ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ನಕ್ಸಲೀಯನ ರೂಪಿಸಿದ ಹಲಸಿನ ಮರ!
 

ನಕ್ಸಲ್ ಚಳವಳಿಗೆ ಹಲಸಿನ ಮರವೊಂದು ಪ್ರೇರಣೆ ನೀಡಿದ ಬಗೆಯನ್ನು ಟಿಎಸ್‌ಐನ ರಾಹುಲ್ ಪಂಡಿತ ಅವರಿಗೆ ಹಿರಿಯ ನಕ್ಸಲ್ ನಾಯಕ ಮಿಸಿರ್ ಬೇಸ್ರಾ ವಿವರಿಸಿದ್ದಾರೆ. ಇದು ಬೇಸ್ರಾನ ಪ್ರಪ್ರಥಮ ಮಾಧ್ಯಮ ಸಂದರ್ಶನ.

ಪೊಲೀಸ್ ತಂಡ ಮಿಸಿರ್ ಬೇಸ್ರಾ ಅವರು ಪ್ರಯಾಣಿಸುತ್ತಿದ್ದ ಕಾರನ್ನು ಸಮೀಪಿಸಿದಾಗ ಅವರೇನು ವಿಚಲಿತರಾಗಲಿಲ್ಲ. ತಮ್ಮ ಛಾಯಾಚಿತ್ರ ಯಾವುದೇ ಪೊಲೀಸ್ ದಾಖಲೆಗಳಲ್ಲೂ ಇಲ್ಲದೇ ಇದ್ದ ಕಾರಣ ಬೆದರುವ ಅಗತ್ಯವಿರಲಿಲ್ಲ. ಹಾಗಾಗಿ ತನಗೇನೂ ಆಗದು ಎಂಬಂತೆ ಸಹಜವಾಗಿದ್ದರು. ಜೊತೆಗೆ ಅವರ ಮುಖ ಮತ್ತು ದೇಹದಾರ್ಢ್ಯವನ್ನು ಗಮನಿಸಿದಲ್ಲಿ ಅವರು ಒಬ್ಬ 'ಮೋಸ್ಟ್ ವಾಂಟೆಡ್' ನಕ್ಸಲೈಟ್ ನಾಯಕ ಎಂದು ಯಾರೂ ಸಂಶಯಪಡುವುದು ಸಾಧ್ಯವಿರಲಿಲ್ಲ. ಆದರೆ, ಈ ಬಾರಿ ಪೊಲೀಸರು ಸಿಕ್ಕ ಅವಕಾಶವನ್ನು ಕೈತಪ್ಪಿಸಿಕೊಳ್ಳುವ ಸ್ಥಿತಿಯಲ್ಲಿ ಇರಲಿಲ್ಲ. ಬೇಸ್ರಾ ಅವರನ್ನು ಬಂಧಿಸಲಾಯಿತು ಮತ್ತು ನಂತರ ಅವರನ್ನು ಬಂಧಿತ ನಕ್ಸಲ್‌ರಿಗೆ ತೋರಿಸಲಾಯಿತು. ಇಂಥ ಪ್ರಮುಖ ನಾಯಕನನ್ನು ಗುರುತು ಹಿಡಿಯಲು ಹೆಚ್ಚು ಸಮಯವೇನೂ ಬೇಕಾಗಲಿಲ್ಲ. ಯಾಕಿಲ್ಲ? ಮಿಸಿರ್ ಬೇಸ್ರಾ ಅಲಿಯಾಸ್ ಕಮಾಂಡರ್ ಸುನಿರ್‌ಮಲ್ ಅಲಿಯಾಸ್ ಭಾಸ್ಕರ್ ಕ್ರಾಂತಿ ಪಡೆಯ ಸಾಮಾನ್ಯ ಸೇನಾನಿ ಅಲ್ಲವಲ್ಲ! ಸಿಪಿಐ (ಮಾವೋವಾದಿ) ಪಾಲಿಟ್ ಬ್ಯೂರೊ ಮತ್ತು ಕೇಂದ್ರ ಮಿಲಿಟರಿ ಆಯೋಗದ ಸದಸ್ಯನಾಗಿ ಬೆಸ್ರಾ ಅವರು ಪೂರ್ವ ಕಮಾಂಡ್‌ನ ನೇತೃತ್ವ ವಹಿಸಿದ್ದರು. ಒರಿಸ್ಸಾ, ಛತ್ತೀಸ್‌ಗಢ, ಜಾರ್ಖಂಡ್, ಪಶ್ಚಿಮ ಬಂಗಾಳ ಮತ್ತು ಅಸ್ಸಾಂನ ದಕ್ಷಿಣಭಾಗಗಳ ಉಸ್ತುವಾರಿ ವಹಿಸಿಕೊಂಡಿದ್ದರು. ಅವರು ಮಿಲಿಟರಿ ಗುಪ್ತಚರ ವಿಭಾಗದ ಉಸ್ತುವಾರಿಯನ್ನೂ ವಹಿಸಿದ್ದರು ಮತ್ತು ತಮ್ಮ ತಂಡಕ್ಕೆ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಶೇಖರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಟಿಎಸ್‌ಐ ಭೇಟಿಯಾಗಲು ಹೋದಾಗ ಬೇಸ್ರಾ ಮೊಗದಲ್ಲಿ ಶೀತಲ ಭಾವ ಹರಡಿತ್ತು. ಅದು ಅವರ ಮೊತ್ತ ಮೊದಲ ಮಾಧ್ಯಮ ಸಂಪರ್ಕ! ಸಿಗರೇಟ್ ಬೇಕೆ ಎಂದು ಪ್ರಶ್ನಿಸಿದಾಗ, ತಾವು ಧೂಮಪಾನ ತ್ಯಜಿಸಿರುವುದಾಗಿ ಹೇಳಿದರು. "ನಾನು ಚಹಾ ಕುಡಿಯಲೆಂದು ಹೊರ ಬಂದಿದ್ದಾಗ ಪೊಲೀಸರು ಸೆರೆಹಿಡಿದರು" ಎಂದಾಗ ಅವರ ಮುಖದಲ್ಲಿ ಅದಕ್ಕಾಗಿ ದುಃಖವಿರಲಿಲ್ಲ, ವ್ಯಂಗ್ಯದ ನಗೆ ಸುಳಿದುಹೋಯಿತು. ಬೇಸ್ರಾ ಅವರು ಸುಮಾರು 22 ವರ್ಷಗಳನ್ನು ಕಾಡಿನಲ್ಲಿ ಕಳೆದವರು. ತಮ್ಮ ಗುರಿ ಮತ್ತು ಕಾರ್ಯಾಚರಣೆಯಲ್ಲಿ ಬಹುದೂರ ಸಾಗಿದ್ದಾರೆ. ಅಂದಿನ ಅವಿಭಜಿತ ಬಿಹಾರ್‌ನ ಗಿರಿದಿಹ್ ಜಿಲ್ಲೆಯ ಶಾಲೆಯೊಂದರಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಬೇಸ್ರಾ, ಆದಿವಾಸಿಗಳ ಮೇಲೆ ಭೂಮಾಲೀಕರಿಂದ ಆಗುತ್ತಿದ್ದ ದೌರ್ಜನ್ಯಗಳನ್ನು ಕಣ್ಣಾರೆ ಕಾಣುತ್ತಲೇ ಬೆಳೆದವರು. ನಂತರ 1985ರಲ್ಲಿ ಹಿಂದಿ ಆನರ್‍ಸ್ ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ರಾಜ್ಯಶಾಸ್ತ್ರದಲ್ಲಿ ಹೆಚ್ಚು ಆಸಕ್ತಿ ವಹಿಸಿದ್ದರು. ಭಗತ್‌ಸಿಂಗ್, ಖುದಿರಾಂ ಬೋಸ್ ಮೊದಲಾದ ಕ್ರಾಂತಿಕಾರಿಗಳ ಜೀವನ ಚರಿತ್ರೆಯನ್ನು ಓದಿದ್ದರು. "ಒಂದು ದಿನ ನಾನು ಒಬ್ಬ ವ್ಯಾಪಾರಿಗೆ ಮಹುವಾ (ಸ್ಥಳೀಯ ಶೇಂದಿ) ತಂದು ಕೊಟ್ಟೆ. ಆದರೆ ಅದಕ್ಕೆ ಹಣ ತೆರಲು ಆತ ನಿರಾಕರಿಸಿದ. ಹಣ ಕೇಳಿದ್ದಕ್ಕೆ ಇಲ್ಲಿಂದ ಹೋಗದೇ ಇದ್ದರೆ ಬಡಿಯುವೆ ಎಂದು ಬೆದರಿಸಿದ. ಈ ಘಟನೆ ನಡೆದ ಕೆಲ ಕ್ಷಣಗಳಲ್ಲೇ ಕೆಲ ಭೂಮಾಲೀಕರು ಹಳ್ಳಿಯಲ್ಲಿದ್ದ ಹಳೇ ಹಲಸಿನಮರವನ್ನು ಕಡಿದು ಹಾಕಿದರು. ಅವರು ಸಣ್ಣ-ಪುಟ್ಟ ಕೊಂಬೆ ಹೊತ್ತೊಯ್ದರು. ಆದರೆ ಮರದ ದಿಮ್ಮಿಯನ್ನು ಮಾತ್ರ ಅವರು ಒಯ್ಯಲು ಬಿಡಬಾರದು ಎಂದು ನಿರ್ಧರಿಸಿದೆ" ಎಂದು ಬಾಲ್ಯದ ಘಟನೆಗಳನ್ನು ಮೆಲುಕು ಹಾಕಿದರು. ಕೆಲ ಸ್ನೇಹಿತರನ್ನು ಒಡಗೂಡಿದ ಬೇಸ್ರಾ ದಿಮ್ಮಿಗೆ ಕಾವಲು ನಿಂತರು. "ಕ್ಷೇತ್ರಾಭಿವೃದ್ಧಿ ಅಧಿಕಾರಿ ಮತ್ತು ತಹಶೀಲ್ದಾರ್ ಬಂದು ನನ್ನನ್ನು ಮನವೊಲಿಸಲು ಯತ್ನಿಸಿದರು. ಆದರೆ ನಾನು ಬಗ್ಗಲಿಲ್ಲ" ಎಂದು ವಿವರಿಸಿದರು. ಈ ಘಟನೆ ಅವರ ಮನದಲ್ಲಿ ಅಚ್ಚಳಿಯದೆ ಉಳಿದಿದೆ. "ಆರಂಭದಲ್ಲಿ ನಾನು ಶಿಬು ಸೊರೇನ್ ಅವರ 'ಜಾರ್ಖಂಡ್ ಮುಕ್ತಿ ಮೋರ್ಚಾ'ದ ಬಗ್ಗೆ ಆಸಕ್ತನಾಗಿದ್ದೆ. ಆದರೆ ಅದು ನೆಪ ಮಾತ್ರದ ಚಳವಳಿ ಎಂದು ಕೆಲ ದಿನಗಳಲ್ಲೇ ಅರಿತುಕೊಂಡೆ." ಅಕ್ಟೋಬರ್ 1985ರಲ್ಲಿ 'ಅಖಿಲ ಭಾರತೀಯ ಕ್ರಾಂತಿಕಾರಿ ಸಮ್ಮೇಳನ'ದ ಎಡರಂಗದ ಒಂದು ತಂಡ ಬೇಸ್ರಾ ಹಳ್ಳಿಗೆ ಭೇಟಿ ನೀಡಿತ್ತು. ಅವರ ಕ್ರಾಂತಿಗೀತೆಗಳನ್ನು ಆಲಿಸಿದ ಬಳಿಕ ಬೇಸ್ರಾ ಅವರನ್ನು ಸೇರಿಕೊಳ್ಳುವ ನಿರ್ಧಾರಕ್ಕೆ ಬಂದರು. ಒಂದು ಕಾಲದಲ್ಲಿ ನಕ್ಸಲರ ಕೈಯಲ್ಲಿ ಡಬಲ್ ಬ್ಯಾರೆಲ್ ಬಂದೂಕುಗಳು ಮಾತ್ರ ಇದ್ದವು. "ಆರಂಭದಲ್ಲಿ ಹಳ್ಳಿಗರು ನಮ್ಮ ಜೊತೆ ಡಕಾಯಿತರಂತೆಯೇ ನಡೆದುಕೊಳ್ಳುತ್ತಿದ್ದರು. ಆದರೆ, ನಿಧಾನವಾಗಿ ಪರಿಸ್ಥಿತಿ ಬದಲಾಯಿತು. ಅದು 'ಭಾರತ' ಮತ್ತು 'ಇಂಡಿಯಾ' ನಡುವಿನ ಒಡಕು ಬಲವಾಗುತ್ತಿದ್ದ ಸಮಯ. ಈ ಪ್ರಾಂತದ ಜನರು ದಿನೇ- ದಿನೇ ನವದೆಹಲಿಯಿಂದ ದೂರವಾಗುತ್ತಲೇ ಇದ್ದರು. ಹಸಿದ ಹೊಟ್ಟೆಯಲ್ಲಿ ಮಲಗುವವರ ಸಂಖ್ಯೆ ಏರುತ್ತಿತ್ತು. ಆರೋಗ್ಯ ಸೇವೆ ಮತ್ತು ಶಿಕ್ಷಣ ಇರಲಿಲ್ಲ. ಎರಡು ದಶಕಗಳು ಕಳೆದರೂ ಭಾರತದ ಈ ಪ್ರಾಂತ್ಯಗಳಲ್ಲಿ ಯಾವುದೇ ಬದಲಾವಣೆಗಳಾಗಿಲ್ಲ". ಆರಂಭದಲ್ಲಿ ಬೇಸ್ರಾ ಅವರಂತಹ ಹೊಸ ಸಿಬ್ಬಂದಿ ಆಂಧ್ರಪ್ರದೇಶದಲ್ಲಿ ಬೀಡುಬಿಟ್ಟಿದ್ದ 'ಪೀಪಲ್ಸ್ ವಾರ್ ಗ್ರೂಪ್'ನ ಕ್ರಾಂತಿಕಾರಿಗಳಿಂದ ತರಬೇತಿ ಪಡೆಯುತ್ತಿದ್ದರು. 2004ರಲ್ಲಿ ಬಿಹಾರ್ ಮತ್ತು ಜಾರ್ಖಂಡ್‌ನಲ್ಲಿ ಚಿಗುರಿಕೊಂಡಿದ್ದ 'ಪೀಪಲ್ಸ್ ವಾರ್ ಗ್ರೂಪ್' ಮತ್ತು 'ಮಾವೋವಾದಿ ಕಮ್ಯುನಿಸ್ಟ್ ಕೇಂದ್ರ' (ಎಂಸಿಸಿ) ಜೊತೆಯಾಗಿ ಸಿಪಿಐ (ಮಾವೋವಾದಿ ಹುಟ್ಟು ಹಾಕಿದರು. ಬೇಸ್ರಾ ಅವರ ಪ್ರಕಾರ, ಹಲವಾರು ಕ್ರಾಂತಿಕಾರಿಗಳು ಕಾಡಿನ ಜೀವನ ರೋಸಿ ಹೋಗಿ ತಂಡ ಸೇರಿದ ಕೆಲವೇ ದಿನಗಳಲ್ಲಿ ಬಿಟ್ಟು ಹೋಗುತ್ತಾರೆ. ಆದರೆ ಹೊಟ್ಟೆಗೆ ಒಂದು ತುತ್ತು ಆಹಾರವಾದರೂ ಸಿಗುತ್ತದೆ ಎಂಬ ಕಾರಣದಿಂದ ಹಲವರು ಪಕ್ಷದಲ್ಲೇ ಉಳಿಯುತ್ತಾರೆ. ಕೈಯಲ್ಲಿರುವ ಬಂದೂಕು ಸಬಲೀಕರಣದ ಆತ್ಮವಿಶ್ವಾಸವನ್ನೂ ಕೊಡುತ್ತದೆ! ಬಿಹಾರದ ಭೀಮ್‌ಬಂದ್‌ನಲ್ಲಿ ಜರುಗಿದ್ದ ಪಕ್ಷದ 9ನೇ ಸಮಾವೇಶದಲ್ಲಿ ಮಿಸಿರ್ ಬೇಸ್ರಾ ಭದ್ರತೆಯ ಉಸ್ತುವಾರಿ ವಹಿಸಿದ್ದರು. ವಾಪಸಾಗುತ್ತಿದ್ದ ಸಂದರ್ಭದಲ್ಲಿ ಅವರ ತಂಡ ಲಖೀಸರೈನಲ್ಲಿ ಪೊಲೀಸ್ ಕಾವಲುಪಡೆ ಮೇಲೆ ದಾಳಿ ನಡೆಸಿ ನಾಲ್ವರು ಪೊಲೀಸರನ್ನು ಕೊಲೆಗೈದಿತ್ತು. 2004ರಲ್ಲಿ ಜಾರ್ಖಂಡ್‌ನ ಪಶ್ಚಿಮ ಸಿಂಗ್‌ಭೂಮ್ ಜಿಲ್ಲೆಯ ಬಲಿಬಾದಲ್ಲಿ ಗುಪ್ತದಳದ ಮೇಲೆ ಬೇಸ್ರಾ ಅವರ ಮುಂದಾಳತ್ವದಲ್ಲಿ ನಡೆದ ದಾಳಿಯಲ್ಲಿ 29 ಪೊಲೀಸರು ಕೊಲೆಯಾಗಿದ್ದರು. 2003ರಲ್ಲಿ ಬೇಸ್ರಾ ಅವರು ಸಿಪಿಐ(ಎಂ) ಮುಖ್ಯಸ್ಥ ಮುಪ್ಪಾಲಾ ಲಕ್ಷ್ಮಣ ರಾವ್ ಅಲಿಯಾಸ್ ಗಣಪತಿ ಅವರನ್ನು ಜಾರ್ಖಂಡ್‌ನಲ್ಲಿ ಭೇಟಿಯಾಗಿದ್ದರು. ತನಿಖೆಯ ಸಂದರ್ಭದಲ್ಲಿ ಗಣಪತಿ ತಮ್ಮ ಕೂದಲಿಗೆ ಬಣ್ಣ ಹಚ್ಚಿಕೊಳ್ಳುವುದು, ಕೆಲ ಬಾರಿ ಮೀಸೆ ಕತ್ತರಿಸುವುದು ಇಲ್ಲವೇ ಮೀಸೆ ತೆಗೆದು ಬಿಡುತ್ತಾರೆಂಬ ಸುಳಿವನ್ನು ಬೇಸ್ರಾ ಪೊಲೀಸರಿಗೆ ನೀಡಿದ್ದಾರೆ. ಮತ್ತೊಬ್ಬ ಹಿರಿಯ ನಾಯಕ ಮಲ್ಲೋಜುಲಾ ಕೋಟೇಶ್ವರ ರಾವ್ ಅಲಿಯಾಸ್ ಪ್ರಹ್ಲಾದ್ ಕಿವುಡ ಜೊತೆಗೆ ಗಂಭೀರ ಆರೋಗ್ಯ ಸಮಸ್ಯೆಗಳಿವೆ. ಪಂಜಾಬ್, ಹರಿಯಾಣ, ನವದೆಹಲಿ ಹಾಗೂ ಜಮ್ಮು ಮತ್ತು ಕಾಶ್ಮೀರದ ಉಸ್ತುವಾರಿ ವಹಿಸಿರುವ ಇನ್ನೊಬ್ಬ ಹಿರಿಯ ಕಾರ್ಯಕರ್ತ ಪ್ರಮೋದ್ ಮಿಶ್ರಾ ಉತ್ತಮ ಕ್ರೀಡಾ ಪಟು. 17 ಸದಸ್ಯರ ಕೇಂದ್ರೀಯ ಸಮಿತಿಯಲ್ಲಿ ಅನುರಾಧಾ ಗಾಂಧಿ ಎಂಬ ಒಬ್ಬಳೇ ಮಹಿಳೆ ಇದ್ದಾರೆ ಮತ್ತು ಆಕೆ ಪಕ್ಷದ ದಾಖಲೆಗಳ ಉಸ್ತುವಾರಿ ವಹಿಸಿರುವ ಪಾಲಿಟ್‌ಬ್ಯೂರೊ ಸದಸ್ಯ ಕೊಪ್ಪಡ್ ಗಾಂಧಿಯ ಪತ್ನಿ ಎಂಬ ವಿಷಯಗಳನ್ನೂ ಪೊಲೀಸರಿಗೆ ತಿಳಿಸಿದ್ದಾರೆ. "ಸಿಪಿಐ (ಮಾವೋವಾದಿ) ರಾಜ್ಯ ಸಮಿತಿಗಳು ದೆಹಲಿ, ಹರಿಯಾಣ ಮತ್ತು ಪಂಜಾಬ್‌ಗಳಲ್ಲೂ ಇವೆ. ಮಧ್ಯಮ ವರ್ಗದ ಭಾಗವಹಿಸುವಿಕೆ ಇಲ್ಲದೆ ಹೋದಲ್ಲಿ ಕ್ರಾಂತಿಯನ್ನು ಮರೆತು ಬಿಡಬೇಕಾಗಬಹುದು. ದೆಹಲಿಯಂತಹ ನಗರ ಪ್ರದೇಶದಲ್ಲಿ ನಕ್ಸಲರ ಯಶಸ್ಸು ಹೇಳಿಕೊಳ್ಳುವಷ್ಟೇನೂ ಇಲ್ಲ. ಆದರೆ ನಮ್ಮ ಸದಸ್ಯರು ಅಲ್ಲಿಯೂ ಕ್ರಿಯಾಶೀಲರಾಗಿದ್ದಾರೆ" ಎಂದು ಒಪ್ಪಿಕೊಳ್ಳುತ್ತಾರೆ. ಇತ್ತೀಚೆಗೆ ಹರಿಯಾಣದಲ್ಲಿ ಮಾವೋವಾದಿ ಸಾಹಿತ್ಯ ಮತ್ತು ಅಭಿಯಾನದ ಸಿಡಿಗಳು ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬೇಸ್ರಾ ಮಾತುಗಳನ್ನು ನಂಬದೆ ಇರಲು ಸಾಧ್ಯವಿಲ್ಲ. ದೆಹಲಿಯ ಸಂಗಂ ವಿಹಾರ್‌ನಲ್ಲಿ ಒಬ್ಬ ನಕ್ಸಲೈಟ್‌ನ್ನು ಸೆರೆಹಿಡಿಯಲಾಗಿದೆ. ಗೃಹ ಮಂತ್ರಾಲಯದ ಗುಪ್ತಚರ ವರದಿಗಳ ಪ್ರಕಾರ, ಹರಿಯಾಣದಂತಹ ರಾಜ್ಯಗಳಲ್ಲಿ ಮಾವೋವಾದಿಗಳು ಜಾತಿವಾದವನ್ನು ತಮ್ಮ ಅಸ್ತ್ರವನ್ನಾಗಿ ಬಳಸಿಕೊಳ್ಳಲು ಮುಂದಾಗಿದ್ದಾರೆ. 2005ರಲ್ಲಿ ಗುರ್‌ಗಾಂವ್‌ನ ಹೊಂಡಾ ಕಾರ್ಖಾನೆಯಲ್ಲಿ ಕಾರ್ಮಿಕರು ಮತ್ತು ಪೊಲೀಸರ ನಡುವೆ ತಿಕ್ಕಾಟ ನಡೆದ ಬಳಿಕ ಎಡರಂಗದ ರವೀಂದರ್ ನೇತೃತ್ವದಲ್ಲಿ ಹರಿಯಾಣದ ಕೈತಾಲ್‌ನಲ್ಲಿ ಹೊಂಡಾ ಮಳಿಗೆ ಮೇಲೆ ದಾಳಿ ನಡೆಸಲಾಗಿದೆ. ಬೇಸ್ರಾ ವಿಚಾರಣೆ ಸಂದರ್ಭದಲ್ಲಿ ನಕ್ಸಲರು ಕನಿಷ್ಠ ಇಬ್ಬರು ಪೊಲೀಸ್ ಅಧಿಕಾರಿಗಳ ಮೇಲೆ ದಾಳಿ ಸಂಚು ರೂಪಿಸಿರು ವುದು ಬಹಿರಂಗವಾಗಿದೆ. ಅವರಲ್ಲಿ ದೆಹಲಿಯಲ್ಲಿ ನೆಲೆಸಿರುವ ಆಂಧ್ರಪ್ರದೇಶ ಮಾಜಿ ಡಿಜಿಪಿ ಎಚ್.ಜೆ. ದೋರಾ ಅವರೂ ಒಬ್ಬರು. ನಕ್ಸಲ್ ನಾಯಕರು ಕಂಪ್ಯೂಟರ್ ಎಂಜಿನಿಯರ್‌ಗಳಿಗಾಗಿ ಎದಿರು ನೋಡುತ್ತಿದ್ದಾರೆ. ಕೆಮಿಸ್ಟ್ ಮತ್ತು ಎಲೆಕ್ಟ್ರಿಕ್ ಇಂಜಿನಿಯರ್‌ಗಳ ನೇಮಕಕ್ಕಾಗಿ ಕೇಂದ್ರ ಸಮಿತಿಗೆ ಅಹವಾಲು ಸಲ್ಲಿಸಲಾಗಿದೆ ಎಂದು ಬೇಸ್ರಾ ತಿಳಿಸಿದ್ದಾರೆ. ಜೈಲಿನಲ್ಲಿ ಹೇಗೆ ಕಾಲ ಕಳೆಯುತ್ತೀರಿ? "ನಾನು ಓದುತ್ತೇನೆ. ಈಗಷ್ಟೇ ಏಜಿಯೇ ಅವರ ಕಾದಂಬರಿಯನ್ನು ಮುಗಿಸಿರುವೆ." ಕ್ರಾಂತಿಕಾರಿ ಸ್ನೇಹಿತರ ಜೊತೆಗೆ ಸಂಪರ್ಕ? "ಇಲ್ಲ. ನಾನು ಸೆರೆ ಸಿಕ್ಕಿದ್ದೇನೆ. ಹೀಗಾಗಿ ಇನ್ನೆಂದೂ ಅವರಿಗೆ ನನ್ನ ಮೇಲೆ ವಿಶ್ವಾಸ ಮೂಡದು" ಎಂದು ಉತ್ತರಿಸಿದರು.

ಟಿಎಸ್‌ಐ

(ಪೂರಕ ಮಾಹಿತಿ: ಅನಿಲ್ ಪಾಂಡೆ)

 ಹೌದು, ಯಾರು ಈ ಮನಮೋಹನ್ ಸಿಂಗ್?

ಜಾರ್ಖಂಡ್ ರಾಜ್ಯದ ನಕ್ಸಲ್ ಪೀಡಿತ ಕುಗ್ರಾಮಗಳನ್ನು ಕೋಕ್ ಮತ್ತು ಹಲ್ದೀರಾಮ್ ತಲುಪಿವೆಯೇ ಹೊರತು ನಮ್ಮ ಸರ್ಕಾರವಲ್ಲ. ಈ ಕುಗ್ರಾಮಗಳ ನಿವಾಸಿಗಳಿಗೆ ಹಣಕಾಸು ಸಚಿವ ಚಿದಂಬರಂ ಹೆಸರು ಬಿಡಿ, ಪ್ರಧಾನಿ ಮನಮೋಹನ್ ಸಿಂಗ್ ಅವರ ಹೆಸರೂ ತಿಳಿದಿಲ್ಲ. ಬಜೆಟ್ ಮಂಡನೆ ದಿನ ಅಲ್ಲಿಗೆ ಭೇಟಿ ನೀಡಿದ ಟಿಎಸ್‌ಐನ ರಾಹುಲ್ ಪಂಡಿತ ಅವರು ಈ ಸತ್ಯದ ಅನಾವರಣ ಮಾಡಿದ್ದಾರೆ

ಆ ದಿನ ಪ್ರಪ್ರಥಮ ಬಾರಿ ಕ್ಷೇತ್ರಾಭಿವೃದ್ಧಿ ಅಧಿಕಾರಿ ಲಲನ್ ಕುಮಾರ್ ಗಿಟಿಲ್ಡಿಹ್ ಗ್ರಾಮಕ್ಕೆ ಭೇಟಿ ನೀಡಿದ್ದರು. ರೂ. 12,500, 10 ಲೀಟರ್ ಸೀಮೆಎಣ್ಣೆ ಮತ್ತು 10 ಕೆ.ಜಿ. ಅಕ್ಕಿಯನ್ನು ತಂದಿದ್ದರು. ಆದರೆ ಸಮಯ ಮೀರಿತ್ತು. ಫೆಬ್ರುವರಿ 3ರಂದು ಮಾಧ್ಯಮಗಳೆಲ್ಲಾ ದಿನವಿಡೀ ರಾಜ್ ಠಾಕ್ರೆ ಮತ್ತು ಜಯಾ ಬಚ್ಚನ್ ವಾಕ್‌ಸಮರದ ಬಗ್ಗೆ ಚರ್ಚೆ, ಅಭಿಪ್ರಾಯ ಸಂಗ್ರಹದಲ್ಲಿ ವ್ಯಸ್ತವಾಗಿದ್ದವು. ಆಗಲೇ ಭೂರಹಿತ ಕಾರ್ಮಿಕ ತುರಿಯಾ ಮುಂಡಾ ಮರ ಹತ್ತಿ ನೇಣು ಹಾಕಿಕೊಂಡಿದ್ದ. 'ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ' (ಎನ್‌ಆರ್‌ಇಜಿ) ಅಡಿಯಲ್ಲಿ ಉದ್ಯೋಗ ಪಡೆದಿದ್ದ 48 ವರ್ಷದ ಮುಂಡಾ ತಿಂಗಳುಗಳಿಂದ ವೇತನ ಪಡೆದಿರಲಿಲ್ಲ!

ಜಾರ್ಖಂಡ್ ರಾಜಧಾನಿ ರಾಂಚಿಯಿಂದ 55 ಕಿ.ಮೀ. ದೂರದ ಗಿಟಿಲ್ಡಿಹ್ ಗ್ರಾಮದಲ್ಲಿ ಅತಿಸಾರಕ್ಕೆ ಬಲಿಯಾದ ಅದಷ್ಟೋ ಜೀವಗಳ ಪಟ್ಟಿಯಲ್ಲಿ ಕೆಲ ವರ್ಷಗಳ ಹಿಂದೆ ಮುಂಡಾ ಪತ್ನಿಯೂ ಸೇರಿಕೊಂಡಿದ್ದರು. ಮುಂಡಾ ದಂಪತಿಯ ನಾಲ್ಕು ಮಕ್ಕಳ ಪೈಕಿ ಮೂವರು ಸೋದರಮಾವನ ಜೊತೆಗಿದ್ದರೆ 12 ವರ್ಷದ ಕಿರಿಯ ಮಗ ಜೊಹ್ಲು ಮುಂಡಾ ಒಬ್ಬನೇ ಈ ಊರಿನಲ್ಲಿ ನೆಲೆಸಿದ್ದಾನೆ. ಆರನೇ ತರಗತಿ ಓದುತ್ತಿದ್ದ ಈ ಹುಡುಗ ತಂದೆಯ ಆತ್ಮಹತ್ಯೆ ಬಳಿಕ ಶಾಲೆಗೆ ಹೋಗುವುದನ್ನು ನಿಲ್ಲಿಸಿದ್ದಾನೆ.

ನಗ್ನ ಸತ್ಯವೊಂದನ್ನು ನಮ್ಮೆದುರು ಬಿಚ್ಚಿಡುತ್ತಿರುವ ಪುಟ್ಟ ಗ್ರಾಮ ಗಿಟಿಲ್ಡಿಹ್. ಹೌದು, ಇಂತಹ ಗ್ರಾಮಗಳ ಸಂಖ್ಯೆ ಏರುತ್ತಿರುವುದರಿಂದಲೇ ಮಾವೋವಾದಿ ಗುಂಪು ಬಲ ಪಡೆದುಕೊಳ್ಳುತ್ತಿದೆ. ಸಾವಿರ ಜನಸಂಖ್ಯೆ ಇರುವ ಗ್ರಾಮದಲ್ಲಿ ಒಂದೇ ಒಂದು ಉಪ ಆರೋಗ್ಯ ಕೇಂದ್ರವೂ ಇಲ್ಲ. ವಾರದಲ್ಲಿ ಒಂದು ಬಾರಿ ನರ್ಸ್ ಒಬ್ಬರು ಇಲ್ಲಿಗೆ ಬಂದು ಹೋಗುತ್ತಾರೆ. ಅತೀ ಸಮೀಪದ ಆಸ್ಪತ್ರೆ ಈ ಹಳ್ಳಿಯಿಂದ 10 ಕಿ.ಮೀ. ದೂರದಲ್ಲಿದೆ! ಆ ಆಸ್ಪತ್ರೆ ತಲುಪಲು ದಾರಿಯಂತೂ ಇಲ್ಲವೇ ಇಲ್ಲ. ಗಿಟಿಲ್ಡಿಹ್ ಗ್ರಾಮದವರು ಅಸ್ವಸ್ಥರಾದರೆ ಸಾಕು. ಕುಟುಂಬದವರೆಲ್ಲಾ ರವೀಂದ್ರ ಸಿಂಗ್ ಮುಂಡಾ ಊರಲ್ಲೇ ಇದ್ದಿದ್ದರೆ ಸಾಕಪ್ಪಾ ಎಂದು ಪ್ರಾರ್ಥಿಸಬೇಕಿದೆ! ಈ ಹಳ್ಳಿಯಲ್ಲಿ ಮೋಟಾರ್ ಸೈಕಲ್ ಇರುವ ನಾಲ್ಕು ಜನರಲ್ಲಿ ರವೀಂದ್ರ ಕೂಡಾ ಒಬ್ಬರು. ರೋಗಿಗಳನ್ನು ಪಕ್ಕದಲ್ಲೇ ಇರುವ 'ಬಂಡು' ನಗರಕ್ಕೆ ಕರೆದುಕೊಂಡು ಹೋಗುವುದು ರವೀಂದ್ರ ಅವರ ಮೋಟಾರ್ ಸೈಕಲ್. ಆದರೆ ಮಳೆಗಾಲದ ಸಂದರ್ಭದಲ್ಲಿ ರಸ್ತೆ ಸಂಪೂರ್ಣ ನೀರಿನಲ್ಲಿ ಮುಳುಗೇಳುತ್ತದೆ. ಹೀಗಾಗಿ ರೋಗಿಗಳಿಗೆ ಸೈಕಲ್ ಅಥವಾ ಮತ್ತೊಬ್ಬರ ಬೆನ್ನ ಆಶ್ರಯವೇ ಗತಿ. "ನನ್ನ ಬೈಕ್ ಈ ಹಳ್ಳಿಯ ಆಂಬುಲೆನ್ಸ್" ಎನ್ನುತ್ತಾರೆ ರವೀಂದ್ರ. ಜುಲೈ ಮತ್ತು ಆಗಸ್ಟ್ ತಿಂಗಳುಗಳಲ್ಲಿ ಅತಿಸಾರ ಸಮಸ್ಯೆ ಗಿಟಿಲ್ಡಿಹ್ ಹಳ್ಳಿಯನ್ನು ಬಾಧಿಸಿದರೆ, ನವೆಂಬರ್ ಹಾಗೂ ಡಿಸೆಂಬರ್ ತಿಂಗಳಲ್ಲಿ ಮಲೇರಿಯಾ ಕಾಟ. ಮಕ್ಕಳು ಬಲಿಯಾಗುತ್ತಾರೆ. ಮಹಿಳೆಯರು ಕೊನೆಯುಸಿರೆಳೆಯುತ್ತಾರೆ. ಹಾಗೆಯೇ ಅಲ್ಲಿನ ಸದೃಢ ಪುರುಷರೂ ಸಹ. ಸಾವು ಇಲ್ಲಿ ಪ್ರತಿ ಮನೆಯ ಕದ ತಟ್ಟುತ್ತಿರುತ್ತದೆ.

ಗಿಟಿಲ್ಡಿಹ್‌ನಲ್ಲಿ ಕೆಲವು ಹ್ಯಾಂಡ್ ಪಂಪ್‌ಗಳಿವೆ. ಆದರೆ ಅವುಗಳಲ್ಲಿ ಬಹುತೇಕ ಒಣಗಿ ಹೋಗಿವೆ. ಇನ್ನು ಸರಿಯಾಗಿರುವ ಹ್ಯಾಂಡ್‌ಪಂಪ್‌ಗಳ ನೀರು ಕಲುಷಿತ. ಹಾಗಾಗಿ ಹಳ್ಳಿಗರು ಸಮೀಪದಲ್ಲೇ ಇರುವ ನದಿ ನೀರನ್ನು ಬಳಸುತ್ತಾರೆ. ಬೇಸಗೆಯಲ್ಲಿ ಈ ನದಿ ನೀರೂ ಬತ್ತಿಹೋಗುತ್ತದೆ. ಮಗ್ಗದ ಮಂಚದ ಮೇಲೆ ಮಲಗಿ ಬರ ಬಡಿದ ಖಾಲಿ ಜಾಗವನ್ನು ನಿಟ್ಟಿಸುವುದೇ ಉಳಿಯುವ ಮಾರ್ಗ.

ವಿದ್ಯುತ್ ವ್ಯವಸ್ಥೆಯಂತೂ ಇಲ್ಲವೇ ಇಲ್ಲ. ಗ್ರಾಮದ ಬೆರಳೆಣಿಕೆಯಷ್ಟು ಯುವಕರು ಮಾತ್ರ ಜಾರ್ಖಂಡ್‌ನ ಮಹೇಂದ್ರ ಸಿಂಗ್ ಧೋನಿ ವಿದೇಶದಲ್ಲಿ ಸಿಕ್ಸರ್ ಬಾರಿಸುವುದನ್ನು ಟಿವಿಯಲ್ಲಿ ನೋಡುವ ಅದೃಷ್ಟ ಪಡೆದಿದ್ದಾರೆ.

5 ವರ್ಷದ ಜಗನ್ನಾಥ್ ಮುಂಡಾ ಅಕ್ಕಿ, ಉಪ್ಪು ಮತ್ತು ಎಣ್ಣೆ ಖರೀದಿಸಬೇಕೆಂದರೆ ಹತ್ತಿರದ ಕಾಡಿನಿಂದ ಕಟ್ಟಿಗೆ ಶೇಖರಿಸಿ ಮಾರಬೇಕು. ಟಿಎಸ್‌ಐ ಮುಂಡಾ ಜೊತೆಗೆ ಮಾತನಾಡುತ್ತಿರುವಾಗ ಸುತ್ತ 20 ಮಂದಿ ನೆರೆದಿದ್ದರು. ಅವರಲ್ಲಿ ಮುಂಡಾ ಒಬ್ಬರಿಗೆ ಮಾತ್ರ ಭಾರತದ ಪ್ರಧಾನಿ ಮನಮೋಹನ್ ಸಿಂಗ್ ಎಂಬುದು ಗೊತ್ತಿತ್ತು! "ಆದರೆ ನಾನು ಅವರನ್ನು ಒಂದು ಬಾರಿಯೂ ನೋಡಿಲ್ಲ. ಅವರು ಹೇಗಿದ್ದಾರೆ?" ಎಂದು ಮುಂಡಾ ಪ್ರಶ್ನಿಸುತ್ತಾರೆ. ಅವರು ಯಾವ ಪಕ್ಷದವರು ಎಂದು ಗೊತ್ತೇ ಎಂದು ಕೇಳಿದರೆ ಮುಂಡಾ ತಲೆ ತುರಿಸುತ್ತಾ, "ಬಹುಶಃ ಬಿಜೆಪಿ ಎಂದು ಹೆಸರಿರುವ ಪಕ್ಷದವರಿರಬೇಕು" ಎನ್ನುತ್ತಾರೆ. ಹಳ್ಳಿಯ ಪ್ರವೇಶ ದ್ವಾರದ ಬಳಿ ಒಂದು ಕಟ್ಟಡವಿದೆ. ಅದು ಸಪ್ಟೆಂಬರ್ 11ರ ದಾಳಿಯ ನಂತರ ಕಾಬೂಲ್‌ನ ಕಟ್ಟಡಗಳಿಗೆ ಒದಗಿದ ದುಸ್ಥಿತಿಯನ್ನು ನೆನಪಿಸುವಂತಿತ್ತು. ಸಾಮ್ಲಾ ಮುಂಡಾ ಅದರೆಡೆಗೆ ತೋರಿಸುತ್ತಾ, "ಇದು ನಿಜವಾಗಿಯೂ ಆರೋಗ್ಯ ಕೇಂದ್ರವಾಗಿರಬೇಕಿತ್ತು. ಆದರೆ ಎರಡು ವರ್ಷಗಳಿಂದ ಇಲ್ಲಿ ಒಬ್ಬ ವೈದ್ಯ ಕೂಡಾ ಬಂದಿಲ್ಲ" ಎನ್ನುತ್ತಾರೆ.

ಜಾರ್ಖಂಡ್ ರಾಜ್ಯದ ಪೂರ್ವ ಸಿಂಗ್‌ಭಮ್ ಜಿಲ್ಲೆಯ ನರ್ಸಿಗ್‌ಪುರ್ ಮತ್ತು ಮಿರ್‌ಗಿಟಂಡ್ ಪಶ್ಚಿಮ ಬಂಗಾಳ ಗಡಿಯಲ್ಲಿರುವ ಅವಳಿ ಹಳ್ಳಿಗಳು. 15 ವರ್ಷದ ಝುಮ್ರಿ ಉರುವಲು ಶೇಖರಿಸಿ ಕಲ್ಲು- ಮುಳ್ಳಿನ ಹಾದಿಯಲ್ಲಿ ಬರಿಗಾಲಲ್ಲಿ 14 ಕಿ.ಮೀ. ದೂರದಲ್ಲಿರುವ ಗಾಲುಡಿ ಪಟ್ಟಣದವರೆಗೆ ನಡೆಯುತ್ತಾಳೆ. ಅವಳ ಅದೃಷ್ಟ ಚೆನ್ನಾಗಿದೆ ಎಂದರೆ ಡಾಬಾ ಮಾಲೀಕನಿಂದ 20- 25 ರೂ. ಸಿಗುತ್ತದೆ. ಅದೇ ಹಣದಲ್ಲಿ ಅಕ್ಕಿ ಖರೀದಿಸಿ ಹಳ್ಳಿಗೆ ವಾಪಸಾಗುತ್ತಾಳೆ. ಒಂದು ವೇಳೆ ಕಟ್ಟಿಗೆ ಮಾರಾಟವಾಗಿಲ್ಲ ಎಂದರೆ ಆ ದಿನ ಹೊಟ್ಟೆಗೆ ತಣ್ಣೀರು ಬಟ್ಟೆಯೇ ಗತಿ. "ಮನಮೋಹನ್ ಸಿಂಗ್ ಯಾರೆಂದು ಗೊತ್ತೇ?" ಎಂದು ಪ್ರಶ್ನಿಸಿದರೆ "ಅವರು ಯಾರು?" ಎಂದು ಮರು ಪ್ರಶ್ನಿಸುತ್ತಾಳೆ.

ಗಿಟಿಲ್ಡಿಹ್‌ನಂತೆಯೇ ಆಕೆಯ ಹಳ್ಳಿಯಲ್ಲೂ ವಿದ್ಯುತ್ ಇಲ್ಲ. ಪ್ರೌಢಶಾಲೆ ಊರಿನಿಂದ 14 ಕಿ.ಮೀ. ದೂರದಲ್ಲಿದೆ. ಇಡೀ ಊರಿನಲ್ಲಿ ನೀರಿಗಾಗಿ ಕೇವಲ ಒಂದು ಬಾವಿ ಇದೆ. ಆರೋಗ್ಯ ಕೇಂದ್ರ ನಾಲ್ಕು ಕಿ.ಮೀ. ದೂರದಲ್ಲಿದೆ. "ಅದೂ ದಾಖಲೆಗಳಲ್ಲಿ ಮಾತ್ರ" ಎಂದು ಹಳ್ಳಿಗರೊಬ್ಬರು ಮರುಗುತ್ತಾರೆ. "ಆನೆ, ಕಾಡು ಹಂದಿ, ನಕ್ಸಲೈಟ್‌ಗಳಿಂದ ಪ್ರತಿ ಕ್ಷಣ ನಾವು ನಲುಗುತ್ತಿರುತ್ತೇವೆ" ಎನ್ನುತ್ತಾರೆ ಟೀ ಅಂಗಡಿ ಮಾಲೀಕರೊಬ್ಬರು. "20 ವರ್ಷಗಳ ಹಿಂದಿನ ಜೀವನವೇ ಚೆನ್ನಾಗಿತ್ತು. ನಮ್ಮ ಬದುಕು ಕಠಿಣವಾಗಿತ್ತು ನಿಜ. ಆದರೆ ನಾವು ಸಂತೋಷದಿಂದಿದ್ದೆವು" ಎಂದು ವಿಷಾದ ವ್ಯಕ್ತಪಡಿಸುತ್ತಾರೆ. "ಎನ್‌ಆರ್‌ಇಜಿ ಯೋಜನೆ ಜೀವನ ಶೈಲಿಯಲ್ಲಿ ಏನಾದರೂ ಬದಲಾವಣೆ ತಂದಿದೆಯೇ?" ಎಂದು ಪ್ರಶ್ನಿಸಿದರೆ, ಹಳ್ಳಿಗನೊಬ್ಬ ನಗುತ್ತಾ, "ಎನ್‌ಆರ್‌ಇಜಿ ಇರುವುದು ಶ್ರೀಮಂತರಿಗೆ, ಬಡವರಿಗಲ್ಲ" ಎನ್ನುತ್ತಾನೆ.

ಇತ್ತ ಗಿಟಿಲ್ಡಿಹ್‌ನಲ್ಲಿ ಜೊಹ್ಲು ಮುಂಡಾ ತನ್ನ ಕವಣೆಯಿಂದ ಹಕ್ಕಿಗಳನ್ನು ಕೊಲ್ಲುತ್ತಾನೆ. ನಕ್ಸಲೈಟ್‌ಗಳು ಹಳ್ಳಿಗರನ್ನು ತಮ್ಮೊಂದಿಗೆ ಸೇರಿಸಿಕೊಳ್ಳಲು ಇನ್ನಿಲ್ಲದ ಯತ್ನ ನಡೆಸಿದ್ದಾರೆ. ಇನ್ನೊಮ್ಮೆ ನಕ್ಸಲೈಟ್‌ಗಳು ಭೇಟಿ ನೀಡಿದಾಗ ಗಿಟಿಲ್ಡಿಹ್ ಹಳ್ಳಿಯ ಕನಿಷ್ಟ ಒಬ್ಬ ವ್ಯಕ್ತಿಯಾದರೂ ಆ ಗುಂಪನ್ನು ಸೇರುತ್ತಾನೆ. ಕವಣೆಯ ಸ್ಥಳದಲ್ಲಿ ಎಕೆ- 47 ಬಂದಿರುತ್ತದೆ!

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .