|
ಆಸ್ಟ್ರೇಲಿಯ ಕ್ರಿಕೆಟ್ ತಂಡ ಮತ್ತು ಅದರ ಅಭಿಮಾನಿಗಳ ಭರವಸೆ ಜೇಮ್ಸ್ ಹೋಪ್ಸ್ ಸುತ್ತಮುತ್ತ ಸುತ್ತುತ್ತಲಿತ್ತು. ಗಾಬ್ಬಾ ಪಂದ್ಯದ ಕೊನೆಯ ಕ್ಷಣಗಳಲ್ಲಿ ಭಾರತ ತಂಡದ ಆಸೆಗೆ ತಣ್ಣೀರು ಎರೆಚುವ ಯತ್ನದಲ್ಲಿ ಹೋಪ್ಸ್ ನಿರತರಾಗಿದ್ದರು. ಆ ಸಂದರ್ಭದಲ್ಲಿ ಟಿವಿ ಪರದೆಯ ಮೇಲೆ ಕಣ್ಣಿಟ್ಟಿದ್ದ ಕೋಟ್ಯಂತರ ಭಾರತೀಯರ ಹೃದಯದ ತಾಳ ತಪ್ಪಿ ಹೋಗಿತ್ತು. ಇರ್ಫಾನ್ ಪಠಾಣ್ ಎಸೆದ ಚೆಂಡನ್ನು ಹೋಪ್ಸ್ ಮಿಡ್ ಆಫ್‌ನಲ್ಲಿದ್ದ ಪಿಯೂಷ್ ಚಾವ್ಲಾ ಕೈಸೇರಿಸಿದ ಕೂಡಲೇ ಭಾರತ ಹುಚ್ಚೆದ್ದು ಕುಣಿಯಿತು. ಕಾಮನ್‌ವೆಲ್ತ್ ಬ್ಯಾಂಕ್ ಸರಣಿಯ ಫೈನಲ್‌ನಲ್ಲಿ ಆತಿಥೇಯ ತಂಡವನ್ನು ಬಗ್ಗು ಬಡಿಯುವ ಮೂಲಕ ಮಹೇಂದ್ರ ಸಿಂಗ್ ಧೋನಿ ಪಡೆ ಇತಿಹಾಸ ಸೃಷ್ಟಿಸಿತು.
ಮೂರು ತಿಂಗಳ ಸರಣಿಯುದ್ದಕ್ಕೂ ತಮ್ಮ ಕೆಟ್ಟ ವರ್ತನೆ ಹಾಗೂ ಅನ್ಯಾಯದ ಆಟದ ಮೂಲಕ ಭಾರತವನ್ನು ಕಾಡಿದ್ದ ರಿಕಿ ಪಾಂಟಿಂಗ್, ಮ್ಯಾಥ್ಯು ಹೇಡನ್ ಮತ್ತು ಆಂಡ್ರ್ಯೂ ಸೈಮಂಡ್ಸ್ ತಲೆ ತಗ್ಗಿಸಿ ನಿಂತಿದ್ದರು, ಅದೂ ಯಾವೋದೋ ಒಂದು ಸುಂಟರಗಾಳಿ ಬೀಸಿ ಮನೆ-ಮಠ ಕಳೆದುಕೊಂಡ ಅನಾಥರಂತೆ. ಆದರೆ ಭಾರತ ತಂಡದ ಪಾಲಿಗೆ ಈ ಜಯ ಪ್ರತಿಷ್ಠೆಯ ಸಂಕೇತವಾಗಿ ಹೊರಹೊಮ್ಮಿತು. ಕೇವಲ ಮೂರು ದಿನಗಳ ಮೊದಲು ಕ್ವಾಲಾಲಂಪುರದಲ್ಲಿ 19 ವರ್ಷದೊಳಗಿನ ಕಿರಿಯರ ತಂಡ ವಿಶ್ವಕಪ್ ಗೆದ್ದಿತ್ತು. ಆ ಹಿನ್ನೆಲೆಯಲ್ಲಿಯೇ ಒದಗಿ ಬಂದ ಈ ವಿಜಯ ಭಾರತ ಈಗ ಕ್ರಿಕೆಟ್ ಲೋಕದ ಬಹುದೊಡ್ಡ ಶಕ್ತಿ ಎನ್ನುವುದನ್ನು ಸಾರಿ ಹೇಳಿತು. ಕೇವಲ ಹಣದ ದೃಷ್ಟಿಯಲ್ಲಿ ಮಾತ್ರವಲ್ಲ, ತಮ್ಮ ಶ್ರೇಷ್ಠ ಸಾಧನೆಯ ಮೂಲಕ ಕೂಡ ಭಾರತ ತಂಡಗಳು ತಾವೇನು ಎನ್ನುವುದನ್ನು ಜಗತ್ತಿಗೆ ಸಾರಿ ಹೇಳಿದವು.
1983ರಲ್ಲಿ ವಿಶ್ವಕಪ್ ಗೆದ್ದ ಭಾರತ ತಂಡದಲ್ಲಿದ್ದ ಆಲ್‌ರೌಂಡರ್ ರೋಜರ್ ಬಿನ್ನಿ ಟಿಎಸ್‌ಐ ಜೊತೆ ಮಾತನಾಡಿ, "ಹಿರಿಯರ
ಹಾಗೂ ಕಿರಿಯ ಕ್ರಿಕೆಟ್ ತಂಡಗಳ ಸಾಧನೆ ಅಮೋಘವಾದದ್ದು. ಭಾರತ ಕ್ರಿಕೆಟ್ ಸುವರ್ಣ ಯುಗ ಆರಂಭವಾದಂತಿದೆ" ಎಂದು ಮಾರ್ಮಿಕವಾಗಿ ಹೇಳಿದರು. ಕ್ವಾಲಾಲಂಪುರದಿಂದ ಆಗಷ್ಟೆ ಇಳಿದಿದ್ದ ಕಿರಿಯರ ತಂಡದ ಕೋಚ್ ಡೇವ್ ವಾಟ್ಮೋರ್ "ತಂಡದಲ್ಲಿದ್ದ ಪ್ರತಿಯೊಬ್ಬ ಆಟಗಾರನೂ ಪ್ರತಿಭಾಶಾಲಿಯಾಗಿದ್ದ. ಮಾತ್ರವಲ್ಲ ನಿಷ್ಠಾವಂತ ಯುವ ಕ್ರಿಕೆಟ್ ಆಟಗಾರರ ತಂಡ ಇದಾಗಿತ್ತು. ಅದರಿಂದಾಗಿಯೇ ನಾವು ವಿಶ್ವಕಪ್ ಗೆಲ್ಲಲು ಸಾಧ್ಯವಾಗಿದ್ದು" ಎಂದು ಅವರ ಅನುಭವ ಹಂಚಿಕೊಂಡರು.
ಹಿರಿಯರ ಹಾಗೂ ಕಿರಿಯರ ತಂಡದ ಗೆಲುವು ಮತ್ತು ಅವು ರೂಪುಗೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಭಾರತ ತಂಡದ ಮಾಜಿ ನಾಯಕ ರಾಹುಲ್ ದ್ರಾವಿಡ್ ಕಿರಿಯರಿಗೆ ಕಿವಿಮಾತು ಕೂಡ ಹೇಳಿದ್ದಾರೆ. "ನಿಮ್ಮ ಮುಂದಿರುವ ಭವಿಷ್ಯವನ್ನು ಮರೆತು ನಿಲ್ಲಬೇಡಿ. 2000ರಲ್ಲಿ ಕೂಡ ಭಾರತ ಕಿರಿಯರ ತಂಡ ವಿಶ್ವಕಪ್ ಗೆದ್ದಿತ್ತು. ಆ ತಂಡದಲ್ಲಿ ಇದ್ದ ಯುವರಾಜ್ ಸಿಂಗ್ ಮಾತ್ರ ಈಗ ಭಾರತ ತಂಡದಲ್ಲಿ ಉಳಿದುಕೊಂಡಿದ್ದಾರೆ. ನಿಮ್ಮಲ್ಲಿ ಕೂಡ ಒಬ್ಬರು ಅಥವ ಇಬ್ಬರು ಅಥವಾ ಹೆಚ್ಚೆಂದರೆ ಮೂವರು ಮುಂದಿನ ದಿನಗಳಲ್ಲಿ ಭಾರತ ತಂಡದ ಪರ ಆಡಬಹುದು. ಹಾಗಾಗಲು ಕೂಡ ನೀವು ಸಾಕಷ್ಟು ಬೆವರು ಹರಿಸಬೇಕಾಗುತ್ತದೆ" ಎಂದು ರಾಹುಲ್ ಹೇಳಿದ್ದಾರೆ.
ಮೇಲ್ನೋಟಕ್ಕೆ ಮೇಲಿನೆರಡು ಭರ್ಜರಿ ಗೆಲುವುಗಳನ್ನು ಕಂಡಾಗ ಭಾರತೀಯ ಕ್ರಿಕೆಟ್‌ನ ಸುವರ್ಣ ಯುಗ ಆರಂಭವಾಯಿತು ಎನ್ನಬಹುದು. ಆದರೆ, ಭವಿಷ್ಯದ ಹಾದಿ ಅಷ್ಟು ಸುಲಭವಾಗೇನೂ ಇಲ್ಲ. ಇಂದು ಕೂಡ ನಾವು
ಕ್ಲೈವ್ ಲಾಯ್ಡ್ ನೇತೃತ್ವದ ವೆಸ್ಟ್ ಇಂಡೀಸ್ ತಂಡ ಹಾಗೂ ಚಾಪೆಲ್ ಅವರಿಂದ ಸ್ಟೀವ್ ವಾ ಅವರ ನೇತೃತ್ವದ ಆಸ್ಟ್ರೇಲಿಯ ತಂಡಗಳನ್ನು ವಿಶ್ವ ಶ್ರೇಷ್ಠ ಎಂದು ಪರಿಗಣಿಸುತ್ತೇವೆ. ಏಕೆಂದರೆ ಆ ತಂಡಗಳು ನಿರಂತರವಾಗಿ ಸ್ಥಿರ ಪ್ರದರ್ಶನ ನೀಡುವ ಮೂಲಕ ಕ್ರಿಕೆಟ್‌ನ ಎರಡೂ ವಿಭಾಗಗಳ ಮೇಲೆ ನಿಯಂತ್ರಣ ಸಾಧಿಸಿದ್ದವು. ಏಕಸ್ವಾಮ್ಯ ಪ್ರದರ್ಶಿಸಿದ್ದವು.
ಟಿಎಸ್‌ಐ ಜೊತೆ ಮಾತನಾಡಿದ ಭಾರತ ತಂಡದ ಮಾಜಿ ವಿಕೆಟ್ ಕೀಪರ್ ಸಯ್ಯದ್ ಕಿರ್ಮಾನಿ, "ಮೇಲಿನೆರಡೂ ಗಮರ್ನಾಹ ಸಾಧನೆಗಳೇ ಆಗಿವೆ. ಆದರೂ ಗೆಲುವಿನ ಹಸಿವು ನಿರಂತರವಾಗಿ ಇದ್ದಲ್ಲಿ ಮಾತ್ರ ವಿಶ್ವಶ್ರೇಷ್ಠರಾಗಿ ಹೊರಹೊಮ್ಮಲು ಸಾಧ್ಯ" ಎಂಬ ಕಿವಿಮಾತು ಹೇಳಿದರು.
ಆದರೂ ವಿರಾಟ್ ಕೊಹ್ಲಿ ಮತ್ತು ತನ್ಮಯ್ ಶ್ರೀವಾಸ್ತವ ಅವರಂತಹ ಎಳೆಯರು ಕ್ವಾಲಾಲಂಪುರದಲ್ಲಿ ಎದುರಾಳಿಗಳನ್ನು ಬಗ್ಗು ಬಡಿದ ರೀತಿ ಭಾರತ ಕ್ರಿಕೆಟ್‌ನ ಭವಿಷ್ಯದ ಬಗ್ಗೆ ಭರವಸೆ ಮೂಡಿಸುತ್ತದೆ. ಅದೇ ರೀತಿ ತಂಡದ ಹಿರಿಯಣ್ಣ ಸಚಿನ್ ತೆಂಡೂಲ್ಕರ್ ಕಾಂಗರೂ ನೆಲದಲ್ಲಿ ಬೆನ್ನಿಂದ ಬೆನ್ನಿಗೆ ಎರಡು ಇನಿಂಗ್ಸ್‌ಗಳಲ್ಲಿ ನೀಡಿದ ಅಮೋಘ ಬ್ಯಾಟಿಂಗ್ ಸಾಧನೆ ಟೀಕಾಕಾರರ ಬಾಯಿ ಮುಚ್ಚಿಸಿದೆ. ಎರಡ ೂ ಫೈನಲ್ ಪಂದ್ಯಗಳಲ್ಲಿ ಆಸ್ಟ್ರೇಲಿಯ ತಂಡದ ಬೌಲರ್‌ಗಳನ್ನು ಬಗ್ಗು ಬಡಿದ ಸಚಿನ್ "ನನ್ನ ಹಸಿವು ಇನ್ನೂ ಇಂಗಿಲ್ಲ" ಎನ್ನುವುದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಸರಣಿಯಲ್ಲಿ ಭಾರತದ ಪರ ಗರಿಷ್ಠ ರನ್‌ಗಳಿಸಿದ ಗೌತಮ್ ಗಂಭೀರ್, ರೋಹಿತ್ ಶರ್ಮ, ಇಶಾಂತ್ ಶರ್ಮ ಹಾಗೂ ವಿನಯ್ ಕುಮಾರ್ ಭಾರತದ ಭವಿಷ್ಯದ ಭರವಸೆಗಳಾಗಿ ಹೊರ ಹೊಮ್ಮಿರುವುದು ಸರಣಿ ಗೆಲುವಿಗಿಂತ ಬಹು ದೊಡ್ಡ ಅಂಶ. ಇನ್ನೂ ನಾಯಕ ಧೋನಿ ಅವರ ಯುವ ಪಡೆಯನ್ನು ಮುನ್ನಡೆಸಿಕೊಂಡು ಹೋಗುತ್ತಿರುವ ರೀತಿ ಸ್ತುತ್ಯಾರ್ಹ. ಭಾರತ ತಂಡ ತನ್ನ ಇದೇ 'ಫಾರ್ಮ್' ಮುಂದುವರಿಸಿದರೆ ವಿಶ್ವ ಕ್ರಿಕೆಟ್ ಮೇಲಿನ ಆಸ್ಟ್ರೇಲಿಯದ ಅಧಿಪತ್ಯ ಅಂತ್ಯವಾಗುವ ಕಾಲ ಸನ್ನಿಹಿತವಾದಂತೆಯೇ. ಅಪ್ಪಟ ಯುವ ಪ್ರತಿಭೆಗಳ ಸಂಗಮವಾಗಿ ಕಾಣುತ್ತಿರುವ ಭಾರತ ತಂಡ ಮುಂಬರುವ ದಿನಗಳಲ್ಲಿ ಆ ಸ್ಥಾನ ತನ್ನದಾಗಿಸಿಕೊಂಡು ಮೆರೆಯುವ ಎಲ್ಲ ಸಾಧ್ಯತೆಗಳು ಇವೆ. ಹಾಗಾಗಬೇಕಿದ್ದಲ್ಲಿ ಧೋನಿ ಪಡೆಗೆ ಯಶಸ್ಸಿನ ಅಮಲು ಏರಕೂಡದು ಮತ್ತು ಇದೇ ರೀತಿಯ ಸಾಂಘಿಕ ಪ್ರಯತ್ನ ಮುಂದುವರಿಯಬೇಕು.
"ಆತ್ಮವಿಶ್ವಾಸ ನಮ್ಮ ತಂಡದ ಬಹು ದೊಡ್ಡ ಶಕ್ತಿ"
ಬೆಂಗಳೂರಿಗೆ ಬಂದಿಳಿದ ವಿಶ್ವಕಪ್ ವಿಜೇತ
ಭಾರತ ಕಿರಿಯರ ತಂಡವನ್ನು ವಿಮಾನ ನಿಲ್ದಾಣದಿಂದ ಕೆಎಸ್‌ಸಿಎಗೆ ತೆರೆದ
ಬಸ್ಸಿನ ಮೇಲೆ ಮೆರವಣಿಗೆಯಲ್ಲಿ ಕರೆತರಲಾಯಿತು.
ಆ ಸಂದರ್ಭದಲ್ಲಿ ಕೆಎಸ್‌ಸಿಗೆ ಆಗಮಿಸಿದ ಕೂಡಲೇ
ತಂಡದ ನಾಯಕ ವಿರಾಟ್ ಕೊಹ್ಲಿ ಟಿಎಸ್‌ಐನ ಸತೀಶ್ ಚಪ್ಪರಿಕೆ ಅವರಿಗೆ ನೀಡಿದ
ಎಕ್ಸ್‌ಕ್ಲೂಸಿವ್ ಸಂದರ್ಶನದ ಸಾರಾಂಶ.
ಈ ಗೆಲುವಿನ ಜಯಭೇರಿ ಎಷ್ಟು ಸಿಹಿಯಾದದ್ದು ?
ನಿಮ್ಮಲ್ಲಿ ನಿಜ ಹೇಳಬೇಕೆಂದರೆ ನನ್ನ ಜೀವನದ
ಅತ್ಯಂತ ಸಂತಸಮಯ ಕ್ಷಣಗಳು ಇವು .
ಕಳೆದ ಭಾನುವಾರ ನಾವು ಫೈನಲ್‌ನಲ್ಲಿ ಗೆಲುವು
ಸಾಧಿಸಿದ ಕ್ಷಣದಿಂದ ಇದುವರೆಗೆ ನಾನು ಮತ್ತು ನನ್ನ ತಂಡದ ಪ್ರತಿಯೊಬ್ಬ
ಆಟಗಾರ ಕೂಡ ಸಂತಸದ ಕಡಲಲ್ಲಿ ತೇಲುತ್ತಲೇ ಇದ್ದೇವೆ.
ನೋಡಿ ಇಲ್ಲಿರುವ ಪ್ರತಿಯೊಬ್ಬರ ಮೊಗದಲ್ಲೂ ಆ
ಸಂತಸ-
ಸಂಭ್ರಮ ಮನೆ ಮಾಡಿ ನಿಂತಿದೆ
(ಕೆಎಸ್‌ಸಿಗೆ
ಆಗ ತಾನೇ ಆಗಮಿಸಿ ಮೆಂಬರ್ಸ್ ಪೆವಿಲಿಯನ್‌ನಲ್ಲಿ
ಉಪಹಾರ ಸೇವಿಸುತ್ತಿದ್ದ ಭಾರತ ಕಿರಿಯರ ತಂಡದ ಸದಸ್ಯರ ಸಡಗರ ಕಂಡಾಗ ಕೊಹ್ಲಿ
ಮಾತು ಅಕ್ಷರಶಃ ಸತ್ಯ ಎನ್ನಿಸಿತು).
ಬೆಂಗಳೂರಿನಿಂದ ಕ್ವಾಲಾಲಂಪುರಕ್ಕೆ ಹೊರಡುವ ಮೊದಲು
ನೀವು ವಿಶ್ವಕಪ್ ಗೆದ್ದು ಬರುವ ಕನಸು ನೀವು ಕಂಡಿದ್ದಿರಾ ?
ಶೇಕಡಾ ನೂರರಷ್ಟು ಭರವಸೆ ಇತ್ತು ಎಂದು
ಹೇಳಲು ಸಾಧ್ಯವಿಲ್ಲ.
ಆದರೂ,
ನಮ್ಮ ತಂಡಕ್ಕೆ ಆ ಸಾಮರ್ಥ್ಯ ಇದೆ ಎಂದು ನಾನು
ನಂಬಿದ್ದೆ.
ಈ ಬಾರಿ ವಿಶ್ವಕಪ್ ಗೆಲ್ಲುವ ಅವಕಾಶ ನಮಗೆ ಹೆಚ್ಚಿದೆ ಎಂದು
ನಾವೆಲ್ಲ ಭಾವಿಸಿದ್ದೆವು.
2000ದಲ್ಲಿ
ನಾವು ವಿಶ್ವಕಪ್ ಗೆದ್ದಿದ್ದೆವು.
ಕಳೆದ ಬಾರಿ ಫೈನಲ್‌ನಲ್ಲಿ ಪಾಕಿಸ್ತಾನದ ವಿರುದ್ಧ
ಸೋಲನುಭವಿಸಿದೆವು.
ಈ ಬಾರಿ ನಮ್ಮ ಸಾಮರ್ಥ್ಯ ಸಾಬೀತು ಮಾಡಿದೆವು.
ನಿಮ್ಮ ತಂಡದ ಶ್ರೇಷ್ಠ ಸಕಾರಾತ್ಮಕ ಅಂಶಗಳು ?
ಮೂಲತಃ ತಂಡದಲ್ಲಿರುವ ಪ್ರತಿಯೊಬ್ಬನೂ
ಕ್ರಿಕೆಟ್‌ಗೆ ತನ್ನನ್ನು ತಾನು ಶೇಕಡಾ ನೂರರಷ್ಟು ಒಡ್ಡಿಕೊಂಡಿರುವ ಆಟಗಾರ .
ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ಅಪಾರ ಭರವಸೆ
ಇತ್ತು.
ಒತ್ತಡದ ಸನ್ನಿವೇಶದಲ್ಲಿ ನಾವೆಲ್ಲ ಛಲದಿಂದ
ಆಡಿದೆವು.
ಇನ್ನು ಶ್ರೇಷ್ಠವಾದ ಸಕಾರಾತ್ಮಕ ಅಂಶವೆಂದರೆ
ಆತ್ಮವಿಶ್ವಾಸ.
ಅದೇ ನಮ್ಮ ತಂಡದ ಬಹು ದೊಡ್ಡ ಶಕ್ತಿ.
ಟೂರ್ನಿಯ ಸಂದರ್ಭದಲ್ಲಿ ಇನ್ನು ಮುಗಿದೇ ಹೋಯಿತು
ಎನ್ನುವಂತಹ ಒಂದು ಸಂದರ್ಭ ...?
ನನ್ನ ಪ್ರಕಾರ ಫೈನಲ್‌ನಲ್ಲಿ ಅಂತಹ ಕ್ಷಣ
ಎದುರಾಗಿತ್ತು.
ನಾವು ಕೇವಲ
159 ರನ್‌ಗಳಿಗೆ ಆಲೌಟ್ ಆದಾಗ ಒಂದು ಕ್ಷಣ ನಾನು
ಎಲ್ಲವೂ ಮುಗಿದೇ ಹೋಯಿತು ಎಂದುಕೊಂಡೆ.
ಆದರೆ,
ತಕ್ಷಣ ಆತ್ಮವಿಶ್ವಾಸ ಮರುಕಳಿಸಿತು.
ತಂಡದ ಉಳಿದ ಆಟಗಾರರ ಬಳಿ ಹೋಗಿ ನಾವು ಸಾಂಘಿಕ
ಯತ್ನ ಮಾಡಿದರೆ ಖಂಡಿತ ಈ ಪಂದ್ಯ ಗೆದ್ದು ಚಾಂಪಿಯನ್‌ಗಳಾಗಬಹುದು ಎಂದು
ಹುರಿದುಂಬಿಸಿದೆ.
ಅವರೆಲ್ಲರೂ ನನ್ನ ಮಾತಿಗೆ ಬೆಲೆ ಕೊಟ್ಟು ಉತ್ತಮವಾಗಿ
ಸ್ಪಂದಿಸಿದರು.
ಪರಿಣಾಮ ನಾವು ಒತ್ತಡದ ನಡುವೆ ಗೆಲುವನ್ನು
ತಮ್ಮದಾಗಿಸಿಕೊಂಡೆವು.
ನಿಮ್ಮ ಸಾಧನೆಯಲ್ಲಿ ಕೋಚ್ ಡೇವ್ ವಾಟ್ಮೋರ್ ಅವರ
ಪಾತ್ರ ?
ಕಳೆದ ಕೆಲವು ತಿಂಗಳುಗಳಿಂದ ನಾವು
ವಾಟ್ಮೋರ್ ಸರ್ ಗರಡಿಯಲ್ಲಿ ಪಳಗಿದ್ದೆವು. ಅವರೊಬ್ಬ ಸ್ಫೂರ್ತಿದಾಯಕ
ತರಬೇತುದಾರ. ತಂಡದ ಪ್ರತಿಯೊಬ್ಬ ಆಟಗಾರನ ಸಕಾರಾತ್ಮಕ ಹಾಗೂ ನಕಾರಾತ್ಮಕ
ಅಂಶಗಳನ್ನು ಅವರು ಅರಿತುಕೊಂಡಿದ್ದರು.
ಮುಂದಿನ ಹಾದಿ ?
ಮುಂದಿನ ಹಾದಿ...
ಇನ್ನೂ ಸ್ಪಷ್ಟವಾಗಿಲ್ಲ. ಇದೇ ರೀತಿಯಲ್ಲಿ ಉತ್ತಮ ಪ್ರದರ್ಶನ
ನೀಡುತ್ತ ಕ್ರಿಕೆಟ್ ಆಡುತ್ತಿರಬೇಕು. ಕಿರಿಯರ ಅಥವಾ ಹಿರಿಯರ ತಂಡ ಯಾವುದೇ
ಆಗಿರಲಿ, ಭಾರತ ತಂಡವನ್ನು ಪ್ರತಿನಿಧಿಸುವುದು ಹೆಮ್ಮೆಯ ವಿಷಯ. ಆ
ನಿಟ್ಟಿನಲ್ಲಿನ ಪ್ರಯತ್ನಗಳು ಮುಂದುವರಿಯಲಿವೆ.
ಟಿಎಸ್‌ಐ |