ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
 
ಸಂಪಾದಕೀಯ
ಸ್ವತಂತ್ರ ಭಾರತದ ಇತಿಹಾಸದಲ್ಲೇ ಅತಿ ಅಮಾನವೀಯ ಬಜೆಟ್ ಇದು
Arindam Choudhuri
ಅರಿಂದಮ್ ಚೌಧುರಿ,
ಪ್ರಧಾನ ಸಂಪಾದಕರು, ದ ಸಂಡೆ ಇಂಡಿಯನ್

ವರ್ಷದಿಂದ ವರ್ಷಕ್ಕೆ ನಮ್ಮ ಕೇಂದ್ರ ಸರ್ಕಾರದ ಬಜೆಟ್ ಸಾಂಪ್ರದಾಯಿಕವಾಗಿ ನೆಲಕಚ್ಚುತ್ತಲೇ ಸಾಗಿದೆ. ಅದರಲ್ಲಿಯಂತೂ ಈ ಬಾರಿಯ ಬಜೆಟ್ ಹಿಂದಿನೆಲ್ಲ ಮೈಲಿಗಲ್ಲುಗಳನ್ನು ದಾಟಿ ಈ ದೇಶದ ಜನಸಾಮಾನ್ಯರನ್ನು ಸಂಪೂರ್ಣವಾಗಿ ಅನಾಥವನ್ನಾಗಿಸಿದೆ. ಸಾರ್ವಜನಿಕರ ಹಣದ ಬಗ್ಗೆ ಕಿಂಚಿತ್ತೂ ಕಾಳಜಿಯಿಲ್ಲದವರಂತೆ ವರ್ತಿಸಿದ ನಮ್ಮ ಮಾನ್ಯ ಹಣಕಾಸು ಸಚಿವರು ಅತ್ಯಂತ ನಿರ್ಲಕ್ಷ್ಯದಿಂದ ಓಲೈಸುವಿಕೆಯ ಮುಖವಾಡ ಧರಿಸಿ, ಭರವಸೆಯ ಮಹಾಪೂರವನ್ನೇ ಹರಿಸಿ ಬಿಟ್ಟಿದ್ದಾರೆ. ಹಣಕಾಸು ಸಚಿವರು ಒಂದೊಂದೇ ಅವೈಜ್ಞಾನಿಕ ಹಾಗೂ ಪ್ರಾಯೋಗಿಕವಲ್ಲದ ಯೋಜನೆಗಳನ್ನು ಪ್ರಕಟಿಸುತ್ತಾ ಸಾಗಿದಂತೆ ಜನಪ್ರಿಯತೆಯ ಮೋಹಪಾಶದಲ್ಲಿ ಸಿಕ್ಕು ಮತ್ತೇರಿದವರಂತೆ ಕಂಡು ಬಂದ ನಮ್ಮ ಸಂಸದರು ಮೇಜು ಕುಟ್ಟುತ್ತಾ ಹರ್ಷೋದ್ಗಾರ ಮಾಡಿದರು. ನಮ್ಮ ಮಾಧ್ಯಮಗಳು, ವಾಣಿಜ್ಯ ಸಂಘಗಳು ಮತ್ತು ಔದ್ಯಮಿಕ ದೊರೆಗಳು ಕೂಡ ಹಣಕಾಸು ಸಚಿವರು ಮಂಡಿಸಿದ ಬಜೆಟ್ ಬಗ್ಗೆ ಪ್ರಶಂಸೆಯ ಸುರಿಮಳೆಯನ್ನೇ ಸುರಿಸಿ ಬಿಟ್ಟರು. ದುರಂತವೆಂದರೆ ಅವರ್‍ಯಾರೂ ಬಜೆಟ್‌ನ ಸೂಕ್ಷ್ಮ ಅಂಶಗಳ ಮೇಲೆ ತೀಕ್ಷ್ಣ ನೋಟವನ್ನೇ ಬೀರಲಿಲ್ಲ. ಹಣಕಾಸು ಸಚಿವರ ಕೆಲವು ಬೇಜವಾಬ್ದಾರಿ ನಿಲುವುಗಳು ದೇಶದ ಮತ್ತು ಜನಸಾಮಾನ್ಯನ ಆರ್ಥಿಕ ಸ್ಥಿತಿಯ ಮೇಲೆ ಎಂತಹ ವ್ಯತಿರಿಕ್ತ ಪರಿಣಾಮ ಬೀರಬಹುದು? ಎಂಬುದನ್ನೂ ಯಾರೂ ಯೋಚಿಸಲು ಮುಂದಾಗಲಿಲ್ಲ. ಮಾನ್ಯ ಹಣಕಾಸು ಸಚಿವರು ಮಂಡಿಸಿದ ಈ ಬಾರಿಯ ಬಜೆಟ್‌ನ ಅತ್ಯಂತ ಜನಪ್ರಿಯ ಅಂಶವೆಂದರೆ 60,000 ಕೋಟಿ ರೂಪಾಯಿ ರೈತರ ಸಾಲ ಮನ್ನಾ! ಈ ಮೂಲಕ ಸಾಲದ ಶೂಲದಲ್ಲಿ ಸಿಕ್ಕಿ ಹಾಕಿಕೊಂಡು ಬದುಕಿನ ವಿರುದ್ಧ ಮುಖ ಮಾಡಿ ನಿಂತಿರುವ ದೇಶದ ರೈತ ಸಮುದಾಯದ ಪಾಲಿಗೆ ರಕ್ಷಕರಾಗಿ ಹೊರ ಹೊಮ್ಮಿದ್ದಾರೆ ನಮ್ಮ ಹಣಕಾಸು ಸಚಿವರು!! ಆದರೆ ವಾಸ್ತವ ಮಾತ್ರ ಸತ್ಯದಿಂದ ಬಹು ದೂರ! ವೈಯಕ್ತಿಕವಾಗಿ ಏಳನೇ ಬಜೆಟ್ ಮಂಡಿಸಿದ ಹಣಕಾಸು ಸಚಿವರಿಗೆ ತಾವು ನೀಡುತ್ತಿರುವ ಈ ಸಾಲ ಮನ್ನಾದಿಂದ ನಿಜವಾಗಿಯೂ ನೆರವಿನ ಅಗತ್ಯವಿರುವವರಿಗೆ ಯಾವುದೇ ಪ್ರಯೋಜನ ಆಗುವುದಿಲ್ಲ ಎಂಬ ಸತ್ಯದ ಅರಿವು ಇಲ್ಲವೇ? ಈ ದೇಶದಲ್ಲಿರುವ ಶೇಕಡಾ 50ರಷ್ಟು ರೈತರು ಸಾಲದ ಸುಳಿಯಲ್ಲಿ ಸಿಕ್ಕಿ ಹಾಕಿಕೊಂಡಿದ್ದಾರೆ. ಆ ಪೈಕಿ ಶೇಕಡಾ 50ರಷ್ಟು ರೈತರು ಸಿಕ್ಕಿ ಹಾಕಿಕೊಂಡಿರುವುದು ಖಾಸಗಿ ಲೇವಾದೇವಿಗಾರರು ಹರಡಿರುವ ಸಾಲದ ಬಲೆಯಲ್ಲಿ! ಈ ವಿಷಯದ ಕಿಂಚಿತ್ತು ಅರಿವು ಕೂಡ ನಮ್ಮ ಹಣಕಾಸು ಸಚಿವರಿಗೆ ಇಲ್ಲವೇ? ಖಾಸಗಿ ಲೇವಾದೇವಿ ವ್ಯವಹಾರ ಮಾಡುವವರು ಯಾವುದೇ ಕಾರಣಕ್ಕೆ ಆರ್‌ಬಿಐ ನೆರಳಡಿ ಬರುವುದಿಲ್ಲ. ಹಾಗೆ ಖಾಸಗಿ ಲೇವಾದೇವಿ ವ್ಯವಹಾರ ಮಾಡುವವರ ಬಲೆಗೆ ಬಿದ್ದ ರೈತ ಕುಟುಂಬಗಳೇ ಆತ್ಮಹತ್ಯೆಯಂತಹ ಕೃತ್ಯಗಳಿಗೆ ಕೈ ಹಾಕುವುದು. ಇಂತಹ ಸರಳ ವಿಷಯವನ್ನು ತಿಳಿಯದಷ್ಟು ಬುದ್ಧಿ ಹೀನರೆ ನಮ್ಮ ಹಣಕಾಸು ಸಚಿವರು? ವಾಸ್ತವ ಹೀಗೆ ಕಟುವಾಗಿರುವಾಗ ಇಂತಹ ಸಾಲ ಮನ್ನಾ ಯೋಜನೆಗಳಿಂದ ಯಾರಿಗೆ ಲಾಭವಾಗುತ್ತದೆ? ಇದರಿಂದ ನಿಜಕ್ಕೂ ಅಗತ್ಯವಾದವರಿಗೆ ಅನುಕೂಲವಾಗುತ್ತದೆಯೇ? ಉತ್ತಮ ಸ್ಥಿತಿಯಲ್ಲಿಯೇ ಇದ್ದು, ಬ್ಯಾಂಕುಗಳಿಂದ ಸಾಲ ಪಡೆಯುವ ಮಟ್ಟದಲ್ಲಿರುವ ರೈತ ಕುಟುಂಬಗಳು ಮಾತ್ರ ಈ ಸಾಲ ಮನ್ನಾದ ಪ್ರಯೋಜನ ಪಡೆಯಲು ಸಾಧ್ಯ. ಇನ್ನು ಒಂದು ವಿಷಯವೆಂದರೆ ಭಾರತದಲ್ಲಿರುವ ಪ್ರತಿಯೊಬ್ಬ ರೈತನೂ ಸಾವು-ಬದುಕು ಎನ್ನುವಂತಹ ದುಗುಡ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿಲ್ಲ. ಪಂಜಾಬ್, ಹರಿಯಾಣ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿನ ರೈತರು ಈ ದೇಶದಲ್ಲಿ ಲಭ್ಯವಿರುವ ಅತ್ಯಂತ ದುಬಾರಿ ಕಾರುಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಕೊಂಡುಕೊಳ್ಳುವವರಾಗಿದ್ದಾರೆ. ಹೀಗೆ ಸಾರಾಸಗಟಾಗಿ ಸಾಲ ಮನ್ನಾ ಮಾಡುವಾಗ ಇಂತಹ ಸಿರಿವಂತ ರೈತರೇ ತಮ್ಮ ಪ್ರಭಾವ ಬಳಸಿ ಯೋಜನೆಯ ಫಲ ಉಣ್ಣುತ್ತಾರೆ. ಈ ಯೋಜನೆ ಮೂಲಕ ಹಣಕಾಸು ಸಚಿವರು ಇಂತಹ ಸಿರಿವಂತ ರೈತರ ಮನ ಗೆಲ್ಲಬಹುದು ಅಷ್ಟೆ. ಅದರಿಂದ ನ್ಯಾಯವಾಗಿ ಯಾರಿಗೆ ಲಾಭವಾಗಬೇಕೋ ಅವರು ಮಾತ್ರ ಮೊದಲಿನಂತೆಯೇ ನರಳುತ್ತಲೇ ಜೀವನ ಸಾಗಿಸುತ್ತಾರೆ. ನಮ್ಮ ದೇಶದ ಕೃಷಿ ಕ್ಷೇತ್ರದಲ್ಲಿನ ತೊಂದರೆ-ತಾಪತ್ರಯಗಳನ್ನು ಇಂತಹ ಒಂದು ಸಾಲ ಮನ್ನಾ ಯೋಜನೆಯಿಂದ ನಿರ್ನಾಮ ಮಾಡಲು ಆಗುವುದಿಲ್ಲ ಎನ್ನುವ ಸತ್ಯಾಂಶ ಕೂಡ ನಮ್ಮ ಹಣಕಾಸು ಸಚಿವರಿಗೆ ತಿಳಿದಿದೆ. ಆದರೂ, ಇಂತಹ ಬೃಹತ್ ಮೊತ್ತದ ಸಾಲ ಮನ್ನಾ ಯೋಜನೆ ಘೋಷಿಸಲು ಹಣಕಾಸು ಸಚಿವರು ಏಕೆ ಮುಂದಾಗಿದ್ದಾರೆ ಎಂದರೆ ಇನ್ನೇನು ಬಂದೇ ಬಿಟ್ಟಿತು ಎನ್ನಲಾಗುತ್ತಿರುವ ಸಾರ್ವತ್ರಿಕ ಚುನಾವಣೆ. ನಿಜವಾಗಿಯೂ ಯಾರು ಕಷ್ಟದಲ್ಲಿ ಇದ್ದಾರೆಯೋ, ಅವರಿಗೆ ಅನುಕೂಲ ಮಾಡಿಕೊಡಬೇಕು ಎಂಬ ಉದ್ದೇಶ ಇದ್ದಿದ್ದರೆ ನಮ್ಮ ಹಣಕಾಸು ಸಚಿವರು ಈ ಬೃಹತ್ ಮೊತ್ತವನ್ನು ಗ್ರಾಮೀಣ ಭಾರತದ ಅಭಿವೃದ್ಧಿಗಾಗಿ ನೇರವಾಗಿ ಬಳಸಬಹುದಿತ್ತು. ಒಂದೋ ಗ್ರಾಮೀಣ ಪ್ರದೇಶದಲ್ಲಿ ಬಂಡವಾಳ ಹೂಡಿಕೆ ಮಾಡಬಹುದಿತ್ತು. ಇಲ್ಲವಾದಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಾವಕಾಶ ಸೃಷ್ಟಿ ಮಾಡುವಂತಹ ಯೋಜನೆಗಳಿಗೆ ಈ ಹಣವನ್ನು ಉಪಯೋಗಿಸಬಹುದಿತ್ತು. ಮುಖ್ಯವಾಗಿ ಅತ್ಯಂತ ಅಗತ್ಯವಿರುವ, ಹಿಂದುಳಿದ ಪ್ರದೇಶಗಳಲ್ಲಿ ಇಂತಹ ಯೋಜನೆಗಳನ್ನು ಕೈಗೆತ್ತಿಕೊಳ್ಳಬೇಕು. ಇಲ್ಲವಾದಲ್ಲಿ ಮಾಸಿಕ ಯೋಜನೆ ಮೂಲಕ ಅತ್ಯಂತ ಕಷ್ಟದಲ್ಲಿರುವ ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಈ ಹಣ ಹಂಚಿ ಬಿಡಬಹುದಿತ್ತು. ಅದು ಇಂತಹ ಸಾಲ ಮನ್ನಾ ಯೋಜನೆಗಿಂತ ಅತ್ಯಂತ ಪರಿಣಾಮಕಾರಿ ಯೋಜನೆಯಾಗಿ ಹೊರಹೊಮ್ಮುತ್ತಿತ್ತು. ಮಾತ್ರವಲ್ಲ ಈ ಬಾರಿಯ ಬಜೆಟ್‌ಗೆ ಆ ಯೋಜನೆ ಒಂದು ಮಾನವೀಯ ಸ್ಪರ್ಶ ನೀಡಲು ಯಶಸ್ವಿಯಾಗುತ್ತಿತ್ತು. ಇನ್ನು ಹಣಕಾಸು ಸಚಿವರು ಘೋಷಿಸಿದ ಮತ್ತೊಂದು ಜನಪ್ರಿಯ ಯೋಜನೆಯೆಂದರೆ ದುಡಿಯುವ ವರ್ಗಕ್ಕೆ ಕಲ್ಪಿಸಿದ ಹೊಸ ತೆರಿಗೆ ವಿನಾಯಿತಿ ಯೋಜನೆ. ಇದು ತೀರಾ ಅನಗತ್ಯ. ಆ ಪೈಕಿ ಹಿರಿಯ ನಾಗರಿಕರಿಗೆ ನೀಡಿದ ತೆರಿಗೆ ವಿನಾಯತಿ ಯೋಜನೆ ಮಾತ್ರ ಒಳ್ಳೆಯ ಹೆಜ್ಜೆ. ಭಾರತದ ಒಟ್ಟು ಜನಸಂಖ್ಯೆಯ ಶೇಕಡಾ 40ರಷ್ಟು ಮಂದಿ ಈಗಲೂ ಬಡತನದ ರೇಖೆಗಿಂತ ಕೆಳಗೇ ಇದ್ದಾರೆ. ಒಟ್ಟು ಶೇಕಡಾ 70ರಷ್ಟು ಮಂದಿ ತೆರಿಗೆ ಕಟ್ಟಬೇಕಾದ ಹಂತದಲ್ಲಿಯೇ ಇಲ್ಲ. ಇನ್ನು ತೆರಿಗೆ ಕಟ್ಟಬೇಕಾದವರ ಪೈಕಿ ಶೇಕಡಾ 2ರಷ್ಟು ಮಂದಿ ಮಾತ್ರ ನ್ಯಾಯವಾಗಿ ತೆರಿಗೆ ಪಾವತಿಸುತ್ತಾರೆ. ಇದು ಭಾರತೀಯ ಮಧ್ಯಮ ವರ್ಗದ ಹುಟ್ಟು ಗುಣ. ಈಗಾಗಲೇ ಸರ್ಕಾರ ಹಲವಾರು ಸಬ್ಸಿಡಿ ಹಾಗೂ ಇನ್ನಿತರ ಯೋಜನೆಗಳಿಂದ ಮಧ್ಯಮ ವರ್ಗದ ಮನ ತಣಿಸುವ ಯತ್ನ ನಡೆಸುತ್ತಲೇ ಇದೆ. ಇಂತಹ ಸನ್ನಿವೇಶದಲ್ಲಿ ಅವರನ್ನು ಮತ್ತಷ್ಟು ಓಲೈಸುವ ಅಗತ್ಯ ಇರಲಿಲ್ಲ. ಬದಲಾಗಿ ನಮ್ಮ ಹಣಕಾಸು ಸಚಿವರು ಆ ಹಣವನ್ನು ಒಟ್ಟುಗೂಡಿಸಿ ಬಡತನದ ರೇಖೆಗಿಂತ ಕೆಳಗಿದ್ದು ಬಳಲಿದವರ ಅಭಿವೃದ್ಧಿಗೆ ಬಳಸಬಹುದಿತ್ತು. ಈ ಮುಂಗಡ ಪತ್ರದ ನಕಾರಾತ್ಮಕ ಅಂಶಗಳು ಎಷ್ಟು ದಟ್ಟವಾಗಿ ಇವೆ ಎಂದರೆ, ಬಜೆಟ್‌ನಲ್ಲಿನ ಸಕಾರಾತ್ಮಕ ಅಂಶಗಳನ್ನು ಅವು ಮುಚ್ಚಿ ಹಾಕಿವೆ. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎನ್‌ಆರ್‌ಇಜಿಎ)ಯನ್ನು ದೇಶದ ಎಲ್ಲ ಜಿಲ್ಲೆಗಳಿಗೆ ವಿಸ್ತರಿಸುವ ನಿರ್ಧಾರ ಆ ಪೈಕಿ ಒಂದು. ಭ್ರಷ್ಟಾಚಾರ ಮುಕ್ತವಾಗಿ ಈ ಯೋಜನೆ ಜಾರಿಗೆ ತಂದಲ್ಲಿ ಬಡಜನರ ಜೀವನ ಸ್ವಲ್ಪ ಮಟ್ಟಿಗೆ ಸುಗಮವಾಗುತ್ತದೆ. ಆದರೆ ಈ ಯೋಜನೆಯನ್ನು ಭ್ರಷ್ಟಾಚಾರದಿಂದ ಮುಕ್ತವಾಗಿಸುವುದೇ ಬಹಳ ದೊಡ್ಡ ಸವಾಲು. ಇದಲ್ಲದೇ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಈ ಬಾರಿಯ ಮುಂಗಡ ಪತ್ರದಲ್ಲಿ ಕ್ರಮವಾಗಿ ಶೇಕಡಾ 15 ಮತ್ತು ಶೇಕಡಾ 20ರಷ್ಟು ಹೆಚ್ಚು ಅನುದಾನ ಮೀಸಲಿಡಲಾಗಿದೆ. ಆದರೂ, ಈ ಎರಡು ಕ್ಷೇತ್ರಕ್ಕೆ ಎಷ್ಟು ಪ್ರಾಧಾನ್ಯ ಸಿಕ್ಕಬೇಕೋ ಅಷ್ಟು ಸಿಕ್ಕಿಲ್ಲ. ಒಂದೆಡೆ ಲಾಭ ಹೆಚ್ಚಿರುವ ಸಂದರ್ಭದಲ್ಲಿ ಸಾಮಾಜಿಕ ಅಭಿವೃದ್ಧಿ ಯೋಜನೆಗಳಿಗೆ ಹೆಚ್ಚಿನ ಅನುದಾನ ನೀಡಬೇಕಾಗಿರುವುದು ಸಹಜ ನಡೆ. ಆದರೆ, ಈ ಮುಂಗಡ ಪತ್ರದಲ್ಲಿ ಕೂಡ ಅದಾಗಲಿಲ್ಲ. ಒಟ್ಟಾರೆ ಹೇಳಬೇಕೆಂದರೆ ಈ ಬಾರಿಯ ಬಜೆಟ್ ಕೂಡ ರಾಜಕೀಯ ಲಾಭ ಪಡೆಯುವ ದೃಷ್ಟಿಯಿಂದಲೇ ಮಂಡಿತವಾಗಿದೆ. 2008-09ರ ಕೇಂದ್ರ ಬಜೆಟ್ ಸ್ವತಂತ್ರ ಭಾರತದ ಅತ್ಯಂತ ಅಮಾನವೀಯ ಬಜೆಟ್ ಎಂದು ಇತಿಹಾಸದ ಪುಟ ಸೇರಿ ಹೋಯಿತು.

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .