ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಬಿಚ್ಚು ಮಾತು
ಆಕ್ರಮಣದಲ್ಲೂ ಗಂಭೀರ
 

ಸಿಬಿ ಸರಣಿಯಲ್ಲಿ ಒಟ್ಟು 440 ರನ್ ಗಳಿಸಿದ ಎಡಗೈ ದಾಂಡಿಗ ಗೌತಮ್ ಗಂಭೀರ್ ಈಗ ಭಾರತದ ಏಕದಿನ ತಂಡದಲ್ಲಿ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ. ಸದಾ ಭರ್ಜರಿ ಹೊಡೆತಕ್ಕೆ ಮುಂದಾಗುವ ಈ ಆಕ್ರಮಣಕಾರಿ ಮನೋಭಾವದ 'ರಾಜಧಾನಿ' ಹುಡುಗನೊಂದಿಗೆ ಟಿಎಸ್‌ಐನ ನೇಹಾ ಸರೀನ್ ಮಾತುಕತೆ

ನಿಮ್ಮನ್ನು ಆಕ್ರಮಣಕಾರಿ ಆಟಗಾರ ಎಂದೇ ಕರೆಯಲಾಗುತ್ತದೆ. ನಿಮ್ಮ ಬ್ಯಾಟಿಂಗ್ ಹೊಡೆತಗಳ ಆಯ್ಕೆ, ಆಟದ ಶೈಲಿ ಕುರಿತು...

ಕ್ರಿಕೆಟ್ ಆಡಲಾಂಭಿಸಿದ ದಿನಗಳಿಂದಲೂ ಆಕ್ರಮಣಕಾರಿ ಆಟ ಎಂಬುದು ನನ್ನಲ್ಲಿ ಮೈಗೂಡಿತ್ತು. ಕ್ರಿಕೆಟ್ ಒಂದು ಸಂಭ್ರಮದ ಆಟ. ಅದನ್ನು ಸಂಭ್ರ್ರಮಿಸಿ ಕೊಂಡೇ ಆಡಬೇಕು. ಬ್ಯಾಟಿಂಗ್ ನಡೆಸುವಾಗ ನಾನು ಸದಾ ಭರ್ಜರಿ ಹೊಡೆತಗಳನ್ನು ಬಾರಿಸಲು ಇಚ್ಛಿಸುತ್ತೇನೆ. ರನ್‌ಗಳಿಸುವುದೇ ನನ್ನ ಗುರಿ ಮತ್ತು ಆ ಗುರಿ ತಲುಪುವಲ್ಲಿ ನಾನು ಯಶಸ್ವಿಯಾಗಿದ್ದೇನೆ.

ಕಳೆದ ವರ್ಷ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ಶಾಹಿದ್ ಅಫ್ರಿದಿ ಹಾಗೂ ನಿಮ್ಮ ನಡುವೆ ಮಾತುಕತೆ ನಡೆದಿತ್ತು. ಇಂದಿನ ಸ್ಪರ್ಧಾತ್ಮಕ ಲೋಕದಲ್ಲಿ ಆಕ್ರಮಣಕಾರಿ ಮನೋಭಾವದ ಪ್ರದರ್ಶನ ಅಗತ್ಯ ಎಂದು ಅಭಿಪ್ರಾಯಪಡುತ್ತೀರಾ?

ಹಾಗೆಂದು ನಾನಂದುಕೊಂಡಿಲ್ಲ... ಮೈದಾನದಲ್ಲಿ ಆಕ್ರಮಣ ಆಟಗಾರ ಹೌದು. ಒಪ್ಪುತ್ತೇನೆ. ಅಂದ ಮಾತ್ರಕ್ಕೆ ಮೈದಾನದ ಹೊರಗೂ ನಾನು ಆಕ್ರಮಣಕಾರಿಯಾಗಿರುತ್ತೇನೆ ಎಂದಲ್ಲ. ಕೆಲವೊಂದು ಒತ್ತಡದ ಸಂದರ್ಭಗಳಲ್ಲಿ ಮತ್ತು ದೇಶಕ್ಕಾಗಿ ನೀವು ಆಡುತ್ತಿರುವಾಗ ಹಾಗಾಗುವುದು ಸಹಜ. ಶಾಹಿದ್ ಅಫ್ರಿದಿ ಅವರೊಂದಿಗೆ ಮಾತುಕತೆ ನಡೆದದ್ದು ಕೇವಲ ಮೈದಾನಕ್ಕೇ ಸೀಮಿತ ಮತ್ತು ಅದು ಉದ್ದೇಶಪೂರ್ವಕವಾಗಿ ನಡೆದ ಘಟನೆಯೇನೂ ಅಲ್ಲ. ಹಾಗಾಗಿ ಈ ಘಟನೆಯ ಕುರಿತು ಮೈದಾನದ ಹೊರಗೆ ಪಶ್ಚಾತ್ತಾಪ ಪಟ್ಟಿಲ್ಲ.

ಟ್ವೆಂಟಿ-20 ವಿಶ್ವಕಪ್ ವಿಜಯ ನಿಮ್ಮ ಕ್ರಿಕೆಟ್ ಜೀವನದಲ್ಲಿ ಒಂದು ಮಹತ್ತರ ಮೈಲಿಗಲ್ಲು. ನಿಮ್ಮ ಹಾಗೂ ತಂಡದ ಯಶಸ್ಸಿನ ಪ್ರಮುಖ ಅಂಶ ಯಾವುದು?

ಪ್ರತಿಯೊಬ್ಬ ಆಟಗಾರರೂ ಅವರದೇ ಆದ 'ಗೇಮ್ ಪ್ಲಾನ್' ಹೊಂದಿದ್ದರು. ಆರಂಭಿಕ ಬ್ಯಾಟ್ಸ್‌ಮನ್ ಆಗಿದ್ದರಿಂದ ತಂಡಕ್ಕೆ ಉತ್ತಮ ಆರಂಭ ಒದಗಿಸುವ ಜವಾಬ್ದಾರಿ ನನ್ನ ಹೆಗಲ ಮೇಲಿತ್ತು. ಒಮ್ಮೆ ಬ್ಯಾಟಿಂಗ್‌ನಲ್ಲಿ ಲಯ ಕಂಡುಕೊಂಡ ಕೂಡಲೇ ಸಾಕಷ್ಟು ರನ್ ಗಳಿಸುವತ್ತ ನನ್ನ ದೃಷ್ಟಿ ನೆಟ್ಟಿದ್ದೆ. ಅದೃಷ್ಟವೆಂಬಂತೆ ಟ್ವೆಂಟಿ-20 ವಿಶ್ವಕಪ್‌ನಲ್ಲಿ ಹೆಚ್ಚು ರನ್ ಗಳಿಸುವುದರಲ್ಲೂ ನಾನು ಯಶಸ್ವಿಯಾದೆ.

ಏಕದಿನ ಪಂದ್ಯಗಳಲ್ಲಿ ನೀವು ಗಮನಾರ್ಹ ಪ್ರದರ್ಶನ ನೀಡುತ್ತಾ ಬಂದಿದ್ದೀರಿ. ಆದರೆ ಟೆಸ್ಟ್ ಪಂದ್ಯಗಳಲ್ಲಿ ಆರಂಭಿಕ ಬ್ಯಾಟ್ಸ್‌ಮನ್ ಆಗಿ ಸ್ಥಿರತೆ ಕಾಯ್ದುಕೊಳ್ಳುವಲ್ಲಿ ವಿಫಲರಾಗಿದ್ದೀರಿ. ಆ ಸಮಸ್ಯೆ ನೀಗಿಸಲು ಯಾವ ರೀತಿ ಯೋಜಿಸಿದ್ದೀರಿ?

ನಿಜ ಹೇಳಬೇಕೆಂದರೆ ಟೆಸ್ಟ್ ಪಂದ್ಯಗಳಲ್ಲಿ ನನ್ನ ಸಾಮರ್ಥ್ಯ ಪ್ರದರ್ಶಿಸಲು ಹೆಚ್ಚಿನ ಅವಕಾಶಗಳು ದೊರೆತಿಲ್ಲ. ಹಾಗಿದ್ದರೂ ಏಕದಿನ ಹಾಗೂ ಟ್ವೆಂಟಿ-20 ಪಂದ್ಯಗಳಲ್ಲಿ ಅತ್ಯುತ್ತ್ತಮ ಪ್ರದರ್ಶನ ನೀಡಲು ಸಾಕಷ್ಟು ಪ್ರಯತ್ನಿಸಿದ್ದೇನೆ. ಟೆಸ್ಟ್ ಕ್ರಿಕೆಟ್ ಅನ್ನು ಕ್ರಿಕೆಟ್‌ನ ಸಹಜ ಶೈಲಿಯಲ್ಲೇ ಆಡಬೇಕು. ಹಾಗಾಗಿ ಇಲ್ಲಿ ಕೌಶಲ್ಯ, ತಾಳ್ಮೆ ಹಾಗೂ ತಾಂತ್ರಿಕವಾಗಿಯೂ ಪ್ರಬಲರಾಗಿರಬೇಕು. ಒಟ್ಟಾರೆ ಟೆಸ್ಟ್ ಕ್ರಿಕೆಟ್ ಎಂಬುದು ಒಂದು 'ಸಂಪೂರ್ಣ ಕ್ರಿಕೆಟ್' ಆಟ.

ಭಾರತದಂಥಾ ದೇಶದಲ್ಲಿ ಅಂತರ್ ರಾಷ್ಟ್ರೀಯ ಮಟ್ಟದ ಪಂದ್ಯಗಳನ್ನು ಆಡುವಾಗ ಯಾವ ರೀತಿಯ ಒತ್ತಡಗಳಿರುತ್ತವೆ?

ನನ್ನ ಪ್ರಕಾರ ಆಟದ ಮೇಲಿನ ಉತ್ಸಾಹ ಇಲ್ಲಿ ಪ್ರಮುಖ ಪಾತ್ರವಹಿಸುತ್ತದೆ. ದೆಹಲಿ ತಂಡ ಅಥವಾ ಭಾರತೀಯ ತಂಡದ ಪರವಾಗಿ ನಾನು ಆಡುತ್ತಿರಬಹುದು. ಆಟದ ಮೇಲಷ್ಟೇ ಗಮನಹರಿಸಿ ಬ್ಯಾಟಿಂಗ್ ಅಥವಾ ಬೌಲಿಂಗ್ ಮೂಲಕ ತಂಡದ ಗೆಲುವಿಗಾಗಿ ನೆರವಾಗುತ್ತೇನೆ. ದಿನದ ಕೊನೆಯಲ್ಲಿ ಡ್ರೆಸ್ಸಿಂಗ್ ರೂಮ್‌ನಲ್ಲಿ ಕುಳಿತಾಗ ತಂಡದ ಹಾಗೂ ನಿಮ್ಮ ವೈಯಕ್ತಿಕ ಯಶಸ್ಸು ನೀಡುವ ನೆಮ್ಮದಿ, ತೃಪ್ತಿಯ ಭಾವನೆಯೇ ಎಲ್ಲವನ್ನೂ ಹೇಳುತ್ತವೆ.

ಇಂದಿನ ದಿನಗಳಲ್ಲಿ ಕ್ರಿಕೆಟ್ ಆಟಗಾರನಿಂದ ಹೆಚ್ಚಿನ ಯಶಸ್ಸನ್ನು ನಿರೀಕ್ಷಿಸಲಾಗುತ್ತಿದೆ. ಪ್ರತಿದಿನದ ಸವಾಲುಗಳನ್ನು ಮುನ್ನುಗ್ಗಿ ಎದುರಿಸಲು ನೀವು ಯಾವ ರೀತಿ ಸಜ್ಜಾಗುತ್ತೀರಿ?

ಅಂತರ್ ರಾಷ್ಟ್ರೀಯ ಪಂದ್ಯವೊಂದರಲ್ಲಿ ಆಡುವಾಗ ಮಾನಸಿಕವಾಗಿ ಸದೃಢರಾಗಿರಬೇಕು. ಒತ್ತಡ ಎದುರಿಸುವ ತಂತ್ರಗಾರಿಕೆ ನಿಮ್ಮಲ್ಲಿರಬೇಕು ಮತ್ತು ಸಕಾರಾತ್ಮಕವಾಗಿ ಅದನ್ನು ನಿರ್ವಹಿಸುವ ಸಾಮರ್ಥ್ಯವೂ ಅಗತ್ಯ. ತಾಂತ್ರಿಕ ಬಲ, ಉತ್ಸಾಹ ಹಾಗೂ ಗೆಲ್ಲಬೇಕೆಂಬ ಛಲ ನಿಮ್ಮಲ್ಲಿದ್ದರೆ ಎಂತಹ ಸವಾಲನ್ನು ಎದುರಿಸಲೂ ಸಾಧ್ಯ.

ನಿಮ್ಮ ಮೇಲೆ ಪ್ರಭಾವ ಬೀರಿದ ಬ್ಯಾಟ್ಸ್‌ಮನ್ ಯಾರು? ಇತರ ಯಾವುದೇ ಆಟಗಾರರ ಬ್ಯಾಟಿಂಗ್ ಶೈಲಿಯನ್ನು ನೀವು ಮೈಗೂಡಿಸಿಕೊಂಡಿದ್ದೀರಾ?

ಇಲ್ಲ. ನಾನು ಯಾವುದೇ ಆಟಗಾರರ ಬ್ಯಾಟಿಂಗ್ ಶೈಲಿಯನ್ನು ಅನುಕರಿಸಿಲ್ಲ. ನನ್ನ ಪ್ರಕಾರ ವಿರೇಂದ್ರ ಸೆಹ್ವಾಗ್ ಒಬ್ಬ ಅದ್ಭುತ ಆಟಗಾರ. ಅವರ ಬ್ಯಾಟಿಂಗ್ ಸಾಧನೆಯೇ ಅವರ ಸಾಮರ್ಥ್ಯವನ್ನು ತೆರೆದಿಡುತ್ತದೆ. ಪಿಚ್‌ನ ಇನ್ನೊಂದು ತುದಿಯಲ್ಲಿ ನಿಂತು ಅವರ ಬ್ಯಾಟಿಂಗ್ ಅಬ್ಬರ ವೀಕ್ಷಿಸಿದಾಗ ಉಂಟಾಗುವ ಖುಷಿಯೇ ಬೇರೆ.

ಐತಿಹಾಸಿಕ ಟ್ವೆಂಟಿ-20 ವಿಶ್ವಕಪ್ ಗೆದ್ದ ತಂಡವನ್ನು ಪ್ರತಿನಿಧಿಸಿದ ಹೆಗ್ಗಳಿಕೆ ನಿಮಗಿದೆ. ಈಗ ನಿಮ್ಮ ಮುಂದೆ ದೇಶದ ಅನೇಕ ಕ್ರಿಕೆಟ್ ಲೀಗ್ ಸಂಸ್ಥೆಗಳು ಅಣಬೆಗಳಂತೆ ಹುಟ್ಟಿಕೊಳ್ಳುತ್ತಿವೆ. ಕ್ರಿಕೆಟ್ ಕುರಿತಾಗಿ ಭವಿಷ್ಯದಲ್ಲಿ ಯಾವ ರೀತಿಯ ನಿರೀಕ್ಷೆಗಳನ್ನಿಟ್ಟುಕೊಳ್ಳಬಹುದು?

ಟ್ವೆಂಟಿ-20 ವಿಜಯ ಭಾರತೀಯ ಕ್ರಿಕೆಟ್ ಮೇಲೆ ಭಾರೀ ಪ್ರಭಾವವನ್ನೇ ಬೀರಿದೆ ಎನ್ನಬಹುದು. ಈಗಾಗಲೇ ಹಲವಾರು ಸಂಸ್ಥೆಗಳ ನಡುವೆ ಸಾಕಷ್ಟು ಸ್ಪರ್ಧೆಗಳೇರ್ಪಟ್ಟಿದ್ದು, ಆಟಗಾರರ ಸಾಮರ್ಥ್ಯ ಹೊರತರುವಲ್ಲಿ ಅವು ಯಶಸ್ವಿಯಾಗಲಿದೆ ಎಂದು ನಾನು ನಂಬಿದ್ದೇನೆ. ಪ್ರಸ್ತುತ ಸ್ಥಿತಿಯನ್ನು ಭಾರತೀಯ ಕ್ರಿಕೆಟ್‌ನ ಸುವರ್ಣ ಯುಗ ಎಂದು ಹೇಳಬಹುದು.

ಮುಂಬರುವ 10 ವರ್ಷಗಳಲ್ಲಿ ಓರ್ವ ಕ್ರಿಕೆಟ್ ಆಟಗಾರನಾಗಿ ನೀವು ಯಾವ ರೀತಿಯ ಸಾಧನೆ ಮಾಡಬೇಕೆಂದಿದ್ದೀರಿ?

ಈ ಕುರಿತು ನಾನು ಈಗೇನು ಚಿಂತನೆ ನಡೆಸಿಲ್ಲ. ಸದಾ ತಂಡಕ್ಕಾಗಿ ಆಡುವುದು ಹಾಗೂ ರನ್‌ಗಳಿಸುವುದು ನನ್ನ ಮುಖ್ಯ ಧ್ಯೇಯ. ಇವೆಲ್ಲಕ್ಕಿಂತ ಪ್ರಮುಖವಾಗಿ ಉತ್ತಮ ನಾಗರಿಕನಾಗಬೇಕೆಂಬ ಹೆಬ್ಬಯಕೆ ನನ್ನದು. ಕ್ರಿಕೆಟ್ ನನ್ನ

ವೃತ್ತಿ. ಕ್ರಿಕೆಟ್ ಹೊರತಾಗಿ ಇತರ ಕಾರ್ಯದಲ್ಲಿ ನಾನು ತೊಡಗಿಸಿಕೊಂಡಿದ್ದರೂ ಉತ್ತಮ ವ್ಯಕ್ತಿ ಎಂದೆನಿಸಿಕೊಳ್ಳುವುದು ನನ್ನ ಉದ್ದೇಶ. ಪ್ರಸ್ತುತ ಕ್ರಿಕೆಟ್ ನನ್ನ ಜೀವನವಾಗಿದ್ದರೂ, ಆ ನಂತರವೂ ನನ್ನ ಜೀವನ ಸಾಕಷ್ಟು ಮಜಲುಗಳನ್ನು ದಾಟಬೇಕಿದೆ. ಹಾಗಾಗಿ ಉತ್ತಮ ನಾಗರಿಕನಾಗಿರಲೇ ನಾನು ಬಯಸುತ್ತೇನೆ.

ಅನೇಕ ಬಾರಿ ನೀವು ಗಾಯಾಳಾಗಿದ್ದು, ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. ಇದರಿಂದ ನಿಮಗೆ ನಿರಾಸೆಯಾಗಿದೆಯೇ? ನಿಮ್ಮ ವೃತ್ತಿ ಜೀವನದ ಆ ಕೆಟ್ಟ ಘಳಿಗೆಗಳಿಂದ ಹೊರಬರಲು ಯಾವ ಅಂಶ ಪ್ರಮುಖ ಕಾರಣವಾಯಿತು?

ಅಂತಹ ನೋವಿನ ಸಂದರ್ಭಗಳಲ್ಲಿ ಕುಟುಂಬ ಹಾಗೂ ಸ್ನೇಹಿತರೆಲ್ಲರೂ ನನ್ನ ಪರವಾಗಿದ್ದು ಸಮಾಧಾನ ಪಡಿಸುತ್ತಿದ್ದರು. ಹೌದು, ಗಾಯಾಳಾಗಿ ತಂಡದಿಂದ ಹೊರಗಿರಬೇಕಾದ ಸಂದರ್ಭ ಎದುರಾದಾಗ ನಿಜವಾಗಿಯೂ ನಿರಾಸೆಯಾಗುತ್ತದೆ. ಆದರೂ ದೇಶಕ್ಕಾಗಿ ಆಡಬೇಕು ಹಾಗೂ ಉತ್ತಮ ಪ್ರದರ್ಶನದ ಮೂಲಕ ತಂಡಕ್ಕೆ ಮರಳುತ್ತೇನೆ ಎಂಬ ಆತ್ಮವಿಶ್ವಾಸ ನಮ್ಮಲ್ಲಿರಬೇಕು. ಆ ಸಂದರ್ಭಗಳಿಗೆ ಹೊಂದಿಕೊಳ್ಳುವ ಸ್ವಭಾವವೂ ನಮ್ಮಲ್ಲಿರಬೇಕು. ನಮಗೂ ಒಂದು ಕಾಲ ಒದಗಿ ಬರಲಿದೆ. ಆ ದಿನದವರೆಗೆ ಕಾಯುವುದು ಅನಿವಾರ್ಯ!

ಬ್ಯಾಟಿಂಗ್‌ಗಾಗಿ ಮೈದಾನಕ್ಕೆ ಇಳಿಯುವ ಮುನ್ನ ಮನದಲ್ಲಿ ನೀವು ಏನನ್ನು ಹೇಳಿಕೊಳ್ಳುತ್ತೀರಿ? ನಿಮ್ಮಲ್ಲಿ ಯಾವುದಾದರೂ ಮೂಢsನಂಬಿಕೆಯಿದೆಯೇ?

ಖಂಡಿತಾ ಇಲ್ಲ. ಆರಂಭಿಕ ಬ್ಯಾಟ್ಸ್‌ಮನ್ ಆಗಿ ನನ್ನ ಜವಾಬ್ದಾರಿಗಳ ಕುರಿತು ನಾನು ಸದಾ ಚಿಂತಿಸುತ್ತೇನೆ. ಹೊಸ ಚೆಂಡಿನೊಂದಿಗೆ ಬೌಲಿಂಗ್ ಎದುರಿಸುವುದು ನಿಜವಾಗಿಯೂ ಸವಾಲಿನ ವಿಷಯವೇ. ಬ್ರೆಟ್ ಲೀ ಅಥವಾ ಶೋಯಬ್ ಅಖ್ತರ್ ಅವರಂತಹ ವೇಗದ ಬೌಲರ್‌ಗಳ ಬೆಂಕಿಯುಂಡೆಯಂಥಾ ಎಸೆತಗಳನ್ನು ಎದುರಿಸಿ ಅಧಿಕ ರನ್ ಗಳಿಸುವುದು ಸವಾಲೇ ಹೌದು. ಆದರೆ ಅಂತಹಾ ಸವಾಲುಗಳೇ ನಿಮ್ಮ ಸಾಮರ್ಥ್ಯವನ್ನು ಹೊರಗೆಡವುತ್ತವೆ ಎಂದು ನಾನು ನಂಬಿದ್ದೇನೆ.

ಭಾರತ ತಂಡದ ನಾಯಕನಾಗುವುದು ಪ್ರತಿಯೊಬ್ಬ ಕ್ರಿಕೆಟ್ ಆಟಗಾರನ ಕನಸು ಎಂಬುದರಲ್ಲಿ ಅನುಮಾನವಿಲ್ಲ. ನಿಮ್ಮಲ್ಲೂ ಅದೇ ರೀತಿಯ ಕನಸುಗಳಿವೆಯೇ?

ಹೌದು, ಭಾರತ ತಂಡವನ್ನು ಮುನ್ನಡೆಸುವುದು ಪ್ರತಿಯೊಬ್ಬ ಕ್ರಿಕೆಟಿಗನ ಕನಸು. ನಾನೂ ಅದೇ ಕನಸನ್ನು ಹೊಂದಿದ್ದೇನೆ. ಮಹೇಂದ್ರ ಸಿಂಗ್ ಧೋನಿ ಒಬ್ಬ ಸಮರ್ಥ ಮತ್ತು ಅವರ ಸಾಧನೆಗಳೇ ಅವರ ಸಾಮರ್ಥ್ಯವನ್ನು ಬಿಂಬಿಸುತ್ತವೆ. ಆದರೆ ಸದ್ಯ ನಾನು ಕಪ್ತಾನನಾಗುವ ಕನಸು ಕಾಣುತ್ತಿಲ್ಲ. ನನ್ನ ಬ್ಯಾಟಿಂಗ್ ಹಾಗೂ ಆಟವನ್ನು ವೃದ್ಧಿಸುವ ಕುರಿತಾಗಿಯೇ ಹೆಚ್ಚು ಯೋಚಿಸುತ್ತಿದ್ದೇನೆ. ಈ ಮಧ್ಯೆ ಕಪ್ತಾನನಾಗುವ ಅವಕಾಶ ಅರಸಿ ಬಂದರೆ ಸಂತೋಷ.

ಎಲ್ಲಾ ಕ್ರಿಕೆಟ್ ತಂಡದ ಆಟಗಾರರನ್ನು ಸೇರಿಸಿ ಐವರ ತಂಡ ಆಯ್ಕೆ ಮಾಡುವ ಸಂದರ್ಭ ಎದುರಾದರೆ, ನಿಮ್ಮ ಆಯ್ಕೆ?

ವಿರೇಂದ್ರ ಸೆಹ್ವಾಗ್ ಇದ್ದೇ ಇರುತ್ತಾರೆ! ಉಳಿದವರೆಂದರೆ ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ಯುವರಾಜ್ ಸಿಂಗ್ ಮತ್ತು ಮ್ಯಾಥ್ಯೂ ಹೇಡನ್.

ಕ್ರಿಕೆಟ್ ಕುರಿತಾಗಿ ನಿಮ್ಮಲ್ಲಿ ಆಸಕ್ತಿ ಬೆಳೆದದ್ದು ಹೇಗೆ? ಕ್ರಿಕೆಟನ್ನು ವೃತ್ತಿಯಾಗಿಸುವ ನಿರ್ಧಾರಕ್ಕೆ ಹೆತ್ತವರ ಬೆಂಬಲ ಹೇಗಿತ್ತು?

ನಾನು ಕ್ರಿಕೆಟ್ ಆಡಲು 6ನೇ ತರಗತಿಯಲ್ಲಿದ್ದಾಗಲೇ ಆರಂಭಿಸಿದ್ದೆ. ನಂತರ ನಾನು 14ರ ವಯೋಮಿತಿ ಸೇರಿದಂತೆ 16, 19ರ ವಯೋಮಿತಿಯೊಳಗಿನ ಕ್ರಿಕೆಟ್ ತಂಡಗಳಲ್ಲಿ ಸ್ಥಾನ ಗಳಿಸಿದೆ. ಹಾಗೇ ರಣಜಿ ಪಂದ್ಯಗಳನ್ನೂ ಆಡಿದೆ. ಆ ನಂತರವಷ್ಟೇ ರಾಷ್ಟ್ರೀಯ ತಂಡದಲ್ಲೂ ಸ್ಥಾನ ಪಡೆಯಲು ನಾನು ಅರ್ಹತೆ ಹೊಂದಿದ್ದೇನೆ ಎಂಬ ಅರಿವು ಮೂಡಿದ್ದು.

ಇತರ ಯಾವೆಲ್ಲಾ ಕ್ರೀಡೆಗಳಲ್ಲಿ ನಿಮಗೆ ಆಸಕ್ತಿಯಿದೆ?

ಬ್ಯಾಡ್ಮಿಂಟನ್ ನನಗಿಷ್ಟ. ಫುಟ್‌ಬಾಲ್ ಮತ್ತು ಹಾಕಿ ಪಂದ್ಯಗಳನ್ನೂ ವೀಕ್ಷಿಸುತ್ತೇನೆ.

ಕ್ರಿಕೆಟ್‌ನಲ್ಲಿ ನಿಮ್ಮ ಆದರ್ಶ ಆಟಗಾರ ಯಾರು? ನಿಮ್ಮ ಆತಂಕಕ್ಕೆ ಕಾರಣವಾಗುವ ಬೌಲರ್ ಯಾರು?

ನಿಜ ಹೇಳಬೇಕೆಂದರೆ ಕ್ರಿಕೆಟ್‌ನಲ್ಲಿ ನಾನು ಯಾರನ್ನೂ ಆದರ್ಶರನ್ನಾಗಿ ಕಂಡಿಲ್ಲ. ಆದರೆ ನನ್ನ ಜೀವನದಲ್ಲಿ ಒಬ್ಬ ವ್ಯಕ್ತಿಯನ್ನು ಆದರ್ಶವಾಗಿ ಕಂಡಿದ್ದೇನೆ. ಆತ ಭಗತ್ ಸಿಂಗ್. ದೇಶಕ್ಕಾಗಿ ಆತ ಮಾಡಿದ ಸೇವೆ, ಹೋರಾಟ ಎಂದಿಗೂ ನನ್ನಲ್ಲಿ ಅಚ್ಚಳಿಯದೆ ಉಳಿಯಲಿದೆ. ಇನ್ನು ನಾನು ಎದುರಿಸಲು ಸಂಕಟ ಪಡುವ ಬೌಲರ್ ಎಂದರೆ ದಕ್ಷಿಣ ಆಫ್ರಿಕಾದ ಶಾನ್ ಪೊಲಾಕ್.

ವಿಶ್ವ ಕಪ್ ಗೆಲುವು ಅಥವಾ ಪಾಕಿಸ್ತಾನದ ವಿರುದ್ಧ ಜಯ; ಯಾವುದರಲ್ಲಿ ನೀವು ಅತ್ಯಂತ ಖುಷಿ ಕಾಣುತ್ತೀರಿ?

ಪಾಕ್ ವಿರುದ್ಧದ ಗೆಲುವು (ನಗು)!

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .