ಬೇಡ್ರಪ್ಪೋ ಬೇಡಾ!
ರಾಮ್‌ಗೋಪಾಲ್ ವರ್ಮಾ ಬಚಾವ್ ಆದ್ರೂ ಅನ್ನಿ! ಆದರೂ ’ರಾಮ್ ಗೋಪಾಲ್ ವರ್ಮಾ ಕಿ ಆಗ್’ ಎಂಬ ಶಾಕ್ ಟ್ರೀಟ್‌ಮೆಂಟ್ ಕೊಟ್ಟ ನಂತರ ವರ್ಮಾ ಉಳಿಯೋದು ಅಸಾಧ್ಯವೇನೋ ಎಂದನಿಸಿದ್ದು ’ಶೋಲೆ’ಯಾಣೆಗೂ ಸತ್ಯ! ನಂತರ ರಾಮು ಏಕಾಂತದಲ್ಲಿ ಬಹಳ ಅಂತರ್ ವಿಮರ್ಶೆ ಮಾಡಿಕೊಂಡದ್ದೂ ಹೌದು. ಈಗ ತನ್ನ ಶಬ್ದಕೋಶದಿಂದ ’ನಿರ್ದಯ’ ಮತ್ತು ’ಅವಿವೇಕ’ ಎಂಬ ಪದವನ್ನೇ ಅಳಿಸಿ ಹಾಕಿ ನವೀನವಾಗಿ ಏನಾನ್ನಾದರೂ ಆರಂಭಿಸಬೇಕು ಎಂದು ನಿರ್ಧಾರ ಮಾಡಿದ್ದಾರಂತೆ. ಕೊನೆಗೂ ಸಾಹೇಬರಿಗೆ ‘ಸತ್ಯ’ ಗೊತ್ತಾಯಿತು ಅನ್ನಿ
ಡಬಲ್ ಧಮಾಕಾ!
ಇದು ಇನ್ನೊಂದು ಅವಳಿಗಳ ಕಥೆ. 2004ರಲ್ಲಿ ಮದುವೆಯಾಗಿದ್ದ ಜೆನಿಫರ್ ಲೋಪೆಜ್ ಮತ್ತು ಮಾರ್ಕ್ ಆಂಟನಿ ಈಗ ಎರಡು ಮುದ್ದು ಮಕ್ಕಳಿಗೆ ಜನ್ಮ ನೀಡಿದ್ದಾರೆ. ತೊಟ್ಟಿಲಾಡಿಸುತ್ತಲೇ ಇನ್ನು ಆಕೆಯ ಮುದ್ದಾದ ಮಕ್ಕಳಿಗೆ ಕೂತಲ್ಲೇ ಉಡುಗೊರೆಗಳ ಸರಮಾಲೆಯೇ ಹರಿದು ಬಂದಿದೆ. ಸೆಲೆಬ್ರಿಟಿ ನಿಯತಕಾಲಿಕವೊಂದು ಈ ಅವಳಿಗಳ ಚಿತ್ರಗಳನ್ನು ಈಗಾಗಲೇ ಆರು ದಶಲಕ್ಷ ಡಾಲರ್‌ಗಳಿಗೆ ಖರೀದಿಸಿಯಾಗಿದೆ! ಯಪ್ಪಾ! ಅದೃಷ್ಟ ಲಕ್ಷ್ಮಿ ಕಾಲು ಮುರಿದು ಬೀಳೋದು ಅಂದ್ರೆ ಇದೇ ಇರ್‍ಬೇಕಲ್ವಾ?
ನಂದೂ ಒಂದು ಕನ್ನಡ ಸೇವೆ
ಕರೀಷ್ಮಾ ಭಾರದ್ವಾಜ್! ಅರೆ, ಎಲ್ಲೋ ಹೆಸರು ಕೇಳಿದಂತಿದೆಯಲ್ಲಾ? ಇಂಗ್ಲಿಷ್ ಕ್ಲಾಸ್‌ನಲ್ಲಿ ತಲೆಕೆರೆದೂ ಕೆರೆದೂ ಅರ್ಥ ಹೊಳೆಯದೇ ಕೊನೆಗೆ ಡಿಕ್ಷನರಿ ತೆಗೆಯುತ್ತಿದ್ದ ನೆನಪಾಯಿತೇ? ಹ್ಞಾಂ... ಅದೇ ಇಂಗ್ಲಿಷ್-ಕನ್ನಡ ನಿಘಂಟು ಬರೆದ ಭಾರದ್ವಾಜ್ ಸಾಕ್ಷಾತ್ ಮೊಮ್ಮಗಳು ಈಕೆ! ಈಗ ’ಪಿಯುಸಿ’ ಚಿತ್ರದಲ್ಲಿ ಚೇತನ್ ಚಂದ್ರಗೆ ಜೋಡಿ. ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವೀಧರೆ. ಪತ್ರಕರ್ತೆ ಎಂದು ಬೀಗುತ್ತಾ ಲೋಕ ಸುತ್ತುವ ಆಸೆ ಇತ್ತು ಈ ಕೂಸಿಗೆ! ಅಪ್ಪ ಕನ್ನಡ ಸೇವೆ ಮಾಡಿದಂತೆ ಕನ್ನಡ ಚಿತ್ರರಂಗದ ಸೇವೆ ಮಾಡುವಾಸೆಯೂ ಈಗ ಹುಟ್ಟಿಕೊಂಡಿದೆ. ಹಾಗಾಗಿ ನ್ಯೂಯಾರ್ಕ್ ಫಿಲ್ಮ್ ಅಕಾಡೆಮಿಯಲ್ಲಿ ಅಭಿನಯ ಅಭ್ಯಾಸ ಮಾಡುವ ಯೋಚನೆಯೂ ಇದೆ. ಪ್ರೇಕ್ಷಕರು ತಲೆ ಕೆರೆದುಕೊಳ್ಳುವಂತೆ ಮಾಡದಿದ್ದರೆ ಸರಿ!
ರೋಸಾ ಹಾರೈಕೆ
ಬಾಲಿವುಡ್ ಛೋಟೆ ನವಾಬ್ ಮೈಮೇಲೆ ಮನ್ಮಥನ ಆವಾಹನೆಯಾಗಿದೆ ಎಂಬುದು ಹಳೇ ವಿಚಾರ. ಅಂದಿನಿಂದ ಆತನ ಪ್ರೇಮ ಕಥಾನಕವೂ ಮುಸುಕಿನಡಿಯಲ್ಲೇ ನಡೆಯುತ್ತಿದೆ ಎನ್ನುವುದೂ ಅಷ್ಟೇ ಸತ್ಯ. ಆದರೆ ಬಾಲಿವುಡ್‌ನಲ್ಲಿ ಈಗ ಮಿಂಚುತ್ತಿರುವ ಸೈಫ್-ಕರೀನಾ ಜೋಡಿಗೆ ಹೃದಯಪೂರ್ವಕ ಹಾರೈಸಿದ್ದು ರೋಸಾ! ಯಾರೆಂದು ನೆನಪಾಯಿತೇ? ಬೆಬೋ ಆತನ ಬೆನ್ನ ಹಿಂದೆ ಬೀಳುವ ಮುಂಚೆ ಸೈಫ್ ಪ್ರೇಯಸಿಯಾಗಿದ್ದಾಕೆ! ರೋಸಾ ಬತ್ತಳಿಕೆಯ ಬಾಣಗಳೆಲ್ಲಾ ಖಾಲಿಯಾಗಿರಬಹುದು. ಆದರೆ ಪಾರ್ತೋ ಘೋಷ್ ಮುಂದಿನ ಚಿತ್ರದಲ್ಲಂತೂ ಆಕೆಗೊಂದು ಅವಕಾಶವಿದೆ. ಹಳೆಯ ಮಾತು ಮರೆಯಲಾದೀತೇ? ಕಾರ್ಮೋಡದ ಅಂಚಲ್ಲೂ....
ನನ್ನ ಪ್ರೀತಿಯ ಮಸಾಲೆ ದೋಸೆ...
’ನನ್ನ ಪ್ರೀತಿಯ ಹುಡುಗಿ’ ಎನ್ನುತ್ತಾ ಬಂದ ಧ್ಯಾನ್ ಎಂಬ ತುಂಟು ಕಂಗಳ ಪೋರನಿಗೆ ಮಸಾಲೆ ದೋಸೆ ಎಂದರೆ ಅಚ್ಚುಮೆಚ್ಚು. ಮೊನ್ನೆ ಏನಾಯ್ತು ಅಂದ್ರೆ... ಧ್ಯಾನ್ ಇದ್ದ ಹೈಫೈ ಹೋಟೆಲ್‌ನಲ್ಲಿ ಮಸಾಲೆ ದೋಸೆ ಸಿಕ್ಕಿಲ್ಲ ಅಂತ ಪಕ್ಕದ ಮಾಮೂಲಿ ಸಸ್ಯಾಹಾರಿ ಹೊಟೇಲ್‌ನಿಂದ ಮಸಾಲೆ ದೋಸೆ ತರಿಸಿ ತಿಂದನಂತೆ! ...ಅಂದ ಹಾಗೆ, ಧ್ಯಾನ್ ಹೋದೆಡೆಯೆಲ್ಲಾ ಹುಡುಗೀರು ಮಸಾಲೆ ದೋಸೆ ಹಿಡಿದು ನಿಂತರೆ ನಾವಂತೂ ಜವಾಬ್ದಾರರಲ್ಲ!
’ಭಯ’ದ ಬೆಡಗಿ
ದಾಳಿಂಬೆ ಹಲ್ಲುಗಳ ಈ ಕೊಂಕಣಿ ಬೆಡಗಿ ದಂತ ವೈದ್ಯೆ! ಅಲ್ಲಲ್ಲಾ... ಈಗ ‘ಭಯ ಡಾಟ್ ಕಾಂ’ ನಾಯಕಿ. ಹೆಸರು ರೋಷನಿ. ದಂತ ವಿದ್ಯಾ ಚಮತ್ಕಾರವನ್ನು ಇನ್ನೂ ಯಾರ ಮೇಲೂ ಪ್ರಯೋಗಿಸಿಲ್ಲ, ಆಗಲೇ ಗಾಂಧಿನಗರದ ನೀರು ಕುಡಿಯುವ ತವಕ! ವೈದ್ಯಕೀಯ ಕ್ಷೇತ್ರದಲ್ಲಿ ಮಾಡಿದ ಸಾಧನೆಯನ್ನೇ ಇಲ್ಲೂ ಮಾಡುವೆ ಎಂಬ ರೈಲು ಬೇರೆ. ಆದರೆ ಅಲ್ಲಿ ಪದವಿ ಪಡೆದಿದ್ದು ಬಿಟ್ಟು ಮತ್ತೇನು ಮಾಡಿದಳು ಎಂದು ಮಾತ್ರ ಕೇಳಬೇಡಿ. ಹುಡುಗಿಗೆ ಭರತನಾಟ್ಯ ಗೊತ್ತು. ನಾಟಕದಲ್ಲಿ ಅಭಿನಯಿಸಿದ್ದೀಯಾ ಎಂದರೆ ‘ಊಹೂಂ’ ಎನ್ನುತ್ತಾಳೆ. ತನಗೆ ಅನುಭವ ಇಲ್ಲದಿದ್ದರೆ ಏನಂತೆ, ಅಜ್ಜಿ ಸಿನಿಮಾ ನಟಿ ಎಂಬ ಪೋಸು ಬೇರೆ! ರಾಜಶೇಖರ್ ನಿರ್ದೇಶನದ ಇನ್ನೂ ಹೆಸರಿಡದ ಚಿತ್ರದಲ್ಲೂ ಅವಕಾಶ ಸಿಕ್ಕಿದೆ. ಅಜ್ಜಿ ಹೆಸರಲ್ಲಿ ಎಷ್ಟು ‘ಸ್ಯಾಂಡಲ್’ವುಡ್ ಸೇವೆ ಮಾಡುತ್ತಾಳೆ ಎಂದು ಕಾದು ನೋಡೋಣ.
ಯೋಗಿನಿ ಮಲ್ಲಿಕಾ
ಮಲ್ಲಿಕಾಗೆ ಪಶ್ಚಿಮದೆಡೆ ಮೋಹವೋ ಅಥವಾ ಸ್ವತಃ ಅಲ್ಲಿನ ಮಂದಿಗೇ ಮಲ್ಲಿಕಾ ಮೇಲೆ ಒಲವೋ? ಆದರೆ ಈ ’ಮಿಥ್’ ಚೆಲುವೆಗೆ ಲಕ್ ಹೊಡೆದಿರುವುದಂತೂ ಹೌದು. ಡ್ರ್ಯೂ ಹೆರೋಯ್ಟ್ ಅವರ ’ದ ಅಕ್ವೇರಿಯನ್ ಗೋಸ್ಪೆಲ್’ ಚಿತ್ರದಲ್ಲಿ ಅಭಿನಯಿಸುವ ಅವಕಾಶ ಆಕೆಗೆ ದೊರೆತಿದೆ. ಏಸುಕ್ರಿಸ್ತನ ಜೀವನಾಧರಿಸಿದ ಚಿತ್ರವಾದ ಇದರಲ್ಲಿ ಕ್ರಿಸ್ತ ಕಾಣೆಯಾಗಿದ್ದ ಸಂದರ್ಭದ ಕಥಾನಕವಿದೆ. ಕ್ರಿಸ್ತ ಭಾರತದ ಉದ್ದಗಲದಲ್ಲಿ ನಡೆಸಿದ ಪಯಣದಲ್ಲಿ ವಿವಿಧ ಜಾತಿ ಹಾಗೂ ಧರ್ಮಗಳ ಜನರನ್ನು ಸಂದರ್ಶಿಸುತ್ತಾ ಬರುತ್ತಾನೆ. ಅಲ್ಲಿ ಸರಸ್ವತಿ ಎಂಬ ಅವಿವಾಹಿತ ಯೋಗಿನಿಯೊಬ್ಬಳನ್ನು ಭೇಟಿಯಾಗುತ್ತಾನೆ. ಈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವುದು ನಮ್ಮ ಮಾದಕ ಹಿರೋಯಿನ್ ಮಲ್ಲಿಕಾ! ಹಾಲಿವುಡ್ ಟಿಕೆಟ್ ಪಡೆಯಲು ತನ್ನ ಮಾದಕ ವರ್ಚಸ್ಸನ್ನು ತೊರೆದಿರುವುದು ಆಕೆ ತೆತ್ತಿರುವ ಅತ್ಯಲ್ಪ ಮೊತ್ತ ಬಿಡಿ!
ಎನ್.ಕೆ. ಸುಪ್ರಭಾ, ಪ್ರಸಿದ್ಧ ಮೆನನ್