ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಬಣ್ಣದ ಲೋಕ
 
 

ಅಂದೇ ತಿಳಿದಿದ್ದರೆ...

'ಫೆಂಟಾಸ್ಟಿಕ್ ಫೋರ್' ನಟಿ ಜೆಸ್ಸಿಕಾ ಆಲ್ಬಾ ಜೀವನ ಫೆಂಟಾಸ್ಟಿಕ್ ಆಗಿರಲಿಲ್ಲ ಎಂಬ ವಿಷಯ ಶೀಘ್ರ ಜಗಜ್ಜಾಹೀರಾಗಲಿದೆ. 'ಇಫ್ ಐ ವುಡ್ ನೋನ್ ದೆನ್' ಸಂಕಲನದಲ್ಲಿ ಆಲ್ಬಾ ಬಾಲ್ಯದ ಭಾವಗಳನ್ನು ಮೆಲುಕು ಹಾಕಿದ್ದಾಳೆ. ಇತರರನ್ನು ಮೀರಿಸಿ ಬೆಳೆಯುತ್ತಿದ್ದೇನೆಂಬ ಒಂದೇ ಕಾರಣಕ್ಕೆ ಅವಾಚ್ಯ ಪದಗಳಿಂದ ಜರೆದ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯ, ನನ್ನ ಮುಗ್ಧತೆಯನ್ನು ಹಲವು ಹುಡುಗರು ಬಳಸಿಕೊಂಡಿದ್ದಾರೆ... ಹೀಗೆ ಇರುವುದು- ಇಲ್ಲದ್ದು ಎಲ್ಲವನ್ನೂ ಸೇರಿಸಿ ಎಲ್ಲರನ್ನೂ ಜಡಿದಿದ್ದಾಳೆ. ಅಬ್ಬಾ! ಈ ತಾಪಕ್ಕೆ ಅದೆಷ್ಟು ಮಂದಿ ಪೇಚಿಗೆ ಸಿಲುಕಬೇಕೋ ದೇವರೇ ಬಲ್ಲ!

ಮೇಕಿಂಗ್ ಆಫ್ ಸೂಪರ್‌ಹೀರೋ

ಹೃತಿಕ್ ರೋಷನ್ ಭಾರತದ ಸೂಪರ್‌ಸ್ಟಾರ್ ಮಾತ್ರವಲ್ಲ, ಸೂಪರ್ ಹೀರೋ ಕೂಡಾ. 'ಕೋಯಿ ಮಿಲ್ ಗಯಾ'ದಲ್ಲಿ ಪ್ರಚಂಡ ಶಕ್ತಿಯುಳ್ಳ ನಟನಾದರೆ ನಂತರ ಬಂದ 'ಕ್ರಿಷ್'ನಲ್ಲಿ ರೋಚಕ ಸಾಹಸ ದೃಶ್ಯಗಳು, ಅಮೋಘ ನೆಗೆತಗಳಿಂದ ಭಾರತದ ಸೂಪರ್‌ಮ್ಯಾನ್ ಆಗುವತ್ತ ದೈತ್ಯ ಹೆಜ್ಜೆ ಹಾಕಿದ್ದು ಸತ್ಯ. ಬಾಲಿವುಡ್‌ನಲ್ಲಿ ಸದೃಢ, ಸುಂದರಕಾಯದ ತರುಣರಿಗೇನೂ ಕೊರತೆಯಿಲ್ಲ. ಆದರೆ ಮನ್ಮಥ ರೂಪ ಮತ್ತು ಅದ್ಭುತ ಶಕ್ತಿ ಒಗ್ಗೂಡಿಸಿಕೊಂಡಿರುವುದು ಹೃತಿಕ್ ಮಾತ್ರ. ಯಾರಿಗೆ ಗೊತ್ತು? ಮುಂದೊಂದು ದಿನ ಸ್ಪೈಡರ್‌ಮ್ಯಾನ್, ಸೂಪರ್‌ಮ್ಯಾನ್ ಸಾಲಿಗೇ ನಮ್ಮ ಭಾರತೀಯ ಸೂಪರ್‌ಹೀರೋ ಕೂಡಾ ಸೇರಬಹುದು.

ಹಾಗೇ ಸುಮ್ಮನೆ...

ಕನ್ನಡಕ್ಕೆ ಮತ್ತೊಬ್ಬ ಮುಂಬೈ ಬೆಡಗಿ ಎಂಟ್ರಿಯಾಗಿದೆ. ಹೆಸರು ಸುಹಾಸಿ. ಹುಡುಕಿ ತಂದ ಹಿರಿಮೆ ನಿರ್ದೇಶಕರಾಗಿ ಬಡ್ತಿ ಪಡೆದ ಪ್ರೀತಂ ಗುಬ್ಬಿ ಅವರದು. 'ಹಾಗೇ ಸುಮ್ಮನೆ' ಚಿತ್ರದಲ್ಲಿ ನಟಿಸುತ್ತೀಯಾ ಎಂದು ಕೇಳಿದರೆ 'ವಾಹ್!' ಎಂದು ಉದ್ಘಾರ ತೆಗೆದು ಒಪ್ಪಿ ಬಿಟ್ಟಿದ್ದಾಳೆ ಈ ಚಂದ್ರ ಚಕೋರಿ. 'ಮುಂಗಾರು ಮಳೆ' ಬ್ರಹ್ಮ ಎಂದು ಪ್ರೀತಂ ಕುರಿತು ಆದರಾಭಿಮಾನದ ಭಂಡಾರವನ್ನೇ ಹೊತ್ತು ಸ್ಯಾಂಡಲ್‌ವುಡ್‌ಗೆ ಬಂದಿಳಿದಿರುವ ಈ ಬೆಡಗಿ ಬಳಿ ಪಾತ್ರದ ಬಗ್ಗೆ ಕೇಳಿದರೆ ಪಟ ಪಟ ಪ್ರಶಂಸೆಯ ಸುರಿಮಳೆಗರೆಯುತ್ತಾಳೆ. ತೆಲುಗಿನಲ್ಲಿ ನಟಿಸಿದ ಅನುಭವ ಬೇರೆ ಬೆನ್ನ ಹಿಂದಿದೆ. ಕನ್ನಡದಲ್ಲಿ ಇನ್ನೆರಡು ಚಿತ್ರಗಳನ್ನು ಗಿಟ್ಟಿಸಿಕೊಳ್ಳಲು ಇಷ್ಟು ಸಾಕು!

ಬಿಪ್ಸ್ ತಂತ್ರ

'ರೇಸ್' ಚಿತ್ರದಲ್ಲಿ ಬಿಪಾಶಾ ಬಸು ಮಾದಕ ಮೈಮಾಟ ಪಡ್ಡೆ ಹುಡುಗರ ಎದೆ ಝಲ್ ಅನ್ನಿಸುವಂತಿದೆ! ಆದರೆ ಬಿಪಾಶಾ ಮಾತ್ರ "ಇದೆಲ್ಲಾ ಏನ್ ಮಹಾ ಬಿಡಿ. ಚಿತ್ರದ ಒಂದು ಭಾಗ ಅಷ್ಟೇ" ಎಂದು ಕೂಲಾಗಿ ನೀರೆರಚಿದ್ದಾಳೆ. ಸೈಫ್ ಅಲಿ ಖಾನ್ ಜೊತೆಗಿನ ಬಿಸಿ ಬಿಸಿ ದೃಶ್ಯಗಳ ಬಗ್ಗೆ ಕೇಳಿದರೆ ಅವರನ್ನೆಲ್ಲಾ 'ಗುಡ್ ಫ್ರೆಂಡ್' ಪಟ್ಟಿಗೆ ಸೇರಿಸಿಬಿಡುತ್ತಾಳೆ. ಬಾಲಿವುಡ್ ರಥವೇರುವ ಎಲ್ಲಾ ತಂತ್ರಗಳನ್ನು ಬಿಪ್ಸ್ ಅರೆದು ಕುಡಿದಿದ್ದಾಳೆ ಬಿಡಿ! ಅರ್ಥ ಮಾಡಿಕೊಂಡಷ್ಟೂ ಒಳ್ಳೆಯದು ಎಂದು ಖುಷಿ ಪಡುತ್ತಿದ್ದಾರೆ ಪಡ್ಡೆ ಹುಡುಗರು!

ಶಿಲ್ಪಾ ಬಯೋಗ್ರಫಿ

'ಬಿಗ್ ಬ್ರದರ್' ನಂತರ ಜಗತ್ತೇ ಶಿಲ್ಪಾ ಶೆಟ್ಟಿಗೆ ಜೈಕಾರ ಹಾಕುತ್ತಿದೆ. ಇತ್ತ ಭಾರತೀಯರು ಹೆಮ್ಮೆಯಿಂದ ಬೀಗಿದರೆ, ಅತ್ತ ಬ್ರಿಟಿಷರ ಆರಾಧ್ಯ ದೈವವಾಗಿ ಬಿಟ್ಟಳು. ಈಗ ಸಂಪೂರ್ಣ ಇಂಗ್ಲೆಂಡ್ ಶಿಲ್ಪಾಳನ್ನು ಕಪಾಟಿನಲ್ಲಿ ಭದ್ರಪಡಿಸ ಹೊರಟಿದ್ದಾರೆ! ಅಯ್ಯೋ, ಭಯ ಬೇಡ. ಜ್ಯೂಲಿ ಆಸ್ಪಿನಲ್ ಬರೆದಿರುವ 'ಶಿಲ್ಪಾ: ದ ಬಯೋಗ್ರಫಿ' ಈಗ ಶಿಲ್ಪಾ ಪ್ರೇಮಿಗಳ ಸೊತ್ತು. ರಿಯಾಲಿಟಿ ಶೋ ಮೊದಲು ಮತ್ತು ನಂತರ ಶಿಲ್ಪಾ ನೀಡಿದ ಸಂದರ್ಶನಗಳ ತುಣುಕು ಈ ಅನಧಿಕೃತ ಪುಸ್ತಕದಲ್ಲಿದೆ. ಅದೂ ಮುಖತಃ ಆಕೆಯಿಂದ ಮಾಹಿತಿ ಪಡೆಯದೆ! ಅದೃಷ್ಟ ಅರಸಿಕೊಂಡು ಬಂದರೆ...

ಹೊಸ ಹಾದಿ...

ಪಟಾಕಿ ಹೊಡೆದರೆ ಶಬ್ದ ಮಾಲಿನ್ಯ. ಹೂವಿನ ಹಾರ ಹಾಕಿದರೆ ಪರಿಸರ ಮಾಲಿನ್ಯ. ಇನ್ನು ಹೇಗಪ್ಪಾ ಚಿತ್ರ ಬಿಡುಗಡೆ ಸಂಭ್ರಮ ಆಚರಿಸೋದು? ಚೊಚ್ಚಲ ಚಿತ್ರ ಬಿಡುಗಡೆ ಸಂಭ್ರಮಕ್ಕೆ ಯು2 ನಿರೂಪಕ ಆನಂದ್ ಹೊಸ ಹಾದಿ ಹಿಡಿದಿದ್ದಾನೆ. ಹೌದು, 'ಮನಸುಗಳ ಮಾತು ಮಧುರ' ಚಿತ್ರದ ಬಿಡುಗಡೆ ಖುಷಿಗೆ ಮೇನಕಾ ಥಿಯೇಟರ್ ಬಳಿ 200 ಜನ ರಕ್ತದಾನ ಮಾಡುತ್ತಿದ್ದಾರೆ! ಆನಂದ್ ಗೆಳೆಯರು ರೋಟರಿ ಕ್ಲಬ್ ಜೊತೆ ಸೇರಿ ಈ ಸಾಹಸಕ್ಕೆ ಕೈ ಹಾಕಿದ್ದಾರೆ. ಆನಂದ್‌ಗೆ ಗಣೇಶ್ ನಂ 2 ಆಗೋ ಕನಸೇನೋ ಇದೆ. ಅದೃಷ್ಟ ಎಲ್ಲಿ ಕೊಂಡೊಯ್ಯುತ್ತೋ ಕಾದು ನೋಡೋಣ.

ನವ್ಯ ನಂಬಿಕೆ!

ಇದು ಐದಂಕಿ ಚಟ ಅಂಟಿಸಿಕೊಂಡಾಕೆಯ ಕಥೆ. ಹೌದು, 'ಗಜ' ನಾಯಕಿ ನವ್ಯಾನಾಯರ್ ಲಕ್ಕಿ ನಂಬರ್ 5. ಅದಕ್ಕೇ ಅದೆಂತಾ ಸೂಪರ್ ಚಿತ್ರದಲ್ಲೇ ನಟಿಸಿರಲಿ, 25 ದಿನ ಓಡದೆ ಈ ಬೆಡಗಿ ಆ ಚಿತ್ರವನ್ನು ನೋಡೋದೆ ಇಲ್ಲ. 25 ದಿನಕ್ಕೆ ಚಿತ್ರ ನೋಡಲು ಅಸಾಧ್ಯವಾದರೆ ಆಮೇಲೆ 50ನೇ ದಿನವೇ ಚಿತ್ರ ನೋಡೋ ಸೌಭಾಗ್ಯ! ಆಗಲೂ ಆಗದೇ ಇದ್ದಲ್ಲಿ 75 ನೇ ದಿನ ಅಥವಾ 125ನೇ ದಿನ! 'ಗಜ' ಅರ್ಧ ಶತಕ ಹೊಡೆದಾಗಿದೆ. ಆದರೆ ಚಿತ್ರ ನೋಡೋ ಭಾಗ್ಯ ನವ್ಯಾಗೆ ಇನ್ನೂ ಬಂದಿಲ್ಲ. ಅರೆ, ಕಳ್ಳನಿಗೆ ಪಿಳ್ಳೆ ನೆವ ಅಂದಿರಾ! ನೋ ಕಮೆಂಟ್ಸ್...

ಎನ್.ಕೆ. ಸುಪ್ರಭಾ, ಪ್ರಸಿದ್ಧ ಮೆನನ್

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .