|
ನಗರಗಳ ಅರಾಜಕತೆಯ ಬಗ್ಗೆ, ದೇಶದ ಪ್ರಮುಖ ನಗರಗಳು ಅವನತಿಯ ಅಂಚಿಗೆ ಬಂದು ನಿಂತಿರುವ ಬಗ್ಗೆ ಜನ ಚರ್ಚಿಸುತ್ತಲೇ ಇದ್ದಾರೆ. ನಿಮಗೇನೆನಿಸುತ್ತದೆ?
ನೂರು ಕೋಟಿ ಜನ ಇಷ್ಟಪಟ್ಟೋ, ಅನಿವಾರ್ಯ ವಾಗಿಯೋ ನಗರಗಳೆಡೆಗೆ ವಲಸೆಹೋಗುವುದು ತಮ್ಮ ಉದ್ಧಾರಕ್ಕಿರುವ ಏಕೈಕ ಮಾರ್ಗ ಎಂದೆಣಿಸಿದಾಗ ಇಂತಹದ್ದು ಸಹಜ. ನಮ್ಮ ನಗರಗಳು ಕೊಳೆತು ನಾರುವ ಸ್ಥಿತಿಯಲ್ಲಂತೂ ಇಲ್ಲ, ಆದರೆ, ಬೃಹತ್ ಪ್ರಮಾಣದ ಯೋಜನಾರಹಿತ ವಿಸ್ತರಣೆ ಸಮಸ್ಯೆಯಿಂದಾಗಿ ಅವು ನಲುಗುತ್ತಿವೆ. ಹಾಗಾಗಿ ನಿಮಗೆ ನಗರಗಳು ತೀರಾ ಅಸ್ತವ್ಯಸ್ತವಾಗಿ ಕಾಣುತ್ತವೆ. ಹಾಗೆ ಬದುಕನ್ನು ಅರಸಿ ನಗರಗಳತ್ತ ಬರುವ ವಲಸಿಗರಿಗೆ ಉತ್ತಮ ಮೂಲ ಸೌಕರ್ಯ ಕಲ್ಪಿಸುವುದು ನಗರ ಸ್ಥಳೀಯ ಸಂಸ್ಥೆಗಳಿರಬಹುದು, ರಾಜ್ಯ ಸರ್ಕಾರಗಳಿರಬಹುದು ಅಥವಾ ಭಾರತ ಸರ್ಕಾರವಾಗಿರಬಹುದು, ಅವುಗಳ ಮುಂದೆ ಬಹುದೊಡ್ಡ ಸವಾಲಾಗಿ ಪರಿಣಮಿಸಿವೆ. ಶ್ರೀಮಂತರಿಗೆ ತಮಗೆ ಬೇಕಾದ ಸೌಕರ್ಯಗಳನ್ನು ತಾವೆ ಒದಗಿಸಿಕೊಳ್ಳುವ ಸಾಮರ್ಥ್ಯವಿರುವುದರಿಂದ ಅವರಿಗೆ ಈ ಸಮಸ್ಯೆ ಇರುವುದಿಲ್ಲ. ಆದರೆ, ಕಟ್ಟಡ ನಿರ್ಮಾಣ ವಲಯದಲ್ಲಿ ಕೆಲಸಕ್ಕಾಗಿ ಸೌಲಭ್ಯವಂಚಿತರಾಗಿರುವ ಮಧ್ಯಮವರ್ಗ ಮತ್ತು ಬಡವರಿಗೆ ಅನುಕೂಲ ಒದಗಿಸುವ ಜರೂರು ಇದೆ.
ಮಿತಿಮೀರಿದ ಜನದಟ್ಟಣೆ, ಭಯಾನಕ ಮೂಲಸೌಕರ್ಯ, ಜನಸಂಖ್ಯೆಯ ಅಪಾರ ಒತ್ತಡ ಮುಂತಾದವನ್ನು ಕಂಡ ಬಳಿಕವೂ ನಗರೀಕರಣವನ್ನು ಪ್ರೋತ್ಸಾಹಿಸುವುದು ಅಗತ್ಯವಿದೆಯೇ?
ಇದು ಅಗತ್ಯವಿದೆಯೇ, ಇಲ್ಲವೇ ಎಂಬುದರ ಪ್ರಶ್ನೆಯಲ್ಲ. ಜಾಗತಿಕ ಮಟ್ಟದಲ್ಲಿ 18ನೇ ಶತಮಾನದ ಆರಂಭದ ಹೊತ್ತಿಗೆ ನಗರೀಕರಣ ಕೇವಲ ಶೇ.2ರಷ್ಟು ಪ್ರಮಾಣದಲ್ಲಿತ್ತು. ಆದರೆ, ಇವತ್ತು ಜಗತ್ತಿನ ಅರ್ಧದಷ್ಟು ಜನ ನಗರಗಳಲ್ಲೇ ವಾಸಿಸುತ್ತಿದ್ದಾರೆ. ಭಾರತದಲ್ಲಿ ಇನ್ನೂ ಕೇವಲ ಶೇ.30ರಷ್ಟು ಮಂದಿ ಮಾತ್ರ ನಗರವಾಸಿಗಳಾಗಿದ್ದಾರೆ. ಮುಂದಿನ 25 ವರ್ಷಗಳಲ್ಲಿ ದೇಶದ ಶೇ.50ಕ್ಕೂ ಅಧಿಕ ಜನ ನಗರವಾಸಿಗಳಾಗಲಿದ್ದಾರೆ. ವಿಶ್ವಸಂಸ್ಥೆಯ ಮಾಜಿ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಅವರು ಹೇಳಿದಂತೆ ಇದು ’ನಗರ ಶತಮಾನ’. ಹಾಗಾಗಿ ಈ ನಗರೀಕರಣದಿಂದ ದೂರವಿರುವುದು ಸಾಧ್ಯವಿಲ್ಲದ ಮಾತು. ಅನಿರೀಕ್ಷಿತವಾದ ಈ ಬೃಹತ್ ನಗರೀಕರಣವನ್ನು ಹೇಗೆ ಅನುಕೂಲಕರವಾಗಿ ಮಾಡಿಕೊಳ್ಳುವುದು ಎಂಬುದು ಈಗ ನಮ್ಮ ಮುಂದಿರುವ ಬಿಕ್ಕಟ್ಟು.
ಈಗ 1500 ಅನಧಿಕೃತ ಕಾಲೊನಿಗಳ ಸಕ್ರಮಕ್ಕೆ ಪ್ರಯತ್ನಗಳು ನಡೆಯುತ್ತಿವೆ. ಇದರಿಂದಾಗಿ ದೆಹಲಿ ಮಹಾನಗರದ ಮೇಲಾಗುವ ಪರಿಣಾಮ?
ಆ 1500 ಅನಧಿಕೃತ ಕಾಲೊನಿಗಳಲ್ಲಿ ಸುಮಾರು 40 ಲಕ್ಷ ಜನ ಇದ್ದಾರೆ. ಅಂತಹ ಅಕ್ರಮ ಕಾಲೊನಿ ಗಳಲ್ಲಿರುವ ಎಲ್ಲರೂ ಸರ್ಕಾರಿ ಭೂಮಿಯನ್ನು ಕಬಳಿಸಿಲ್ಲ. ಬಹುತೇಕ ಮಂದಿ ಚಿಕ್ಕಪುಟ್ಟ ಪ್ಲಾಟ್‌ಗಳ ಲೆಕ್ಕದಲ್ಲಿ ಕೃಷಿಭೂಮಿಯನ್ನು ಖರೀದಿಸಿದ್ದಾರೆ. ಆದರೆ, ಕೃಷಿ ಭೂಮಿ ಪರಿವರ್ತನೆಯಾಗಿಲ್ಲದ ಕಾರಣ ಅಂತಹ ಕಾಲೊನಿಗಳು ಅನಧಿಕೃತವೆಂದೇ ಪರಿಗಣಿಸಲಾಗುವುದು. ಹಾಗಂತ ಈ ಜನರನ್ನು ಒಂದೇ ಏಟಿಗೆ ವಾಸಯೋಗ್ಯರಲ್ಲ ಎಂದು ತೀರ್ಮಾನಿಸಲಾಗದು. ಅಥವಾ ಆ 40 ಲಕ್ಷ ಮಂದಿಯನ್ನು ಸರ್ವನಾಶ ಮಾಡಲಾಗುವುದಿಲ್ಲವಲ್ಲ! ಹಾಗಾಗಿ ಈಗಿರುವ ಒಂದೇ ಪರಿಹಾರವೆಂದರೆ, ಈ ಕಾಲೊನಿಗಳೂ ಪೌರಸಂಸ್ಥೆಯ ಯೋಜನೆ ವ್ಯಾಪ್ತಿಗೊಳಪಡುವಂತೆ ಮಾಡಿ, ಎಲ್ಲ ನಾಗರಿಕ ಸೌಕರ್ಯ ದೊರಕುವಂತೆ ನೋಡಿಕೊಳ್ಳುವುದು.
ದೆಹಲಿ ವಿಧಾನಸಭಾ ಚುನಾವಣೆಗಳನ್ನು ಗಮನ ದಲ್ಲಿಟ್ಟುಕೊಂಡು ಯುಪಿಎ ಸರ್ಕಾರ ಭಾರಿ ಪ್ರಮಾಣದ ಸಕ್ರಮ ಆಂದೋಲನ ಹಮ್ಮಿಕೊಂಡಿದೆ ಎಂದು ವಿರೋಧ ಪಕ್ಷಗಳು ಆರೋಪಿಸಿವೆಯಲ್ಲಾ?
ಕಳೆದ ಎರಡು ವರ್ಷಗಳಲ್ಲಿ ವಿವಿಧ ಕೋರ್ಟ್‌ಗಳು ಆದೇಶಿಸಿದ ಅಕ್ರಮ ಕಟ್ಟಡ ತೆರವು, ಒತ್ತುವರಿ ತೆರವು ಮುಂತಾದ ಕಾರಣಗಳಿಂದಾಗಿ ರಾಜಧಾನಿಯ ಜನತೆ ತೀವ್ರ ಸಂಕಷ್ಟ ಎದುರಿಸಿದ್ದಾರೆ. ಅದರಿಂದಾಗಿ ದಿಢೀರ್ ಎತ್ತಂಗಡಿಯಿಂದ ಧೃತಿಗೆಟ್ಟವರಿಗೆ ಕನಿಷ್ಠ ನೆಮ್ಮದಿ ದೊರಕಿಸುವ ಪ್ರಯತ್ನವನ್ನು ಯುಪಿಎ ಸರ್ಕಾರ ಮಾಡುತ್ತಿದೆ. ಕೋರ್ಟ್ ಆದೇಶದಿಂದಾಗಿ ಸಮಸ್ಯೆಗೆ ಸಿಲುಕಿದ ಜನರಿಗೆ ಒಂದಿಷ್ಟು ನೆರವಿನ ಹಸ್ತ ಚಾಚುವ ಸರ್ಕಾರದ ಪ್ರಯತ್ನವನ್ನು ರಾಜಕೀಯಪ್ರೇರಿತ ಎಂಬುದು ತೀರಾ ತಪ್ಪು. ಲಕ್ಷಾಂತರ ಮಂದಿ ಎತ್ತಂಗಡಿಯಾಗುವಾಗ ಯಾವುದೇ ಸರ್ಕಾರವಾಗಲೀ ಕಣ್ಣುಮುಚ್ಚಿಕೊಂಡು ಕೂರುವುದು ಸಾಧ್ಯವೇ?
ಭಾರಿ ಪ್ರಮಾಣದ ತೆರವು ಕಾರ್ಯಾಚರಣೆಯ ಬಳಿಕ ಸರ್ಕಾರ ಏನೋ ಕಣ್ಣೊರೆಸುವ ಪ್ರಯತ್ನ ಮಾಡಿತು. ನಿಮಗೇನನಿಸುತ್ತದೆ?
ಹಾಗಲ್ಲ, ತೆರವು ಕಾರ್ಯಾಚರಣೆ ಆರಂಭವಾದಾಗಲೇ ಹಲವು ವಿಷಯಗಳನ್ನು ಸಕ್ರಮಗೊಳಿಸಲು ನಮ್ಮ ಸರ್ಕಾರ ಕಾನೂನು ತಿದ್ದುಪಡಿ ತಂದಿತು. ಹಾಗೇ ಕಾನೂನು ನಿಯಮಾವಳಿಗಳನ್ನು ಅಂತಿಮಗೊಳಿಸುವುದು ವಿಳಂಬವಾದಾಗ, ಮಧ್ಯಂತರ ಆದೇಶವೊಂದನ್ನು ಹೊರಡಿಸಿ ಹಲವು ಜನರು ತಮ್ಮ ಆಸ್ತಿ ಉಳಿಸಿಕೊಳ್ಳಲು ಸರ್ಕಾರ ನೆರವಾಯಿತು. ಹಾಗೆ ನೋಡಿದರೆ, ತೆರವು ಕಾರ್ಯಾಚರಣೆ ಅದು ನಡೆಯುತ್ತಿದ್ದ ವರಸೆಯಲ್ಲೇ ಮುಂದುವರಿಯಲಿ ಎಂದು ಯಾವ ಪಕ್ಷವೂ ಬಯಸಿರಲಿಕ್ಕಿಲ್ಲ. ಕಾನೂನು ತಿದ್ದುಪಡಿಗಾಗಿ ನಾನು ಸಂಸತ್‌ನಲ್ಲಿ ಗೊತ್ತುವಳಿ ಮಂಡಿಸಿದಾಗೆಲ್ಲಾ ಎಲ್ಲಾ ಪಕ್ಷಗಳೂ ಒಕ್ಕೊರಲಿನ ಬೆಂಬಲ ಸೂಚಿಸಿರುವುದೇ ಇದಕ್ಕೆ ಸಾಕ್ಷಿ. ಹಾಗಾಗಿ ಈ ನಿಟ್ಟಿನಲ್ಲಿ ಒಂದು ನಿರ್ಧಾರ ಕೈಗೊಂಡದ್ದಕ್ಕಾಗಿ ಕಾಂಗ್ರೆಸ್‌ಗೆ ಶ್ರೇಯಸ್ಸು ಸಲ್ಲಬೇಕಾದರೂ ಆ ಪ್ರಯತ್ನವನ್ನು ಬೆಂಬಲಿಸಿದಕ್ಕಾಗಿ ಎಲ್ಲಾ ಪಕ್ಷಗಳೂ ಅದರಲ್ಲಿ ಪಾಲುದಾರರೇ.
ಹಾಗಾದರೆ, ತೆರವು ಕಾರ್ಯಾಚರಣೆ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆಯೇ?
ಚುನಾವಣೆ ಇರಲಿ, ಬಿಡಲಿ, ಯಾವುದೇ ಸರ್ಕಾರ ಭಾರಿ ಸಂಖ್ಯೆಯ ಎತ್ತಂಗಡಿಗೆ ಮೂಕ ಸಾಕ್ಷಿಯಾಗಿರಲು ಸಾಧ್ಯವಿಲ್ಲವಲ್ಲ. ದೆಹಲಿಯನ್ನು ದಿನ ಬೆಳಗಾಗುವುದರಲ್ಲಿ ಕಟ್ಟಿದ್ದಲ್ಲ, ಹಾಗೇ ಅದನ್ನು ದಿನ ಬೆಳಗಾಗುವುದರಲ್ಲಿ ಸರಿಪಡಿಸುವುದು ಕೂಡ ಸಾಧ್ಯವಿಲ್ಲ. ಜೊತೆಗೆ ಸರಿಪಡಿಸುವುದು ಎಂದರೆ ಕಟ್ಟಡಗಳನ್ನು ನೆಲಸಮಗೊಳಿಸುವುದು ಮತ್ತು ತೆರವುಗೊಳಿಸುವುದು ಎಂದೇನಲ್ಲ. ಒಂದು ವೇಳೆ ಭಾರತ ಪ್ರಜಾಪ್ರಭುತ್ವ ರಾಷ್ಟ್ರವಾಗಿರದೇ ಇದ್ದಿದ್ದರೂ ಇಂತಹದ್ದೆಲ್ಲಾ ನಡೆಯುತ್ತಿರಲಿಲ್ಲ. ಹಾಗಿರುವಾಗ ಇನ್ನು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇಂತಹದ್ದು ನಡೆದೀತೇ? ಪ್ರಜಾಪ್ರಭುತ್ವ ರಾಷ್ಟ್ರವಲ್ಲದೇ ಇದ್ದರೂ ಇಷ್ಟೊಂದು ಭಾರಿ ಪ್ರಮಾಣದ ಎತ್ತಂಗಡಿ ಸಾಧ್ಯವಿರಲಿಲ್ಲ!
ಇದೊಂದು ರೀತಿಯ ವಿರೋಧಾಭಾಸದ ಪರಿಸ್ಥಿತಿ ಎನಿಸುತ್ತಿದೆಯೇ? ಒಂದು ಕಡೆ ಚುನಾವಣೆ, ಮತ್ತೊಂದು ಕಡೆ ನಿಮಗೆ ಇಷ್ಟವಿರಲಿ ಬಿಡಲಿ ಕೋರ್ಟ್ ಆದೇಶ ಪಾಲನೆಗಾದರೂ ಎತ್ತಂಗಡಿ ಮಾಡಬೇಕು ಎಂದರೆ ಅದು ತೀರಾ ಜನವಿರೋಧಿ ಎಂಬಂತೆ ಜನ ಭಾವಿಸುತ್ತಾರಲ್ಲವೇ?
ನಾನು ಮತ್ತೆ ಪುನರುಚ್ಛರಿಸುವುದಾದರೆ, ಕಳೆದ ಎರಡು ವರ್ಷಗಳಲ್ಲಿ ನಡೆದ ಕಟ್ಟಡ ತೆರವು ಕಾರ್ಯಾಚರಣೆ ಕೇವಲ ಒಂದು ಸಮಸ್ಯೆ ಮಾತ್ರವಲ್ಲ. ದೆಹಲಿಯಂತಹ ಮಹಾನಗರದ ದೈತ್ಯಾಕಾರದ ಮಾನವೀಯ ಸಂದಿಗ್ಧತೆಗಳ ಒಂದು ಮುಖವಷ್ಟೇ. ಹಾಗಾಗಿ ಮತ ಬರಲಿ, ಬರದೇ ಇರಲಿ ಸರ್ಕಾರಗಳು ಅಂತಹ ಸಂದರ್ಭದಲ್ಲಿ ಮಧ್ಯಪ್ರವೇಶ ಮಾಡಲೇಬೇಕಾಗುತ್ತದೆ. ಆ ಮೂಲಕ ಅಂತಹ ಕಾರ್ಯಾಚರಣೆಗಳಿಂದಾಗಿ ಬೃಹತ್ ಪ್ರಮಾಣದ ಎತ್ತಂಗಡಿಯಾಗಲಿ, ಜನರನ್ನು ಆತಂಕಕ್ಕೀಡುಮಾಡುವುದನ್ನು ತಡೆಯಬೇಕಾಗುತ್ತದೆ.
ದೆಹಲಿ ಮಾಸ್ಟರ್ ಪ್ಲಾನ್-2021 ಯೋಜನೆಯಿಂದ ಯಾರಿಗೂ ಪ್ರಯೋಜನವಿಲ್ಲ ಎಂದು ನಾಗರಿಕ ಹಿತರಕ್ಷಣಾ ಒಕ್ಕೂಟಗಳು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿವೆಯಲ್ಲ?
ಹೌದು, ಕೆಲವು ನಾಗರಿಕ ಹಿತರಕ್ಷಣಾ ಒಕ್ಕೂಟಗಳು ಕೋರ್ಟಿನ ಮೆಟ್ಟಿಲೇರಿವೆ. ಆದರೆ, ದೆಹಲಿ ಮಾಸ್ಟರ್ ಪ್ಲಾನ್‌ನಂತಹ ಉಪ ಕಾನೂನುಗಳನ್ನು ಮಾಡುವ ಭಾರತ ಸರ್ಕಾರದ ಪರಮಾಧಿಕಾರ ಪ್ರಶ್ನಾತೀತ. ಇದಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿಲ್ಲ. ಹಾಗಾಗಿ ನಮ್ಮ ಯೋಜನೆ ಅಭಾದಿತ.
ಅದಕ್ಕೆ ಪ್ರತಿಕ್ರಿಯೆಯಾಗಿ ದೆಹಲಿ ಮಹಾನಗರ ಪಾಲಿಕೆ (ಎಂಸಿಡಿ) ವ್ಯಾಪಾರಿಗಳ ಮನವೊಲಿಸುವ ಪ್ರಯತ್ನವಾಗಿ ನಗರದ 1,031 ರಸ್ತೆಗಳಲ್ಲಿ ವಾಣಿಜ್ಯ ಚಟುವಟಿಕೆಗೆ ಮುಕ್ತ ಅವಕಾಶ ನೀಡಿತೇ?
ದೆಹಲಿ ಮಹಾನಗರ ಪಾಲಿಕೆ ತನ್ನಲ್ಲಿರುವ ದಾಖಲೆ, ಅಂಕಿ-ಅಂಶಗಳ ಆಧಾರದ ಮೇಲೆ ನೂರಾರು ರಸ್ತೆಗಳನ್ನು ವಾಣಿಜ್ಯ ಚಟುವಟಿಕೆಗೆ ಮುಕ್ತಗೊಳಿಸಿದೆ. ಅದೇನೂ ರಾತ್ರೋರಾತ್ರಿ ನಡೆದ ಕಾರ್ಯವಲ್ಲ. ಎಂಸಿಡಿ ತನ್ನ ಬಳಿ ಎಲ್ಲಾ ದಾಖಲೆಗಳನ್ನೂ ಇಟ್ಟುಕೊಂಡೇ ಈ ಕಾರ್ಯ ಮಾಡಿದೆ. ಹಾಗಾಗಿ ರಸ್ತೆಗಳ ವಾಣೀಜ್ಯೀಕರಣದಲ್ಲಿ ಯಾವುದೇ ಮನವೊಲಿಕೆ ಪ್ರಯತ್ನವಿಲ್ಲ. ಯಾವುದೇ ಸರ್ಕಾರವಾಗಲೀ, ನಗರ ಸ್ಥಳೀಯ ಸಂಸ್ಥೆಯಾಗಲಿ ಪರಿಸ್ಥಿತಿಗೆ ತಕ್ಕಂತೆ ವರ್ತಿಸಬೇಕಾಗುತ್ತದೆ. ಅದನ್ನು ಬಿಟ್ಟು ತನ್ನದೇ ಲೋಕದಲ್ಲಿ ಮುಳುಗುವುದು ಸಾಧ್ಯವಿಲ್ಲವಲ್ಲ!
ಮಾಸ್ಟರ್ ಪ್ಲಾನ್‌ನ ಎಸ್‌ಒಎಚ್‌ಒ (ಪುಟ್ಟಮನೆ/ ಕಚೇರಿ) ಪ್ರಕಾರ, ವೈದ್ಯರು, ವಕೀಲರು, ಕಟ್ಟಡ ವಿನ್ಯಾಸಕರು ಮತ್ತು ಲೆಕ್ಕಪತ್ರ ತಪಾಸಣೆಗಾರರು ಜನವಸತಿ ಪ್ರದೇಶಗಳಲ್ಲೇ ತಮ್ಮ ವ್ಯವಹಾರ ನಡೆಸಲು ಅವಕಾಶವಿದೆ. ಆದರೆ, ಒಂದು ನಿರ್ದಿಷ್ಟ ಪ್ರದೇಶದಲ್ಲಿ ಎಷ್ಟು ಮಂದಿ ಆ ಅವಕಾಶ ಪಡೆಯಬಹುದು ಎಂಬ ಬಗ್ಗೆ ಸ್ಪಷ್ಟತೆ ಇಲ್ಲ?
ಕೇವಲ ಸಕ್ರಮ ಪ್ರಕ್ರಿಯೆ ಮಾತ್ರ ಎಲ್ಲಾ ಸಮಸ್ಯೆಗಳಿಗೂ ಉತ್ತರವಲ್ಲ ಎಂಬುದನ್ನು ನಾವು ಒಪ್ಪಿಕೊಳ್ಳುತ್ತೇನೆ. ಆದರೆ, ಅಂತಹ ಪ್ರದೇಶಗಳನ್ನು ಸಕ್ರಮಗೊಳಿಸದೇ ಇದ್ದರೆ ಅಲ್ಲಿಗೆ ಒಳಚರಂಡಿ, ಕುಡಿಯುವ ನೀರು, ಪಾದಚಾರಿ ಮಾರ್ಗ, ಶಾಲೆ, ಆಸ್ಪತ್ರೆಗಳಂತಹ ನಾಗರಿಕ ಸೌಲಭ್ಯಗಳನ್ನು ಕಲ್ಪಿಸುವುದು ಕಷ್ಟ. ಹಾಗಿರುವಾಗ ದೆಹಲಿಯ ಅರ್ಧದಷ್ಟು ಜನಸಂಖ್ಯೆ, ಅಂದರೆ ಸುಮಾರು 70 ಲಕ್ಷ ಜನ ಇನ್ನೂ ಅಕ್ರಮ ಕಾಲೊನಿ ಅಥವಾ ಕೊಳಗೇರಿಗಳಲ್ಲೇ ವಾಸಿಸುತ್ತಿರುವಾಗ ಅವರ ಸ್ಥಿತಿ ಏನಾಗಲಿದೆ ಯೋಚಿಸಿ. ಕಾನೂನು, ಕಾಯ್ದೆ ರೂಪಿಸುವಾಗ ನಾನು ಅವರನ್ನೂ ಗಣನೆಗೆ ತೆಗೆದುಕೊಳ್ಳಲೇಬೇಕಲ್ಲವೇ? ಅವರು ಅಸ್ತಿತ್ವದಲ್ಲೇ ಇಲ್ಲ ಎಂಬಂತೆ ವರ್ತಿಸಲಾಗದು.
ಆದರೆ, ಎಸ್‌ಒಎಚ್‌ಒ ಪರಿಕಲ್ಪನೆ ಸರ್ಕಾರದ ನಗರ ಪರಿಮಿತಿ ನಿಯಮಾವಳಿಗಳಿಗೇ ವ್ಯತಿರಿಕ್ತವಾಗಿಲ್ಲವೇ?
ಈ ಮೊದಲು ಕೂಡ ಮಾಸ್ಟರ್ ಪ್ಲಾನ್‌ನಲ್ಲಿ ವಕೀಲರು, ಲೆಕ್ಕಪತ್ರ ತಪಾಸಣಾಗಾರರಿಗೆ ವಸತಿ ಪ್ರದೇಶದ ತಮ್ಮ ಮನೆಗಳಲ್ಲೇ ಕಾರ್ಯನಿರ್ವಹಿಸುವ ಅವಕಾಶ ನೀಡಿತ್ತು. ಅದರೊಂದಿಗೆ ನಾವು ಐಟಿ ಉದ್ಯೋಗಿಗಳನ್ನೂ ಸೇರಿಸಿದ್ದೇವೆ. ಈಗ ಮ್ಯಾನೇಜ್‌ಮೆಂಟ್ ಸಲಹೆಗಾರರನ್ನೂ ಸೇರಿಸಲಿದ್ದೇವೆ. ಈ ತರಹದ ಚಟುವಟಿಕೆಗಳಿಂದಾಗಿ ಜನವಸತಿ ಪ್ರದೇಶದ ರಸ್ತೆಗಳಲ್ಲಿ ಸಂಚಾರ ವ್ಯತ್ಯಯವೇನೂ ಆಗುವುದಿಲ್ಲವಲ್ಲ. ಒಬ್ಬ ಸಾಮಾನ್ಯ ಮಧ್ಯಮವರ್ಗದ ವೃತ್ತಿನಿರತ ಪ್ರತ್ಯೇಕ ಮನೆ ಮತ್ತು ಕಚೇರಿ ಹೊಂದುವುದು ಕಷ್ಟ. ಅದೂ ದೆಹಲಿಯಲ್ಲಂತೂ ನಿರೀಕ್ಷಿಸುವಂತಿಲ್ಲ. ಹಾಗಾಗಿ ಜಗತ್ತಿನೆಲ್ಲೆಡೆಯಂತೆ ಇಲ್ಲೂ ಅಂತಹದ್ದಕ್ಕೆ ಅವಕಾಶ ನೀಡಲಾಗಿದೆ. ದೆಹಲಿಯಲ್ಲೂ ಈ ಮೊದಲು ಅದಕ್ಕೆ ಅವಕಾಶವಿತ್ತು, ಇದೇನೂ ಹೊಸದಲ್ಲ, ಅಥವಾ ಅಕ್ರಮವಲ್ಲ. ಮ್ಯಾನೇಜ್‌ಮೆಂಟ್ ಸಲಹೆಗಾರರಂತಹ ಹೊಸ-ಹೊಸ ವೃತ್ತಿಗಳು ಈಗ ಹುಟ್ಟಿಕೊಳ್ಳುತ್ತಿವೆ. ಆದರೆ, 1990ರಲ್ಲಿ ಮಾಸ್ಟರ್ ಪ್ಲಾನ್ ಸಿದ್ಧಪಡಿಸಿದ್ದಾಗ ಅಂತಹ ವೃತ್ತಿ ಇರಲಿಲ್ಲ. ಅಂತಹವು ಎಲ್ಲಿಯರೆಗೆ ಸಂಚಾರ ದಟ್ಟಣೆಗೆ ಕಾರವಾಗುವುದಿಲ್ಲವೋ, ಜನವಸತಿ ಪ್ರದೇಶದ ಪ್ರಶಾಂತತೆಗೆ ಧಕ್ಕೆ ತರುವುದಿಲ್ಲವೋ ಅಲ್ಲಿಯವರೆಗೆ ಈ ಅವಕಾಶವಿದ್ದೇ ಇರುತ್ತದೆ.
ಟಿಎಸ್‌ಐ |