|
ಡಾ.ಡಿ.ಎಸ್. ಪೂರ್ಣಾನಂದ
|
ಉಪನ್ಯಾಸಕರು
|
ಎರಡು ದಶಕಗಳ ಹಿಂದೆ ನಾನು ವಿದ್ಯಾರ್ಥಿ ಯಾಗಿದ್ದಾಗ ಸಮೀಕ್ಷೆಯೊಂದನ್ನು ನಡೆಸಲು ಬಂಡಿಪುರ ಅರಣ್ಯಕ್ಕೆ ಹೋಗಿದ್ದೆವು. ಅಲ್ಲಿಯ ಆದಿವಾಸಿಗಳು ಯಾವ ಆಧುನಿಕ ಮಾಧ್ಯಮಗಳನ್ನು ಬಳಸುತ್ತಾರೆ ಮತ್ತು ಅವುಗಳಿಂದ ಯಾವ ಮಾಹಿತಿ ಪಡೆದಿದ್ದಾರೆ ಎಂದು ತಿಳಿಯುವುದು ನಮ್ಮ ಉದ್ದೇಶವಾಗಿತ್ತು. ಅವರಲ್ಲಿ ಬಹುತೇಕರು ಅನಕ್ಷರಸ್ಥರಾಗಿದ್ದರಿಂದ ಪತ್ರಿಕೆಗಳನ್ನೋದುವವರು ನಮಗೆ ಕಾಣಲಿಲ್ಲ. ಆಗೊಮ್ಮೆ ಈಗೊಮ್ಮೆ ರೇಡಿಯೊ ಕೇಳಿದವರು ಕೆಲವರಿದ್ದರು. ಮಾಧ್ಯಮಗಳ ದಾಳಿಯಿಂದ ದೂರವಿದ್ದ ಅವರು ಹೆಚ್ಚು ನೆಮ್ಮದಿಯಿಂದ ಬದುಕುತ್ತಿದ್ದಾರೆ ಎನಿಸಿತು. ಮಾಧ್ಯಮಗಳು ನಮ್ಮ ಮನಸ್ಸಿನಲ್ಲಿ ವಾಸ್ತವಕ್ಕೆ ದೂರವಾದ ಆದಿವಾಸಿಗಳ ಚಿತ್ರಣ ಮೂಡಿಸಿದ್ದವು. ಸಿನಿಮಾಗಳಲ್ಲಿ ಯಾವಾಗಲೂ ನೃತ್ಯ ಮಾಡುವ ಆದಿವಾಸಿಗಳನ್ನೇ ನೋಡಿದ್ದ ನಾವು ಅವರು ನೃತ್ಯ ಮಾಡಬೇಕೆಂದು ಪೀಡಿಸಿದೆವು. ಅಕ್ಕಪಕ್ಕದ ಗುಡಿಸಲುಗಳಿಂದ ಕೆಲವರನ್ನು ಕರೆದುತಂದು ನೃತ್ಯ ಮಾಡಿದರು. 'ನಾಗರಿಕರು' ಆದಿವಾಸಿಗಳ ಮೇಲೆ ತೋರುವ ಉದ್ಧಟತನಕ್ಕೆ ಅದು ಒಂದು ಉದಾಹರಣೆಯಷ್ಟೆ. ಆದಿವಾಸಿಗಳು ನಗರವೊಂದಕ್ಕೆ ಬಂದು ಅಲ್ಲಿಯ ನಾಗರಿಕರನ್ನು ನೃತ್ಯ ಮಾಡಬೇಕೆಂದು ಕೇಳಲು ಸಾಧ್ಯವೆ?
ಮುರುಕು ಗುಡಿಸಲಿನಲ್ಲಿದ್ದ ಆ ಆದಿವಾಸಿಗಳು ಭವಿಷ್ಯದಲ್ಲಿ ನಮ್ಮ ಕಲ್ಪನೆಯ 'ಉತ್ತಮ ಜೀವನ'ದ ಕನಸನ್ನು ಹೊತ್ತವರಂತೆ ಕಾಣಲಿಲ್ಲ. ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವ ಬಗ್ಗೆ ಸರ್ಕಾರ ಹೇರಿದ್ದ ಕೆಲವು ನಿರ್ಬಂಧಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು. ಕೆಲವು ವರ್ಷಗಳ ನಂತರ ಆ ಆದಿವಾಸಿಗಳನ್ನು ಅರಣ್ಯದಿಂದ ಹೊರಗೆ ಬಲವಂತವಾಗಿ ಸ್ಥಳಾಂತರಿಸಿದ್ದನ್ನು ಪತ್ರಿಕೆಗಳಲ್ಲಿ ಓದಿದೆವು. ಅಂತಹ ಕ್ರಮ ಅನಿವಾರ್ಯವಾಗಿತ್ತು ಎಂಬ ಅಭಿಪ್ರಾಯ ಮೂಡುವಂತೆ ಪತ್ರಿಕೆಗಳು ವರದಿ ಮಾಡಿದ್ದವು. ಈ ದೇಶದ ಅಭಿವೃದ್ಧಿಗಾಗಿ ಆದಿವಾಸಿಗಳು ಹೀಗೆ ಸ್ಥಳಾಂತರಗೊಳ್ಳುತ್ತಲೇ ಇದ್ದಾರೆ. ನಗರವಾಸಿಗಳ ಸಂಪನ್ಮೂಲ ದಾಹ ಹೆಚ್ಚಾದಂತೆ ಆದಿವಾಸಿಗಳ ಬದುಕು ಅತಂತ್ರವಾಗುತ್ತಾ ಬಂದಿದೆ. ಅವರ ನೆಲ, ನೀರನ್ನು ಕಿತ್ತುಕೊಳ್ಳಲಾಗಿದೆ.
ಆದಿವಾಸಿಗಳ ಜನಸಂಖ್ಯೆ ಈ ದೇಶದ ಜನಸಂಖ್ಯೆಯ ಶೇ. ೮ರಷ್ಟಿದ್ದರೂ ಅಭಿವೃದ್ಧಿ ಯೋಜನೆಗಳಲ್ಲಿ ವಸತಿಹೀನರಾದವರಲ್ಲಿ ಶೇ. ೪೦ರಷ್ಟು ಅವರೇ ಇದ್ದಾರೆ. ಶತಮಾನಗಳ ಕಾಲ ವಾಸವಾಗಿದ್ದ ತಮ್ಮ ಭೂಮಿಯಿಂದ ಕಿತ್ತೊಗೆಯಲ್ಪಟ್ಟ ಇವರು ಬದುಕುವುದಕ್ಕಾಗಿ ನಗರದ ಕೊಳಗೇರಿಗಳಿಗೆ ವಲಸೆ ಹೋಗಿದ್ದಾರೆ. ಇಲ್ಲವೆ, ಭೂರಹಿತ ಕೂಲಿಗಳಾಗಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯ ಕಾವಲು ನಾಯಿಗಳೆಂದು ಮತ್ತು ಜನಸಾಮಾನ್ಯರ ಧ್ವನಿಯೆಂದು ಹೇಳಿಕೊಳ್ಳುವ ಮಾಧ್ಯಮಗಳಿಗೆ ಆದಿವಾಸಿಗಳ ಶೋಚನೀಯ ಪರಿಸ್ಥಿತಿ ಸುದ್ದಿಯ ವಸ್ತುವಾಗಿ ಕಾಣುವುದಿಲ್ಲ. ಅಲ್ಲದೆ ಆದಿವಾಸಿ ಹಕ್ಕುಗಳ ಪರವಾಗಿ ಹೋರಾಡುವವರು ಪ್ರಗತಿಯ ವಿರೋಧಿಗಳೆಂಬ ಟೀಕೆಗೊಳಗಾಗಿದ್ದಾರೆ. ಮೂರು ವರ್ಷಗಳ ಹಿಂದೆ ಒರಿಸ್ಸಾ ರಾಜ್ಯದ ಕಳಿಂಗ ನಗರದ ಹತ್ತಿರದ ಸಾವಿರಾರು ಎಕರೆ ಭೂಮಿಯನ್ನು ಕೈಗಾರಿಕಾ ಸಂಸ್ಥೆಯೊಂದಕ್ಕಾಗಿ ವಶಪಡಿಸಿಕೊಳ್ಳುವ ಪ್ರಯತ್ನ ಮಾಡಿದಾಗ ಪ್ರತಿಭಟನೆಗೆ ಮುಂದಾದ ಆದಿವಾಸಿಗಳ ಮೇಲೆ ಗುಂಡು ಹಾರಿಸಿ ಕೆಲವರನ್ನು ಕೊಲ್ಲಲಾಯಿತು. ಈ ಘಟನೆ ಪ್ರಮುಖ ರಾಷ್ಟ್ರೀಯ ಮಾಧ್ಯಮಗಳಿಗೆ ಹಿಂದುಳಿದ ಒರಿಸ್ಸಾ ರಾಜ್ಯದ ಕ್ಯೆಗಾರಿಕಾ ಬೆಳವಣಿಗೆಗೆ ಹಿನ್ನಡೆಯಾಗಿ ಮಾತ್ರ ಕಂಡಿತು.
ಆದಿವಾಸಿಗಳ ಕುರಿತಂತೆ ನಾಗರಿಕ ಸಮಾಜ ಏನು ಮಾಡಬೇಕೆಂಬ ಬಗ್ಗೆ ಎರಡು ವಾದ ಸರಣಿಗಳಿವೆ. ಒಂದು ಅವರನ್ನು ರಾಷ್ಟ್ರೀಯ ಮುಖ್ಯವಾಹಿನಿಗೆ ತರಬೇಕೆಂಬುದು. ಈಗಿರುವ ಸ್ಥಿತಿಯಲ್ಲೇ ಅವರಿದ್ದರೆ ಮತ್ತಷ್ಟು ಶೋಷಣೆಗೆ ಗುರಿಯಾಗುತ್ತಾರೆ. ಹಾಗಾಗಿ ಅವರನ್ನು ಕಾಡಿನಿಂದ ಅಥವಾ ಅವರು ವಾಸವಿರುವ ಜಾಗದಿಂದ ಹೊರತಂದು ಆಧುನಿಕ ಮುಂದುವರಿದ ಸಮಾಜದ ಭಾಗವಾಗಿ ಬದುಕುವಂತೆ ಮಾಡಬೇಕೆಂಬುದು. ಮತ್ತೊಂದು ಆದಿವಾಸಿ ಜೀವನದಲ್ಲಿ ಮಧ್ಯಪ್ರವೇಶಿಸದೆ ಅವರದೇ ಲೋಕದಲ್ಲಿ, ಅವರದೇ ಸಂಪ್ರದಾಯ ಮತ್ತು ಜೀವನ ಶೈಲಿಯೊಂದಿಗೆ ಬದುಕಲು ಬಿಟ್ಟುಬಿಡುವುದು. ಈ ಬಗ್ಗೆ ಮಾನವಶಾಸ್ತ್ರಜ್ಞರು, ನಾಗರಿಕ ಹಕ್ಕು ಹೋರಾಟಗಾರರು ಮತ್ತು ಸಮಾಜಶಾಸ್ತ್ರಜ್ಞರಲ್ಲಿ ಒಮ್ಮತವಿಲ್ಲ.
ಪಾಶ್ಚಿಮಾತ್ಯ ದೇಶಗಳಲ್ಲಾದ ಅಭಿವೃದ್ಧಿ ಭಾರತದಲ್ಲಿ ಸಾಧ್ಯವಿದೆ ಎಂದು ದೇಶದ ಆರ್ಥಿಕ ಮತ್ತು ಸಾಮಾಜಿಕ ನೀತಿಗಳನ್ನು ರೂಪಿಸುವವರು ನಂಬಿದ್ದಾರೆ. ಇಂದಿನ ಆದಿವಾಸಿಗಳು ಅನುಭವಿಸುತ್ತಿರುವ ಅನೇಕ ಸಮಸ್ಯೆಗಳ ಮೂಲ ಇರುವುದು ಇಲ್ಲಿಯೇ. ಪಾಶ್ಚಿಮಾತ್ಯ ರಾಷ್ಟ್ರಗಳ ಅಭಿವೃದ್ಧಿ ತ್ವರಿತಗತಿಯಲ್ಲಾದುದಕ್ಕೆ ಮೂರನೇ ಜಗತ್ತಿನ ರಾಷ್ಟ್ರಗಳನ್ನು ವಸಾಹತುಗಳನ್ನಾಗಿಸಿ ಅಲ್ಲಿಯ ಸಂಪನ್ಮೂಲಗಳನ್ನು ದೋಚಿದ್ದೇ ಕಾರಣವಾಗಿತ್ತು. ಪಶ್ಚಿಮದಂತೆ ಭಾರತ ಬೆಳೆಯಬೇಕಾದರೆ ತಾನೂ ಕೂಡ ಇತರ ದೇಶಗಳನ್ನು ಆಕ್ರಮಿಸಿಕೊಂಡು ವಸಾಹತುಗಳನ್ನಾಗಿ ಅಲ್ಲಿಯ ಸಂಪನ್ಮೂಲಗಳನ್ನು ಕೊಳ್ಳೆಹೊಡೆಯಬೇಕು. ಆದರೆ ಭಾರತದಂತಹ ದೇಶಕ್ಕೆ ಅದು ಸಾಧ್ಯವಿಲ್ಲದಿರುವುದರಿಂದ ದೇಶದೊಳಗೇ ಇರುವ ಕೆಲವು ಪ್ರದೇಶಗಳನ್ನು ವಸಾಹತುಗಳನ್ನಾಗಿ ಪರಿವರ್ತಿಸಬೇಕು. ಕಳೆದ ಆರು ದಶಕಗಳಿಂದ ಇದು ನಡೆಯುತ್ತಾ ಬಂದಿದೆ. ಈ ಆಂತರಿಕ ವಸಾಹತುಶಾಹಿಗೆ ಹೆಚ್ಚ್ಚಾಗಿ ಬಲಿಯಾಗಿರುವವರು ಆದಿವಾಸಿಗಳು. ದೇಶದ ಆರ್ಥಿಕ ಪ್ರಗತಿಗಾಗಿ ತಮ್ಮ ನೆಲ, ನೀರು, ಕಾಡು, ಸಂಸ್ಕೃತಿಗಳನ್ನು ಕಳೆದುಕೊಂಡು ನಿರ್ಗತಿಕರಾಗಿದ್ದಾರೆ. ಪ್ರಭುತ್ವ ಮತ್ತು ಇತರ ಆರ್ಥಿಕ ಮತ್ತು ಸಾಮಾಜಿಕ ಶಕ್ತಿಗಳು ನಡೆಸುವ ದಮನಕಾರಿ ಹಿಂಸೆಯಿಂದ ಹತಾಶರಾದ ಆದಿವಾಸಿಗಳು ಅಸಾಂವೈಧಾನಿಕ ಮಾರ್ಗಗಳ ಮೊರೆಹೋಗಿದ್ದಾರೆ. ಆದಿವಾಸಿ ಪ್ರದೇಶಗಳಲ್ಲಿ ತೀವ್ರವಾದದ ಬೆಳವಣಿಗೆಗೆ ಆಂತರಿಕ ವಸಾಹತುಶಾಹಿಯೇ ಪ್ರಮುಖ ಕಾರಣವೆಂದು ಹಲವು ಸಮಾಜಶಾಸ್ತ್ರಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಭಾರತದ ವಿವಿಧ ಪ್ರದೇಶಗಳಲ್ಲಿ ನಿರ್ಮಿತವಾಗಿರುವ ಬೃಹತ್ ಅಣೆಕಟ್ಟುಗಳು ಲಕ್ಷಾಂತರ ಆದಿವಾಸಿಗಳನ್ನು ನಿರಾಶ್ರಿತರನ್ನಾಗಿಸಿರುವುದು ಆಂತರಿಕ ವಸಾಹತುಶಾಹಿಗೆ ಉದಾಹರಣೆಯಾಗಿದೆ. ನರ್ಮದಾ ಯೋಜನೆಯ ಭಾಗವಾಗಿರುವ ಸರ್ದಾರ್ ಸರೋವರ್ ಅಣೆಕಟ್ಟೆಯ ನಿರ್ಮಾಣದ ಮೇಲೆ ವಿಧಿಸಲಾಗಿದ್ದ ತಡೆಯಾಜ್ಞೆಯನ್ನು ಎಂಟು ವರ್ಷಗಳ ಹಿಂದೆ ತೆರವುಗೊಳಿಸಿದ ಸುಪ್ರೀಂಕೋರ್ಟ್ ತೀರ್ಮಾನವನ್ನು ಕಾರ್ಗಿಲ್ ಯುದ್ಧದಲ್ಲಿ ದೊರೆತ ವಿಜಯಕ್ಕೆ ಹಲವು ಪತ್ರಿಕೆಗಳು ಹೋಲಿಸಿದವು. ನಮ್ಮದೇ ದೇಶದ ನಿರ್ಗತಿಕ ನಾಗರಿಕರ ಮೇಲೆ ನಡೆಸಿದ ಯುದ್ಧ ಇದಾಗಿತ್ತು.
ಪರಿಶಿಷ್ಟ ಪಂಗಡ ಮತ್ತು ಇತರ ಸಾಂಪ್ರದಾಯಿಕ ಅರಣ್ಯ ನಿವಾಸಿಗಳ (ಅರಣ್ಯ ಹಕ್ಕುಗಳ ಮಾನ್ಯತಾ) ಕಾಯ್ದೆ ೨೦೦೮ರ ಜನವರಿ ೧ರಿಂದ ಜಾರಿಗೆ ಬಂದಿದೆ. ಅರಣ್ಯದಲ್ಲಿ ವಾಸಿಸುವ ಆದಿವಾಸಿಗಳ ಹಕ್ಕುಗಳನ್ನು ಮೊದಲ ಬಾರಿಗೆ ಶಾಸನಬದ್ಧವಾಗಿಸುವ ಈ ಕಾಯ್ದೆಯನ್ನು ಐತಿಹಾಸಿಕ ಅನ್ಯಾಯವನ್ನು ಸರಿಪಡಿಸುವ ಕ್ರಾಂತಿಕಾರಿ ಕಾಯ್ದೆಯೆಂದು ಬಣ್ಣಿಸಲಾಗಿದೆ. ಅರಣ್ಯದಿಂದ ಆದಿವಾಸಿಗಳನ್ನು ಹೊರದಬ್ಬುವ ಸಾಧ್ಯತೆಗಳು ಈ ಕಾಯ್ದೆಯಡಿಯಲ್ಲಿಯೂ ಇರುವುದರಿಂದ ಅವರ ಆತಂಕವಿನ್ನೂ ಸಂಪೂರ್ಣವಾಗಿ ನಿವಾರಣೆಯಾಗಿಲ್ಲ. ಏಕೆಂದರೆ ಪ್ರಮುಖ ವನ್ಯಜೀವಿ ತಾಣಗಳೆಂದು ವರ್ಗೀಕರಣಗೊಳ್ಳುವ ಪ್ರದೇಶಗಳನ್ನು ಇತರೆ ಯಾವುದೇ ಉದ್ದೇಶಗಳಿಗೆ ಬಳಸುವಂತಿಲ್ಲ. ವನ್ಯಜೀವಿಗಳ ಸಂರಕ್ಷಣೆಗೆ ಅಗತ್ಯವೆಂದು ಕಂಡುಬಂದರೆ ಆ ಪ್ರದೇಶಗಳಿಂದ ಅರಣ್ಯವಾಸಿಗಳನ್ನು ಸ್ಥಳಾಂತರಿಸಬಹುದಾಗಿದೆ. ನೂರಾರು ವರ್ಷಗಳಿಂದ ಕಾಡನ್ನು ನಾಶ ಮಾಡುತ್ತಾ ಬಂದಿರುವ ವರ್ಗವೇ ಅರಣ್ಯವಾಸಿಗಳನ್ನು ಇಂದು ಸಂರಕ್ಷಣೆಯ ಹೆಸರಲ್ಲಿ ಹೊರದೂಡಬೇಕೆಂದು ವಾದಿಸುತ್ತಿದೆ. ಅದೇನೇ ಇರಲಿ ಅರಣ್ಯವಾಸಿಗಳಿಗೆ ಭದ್ರತೆ ನೀಡುವ ಕೆಲವು ಅಂಶಗಳು ಹೊಸ ಕಾಯ್ದೆಯಲ್ಲಿರುವುದು ಸಮಾಧಾನಕರ ವಿಚಾರ.
ಬದುಕಿನ ಎಲ್ಲ ಕ್ಷೇತ್ರಗಳೂ ವಾಣಿಜ್ಯೀಕರಣಗೊಳ್ಳುತ್ತಿರುವ ಈ ಸಂದರ್ಭದಲ್ಲಿ ಆದಿವಾಸಿಗಳು ಇನ್ನೂ ಹೆಚ್ಚಿನ ದಾಳಿಗೆ ತುತ್ತಾಗುವ ಸಾಧ್ಯತೆಗಳಿವೆ. ನಾವು ತುಳಿಯುತ್ತಿರುವ ಅಭಿವೃದ್ಧಿ ಪಥ ಬದಲಾಗದೆ ಆದಿವಾಸಿಗಳ ಅಭ್ಯುದಯ ಅಸಾಧ್ಯವೆಂದೇ ತೋರುತ್ತದೆ. ಟಿಎಸ್‌ಐ |