ಜಗತ್ತಿನಲ್ಲಿ ರೈಲ್ವೆ ಆರಂಭಗೊಂಡ ಸಂದರ್ಭದಲ್ಲಿನ ಪ್ರಯಾಣದ ಅನುಭವನ್ನು ಒಳಗೊಂಡಿರುವ ಈ ಪತ್ರ ಆಗ, ರೈಲು ಯಾವ ರೀತಿಯಲ್ಲಿ ಕಾರ್ಯನಿರ್ವಹಿಸಿತ್ತು ಎಂಬುದನ್ನು ಕಣ್ಣಿಗೆ ಕಟ್ಟುವಂತೆ ಹೇಳಿದೆ. ಸಾಮಾನ್ಯ ಪ್ರಯಾಣಿಕರ ಬಂಡಿಯಂತೆಯೇ ಆಗ ಕುದುರೆಯಿಂದ ಎಳೆಸುವ ರೈಲು ಬಂಡಿ ಮತ್ತು ಸಾಮಾನು-ಸರಂಜಾಮು ಸಾಗಿಸುವ ವ್ಯಾಗನ್ ಬಂಡಿಗಳಲ್ಲೂ ಸಾರ್ವಜನಿಕರ ಪಯಣಕ್ಕೆ ಅವಕಾಶ ಕಲ್ಪಿಸಲಾಗುತ್ತಿತ್ತು. ಅತಿ ಹಳೆಯ ಬರ್ಮಿಂಗ್‌ಹ್ಯಾಂ- ಸ್ಟಾಫರ್ಡ್ ರೈಲು ಇಂದೂ ಸಂಚರಿಸುತ್ತಿದೆ. ಆದರೆ ಈಗ ಕುದುರೆಯಿಂದ ಎಳೆಸುವ ಬಂಡಿ ಇಲ್ಲ ಎಂಬುದು ಬೇರೆ ಪ್ರಶ್ನೆ. ಬ್ರಿಟಿಷ್ ಯೋಧನಾಗಿದ್ದ ಚಾರ್ಲ್ಸ್ ಗ್ರೀವ್ಸ್ ತಮ್ಮ ಸಹೋದರಿಗೆ ಬರೆದಿರುವ ಈ ಪತ್ರದಲ್ಲಿ ಮಗುವಿನಂತಹ ಅವರ ಉತ್ಸಾಹ ಎದ್ದುಕಾಣುತ್ತದೆ. ಹಾಗೆಯೇ ಎರಡು ಶತಮಾನಗಳಲ್ಲಿ ರೈಲ್ವೆ ತಾಂತ್ರಿಕವಾಗಿ ಯಾವ ಎತ್ತರಕ್ಕೆ ಸಾಗಿದೆ ಎಂಬುದನ್ನೂ ಪತ್ರ ನಿಮ್ಮ ಮುಂದಿಡುತ್ತದೆ.
ಸ್ಟಾಫರ್ಡ್. ಜುಲೈ 17, 1837
ಪ್ರೀತಿಯ ಬೆಸ್ಸಿ,
ವೋರ್‍ಸೆಸ್ಟರ್‌ನಿಂದ ಬರ್ಮಿಂಗ್‌ಹ್ಯಾಮ್‌ಗೆ ನೇಮಕವಾದ ನಾನು ಅಲ್ಲಿಗೆ ರೈಲ್ವೆಯಿಂದ ಬಾಡಿಗೆಗೆ ಪಡೆದ ರೈಲು ಗಾಡಿಯಲ್ಲಿ ಪ್ರಯಾಣ ಆರಂಭಿಸಿದೆ. ಈ ಮಾರ್ಗದಲ್ಲಿನ ರೈಲ್ವೆ ಯಾನ ಎಷ್ಟೊಂದು ಹಿತಕರ ಎಂದರೆ, ಆ ಕುರಿತು ವಿವರಿಸಲು ನನಗೆ ಪದಗಳೇ ಸಿಗುತ್ತಿಲ್ಲ. ಆ ಮನಮೋಹಕ ರೈಲಿನ ಸ್ಟೀಮ್ ಇಂಜಿನ್, ಅದರ ಹಿಂಭಾಗದಲ್ಲಿದ್ದ ಕಲ್ಲಿದ್ದಲ ಜಾಗ... ಓಹ್! ಅವುಗಳನ್ನು ವರ್ಣಿಸುವುದು ಖಂಡಿತಾ ಸುಲಭದ ಮಾತಲ್ಲ. ಒಂದು ಗಜದ ಅಂತರದಲ್ಲಿ ಒಂದಕ್ಕೊಂದು ಜೋಡಿಸಿರುವ ಉಗಿ ಬಂಡಿಗಳ ಸಾಲುಗಳ ದೃಶ್ಯವೇ ಸೊಗಸಾಗಿವೆ. ನಾನು ಕುಳಿತ ಸ್ಥಳದದಲ್ಲಿ ಆರು ಆಸನಗಳಿದ್ದವು. 3 ಆಸನಗಳು ಎಂಜಿನ್‌ಗೆ ಮುಖಮಾಡಿದ್ದರೆ, ಉಳಿದ ಮೂರು ಆಸನಗಳು ವಿರುದ್ಧ ದಿಕ್ಕಿನಲ್ಲಿದ್ದವು. ಆರು ಅಡಿ ಅಗಲ ಮತ್ತು ಐದು ಅಡಿ ಉದ್ದವಿದ್ದ ಆಸನಗಳ ಪರಸ್ಪರ ಆಚೀಚೆಯಾಗಿ ಜೋಡಣೆಯಾಗಿದ್ದವು.
ಪ್ರತಿಯೊಬ್ಬ ಪ್ರಯಾಣಿಕನಿಗೂ ಒಂದು ರೀತಿಯ ಆರಾಮ ಕುರ್ಚಿಯಂತೆ ಕುಳಿತುಕೊಳ್ಳುವ ವ್ಯವಸ್ಥೆ ರೈಲಿನಲ್ಲಿತ್ತು. ಹೊರಗಿನ ಭಾಗಕ್ಕೆ ಹತ್ತಿರವಾಗಿದ್ದ ಎರಡು ಆಸನಗಳಲ್ಲಿ ಪ್ರತಿ ಪ್ರಯಾಣಿಕರ ನಡುವೆಯೂ ಕೈ ಇಟ್ಟುಕೊಳ್ಳಲು ವ್ಯವಸ್ಥೆಯಿದ್ದು, ದಿಂಬಿನ ಮೆತ್ತೆಯಂತೆ ಅನುಕೂಲಕರವಾಗಿದ್ದವು.
ಸಾಮಾನ್ಯ ಬೋಗಿಯಲ್ಲಿರುವಂತೆ ಇಲ್ಲಿಯೂ ಎರಡೂ ಕಡೆ ಕಿಟಕಿ ಹಾಗೂ ಬಾಗಿಲುಗಳಿದ್ದು, ಓಡಾಟಕ್ಕೆ ಅನುಕೂಲವಾಗುವಂತೆ ತುಸು ವಿಶಾಲವಾಗೇ ಇದ್ದವು. ರೈಲಿನ ಒಳಾಂಗಣ ವಿನ್ಯಾಸ ಸುಂದರವಾಗಿ ನಿರ್ಮಾಣಗೊಂಡಿದ್ದರೂ, ನನಗೆ ಕಿಟಕಿಗಳು ಇನ್ನಷ್ಟು ಇದ್ದಿದ್ದರೆ ಪ್ರಯಾಣಿಕರಿಗೆ ಅನುಕೂಲಕರವಾಗಿರುತ್ತಿತ್ತು ಎನಿಸಿತು. ಇನ್ನು ರೈಲಿನ ವೇಗದಲ್ಲೂ ಯಾವುದೇ ಹರಿಬಿರಿ ಇರಲಿಲ್ಲ. ಪ್ರಯಾಣಿಸುವ ಸಂದರ್ಭದಲ್ಲಿ ರೈಲು ಮಿತಿ ಮೀರಿದ ವೇಗದಲ್ಲಿ ಸಾಗುತ್ತಿದೆ ಎಂದು ಅನ್ನಿಸುವುದೇ ಇಲ್ಲ. ಮಿತಿ ಮೀರಿದ ವೇಗದಲ್ಲಿ ಪ್ರಯಾಣ ಮಾಡುವುದು ನನಗೆ ಇಷ್ಟವಿಲ್ಲದಿದ್ದರೂ, ಹಿತವಾದ ವೇಗದ ಪ್ರಯಾಣ ಎಂದೆಂದೂ ಅಚ್ಚುಮೆಚ್ಚು.
ನಾವು ಬರ್ಮಿಂಗ್‌ಹ್ಯಾಮ್‌ನಿಂದ ಆಗಮಿಸಿದ್ದರೂ 30 ಮೈಲುಗಳನ್ನು 1 ಗಂಟೆ 5 ನಿಮಿಷದಲ್ಲಿ ತಲುಪಿದೆವು. ವೋಲ್ವರ್‌ಹ್ಯಾಂಪ್ಟನ್‌ನಲ್ಲಿ 7 ನಿಮಿಷಗಳ ಕಾಲ ರೈಲು ನಿಲುಗಡೆಗೊಂಡಿತ್ತು. ಆ ಬಳಿಕದ 18 ಮೈಲುಗಳನ್ನು ರೈಲು ಕೇವಲ 28 ನಿಮಿಷಗಳಲ್ಲಿ ಕ್ರಮಿಸಿತು. ಆದರೆ ಒಂದು ವಿಷಯದಲ್ಲಿ ಮಾತ್ರ ನಾನು ಮೋಸಹೋದೆನೆಂದೇ ಹೇಳಬಹುದು. ರೈಲಿನ ವೇಗದ ಬಗ್ಗೆ ನನ್ನದೇ ಆದ ಲೆಕ್ಕಾಚಾರ ಹೊಂದಿದ್ದೆ. ಆದರೆ ನನ್ನ ನಿರೀಕ್ಷೆಗಳೆಲ್ಲಾ ಹುಸಿಯಾದವು. ನಾನು ನಿರೀಕ್ಷಿಸಿದ್ದಕ್ಕಿಂತ ವೇಗದಲ್ಲಿ ರೈಲು ಸಾಗಿತ್ತು. ಹಾಗಿದ್ದರೂ ನನ್ನ ಮನಸ್ಸಿಗೆ ಯಾವುದೇ ಅತೃಪ್ತಿ ಉಂಟಾಗಿರಲಿಲ್ಲ.
ಗುಡು-ಗುಡು ಶಬ್ದ ಮಾಡಿಕೊಂಡು ರೈಲು ಸಾಗುತ್ತಿರುವಾಗ ಎಂಜಿನ್ ಮೂಲಕ ಉಂಟಾಗುವ ಶಬ್ದ ಎಂದಿಗೂ ನಿಮಗೆ ಕಿರಿಕಿರಿ ಎನಿಸದು. ಬದಲಾಗಿ ಕುದುರೆ ನಾಲ್ಕು ಕಾಲುಗಳನ್ನು ನೆಲದಿಂದ ಮೇಲಕ್ಕೆತ್ತಿದಾಗ ಉಂಟಾಗುವ ಶಬ್ದದ ಅನುಭವವಾಗುತ್ತದೆ.
ರೈಲಿನ ಪಕ್ಕದಲ್ಲೇ ಹಾದುಹೋಗುವ ವ್ಯಕ್ತಿಯನ್ನು ದಾಟಿಕೊಂಡು ರೈಲು ಸಾಗುತ್ತಿದ್ದರೆ ಅವರನ್ನು ಗುರುತಿಸುವುದೇ ಒಂದು ವಿಚಿತ್ರ ಅನುಭವ. ಹಾಗೇ ರೈಲು ಸಾಗುವ ಮಾರ್ಗದಲ್ಲಿನ ಕಮಾನುಗಳು ಕೂಡ ರೈಲಿನ ವೇಗದಲ್ಲಿ ನೇರವಾಗೇ ಕಾಣುವುದು ವಿಶಿಷ್ಟ. ಟಿಕೆಟ್ ಮತ್ತು ಆಸನಗಳಿಗೆ ನಿರ್ದಿಷ್ಟ ಅಂಕಿಗಳಿದ್ದು, ಅವರವರ ಆಸನಗಳು ನಿಗದಿಯಾಗಿರುವುದರಿಂದ ಯಾವುದೇ ಗೊಂದಲವಿರುದಿಲ್ಲ. ಹಾಗೇ ಸರಕು- ಸರಂಜಾಮನ್ನು ರೈಲಿ ಮೇಲೆ ಹೇರಲಾಗುತ್ತದೆ. ರೈಲಿಗೆ ಸಾಕಷ್ಟು ಸುಧಾರಣೆ ಅಗತ್ಯ ಎಂಬ ಬಗ್ಗೆ ಯಾವುದೇ ಅನುಮಾನಗಳಿಲ್ಲದಿದ್ದರೂ, ಸದ್ಯಕ್ಕಂತೂ ಸಾಕಷ್ಟು ಉತ್ತಮವಾಗೇ ಇದೆ. ನಿಮ್ಮದೇ ಆದ ಖಾಸಗಿ ಬಂಡಿಯಿದ್ದರೆ ನೀವು ಅದರಲ್ಲೇ ಪ್ರಯಾಣಿಸಬಹುದು. ಜೇಮ್ಸ್ ಕೂಡ ಹಾಗೇ ಮಾಡಿದ್ದ. ನನ್ನ ಪ್ರಕಾರ ಬರ್ಮಿಂಗ್‌ಹ್ಯಾಮ್‌ನಿಂದ ಲಿವರ್‌ಪೂಲ್‌ವೆರೆಗೆ ನಿಲುಗಡೆಗಳ ಸಮಯವೂ ಸೇರಿ ಒಟ್ಟು ನಾಲ್ಕು ಕಾಲು ಗಂಟೆಗಳ ಕಾಲಾವಧಿ ಇರಬಹುದು. ಒಂದು ದಿನದಲ್ಲಿ ಕುಟುಂಬವನ್ನು ಎಲ್ಲಿಂದ ಎಲ್ಲಿಗೆ ಬೇಕಾದರೂ ಸಾಗಿಸಬಹುದು, ಅದೂ ಹಣಕಾಸಿನ ದೃಷ್ಟಿಯಿಂದ ಕೂಡ ಅನುಕೂಲಕರವಾಗಿಯೇ ಎಂಬುದು ಹೆಗ್ಗಳಿಕೆ!