ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ದೇಸಿ ದನಿ
 
 

ಕೇರಳ: ಹರತಾಳ್

ಎಂದಿಗೂ ಮುಗಿಯದ 'ಮುಷ್ಕರ'!

ಕೋಟಿಗಟ್ಟಲೆ ರೂಪಾಯಿ ನಷ್ಟದ ಪ್ರತಿಭಟನಾ ವೈಖರಿ ಜನಸಾಮಾನ್ಯರಿಗೆ ಹೊರೆ

ಮುಷ್ಕರ ಕೇರಳಿಗರ ನಿತ್ಯ ಬದುಕಿನ ನಿರಂತರ ಪ್ರಕ್ರಿಯೆ. ಒಂದು ರೀತಿಯಲ್ಲಿ ಕೇರಳಿಗರ ಪಾಲಿಗೆ ಎಂದೆಂದೂ ಮುಗಿಯದ 'ಹಬ್ಬ'! ಏಕೆಂದರೆ, ಕಳೆದ ವರ್ಷ ಕೇರಳಿಗರು ಸ್ಥಳೀಯ ಮತ್ತು ರಾಜ್ಯ ಮಟ್ಟದಲ್ಲಿ ಒಟ್ಟು 144 ಬಾರಿ ಮುಷ್ಕರ ಹೂಡಿ ಸ್ವರ್ಗ ಸುಖ ಅನುಭವಿಸಿದ್ದಾರೆ! ಇದರಲ್ಲಿ ಆರು ರಾಜ್ಯವ್ಯಾಪ್ತಿ ಹಮ್ಮಿಕೊಂಡ ಮುಷ್ಕರಗಳು. 2006ರ ಸರಾಸರಿ 9:212! 2005ರಲ್ಲಿ ಸರಾಸರಿ 5:115! ಈ ವರ್ಷ ಕೇರಳ ಈ ಎಲ್ಲಾ ಲೆಕ್ಕಾಚಾರಗಳನ್ನು ಮೀರಿ ಪ್ರಥಮ ಸ್ಥಾನದಲ್ಲಿ ನಿಲುವುದಂತೂ ಖಚಿತ ಎಂಬುದನ್ನು ಹೊಸ ವರ್ಷದ ಮೊದಲ ಒಂದೂವರೆ ತಿಂಗಳಲ್ಲೇ ಒಂದು ಮುಷ್ಕರ ನಡೆಸಿ ತೋರಿಸಿಕೊಟ್ಟಿದ್ದಾರೆ. ಅದೂ ವರ್ತಕರೇ ಮುಷ್ಕರಕ್ಕೆ ಮುಂದಾಗಿದ್ದು ವಿಶೇಷ. ಕಳೆದ ವಾರ ವಿದೇಶಿ ಮತ್ತು ದೇಶಿ ಚಿಲ್ಲರೆ ಮಾರಾಟ ಏಕಸ್ವಾಮ್ಯದ ವಿರುದ್ಧ ವರ್ತಕರ ಸಂಘಟನೆಗಳು ರಾಜ್ಯವ್ಯಾಪ್ತಿ ಮುಷ್ಕರ ನಡೆಸಿದವು. ಜನರ ನಿತ್ಯ ಬದುಕಿನ ಅಗತ್ಯಗಳಾದ ಹಾಲು, ಔಷಧಿ, ಆಸ್ಪತ್ರೆಗಳು ಕೂಡ ಇದಕ್ಕೆ ಹೊರತಾಗಿರಲಿಲ್ಲ. ಆದರೆ ಒಂದು ದಿನದ ವರ್ತಕರ ಮುಷ್ಕರದ ಖರ್ಚು ಬರೋಬ್ಬರಿ 700 ಕೋಟಿ ರೂಪಾಯಿ! ಬರೀ ಮುಷ್ಕರಗಳಿಂದಾಗಿಯೇ ಕೇರಳ ರಾಜ್ಯ ಅನುಭವಿಸುವ ನಷ್ಟ ಸುಮಾರು 1500 ಕೋಟಿ ರೂಪಾಯಿ ಅಂದ್ರೆ ನಂಬ್ತೀರಾ? ಹೌದು! ನಂಬಲೇಬೇಕು. ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮ ರಾಜ್ಯವಾಪ್ತಿ ಕೈಗೊಳ್ಳುವ ಏಕೈಕ ಮುಷ್ಕರ ಉಂಟುಮಾಡುವ ನಷ್ಟ ಎರಡು ಕೋಟಿ ರೂಪಾಯಿ! ಸಣ್ಣ-ಪುಟ್ಟ ಅಂಗಡಿಗಳು ಕೂಡ ಒಂದು ದಿನದ ಮುಷ್ಕರಕ್ಕೆ 200 ರೂಪಾಯಿ ನಷ್ಟ ಅನುಭವಿಸುತ್ತವೆ. ಹಲವಾರು ಮಂದಿ ತಮ್ಮ ಈ ನಿತ್ಯ ಚಟುವಟಿಕೆಗಳಿಗೆ ಸಾಲವನ್ನೇ ಅವಲಂಬಿಸಿದ್ದಾರೆ. ಈ ಮುಷ್ಕರದಿಂದಾಗಿ ದಿನಗೂಲಿ ನೌಕರರು ಮತ್ತು ದೈಹಿಕ ದುಡಿಮೆಗಾರರು ಪರದಾಡುವಂತಾಗಿದೆ. ಅತ್ತ ಮುಷ್ಕರದಲ್ಲೂ ಪಾಲ್ಲೊಳ್ಳುತ್ತಿಲ್ಲ, ಇತ್ತ ಕೆಲಸವೂ ಇಲ್ಲ, ಪ್ರಯಾಣಿಸುವುದು ಕೂಡ ದುಸ್ಸಾಧ್ಯವಾಗಿಬಿಟ್ಟಿದೆ. ಹಾಗಾಗಿ ಮನೆಯಿಂದ ಹೊರಡುವ ಮುನ್ನವೇ ಅಂದು ಎಲ್ಲೆಲ್ಲಿ ಯಾವ್ಯಾವ ಮುಷ್ಕರಗಳಿಗೆ ಎಂದು ಒಮ್ಮೆ ಪತ್ರಿಕೆಗಳ ಕಣ್ಣಾಡಿಸಿ ಮನೆಯಿಂದ ಹೊರ ಕಾಲಿಡುವುದೇ ಲೇಸು. ಈ ಮುಷ್ಕರದಿಂದಾಗಿ ಶೈಕ್ಷಣಿಕ ದಿನಗಳು ಕೂಡ ವ್ಯರ್ಥವಾಗುತ್ತಿವೆ, ಮಾತ್ರವಲ್ಲ ಕೆಲವೊಮ್ಮೆ ಮುಖ್ಯ ಪರೀಕ್ಷೆಗಳು ಕೂಡ ಅಸ್ತವ್ಯಸ್ತವಾಗುತ್ತಿವೆ. ಹಿಂದಿನ 8-9 ವರ್ಷಗಳವರೆಗೆ ಬಂದ್ ಮಾತ್ರ ಇದ್ದವು. ಅದು ಮುಷ್ಕರದ ಮತ್ತೊಂದು ರೂಪ. 1960ರಲ್ಲಿ ಕೇರಳದಲ್ಲಿ ರಾಷ್ಟ್ರಪತಿ ಆಳ್ವಿಕೆಯಿದ್ದಾಗ ಕಾಂಗ್ರೆಸ್ ಮತ್ತು ಕಮ್ಯೂನಿಸ್ಟ್ ಪಕ್ಷಗಳು ಅಕ್ಕಿ ಕೊರತೆ ವಿರುದ್ಧ ಒಂದೇ ದಿನ ರಾಜ್ಯವ್ಯಾಪಿ ಬಂದ್ ನಡೆಸಿದ್ದವು. ಸುಮಾರು 9 ವರ್ಷಗಳ ಹಿಂದೆ ಕೇರಳ ಹೈಕೋರ್ಟ್ 'ಬಂದ್ ಕಾನೂನುಬಾಹಿರ ಮತ್ತು ನಾಗರಿಕ ಸಾಂವೈಧಾನಿಕ ಹಕ್ಕುಗಳ ಉಲ್ಲಂಘನೆ' ಎಂದು ಐತಿಹಾಸಿಕ ತೀರ್ಪು ನೀಡಿತು. ಆಗ ಭರತ್‌ಕುಮಾರ್ ಎಂಬುವವರು ರಾಜ್ಯದ ವಿರುದ್ಧ ಸಾರ್ವಜನಿಕ ಹಿತಾಸಕ್ತಿ ಅರ್ಜಿ(ಪಿಐಎಲ್)ಸಲ್ಲಿಸಿದ್ದರು. ಪ್ರಸ್ತುತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಯಾಗಿರುವ ಕೆ.ಜಿ. ಬಾಲಕೃಷ್ಣನ್ ಈ ನಿರ್ಣಾಯಕ ತೀರ್ಪನ್ನು ನೀಡಿದ್ದರು. ಆದರೆ ಚಳವಳಿಗಾರರು ಹಿಂದಿಗಿಂತಲೂ ಹೆಚ್ಚು ಬುದ್ಧಿವಂತರು. ಹೊಸ ಬಾಟಲಿನಲ್ಲಿ ಹಳೆಯ ವೈನು ತುಂಬಿಸುವ ಚಾಣಾಕ್ಷತನ ತೋರಿ ಬಂದ್ ಬದಲಿಗೆ ಹರತಾಳ್ (ಮುಷ್ಕರ) ಎಂದು ಕರೆಯುತ್ತಿದ್ದಾರೆ. ಈಗ ಮುಷ್ಕರಕ್ಕೆ ಕರೆ ನೀಡಿರುವ ಸಂಸ್ಥೆಗಳು ಮತ್ತು ನಾಯಕರ ವಿರುದ್ಧ ಕೋರ್ಟ್ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಕೋರಿ ಕೊಚ್ಚಿ ಮೂಲದ ಸ್ವಯಂ ಸೇವಾ ಸಂಸ್ಥೆಯೊಂದು ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. 2001ರಲ್ಲಿ ವಕೀಲ ಜಾರ್ಜ್ ಕುರಿಯನ್ ಕೇರಳ ಹೈಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಮುಷ್ಕರ ರದ್ದು ಮಾಡುವಂತೆ ಕೋರಿದ್ದರು. ಆ ಕುರಿತು 2004ರ ಮೇ 28ರಂದು ತೀರ್ಪು ನೀಡಿದ ಹೈಕೋರ್ಟ್ ಮುಷ್ಕರವನ್ನು ರದ್ದು ಮಾಡುವುದು ಸಾಧ್ಯವಿಲ್ಲ ಎಂದು ತಿಳಿಸಿತು. ಆದರೆ ರಾಜಕೀಯ ಪಕ್ಷಗಳು ಮುಷ್ಕರ ಎಂಬುದು ಜನರ ವಿರೋಧವನ್ನು ವ್ಯಕ್ತಪಡಿಸಲು ಇರುವ ಪ್ರಜಾತಾಂತ್ರಿಕ ಹಕ್ಕು ಎಂದು ವಾದಿಸುತ್ತಿವೆ. ರಾಜಕಾರಣಿಗಳು ಮತ್ತು ಆಡಳಿತಾಧಿಕಾರಿಗಳು ಈ ಹಣಕಾಸು, ಸಮಯ ಮತ್ತು ಮಾನವ ಶಕ್ತಿಯ ನಷ್ಟವನ್ನು ತಡೆಯುವ ನಿಟ್ಟಿನಲ್ಲಿ ಬೇರೇನಾದರೂ ಮಾರ್ಗೋಪಾಯಗಳನ್ನು ಕಂಡುಕೊಳ್ಳಲೇಬೇಕಿದೆ ಎಂಬುದು ಮುಷ್ಕರಗಳಿಂದ ಬೇಸತ್ತ ಜನಸಾಮಾನ್ಯರ ಕೋರಿಕೆ!

ಟಿಎಸ್‌ಐ

ಟಿ. ಸತೀಶನ್

ಹರಿಯಾಣ: ಅತ್ಯಾಚಾರ

ರಾಜ್ಯಪಾಲರ ನಿದ್ದೆಗೆಡಿಸಿದ ಪ್ರಕರಣ

ಅತ್ಯಾಚಾರ ಆರೋಪದ ಸುಳಿಯಲ್ಲಿ ರಾಜಭವನದ ಭದ್ರತಾ ಸಿಬ್ಬಂದಿ

ಹರಿಯಾಣದ ರಾಜ್ಯಪಾಲ ಎ.ಆರ್. ಕಿದ್ವಾಯಿ ಬಹಳ ಖಿನ್ನರಾದಂತೆ ಕಾಣುತ್ತಿದ್ದಾರೆ. ಕಾರಣ? ಅತ್ಯಾಚಾರ ಪ್ರಕರಣವೊಂದರಲ್ಲಿ ರಾಜಭವನದ ಹೆಸರೂ ಕೇಳಿ ಬರುತ್ತಿದೆ! ಫೆ.20ರ ಮಧ್ಯರಾತ್ರಿ ರಾಜಭವನದ ಇಬ್ಬರು ಭದ್ರತಾ ಸಿಬ್ಬಂದಿ ಹಾಗೂ ಮತ್ತೊಬ್ಬರು ತನ್ನನ್ನು ಅತ್ಯಾಚಾರ ಮಾಡಿದ್ದಾರೆ ಎಂದು ರಾಜಭವನದಲ್ಲಿ ಅಡುಗೆ ಕೆಲಸ ಮಾಡುತ್ತಿದ್ದ 40 ವರ್ಷ ಮಹಿಳೆ ಆರೋಪಿಸಿದ್ದಾರೆ. ಭದ್ರತಾ ಸಿಬ್ಬಂದಿಗಳಾದ ದಿನೇಶ್ ಮತ್ತು ವಿಜೇಂದ್ರ ಇಬ್ಬರನ್ನೂ ಪೊಲೀಸರು ಬಂಧಿಸಿದ್ದು, ಅವರ ಸಹಚರ ರೊಹೆಟ್ ನಿವಾಸಿ ಸಿತು ಎಂಬಾತ ತಲೆಮರೆಸಿಕೊಂಡಿದ್ದಾನೆ. ಮಹಿಳೆಯ ವೈದ್ಯಕೀಯ ಪರೀಕ್ಷೆಯ ಬಳಿಕ ಅತ್ಯಾಚಾರ ನಡೆದಿರುವುದು ದೃಢಪಟ್ಟಿದೆ ಎಂದು 3ನೇ ವಲಯದ ಹಿರಿಯ ಪೊಲೀಸ್ ಅಧಿಕಾರಿ ರಾಮ್ ಗೋಪಾಲ್ ತಿಳಿಸಿದ್ದಾರೆ. ಆರೋಪಿತ ಇಬ್ಬರು ಭದ್ರತಾ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ರಾಜಭವನದ ಕೇಟರಿಂಗ್ ಘಟಕದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ತಾನು, ಸಹೋದ್ಯೋಗಿಯೊಬ್ಬರ ಜೊತೆ ಆಟೋದಲ್ಲಿ ಮನೆಗೆ ತೆರಳುತ್ತಿದ್ದಾಗ, ಪಾನಮತ್ತನಾಗಿದ್ದ ಸಿತು ರಾಜಭವನದ ಸಮೀಪದಲ್ಲೇ ಆಟೋವನ್ನು ಅಡ್ಡಹಾಕಿದ. ನಂತರ ಅವರನ್ನು ನಿಂದಿಸಿದ ಆತ, ದೈಹಿಕ ಹಲ್ಲೆ ನಡೆಸಿದ ಎಂದು ದೂರಿನಲ್ಲಿ ಮಹಿಳೆ ತಿಳಿಸಿದ್ದಾರೆ. ಚಾಲಕ ಅಲ್ಲಿಂದ ಓಡಿಹೋದ ನಂತರ ತನ್ನ ಸಹಚರರಾದ ಭದ್ರತಾ ಸಿಬ್ಬಂದಿಯನ್ನು ಕೂಗಿ ಕರೆದ ಸಿತು, ಅವರೊಂದಿಗೆ ಸೇರಿ ತನ್ನನ್ನು ಹರಿಯಾಣ ಸಶಸ್ತ್ರ ಪೊಲೀಸ್ ಪಡೆಯ ತಮ್ಮ ವಸತಿ ಸಮುಚ್ಛಯಕ್ಕೆ ಎಳೆದೊಯ್ದ ಎಂದು ಅವರು ತಿಳಿಸಿದ್ದಾರೆ. ಅಲ್ಲಿ ನನ್ನನ್ನು ಕೋಣೆಯೊಂದರಲ್ಲಿ ಕೂಡಿಹಾಕಿ ಸಿತು ಮತ್ತು ದಿನೇಶ್ ನಿರಂತರವಾಗಿ ಅತ್ಯಾಚಾರ ಎಸಗಿದರು. ನಂತರ ನಾನು ಅಲ್ಲಿಂದ ತಪ್ಪಿಸಿಕೊಂಡು ವಿಜೇಂದ್ರನ ಬಳಿ ನನ್ನನ್ನು ಬಿಟ್ಟುಬಿಡುವಂತೆ ಕೋರಿದೆ ಎಂದು ಆ ಮಹಿಳೆ ದೂರಿನಲ್ಲಿ ಹೇಳಿದ್ದಾರೆ. ವಿಜೇಂದ್ರ ಮಹಿಳೆಯನ್ನು ಮೊಹಾಲಿಯ ಆರನೇ ಹಂತದ ಆಕೆಯ ಮನೆಗೆ ಬಿಟ್ಟುಬಂದ. ಟಿಎಸ್‌ಐ ಜೊತೆ ಮಾತನಾಡಿರುವ ರಾಜಭವನದ ಕೇಟರಿಂಗ್ ಘಟಕ ಪ್ರಧಾನ ವ್ಯವಸ್ಥಾಪಕ ಆರ್.ಕೆ. ಶರ್ಮ, ತಾನು ಘಟನೆಯ ಬಗ್ಗೆ ಕೇಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದೆ. ತಡರಾತ್ರಿಯಾದರೂ ಆಗಲೇ ಪೊಲೀಸರಿಗೆ ಮಾಹಿತಿ ನೀಡಿದ್ದೇನೆಂದು ಹೇಳುತ್ತಾರೆ. ಸ್ಥಳೀಯ ಪೊಲೀಸರು ಈಗಾಗಲೇ ಪ್ರಕರಣದ ಹಿನ್ನೆಲೆ ತಿಳಿಯಲು ಪ್ರಯತ್ನ ಆರಂಭಿಸಿದ್ದು, ಮಹಿಳೆ ಭದ್ರತಾ ಸಿಬ್ಬಂದಿ ಅಪರಿಚಿರೇನಲ್ಲ. ಹೀಗಿರುವಾಗ ಯಾವುದೋ ಸೇಡಿನ ಕಾರಣದಿಂದ ಈ ಕೃತ್ಯ ಎಸಗಿರಬಹುದೆಂದು ಅವರು ಶಂಕಿಸಿದ್ದಾರೆ.

ಟಿಎಸ್‌ಐ

ರಾಜೀಂದರ್ ಎಸ್. ಟಗ್ಗರ್

ಒರಿಸ್ಸಾ: ಕೃಷಿ ಪರದಾಟ

ರೈತರಿಗೆ ಉರುಳಾದ ತರಕಾರಿ ಬೆಲೆ

ದಾಸ್ತಾನು ಸೌಲಭ್ಯಗಳಿಲ್ಲದೆ ಕನಿಷ್ಠ ಬೆಲೆಗೆ ಮಾರಾಟ

ವಿವಿಧ ತರಕಾರಿ ಬೆಲೆಗಳಲ್ಲಿ ಆಗಿರುವ ತೀವ್ರ ಕುಸಿತ ಒರಿಸ್ಸಾದ ಬೆಳೆಗಾರರನ್ನು ಸಂಕಷ್ಟಕ್ಕೆ ನೂಕಿದೆ. ಬೆಲೆ ಕುಸಿತ ಅನ್ನದಾತರ ಪಾಲಿಗೆ ಉರುಳಾಗಿ ಪರಿಣಮಿಸಿದ್ದು, ರಾಜ್ಯದ ಪಶ್ಚಿಮ ಭಾಗದಲ್ಲಿ ಮೂವರು ತರಕಾರಿ ಬೆಳೆಗಾರರು ಈಗಾಗಲೇ ಆತ್ಮಹತ್ಯೆಗೆ ಶರಣಾಗಿದ್ದಾರೆ. ದಕ್ಷಿಣ ಒರಿಸ್ಸಾದ ಜಿಲ್ಲೆಗಳು ತರಕಾರಿ ಬೆಳೆಯುವ ಪ್ರಮುಖ ಭಾಗಗಳಾಗಿದ್ದು, ಸಾಲ ಮಾಡಿರುವ ರೈತರು ಬೆಲೆ ಕುಸಿತದಿಂದಾಗಿ ಸಾಲ ತೀರಿಸಲಾಗದೆ ಪರದಾಡುತ್ತಿದ್ದಾರೆ. ರಾಜ್ಯದ ಬರ್ಹಾಪುರ ಮಾರುಕಟ್ಟೆಯಲ್ಲಿ ಟೊಮೆಟೋ, ಹೂಕೋಸು ಮತ್ತು ಎಲೆಕೋಸುಗಳು ಪ್ರತಿ ಕೆ.ಜಿ.ಗೆ 2-3 ರೂಪಾಯಿಯಂತೆ ಮಾರಾಟವಾಗುತ್ತವೆ. ಬದನೆಕಾಯಿ ಮತ್ತು ಈರುಳ್ಳಿಗಳ ಬೆಲೆಯೂ ಕುಸಿದಿದೆ. ರಾಜ್ಯದ ಇತರ ಜಿಲ್ಲೆಗಳಾದ ಕೋರಪುಟ್, ನವರಂಗಪುರ, ಕಂದಾಮಾಲ್ ಮತ್ತು ಗಜಪತಿಗಳಲ್ಲೂ ರೈತರ ಸ್ಥಿತಿ ಭಿನ್ನವಾಗಿಲ್ಲ. ರೈತರು ಬೆಳೆದ ಬೆಳೆಗಳನ್ನು ಸಂರಕ್ಷಿಸಿಡಲು ಶೈತ್ಯಾಗಾರ ಮುಂತಾದ ಅಗತ್ಯ ಸೌಲಭ್ಯಗಳಿಲ್ಲದ ಕಾರಣ ಕೊಳೆತು ಹೋಗುವ ಭೀತಿಯಿಂದ ತೀರಾ ನಿಕೃಷ್ಟ ಬೆಲೆಗೆ ಮಾರಬೇಕಾದ ಅನಿವಾರ್ಯತೆ ಇದೆ. ಈ ಜಿಲ್ಲೆಗಳಲ್ಲಿ ತರಕಾರಿಗಳನ್ನು ದಾಸ್ತಾನು ಮಾಡಲು ಶೈತ್ಯಾಗಾರದಂಥ ಸಂಗ್ರಹಯೋಗ್ಯ ಸೌಲಭ್ಯಗಳಿಲ್ಲ. ಆದ್ದರಿಂದ ನಾವು ಬೆಳೆದ ಬೆಳೆಗಳನ್ನು ಅತಿ ಕಡಿಮೆ ಬೆಲೆಗೆ ಮಾರಬೇಕಾಗುತ್ತದೆ ಎನ್ನುತ್ತಾರೆ ಗಂಜಾಮ್ ಜಿಲ್ಲೆಯ ಹಿಂಜಿಲಿ ವಿಭಾಗದ ಬುರಪಾದದ ನಬಗಣ ಬಾರೀಕಾ. ತಮ್ಮ ಎರಡು ಎಕರೆ ಜಮೀನಿನಲ್ಲಿ ಭಾರೀ ನಿರೀಕ್ಷೆಯಿಂದ ಉತ್ತಮ ಟೊಮೆಟೋ ಫಸಲು ಬೆಳೆದಿರುವ ಅವರು, ಈಗ ಬೆಲೆ ಕುಸಿತದಿಂದಾಗಿ ಬೆಳೆಗೆ ತಲುಲಿದ ವೆಚ್ಚದ ಅಸಲು ಕೂಡ ಬರುವುದಿಲ್ಲ ಎಂಬ ಆತಂಕದಲ್ಲಿದ್ದಾರೆ. ತರಕಾರಿ ಬೆಲೆ ಕುಸಿತ ಇನ್ನಷ್ಟು ದಿನ ಹೀಗೇ ಮುಂದುವರಿದರೆ, ನಾನು ಹಾಕಿರುವ ಹಣ ಕೂಡ ವಾಪಸ್ ಬರುವುದಿಲ್ಲ. ಸಾಲ ಮಾಡಿ ಹಾಕಿದ ಹಣವನ್ನು ಹೇಗೆ ತೀರಿಸುವುದು ಎಂದು ತಮ್ಮ ಸಂಕಷ್ಟ ಹೇಳಿಕೊಳ್ಳುತ್ತಾರೆ ಬಾರೀಕಾ. ಕಳೆದ ಕೆಲವು ವರ್ಷಗಳಿಂದ ಬಾರೀಕಾ, ತಾವು ಬೆಳೆದ ತರಕಾರಿ ಮಾರಾಟಕ್ಕೆ ಬರ್ಹಾಂಪುರದ ಮಾರುಕಟ್ಟೆಗೆ ಬರುತ್ತಿದ್ದಾರೆ. ಕುಕುಡ್‌ಖಾಂಡಿಯ ಗಣತೈ ಪ್ರಧಾನ್, ದಿಗಪಹಂದಿಯ ಪರಸು ಜೇನಾ ಅವರದ್ದೂ ಇದೇ ಗೋಳು. ಪ್ರಧಾನ್ ತಮ್ಮ ಒಂದು ಎಕರೆ ಜಮೀನಿನಲ್ಲಿ ಹೂಕೋಸು ಬೆಳೆದಿದ್ದರೆ, ಜೇನಾ ಅರ್ಧ ಎಕರೆಯಲ್ಲಿ ಎಲೆಕೋಸು ಬೆಳೆದಿದ್ದಾರೆ. ಇಬ್ಬರೂ ಸಹಕಾರಿ ಬ್ಯಾಂಕಿನಿಂದ ಶೇ.7 ಬಡ್ಡಿ ದರದಲ್ಲಿ ಸಾಲ ಪಡೆದಿದ್ದಾರೆ. ತಾವು ಬೆಳೆದ ಬೆಳೆಗೆ ಅಗತ್ಯ ಬೆಲೆ ದೊರೆಯದೆ, ಇತ್ತ ಸಾಲ ತೀರಿಸಲೂ ಪರದಾಡುವ ಪರಿಸ್ಥಿತಿ ಅವರದು. ರಾಜ್ಯದ ಇತರ ದಕ್ಷಿಣ ರಾಜ್ಯಗಳಾದ ಗಂಜಾಮ್, ಗಜಪತಿ, ಕಂದಾಮಾಲ್, ರಾಯಗಢ, ಕೋರಪುಟ್, ನವರಂಗಪುರ, ಮಾಲ್ಕನಗರಿ, ಕಳಾಹಂದಿ ಮತ್ತು ನೌಪಾಡ ಜಿಲ್ಲೆಗಳಲ್ಲಿ ಸುಮಾರು 15 ಲಕ್ಷ ಹೆಕ್ಟೇರ್ ಜಮೀನಿನಲ್ಲಿ ಹೂಕೋಸು, ಎಲೆಕೋಸು, ಟೊಮೆಟೋ, ಬದನೆಕಾಯಿ ಮತ್ತು ಮೆಣಸಿನಕಾಯಿಗಳನ್ನು ಬೆಳೆಯಲಾಗುತ್ತಿದೆ. ಈ ಪ್ರದೇಶದಲ್ಲಿ ಅನಿರೀಕ್ಷಿತ ಇಳುವರಿ ಬಂದಿರುವುದರಿಂದ ಈ ಬಾರಿ ದಿಢೀರ್ ಬೆಲೆ ಕುಸಿತ ಉಂಟಾಗಿದೆ. ಹಾಗಾಗಿ ರೈತರು ತಮ್ಮ ಫಸಲನ್ನು ತೀರಾ ಕಡಿಮೆ ಬೆಲೆಗೆ ಮಾರಬೇಕಾದ ಅನಿವಾರ್‍ಯತೆ ಎದುರಾಗಿದೆ ಎನ್ನುತ್ತಾರೆ ನಿವೃತ್ತ ಕೃಷಿ ಅಧಿಕಾರಿ ಸಿಮಾಂಚಲ ಪಾಟ್ನಾಯಕ್. ಗಂಜಾಮ್ ಜಿಲ್ಲೆಯಲ್ಲಿ ರಾಷ್ಟ್ರೀಯ ತೋಟಗಾರಿಕಾ ಮಿಷನ್ ಯೋಜನೆ ಜಾರಿಗೆ ಬಂದಿದ್ದರೂ ಅಲ್ಲಿ ಶೈತ್ಯಾಗಾರ ಸೌಲಭ್ಯ ಇಲ್ಲ. ಸಹಕಾರಿ ವಲಯದಿಂದ ಸ್ಥಾಪಿಸಿದ್ದ ಮತ್ತೊಂದು ಶೈತ್ಯಾಗಾರ ಕೂಡ ಈಗ ಅನುಪಯುಕ್ತವಾಗಿದೆ. ರಾಷ್ಟ್ರೀಯ ತೋಟಗಾರಿಕಾ ಮಂಡಳಿ ಮತ್ತು ನಬಾರ್ಡ್ (ಕೃಷಿ ಮತ್ತು ಗ್ರಾಮೀಣಾಭಿವೃದ್ಧಿಗಾಗಿ ರಾಷ್ಟ್ರೀಯ ಬ್ಯಾಂಕ್) ಬಹುಪಯೋಗಿ ಶೈತ್ಯಾಗಾರ ಸ್ಥಾಪನೆಗೆ ಖಾಸಗಿ ಸಂಸ್ಥೆಗಳಿಗೆ ಪ್ರೋತ್ಸಾಹ ನೀಡುತ್ತಿವೆ. ಆದರೆ ಯಾರೂ ಕೂಡ ಇದನ್ನು ಅಭಿವೃದ್ಧಿಗೊಳಿಸಲು ಮುಂದೆ ಬರುತ್ತಿಲ್ಲ ಎನ್ನುತ್ತಾರೆ ತೋಟಗಾರಿಕಾ ಇಲಾಖೆ ಉಪ ನಿರ್ದೇಶಕ ಕೈಲಾಸ್ ಚಂದ್ರ ಪಣಿಗ್ರಹಿ. ಒಟ್ಟಿನಲ್ಲಿ ಒರಿಸ್ಸಾದ ನೇಗಿಲಯೋಗಿಯ ಕತ್ತು ಕೊಯ್ಯುವ ಸರದಿ ಈಗ ತರಕಾರಿ ಬೆಳೆಗಳದ್ದು!

ಟಿಎಸ್‌ಐ

ಹೃಷಿಕೇಶ್ ಮೊಹಂತಿ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .