|
ನಿಮ್ಮ ಬಾಲ್ಯ ಚಿತ್ರ ನಿರ್ದೇಶಕನಾಗುವ ನಿಟ್ಟಿನಲ್ಲಿ
ಯಾವ ರೀತಿ ಪ್ರಭಾವ ಬೀರಿದೆ ?
ನನ್ನ ತಂದೆ ಕಲಾಸಕ್ತರು .
ಅಜ್ಜ ಸಾಹಿತ್ಯದೆಡೆ ಒಲವಿದ್ದವರು.
ಇವೆಲ್ಲಾ ನಾನು ಸಾಹಿತ್ಯ,
ಕಲೆ ಇವುಗಳೆಡೆ ಆಸಕ್ತಿ ಬೆಳೆಸಿಕೊಳ್ಳಲು ಸಹಾಯ
ಮಾಡಿತು ಎನ್ನುವುದು ನಿಜ.
ಆದರೆ ನಾನು ಚಿತ್ರ ನಿರ್ದೇಶನವನ್ನು ಆಯ್ಕೆ
ಮಾಡಿಕೊಳ್ಳಲು ಅವೇ ಪ್ರೇರಣೆಯೇನಲ್ಲ.
ಮೂಲತಃ ನನಗೆ ಸಿನಿಮಾದಲ್ಲಿ
ತೊಡಗಿಸಿಕೊಳ್ಳುತ್ತೇನೆ ಎಂಬ ಅರಿವು ಇರಲಿಲ್ಲ.
ಆದರೆ ಇಲ್ಲಿ ಒಂದು ಅಂಶ ಹೇಳಲೇಬೇಕು.
೬೦ರ ದಶಕದಲ್ಲಿ ಹೊಸ ಸಾಹಿತ್ಯ ಚಳವಳಿಗಳ ಶಕೆ
ಆರಂಭವಾಯಿತು.
ಸಾಂಸ್ಕೃತಿಕವಾಗಿ ಕನ್ನಡದಲ್ಲಿ ಹೊಸ ಉಮೇದು ಆರಂಭವಾಗಿತ್ತು.
ಹೊಸ ಅಲೆಯ ಚಿತ್ರಗಳು ಸೃಷ್ಟಿಗೊಂಡವು.
'ಸಂಸ್ಕಾರ'
ಬಂದಾಗಿತ್ತು.
ಬಿ.ವಿ.
ಕಾರಂತರಂತಹ ನಿರ್ದೇಶಕರಿದ್ದರು.
ಇವೆಲ್ಲವೂ ವಿದ್ಯಾರ್ಥಿ ದೆಸೆಯಲ್ಲಿದ್ದ ನನ್ನ
ಮೇಲೆ ಪ್ರಭಾವ ಬೀರಿತ್ತು.
ಈ ಪ್ರತಿ ಅಂಶವೂ ನನ್ನಲ್ಲೊಂದು ಎಚ್ಚರ
ಹುಟ್ಟಿಸಿತ್ತು,
ನಿರ್ದೇಶನವನ್ನು ವೃತ್ತಿಯನ್ನಾಗಿಸಿಕೊಳ್ಳುವ ನಿಟ್ಟಿನಲ್ಲಿ
ಇವೆಲ್ಲ ಪ್ರೇರಣೆಯಾದವು.
ನೀವು ಕಾದಂಬರಿ ಆಧಾರಿತ ಚಿತ್ರಗಳನ್ನೇ ಹೆಚ್ಚಾಗಿ
ನಿರ್ದೇಶಿಸಲು ನಿರ್ದಿಷ್ಟ ಕಾರಣ ?
ಉದ್ದೇಶಪೂರ್ವಕವಾಗಿ ಕಾದಂಬರಿ ಆಧರಿಸಿ ಚಿತ್ರ
ಮಾಡುತ್ತೇನೆ ಎಂದೇನಲ್ಲ .
ಕಾದಂಬರಿಯ ಕಥಾ ಹಂದರವನ್ನು ಚಿತ್ರಕ್ಕೆ ಅಳವಡಿಸಬಹುದು
ಎಂದೆನಿಸಿದಾಗ ಅದರಲ್ಲಿ ಚಿತ್ರಕ್ಕೆ ಬೇಕಾದಂತಹ ಬದಲಾವಣೆಗಳನ್ನು ತಂದುಕೊಂಡು
ನಿರ್ದೇಶಿಸುತ್ತೇನೆ.
ಕಾದಂಬರಿ ಓದುತ್ತಿರುವಾಗ ಕಥೆಗೆ ಜನರನ್ನು ಇನ್ನೊಂದು
ರೀತಿಯಲ್ಲೂ ತಲುಪಲು ಸಾಧ್ಯವಿದೆ ಎಂದೆನಿಸಿದರೆ ಅದು ಚಿತ್ರದ ರೂಪ
ಪಡೆದುಕೊಳ್ಳುತ್ತಾ ಹೋಗುತ್ತದೆ.
ಕಾದಂಬರಿಯ ಕಥೆಯನ್ನು ಬೇರೆ ರೀತಿಯಲ್ಲಿ
ಅರ್ಥೈಸಿಕೊಳ್ಳುವ ಸಾಧ್ಯತೆಯೇ ಚಿತ್ರದ ಹುಟ್ಟಿಗೆ ಕಾರಣ.
ಇದರ ಸ್ಫೂರ್ತಿಯೇ ಚಿತ್ರದ ಸೃಷ್ಟಿ.
ಕಾದಂಬರಿಗೂ ನನ್ನ ಸಿನಿಮಾಕ್ಕೂ ಬಹಳ
ವ್ಯತ್ಯಾಸಗಳಿರುತ್ತವೆ.
ಆದರೆ ಮೂಲ ಆಶಯಕ್ಕೆ ಯಾವತ್ತೂ ಕುಂದುಂಟು ಮಾಡುವುದಿಲ್ಲ.
ಅದೆಷ್ಟೋ ಜನ ಮೂಲ ಕಥೆಗೂ ಇಲ್ಲಿಗೂ ಹೊಂದಾಣಿಕೆಯೇ
ಆಗುವುದಿಲ್ಲವಲ್ಲ ಎಂದು ನನ್ನ ಬಳಿ ಕೇಳಿದ್ದಿದೆ.
ಹಾಗೆಂದು ಕಾದಂಬರಿ ಆಧರಿಸದೆಯೂ ನಾನು
ಚಿತ್ರಗಳನ್ನು ಮಾಡಿದ್ದೇನೆ.
ಕಾದಂಬರಿ ಆಧಾರಿತ ಚಿತ್ರಗಳನ್ನು ಮಾಡುವಾಗಿನ ಸವಾಲು ...
ಸವಾಲು ಎಲ್ಲಾ ಕಡೆಯೂ ಇದ್ದದ್ದೇ .
ಸಿನಿಮಾ ಪ್ರತಿಮೆಗಳ ಮೂಲಕ ಕಟ್ಟುವ ಭಾಷೆ.
ಸಿನಿಮಾ ನಿಂತಿರುವುದು ಅದು ನೀಡುವ ವಿವರಗಳ ಮೇಲೆ.
ಇಲ್ಲಿ ಪ್ರತಿಸೃಷ್ಟಿಯ ಕೆಲಸ ನಡೆಯುತ್ತದೆ.
ಕಾಲ ಮತ್ತು ದೇಶಗಳನ್ನು ಮೀರುವ
ಪ್ರಯತ್ನವಾಗುತ್ತದೆ.
ಇವೆರಡನ್ನೂ ಸೃಷ್ಟಿಸುತ್ತಾ ಸಿನಿಮಾ ಅಲ್ಲೇ ಬೇರು
ಬಿಡುತ್ತಾ ಹೋಗುತ್ತದೆ.
ಪ್ರದೇಶ ಎಂದರೆ ಅಲ್ಲಿನ ಸಾಮಾಜಿಕ,
ಆರ್ಥಿಕ,
ಸಾಂಸ್ಕೃತಿಕ ಆಯಾಮಗಳ ಸೃಷ್ಟಿ.
ಇದನ್ನು ನಿರ್ದೇಶಕ ಎಷ್ಟು ಗಟ್ಟಿಯಾಗಿ
ಕಟ್ಟಿಕೊಡುತ್ತಾ ಹೋಗುತ್ತಾನೆ ಎನ್ನುವುದು ಮುಖ್ಯ.
ನಿರ್ದಿಷ್ಟವಾದ ಚೌಕಟ್ಟನ್ನು ಮೀರಿ ಹೋಗಲೂ
ಸಾಧ್ಯವಿಲ್ಲ.
ಮೂರ್ತ ಬಿಂಬಗಳ ಮೂಲಕ ಎಲ್ಲವನ್ನೂ ವಿಷದೀಕರಿಸಬೇಕು.
ಮೂರ್ತದಿಂದ ಅಮೂರ್ತಕ್ಕೆ ಹೋಗದಿದ್ದಾಗ ಅಲ್ಲಿ
ಸೋಲನುಭವಿಸಬೇಕಾಗುತ್ತದೆ.
ಅದು ಕಾಲವನ್ನೂ ಧ್ವನಿಸಬೇಕು.
ವಸ್ತು-ವ್ಯಕ್ತಿಯನ್ನೂ
ಪ್ರತಿಬಿಂಬಿಸಬೇಕು.
ಆಗಲೇ ಸಾರ್ವಕಾಲಿಕ ಭಾವನೆ ಬರೋದು.
ಈಗ 'ನಾಯಿ
ನೆರಳು'
ಅಥವಾ 'ತಾಯಿ
ಸಾಹೇಬ'ವನ್ನೇ
ತಗೆದುಕೊಳ್ಳಿ.
ಅಲ್ಲಿ ಕಥೆಗೆ ಪೂರಕವಾಗಿ ಹಳೆಯ ಕಾಲದ ಕಾರನ್ನು
ಬಳಸಿಕೊಳ್ಳಲಾಗಿದೆ.
ಇದು ಜೀವನ ಮಟ್ಟ,
ಆರ್ಥಿಕ ಸದೃಢತೆ,
ಬಲಾಢ್ಯತೆ...
ಹೀಗೆ ಸಾಮಾಜಿಕ ಸಮೀಕರಣವನ್ನು ನೋಡುಗನಿಗೆ ಕಟ್ಟಿ
ಕೊಡುತ್ತದೆ.
ಆಧುನಿಕ ಕಾಲದಲ್ಲಿದ್ದುಕೊಂಡು ಶತಮಾನಗಳ ಹಿಂದಿನ ಕಥೆ
ನಿರೂಪಿಸುವುದರ ಪ್ರಸ್ತುತತೆ ?
ಇಲ್ಲಿ ಪ್ರಸ್ತುತ ಎಂದರೆ ಏನು ಎಂಬ ಪ್ರಶ್ನೆ
ಹುಟ್ಟಿಕೊಳ್ಳುತ್ತದೆ .
ಒಂದು ಕಥೆಯ ಸಾರ್ವಕಾಲಿಕ ಮೌಲ್ಯ ಮುಖ್ಯವಾಗುತ್ತದೆ ಹೊರತು
ಕಥಾ ಹಂದರ ಯಾವ ಕಾಲದಲ್ಲಿ ಸಂಭವಿಸಿದ್ದು ಎಂಬುದಲ್ಲ.
ಆ ಕಾಲದ ಸಾಮಾಜಿಕ ಸಂಘರ್ಷಗಳು,
ನಾವು ಏನನ್ನು ಎಷ್ಟು ಪರಿಣಾಮಕಾರಿಯಾಗಿ
ಹೇಳುತ್ತೇವೆ ಎಂಬುದು ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ.
ವಿಶ್ವಯುದ್ಧದ ಬಗ್ಗೆಯೋ,
ಯಹೂದಿಗಳ ಬಗ್ಗೆಯೋ ಈಗ ಚಿತ್ರ ಮಾಡಿದರೆ ಅದನ್ನು
ಅಪ್ರಸ್ತುತ ಎನ್ನಲಾಗುತ್ತದೆಯೇ?
ಚಿತ್ರ ತಾತ್ವಿಕ ನೆಲೆಗಟ್ಟಿನ ಮೇಲಿರಬೇಕು ಅಷ್ಟೆ.
ಪರಿಪೂರ್ಣ ಚಿತ್ರವೊಂದನ್ನು ನೀವು ಹೇಗೆ
ವ್ಯಾಖ್ಯಾನಿಸುತ್ತೀರಿ ?
ಒಂದು ಚಿತ್ರ ಶ್ರೇಷ್ಠ ಎಂದು ಕರೆಸಿಕೊಳ್ಳುವುದು ಯಾವಾಗ?
ಪರಿಪೂರ್ಣ ಚಿತ್ರಕ್ಕೆ
ಸಾಮಾನ್ಯ ಸೂತ್ರ ಎಂಬುದಿಲ್ಲ. ಸತ್ಯಜಿತ್ ರೇ ತಮ್ಮ ಚಿತ್ರದಲ್ಲಿ ನಿರಂತರ
ಜೀವನ ಪ್ರವಾಹವನ್ನು ಕಟ್ಟಿಕೊಡುತ್ತಾರೆ. ಅದೇ ಅಬ್ಬಾಸ್ ಕಿರೋಸ್ತಾಮಿ
ವಿವರಗಳನ್ನು ಚಿತ್ರದಿಂದ ಹೊರಗಿಡುತ್ತಾ ಹೋಗುತ್ತಾರೆ. ಇನ್ನು ಹಾಲಿವುಡ್‌ನ
'ಇಂಪರ್‌ಫೆಕ್ಟ್' ಸಿನಿಮಾಗಳು. ಇವೆಲ್ಲವೂ ನನಗೆ ಖುಷಿ ಕೊಡುತ್ತವೆ. ಸಿನಿಮಾ
ನೋಡುತ್ತಾ ಇದ್ದೇನೆ ಎಂದರೆ ಅಲ್ಲಿ ನನಗೆ ಎಲ್ಲವೂ ದಕ್ಕುತ್ತಾ ಹೋಗಬೇಕು.
ಸೂಚ್ಯವಾಗಿ ಎಲ್ಲವನ್ನೂ ಹೇಳುತ್ತಾ ನನ್ನನ್ನು ಯೋಚನೆಗೀಡು ಮಾಡುತ್ತಿರಬೇಕು.
ಸಿನಿಮಾ ನೋಡಿದ ಮೇಲೆ ನಾನು ಒಂದು ಅಂಗುಲವಾದರೂ ಬೆಳೆದಿದ್ದೇನೆ ಎಂದೆನಿಸಬೇಕು.
ಮನುಷ್ಯ-ಮನುಷ್ಯ ನಡುವಿನ ಸಂಬಂಧದ ಸೂಕ್ಷ್ಮತೆ, ಕಾಲವನ್ನು
ಪ್ರಭಾವಿಸುತ್ತಿರುವ ಚಿತ್ರವಾಗಬೇಕು. ಆಗ ಅದೊಂದು ಒಳ್ಳೆಯ ಚಿತ್ರವಾಗುತ್ತದೆ.
ರಿಮೇಕ್ ಚಿತ್ರಗಳ ಕುರಿತು ಏನೆನ್ನುತ್ತೀರಿ ?
ಆರ್ಥಿಕ ಕಾರಣಗಳಿಗಾಗಿ
ರಿಮೇಕ್ ಮೊರೆ ಹೋಗುತ್ತಾರೆ. ಅಂಥವರಲ್ಲಿ ಕರ್ತೃತ್ವ ಶಕ್ತಿ ಇಲ್ಲ ಎಂದು
ಹೇಳಬಹುದಷ್ಟೆ. ಆದರೆ ಸರ್ಕಾರ ಇವರಿಗೇಕೆ ಬೆಂಬಲ ಕೊಡಬೇಕು? ಇಂತಹ
ಚಿತ್ರಗಳಿಂದ ಕನ್ನಡನಾಡಿಗೆ ಪ್ರಯೋಜನ ಆಗುವಂತಹದ್ದೇನೂ ಇಲ್ಲ. ಇನ್ನು ಚಿತ್ರ
ನಿರ್ಮಾಣ ಬಹಳ ಜನರಿಗೆ ಉದ್ಯೋಗ ಕಲ್ಪಿಸುತ್ತದೆ ಎಂದಾದರೆ ಕಳ್ಳತನ, ದರೋಡೆಯೂ
ಕೆಲಸ ಕೊಡುತ್ತದೆ. ಕನ್ನಡದಲ್ಲಿ ಕಥೆಗೆ ಬರ ಬಂದಿದೆ ಎಂಬುದಂತೂ ಶುದ್ಧ
ಸುಳ್ಳು. ನಮ್ಮ ಸುತ್ತಮುತ್ತಲು ನಡೆಯುತ್ತಿರುವ ಘಟನೆಗಳನ್ನೇ ಸೂಕ್ಷ್ಮವಾಗಿ
ಗಮನಿಸಿದರೆ ವಸ್ತು ಇಲ್ಲೇ ಸಿಗುತ್ತದೆ. ಇದಕ್ಕೆ ಉತ್ತಮ ಉದಾಹರಣೆ 'ಸಯನೈಡ್'
ಚಿತ್ರ.
ನಿಮ್ಮ ಚಿತ್ರಗಳು ನಿಧಾನ ಗತಿಯಲ್ಲಿರುತ್ತದೆ .
ಇದು ಧಾವಂತದ ಕಾಲ.
ಇಂತಹ ಸನ್ನಿವೇಶಕ್ಕೆ ಆ ತರಹದ ಚಿತ್ರಗಳು ಹೊಂದಿಕೆ
ಆಗುತ್ತವೆ ಎಂದೆನಿಸುವುದೇ?
ಚಿತ್ರದ ಗತಿಗಿಂತ ಅದು ಪ್ರೇಕ್ಷಕನನ್ನು ಹೇಗೆ
ಚಿಂತನೆಗೆ ಒಡ್ಡುತ್ತದೆ ಎನ್ನುವುದು ಮುಖ್ಯ. ಒಂದು ಕಾದಂಬರಿ ಓದುವಾಗ ಗತಿ
ಮುಖ್ಯ ಎಂದೆನಿಸುವುದೇ ಇಲ್ಲ. ಚಿತ್ರ ಗ್ರಹಣದಲ್ಲಿರುವ ಸಮಸ್ಯೆ ಎಂದರೆ ಕಥೆಯೇ
ಸಿನಿಮಾ ಎಂದು ತಿಳಿದುಕೊಳ್ಳುವುದು. ಚಿತ್ರದಲ್ಲಿ ಭಾವೋತ್ಕಟತೆ ಹೆಚ್ಚಾಗಿ
ಪ್ರೇಕ್ಷಕ ಮೈಮರೆಯುವಂತಾಗಬಾರದು. ಆತ ತನ್ನನ್ನು ತಾನು ಅಲ್ಲಿ
ಗುರುತಿಸಿಕೊಳ್ಳುವಂತಾಗಬೇಕು. ಚಿತ್ರದಲ್ಲಿ ಸಣ್ಣಪುಟ್ಟ ಏರಿಳಿತಗಳಿದ್ದು, ಆ
ಸಣ್ಣ ಬದಲಾವಣೆಯೇ ದೊಡ್ಡ ಸಾಮಾಜಿಕ ಸಂಘರ್ಷದ ಪ್ರತಿರೂಪವಾಗುತ್ತಾ ಹೋಗಬೇಕು.
ಪ್ರೇಕ್ಷಕನನ್ನು ಕಾಡುವುದು ಮಂದ ಲಯದ ಚಿತ್ರಗಳು. ಭಾವೋತ್ಕಟತೆಗೆ
ಪ್ರಾಧಾನ್ಯ ಕೊಟ್ಟಷ್ಟೂ ನೀವು ಪುಳಕಗೊಳ್ಳುತ್ತೀರೇ ಹೊರತೂ ಅದು ಚಿಂತನೆಗೆ
ಒಡ್ಡುವಲ್ಲಿ ವಿಫಲವಾಗುತ್ತದೆ. ನಾವು ಘಟನೆಯನ್ನು ತಲುಪಿಸುತ್ತಾ,
ವಿವರಗಳನ್ನು ಕೊಡಬೇಕು. ನನ್ನಲ್ಲಿ ಹುಟ್ಟಿದ ಖುಷಿ ಪ್ರೇಕ್ಷಕನಲ್ಲೂ
ಹುಟ್ಟಬೇಕು. ಇಲ್ಲವೆಂದರೆ ಅದು ಅಂಚೆ ಚೀಟಿ ಹಂಚಿದಂತಾಗುತ್ತದೆಯೇ ಹೊರತು
ಪ್ರೇಕ್ಷಕನ ಜೊತೆಗಿನ ಸಂವಹನವಾಗದು.
ನಿಮ್ಮ ಪ್ರಕಾರ ಕಲಾತ್ಮಕ ಚಿತ್ರ ಎಂದರೇನು ?
ಕಲಾತ್ಮಕ ಎನಿಸಿಕೊಳ್ಳುವ ಚಿತ್ರ ತಾಂತ್ರಿಕವಾಗಿ
ದುರ್ಬಲವಾಗಿರುತ್ತವೆ ಎಂಬ ಅಭಿಪ್ರಾಯವಿದೆ.
ಹೀಗೇಕೆ?
ಇದು ನಾವು ಮಾಡಿಕೊಂಡ
ವರ್ಗೀಕರಣ. ಒಳ್ಳೆ ಕಾದಂಬರಿ, ಒಳ್ಳೆ ವರ್ಣಚಿತ್ರ ಯಾವುದೆಂದು ಹೇಳಲಾಗದೋ
ಹಾಗೆಯೇ ಕಲಾತ್ಮಕ ಚಿತ್ರವೂ ವ್ಯಾಖ್ಯೆಗೆ ನಿಲುಕದ್ದು. ಸಿನಿಮಾ
ವೈಭೋವೋಪೇತವಾಗಿರುವುದಕ್ಕಿಂತ ಕಥೆಗೆ ಎಷ್ಟು ಪೂರಕವಾಗಿ ದೃಶ್ಯಗಳನ್ನು
ಹೆಣೆಯಲಾಗಿದೆ, ವಸ್ತುವಿಗೆ ಯಾವ ರೀತಿ ಆವರಣ ಸೃಷ್ಟಿಸಲಾಗಿದೆ ಎಂಬುದು
ಪ್ರಾಮುಖ್ಯತೆ ಪಡೆದುಕೊಳ್ಳುತ್ತದೆ. ಇಲ್ಲಿ ಮತ್ತೆ ಜಿಜ್ಞಾಸೆ
ಹುಟ್ಟಿಕೊಳ್ಳುತ್ತದೆ. ತಾಂತ್ರಿಕವಾಗಿ ಉತ್ತಮ ಎಂದರೆ ಕಣ್ಣಿಗೆ ಹಿತವಾಗಿ
ಕಾಣುವುದಷ್ಟೆಯೇ? ಬಹಳ ಆಕರ್ಷಕವಾಗಿದ್ದರೆ ಮಾತ್ರ ಅದು ಉತ್ತಮವೇ? 'ಚೋಮನ
ದುಡಿ'ಯಲ್ಲಿ ಬಳಸಿದ ಅಪರಿಚಿತ ವಾದ್ಯದ ಕರ್ಕಶ ಶಬ್ದ ಹಿತವೆನಿಸುತ್ತದೆ.
ಸುಂದರವಾಗಿ ದೃಶ್ಯಗಳನ್ನು ಸೆರೆಹಿಡಿಯುವುದು ವ್ಯಸನ. ಅದು ಮೈ ಮರೆಸುತ್ತದೆ.
ನಮ್ಮಲ್ಲಿ 'ವಿಶುವಲ್ ಎಜುಕೇಶನ್' ಎಂಬುದಿಲ್ಲ. ಹಾಗಾಗಿಯೇ ಈ ಸಮಸ್ಯೆ.
ಛಾಯಾಚಿತ್ರಗ್ರಹಣ ಎನ್ನುವುದೊಂದು ಭಾಷೆ. ಭಾವನೆಗಳನ್ನು ನಿರುದ್ವಿಗ್ನವಾಗಿ
ಹೇಳುವುದು ಸಾಧನೆ. ಇದನ್ನು ಅರಿತವರು ಉದ್ದೇಶಪೂರ್ವಕವಾಗಿಯೇ ನವಿರಾಗಿ
ಹೇಳುವುದನ್ನು ತಪ್ಪಿಸುತ್ತಾರೆ. ಚಿತ್ರವೊಂದು ವಾಸ್ತವ ಮತ್ತು ಸಂದಿಗ್ಧತೆ
ಯನ್ನು ಹೇಳಿದಾಗ ಅಲ್ಲಿ ನಿಜವಾದ ಕಾಳಜಿ ಇರುತ್ತದೆ. ಅದು ಪ್ರೇಕ್ಷಕನನ್ನು
ಆವರಿಸುವಂತಾಗಬೇಕು. ಆತ ವಿವೇಚನಾ ಶಕ್ತಿ ಬದಿಗಿಟ್ಟು ನೋಡಬಾರದು. ನಿಜವಾದ
ಸಿನಿಮಾ ವ್ಯಕ್ತಿಯನ್ನು ಮೋಡಿಗೊಳಪಡಿಸದೆ ಆತ್ಮಶೋಧನೆಯ ಹಾದಿಯತ್ತ
ಕೊಂಡೊಯ್ಯಬೇಕು.
ಕನ್ನಡದಲ್ಲಿ ವರ್ಷಕ್ಕೆ ನೂರಕ್ಕೂ ಹೆಚ್ಚು ಚಿತ್ರಗಳು
ಬರುತ್ತಿವೆ .
ಅವುಗಳಲ್ಲಿ ಬಹಳಷ್ಟು ಕಳಪೆ ಗುಣಮಟ್ಟದವು.
ಕನ್ನಡ ಚಿತ್ರರಂಗದ ಬೆಳವಣಿಗೆಯ ದೃಷ್ಟಿಯಲ್ಲಿ
ಇದೆಷ್ಟು ಮಾರಕ?
ಕನ್ನಡ ಚಿತ್ರರಂಗದಲ್ಲಿ
ಸಾಮಾಜಿಕ ಎಚ್ಚರ ಮತ್ತು ವೃತ್ತಿಪರತೆ ಇರುವವರ ಸಂಖ್ಯೆ ಕಡಿಮೆಯಾಗುತ್ತಿದೆ.
ತಂತ್ರಗಾರಿಕೆಯಲ್ಲೂ ತಾತ್ವಿಕ ನೆಲೆಗಟ್ಟು ಮಾಯವಾಗುತ್ತಿದೆ. ಹೊರಗಿನ
ಜಗತ್ತಿಗೆ ತಮ್ಮನ್ನು ತಾವು ತೆರೆದುಕೊಳ್ಳದಿರುವುದೇ ಇದಕ್ಕೆ ಕಾರಣ. ಸಿನಿಮಾ
ಉಪದೇಶ ನೀಡಬೇಕು ಎಂಬುದು ಹಳೆಯ ಗ್ರಹಿಕೆ. ಈಗ ಪರಿಸ್ಥಿತಿ ಹಾಗಿಲ್ಲ.
ವಿದ್ಯಾರ್ಥಿ ಗುರುಗಳನ್ನೇ ಪ್ರಶ್ನಿಸುವ ಕಾಲ ಇದು. ಜಾಗತಿಕ ಸಾಹಿತ್ಯದ ಓದು,
ಇತರ ಚಿತ್ರಗಳನ್ನು ನೋಡದೆ ಇರುವುದರಿಂದಲೇ ಈ ಸಮಸ್ಯೆ ಸೃಷ್ಟಿಯಾಗಿದೆ.
ವಸ್ತುವನ್ನು ಆರಿಸಿ, ಆ ಕುರಿತು ಅಧ್ಯಯನ ಮಾಡಿ ಸಂಪೂರ್ಣ ಸಿದ್ಧತೆ ಮಾಡಬೇಕು.
ನಿರ್ದೇಶನ ತಪಸ್ಸು ಇದ್ದ ಹಾಗೆ. ಅದಿಲ್ಲವೆಂದರೆ ಅವು ಕಳಪೆ ಗುಣಮಟ್ಟದವೇ
ಆಗಿರುತ್ತವೆ.
ಭಾರತೀಯ ಸಿನಿಮಾದ ಹೊಸ ತಲೆಮಾರಿನ ನಿರ್ದೇಶಕರ ಬಗ್ಗೆ
ಏನು ಹೇಳುತ್ತೀರಿ ?
ಹೊಸ ತಲೆಮಾರಿನ
ನಿರ್ದೇಶಕರೆಂದರೆ ಬಾಲಿವುಡ್ ನಿರ್ದೇಶಕರು ಎಂಬ ತಪ್ಪು ಕಲ್ಪನೆಯೊಂದಿದೆ.
ಆದರೆ ಬಾಲಿವುಡ್‌ನಲ್ಲಿ ಇರುವುದಕ್ಕಿಂತ ಅದ್ಭುತ ಚಿತ್ರಗಳು ಪ್ರಾದೇಶಿಕ
ಭಾಷೆಯಲ್ಲಿ ಬರುತ್ತಿವೆ. ಮರಾಠಿ ಚಿತ್ರರಂಗದಲ್ಲಿ ಉತ್ತಮ
ಪ್ರಯೋಗಗಳಾಗುತ್ತಿವೆ. ಬಂಗಾಳಿ ಮತ್ತು ಮಲಯಾಳಂನಲ್ಲೂ ಉತ್ತಮ
ನಿರ್ದೇಶಕರಿದ್ದಾರೆ. ಉತ್ತಮ ಎಂದಾಕ್ಷಣ ಎಲ್ಲರನ್ನೂ ಸತ್ಯಜಿತ್ ರೇ ಅವರಿಗೆ
ಹೋಲಿಸಲು ಸಾಧ್ಯವಿಲ್ಲ. ರೇ ಅಂತಹವರು ಶತಮಾನಕ್ಕೊಬ್ಬರೇ ಬರಲು ಸಾಧ್ಯ. ಆದರೆ
ಹೊಸ ಸಂವೇದನೆಯುಳ್ಳ ನಿರ್ದೇಶಕರು ಬಂದರೆ ಚಿತ್ರರಂಗಕ್ಕೆ ಒಳ್ಳೆಯದು.
ಸಂಗೀತಕ್ಕೆ ಪ್ರಾಧಾನ್ಯ ನೀಡುವ ಹೊಸ ಪ್ರಯತ್ನವನ್ನು
'ದ್ವೀಪ'ದಲ್ಲಿ
ಮಾಡಲು ಕಾರಣ?
ಸಂಗೀತ ಸನ್ನಿವೇಶವನ್ನು
ಕೃತಕವಾಗಿ ಕಟ್ಟಿಕೊಡುತ್ತದೆ. ಹಾಗಾಗಿ 'ದ್ವೀಪ'ದವರೆಗೆ ಸಂಗೀತವನ್ನು
ಪ್ರಮುಖ ಅಂಗವಾಗಿ ಬಳಸಿಕೊಂಡಿರಲಿಲ್ಲ. ಆದರೆ 'ದ್ವೀಪ' ಮನುಷ್ಯ ಪ್ರಯತ್ನಗಳ
ಆಚರಣೆಯಾಗಿತ್ತು. ಅಲ್ಲಿ ನಾಲ್ಕು ಮುಖ್ಯ ಪಾತ್ರಗಳ ಜೊತೆಗೆ ಪ್ರಕೃತಿ ಐದನೇ
ಪಾತ್ರವಾಗಿದೆ. ಪ್ರಕೃತಿ ಅಲ್ಲಿ ಹೊಸ ಪರಿಭಾಷೆಯಾಗಿದೆ. ಅದನ್ನು ಪಾತ್ರವಾಗಿ
ತರಲು ಸಾಧ್ಯವಾಗುತ್ತಿದ್ದುದು ಸಂಗೀತ ಬಳಸಿದರೆ ಮಾತ್ರ. ನಂತರದ ಚಿತ್ರದಲ್ಲಿ
ಅಥವಾ ಬರಲಿರುವ 'ಗುಲಾಬಿ ಟಾಕೀಸ್'ನಲ್ಲಾಗಲೀ ಸಂಗೀತಕ್ಕೆ ಬಹಳ ಪ್ರಾಧಾನ್ಯತೆ
ನೀಡಿಲ್ಲ.
ಭಾರತೀಯ ಚಿತ್ರಗಳು ಆಸ್ಕರ್‌ನಲ್ಲಿ ಸ್ಪರ್ಧಿಸಲು
ವಿಫಲವಾಗುತ್ತಿರಲು ಕಾರಣ ?
ಆಸ್ಕರ್ ಸ್ಪರ್ಧೆಗೆ
ಯೋಗ್ಯವಾದ ಚಿತ್ರಗಳು ನಮ್ಮಲ್ಲಿ ಇವೆ. ಆದರೆ ಅವುಗಳು ಅಲ್ಲಿ
ಸ್ಪರ್ಧಿಸುತ್ತಲೇ ಇಲ್ಲ. ಪ್ರಭಾವ ಇರುವ ಚಿತ್ರಗಳಷ್ಟೇ ಆಸ್ಕರ್‌ಗೆ
ಹೋಗುತ್ತಿವೆ. ಕೇಂದ್ರ ಸರ್ಕಾರದ ವಾರ್ತಾ ಮತ್ತು ಪ್ರಸಾರ ಇಲಾಖೆ ಈ
ನಿಟ್ಟಿನಲ್ಲಿ ಪ್ರಯತ್ನ ಮಾಡಬೇಕು. ಇಲ್ಲಿ ನಿಮಗೊಂದು ವಿಪರ್ಯಾಸದ
ಸಂಗತಿಯನ್ನು ಹೇಳುತ್ತೇನೆ. ತಮ್ಮ ಚಿತ್ರ ಬದುಕಿನ ಸುಮಾರು ೪೦ ವರ್ಷಗಳಲ್ಲಿ
ಸತ್ಯಜಿತ್ ರೇ ಮೂವತ್ತಕ್ಕೂ ಹೆಚ್ಚು ಚಿತ್ರ ನಿರ್ದೇಶಿಸಿದ್ದರು. ಆದರೆ ಅವರ
ಒಂದೇ ಒಂದು ಚಿತ್ರವನ್ನೂ ಭಾರತೀಯ ಆಯ್ಕೆ ಮಂಡಳಿ ಆಸ್ಕರ್‌ಗೆ ಕಳಿಸಿದ್ದಿಲ್ಲ.
ಆದರೆ ಆಸ್ಕರ್ ಆಯ್ಕೆ ಮಂಡಳಿಯೇ ಅವರ ಸಾಧನೆ ಗುರುತಿಸಿ ಜೀವಮಾನದ ಅತ್ಯುತ್ತಮ
ಸಾಧನೆಗೆ ಪ್ರಶಸ್ತಿ ನೀಡಿತು. ಪ್ರಾದೇಶಿಕ ಭಾಷೆಗಳಲ್ಲಿ ಆಸ್ಕರ್ ಸ್ಪರ್ಧೆಗೆ
ಯೋಗ್ಯವಾದ ಚಿತ್ರಗಳಿವೆ. ಆದರೆ ನಾವಿನ್ನೂ ಹಿಂದಿ ಚಿತ್ರಗಳನ್ನೇ
ಕಳಿಸುತ್ತಿದ್ದೇವೆ. ಇದು ದುರಂತ.
ನಿಮ್ಮ ಅಭಿಪ್ರಾಯದಲ್ಲಿ ಚಿತ್ರ ನಿರ್ದೇಶನ ಎಂದರೆ ....
ನಿರ್ದೇಶನ ಎಂದರೆ ಹುಡುಕಾಟ.
ಅದು ನಿರಂತರ ನಡೆಯುವ ಸಾಮೂಹಿಕ ಸಂವಾದ. ಆರೋಗ್ಯಕರ ಸಂವಾದಕ್ಕೆ ಪೀಠಿಕೆ
ಹಾಕುವುದು ನಿರ್ದೇಶಕನ ಕೆಲಸ. ಇಲ್ಲಿ ಯಾವುದಕ್ಕೂ ಉತ್ತರ ಸಿಗದು. ಹಾಗೆ
ಸಿಕ್ಕಿತೆಂದರೆ ಅದೇ ಅಂತ್ಯವಾಗಿ ಬಿಡುತ್ತದೆ. ಸಾರ್ವಕಾಲಿಕ ಉತ್ತರ
ಇಲ್ಲಿಲ್ಲ. ಇಲ್ಲೇನಿದ್ದರೂ ಇರುವುದು ಜೀವನ ಸಂದಿಗ್ಧತೆಗಳಿಗೆ ಉತ್ತರದ
ಹುಡುಕಾಟ.
' ಗುಲಾಬಿ ಟಾಕೀಸ್'
ಚಿತ್ರದ ಕುರಿತು...
ಇದು ವೈದೇಹಿ ಅವರ ಸಣ್ಣಕಥೆ
ಆಧರಿಸಿದ ಚಿತ್ರ. ವೈದೇಹಿ ಅವರೇ ಹೇಳುವಂತೆ ಇದೊಂದು ಕವಲು ಕಥೆ. ಇಲ್ಲಿ
ಮರುಸೃಷ್ಟಿಯ ಕೆಲಸವಾಗುತ್ತದೆ. ಅಂದರೆ ಒಂದು ಕಥೆಯಿಂದ ಇನ್ನೊಂದು ಕಥೆ
ಹುಟ್ಟಿಕೊಳ್ಳುತ್ತದೆ. 'ಗುಲಾಬಿ ಟಾಕೀಸ್'ನ ಪ್ರಧಾನ ಭೂಮಿಕೆಯಲ್ಲಿರುವ
ಪಾತ್ರದ ಹೆಸರೇ ಗುಲಾಬಿ. ಆಕೆ ಸೂಲಗಿತ್ತಿ. ಆಕೆಯ ಸ್ನೇಹಿತೆ ನೇತ್ರು. 'ಗುಲಾಬಿ
ಟಾಕೀಸ್' ಎಂಬ ಚಿತ್ರಮಂದಿರದಲ್ಲಿ ಇವರೆಲ್ಲಾ ಸಿನಿಮಾ ನೋಡುತ್ತಾ ತಮ್ಮ ಖುಷಿ
ಹಂಚಿಕೊಳ್ಳುತ್ತಾರೆ. ಸಿನಿಮಾ ಇಲ್ಲಿ ಅವರಿಗೆ ಕನಸುಗಾರಿಕೆಯ ಕೇಂದ್ರ
ಬಿಂದುವಾಗುತ್ತದೆ. ಕನಸಿನ ಒಳಗಿನ ಬೇರೆ ಬೇರೆ ಸಾಧ್ಯತೆಗಳು
ತೆರೆದುಕೊಳ್ಳುತ್ತಾ ಹೋಗುತ್ತದೆ. ಇದೇ ಸಂದರ್ಭದಲ್ಲಿ ನೇತ್ರು ಊರುಬಿಟ್ಟು
ಓಡಿಹೋಗುತ್ತಾಳೆ. ಗುಲಾಬಿ ಗಂಡ ಮೀನುಗಾರಿಕೆಯಲ್ಲಾದ ಸಮಸ್ಯೆಯಿಂದ
ಓಡಿಹೋಗುತ್ತಾನೆ. ಇಲ್ಲಿ ನೇತ್ರುವೇ ಗುಲಾಬಿಯ ಇನ್ನೊಂದು ಮುಖವಾಗುತ್ತಾಳೆ.
ವಸ್ತುಸ್ಥಿತಿ ಏನಿದೆ ಎಂದು ನೋಡದೆ ಗುಲಾಬಿಯನ್ನು ಊರು ಬಿಟ್ಟು
ಓಡಿಸಲಾಗುತ್ತದೆ. ಗುಲಾಬಿ ಪಾತ್ರವನ್ನು ಉಮಾಶ್ರೀ ಮತ್ತು ನೇತ್ರು
ಪಾತ್ರವನ್ನು ಎಂ.ಡಿ. ಪಲ್ಲವಿ ನಿರ್ವಹಿಸಿದ್ದಾರೆ. 'ದ್ವೀಪ'ಕ್ಕೆ ಸಂಗೀತ
ನೀಡಿದ್ದ ಐಸಾಕ್ ಥಾಮಸ್ ಅವರೇ ಈ ಚಿತ್ರಕ್ಕೂ ಸಂಗೀತ ನೀಡಿದ್ದಾರೆ.
' ಗುಲಾಬಿ ಟಾಕೀಸ್'
ಜೀವನ ಸಂದಿಗ್ಧತೆಗಳಿಗೆ ಉತ್ತರ ಹುಡುಕುವ ಪ್ರಯತ್ನವೇ?
ಈ ಚಿತ್ರದಲ್ಲಿ ಮಾಧ್ಯಮಗಳ
ಪರಿಣಾಮ ಒಂದು ಸಮಾಜದ ಮೇಲೆ ಯಾವ ರೀತಿ ಆಗುತ್ತಿದೆ ಎಂಬುದನ್ನು ಹೇಳುವ ಯತ್ನ
ಮಾಡಿದ್ದೇನೆ. ಕಥೆಯಲ್ಲಿ ಎಂದಿನಂತೆ ದೊಡ್ಡ ತೆರೆಗೆ ಹೊಂದಿಕೆಯಾಗಬಲ್ಲ
ಬದಲಾವಣೆ ಮಾಡಿಕೊಂಡಿದ್ದೇನೆ. ಮಾಧ್ಯಮಗಳು ಸಿದ್ಧ ಅಭಿಪ್ರಾಯಗಳನ್ನು ನಮ್ಮ
ಮೇಲೆ ಹೇರುತ್ತವೆ. ಅವುಗಳ ನಿಲುವನ್ನು ನಾವು ಪ್ರಶ್ನಿಸುವುದೇ ಇಲ್ಲ.
ಅವುಗಳನ್ನು ಹಾಗೇ ಸ್ವೀಕರಿಸುತ್ತಾ ನಮ್ಮೊಳಗೆ ನಮ್ಮದೇ ಆದ ಹೊಸ ಸ್ಕ್ರಿಪ್ಟ್
ತಯಾರಾಗುತ್ತದೆ. ಇಲ್ಲಿ ಎಲ್ಲಾ ಮಾಹಿತಿಯೂ ಲಭ್ಯ. ಆದರೆ ಇವು ಎಷ್ಟು ಸತ್ಯ
ಎಂಬುದು ಯಾರಿಗೂ ಗೊತ್ತಿಲ್ಲ. ಈ ಚಿತ್ರವೂ ಒಂದು ಹುಡುಕಾಟವೇ.
ಸ್ತ್ರೀ ಸಂವೇದನೆಗಳಿರುವ ಚಿತ್ರಗಳನ್ನೇ ಹೆಚ್ಚಾಗಿ
ನಿರ್ದೇಶಿಸಿದ್ದೀರಿ .
'ಗುಲಾಬಿ
ಟಾಕೀಸ್'
ಅಂತಹ ಇನ್ನೊಂದು ಚಿತ್ರವೇ?
ಸ್ವತಃ ಮಹಿಳೆಯೇ ಈಗ
ಎಲ್ಲೆಡೆ ಕೇಂದ್ರಬಿಂದುವಾಗುತ್ತಿದ್ದಾಳೆ. ಹಾಗೆಂದು ನಾನು
ಉದ್ದೇಶಪೂರ್ವಕವಾಗಿ ಇಂತಹ ವಸ್ತುಗಳನ್ನೇ ಆಯ್ದುಕೊಳ್ಳುತ್ತೇನೆ ಎಂದಲ್ಲ. ಕಥೆ
ಇಷ್ಟವಾಗಿ ಅದನ್ನು ತೆರೆಯ ಮೇಲೆ ತರುವ ಸಾಧ್ಯತೆಗಳಿದ್ದಾಗ ಚಿತ್ರಕಥೆಯ ಕೆಲಸ
ಶುರುಮಾಡುತ್ತೇನಷ್ಟೆ. ಆದರೂ ಪ್ರತಿ ಬಾರಿ ಹೀಗೇಕಾಗುತ್ತದೆ ಎಂಬುದು
ಗೊತ್ತಿಲ್ಲ. ಸ್ತ್ರೀ ಸಂವೇದನೆಯೆಡೆಗೆ ಒಲವಿದೆ ಎಂದು ಹೇಳಲಾರೆ. ಏಕೆಂದರೆ
ನಾನು ಅದರ ಹೊರತಾಗಿಯೂ ಚಿತ್ರಗಳನ್ನು ನಿರ್ದೇಶಿಸಿದ್ದೇನೆ.
ಟಿಎಸ್‌ಐ
|