|
| ಫಿರೋಜ್ ಬಖ್ತ್ ಅಹ್ಮದ್
|
ರಾಜಕೀಯ-ಧಾರ್ಮಿಕ ವಿಶ್ಲೇಷಕ
|
ಈ ಬುದ್ಧಿವಂತ 'ದರುಲ್ ಉಲೂಮ್ ದಿಯೋಬಂದ್' ಧಾರ್ಮಿಕ ಮುಖಂಡರು ನಿಯಮಗಳನ್ನು ಹೇರುತ್ತಾರೆ. ಭಾರತೀಯ ಮುಸ್ಲಿಮರ ಸಾರ್ವಜನಿಕ ಬದುಕಿನಿಂದ ಆರಂಭಿಸಿ ಅವರ ಮಲಗುವ ಕೋಣೆಯ ಖಾಸಗಿ ವಿಚಾರಗಳವರೆಗೂ ತಮ್ಮ ಅಭಿಪ್ರಾಯವನ್ನೇ ಎತ್ತಿ ಹಿಡಿಯುವಂತೆ ತಾಕೀತು ಮಾಡುತ್ತಾರೆ. ತಲಾಖ್, ಕುಟುಂಬ ಕಲ್ಯಾಣ, ವಂದೇ ಮಾತರಂ ಮತ್ತು ಪರ್ದಾ ಇತ್ಯಾದಿ ವಿಚಾರಗಳ ಮೇಲೆ ತಮ್ಮ ನಿರ್ದೇಶನಗಳನ್ನು ಹೇರುತ್ತಾ ಬಡ ಮುಸ್ಲಿಮರು ಅದಕ್ಕೆ ಬೆಲೆ ತೆರುವಂತಹ ಪರಿಸ್ಥಿತಿ ನಿರ್ಮಿಸುತ್ತಿದ್ದಾರೆ.
ಅವರ ಜೀವನ ನಿಜಕ್ಕೂ ಶೋಚನೀಯವಾಗಿದೆ. ಆದರೆ ಮಾಧ್ಯಮಗಳು, ಟಿವಿ, ಪತ್ರಿಕೆಗಳಲ್ಲಿ ಬಹಿರಂಗವಾಗಿ ಎದ್ದು ಕಾಣುವ ವಿಷಯ ಮಾತ್ರ ಒಂದೇ. ಬಹುಸಂಖ್ಯಾತರ ಕುರಿತ ಮುಸ್ಲಿಮರ ಅಸಂಬದ್ಧ ಪೂರ್ವಗ್ರಹಪೀಡಿತ ನಂಬಿಕೆಗಳು. ಇಂಥ ಮೂಢ ಅಭಿಪ್ರಾಯಗಳಿಗೆ ಅವರೇ ಬಲಿಪಶುಗಳಾಗುತ್ತಿದ್ದಾರೆ ಎನ್ನಬಹುದು. ಭಾರತೀಯ ಮುಸ್ಲಿಮರಿಗೆ ಸಂಬಂಧಪಟ್ಟ ವಿವಾದಾಸ್ಪಾದ ವಿಚಾರವೊಂದು ಪ್ರಚಾರ ಪಡೆದರೆ ಸಾಕು. ಮುಸ್ಲಿಂ ಸಮುದಾಯದ ರಕ್ಷಣೆಗೆಂದೇ ಇರುವ ಘನತೆವೆತ್ತ ಇಸ್ಲಾಮಿಕ್ ಸಂಘಟನೆ ದರುಲ್ ಉಲೂಮ್ ದಿಯೋಬಂದ್ ಮತ್ತು ಅದರ ಸಹ ಸಂಘಟನೆ 'ಅಖಿಲ ಭಾರತ ಮುಸ್ಲಿಂ ಖಾಸಗಿ ಕಾನೂನು ಮಂಡಳಿ' ಜಾಗೃತವಾಗುತ್ತದೆ. ಅವರ ಕಾರ್ಯಯೋಜನೆ ನಿಧಾನವಾಗಿ ರೂಪು ತಳೆಯುತ್ತದೆ.
ಮಾಧ್ಯಮಗಳು ತಮ್ಮನ್ನು ಅಪಾರ್ಥ ಮಾಡಿಕೊಂಡಿವೆ ಎಂದು ಧಾರ್ಮಿಕ ಮುಖಂಡರು ಹಳಿಯುತ್ತಲೇ ಇರುತ್ತಾರೆ. ಆದರೆ ಅವರ ಹೇಳಿಕೆಗಳ ಪರಿಣಾಮವಾಗಿ ಹುಟ್ಟಿಕೊಂಡಿರುವ ಧಾರ್ಮಿಕ ವಾದದ ಹಿಂಸೆಯಿಂದಾಗಿ ಇಂದು ಇಸ್ಲಾಂ ಮೇಲೆಯೇ ಗೂಬೆ ಕೂರಿಸಲಾಗುತ್ತಿದೆ ಎನ್ನುವ ಸತ್ಯವನ್ನು ಅವರ್‍ಯಾರೂ ಅದೇಕೆ ಅರಿತುಕೊಳ್ಳುವುದೇ ಇಲ್ಲ. ಅವರೆಲ್ಲರೂ ತಪ್ಪು ಹೇಳುವುದು ಸಾಧ್ಯವಿಲ್ಲ ತಾನೆ? ಜನರು ತಾವೇನು ನೋಡಿದ್ದಾರೆಯೋ ಅದನ್ನು ಅನುಸರಿಸಿ ನಿರ್ಧಾರಕ್ಕೆ ಬರುತ್ತಾರೆ. ಅವರ ಅಭಿಪ್ರಾಯಕ್ಕೆ ಮನ್ನಣೆ ನೀಡುವಂತೆ ಇಂದು ಈ ಭಯೋತ್ಪಾದಕರು ಇಸ್ಲಾಂ ಹೆಸರಿನಲ್ಲಿ ಹಿಂಸೆಯ ಮಾತನಾಡುತ್ತಿದ್ದಾರೆ ಮತ್ತು ಕಾರ್ಯವೆಸಗುತ್ತಿದ್ದಾರೆ.
ನಿಜ ಹೇಳಬೇಕೆಂದರೆ ಈ ಮುಸ್ಲಿಂ ಧಾರ್ಮಿಕ ಮುಖಂಡರು ಅಪ್ರಯೋಜಕರಾಗಿದ್ದಾರೆ ಮತ್ತು ಅವರ ದನಿ ಉಡುಗಿ ಹೋಗಿದೆ. ಬಹುತೇಕ ಧಾರ್ಮಿಕ ಮುಖಂಡರು ತಮಗೆ ಮತ್ತು ತಮ್ಮ ಒಕ್ಕೂಟಗಳಿಗೆ ರಾಜ್ಯಗಳಿಂದ ಪೋಷಣೆ ಬಯಸುತ್ತಾರೆ. ಇದೇ ಕಾರಣಕ್ಕೆ ಮತರಾಜಕೀಯ ನಡೆಸುವ ದಾಳಗಳಾಗಿದ್ದಾರೆ. ಅವರ ಈ ಪ್ರಗತಿ ವಿರೋಧ ಪ್ರವೃತ್ತಿಯಿಂದಾಗಿ ಸಂಪೂರ್ಣ ಸಮುದಾಯವನ್ನೇ ಕರಾಳ ಭವಿಷ್ಯದೆಡೆಗೆ ನೂಕುತ್ತಿದ್ದಾರೆ. ವಾಸ್ತವಕ್ಕೆ ವಿರೋಧವಾಗಿರುವ ಸಿದ್ಧಾಂತಗಳನ್ನು ಸಮುದಾಯದ ತಲೆಗೆ ತುಂಬಿ ಸಂಕುಚಿತ ಮನೋಭಾವ ಮತ್ತು ಸೀಮಿತ ದೃಷ್ಟಿಕೋನ ಬೆಳೆಸಿಕೊಳ್ಳಲು ಪ್ರೇರಣೆ ನೀಡುತ್ತಿದ್ದಾರೆ. ಜನರನ್ನು ಹೊಟ್ಟೆ ಮತ್ತು ಹಸಿವಿನಿಂದ ಹೊರತು ಪಡಿಸಿದ ಸಮಸ್ಯೆಯೆಡೆಗೆ ಹೊರಳಿಸುವ ಮೂಲಕ ಸಮುದಾಯದ ಮೇಲೆ ತಮ್ಮ ನಿಯಂತ್ರಣವನ್ನು ಬಿಗಿಗೊಳಿಸುತ್ತಿದ್ದಾರೆ. ಮುಸ್ಲಿಮರಿಗೆ ಬೇಕಾಗಿರುವುದು ನೈತಿಕತೆ ಅಥವಾ ಶಾಂತಿ ಅಲ್ಲವೇ ಅಲ್ಲ, ಉತ್ತಮ ಶಿಕ್ಷಣದ ಅಗತ್ಯವಿದೆ. ಕೇವಲ ಶಿಕ್ಷಣವಲ್ಲ, ಉನ್ನತ ಶಿಕ್ಷಣದತ್ತ
ಮುಸ ್ಲಿಂ ಸಮುದಾಯ ಮುಖ ಮಾಡಬೇಕಿದೆ.
ಮುಸ್ಲಿಂ ಧರ್ಮ ಪ್ರಚಾರಕರು ಅನಗತ್ಯ ವಿಚಾರಗಳ ಬಗ್ಗೆ ಚರ್ಚಿಸಲು ಸಮ್ಮೇಳನಗಳನ್ನು ಆಯೋಜಿಸುತ್ತಾರೆ. ಆದರೆ ಆಧುನಿಕ ಶಿಕ್ಷಣ, ಮುಕ್ತ ಸ್ಪರ್ಧೆಗಳಲ್ಲಿ ಭಾಗವಹಿಸಲು ಮತ್ತು ತಮ್ಮದೇ ಲೋಕದಿಂದ ಹೊರ ಬರಲು ಅಗತ್ಯವಾದ ಶಿಕ್ಷಣ ನೀಡುತ್ತಿಲ್ಲ. ಹಿಂದುಳಿದಿರುವ ಭಾರತೀಯ ಮುಸ್ಲಿಮರಿಗೆ ವಾಸ್ತವದಲ್ಲಿ ಬೇಕಾಗಿರುವುದು ಇದೇ. ಮುಸ್ಲಿಂ ಮಹಿಳೆ ಬುರ್ಖಾ ಧರಿಸದೆ ಚುನಾವಣೆಗೆ ಸ್ಪರ್ಧಿಸುವಂತಿಲ್ಲ ಎಂದು ತಾಕೀತು ಮಾಡುತ್ತಾರೆ; ಬುರ್ಖಾ ಧರಿಸದೆ ಒಂದು ಆಟವನ್ನೂ ಆಡಬಾರದು ಎಂದು ಕಟ್ಟುನಿಟ್ಟಿನ ನಿರ್ಬಂಧ ವಿಧಿಸುತ್ತಾರೆ. ಇಂಥ ಕಠಿಣ ನಿಯಮಗಳಿಂದಲೇ ಮುಸ್ಲಿಂ ಸಮುದಾಯವನ್ನು ಜಗತ್ತು ಇಂದು ಸಂಶಯದ ದೃಷ್ಟಿಯಿಂದ ನೋಡುವಂತಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ, ಸ್ವತಃ ಮುಸ್ಲಿಮರು ಇತರರ ಬಗ್ಗೆ ಹೆಚ್ಚು ಸಂದೇಹ ಬೆಳೆಸಿಕೊಂಡಿರುತ್ತಾರೆ. ಮಾಧ್ಯಮಗಳಂತೂ ಅವರ ಬೆನ್ನ ಹಿಂದೆಯೇ ಇವೆ.
ಅಲ್ಪ ಸಂಖ್ಯಾತ ವರ್ಗಕ್ಕೆ ಸೇರಿದ ಕಾರಣ ಪಡೆಯುತ್ತಿರುವ ರೂ. 150 ಕೋಟಿ ಹಜ್ ಸಹಾಯಧನದ ವಿರುದ್ಧ ಅವರು ಮೊದಲು ಫತ್ವಾ ಹೇರಬೇಕು. ಹೀಗೆ ಅಪ್ರಯೋಜಕ ಕಾರಣಕ್ಕೆ ಭಿಕ್ಷೆ ನೀಡುವ ಬದಲಾಗಿ ಮುಸ್ಲಿಮರಿಗೆ ಉತ್ತಮ ಶಿಕ್ಷಣ ಪಡೆಯಲು ಅನುದಾನ ನೀಡಿ ಎಂದು ಕೋರಬೇಕು.
ಇತ್ತೀಚೆಗೆ ದಿಯೋಬಂದ್‌ನಲ್ಲಿ ಹಬ್ಬದ ವಾತಾವರಣವೇ ಇತ್ತು. ಸುಮಾರು ಹತ್ತು ಸಾವಿರ ಧಾರ್ಮಿಕ ಮುಖಂಡರು ಉಪಸ್ಥಿತರಿದ್ದ ಸಮಾರಂಭದಲ್ಲಿ, ಕಿಕ್ಕಿರಿದು ಸೇರಿದ ಮಾಧ್ಯಮಗಳ ಸಮ್ಮುಖದಲ್ಲಿ ಒಕ್ಕೂಟದ ವ್ಯವಸ್ಥಾಪಕರು ಭಯೋತ್ಪಾದನೆಯನ್ನು ಇಸ್ಲಾಂ ವಿರೋಧಿ ಎಂದು ಘೋಷಿಸಿದ್ದರು. ಆದರೆ 9/11 ದಾಳಿಯ ತತ್‌ಕ್ಷಣ ಬರಬೇಕಾಗಿದ್ದ ಈ ಘೋಷಣೆ ಹೊರಬರಲು ಇಷ್ಟು ಸಮಯ ತಗಲಿದ್ದು ಏಕೆ ಎನ್ನುವುದು ಮಾತ್ರ ಪ್ರಶ್ನೆಯಾಗೇ ಉಳಿದಿದೆ.
ನೇರವಾಗಿ ಹೇಳಬೇಕೆಂದರೆ, ಈ ಸಮ್ಮೇಳನವನ್ನು ಹಮ್ಮಿಕೊಳ್ಳುವ ಅಗತ್ಯವೇ ಇರಲಿಲ್ಲ. ಇಸ್ಲಾಂ ಶಾಲೆಗಳು ಮಕ್ಕಳ ತಲೆಗೆ ತುಂಬುವ ಸಿದ್ಧಾಂತಗಳು ಸರ್ವಧರ್ಮ ಸಮನ್ವಯ ಸಮಾಜಕ್ಕೆ ಹಾನಿಯುಂಟು ಮಾಡುತ್ತಿದೆ ಎನ್ನುವುದನ್ನು ಸಾಕ್ಷೀಕರಿಸುವ ಪುರಾವೆಗಳೇ ಇಲ್ಲವಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಇಸ್ಲಾಮಿಕ್ ಶಿಕ್ಷಣ ಭಯೋತ್ಪಾದನೆಯನ್ನು ವಿರೋಧಿಸುತ್ತದೆ. ಮುಸ್ಲಿಂ ಪೋಷಕರು ತಮ್ಮ ಮಕ್ಕಳು ಧರ್ಮ ಮತ್ತು ಆಧುನಿಕ ಶಿಕ್ಷಣದ ನಡುವೆ ಸಮತೋಲನ ಕಾಯ್ದುಕೊಳ್ಳಬೇಕು ಎಂದೇ ಬಯಸಿದ್ದಾರೆ. ಪಾಶ್ಚಾತ್ಯ ಮಾದರಿಯಲ್ಲಿ ಕುಡಿತ, ಪ್ರತಿಷ್ಠಾ ಪೂಜನ ಸಂಸ್ಕೃತಿಯನ್ನು ಬೆಳೆಸಿಕೊಳ್ಳುತ್ತಾ ನೈತಿಕ ಮೌಲ್ಯಗಳನ್ನು ಕಳೆದುಕೊಂಡು ಬದುಕಬಾರದು ಎಂದು ಆಶಿಸುತ್ತಾರೆ.
ಭಯೋತ್ಪಾದನೆ ವಿರುದ್ಧ ಬರೀ ಬಾಯಿ ಮಾತಿನ ಹೇಳಿಕೆಗಳು ಕೆಲಸಕ್ಕೆ ಬಾರದು. ಅವು ಕೃತಿಯಲ್ಲೂ ಕಾಣಬೇಕು.
ಟಿಎಸ್‌ಐ |