|
| ಪ್ರಶಾಂತೊ ಬ್ಯಾನರ್ಜಿ |
ನುಡಿಚಿತ್ರ ಸಂಪಾದಕ
ದ ಸಂಡೆ ಇಂಡಿಯನ್
|
"ಬೈದ್ಯನಾಥ್ ಮಾತನಾಡುವುದೇ ಕಡಿಮೆ. ಏಕೆಂದರೆ ಅವರ ಬಳಿ ಮಾತನಾಡುವವರು ಯಾರೂ ಇಲ್ಲ. ಪುರುಲಿಯಾ- ಜಾರ್ಖಂಡ್ ಗಡಿಯಲ್ಲಿರುವ ಬೆಗುನ್‌ಕೊಡೊರ್ ರೈಲು ನಿಲ್ದಾಣ ಗಡಿಯಂಚಿನ ಹೊರ ಠಾಣೆಯಂತ್ತಿತ್ತು. ಪ್ಲಾಟ್‌ಫಾರ್ಮ್‌ನ ಮೂಲೆಯಲ್ಲಿ ಕೂತು ಶಿಳ್ಳೆ ಹೊಡೆಯುತ್ತಾ ಸಾಗುವ ರೈಲನ್ನು ಬೈದ್ಯನಾಥ್ ಎವೆಯಿಕ್ಕದೇ ನೋಡುತ್ತಿರುತ್ತಾರೆ. ಬೆಗುನ್‌ಕೊಡೊರ್ ಸ್ಟೇಷನ್ ಮಾಸ್ಟರ್ ಬೈದ್ಯನಾಥ್ ಒಂಟಿ ಜೀವ. ಆ ನಿಲ್ದಾಣದಲ್ಲಿ ರೈಲು ನಿಲ್ಲುವುದು ತೀರಾ ಅಪರೂಪ.
ನಿಲ್ದಾಣದ ದಕ್ಷಿಣಕ್ಕೆ ಬಾಮ್ನಿಯಾ ಎಂಬ ಪುಟ್ಟ ಹಳ್ಳಿಯಿದೆ. ಆ ಹಳ್ಳಿಗರನ್ನು ಕೆಲವು ಬಾರಿ ಬೈದ್ಯನಾಥ್ ನಿಲ್ದಾಣದಲ್ಲಿ ನೋಡಿದ್ದುಂಟು. ಆದರೆ, ಪುಟ್ಟ ಬಾಲಕ ಮಹಾನಾಂದೊ ಮಹಾತೊ ಹೊರತುಪಡಿಸಿ ಆ ಹಳ್ಳಿಗರು ಬೈದ್ಯನಾಥ್ ಹಾಗೂ ನಿಲ್ದಾಣದಿಂದ ಆದಷ್ಟು ದೂರದಲ್ಲೇ ಇರುತ್ತಾರೆ. ಆ ಬಾಲಕ ಸಂಜೆ ಶಾಲೆಯಿಂದ ಮನೆಗೆ ಹೋಗುವ ದಾರಿಯಲ್ಲಿ ಈ ನಿಲ್ದಾಣದಲ್ಲಿ ಕೊಂಚ ಹೊತ್ತು ನಿಲ್ಲುತ್ತಿದ್ದ. ಬೈದ್ಯನಾಥ್ ಆ ಪುಟ್ಟ ಬಾಲಕನಿಗೆ ಕಥೆ ಹಾಗೂ ಆತನಿಗೆ ಕಷ್ಟವೆನಿಸುವ ಪಾಠಗಳನ್ನು ಹೇಳಿಕೊಡುತ್ತಿದ್ದರು. ಮಹಾನಂದೊ ಒಬ್ಬನೇ ಬಂದಿದ್ದೇ ಇಲ್ಲ, ಜೊತೆಗೆ ಗೆಳೆಯ ಉತ್ಪಲ್ ಇದ್ದೇ ಇರುತ್ತಿದ್ದ. ಮಹಾನಂದೊ- ಬೈದ್ಯನಾಥ್ ಮಾತನಾಡುತ್ತಿರುವಾಗ ಉತ್ಪಲ್ ಒಂದು ಮೂಲೆಯಲ್ಲಿ ಸುಮ್ಮಗೆ ಕೂರುತ್ತಿದ್ದ. ಆದರೆ ಒಂದು ದಿನ ಮಹಾನಂದೊ ಒಬ್ಬನೇ ನಿಲ್ದಾಣಕ್ಕೆ ಬಂದ. ಆತ ಅಳುತ್ತಿದ್ದ. ಇಬ್ಬರೂ ಆಟವಾಡುತ್ತಿರುವಾಗ ಉತ್ಪಲ್ ಅಚಾನಕ್ಕಾಗಿ ಹಾವನ್ನು ತುಳಿದನಂತೆ. ಆಸ್ಪತ್ರೆಗೆ ಸಾಗಿಸುವ ದಾರಿಯಲ್ಲೇ ಉತ್ಪಲ್ ಪ್ರಾಣಬಿಟ್ಟ. ಮೊಹಾನಂದೊ ಅಳು ನಿಲ್ಲಲೇ ಇಲ್ಲ. ಆತನ ಜೊತೆಗೆ ಬೈದ್ಯನಾಥ್, ಉತ್ಪಲ್ ಮನೆಗೆ ತೆರಳಿದರು. ಜನರ ಗುಸು- ಗುಸು ಮಾತಿನ ನಡುವೆ ಮಹಿಳೆಯೊಬ್ಬಳ ಕರುಳು ಹಿಂಡುವಂಥ ರೋಧನ ಕಿವಿಗಪ್ಪಳಿಸುತ್ತಿತ್ತು.
ದಿನಗಳು ಉರುಳಿದವು. ಆದರೆ ನಿಲ್ದಾಣದ ಕಡೆಗೆ ಮಹಾನಂದೊ ಹೆಜ್ಜೆ ಹಾಕಲೇ ಇಲ್ಲ. ಒಂದು ರಾತ್ರಿ, ಬಹುಶಃ ಅಂದಿಗೆ ಉತ್ಪಲ್ ತೀರಿ ಒಂದು ವಾರ, ರಾತ್ರಿ ಕೆಲಸ ಮುಗಿಸಿ ಹಿಂತಿರುಗುತ್ತಿದ್ದ ಬೈದ್ಯನಾಥ್‌ಗೆ ಏನೋ ವಿಚಿತ್ರವಾದ ಶಬ್ದ ಕೇಳಿಸಿತು. ರಾತ್ರಿಯಲ್ಲಿ ಬೈದ್ಯನಾಥ್‌ಗೆ ಇಂಥ ಶಬ್ದಗಳು ಕೇಳುವುದು ಮಾಮೂಲು. ಆದರೆ ಈ ರಾತ್ರಿ ಕೇಳಿದ ಶಬ್ದ ಕೊಂಚ ವಿಚಿತ್ರವಾಗಿತ್ತು... ಎಲ್ಲೋ ಕೇಳಿದ ಬಹಳ ಆಪ್ತವೆನಿಸುವ ದನಿ ಅದು... ಏನದು...? ಚಿರಪರಿಚಿತ ದನಿ... ಹೌದು ಉತ್ಪಲ್‌ನ ಎಳೆ ದನಿಯಾಗಿತ್ತು!!
ಮಾರನೇ ದಿನ ಬೆಳಿಗ್ಗೆ ನಿಲ್ದಾಣಕ್ಕೆ ಬಂದ ಮಹಾನಂದೊ ಬೈದ್ಯನಾಥ್‌ನನ್ನು ಹುಡುಕುತ್ತಿದ್ದ. ಆದರೆ ಇಡೀ ನಿಲ್ದಾಣದಲ್ಲಿ ಸ್ಟೇಷನ್ ಮಾಸ್ಟರ್ ಪತ್ತೆಯೇ ಇಲ್ಲ. ತಿರುಗಿ ಮನೆ ಕಡೆ ಹೆಜ್ಜೆ ಹಾಕಿದ ಮಹಾನಂದೊ ಸಹಾಯಕ್ಕಾಗಿ ತಂದೆಯನ್ನು ಕರೆದರೂ ಒಬ್ಬನೇ ಅಲ್ಲಿಗೆ ಹೋಗುವ ಧೈರ್ಯ ಆತನಿಗಿರಲಿಲ್ಲ. ಹಾಗೆ ಒಂದಷ್ಟು ಜನ ಸೇರಿ ಬೈದ್ಯನಾಥ್ ಹುಡುಕತೊಡಗಿದರು. ಅಂತೂ ಪಾಳು ಬಾವಿಯೊಂದರಲ್ಲಿದ್ದ ಬೈದ್ಯನಾಥ್‌ನನ್ನು ಜನ ಪತ್ತೆಮಾಡಿದರು. ಆತನಿಗೆ ಬುದ್ಧಿಭ್ರಮಣೆಯಾದಂತಾಗಿತ್ತು. ಮಂಚದ ಮೇಲೆ ಮಲಗಿಸಿ ಜನರೆಲ್ಲಾ ಅಲ್ಲಿಂದ ಕಾಲ್ಕಿತ್ತರು. ಎಲ್ಲರೂ ಖಾಲಿಯಾದ ಮೇಲೆ, ಬೈದ್ಯನಾಥ್ ಸಹಾಯಕ್ಕೆ ಮಹಾನಂದೊ ಧಾವಿಸಿದ.
ಕತ್ತಲಾವರಿಸಿತು. ಬಾಲಕ ಮನೆ ಸೇರಿದ. ಕಿಟಕಿ ಬಾಗಿಲುಗಳನ್ನೆಲ್ಲಾ ಭದ್ರಪಡಿಸಿ ಬೈದ್ಯನಾಥ್ ಕಾಲು ಚಾಚಿ ಮಲಗಿದರು. ಒತ್ತಾಯದಿಂದಲೇ ಕಣ್ಣು ಮುಚ್ಚಿದರು. ಎದೆ ಮಾತ್ರ ಗಾಳಿಗೊಡ್ಡಿದ ದೀಪದಂತೆ ಮಿಣುಕಾಡುತ್ತಿತ್ತು. ಬೇಡವೆಂದರೂ ಆ ಮಾಮೂಲು ದನಿ ತೇಲಿಬರತೊಡಗಿತು. ಅರೆ... ಈ ಬಾರಿ ಮಹಿಳೆಯ ದನಿ! "ಉತ್ಪಲ್... ಮಗು ಎಲ್ಲಿರುವೆ...? ನೋಡು ಅಮ್ಮ ಬಂದಿದ್ದೀನಿ ನನ್ನ ಬಳಿ ಬಾ..." ಉತ್ಪಲ್‌ನ ತಾಯಿಯೇ? ಮತ್ತೆ ಅದೇ ಅಳಲು... ಆಕೆ ಕಿರುಚುತ್ತಿದ್ದಾಳೆ!! "ಸ್ಟೇಷನ್ ಬಾಬೂ... ಬಾಗಿಲು ತೆರೆಯಿರಿ..." ಅರಚಾಟ ಹೆಚ್ಚಿತು. ಬೈದ್ಯನಾಥ್ ಕಣ್ಣು ಮುಚ್ಚಿ ಭ್ರೂಣದಂತೆ ಮುದುಡಿ ಮಲಗಿದರು. "ಬಾಗಿಲು ತೆರೆಯಿರಿ..." ಮಹಿಳೆಯ ಆ ಕಿರುಚಾಟ ರಾತ್ರಿ ರೈಲಿನ ಶಿಳ್ಳೆಯೊಂದಿಗೆ ಲೀನವಾಗಿಹೋಯಿತು. ಮಧ್ಯರಾತ್ರಿಯ ಆ ರೈಲಿನ ಸದ್ದಿಗೆ ಬೈದ್ಯನಾಥ್ ಅದುರಿಹೋದರು. ಇನ್ನೆಲ್ಲಿಯ ನಿದ್ದೆ? ಎದ್ದವರೇ ಬೈದ್ಯನಾಥ್ ಬಾಗಿಲು ತೆರೆದು ಹಳಿಯ ಕಡೆ ನೋಡಿದರು... ಮತ್ತೊಮ್ಮೆ ನೋಡಲಾಗಲಿಲ್ಲ... ಹಾಗೆ ಮಂಡಿಯೂರುತ್ತಾ ಕೊರೆಯುವ ನೆಲದ ಮೇಲೆ ಕುಸಿದು ಕುಳಿತರು... ಮಾರನೇ ದಿನ ಬೆಳಿಗ್ಗೆ ಆಕೆಯನ್ನು ಮೊದಲು ನೋಡಿದ್ದು ರತನ್ ಮಹಾತೊ. ಉತ್ಪಲ್ ತಾಯಿ ಹಳಿಗಳ ಮೇಲೆ ಛಿದ್ರ- ಛಿದ್ರವಾಗಿ ಬಿದ್ದಿದ್ದರು. ತಲೆಯೆಲ್ಲೋ... ಕೈಯೆಲ್ಲೋ... ಹಳಿ ರಕ್ತ ಸಿಕ್ತವಾಗಿತ್ತು. ದಿಗ್ಭ್ರಮೆಗೊಂಡವನಂತೆ ಸ್ಟೇಷನ್ ಮಾಸ್ಟರ್ ಮೂಲೆಯಲ್ಲಿ ಕುಸಿದು ಕೂತರು. ಮಹಾನಂದೊನನ್ನು ಬಿಟ್ಟರೆ ಆ ಬಳಿಕ ಬೈದ್ಯನಾಥ್ ಯಾರಲ್ಲೂ ಮಾತನಾಡಿಲ್ಲ. ಕೆಲವು ದಿನಗಳ ಬಳಿಕ ಬೈದ್ಯನಾಥ್ ಕಾಣೆಯಾದರು...
ಹೊಸ ಸ್ಟೇಷನ್ ಮಾಸ್ಟರ್ ಬರುವ ಮುನ್ನಾ ದಿನ, ಕೋಲ್ಕತ್ತಾದಿಂದ ಬಂದ ಪ್ರಯಾಣಿಕನೊಬ್ಬ ಬೆಗುನ್‌ಕೊಡುರ್ ನಿಲ್ದಾಣದಲ್ಲಿ ಇಳಿದ. ಮರುದಿನ ಜ್ವರದಿಂದ ಮೈ ಸುಡುತ್ತಿದ್ದರೂ 'ಆತ ಹಳಿಗಳ ಮೇಲೆ ಉದ್ದಕ್ಕೆ ಓಡುತ್ತಿದ್ದ ಆ ಹುಚ್ಚಿ ಯಾರು' ಎಂದು ಪದೇ ಪದೇ ಕೇಳುತ್ತಿದ್ದನಂತೆ. ಒಂದು ವಾರದ ಬಳಿಕ ಆತ ಸಾವನ್ನಪ್ಪಿದ. ಹೊಸ ಸ್ಟೇಷನ್ ಮಾಸ್ಟರ್ ಕೂಡ ಒಂದು ತಿಂಗಳಿಗಿಂತ ಹೆಚ್ಚು ಕಾಲ ಇರಲಿಲ್ಲ. ಆ ಬಳಿಕ ಯಾವುದೇ ಸ್ಟೇಷನ್ ಮಾಸ್ಟರ್ ಈ ನಿಲ್ದಾಣದಲ್ಲಿ ಕಾಲಿಟ್ಟಿಲ್ಲ... ನಂತರ ಇಂದಿನವರೆಗೆ ಯಾವ ರೈಲಿಗೂ ಆ ನಿಲ್ದಾಣದಲ್ಲಿ ನಿಲುಗಡೆ ಇಲ್ಲ. ಇವೆಲ್ಲಾ ನಡೆದು 30 ವರ್ಷಗಳೇ ಉರುಳಿಹೋಗಿವೆ" ಅಲ್ಲಿಯವರೆಗೆ ಉಸಿರುಗಟ್ಟಿ ಕೂತಿದ್ದ ನಾನು "ಯಾರು ಆ ಮಕ್ಕಳು...? ಉತ್ಪಲ್‌ನಾ...?" ಎಂದು ಕೇಳಿದೆ. "ಅಲ್ಲ, ಆ ಮಹುಲ್ ಮರದ ಸುತ್ತಲಿನ ಪ್ರದೇಶ ಮಕ್ಕಳ ಸ್ಮಶಾನವಾಗಿತ್ತು. ಬೈದ್ಯನಾಥ್ ಅಥವಾ ಇತರ ಸ್ಟೇಷನ್ ಮಾಸ್ಟರ್‌ಗಳಿಗೆ ಈ ಬಗ್ಗೆ ಗೊತ್ತಿರಲಿಲ್ಲ. ಉತ್ಪಲ್‌ನ ಶವಸಂಸ್ಕಾರ ನಡೆದಿದ್ದೂ ಇಲ್ಲಿಯೇ."
ಹಳ್ಳಿ ಅಂಚಿನಲ್ಲಿ ನಿಂತು ನಾನು ಬೆಳದಿಂಗಳಲ್ಲಿ ಹೊಳೆಯುತ್ತಿದ್ದ ಆ ರೈಲ್ವೆ ಹಳಿಗಳನ್ನು ದಿಟ್ಟಿಸುತ್ತಿದ್ದೆ. ಬೆಗುನ್‌ಕೊಡುರ್ ನಿಲ್ದಾಣ ಯಜಮಾನನಿಲ್ಲದ ತೋಟದಂತೆ ಕಾಣುತ್ತಿತ್ತು. ಕಟ್ಟಡದ ಮೇಲೆ ಅಲ್ಲಲ್ಲಿ ಪೊದೆ ಗಿಡಗಳು ತಲೆಯೆತ್ತಿದ್ದವು. ಕಟ್ಟಡದ ಸಂದಿ ಗೊಂದಿಗಳಲ್ಲ್ಲಿ ಅಡಗಿಕುಳಿತ್ತಿದ್ದ ನೆರಳು ಹಲವು ರಹಸ್ಯಗಳನ್ನು ಹುದುಗಿಸಿಟ್ಟಂತೆ ತೋರುತ್ತಿತ್ತು. ಒಂದೇ ಸಮನೆ ಅಷ್ಟೂ ವಿಷಯಗಳನ್ನು ಹೇಳಿದ ಬಕ್ಕತಲೆಯ ಆ ಮನುಷ್ಯ ಸುಸ್ತಾಗಿ ಹೋಗಿದ್ದ. 'ತಮ್ಮ ಹೆಸರು...' ಎಂದೆ, "ಮಹಾನಂದೊ ಮಹಾತೊ... ಶಾಲಾ ಶಿಕ್ಷಕ..." ಎನ್ನುತ್ತಾ ಆತ ಹಳಿ ದಾಟಿ, ಗದ್ದೆ ಹಾದು ಮನೆ ಸೇರುವ ತವಕದಲ್ಲಿ ಬಿರುಸಾಗಿ ನಡೆದು ಹೊರಟ.
ಪ್ರೇತ ಪೀಡಿತ ನಿಲ್ದಾಣ!
ಪಿಶಾಚಿಗಳು ಹಾರುತ್ತವೆ ಎಂಬ ನಂಬಿಕೆ ನಮ್ಮಲ್ಲಿ ಇದೆ ಅಲ್ಲವೇ? ಹಾಗಾದರೆ, ಅವು ರೈಲು ಪ್ರಯಾಣಕ್ಕೂ ಹಿಂಜರಿಯಲಾರವು ತಾನೆ! ಬ್ರಿಟನ್‌ನ ಲೆಸ್ಟರ್‌ಷೇರ್‌ನ ರೋಥ್ಲೇ ಸ್ಟೀಮ್ ರೈಲು ನಿಲ್ದಾಣವಂತೂ ಪ್ರೇತಾತ್ಮಗಳ ಅಚ್ಚುಮೆಚ್ಚಿನ ತಾಣ. ರಾತ್ರಿಯಿಡೀ ಜಾಗರಣೆ ಕೂತು ಅತಿಮಾನುಷ ಚಟುವಟಿಕೆಗಳನ್ನು ಗಮನಿಸುವ ಕೆಲವು ತಂಡಗಳಿಗೆ (ಇವರ ಬಳಿ ವೈಜ್ಞಾನಿಕ ಉಪಕರಣಗಳೂ ಇರುತ್ತವೆ) ನಿಲ್ದಾಣದಲ್ಲಿ ಪ್ರೇತಾತ್ಮಗಳ ಇರುವಿಕೆ ಅನುಭವಕ್ಕೆ ಬಂದಿದೆಯಂತೆ! ಅದರಲ್ಲೂ ಸ್ಟೇಷನ್ ಮಾಸ್ಟರ್‌ನ ಭೂತ ನಿಲ್ದಾಣಕ್ಕೆ ಚಿರಪರಿಚಿತ. ಆತ ಎರಡನೇ ಮಹಾಯುದ್ಧದ ಕಾಲದಲ್ಲಿ ರೈಲಿಗೆ ಸಿಕ್ಕಿ ಪ್ರಾಣ ಕಳೆದುಕೊಂಡಿದ್ದ. ಆದರೂ ಆತ ಇಂದಿಗೂ ಸ್ಟೇಷನ್ ಬಿಟ್ಟು ಕದಲಿಲ್ಲ. ಆ ಪುಣ್ಯಾತ್ಮ ಒಬ್ಬನೇ ಅಲ್ಲ, ನಿರೀಕ್ಷಣಾ ಕೊಠಡಿಯ ಬಳಿ ವಿಕ್ಟೋರಿಯನ್ ಶೈಲಿಯ ಉಡುಪು ಧರಿಸಿದ ಯುವತಿಯೊಬ್ಬಳು ಆಗಾಗ ಸುಳಿದಾಡುತ್ತಾಳೆ. ಅಲ್ಲದೆ ಮುಖ್ಯೋಪಾಧ್ಯಾಯಿನಿಯ ಜೊತೆ ಒಂದಷ್ಟು ವಿದ್ಯಾರ್ಥಿಗಳು ನಿಂತಂಥ ವಿಚಿತ್ರ ಅನುಭವಗಳೂ ಈ ನಿಲ್ದಾಣದಲ್ಲಿ ಆಗಾಗ ನಡೆಯುತ್ತಿರುತ್ತದೆ. 'ದೆವ್ವ ಪೀಡಿತ' ಅಂಥ ಇನ್ನೊಂದು ಜಾಗವೆಂದರೆ ಸ್ಟಾಕ್‌ಹೋಮ್‌ನ ಕಿಮ್ಲಿಂಜ್ ಮೆಟ್ರೋ ರೈಲು ನಿಲ್ದಾಣ. "ಮನುಷ್ಯರಲ್ಲದವರು ಮಾತ್ರ ಈ ನಿಲ್ದಾಣದಲ್ಲಿ ಇಳಿಯುತ್ತಾರೆ" ಎಂದು ಕಂಪಿಸುವ ದನಿಯಲ್ಲಿ ಹೇಳುತ್ತಾರೆ ಅಲ್ಲಿನ ಜನ! ಸಿಲ್ವರ್‌ಪಿಲೆನ್ ಸುರಂಗ ರೈಲು ಮಾರ್ಗದ ಸಿಲ್ವರ್ ಸಿ-5 ಬೋಗಿಗಳಲ್ಲಿನ ಪ್ರಯಾಣಿಕರನ್ನು ಮತ್ತೊಮ್ಮೆ ಕಾಣುವುದು ಅಸಾಧ್ಯ. ಸುರಂಗದೊಳಗೇ ಇರುವ ರೈಲು ನಿಲ್ದಾಣದಲ್ಲಿ ಈಗ ರೈಲುಗಳು ನಿಲ್ಲುವುದೇ ಅಪರೂಪ. 1885ರಲ್ಲಿ ಕ್ಲೆವ್‌ಲ್ಯಾಂಡ್‌ನಿಂದ ಕೊಲಂಬಸ್‌ಗೆ ಅಬ್ರಹಾಂ ಲಿಂಕನ್ ಕಳೇಬರ ವನ್ನು ಹೊತ್ತೊಯ್ದ 'ದ ಲಿಂಕನ್ ಸ್ಪೆಷಲ್' ರೈಲಿನ ಕಥೆ ನಡುಕ ಹುಟ್ಟಿಸುತ್ತದೆ. ಈಗಲೂ ಆ ಉಗಿಬಂಡಿ, ಹೊಗೆ ಕಾರುತ್ತಾ ಅರ್ಬಾನಾದ ಉದ್ದಕ್ಕೂ ಓಡಾಡುವುದನ್ನು ಕಂಡವರಿದ್ದಾರೆ. ವಿಶೇಷವೆಂದರೆ ಅಬ್ರಹಾಂ ಲಿಂಕನ್ ಶವಪೆಟ್ಟಿಗೆಯ ಸುತ್ತು ನಿಂತು ರೋಧಿಸುತ್ತಿರುವ ಅಸ್ಥಿಪಂಜರಗಳೇ ಈ ರೈಲಿನಲ್ಲಿ ತುಂಬಿರುತ್ತವಂತೆ! ಆದರೆ ನಮ್ಮ ರೈಲುಗಳು ಅದೆಷ್ಟು ಜನದಟ್ಟಣೆಯಿಂದ ಕೂಡಿರುತ್ತವೆಂದರೆ ಅಲ್ಲಿ ಪ್ರೇತಗಳಿಗೂ ಸ್ಥಳವಿಲ್ಲ!
ಐಐಪಿಎಂ
ಥಿಂಕ್ ಟ್ಯಾಂಕ್ |