|
ಇದೀಗ ಜಾತ್ರೆಗಳ ಹಂಗಾಮು. ಹೌದು, ಜಾನಪದ ಜಾತ್ರೆಗಳ ಜೊತೆಗೆ ಈ ಬಾರಿ ರಾಜ್ಯದಲ್ಲಿ ವಿಶೇಷ ಆಕರ್ಷಣೆಯೆಂದರೆ ಚುನಾವಣಾ ಜಾತ್ರೆ. ಕೇಂದ್ರ ಚುನಾವಣಾ ಆಯೋಗ ರಾಷ್ಟ್ರಪತಿ ಆಡಳಿತ ಅಂತ್ಯದ ಮೇ 28ರ ಗಡುವಿನೊಳಗೇ ರಾಜ್ಯ ವಿಧಾನಸಭಾ ಚುನಾವಣೆ ನಡೆಸುವ ಸೂಚನೆ ನೀಡುತ್ತಲೇ ರಾಜ್ಯದ ಮೂರೂ ಪ್ರಮುಖ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭವಾಗಿವೆ.
ಹಿಂದಿನ ದೋಸ್ತಿ ಸರ್ಕಾರದ ಸಂತ್ರಸ್ತ ಮತ್ತು ಫಲಾನುಭವಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿ(ಎಸ್) ಸರ್ಕಾರ ಕುಸಿದ ದಿನದಿಂದಲೇ ಬಹುತೇಕ ಪರೋಕ್ಷ ಪ್ರಚಾರ ಆರಂಭಿಸಿವೆ. ಚುನಾವಣೆ ಆರು ತಿಂಗಳು ಮುಂದೆ ಹೋಗಬಹುದೆಂಬ 'ಆಸೆ' ಮತ್ತು 'ವಿಶ್ವಾಸ'ದಲ್ಲಿದ್ದ ಕಾಂಗ್ರೆಸ್ ಕೂಡ ಇದೀಗ ದಿಢೀರ್ ಎಚ್ಚೆತ್ತಂತೆ ಗಡಿಬಿಡಿಯ ಸಿದ್ಧತೆ ಆರಂಭಿಸಿದೆ. ಆದರೆ, ಏನೋ ಮಾಡಲು ಹೋಗಿ ಇನ್ನೇನೋ ಆದಂತೆ, ಆ ಪಕ್ಷದ ಅವಸರದ ತೀರ್ಮಾನಗಳು ಚುನಾವಣೆ ಸಿದ್ಧತೆಗಳಿಗೆ ವೇಗವರ್ಧಕವಾಗುವ ಬದಲು ವೇಗನಿಯಂತ್ರಕಗಳಾಗುತ್ತಿವೆ. ಮಹಾರಾಷ್ಟ್ರಕ್ಕೆ ರಾಜ್ಯಪಾಲರನ್ನಾಗಿ ಕಳಿಸಿದ್ದ ಎಸ್.ಎಂ. ಕೃಷ್ಣ ಅವರನ್ನು ವಾಪಸ್ ಸಕ್ರಿಯ ರಾಜಕಾರಣಕ್ಕೆ ಇಳಿಸುವ ಮೂಲಕ ಜೆಡಿ(ಎಸ್)ನ ಜಾತಿ ಆಧಾರಿತ ಮತಗಳು ಮತ್ತು ಬಿಜೆಪಿಯ ಎಲೈಟ್ ಮತ್ತು ನಗರ ಕೇಂದ್ರಿತ ಮತಗಳಿಗೆ ಕನ್ನ ಹಾಕುವ ಪಕ್ಷದ ಯೋಜನೆ ಪಕ್ಷದೊಳಗೇ ಭಿನ್ನಮತದ ಕಿಚ್ಚು ಹೊತ್ತಿಸಿದೆ. ಅತ್ತ ಜೆಡಿ(ಎಸ್) ತನ್ನ ವಿರುದ್ಧದ 'ವಚನಭ್ರಷ್ಟ, ಲಿಂಗಾಯಿತ ವಿರೋಧಿ, ಕುಟುಂಬ ರಾಜಕಾರಣ' ಮುಂತಾದ ಅಪವಾದಗಳನ್ನು ಕಳಚಿಕೊಂಡು ಜನರ ವಿಶ್ವಾಸ ಗಳಿಸಲು ಪ್ರಭಾವಿ ನಾಯಕರ ಕೊರತೆ ಎದುರಿಸುತ್ತಿದೆ. ಅನುಕಂಪದ ಅಲೆಯನ್ನೇ ನೆಚ್ಚಿಕೊಂಡಿರುವ ಬಿಜೆಪಿಯಲ್ಲಿ ಕೂಡ ಆಂತರಿಕ ಭಿನ್ನಮತದ ಹೊಗೆ ಆರಿಲ್ಲ. ಹೀಗಿರುವಾಗ ಕ್ಷೇತ್ರ ಪುನರ್‌ವಿಂಗಡಣೆ ಶಿಫಾರಿಸಿನ ಮೇರೆಗೇ ಚುನಾವಣೆ ಎಂಬುದು ಖಚಿತವಾಗಿದೆ. ಪರಿಣಾಮವಾಗಿ ಹಲವು ಪ್ರಭಾವಿ ನಾಯಕರ ಸಾಂಪ್ರದಾಯಿಕ ಕ್ಷೇತ್ರಗಳು ಕೈಬಿಟ್ಟುಹೋಗಲಿವೆ ಮತ್ತು ಮೀಸಲು ಕ್ಷೇತ್ರಗಳ ಸಂಖ್ಯೆಯಲ್ಲಿ ಗಣನೀಯ ಏರಿಕೆ ಕೂಡ ಆಗಲಿದೆ. ಈ ಬೆಳವಣಿಗೆ ಕೂಡ ಪಕ್ಷಗಳ ಚುನಾವಣಾ ಗಳಿಕೆಯ ಮೇಲೆ ಭಾರಿ ಪರಿಣಾಮವನ್ನೇ ಬೀರುವುದು ಖಚಿತ.
ಇದೆಲ್ಲದರ ಜೊತೆಗೆ ಚುನಾವಣೆಯಲ್ಲಿ ಸ್ಪಷ್ಟ ಬಹುಮತ ಗಳಿಸಿ ಅಧಿಕಾರ ಹಿಡಿಯುವ ಸ್ಥಿತಿಯಲ್ಲಿ ಯಾವ ಪಕ್ಷವೂ ಇಲ್ಲ. ಮೇಲ್ನೋಟಕ್ಕೆ ಏಕಾಂಗಿಯಾಗಿ ಅಧಿಕಾರಕ್ಕೆ ಬರುವ ಮಾತನಾಡುತ್ತಿದ್ದರೂ ನಾಯಕರಿಗೆ ನಿಜವಾಗಿಯೂ ತಮ್ಮ ಮಾತಿನಲ್ಲೇ ತಮಗೆ ನಂಬಿಕೆ ಇಲ್ಲದ ಸ್ಥಿತಿ ಇದೆ. ರಾಜ್ಯದ ಮತದಾರ ಕೂಡ ಒಂದು ಪಕ್ಷವನ್ನು ಅಧಿಕಾರಕ್ಕೆ ತರುವ ಬಗ್ಗೆ ದೃಢ ನಿರ್ಧಾರ ಮಾಡಿದಂತಿಲ್ಲ. ಹಾಗಾಗಿ ಮತ್ತೊಮ್ಮೆ ದೋಸ್ತಿ ಸರ್ಕಾರಗಳ ದೊಂಬರಾಟಕ್ಕೆ ಮೂಕ ಪ್ರೇಕ್ಷಕನಾಗಲೂ ಆತನೂ ಸಿದ್ಧನಾಗಿಬಿಟ್ಟಿದ್ದಾನೆ. ಸದ್ಯಕ್ಕೆ ಚುನಾವಣಾ ತಯಾರಿಯಲ್ಲಿ ಮುಂಚೂಣಿಯಲ್ಲಿರುವ ಮೂರೂ ಪಕ್ಷಗಳಲ್ಲಿನ ಸ್ಥಿತಿಯೇ ಅಂತಹ ಒಂದು ಅಸ್ಪಷ್ಟ ಜನಾದೇಶದ ಸೂಚನೆಯನ್ನು ನೀಡುತ್ತಿದೆ.
2004ರ ಚುನಾವಣೆಯಲ್ಲಿ 79 ಸ್ಥಾನಗಳನ್ನು ಪಡೆಯುವ ಮೂಲಕ ಭಾರತೀಯ ಜನತಾ ಪಕ್ಷ, ದಕ್ಷಿಣ ಭಾರತದಲ್ಲೇ ಮೊದಲ ಬಾರಿಗೆ ಅತ್ಯಧಿಕ ಸ್ಥಾನ ಗಳಿಸಿ ಅಧಿಕಾರದ ಸಮೀಪಕ್ಕೆ ತೆರಳಿತ್ತು. ಕಾಂಗ್ರೆಸ್‌ನ ಜನಪ್ರಿಯತೆಯ ಕುಸಿತ, ಬಂಗಾರಪ್ಪ ಅವರಂಥ ಪ್ರಭಾವಿ ನಾಯಕರ ಸೇರ್ಪಡೆ ಮತ್ತು ಕೇಂದ್ರದ ಹಿಂದಿನ ಎನ್‌ಡಿಎ ಸರ್ಕಾರದ ಜನಪರ ಕಾರ್ಯಕ್ರಮಗಳು ಅದಕ್ಕೆ ಆ ಪ್ರಮಾಣದ ಜಯ ತಂದುಕೊಟ್ಟಿದ್ದವು. ಆದರೆ, ಈ ಬಾರಿ ಆ ಅಂಶಗಳಾವೂ ಇಲ್ಲ. ಆದರೆ, ದೋಸ್ತಿ ಸರ್ಕಾರದಲ್ಲಿ ಜೆಡಿ(ಎಸ್)ನಿಂದ ಮೋಸಹೋಗಿದೆ ಎಂಬ ಅನುಕಂಪದ ಅಲೆ ಇದೆ. ಆದರೆ, ಆ ಅಲೆಯನ್ನು ಮತಗಳನ್ನಾಗಿ ಪರಿವರ್ತಿಸುವಲ್ಲಿ ಕಮಲದ ಪಡೆ ಯಶಸ್ಸಿಯಾಗುವುದೇ ಎಂಬುದು ಪ್ರಶ್ನಾರ್ಹ. ಜೊತೆಗೆ ಕರಾವಳಿ, ಮಲೆನಾಡು ಮತ್ತು ಬಳ್ಳಾರಿ ಸೇರಿದಂತೆ ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಪಕ್ಷ ಭದ್ರ ನೆಲೆ ಹೊಂದಿದ್ದರೂ ಕಳೆದ ಬಾರಿಯ ದೋಸ್ತಿ ಸರ್ಕಾರದಲ್ಲಿ ಅಧಿಕಾರದಲ್ಲಿದ್ದ ಪಕ್ಷದ ಆ ಭಾಗದ ನಾಯಕರು ಜನರ ವಿಶ್ವಾಸ ಉಳಿಸಿಕೊಳ್ಳುವಲ್ಲಿ ಸೋತಿದ್ದಾರೆ. ವೈಯಕ್ತಿಕ ವರ್ತನೆ ಮತ್ತು ಜನವಿರೋಧಿ ನಿಲುವುಗಳಿಂದಾಗಿ ರಾಜಕೀಯದಾಚೆಗೂ ಸಾಕಷ್ಟು ವಿರೋಧಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಹಾಗಾಗಿ ಪಕ್ಷದ ಪರವಿರುವ ಅನುಕಂಪ ಅವರ ವಿರುದ್ಧದ ವೈಯಕ್ತಿಕ ಅಸಮಾಧಾನ ಮತ್ತು ಭ್ರಮನಿರಸನದಲ್ಲಿ ಕೊಚ್ಚಿ ಹೋಗಲೂಬಹುದು. ಆಗ ಇಷ್ಟೆಲ್ಲಾ ಯಾತ್ರೆ, ಪ್ರಚಾರದ ಅಬ್ಬರದ ನಡುವೆಯೂ ಬಿಜೆಪಿಗೆ ಕಳೆದ ಬಾರಿ ಪಡೆದಷ್ಟು ಸ್ಥಾನಗಳನ್ನು ಉಳಿಸಿಕೊಳ್ಳುವುದು ಕೂಡ ಸಾಧ್ಯವಾಗುವುದು ಅನುಮಾನಾಸ್ಪದ.
ಇದರೊಂದಿಗೆ ಮುಖ್ಯವಾಗಿ ನಗರಕೇಂದ್ರಿತವಾದ ಪಕ್ಷದ ಚುನಾವಣಾ ಗಳಿಕೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ಮತ್ತೊಂದು ಬೆಳವಣಿಗೆ ಎಂದರೆ ಕೃಷ್ಣಾಗಮನ. ಎಲೈಟ್ ರಾಜಕಾರಣಿ ಎಸ್.ಎಂ. ಕೃಷ್ಣ ಸಕ್ರಿಯ ರಾಜಕೀಯಕ್ಕೆ ಮರಳಿರುವುದರಿಂದ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಭುಗಿಲೆದ್ದಿದೆ. ಅದು ತಮಗೆ ವರದಾನವಾಗಲಿದೆ ಎಂದು ಬಿಜೆಪಿ ನಾಯಕರು ಎಷ್ಟೇ ಹೇಳಿದರೂ, ನಗರವಾಸಿಗಳ ಕಣ್ಮಣಿ ಕೃಷ್ಣ, ಬಿಜೆಪಿ ಕಡೆಗೆ ಮುಖಮಾಡಿದ್ದ ಸಾಕಷ್ಟು ಮತಗಳನ್ನು ಕಾಂಗ್ರೆಸ್‌ನತ್ತ ಸೆಳೆಯುವುದರಲ್ಲಿ ಯಶಸ್ವಿಯಾಗದಿರರು. ಇದು ಬಿಜೆಪಿಗಿರುವ ಮತ್ತೊಂದು ಸವಾಲು. ಇನ್ನು ಅಲ್ಲೂ ಇಬ್ಬರು ಹಿರಿಯ ನಾಯಕರ ನಡುವೆ ತೆರೆಮರೆಯ ಗುದ್ದಾಟವಿದ್ದೇ ಇದೆ. ಹಾಗೇ ಅನಂತಕುಮಾರ್, ಯಡಿಯೂರಪ್ಪ ಅವರ ಪರ- ವಿರೋಧಿ ಬಣಗಳಾಗಿ ಪಕ್ಷದ ಹಿರಿಯ ನಾಯಕರು ಹಂಚಿಹೋಗಿದ್ದರೂ ನಾಳೆ ಅಧಿಕಾರ ಕೈಗೆ ಬರಬಹುದು ಎಂಬ ಕಾರಣಕ್ಕಾಗಿ ಸದ್ಯಕ್ಕೇನೋ ಎಲ್ಲರೂ ತುಟಿಬಿಚ್ಚದೆ ಚುನಾವಣೆ ಮೇಲೆ ಕಣ್ಣಿಟ್ಟಿದ್ದಾರೆ. ಅದಕ್ಕೆ ಮತ್ತೊಂದು ಕಾರಣ, ಯಡಿಯೂರಪ್ಪ ಅವರಿಗೆ ಜೆಡಿ(ಎಸ್) ಅಧಿಕಾರ ಹಸ್ತಾಂತರ ಮಾಡದೇ ಇರುವುದು ಇಡೀ 'ಲಿಂಗಾಯಿತ ಸಮುದಾಯಕ್ಕೆ ಬಗೆದ ವಂಚನೆ' ಎಂಬಂತೆ ಬಿಜೆಪಿ ಬಿಂಬಿಸುತ್ತಿರುವುದು. ಹಾಗಾಗಿ ಲಿಂಗಾಯಿತರ ಮತಗಳ ಮೇಲೆ ಕಣ್ಣಿಟ್ಟು ಆಂತರಿಕ ಹೊಂದಾಣಿಕೆ ಕಾಯ್ದುಕೊಳ್ಳಲಾಗುತ್ತಿದೆ. ಅದು ಎಷ್ಟು ಕಾಲ ಹಾಗೇ ಉಳಿಯಲಿದೆ ಎಂಬುದನ್ನು ಕಾದುನೋಡಬೇಕು.
ಇನ್ನು ನಾಯಕರ ಸಾಮೂಹಿಕ ವಲಸೆ, ಮಾಜಿ ಮಿತ್ರಪಕ್ಷಗಳ ದೋಷಾರೋಪ ಮತ್ತು ಜನಪ್ರಿಯ ನಾಯಕ ಕುಮಾರಸ್ವಾಮಿಯ ಅನಾರೋಗ್ಯದ ಕಾರಣದಿಂದ ಸೂತಕದ ಮನೆಯಂತಾಗಿದ್ದ ಜೆಡಿ(ಎಸ್) ಇದೀಗ ಹುರುಪುಗೊಂಡಿದೆ. ಕಳೆದ ಚುನಾವಣೆಯಲ್ಲಿ ಪಕ್ಷ ಗಳಿಸಿದ್ದು 59 ಸ್ಥಾನಗಳನ್ನು. ಆದರೆ, ಸರ್ಕಾರ ರಚನೆಯ ಹಂತದಲ್ಲಿ ನಿರ್ಣಾಯಕ ಸ್ಥಾನ ಅನಾಯಾಸವಾಗಿ ಒದಗಿಬಂದ ಪರಿಣಾಮ ಪಕ್ಷದ ವರ್ಚಸ್ಸು ವೃದ್ಧಿಸಿತು. ಕಾಂಗ್ರೆಸ್ ಮತ್ತು ಬಿಜೆಪಿ ಜೊತೆ ಮೈತ್ರಿ ಸಾಧಿಸಿ 40 ತಿಂಗಳಲ್ಲಿ ಎರಡು ಸರ್ಕಾರಗಳನ್ನು ರಚಿಸಿದಷ್ಟೇ ಸಲೀಸಾಗಿ ಆ ಸರ್ಕಾರಗಳನ್ನೂ ಉರುಳಿಸಿದ ಜೆಡಿ(ಎಸ್), ಎರಡೂ ಸರ್ಕಾರದಲ್ಲೂ ಪ್ರಾಬಲ್ಯ ಸಾಧಿಸುವ ಮೂಲಕ ತಾನು ಬೆಳೆಯಿತು. ಆದರೆ, ಬಿಜೆಪಿಗೆ ಅಧಿಕಾರ ಹಸ್ತಾಂತರ ಮಾಡುವ ವಿಷಯದಲ್ಲಿ ಪಕ್ಷದ ನಾಯಕರಲ್ಲೇ ಭಿನ್ನಾಭಿಪ್ರಾಯ ಉಂಟಾಗಿ ಹಲವು ನಾಯಕರು ಪಕ್ಷ ತೊರೆದದ್ದು ಮತ್ತು ಅದಕ್ಕೂ ಮುನ್ನ ಸಿದ್ದರಾಮಯ್ಯ ಮತ್ತು ಸಿಂಧ್ಯಾ ನಂತರ ಪ್ರಮುಖರನ್ನು ಪಕ್ಷದಿಂದ ಉಚ್ಛಾಟಿಸಿದ್ದು ವರ್ಚಸ್ಸಿಗೆ ಬಲವಾದ ಪೆಟ್ಟು ನೀಡಿದವು. ಈ ನಡುವೆ ಪಕ್ಷದ ಬೆಂಬಲಕ್ಕಿರುವುದು ಜೆಡಿ(ಎಸ್) ಅಧಿನಾಯಕ ದೇವೇಗೌಡರ ಬಗೆಗೆ ಹಳೇ ಮೈಸೂರು ಭಾಗದಲ್ಲಿ ಇನ್ನೂ ಉಳಿದಿರುವ ಅಭಿಮಾನ, ಕುಮಾರಸ್ವಾಮಿ ಸರ್ಕಾರದ ಜನಪ್ರಿಯ ಕಾರ್ಯಕ್ರಮಗಳು ಮಾತ್ರ. ಆದರೆ, ಈಗ ಕೃಷ್ಣಾಗಮದಿಂದಾಗಿ ಹಳೇ ಮೈಸೂರು ಭಾಗದ ದೇವೇಗೌಡರ ಒಕ್ಕಲಿಗ ಮತಬ್ಯಾಂಕ್ ಕೂಡ ಹರಿದುಹಂಚಿಹೋಗುವ ಸಾಧ್ಯತೆಗಳೇ ಹೆಚ್ಚಿವೆ. ಕೃಷ್ಣ ಆಗಮನದಿಂದ ಕಾಂಗ್ರೆಸ್ ಪಾಳೆಯದಲ್ಲಿ ಭಿನ್ನಮತ ಉಲ್ಬಣಿಸಲಿದ್ದು, ಅದು ಪರೋಕ್ಷವಾಗಿ ತಮಗೆ ಅನುಕೂಲವಾಗಲಿದೆ ಎಂಬ ದೇವೇಗೌಡರ ಲೆಕ್ಕಾಚಾರ ತಲೆಕೆಳಗಾಗುವ ಸಾಧ್ಯತೆಗಳಿರುವುದರಿಂದ ಪಕ್ಷದ ನೆರವಿಗೆ ಬರುವ ಅಂಶಗಳು ವಿರಳವಾಗಿವೆ. ಜೊತೆಗೆ ಕಳೆದ ಚುನಾವಣೆಯಲ್ಲಿ ಪಕ್ಷಕ್ಕೆ ಮತಗಳನ್ನು ಸೆಳೆದ ಜನನಾಯಕರಾದ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರ ಪಡೆ ದೂರ ಸರಿದಿದೆ. ಹಾಗೇ ಎಂ.ಪಿ. ಪ್ರಕಾಶ್ ಜೊತೆಯಲ್ಲಿ ಪಕ್ಷದ ಬಹುತೇಕ ಲಿಂಗಾಯಿತ ಮುಖಂಡರು ಕೂಡ ಪಕ್ಷ ತೊರೆದು ಕಾಂಗ್ರೆಸ್ ಮತ್ತು ಬಿಜೆಪಿಗೆ ಸೇರಿದ್ದಾರೆ. ಹಾಗಾಗಿ ಅತ್ತ ಬಿಜೆಪಿಗೆ ವಂಚಿಸಿದ ಆರೋಪದಿಂದ ನಲುಗಿರುವ ಪಕ್ಷಕ್ಕೆ ಲಿಂಗಾಯಿತ ಮತಗಳ ಜೊತೆಗೆ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಮತಗಳು ಕೂಡ ದೂರವಾಗಬಹುದು. ಆದರೂ ರಾಜ್ಯದ ಯುವ ಮತದಾರರು ಕುಮಾರಸ್ವಾಮಿ ಅವರ ಕಾರ್ಯವೈಖರಿಗೆ ಮಾರುಹೋಗಿ ಜೆಡಿ(ಎಸ್)ನತ್ತ ಒಲವು ತೋರಿಸಬಹುದು. ಅಷ್ಟಾಗಿಯೂ ಕಳೆದ ಚುನಾವಣೆಯಲ್ಲಿ ಗಳಿಸಿದ್ದ 59 ಸ್ಥಾನಗಳಲ್ಲಿ ಅರ್ಧದಷ್ಟು ಉಳಿಸಿಕೊಂಡರೂ ಅದು ಈ ಬಾರಿ ಜೆಡಿ(ಎಸ್) ಪಾಲಿಗೆ ದೊಡ್ಡ ಸಾಧನೆಯೇ.
ಇನ್ನು, ಕಳೆದ ಬಾರಿ 65 ಸ್ಥಾನಗಳನ್ನು ಪಡೆದಿದ್ದ ಕಾಂಗ್ರೆಸ್ ಈ ಬಾರಿ ಕಳೆದ ಬಾರಿಯಂತೆ ಆಡಳಿತ ವಿರೋಧಿ ಅಲೆಯ ಭೀತಿ ಇಲ್ಲ ಮತ್ತು ಕೇಂದ್ರದ ಯುಪಿಎ ಸರ್ಕಾರ ರೈತ ಮತ್ತು ಹಿಂದುಳಿದ ವರ್ಗಗಳ ಪರ ಬಜೆಟ್ ರೂಪಿಸಿದೆ ಎಂಬುವ ಅಂಶಗಳೇ ಕಾಂಗ್ರೆಸ್ ಪಾಲಿಗೆ ಈಗಿರುವ ಸಮಾಧಾನ. ಆದರೆ, ಆಂತರಿಕ ಭಿನ್ನಮತ, ಹೊಂದಾಣಿಕೆಯ ಕೊರತೆ, ಮತಗಳನ್ನು ಸೆಳೆಯಬಲ್ಲ ನಾಯಕರಿದ್ದೂ ಅವರನ್ನು ಸಮರ್ಥವಾಗಿ ಬಳಸಿಕೊಳ್ಳಲಾಗದೇ ಇರುವ ವೈಫಲ್ಯ, ಗೊಂದಲ ಮತ್ತು ಅಪರೂಪವಾಗಿರುವ ಚುರುಕುತನ... ಹೀಗೆ ಆತಂಕಗಳ ಸರಮಾಲೆಯೇ 'ಕೈ'ಮುಂದೆ ಸಾಲುಗಟ್ಟಿವೆ. ಮೊದಲ 20 ತಿಂಗಳ ಕಾಲ ಜೆಡಿ(ಎಸ್)ನೊಂದಿಗೆ ಕೈಜೋಡಿಸಿ ಪಕ್ಷದ ಅಭ್ಯರ್ಥಿಯೇ ಮುಖ್ಯಮಂತ್ರಿಯಾದರೂ ಆ ಅವಕಾಶವನ್ನು ಪಕ್ಷದ ವರ್ಚಸ್ಸು ವೃದ್ಧಿಗೆ ಬಳಸಿಕೊಳ್ಳುವಲ್ಲಿ ಸಾಮೂಹಿಕ ವೈಫಲ್ಯ ಕಂಡು ಬಂತು. ಆ ನಂತರದ ಅವಧಿಯಲ್ಲಿ ಬಿಜೆಪಿ ಮತ್ತು ಜೆಡಿ(ಎಸ್) ನಡುವೆ ಹೊಂದಾಣಿಕೆಯ ಕೊರತೆ ಸಾಕಷ್ಟಿದ್ದರೂ, ದೋಸ್ತಿ ಪಕ್ಷಗಳ ಮುಖಂಡರು ಸಾರ್ವಜನಿಕವಾಗೇ ಪರಸ್ಪರ ಕೆಸರೆರಚಾಟದಲ್ಲಿ ತೊಡಗಿದ್ದರೂ ಅದನ್ನೇ ಬಳಸಿಕೊಂಡು ರಾಜಕೀಯ ಮೇಲುಗೈ ಸಾಧಿಸುವ ಪ್ರಯತ್ನ ಸದನದ ಒಳಗಾಗಲೀ, ಹೊರಗಾಗಲೀ ಕಾಂಗ್ರೆಸ್‌ನಿಂದ ಆಗಲೇ ಇಲ್ಲ. ಜೊತೆಗೆ ಸಿದ್ದರಾಮಯ್ಯ ಮತ್ತು ಅವರ ಬೆಂಬಲಿಗರನ್ನು ಪಕ್ಷಕ್ಕೆ ಸೇರಿಸಿಕೊಂಡ ನಂತರ ಅವರಿಗೆ ದೀರ್ಘ ಅವಧಿಯವರೆಗೆ ಯಾವುದೇ ಸ್ಥಾನಮಾನ ನೀಡದೇ ವಿಳಂಬ ಧೋರಣೆ ತಳೆಯಲಾಯಿತು. ಅದರಿಂದಾಗಿ ಪಕ್ಷದಲ್ಲಿ ಈ ಮೊದಲೇ ಇದ್ದ ಹಳೆಯ ಕಾಂಗ್ರೆಸ್ಸಿಗರಾದ ಖರ್ಗೆ, ಧರ್ಮಸಿಂಗ್, ಷರೀಫ್ ಮುಂತಾದವರ ಗುಂಪು ಮತ್ತು ಎಸ್.ಎಂ. ಕೃಷ್ಣ ಬೆಂಬಲಿಗರಾದ ಒಕ್ಕಲಿಗ- ಎಲೈಟ್ ಗುಂಪಿನ ಜೊತೆಗೆ ಸಿದ್ದರಾಮಯ್ಯ ಬೆಂಬಲಿಗರಾದ ವಲಸೆ ಬಂದ ದಳ ಮುಖಂಡರು ಎಂಬ ಮತ್ತೊಂದು ಗುಂಪು ಸೃಷ್ಟಿಯಾಯಿತು. ಹಾಗೇ ಪಕ್ಷ ಮುಂದಿನ ಬಾರಿ ಅಧಿಕಾರಕ್ಕೆ ಬರಲಿದೆ ಎಂಬ ನಿರೀಕ್ಷೆಯಲ್ಲಿ ಮುಖ್ಯಮಂತ್ರಿ ಗಾದಿಯ ಮೇಲೆ ಕಣ್ಣಿಟ್ಟು ದೆಹಲಿಗೆ ಹೋದ (ಸಂಸದರು ಮತ್ತು ಎಐಸಿಸಿ ಪದಾಧಿಕಾರಿಗಳು) ಮುಖಂಡರು ದೊಡ್ಡ ಸಂಖ್ಯೆಯಲ್ಲೇ ರಾಜ್ಯದತ್ತ ಮರಳತೊಡಗಿದ್ದಾರೆ. ಅವರಲ್ಲಿ ಜಾಫರ್ ಷರೀಫ್, ವೀರಪ್ಪ ಮೊಯ್ಲಿ, ಮಾರ್ಗರೇಟ್ ಆಳ್ವಾ, ಎಂ.ವಿ. ರಾಜಶೇಖರನ್, ಕೆ.ಎಚ್. ಮುನಿಯಪ್ಪ ಮುಂತಾದವರು ಪ್ರಮುಖರು. ಈ ನಡುವೆ ಕಳೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುತೇಕ ಕಡೆ ಅಭ್ಯರ್ಥಿಗಳ ಸೋಲಿಗೆ ಕಾರಣವಾಗಿದ್ದ ಬಿಎಸ್‌ಪಿ ಈ ಬಾರಿ ರಾಜ್ಯದಲ್ಲಿ ಪಿ.ಜಿ.ಆರ್. ಸಿಂಧ್ಯಾ ನೇತೃತ್ವದಲ್ಲಿ ಪೂರ್ಣ ಪ್ರಮಾಣದಲ್ಲಿ ಸಂಘಟನೆಗೆ ತೊಡಗಿದೆ. ಹಾಗೇ ಎಸ್‌ಪಿ, ರೈತ ಸಂಘ- ದಲಿತ ಸಂಘರ್ಷ ಸಮಿತಿಗಳು ಕೂಡ ಕಾಂಗ್ರೆಸ್ ಮತ ಬುಟ್ಟಿಗೇ ಕೈ ಹಾಕಲಿವೆ ಎಂಬುದು ಕೂಡ ಆಶ್ಚರ್ಯವೇನಲ್ಲ. ಅಲ್ಲದೆ, ಎಸ್.ಎಂ. ಕೃಷ್ಣ ಅವರ ಪುನರಾಗಮನದಿಂದ ಖರ್ಗೆ ಅವರ ಮುಖ್ಯಮಂತ್ರಿ ಕನಸು ಬಹುತೇಕ ಕರಗಿದ್ದು, ಅವರು ಪ್ರತಿನಿಧಿಸುವ ದಲಿತರ ಮತಗಳು ಕಾಂಗ್ರೆಸ್ ಕೈಜಾರುವ ಸಾಧ್ಯತೆಗಳೂ ಹೆಚ್ಚುತ್ತಿವೆ. ಹಾಗೇ ಕೃಷ್ಣ ಅವರಿಗಿರುವ 'ನಗರವಾಸಿಗಳ ಕಣ್ಮಣಿ' ಎಲೈಟ್ ರಾಜಕಾರಣಿ ಎಂಬ ಹೆಗ್ಗಳಿಕೆಗಳು ಕಾಂಗ್ರೆಸ್‌ನ ಭದ್ರ ನೆಲೆಯಾದ ಗ್ರಾಮೀಣ ಮತ್ತು ಅರೆಪಟ್ಟಣ ಪ್ರದೇಶಗಳಲ್ಲಿ ಚಲಾವಣೆಯಾಗಲಾರವು. ಆ ದೃಷ್ಟಿಯಿಂದ ಕೂಡ ಪಕ್ಷಕ್ಕೆ ಹೊಸ ಬೆಳವಣಿಗೆಗಳು ಅಷ್ಟೇನು ಲಾಭ ತರಲಾರವು. ಇದೀಗ ಎಂ.ಪಿ. ಪ್ರಕಾಶ್‌ರವರಂಥ ಲಿಂಗಾಯಿತ ಸಮುದಾಯದ ನಾಯಕರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಸೇರಿದ್ದಾರೆ. ಆದರೆ, ಪ್ರಕಾಶ್ ಮತ್ತು ಅವರೊಂದಿಗೆ ಬರುವ ಬೆಂಬಲಿಗರಿಗೆ ಕಾಂಗ್ರೆಸ್ ಯಾವ ಸ್ಥಾನ-ಮಾನ, ಜವಾಬ್ದಾರಿಗಳನ್ನು ವಹಿಸುತ್ತದೆ ಎಂಬುದರ ಮೇಲೆ ಮುಂದಿನ ಲಾಭ-ನಷ್ಟಗಳು ನಿರ್ಧಾರವಾಗಲಿವೆ. ನಾಯಕರ ನಡುವಿನ ಅಂತಃಕಲಹ ಮತ್ತು ನಿರುತ್ಸಾಹದಿಂದ ಬೇಸತ್ತಿದ್ದ ಪಕ್ಷದ ಕಾರ್ಯಕರ್ತರಲ್ಲಿ ಹೊಸ ಹುಮ್ಮಸ್ಸು ತುಂಬಿ ಚುನಾವಣಾ ಸಮರಕ್ಕೆ ಸಜ್ಜುಗೊಳಿಸುವುದರಲ್ಲಿ ಕೃಷ್ಣ ಅವರ 'ಡೈನಾಮಿಕ್' ವ್ಯಕ್ತಿತ್ವ ಪಕ್ಷದ ನೆರವಿಗೆ ಬರಲಿದೆ. ಆದರೆ, ಚುನಾವಣೆಗೆ ಮುನ್ನ ಮುಖ್ಯಮಂತ್ರಿ ಅಭ್ಯರ್ಥಿಯನ್ನು ಬಿಂಬಿಸದೇ ಇದ್ದರೂ ನಾಳೆ ಪಕ್ಷ ಅಧಿಕಾರಕ್ಕೆ ಬರುವ ಸಂದರ್ಭ ಬಂದಾಗ ಸಹಜವಾಗೇ ಮುಖ್ಯಮಂತ್ರಿ ಗಾದಿ ಕೃಷ್ಣರತ್ತ ಹೊರಳುತ್ತದೆ ಎಂಬುದನ್ನು ಊಹಿಸಿರುವ ಕೆಪಿಸಿಸಿ ಅಧ್ಯಕ್ಷರೂ ಸೇರಿದಂತೆ ಹಿರಿಯ ನಾಯಕರು ಹೈಕಮಾಂಡ್‌ಗೆ ದಂಬಾಲು ಬಿದ್ದಿದ್ದಾರೆ. ಪರಿಣಾಮವಾಗಿ ಈಗ ಕೃಷ್ಣ ಅವರ ನೇತೃತ್ವದ ಚುನಾವಣಾ ಸಮನ್ವಯ ಸಮಿತಿ ಕೆಪಿಸಿಸಿ ಅಡಿಯಲ್ಲಿ ಕಾರ್ಯ ನಿರ್ವಹಿಸಬೇಕೆ ಅಥವಾ ಚುನಾವಣಾ ಸಮನ್ವಯ ಸಮಿತಿ ಅಡಿಯಲ್ಲಿ ಕೆಪಿಸಿಸಿ ಚುನಾವಣಾ ಸಮಿತಿ ಬರಬೇಕೆ ಎಂಬ ಪ್ರಶ್ನೆ ಎಐಸಿಸಿಯ ಮುಂದಿದೆ. ಹಾಗಾಗಿ, ಕಾಂಗ್ರೆಸ್‌ನಲ್ಲಿ ಈಗಾಗಲೇ ಇದ್ದ ಮುಸುಕಿನ ಗುದ್ದಾಟಕ್ಕೆ ಕೃಷ್ಣಾಗಮನ ಹೊಸ ವೇಗ ನೀಡಿದೆ. ಅದು ಯಾವ ಅತಿಗೆ ಹೋಗುತ್ತದೆ ಎಂಬುದರ ಮೇಲೆ ಪಕ್ಷದ ಚುನಾವಣಾ ಕಾರ್ಯ ವೈಖರಿ ನಿರ್ಧರಿತವಾಗಲಿದೆ. ಹಾಗಾಗಿ ಸ್ಪಷ್ಟ ಬಹುಮತ ಪಡೆಯುವ ಅವಕಾಶಗಳಿದ್ದೂ ಕಾಂಗ್ರೆಸ್, ಕನಿಷ್ಠ ಕಳೆದ ಬಾರಿಯ ಸ್ಥಾನಗಳನ್ನು ಉಳಿಸಿಕೊಳ್ಳುವುದಕ್ಕೇ ಹರಸಾಹಸಪಡಬೇಕಾದ ಸ್ಥಿತಿಯಲ್ಲಿದೆ.
ರಾಜ್ಯದ ಮೂರು ಪ್ರಮುಖ ಪಕ್ಷಗಳ ಸ್ಥಿತಿ ಇದಾದರೆ, ಇನ್ನು ಜೆಡಿಯು, ಬಿಎಸ್‌ಪಿ, ಎಸ್‌ಪಿ, ರೈತ ಸಂಘಗಳ ಪರಿಸ್ಥಿತಿ ಒಟ್ಟಾರೆ ಚುನಾವಣಾ ಫಲಿತಾಂಶದ ಮೇಲೆ ಅಂಥಾ ಪರಿಣಾಮವನ್ನೇನೂ ಬೀರಲಾರದು. ಹಾಗಾಗಿ ಸದ್ಯಕ್ಕೆ ಕಣ್ಣೆದುರಿಗಿರುವುದು ಬರೀ ಅಸ್ಪಷ್ಟತೆಯೇ. ಪಕ್ಷಗಳ ಅಂತರಂಗದ ಅಸ್ಪಷ್ಟತೆ, ಮತದಾರನ ಮನದಾಳದ ಅಸ್ಪಷ್ಟತೆ ಮತ್ತು ನಾಳೆಯ ಜನಾದೇಶದ ಅಸ್ಪಷ್ಟತೆ!
ಇವೆಲ್ಲದರ ನಡುವೆ ರಾಜ್ಯದ ಹಿತದೃಷ್ಟಿಯ ಬಗ್ಗೆ ರಾಜಕಾರಣಿಗಳ ಬದಲು ಮತದಾರ ಹೆಚ್ಚು ಗಮನ ಹರಿಸುವುದು ಒಳಿತು ಎಂದೆನ್ನಿಸುತ್ತದೆ. ಅದು ಮತದಾರರ ಜವಾಬ್ದಾರಿ ಕೂಡ ಆಗಿದೆ. ಈ ಹಿಂದಿನಂತೆ ಅಸ್ಪಷ್ಟ ನಿರ್ಧಾರ ನೀಡುವ ಬದಲು, ಯಾವುದಾದರೂ ಒಂದು ಪಕ್ಷಕ್ಕೆ ಸ್ಪಷ್ಟ ಬಹುಮತ ಕೊಟ್ಟು ಬಿಡೋಣ ಎಂದು ನಮ್ಮ ರಾಜ್ಯದ ಪ್ರಬುದ್ಧ ಮತದಾರರು ನಿರ್ಧಾರ ಮಾಡಿದಲ್ಲಿ ಮಾತ್ರ ರಾಜ್ಯದಲ್ಲಿನ ರಾಜಕೀಯ ಪ್ರಕ್ಷುಬ್ಧತೆ ಕೊನೆಗಾಣಬಹುದು. ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ ನಡೆದ ರಾಜಕೀಯ ದೊಂಬರಾಟ ಮತದಾರನಿಗೆ ಈ ಪಾಠ ಕಲಿಸದೇ ಇದ್ದಲ್ಲಿ 'ಪ್ರಭು' ವನ್ನು ಯಾರು ಕಾಪಾಡುತ್ತಾರೋ ಗೊತ್ತಿಲ್ಲ.
ಟಿಎಸ್‌ಐ
|