|
|
ಪ್ರಸೂನ್ ಮಜುಂದಾರ್ |
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್
|
ಕೇಂದ್ರ ಅಂಕಿ-ಅಂಶಗಳ ಸಂಸ್ಥೆಯ ಪ್ರಕಾರ ನಾಲ್ಕನೇ ತ್ರೈಮಾಸಿಕ ಅವಧಿಯ ಒಳಗಾಗಿ ಭಾರತೀಯ ಆರ್ಥಿಕ ಪ್ರಗತಿಯ ದರ ಶೇ.8.7ಕ್ಕೇರುವ ಸಾಧ್ಯತೆಗಳಿವೆ. ಕಳೆದ ಮೂರನೇ ತ್ರೈಮಾಸಿಕ ಅವಧಿಯ ಬೆಳವಣಿಗೆ ಗಮನಿಸಿದರೆ ಈಗ ಪ್ರಸ್ತಾಪಿಸಿರುವ ಬೆಳವಣಿಗೆಯನ್ನು ಸಾಧಿಸುವುದು ಭಾರತೀಯ ಆರ್ಥಿಕತೆಗೆ ಅಸಾಧ್ಯವಲ್ಲ. ಒಂದು ವೇಳೆ ಅಂಥ ಪ್ರಗತಿ ನಮ್ಮ ಆರ್ಥಿಕತೆಗೆ ಸಾಧ್ಯವಾದರೆ ಸತತ ನಾಲ್ಕನೇ ವರ್ಷವೂ ಶೇ.8.6ಕ್ಕಿಂತ ಅಧಿಕ ಬೆಳವಣಿಗೆ ಸಾಧಿಸಿದ ಕೀರ್ತಿ ನಮ್ಮದು. ಪ್ರಸ್ತುತ ಭಾರತದ ಆರ್ಥಿಕ ಪ್ರಗತಿಗೆ ಕೃಷಿ ವಲಯದ ಕಾಣಿಕೆ ಹೆಚ್ಚೇನೂ ಇಲ್ಲ. ಈಗಿರುವ ಈ ಮಟ್ಟದ ಆರ್ಥಿಕ ಪ್ರಗತಿ ಸಾಧ್ಯವಾಗಿದ್ದು ಉತ್ಪಾದಕ ಹಾಗೂ ಸೇವಾ ವಲಯಗಳಿಂದ. ಆದರೆ ಈ ಅಭಿವೃದ್ಧಿ ಇಂದು ನಿನ್ನೆಯ ಮಾತಲ್ಲ. ಅಸಮತೋಲಿತ ಪ್ರಗತಿ ನಮ್ಮ ಅಭಿವೃದ್ಧಿಯ ಲೋಪ. ಈ ಪ್ರಗತಿಯ ಲಾಭಾಂಶ (ಡಿವಿಡೆಂಡ್) ಜನಸಂಖ್ಯೆಯ ಒಂದಂಶವನ್ನೂ ತಲುಪಿಲ್ಲ. ಹಾಗೆ, ಪ್ರಾಯಶಃ ಈ ಕಾರಣದಿಂದಾಗಿಯೇ ಹಿಂದೆಂದೂ ಕಂಡಿರದಂಥ ಒಡಕು ಹುಟ್ಟಿಕೊಂಡಿತು.
ಉತ್ಪಾದಕ ಘಟಕದ ಬೆಳವಣಿಗೆಯಲ್ಲಿ ಅಲ್ಲಲ್ಲಿ ಕೆಲವು ಅಡಚಣೆಗಳು ಎದುರಾಗಿದ್ದರೂ ಉತ್ಪಾದಕ ಹಾಗೂ ಸೇವಾ ವಲಯಗಳು ಗಣನೀಯ ಪ್ರಗತಿ ಸಾಧಿಸುತ್ತಿವೆ. ಪ್ರಸ್ತುತ ಆರ್ಥಿಕ ವರ್ಷದಲ್ಲಿ ಈ ಎರಡೂ ಕ್ಷೇತ್ರಗಳ ಅಭಿವೃದ್ಧಿ ಶ್ಲಾಘನೀಯ. ಅಂದರೆ ಈ ಆರ್ಥಿಕ ವರ್ಷದ ಅಂತ್ಯದೊಳಗಾಗಿ ಕಂಪನಿಗಳು ಶೇ.30ರಷ್ಟು ಸರಾಸರಿ ನಿವ್ವಳ ಲಾಭ ಗಳಿಸಲಿವೆ! ಈ ಪ್ರಸ್ತುತ ಸನ್ನಿವೇಶದಲ್ಲಿ ಇದೇ ಪ್ರಗತಿ ದರವನ್ನು ಕಾಯ್ದುಕೊಳ್ಳುವುದು ಕಂಪನಿಗಳ ಮುಂದಿರುವ ಬಹು ದೊಡ್ಡ ಸವಾಲು.
ಇತ್ತೀಚಿನ ದಿನಗಳಲ್ಲಿ ನಿರಂತರ ಪೂರೈಕೆ ಹಾಗೂ ನುರಿತ ಕೆಲಸಗಾರರ ಬದ್ಧತೆಯೇ ಪ್ರಗತಿಯ ಮೂಲ ಎಂಬುದನ್ನು ಅರಿತಿರುವ ಕಂಪನಿಗಳು ಕಾರ್ಮಿಕ ವರ್ಗದ ಬೇಡಿಕೆ ಪೂರೈಸುವತ್ತ ಗಮನಹರಿಸುತ್ತಿವೆ. ಸಂಬಳ ಹೆಚ್ಚಳದಿಂದ ಹಿಡಿದು ಈ ಹಿಂದೆಂದೂ ಕಂಡು ಕೇಳಿರದಂಥ ಬೋನಸ್, ನಗದು ಭತ್ತೆ, ಮದುವೆ ಭತ್ತೆ ವಿನಾಯಿತಿಗಳು, ಉನ್ನತ ಶಿಕ್ಷಣಕ್ಕೆ ಪೂರಕವಾದಂಥ ಅವಕಾಶಗಳು ಹಾಗೂ ಇಎಸ್‌ಒಪಿ (ಎಂಪ್ಲಾಯಿ ಸ್ಟಾಕ್ ಓನರ್‌ಶಿಪ್ ಪ್ಲಾನ್) ಮುಂತಾದ ವಿಶೇಷ ಸೌಲಭ್ಯಗಳನ್ನು ತನ್ನ ಸಿಬ್ಬಂದಿಗೆ ನೀಡುವಲ್ಲಿ ಕಂಪನಿಗಳು ಹೆಚ್ಚಿನ ಆಸಕ್ತಿ ವಹಿಸುತ್ತಿವೆ.
ಇತ್ತೀಚಿನ ಕೆಲವು ವರದಿಗಳ ಪ್ರಕಾರ ಕಂಪನಿಗಳ ಬಹು ಪಾಲು ಖರ್ಚು ಸಿಬ್ಬಂದಿ ಸೌಲಭ್ಯಕ್ಕೇ ಮೀಸಲು! ಕೆಲವು ಕಂಪನಿಗಳಲ್ಲಂತೂ ಈ ಖರ್ಚು ಶೇ.50ರಿಂದ ಶೇ.60ರಷ್ಟಾಗುತ್ತದೆ. ಅಧ್ಯಯನಗಳ ಪ್ರಕಾರ ಕಳೆದ ಮೂರು ವರ್ಷಗಳಲ್ಲಿ ವೇತನ ಬಡ್ತಿಯ ಸರಾಸರಿ ಶೇ.25ಕ್ಕೇರಿದೆ. ಕಂಪನಿಗಳ ಪ್ರಗತಿ ಹಾಗೂ ವೇತನ ಹೆಚ್ಚಳದ ಪ್ರಮಾಣ ನೇರ ಅನುಪಾತದಲ್ಲಿದೆ. ಅಂದರೆ (ಕೆಲವು ಕಾರಣಗಳನ್ನೆಲ್ಲಾ ಬದಿಗೊತ್ತಿದ್ದರೆ) ಆರ್ಥಿಕ ಪ್ರಗತಿಯ ಲಾಭಾಂಶಗಳು ಸೂಕ್ತ ಪ್ರಮಾಣದಲ್ಲಿ ದುಡಿಯುವ ವರ್ಗದ ಕೆಲವು ವಿಭಾಗಕ್ಕಾದರೂ ಸಿಗುತ್ತಿವೆ ಎಂದಾಯಿತು. ನಾವು ಒಪ್ಪದೇ ಇದ್ದರೂ ಸಮಾಜವಾದ ಎಂಬುದು ಮಾರುವೇಷದಲ್ಲಾದರೂ ಒಂದು ರೀತಿಯಲ್ಲಿ ಕಾರ್ಯರೂಪಕ್ಕೆ ಬರುತ್ತಿದೆ ಎಂಬುದನ್ನು ಅಲ್ಲಗಳೆಯುವಂತಿಲ್ಲ. ಇವನ್ನೆಲ್ಲಾ ನೋಡುತ್ತಾ ಬಹುಶಃ ಕಾರ್ಲ್ ಮಾರ್ಕ್ಸ್ ಮಂದಹಾಸ ಬೀರುತ್ತಿರಬಹುದು!
ಆದರೆ ಕಾರ್ಲ್ ಮಾರ್ಕ್ಸ್ ಮನತುಂಬಿ ನಗುವ ಕಾಲ ಇನ್ನೂ ಬಂದಿಲ್ಲ. ಏಕೆಂದರೆ ಪ್ರಗತಿ ದರದ ಲಾಭಾಂಶ ಗಿಟ್ಟಿಸಿಕೊಳ್ಳುತ್ತಿರುವವರು ಕಾರ್ಮಿಕ ವರ್ಗದ ಕೇವಲ ಒಂದಂಶ ಮಾತ್ರ. ಅಂದರೆ ಇದರ ಪ್ರಯೋಜನ ಪಡೆಯುತ್ತಿರುವುದು ಸಂಘಟಿತ ವಲಯದ ಕಾರ್ಮಿಕರು ಮಾತ್ರ. ಆದರೆ ಅಲ್ಲೂ, ಸಂಘಟಿತ ವಲಯದ ಎಲ್ಲರಿಗೂ ಇದರಿಂದ ಪ್ರಯೋಜನವಾಗುತ್ತಿದೆ ಎಂದಲ್ಲ, ಎಲ್ಲೋ ಆರಿಸಿದ ಒಂದಷ್ಟು ಜನರಿಗೆ ಮಾತ್ರ ಪ್ರಗತಿಯ ಅನುಭವವಾಗುತ್ತಿದೆ ಎಂದು ಹೇಳಬಹುದು. ಇದನ್ನು ಬಿಟ್ಟರೆ ಉಳಿದವರದು ಅದೇ ಹಳೆ ಪಾಡು. ಇನ್ನು ಅಸಂಘಟಿತ ವಲಯದ ಕಾರ್ಮಿಕರ ಕಥೆಯನ್ನು ಮತ್ತೊಮ್ಮೆ ಬಿಡಿಸಿ ಹೇಳಬೇಕಿಲ್ಲ! ಸರಿಸುಮಾರು 400 ದಶಲಕ್ಷದಷ್ಟಿರುವ ಅಸಂಘಟಿತ ವಲಯದ ಕಾರ್ಮಿಕರಿಗೆ ಸೂಕ್ತ ಲಾಭಾಂಶ ಸಿಗುತ್ತಿಲ್ಲ ಎಂಬುದು ಒತ್ತಟ್ಟಿಗಿರಲಿ, ಸಾಮಾನ್ಯ ಸಾಮಾಜಿಕ ಭದ್ರತೆಯೂ ಅವರ ಪಾಲಿಗೆ ಕೈಗೆಟುಕದ ಕನಸು. ಏನೆ ಆದರೂ ಸೂಕ್ತ ಲಾಭಾಂಶ ಹಂಚಿಕೆ ಪ್ರಕ್ರಿಯೆ ಕಾಲ ಕ್ರಮೇಣ ವ್ಯಾಪಕವಾಗುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ ಸಂಘಟಿತ- ಅಸಂಘಟಿತ ಎಂಬ ಭೇದಭಾವವಿಲ್ಲದೆ ಸಮಗ್ರ ಕಾರ್ಮಿಕ ವರ್ಗವೂ ಇದರ ಪ್ರಯೋಜನ ಪಡೆಯುವಂತಾಗಲು ದಶಕಗಳೇ ಉರುಳಬೇಕು. ಆ ವ್ಯಾಪಕತೆ ಕ್ಷಿಪ್ರಗತಿಯಲ್ಲಿ ಸಾಗಬೇಕೆಂದರೆ ಎಲ್ಲಾ ವಲಯಗಳ ಕಾರ್ಮಿಕರೂ ಸೂಕ್ತ ಪರಿಣಿತಿ ಸಾಧಿಸುವುದು ಅವಶ್ಯಕ. ಅಂದರೆ ಮಾತ್ರ ಸಮರ್ಥನೀಯ ಸಮಾಜವಾದದ ಅನುಷ್ಠಾನ ಸಾಧ್ಯ.
ಐಐಪಿಎಂ
'ಥಿಂಕ್ ಟ್ಯಾಂಕ್' |