ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಪ್ರತಿಧ್ವನಿ
ಓದುಗರ ಪತ್ರ
 

ರೋಚಕ ಅನುಭವ

'ರೋಚಕ ಮಾವೋವಾದಿ ಲೋಕ' (ಸಂಜಯ್ ಬಾಸಕ್ ಮತ್ತು ರಂಜನ್ ಬಸು) ಲೇಖನ ಓದುಗರಿಗೆ ರೋಚಕ ಅನುಭವ ನೀಡುವುದರ ಜೊತೆಗೆ ಮಾವೋವಾದಿ ಲೋಕದ ಸಮಗ್ರ ಚಿತ್ರಣ ನೀಡಿದೆ. ಲೇಖಕರು ಹಾವಿನ ಹುತ್ತದೊಳಗೆ ಹೋಗುವ ಸಾಹಸ ಮಾಡಿದ್ದಾರೆ. ನಿಜಕ್ಕೂ ಇದು ಶ್ಲಾಘನೀಯ ಪ್ರಯತ್ನ. ದಟ್ಟ ಕಾನನದಲ್ಲಿ ಮಹಿಳಾ ಸೈನಿಕರ ನಿತ್ಯ ಬದುಕು, ಹೋರಾಟ ಮೈನವಿರೇಳಿಸುವಂತಿದೆ. 'ಪೀಪಲ್ಸ್ ಲಿಬರೇಷನ್ ಗೆರಿಲ್ಲಾ ಆರ್ಮಿ'ಯ ಮಹಿಳಾ ಸೈನಿಕರ ತೋಳ್ಬಲ, ಧೈರ್ಯ, ದಟ್ಟ ಅರಣ್ಯದ ನಡುವೆ ಅವರ ಸಂಘರ್ಷಮಯ ಬದುಕು, ಬಂದೂಕಿನ ಹೋರಾಟವನ್ನು ಭಾವಚಿತ್ರಗಳ ಸಹಿತ ಓದಿದಾಗ ಅಚ್ಚರಿಯಾಯಿತು. ಜೊತೆಗೆ 'ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್-ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದರೆ (ಅರಿಂದಮ್ ಚೌಧುರಿ) ಸಂಪಾದಕೀಯವೂ ಅರ್ಥಪೂರ್ಣವಾಗಿತ್ತು. ಒಂದು ವೇಳೆ ಬದ್ಧ ವೈರಿಗಳಾದ ಕಾಂಗ್ರೆಸ್- ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದರೆ ಮಾಯಾವತಿ ಅಬ್ಬರ, ಎಡಪಕ್ಷಗಳ ಕಿರಿಕಿರಿ ಎಲ್ಲವೂ ಒಂದೇ ಬಾರಿ ಶಮನವಾಗುತ್ತದೆ. ವೈಯಕ್ತಿಕ ಹಿತಾಸಕ್ತಿಗಳನ್ನು ಬದಿಗಿಟ್ಟು ಒಗ್ಗಟ್ಟಿನ ಸರ್ಕಾರ ರಚನೆಯಾದಲ್ಲಿ ಮಾತ್ರ ದೇಶ ಹಿತ ಕಾಪಾಡಬಲ್ಲದು.

ಎಸ್.ಎಲ್.ಬಿ. ಅನಿಲ್‌ಕುಮಾರ್
ಮುದಗಲ್

ಮಾನವೀಯ ಮುಖದ ಪರಿಚಯ

'ರೋಚಕ ಮಾವೋವಾದಿ ಲೋಕ' ಲೇಖನ ಮನಸೂರೆಗೊಂಡಿದೆ. ಈವರೆಗೆ ಮಾಧ್ಯಮಗಳು ಮಾವೋವಾದಿಗಳ ಕ್ರೂರ ಮುಖವನ್ನು ಮಾತ್ರ ಸಮಾಜಕ್ಕೆ ಪರಿಚಯಿಸಿದ್ದವು. ಆದರೆ ಟಿಎಸ್‌ಐ ಮಾವೋವಾದಿ ಲೋಕದ ಮಾನವೀಯ ಮುಖವನ್ನು ಪರಿಚಯಿಸಿದೆ. 10 ದಿನಗಳ ಕಾಲ ಅತ್ಯಂತ ದುರ್ಗಮ ಸನ್ನಿವೇಶಗಳನ್ನು ಎದುರಿಸಿ ವರದಿ ಮಾಡಿದ ಲೇಖಕರ ದಿಟ್ಟತನವನ್ನು ಮೆಚ್ಚಲೇಬೇಕು. ಈ ಲೇಖನದಿಂದ ಮಾವೋವಾದಿಗಳ ಉದ್ದೇಶ ಸ್ಪಷ್ಟವಾಗಿದೆ. ಮುಳ್ಳನ್ನು ಮುಳ್ಳಿನಿಂದಲೇ ತೆಗೆಯುವ ಪ್ರಯತ್ನ ಫಲ ಕೊಡದು. ಶಾಂತಿ ಮಾತುಕತೆಯೊಂದೇ ಪರಿಹಾರ. ಸರ್ಕಾರ ಈ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದೆ.

ಎಲ್. ಅರ್ಚನಾ ಗೌಡ
ಬೆಂಗಳೂರು

ಹಿಂಸಾ ಮಾರ್ಗ ತೊರೆಯಲಿ

ಮಾವೋವಾದಿ ಬದುಕಿನ ಸಂಪೂರ್ಣ ಚಿತ್ರಣ ನೀಡಿರುವ ಮುಖಪುಟ ಲೇಖನ ಅದ್ಭುತ ಅನುಭವ ನೀಡಿದೆ. ಇಂದು ಛತ್ತೀಸ್‌ಗಢದಲ್ಲಿ ಮಾತ್ರವಲ್ಲ, ದೇಶದುದ್ದಗಲಕ್ಕೂ ಮಾವೋವಾದಿಗಳು ವ್ಯಾಪಿಸಿಕೊಂಡಿದ್ದಾರೆ. ದಿನೇ ದಿನೇ ಮಾವೋವಾದಿಗಳ ಅಟ್ಟಹಾಸ ಹೆಚ್ಚಾಗುತ್ತಿದೆ. ಆದರೆ ಸರ್ಕಾರಕ್ಕೆ ಇದು ಗಂಭೀರ ಸಮಸ್ಯೆ ಎನಿಸುವುದೇ ಇಲ್ಲ. ಮಾವೋವಾದಿಗಳು ದಾಳಿ ನಡೆಸಿದರೆ, ಕೆಲ ದಿನಗಳವರೆಗೆ ಆ ಸ್ಥಳದಲ್ಲಿ ಭದ್ರತಾ ವ್ಯವಸ್ಥೆ. ಸಮಸ್ಯೆ ಅಲ್ಲಿಗೇ ಮುಗಿಯುತ್ತದೆ. ಧನಾತ್ಮಕ ಉದ್ದೇಶವನ್ನು ಹೊಂದಿದ್ದರೂ, ಇಂದು ಕೆಲವೆಡೆ ಮಾವೋವಾದಿಗಳೇ ಅಮಾಯಕ ಜನರ ಕೊಲೆ, ಸುಲಿಗೆ ಮಾಡುವಂತಹ ಸಮಾಜ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದಾರೆ. ಇದೆಷ್ಟು ಸರಿ? ಇದು ಸಮಾಜ ಉದ್ಧಾರವೇ? ಹಿಂಸಾ ಮಾರ್ಗ ತೊರೆದು ಶಾಂತಿಯುತ ಹೋರಾಟ ಮಾಡಲಿ. ಕಾಡಲಿದ್ದು ಹೋರಾಡುವ ಬದಲು, ನಾಡಿಗಿಳಿದು ಹೋರಾಟ ಮುಂದುವರೆಸಲಿ. ಸರ್ಕಾರವೂ ಬಡಜನರ ಸಮಸ್ಯೆಯನ್ನು ಆಲಿಸಬೇಕು. ಮಾವೋವಾದಿಗಳಿಗೂ ಸಾಮಾನ್ಯ ಜೀವನ ನಡೆಸಲು ಅನುವು ಮಾಡಿ ಕೊಡಬೇಕು. ಸರ್ಕಾರ ಮತ್ತು ಮಾವೋವಾದಿಗಳ ನಡುವೆ ಶಾಂತಿಯುತ ಸಂಧಾನ ನಡೆದಲ್ಲಿ ಮಾತ್ರ ಸ್ವಸ್ಥ ಸಮಾಜ ನಿರ್ಮಾಣ ಸಾಧ್ಯ.

ನರಸಿಂಹ ಬಸಪ್ಪ
ಚಿತ್ರದುರ್ಗ

ನೈಜ ಬದುಕಿನ ಅನಾವರಣ

ಆಕರ್ಷಣೀಯ ಮುಖಪುಟದಂತೆಯೇ ಒಳಪುಟಗಳೂ ಅದ್ಭುತವಾಗಿದ್ದವು. ರಾಷ್ಟ್ರೀ, ರಾಜ್ಯಮಟ್ಟದ ಪತ್ರಿಕೆಗಳು ಮಾವೋವಾದಿಗಳ ಬಗ್ಗೆ ಸಾಕಷ್ಟು ಪ್ರಚಾರ ಮಾಡಿವೆ. ಆದರೆ ಕಳೆದ ವಾರ ಟಿಎಸ್‌ಐಯಲ್ಲಿ ಬಂದಿರುವ ವರದಿ ಮಾತ್ರ ವಿಭಿನ್ನ. ಲೇಖಕರ ಅನುಭವವನ್ನು ಓದುತ್ತಾ ಹೋದಂತೆ ಹೊಸದೊಂದು ಲೋಕ ಬಿಚ್ಚಿಕೊಳ್ಳುತ್ತದೆ. 'ಮಾವೋವಾದಿಗಳು ಹೀಗೂ ಇದ್ದಾರೆಯೆ'? ಎಂಬ ಪ್ರಶ್ನೆ ಉದ್ಭವಿಸದೆ ಇರದು. ಇಂಥ ಇನ್ನಷ್ಟು ಲೇಖನಗಳನ್ನು ನಿರೀಕ್ಷಿಸುತ್ತೇನೆ.

ಕೆ.ಎನ್. ಮಹೇಶ್
ಲಿಂಗರಾಜಪುರ

ಕಾಳಜಿ ಇಲ್ಲ!

'ಈ ಬಾರಿ ಕೇಂದ್ರದಲ್ಲಿ ಕಾಂಗ್ರೆಸ್- ಬಿಜೆಪಿ ಸಮ್ಮಿಶ್ರ ಸರ್ಕಾರ ಅಸ್ತಿತ್ವಕ್ಕೆ ಬಂದರೆ!! (ಅರಿಂದಮ್ ಚೌಧುರಿ) ಸಂಪಾದಕೀಯ ಬೆಚ್ಚಿಬೀಳಿಸಿತು. ಜಾಜ್ ಬುಷ್- ಬಿನ್ ಲಾಡೆನ್ ಒಂದೇ ವೇದಿಕೆ ಹಂಚಿಕೊಳ್ಳುವ ಕಲ್ಪನೆ ಹೇಗೆ ಅಸಾಧ್ಯವೋ ಹಾಗೇ ಬಿಜೆಪಿ- ಕಾಂಗ್ರೆಸ್‌ಗಳು. ಪರಸ್ಪರ ಭಿನ್ನ ಸಿದ್ಧಾಂತಗಳನ್ನು ಹೊಂದಿರುವ ಈ ಪಕ್ಷಗಳು ರಾಷ್ಟ್ರಮಟ್ಟದಲ್ಲಿ ಸಮ್ಮಿಶ್ರ ಸರ್ಕಾರ ರಚಿಸುವುದು ಅಸಾಧ್ಯ ಎಂಬುದೇ ನನ್ನ ಅನಿಸಿಕೆ. ಆದರೂ ಕ್ರಿಕೆಟ್ ಆಟದಂತೆ ಕೊನೆಯವರೆಗೂ ಏನನ್ನೂ ಊಹಿಸಲಾಗದ ಪರಿಸ್ಥಿತಿ. ರಾಜಕಾರಣದಲ್ಲಿ ಖಾಯಂ ಶತ್ರುಗಳು ಅಥವಾ ಮಿತ್ರರು ಇರುವುದೇ ಇಲ್ಲ. ಮಾತ್ರವಲ್ಲ ಅರಿಂದಮ್ ಚೌಧುರಿ ಅವರಂತೆ ಈಗಿನ ರಾಜಕಾರಣಿಗಳಿಗೂ ದೇಶದ ಬಗೆಗಿನ ಕಾಳಜಿ ಇರಬೇಕಲ್ಲ. ಸುಭದ್ರ ಸರಕಾರದ ಕನಸೋ ಯಾರಿಗೂ ಇಲ್ಲ. ಸದ್ಯ ದೋಚುವ ಮಾರ್ಗದ ಅನ್ವೇಷಣೆಯೇ ರಾಜಕಾರಣಿಗಳಿಗೆ ಮುಖ್ಯವಾಗಿರುವಾಗ ದೇಶದ ಕುರಿತಾದ ಕಾಳಜಿ ಎಲ್ಲಿಂದ ಬರುತ್ತದೆ?

ಅಹ್ಮದ್ ಕುದ್ರಡ್ಕ
ಉಪ್ಪಿನಂಗಡಿ

ಕೈಗಾರಿಕೆಗಳಿಗೆ ಅವಕಾಶ ಸಲ್ಲದು

'ಕಡಲ ಮಾತೆಯ ಬರಿದಾದ ಒಡಲು' (ಶಶಿ ಸಂಪಳ್ಳಿ) ಲೇಖನ ಚೆನ್ನಾಗಿತ್ತು. ನಿತ್ಯ ನಿರಂತರವಾಗಿ ಎದುರಾಗುವ ಸಮಸ್ಯೆಗಳಿಗೆ ಬದುಕೊಡ್ಡುವ ಕರಾವಳಿ ಮೀನುಗಾರರ ಸಂಕಷ್ಟಗಳ ಕುರಿತ ಟಿಎಸ್‌ಐ ವಿಶ್ಲೇಷಣೆ ಸ್ವಾಗತಾರ್ಹ. ಮೀನುಗಾರರ ಸಮಸ್ಯೆಯೇನಿದ್ದರೂ ಸರ್ಕಾರಕ್ಕೆ ಅರ್ಥವಾಗುವುದಿಲ್ಲ. ಇದು ಕೇವಲ ಮಂಗಳೂರು ಮೀನುಗಾರರ ಸಮಸ್ಯೆಯಲ್ಲ, ದೇಶದ ವಿವಿಧ ಭಾಗಗಳ ಮೀನುಗಾರರ ಸಮಸ್ಯೆಯೂ ಹೌದು. ವಿಶೇಷ ಆರ್ಥಿಕ ವಲಯ, ಉಷ್ಣ ವಿದ್ಯುತ್ ಸ್ಥಾವರ ನಿರ್ಮಾಣದಂಥ 'ಅಭಿವೃದ್ಧಿಪರ' ಯೋಜನೆಗಳು ಜನಸಾಮಾನ್ಯರ ಬದುಕಿಗೆ ಕೊಡಲಿಯೇಟು ನೀಡುತ್ತಿವೆ. ಹೀಗಿರುವಾಗ ಮೀನುಗಳ ಅಭಿವೃದ್ಧಿಗೆ ಕಂಟಕವಾಗುವ ಯಾವುದೇ ಕೈಗಾರಿಕೆಗಳಿಗೆ ಅವಕಾಶ ನೀಡಬಾರದು. ಸರ್ಕಾರ ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಲಿ.

ಆರ್.ಎಸ್. ಶ್ರೀನಿಧಿ
ತೊಕ್ಕೊಟ್ಟು

ಭ್ರಷ್ಟರ ಹೊಟ್ಟೆ ತುಂಬುವ ಯೋಜನೆಗಳು

'ಮಾರಣಾಂತಿಕ ಮೈತ್ರಿಗೆ ಮುಕ್ತಿ ಎಂತು?' (ರಾಜನ್ ಪ್ರಕಾಶ್) ಲೇಖನ ಚೆನ್ನಾಗಿತ್ತು. ಏಡ್ಸ್ ನಿಯಂತ್ರಣಕ್ಕೆ ಸರ್ಕಾರದಿಂದ ಸಾಕಷ್ಟು ಅನುದಾನಗಳು ಮಂಜೂರಾಗುತ್ತವೆ. ಆದರೆ ಜನರಿಗಿಂತ ಹೆಚ್ಚಾಗಿ ಭ್ರಷ್ಟ ಅಧಿಕಾರಿಗಳೇ ಇದರ ಲಾಭ ಪಡೆಯುತ್ತಿದ್ದಾರೆ. ಪ್ರಸ್ತುತ ಭ್ರಷ್ಟಾಚಾರ ದೇಶದೆಲ್ಲೆಡೆ ತನ್ನ ಕರಾಳ ಹಸ್ತ ಚಾಚಿದೆ. ಸರ್ಕಾರ ಬಿಡುಗಡೆಗೊಳಿಸಿದ ಯಾವುದೇ ಸೌಲಭ್ಯಗಳಿರಲಿ, ಪರಿಹಾರಗಳಿರಲಿ ಅವುಗಳನ್ನು ಪಡೆಯಲು ಅಧಿಕಾರಿಗಳಿಗೆ ಲಂಚ ನೀಡಲೇಬೇಕು. ಟಿಎಸ್‌ಐ ತಿಳಿಸಿರುವಂತೆ ಯೋಜನೆಗಳಿಗೆ ಸರ್ಕಾರ ಖರ್ಚು ಮಾಡಿದ ಹಣದಲ್ಲಿ ಜನರಿಗೆ ದೊರೆಯುತ್ತಿರುವುದು ಅತ್ಯಲ್ಪ ಮೊತ್ತ. ಜೊತೆಗೆ ಪ್ರಾಣದ ಹಂಗು ತೊರೆದು ದೇಶ ರಕ್ಷಣೆಯ ಹೊಣೆ ಹೊತ್ತಿರುವ ಯೋಧರಿಗೆ ಆಗುತ್ತಿರುವ ಅನ್ಯಾಯ ನೋಡಿದರೆ ನಾವು ಇಂದು ಎತ್ತ ಸಾಗುತ್ತಿದ್ದೇವೆ ಎಂದು ಸ್ಪಷ್ಟವಾಗುತ್ತದೆ. ಸಮಾಜದ ಕಣ್ತೆರೆಸುವ ಉತ್ತಮ ಲೇಖನಗಳು ಇನ್ನಷ್ಟು ಬರಲಿ ಎನ್ನುವ ಆಶಯ ನನ್ನದು.

ಎಂ. ಪ್ರಶಾಂತ್
ಉಜಿರೆ

ಸಮಸ್ತರೂ ದನಿಗೂಡಿಸಿ

ತಸ್ಲೀಮಾ ಕುರಿತಾಗಿ ಮೂಡಿಬಂದ 'ತಸ್ಲೀಮಾ ನಸ್ರೀನ್ ನಡೆಸಿಕೊಳ್ಳುತ್ತಿರುವ ನೀತಿ ಅತಿದೊಡ್ಡ ಪ್ರಜಾಪ್ರಭುತ್ವ ಭಾರತಕ್ಕೆ ಅವಮಾನಕಾರಿ. ಯಾರಾದರೂ ತಕ್ಷಣ ನ್ಯಾಯ ಒದಗಿಸುತ್ತೀರಾ' ಸಂಪಾದಕೀಯ (ಅರಿಂದಮ್ ಚೌಧುರಿ) ನಿಜವಾಗಿಯೂ ಕ್ರಾಂತಿಯ ಕಹಳೆಯನ್ನೇ ಮೊಳಗಿಸಿದೆ. ಪ್ರತಿಯೊಬ್ಬ ವ್ಯಕ್ತಿಗೂ ಬದುಕುವ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವಿದೆ. ಆದರೆ ವಿಶ್ವದಲ್ಲಿ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿಯೇ ಈ ಸ್ವಾತಂತ್ರ್ಯವನ್ನು ಕಸಿದುಕೊಳ್ಳುತ್ತಿರುವುದು ವಿಷಾದನೀಯ. ತಸ್ಲೀಮಾ ತಮ್ಮ ಬರಹದಲ್ಲಿ ಮುಸ್ಲಿಂ ಮೂಲಭೂತವಾದಿಗಳಿಗೆ ನೋವುಂಟು ಮಾಡಿದ್ದಾರೆ ಎಂಬ ಕಾರಣದಿಂದಲೇ ಈಕೆಯನ್ನು 'ಗೃಹಬಂಧನ'ದಲ್ಲಿ ಇಟ್ಟಿರುವುದು ನಿಜಕ್ಕೂ ಖಂಡನೀಯ. ನಿಜವಾಗಿಯೂ ಟಿಎಸ್‌ಐಯಲ್ಲಿ ಬಂದಿರುವ ಸಂಪಾದಕೀಯ ನೋಡಿ ಹೆಮ್ಮೆ ಎನಿಸಿತು. ತಸ್ಲೀಮಾ ಎದುರಿಸಿದ ಸಮಸ್ಯೆಗಳನ್ನೇ ಬಿಂಬಿಸುವುದರಲ್ಲಿ ನಿರತರಾಗಿರುವ ನಮ್ಮ ಮಾಧ್ಯಮಗಳಿಗೆ ಅವರ ನೋವು ಕಂಡಿಲ್ಲ. 'ಗೃಹಬಂಧನ'ದಲ್ಲಿದ್ದುಕೊಂಡು ಆಕೆ ಬರೆದಿರುವ ಕವನಗಳನ್ನು ಓದುವಾಗ ಕಣ್ಣಲ್ಲಿ ನೀರು ಜಿನುಗಿತು. ಯಾರು ದನಿಯೆತ್ತದಿದ್ದರೂ ಟಿಎಸ್‌ಐ ದನಿಯೆತ್ತಿದೆ. ದೇಶದ ಸಮಸ್ತ ನಾಗರಿಕರೂ ದನಿಗೂಡಿಸಲಿ. ಸಮಾಜದಲ್ಲಿ ಜಾಗೃತಿ ಮೂಡಿಸಬಲ್ಲ ಸಂಪಾದಕೀಯ ನೀಡಿದ್ದಕ್ಕೆ ಟಿಎಸ್‌ಐಗೆ ಆಭಾರಿಯಾಗಿರುವೆ.

ವಿ. ಬಸವರಾಜು
ಕೋಲಾರ

ಪ್ರಜಾಪ್ರಭುತ್ವದ ಗೆಲುವು

ಪಾಕಿಸ್ತಾನದ ಚುನಾವಣೆಯಲ್ಲಿ ಪಿಪಿಪಿ ಗೆಲುವು ಸಾಧಿಸುವುದರ ಮೂಲಕ ನಿರಂಕುಶ ಆಡಳಿತಕ್ಕೆ ಕೊನೆ ಹಾಡಲಾಗಿದೆ. ಹೌದು! ನಿಜವಾಗಿಯೂ ಇದು 'ಪ್ರಜಾಪ್ರಭುತ್ವದ ಗೆಲುವು'. ನಿರಂಕುಶ ಪ್ರಭುತ್ವದಲ್ಲಿ ನಲುಗಿದ್ದ ಪಾಕಿಸ್ತಾನದಲ್ಲಿ ಪ್ರಜಾಪ್ರಭುತ್ವ ಮತ್ತೆ ಸ್ಥಾಪನೆಯಾಗಿದೆ ಎನ್ನಬಹುದು. ಅಮೆರಿಕದ ಮಾತಿಗೆ ತಾಳ ಹಾಕುತ್ತಿದ್ದ ಮುಷರಫ್ ನೀತಿಯಿಂದಾಗಿ ಪಾಕಿಸ್ತಾನದ ಜನಸಾಮಾನ್ಯರ ಬದುಕು ಬಡವಾಗಿದೆ. ಭಯೋತ್ಪಾದನೆಯಿಂದ ದೇಶವೇ ನಲುಗಿದ್ದರೂ, ಅದನ್ನು ನಿಯಂತ್ರಿಸುವಲ್ಲಿ ಮುಷರಫ್ ವಿಫಲವಾಗಿದ್ದರು. 'ಮುಷರಫ್ ಸೋಲು, ಪ್ರಜಾಪ್ರಭುತ್ವದ ಗೆಲುವು' (ಶಾಹಿದ್ ಹುಸೇನ್) ಸಕಾಲಿಕ ಮತ್ತು ಅತ್ಯುತ್ತಮವಾಗಿ ಮೂಡಿಬಂದಿದೆ.

ರಮ್ಯಶ್ರೀ ಕಾರ್ತಿಕ್
ಶಿರಸಿ

ಹೊಸ ಪ್ರಯೋಗ

ಇದು ಇಂಟರ್‌ನೆಟ್ ಯುಗ. ಸರ್ವಂ ಕಂಪ್ಯೂಟರ್ ಮಯ! ಹಾಗಿರುವಾಗ ಪುಸ್ತಕ ಹಿಡಿಯಲು ಸಮಯ ಸಿಗಬೇಕಲ್ಲ? ಈ ನಿಟ್ಟಿನಲ್ಲಿ ಟಿಎಸ್‌ಐ ವೆಬ್ ಆವೃತ್ತಿ ಬರುತ್ತಿರುವುದು ಖುಷಿ ಕೊಟ್ಟಿದೆ. ಅದರಲ್ಲೂ ಈ ಬಾರಿಯ 37ನೇ ಸಂಚಿಕೆಯಂತೂ ಅದ್ಭುತವಾಗಿತ್ತು. ನಕ್ಸಲ್ ಜಗತ್ತಿನ ಒಳಹೊರಗನ್ನು ತೆರೆದಿಟ್ಟ ರೀತಿ ಅದ್ಭುತ. ಇಂತಹ ಹೊಸ ಪ್ರಯೋಗಗಳನ್ನು ಕನ್ನಡ ಪತ್ರಿಕಾ ರಂಗದಲ್ಲಿ ಅತ್ಯಂತ ಸಮರ್ಪಕವಾಗಿ ಮಾಡುತ್ತಿರುವ ಪತ್ರಿಕೆಗೆ ಧನ್ಯವಾದಗಳು.

ಎಂ. ಕಿರಣ್ ಶೇಖರ್
ಬೈಲಹೊಂಗಲ

ಇತಿಹಾಸದ ಪಲಕು

ಇತಿಹಾಸದ ಮೇಲೆ ಬೆಳಕು ಚೆಲ್ಲುವಂತಹ ಕೆಲಸ ಮಾಡಿರುವ 'ಕೆಎಸ್‌ಸಿಎ'ಗೆ ಧನ್ಯವಾದ ಸಲ್ಲಿಸಲೇ ಬೇಕು. ಕಳೆದ ಸಂಚಿಕೆಯ ಟಿಎಸ್‌ಐನಲ್ಲಿ ಪ್ರಕಟವಾದ 'ಕೆಎಸ್‌ಸಿಎ' ಕ್ರಿಕೆಟ್ ಮ್ಯೂಸಿಯಂ: ಸ್ಪೂರ್ತಿಯ ಭಂಡಾರ' (ಸತೀಶ್ ಚಪ್ಪರಿಕೆ) ಚೆನ್ನಾಗಿ ಮೂಡಿಬಂದಿದೆ. ಹೌದು, ಲೇಖಕರು ಹೇಳಿದಂತೆ ಇತಿಹಾಸವನ್ನು ರಕ್ಷಿಸಬೇಕು ಮತ್ತು ಇತಿಹಾಸದ ತುಣುಕುಗಳನ್ನು ಪ್ರದರ್ಶಿಸಬೇಕು. ಈ ಕೆಲಸವನ್ನು 'ಕೆಎಸ್‌ಸಿಎ' ಅಚ್ಚುಕಟ್ಟಾಗಿ ನಿರ್ವಹಿಸಿದೆ ಎಂದೇ ಹೇಳಬಹುದು.

ಎನ್. ಮೇಘನಾ
ಬಾಳೆಹೊನ್ನೂರು

ಬಹುಮಾನಿತ ಪತ್ರಗಳು

ಮತಬ್ಯಾಂಕ್ ಬಜೆಟ್

ಬಜೆಟ್ ಮತ್ತು ಬುಂದೇಲ್‌ಖಂಡ್ (ಸುತಾನು ಗುರು ಮತ್ತು ಪೂಜಾ ಅವಸ್ತಿ) ಮುಖಪುಟ ಲೇಖನ ಸಕಾಲಿಕ ಮತ್ತು ಅರ್ಥಪೂರ್ಣ. ಹೌದು! ಖಂಡಿತವಾಗಿಯೂ ಈ ಬಾರಿಯ ಕೇಂದ್ರ ಬಜೆಟ್ ಮತಬ್ಯಾಂಕ್ ಓಲೈಕೆ ಎಂದರೆ ತಪ್ಪೇನಲ್ಲ. ಲಾಲೂ ಪ್ರಸಾದ್ ಯಾದವ್ ಖಾಸಗಿ ವಲಯಗಳತ್ತ ಗಮನಹರಿಸಿದರೆ, ಪಿ. ಚಿದಂಬರಂ ಮುಂಬರುವ ಚುನಾವಣೆಯ ಬಗ್ಗೆ ಹೆಚ್ಚು ತಲೆಕೆಡಿಸಿಕೊಂಡಿದ್ದಾರೆ. ಬಜೆಟ್‌ನಲ್ಲಿ ರೈತರಿಗೆ 60,000 ಕೋರೂಪಾಯಿ ಸಾಲ ಮನ್ನಾ ಘೋಷಿಸಿರುವುದು ಖಂಡಿತವಾಗಿಯೂ ಈ ಬಾರಿಯ ಚುನಾವಣೆಯಲ್ಲಿ ಪ್ರತಿಫಲಿಸುವುದರಲ್ಲಿ ಎರಡು ಮಾತಿಲ್ಲ. ಆದರೂ ಬಹಳ ತಡವಾಗಿ ಬಿಟ್ಟಿದೆ. ಬುಂದೇಲ್‌ಖಂಡ್ ಲೇಖನ ಭೂಮಿ ಕಳೆದುಕೊಂಡ ರೈತರ ನೋವನ್ನು ಸಮರ್ಥವಾಗಿ ಚಿತ್ರಿಸಿದೆ. ಬಹುಶಃ ಚಿದಂಬರಂ ಅವರು ರೈತರು ಖಾಸಗಿ ಲೇವಾದೇವಿಗಾರರಿಂದ ಬಡ್ಡಿದರದಲ್ಲಿ (ಶೇ.20) ಸಾಲ ಪಡೆದಿದ್ದಾರೆ ಮತ್ತು ಈ ರೈತರು ಸಾಕಷ್ಟು ಸಂಕಷ್ಟ ಅನುಭವಿಸುತ್ತಿದ್ದಾರೆ ಎಂಬುದನ್ನು ಮರೆತಿರಬೇಕು. ಇತ್ತೀಚೆಗೆ ಬುಂದೇಲ್‌ಖಂಡ್ ಕಾಂಗ್ರೆಸ್- ಬಿಎಸ್‌ಪಿ ಸಮರಾಂಗಣವಾಗಿ ಪರಿವರ್ತನೆಯಾಗುತ್ತಿದೆ. ರಾಹುಲ್ ಗಾಂಧಿ ಮತ್ತು ಮುಖ್ಯಮಂತ್ರಿ ಮಾಯಾವತಿ ಇಲ್ಲಿ ಭಾರಿ ರ್‍ಯಾಲಿಯನ್ನು ಆಯೋಜಿಸಿದ್ದರು. ಮಾಯಾವತಿ ಅವರು ಹಿಂದುಳಿದ ಪ್ರದೇಶಗಳಾದ ಪೂರ್ವಾಂಚಲ ಮತ್ತು ಬುಂದೇಲ್‌ಖಂಡ್ ಅಭಿವೃದ್ಧಿಗೆ 80,000 ಕೋರೂಪಾಯಿ ವಿಶೇಷ ಪರಿಹಾರ ಧನಕ್ಕಾಗಿ ಬೇಡಿಕೆಯತ್ತ ಯುಪಿಎ ಸರ್ಕಾರ ಗಮನವೇ ನೀಡಿಲ್ಲ. ಬುಂದೇಲ್‌ಖಂಡ್ ಪ್ರಾಂತ್ಯದಲ್ಲಿ ರಾಹುಲ್ ಗಾಂಧಿ ಅವರ ವರ್ಚಸ್ಸು ವೃದ್ಧಿಗೆ ವೇದಿಕೆ ಸಿದ್ಧಪಡಿಸುವತ್ತಲೇ ಕಾಂಗ್ರೆಸ್ ಗಮನ ಹರಿಸಿದೆ.

ರಾಹುಲ್ ಗೊಯಲ್
ಇ- ಮೇಲ್ ಮೂಲಕ

ಸಚಿವರು ಗಮನಹರಿಸಲಿ

'ಮಧ್ಯಮ ವರ್ಗದ ಜೀವಾನಿಲ' (ಪ್ರಸೂನ್ ಮಜುಂದಾರ್) ಲೇಖನ ಚೆನ್ನಾಗಿತ್ತು. ಲೇಖನದಲ್ಲಿ ಹೇಳಿರುವಂತೆ ನಿಜವಾಗಿಯೂ ಇಂದು ಎಲ್‌ಪಿಜಿ ಕೊರತೆ ಕಂಡುಬರುತ್ತಿದೆ ಮತ್ತು ಇದು ಉತ್ತರ ಕರ್ನಾಟಕದ ಜನರ ಸಮಸ್ಯೆಯೂ ಹೌದು. ನನ್ನ ಅನಿಲ ಸಿಲಿಂಡರ್ ಖಾಲಿಯಾಗಿ 15 ದಿನಗಳೇ ಸರಿದಿವೆ. ಆದರೆ ಬದಲಿ ಸಿಲಿಂಡರ್ ಮನೆಗೆ ಬಂದಿಲ್ಲ. ಇದೇ ಸಮಸ್ಯೆ ನಮ್ಮ ಸ್ನಾನದ ಕೋಣೆಯಲ್ಲಿಯೂ ಇದೆ. ನೀರು ಕಾಯಿಸಲು ಕೂಡ ನಾವು ಅನಿಲ ಸಿಲಿಂಡರನ್ನೇ ಬಳಸುತ್ತಿದ್ದೇವೆ. ಆದರೆ ಇದನ್ನೂ ಕಾಳಸಂತೆಯಲ್ಲಿ ಖರೀದಿಸಬೇಕು. ವಾಹನಗಳಲ್ಲಿ ಮತ್ತು ನೀರು ಕಾಯಿಸಲು ಎಲ್‌ಪಿಜಿ ಸಿಲಿಂಡರನ್ನೇ ಅವಲಂಬಿಸುವುದರಿಂದ ಬೇಡಿಕೆ ಮತ್ತೂ ಹೆಚ್ಚಾಗಿದೆ. ಸಿಲಿಂಡರ್ ಕೊರತೆ ದೇಶದೆಲ್ಲೆಡೆ ಕಾಡುತ್ತಿದೆ. ಈ ನಿಟ್ಟಿನಲ್ಲಿ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಡಿಯೋರಾ ಕಾರ್ಯೋನ್ಮುಖರಾಗಬೇಕಾದ ಅಗತ್ಯವಿದೆ.

ದಿವಾಕರ್ ಕೌಶಿಕ್
 

ಧೋರಣೆಗಳು ಬದಲಾಗಬೇಕು

ಇಂದಿನ ಗಂಭೀರ ಸಮಸ್ಯೆ ಕುರಿತಾದ 'ಪ್ರಪಾತಕ್ಕೆ ಬಿದ್ದವರ ಆಶಾಕಿರಣ ಎಚ್‌ಐವಿ ಮಸೂದೆ ಅಂಗೀಕಾರ' ಸಂಪಾದಕೀಯ (ಅರಿಂದಮ್ ಚೌಧುರಿ) ಕಣ್ತೆರೆಸುವಂತಿತ್ತು. ಕಳೆದ ಎರಡು ದಶಕಗಳಿಂದ ಅದೆಷ್ಟೋ ಜನರನ್ನು ಕಾಡುತ್ತಿರುವ ಗಂಭೀರ ಸಮಸ್ಯೆಗೆ ಸರ್ಕಾರ ಹೇಗೆ ಪರಿಹಾರ ಕಂಡುಕೊಳ್ಳಬಲ್ಲದು ಎಂಬುದೇ ಅಚ್ಚರಿಯಾಗುತ್ತಿದೆ. ಇಂದಿಗೂ ಜನರು ಏಡ್ಸ್ ಪೀಡಿತರನ್ನು ಅಸ್ಪೃಶ್ಯರಂತೆ ಕಾಣುತ್ತಾರೆ ಮತ್ತು ಏಡ್ಸ್ ಸಾಂಕ್ರಾಮಿಕ ರೋಗವೆಂದೇ ಭಾವಿಸುತ್ತಾರೆ. ಸಂಪಾದಕರು ಹೇಳಿರುವಂತೆ ಸ್ತ್ರೀಯರು ಮತ್ತು ಮಕ್ಕಳಿಗೇ ಏಡ್ಸ್ ಅಪಾಯ ಅಧಿಕ. ಭಾರತೀಯ ಸಮಾಜದಲ್ಲಿ ಏಡ್ಸ್‌ನಂಥ ರೋಗಗಳು ಬಾಧಿಸಿದರೆ ಸ್ತ್ರೀಯರನ್ನು ಅತ್ಯಂತ ಕೀಳಾಗಿ ಕಾಣುವುದು ಸಾಮಾನ್ಯ. ಸರ್ಕಾರದ ಧೋರಣೆಗಳೂ ಬದಲಾಗಬೇಕಿದೆ. ಬಿಡುಗಡೆಯ ಭಾಗ್ಯ ದೊರೆಯುವುದೆಂತೋ?

ನಿಧಿ ತಾಪರ್

ದಿಕ್ಕು ತಪ್ಪಿದ ಸಂಘಟನೆಯೆಡೆಗೆ ಜಾಗರೂಕತೆ ಅಗತ್ಯ

'ರೋಚಕ ಮಾವೋವಾದಿ ಲೋಕ' (ಸಂಜಯ್ ಬಾಸಕ್ ಮತ್ತು ರಂಜನ್ ಬಸು) ಮುಖಪುಟ ಲೇಖನ ಚೆನ್ನಾಗಿತ್ತು. ವ್ಯಾಪಕ ಪರಿಶೋಧನೆ ನಡೆಸಿ ವಾಸ್ತವವನ್ನು ರೋಚಕವಾಗಿ ಪರಿಚಯಿಸಿದ್ದು ಶ್ಲಾಘನೀಯ. ಮಾವೋವಾದಿಗಳು ತಮ್ಮ ತಾತ್ವಿಕ ಮೂಲ ಧೋರಣೆಯನ್ನು ಬಚ್ಚಿಟ್ಟು, ಹಿಂಸಾ ಮಾರ್ಗ ಅನುಸರಿಸುವ ಅಗತ್ಯ ನನಗಂತೂ ಕಂಡು ಬರುತ್ತಿಲ್ಲ. ಸರ್ಕಾರಗಳು ಇಂತಹ ಅಡಗುದಾಣಗಳಿಗೆ ಆಸ್ಪದವೀಯದಂತೆ ನೋಡಿಕೊಂಡರೆ ಅರಣ್ಯವಾಸಿ ಬುಡಕಟ್ಟು ಜನಾಂಗಗಳು ಹಾಗೂ ಅವರ ಸಂಘಟನೆಗಳು ಸಮಾಜದಿಂದ ದೂರವುಳಿಯಲು ಸಾಧ್ಯವಿಲ್ಲ ಎನ್ನಬಹುದು. ಅಂತಹ ಅಡಗುದಾಣಗಳಿಗೆ ಆಸ್ಪದ ನೀಡಿದ್ದರಿಂದಲೇ ವೀರಪ್ಪನ್ ಪ್ರಸಿದ್ಧ ಕಾಡುಗಳ್ಳನೆಂಬ ಖ್ಯಾತಿ ಪಡೆದ. ಮುಖ್ಯವಾಗಿ ಯಾವುದೇ ಮಾನವ ಸಂಘಟನೆಗಳು ಸಮಾಜದ ಮುಖ್ಯವಾಹಿನಿಯಿಂದ ದೂರವಿರದಂತೆ ನೋಡಿಕೊಳ್ಳಬೇಕು. ಈ ತರದ ಹಿಂಸಾತ್ಮಕ ಧೋರಣೆ ತಳೆಯುವ ಪಂಗಡಗಳಿಂದ ರಕ್ಷಣೆ ಸಾಧ್ಯ ಮತ್ತು ಸಮಾಜ ವಿರೋಧಿ ತತ್ವಗಳನ್ನು ಬೇರು ಸಮೇತ ಕಿತ್ತುಹಾಕಬಹುದು. ಆದರೆ ನಮ್ಮ ಸರ್ಕಾರ ಸಮಸ್ಯೆಗಳನ್ನು ಬೆಳೆಯಲು ಆಸ್ಪದ ನೀಡಿ, ಅವು ಹೆಮ್ಮರವಾದ ಮೇಲೆ ಮೂಲೋಚ್ಛಾಟನೆಗೆ ತೊಡಗುತ್ತವೆ. ಇದರಿಂದ ಎರಡೂ ಕಡೆಗೂ ಹಾನಿ ತಪ್ಪಿದ್ದಲ್ಲ. ಆದರೂ ಸಮಾಜ ಇಂಥ ದಿಕ್ಕು ತಪ್ಪಿದ ಸಂಘಟನೆಗಳ ಜೊತೆ ಸದಾ ಜಾಗರೂಕವಾಗಿ ವ್ಯವಹರಿಸಬೇಕಾಗಿದೆ.

ಬಿ. ರಾಮರಾವ ಗುಲ್ಬರ್ಗಾ

 

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .