಲೂ ರಕ್ತ ಬೀಜಾಸುರನ ಹಸ್ತ ಚಾಚುತ್ತಿದೆ ಎನ್ನುವುದೇ ಕಳವಳದ ಸಂಗತಿ. ಈ ಕರಾಳ ಚಕ್ರವ್ಯೂಹದೊಳಗೆ ಪ್ರಶಾಂತ್ ಅವರಂತಹವರು ಲಕ್ಷಾಂತರ ಮಂದಿಯಿದ್ದಾರೆ. "ಕಳೆದ 30 ವರ್ಷಗಳಿಂದ ಡ್ರಗ್ಸೇ ನನ್ನ ಬದುಕಾಗಿತ್ತು. ನನ್ನ 16ನೇ ವರ್ಷದಲ್ಲೇ ಸ್ನೇಹಿತರಿಂದ ಚಟ ಅಂಟಿಕೊಂಡಿತು. ಒಂದು ಬಾರಿ ಇಷ್ಟವಾಯಿತು ಎಂದಾದರೆ ಮತ್ತೊಮ್ಮೆ ಆ ಪ್ರಪಂಚದಿಂದ ಹೊರಬರಬೇಕು ಎಂದೆನಿಸುವುದಿಲ್ಲ. ನನ್ನ ಬಳಿ ದುಡ್ಡಿತ್ತು, ಜವಾಬ್ದಾರಿ ಇರಲಿಲ್ಲ. ನೇಪಾಳ, ನಾಗಲ್ಯಾಂಡ್, ಬಿಹಾರ, ಮಣಿಪುರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳಗಳ ಗಡಿಗಳಿಂದ ಕಡಿಮೆ ಬೆಲೆಗೆ ಹೆರಾಯಿನ್ ತರುತ್ತಿದ್ದೆ. ಜಗತ್ತಿನ ಶ್ರೇಷ್ಠ ಡ್ರಗ್ಸ್ ವೈಟ್ ಹೆರಾಯಿನ್ ಬಳಸುತ್ತಿದ್ದೆ. ದಿನಕ್ಕೆ 6-7 ಇಂಜೆಕ್ಷನ್ ತೆಗೆದುಕೊಳ್ಳುತ್ತಿದ್ದೆ. ಪುನರ್ ವಸತಿ ಕೇಂದ್ರಕ್ಕೆ ಸೇರಿ ಮಧ್ಯದಲ್ಲಿ ಮೂರುವರೆ ವರ್ಷ ಡ್ರಗ್ಸ್ ಬಿಟ್ಟಿದ್ದರೂ ಮತ್ತೆ ಅಂಟಿಕೊಂಡಿತು" ಎಂದು ತನ್ನ ಕಳೆದ ಬದುಕು ಬಿಚ್ಚಿಡುತ್ತಾರೆ ಮೋಹನ್. ಪುನರ್ ವಸತಿ ಕೇಂದ್ರವೊಂದರಲ್ಲಿ ಚಿಕಿತ್ಸೆ ಪಡೆದು ಇದೀಗ ಎಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ರಫೀಕ್, "ಕುತೂಹಲಕ್ಕಾಗಿ ವೈಟ್ನರ್ ಸೇವಿಸುತ್ತಿದೆ. 13ನೇ ವಯಸ್ಸಿನಲ್ಲೇ ಇವುಗಳ ರೂಢಿಯಾಗಿತ್ತು. ಶಾಲಾ ಸಮೀಪದ ಬೇಕರಿಗಳಲ್ಲೇ ವೈಟ್ನರ್ ದೊರಕುತಿತ್ತು. ಈ ಚಟ ಹೆಚ್ಚಾದ ಮೇಲೆ ಮನೆಯವರೂ ದೂರ ಮಾಡಿಬಿಟ್ಟರು" ಎನ್ನುತ್ತಾರೆ. ಇವುಗಳ ಪರಿಣಾಮ ಏನೆಂದು ಪ್ರತಿ ಮಾದಕ ವ್ಯಸನಿಗಳಿಗೆ ಗೊತ್ತಿದ್ದರೂ ಏನೂ ಮಾಡಲಾಗದ ಸ್ಥಿತಿಯಲ್ಲಿರುತ್ತಾರೆ. ಇವರೆಲ್ಲಾ ಉತ್ತಮ ಕೌಟುಂಬಿಕ ಹಿನ್ನೆಲೆಯುಳ್ಳವರು. ಹಾಗಿದ್ದಲ್ಲಿ ಮಕ್ಕಳು ಹಾದಿ ತಪ್ಪದಂತೆ, ಅವರಲ್ಲಿ ಜಾಗೃತಿ ಮೂಡಿಸುವುದು ಹೇಗೆ? "ಇಲ್ಲಿ ಮಾಧ್ಯಮಗಳ ಪಾತ್ರ ಬಹಳ ಮುಖ್ಯ. ಜೊತೆಗೆ ಹೆತ್ತವರು, ಶಿಕ್ಷಕರು ಅವರಲ್ಲಿ ಜಾಗೃತಿ ಮೂಡಿಸಬೇಕು. ಖಿನ್ನರಾದಾಗ ಕ್ರಿಯಾತ್ಮಕ ಚಟುವಟಿಕೆಗಳಲ್ಲಿ ತೊಡಗಿ ಕೊಳ್ಳುವಂತೆ ಪ್ರೇರೇಪಿಸಬೇಕು. ನಿರಾಶೆಗಳನ್ನು ಸಹಿಸಿಕೊಳ್ಳುವ ಶಕ್ತಿಯನ್ನು ಮಕ್ಕಳಲ್ಲಿ ತುಂಬಬೇಕು" ಎನ್ನುವುದು ಬೆಂಗಳೂರಿನಲ್ಲಿರುವ ನಿಮ್ಹಾನ್ಸ್'ನಲ್ಲಿನ ಮನಃಶಾಸ್ತ್ರಜ್ಞ ಸಿ.ಆರ್. ಚಂದ್ರಶೇಖರ್ ಅವರ ಅಭಿಪ್ರಾಯ. "ಪ್ರತಿ ಮಗುವಿಗೂ ತಾನು ಆಕರ್ಷಣಾ ಕೇಂದ್ರ ಆಗಬೇಕೆಂಬ ಆಸೆ ಇರುತ್ತದೆ. ಮಧ್ಯಮ ವರ್ಗದವರು ಶ್ರೀಮಂತ ವರ್ಗದವರ ಕಣ್ಣಲ್ಲಿ ತಮ್ಮ ಅಂತಸ್ತು ಉಳಿಸಿಕೊಳ್ಳಬೇಕೆಂದು ಪ್ರಯತ್ನದಲ್ಲಿರುತ್ತಾರೆ. ಇನ್ನು ಬಿಪಿಒ, ಐಟಿ ವಲಯದಲ್ಲಂತೂ ಅತಿಯಾದ ಒತ್ತಡ ಎನ್ನುವುದು ಮಾದಕ ವ್ಯಸನಿಗಳಾಗುವಂತೆ ಮಾಡುತ್ತಿದೆ" ಎನ್ನುತ್ತಾರೆ 'ನ್ಯೂ ಡಾನ್' ಪುನರ್ ವಸತಿ ಕೇಂದ್ರದ ಮುಖ್ಯಸ್ಥೆ ರುಕ್ಸಾನಾ ಹಸನ್. ಹಾಗಾದರೆ ಇವುಗಳಿಗೆ ಪರಿಹಾರ ಏನು? "ನಮ್ಮ ವ್ಯವಸ್ಥೆಯೇ ಕೆಟ್ಟಿದೆ. ಪೊಲೀಸರು ಅಕ್ರಮ ವ್ಯವಹಾರದಲ್ಲಿ ಭಾಗಿಗಳಾಗುತ್ತಿದ್ದಾರೆ. ಪೊಲೀಸರು ಸೂಕ್ತ ಕ್ರಮ ಕೈಗೊಂಡಲ್ಲಿ ಮಾದಕ ವಸ್ತು ಮಾರಾಟವನ್ನು ಖಂಡಿತ ಮಟ್ಟಹಾಕಬಹುದು" ಎನ್ನುತ್ತಾರೆ ಅವರು. ಮಾದಕ ವ್ಯಸನ ಕೇವಲ ವ್ಯಕ್ತಿಯೊಬ್ಬನ ಸಮಸ್ಯೆಯಾಗಿ ಉಳಿದಿಲ್ಲ. ಅದೊಂದು ಸಾಮಾಜಿಕ ಶಾಪವಾಗಿ ಪರಿವರ್ತನೆಗೊಳ್ಳುತ್ತಿದೆ. ಇದು ಚಕ್ರವ್ಯೂಹವಿದ್ದಂತೆ. ಒಮ್ಮೆ ಒಳಹೋದರೆ ಹೊರಬರುವುದು ಬಹಳ ಕಷ್ಟ. ನಗರ ಪ್ರದೇಶಗಳು, ಕೊಳೆಗೇರಿಗಳು, ಶಾಲಾ-ಕಾಲೇಜು ಸುತ್ತಮುತ್ತ, ಐಟಿ ಕಂಪನಿಗಳ ವಲಯದಲ್ಲಿ ಮಾದಕ ವಸ್ತುಗಳ ಮಾರಾಟದ ಅಕ್ರಮ ಜಾಲ ಹಬ್ಬಿಬಿಟ್ಟಿದೆ. ನಗರ ಪ್ರದೇಶದವರು ಹೆರಾಯಿನ್ ಬಳಸಿದರೆ, ಗ್ರಾಮಾಂತರ ಜನರು ಅಫೀಮಿನ ಮೊರೆ ಹೋಗುತ್ತಿದ್ದಾರೆ. ಹದಿಹರೆಯದವರಲ್ಲಿ ಏಕೆ ಈ ಚಟ ಅಧಿಕವಾಗುತ್ತಿದೆ ಎಂಬುದಕ್ಕೆ ಸಿ.ಆರ್.ಚಂದ್ರಶೇಖರ್ "ಸ್ನೇಹಿತ ವರ್ಗ, ಸಿನಿಮಾ ಇವುಗಳೆಲ್ಲಾ ಪ್ರಭಾವ ಬೀರುತ್ತಿರುತ್ತದೆ. ಜೊತೆಗೆ ಶೈಕ್ಷಣಿಕ ಮತ್ತು ಹೆತ್ತವರ ನಿರೀಕ್ಷೆಗಳನ್ನು ಪೂರೈಸುವ ಒತ್ತಡದಲ್ಲಿ ಖಿನ್ನತೆ ಹೆಚ್ಚಿ ಹತಾಶರಾಗುತ್ತಾರೆ. ಆಗ ಸುಲಭವಾಗಿ ಸ್ನೇಹಿತರ ಜೊತೆಗೂಡಿ ಚಟಕ್ಕೆ ಬಲಿಯಾಗುತ್ತಾರೆ" ಎನ್ನುತ್ತಾರೆ. ಇದು ದೇಶದ ಭದ್ರತಾ ವ್ಯವಸ್ಥೆಯ ಮೇಲೆಯೂ ಅಷ್ಟೇ ಪರಿಣಾಮ ಬೀರುತ್ತಿದೆ. ಇಲ್ಲಿ ಹುಟ್ಟುವ ಹಣ ದೇಶ ವಿರೋಧಿ ಚಟುವಟಿಕೆ ಮತ್ತು ಅಕ್ರಮ ಶಸ್ತ್ರಾಸ್ತ್ರ ಖರೀದಿಗಳ ಪ್ರಕ್ರಿಯೆಯೂ ಬಹಳವಾಗಿ ನಡೆಯುತ್ತದೆ. ಇದಕ್ಕೆ ಪ್ರತ್ಯಕ್ಷ ಸಾಕ್ಷಿ ಮೋಹನ್. ನೇಪಾಳ, ನಾಗಲ್ಯಾಂಡ್, ಬಿಹಾರ, ಮಣಿಪುರ, ಮಧ್ಯಪ್ರದೇಶ, ಪಶ್ಚಿಮ ಬಂಗಾಳಗಳ ಗಡಿ ಪ್ರದೇಶಗಳಿಂದ ವೈಟ್ ಹೆರಾಯಿನ್ ತರುತ್ತಿದ್ದ ಸಂದರ್ಭದಲ್ಲಿ ಅಲ್ಲಿ ಅಕ್ರಮ ಶಸ್ತ್ರಾಸ್ತ್ರ ಸರಬರಾಜು ನಡೆಯುತ್ತಿರುವುದನ್ನು ಅವರು ಕಣ್ಣಾರೆ ಕಂಡಿದ್ದಾರೆ. ಹೆರಾಯಿನ್ ಸಿಕ್ಕಷ್ಟೇ ಸುಲಭವಾಗಿ ಅಲ್ಲಿ ಶಸ್ತ್ರಾಸ್ತ್ರ ದೊರಕುತ್ತವೆ. ಮಾದಕವಸ್ತು ಕಳ್ಳಸಾಗಣೆ ಜೊತೆ ನಿರಾತಂಕವಾಗಿ ಶಸ್ತ್ರಾಸ'ಗಳ ಕಳ್ಳಸಾಗಣೆ ಕೂಡ ನಡೆಯುತ್ತದೆ ಎನ್ನುತ್ತಾರೆ ಅವರು. ಮಾದಕ ವ್ಯಸನವೆಂಬುದು ಈಗ ಹೊಸ ರೂಪ ಪಡೆದುಕೊಳ್ಳುತ್ತಿದೆ. ಅದು ನಾರ್ಕೊ ಟೆರರಿಸಂ ಅಥವಾ ಮಾದಕ ವಸ್ತುಗಳ ಭಯೋತ್ಪಾದನೆ. ಪಾಕಿಸ್ತಾನ ಬೆಂಬಲಿತ ಐಎಸ್'ಐ ಮೂಲಕ ಸ್ಫೋಟಕ ಮತ್ತು ಶಸ್ತ್ರಾಸ್ತ್ರಗಳಷ್ಟೇ ಅಲ್ಲದೆ, ಮಾದಕ ವಸ್ತು ಮತ್ತು ನಕಲಿ ನೋಟುಗಳೂ ಕರ್ನಾಟಕ ಮತ್ತು ಗೋವಾ ರಾಜ್ಯದೊಳಗೆ ಪ್ರವೇಶಿಸುತ್ತಿವೆ. ರಾಜ್ಯದಲ್ಲಿ ಅಂತರ್ ರಾಷ್ಟ್ರೀಯ ಮಾದಕ- ಭಯೋತ್ಪಾದನೆ ವ್ಯಾಪಿಸಿದೆ ಎಂಬ ಶಂಕೆಯನ್ನು ಸಿಒಡಿ ಮೂಲಗಳೂ ವ್ಯಕ್ತಪಡಿಸಿವೆ. ಗೋವಾ ಮತ್ತು ಮಹಾರಾಷ್ಟ್ರಕ್ಕೆ ಪ್ರಯಾಣಿಸುವುದು ಸುಲಭವಾದ್ದರಿಂದ ಕಳ್ಳ ಸಾಗಾಣಿಕೆದಾರರು ಬೆಳಗಾವಿಯನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತು ಸಾಗಿಸಿದ ಹಣದಲ್ಲಿ ಶಸ್ತ್ರಾಸ್ತ್ರ ಖರೀದಿಸಲಾಗುತ್ತಿದೆ. ರಾಜ್ಯದಲ್ಲಿ ಅಭದ್ರತೆ ಮೂಡಿಸಲೇ ಈ ಕೃತ್ಯಗಳು ನಡೆಯುತ್ತಿವೆ. ಹೀಗಾಗಿ ಮಾದಕ ವಸ್ತು ಕಳ್ಳ ಸಾಗಾಣಿಕೆ ಮತ್ತು ಭಯೋತ್ಪಾದನೆ ನಡುವೆ ಹತ್ತಿರದ ಸಂಪರ್ಕ ಇರುವುದು ಸ್ಪಷ್ಟ ಎನ್ನುತ್ತವೆ ಪೊಲೀಸ್ ಮೂಲಗಳು.

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .