|
ಒಮ್ಮೆ ತನ್ನ ಬಳಿ ಬೂಟ್ ಪಾಲಿಶ್ ಮಾಡಿಸಲು ಬಂದಿದ್ದ ವ್ಯಕ್ತಿಯೊಬ್ಬ ನೀಡಿದ ಸಿಗರೇಟಿನ ಒಂದು ಧಮ್ ಎಳೆದ ಬಳಿಕ ಆತನಿಗೆ ಮತ್ತೆ-ಮತ್ತೆ ಆ ಸಿಗರೇಟ್ ಸೇದಬೇಕು ಎನಿಸುತ್ತಿದೆ. ಹಾಗೊಂದು ವೇಳೆ ಸಿಗೆರೇಟ್ ಸಿಗದೇ ಇದ್ದರೆ ಆತನಿಗೆ ಜೀವನವೇ ದುಸ್ತರವೆನಿಸತೊಡಗುತ್ತದೆ. ಆತ ಬಿಹಾರದ ಕೈಮೂರ್ ಜಿಲ್ಲೆಯ ಭಾರ್ಖಾರ್ ಹಳ್ಳಿಯ ಭೋಲಾ ರಾಮ್. ಚಪ್ಪಲಿ ಹೊಲಿಯುವ ಕೆಲಸ ಮಾಡಿಕೊಂಡಿದ್ದ ಆತನಿಗೆ ಈ ಸಿಗರೇಟಿನ ಸಹವಾಸ ಆರಂಭವಾದ ಬಳಿಕ ಕೆಲಸದಲ್ಲಿ ಆಸಕ್ತಿ ಕಳೆದುಕೊಂಡ, ದುಡಿದ ಅಷ್ಟಿಷ್ಟು ಹಣವೂ ಸಿಗರೇಟಿನ ಪಾಲಾಗತೊಡಗಿತು. ಅಂಗಡಿ ಹಾಳುಬಿದ್ದು ಬಾಗಿಲು ಮುಚ್ಚಿದ, ಹಾಗೇ ಮನೆಮಂದಿಯನ್ನೂ ಬಿಟ್ಟ, ತನ್ನ ಹತ್ತು ಮಕ್ಕಳನ್ನೂ ತೊರೆದ, ಈಗ ಸಿಗರೇಟಿಗಾಗಿಯೇ ಬದುಕಿದ್ದಾನೆ, ಅದಕ್ಕಾಗಿ ಹಣ ಹೊಂದಿಸುವ ಏಕೈಕ ಉದ್ದೇಶದಿಂದ ಬೀದಿ- ಬೀದಿ ಅಲೆದು ಚಿಂದಿ ಆಯ್ದು ಮಾರಿ ಬಂದ ಹಣದಲ್ಲಿ ’ಜೀವನ’ ಸೇದುತ್ತಿದ್ದಾನೆ!
ಇತ್ತೀಚೆಗೆ ಆತ ತನ್ನ ’ಜೀವನ’ ಪದ್ಧತಿ ಬದಲಿಸಿಕೊಂಡಿದ್ದಾನೆ! ಹೌದು ಮೊದಲಿನ ರೀತಿ ಸಿಗರೇಟ್ ಸೇದುವ ಬದಲು ಈಗ ಆತ ಇಂಜೆಕ್ಷನ್ ಚುಚ್ಚಿಕೊಳ್ಳುವ ಮೂಲಕ ದೇಹದ ದಾಹ ತೀರಿಸುತ್ತಿದ್ದಾನೆ! ಚಿಂದಿ ಆಯ್ದು ಸಂಪಾದಿಸುವ 100-125 ರೂಪಾಯಿಯನ್ನು ಪೂರಾ ’ಮಾದಕ ವಸ್ತು’ವಿನ ಮೇಲೇ ವ್ಯಯಿಸುತ್ತಿದ್ದಾನೆ. ಇಂಜೆಕ್ಷನ್ ಚುಚ್ಚಿಕೊಳ್ಳಲು ಆರಂಭಿಸಿ ಹಲವು ದಿನಗಳೇ ಉರುಳಿರುವುದರಿಂದ ಆತನ ದೇಹದ ಬಹುತೇಕ ಭಾಗ ಇಂಜೆಕ್ಷನ್ ಚುಚ್ಚಿದ ಗುರುತುಗಳಿಂದಲೇ ತುಂಬಿಹೋಗಿದೆ. ಯಾವ ನರವೂ ’ಮಾದಕ ಸ್ಪರ್ಶ’ದಿಂದ ಹೊರತಾಗಿಲ್ಲ, ಮತ್ತು ಇನ್ನಷ್ಟು ಇಂಜೆಕ್ಷನ್ ತಾಳಿಕೊಳ್ಳುವ ಸಾಮರ್ಥ್ಯವನ್ನೂ ಪಡೆದಿಲ್ಲ!
ಹಾಗೆ ನೋಡಿದರೆ, ಇದು ಭೋಲಾನೊಬ್ಬನ ಕಥೆಯಲ್ಲ. ಕೈಮೂರ್ ಮತ್ತು ರೊಹ್ಟಾಸ್‌ನ ಬೀದಿ- ಬೀದಿಗಳಲ್ಲೂ ತಮ್ಮನ್ನು ತಾವೇ ಮಾದಕ ಜಾಲದಲ್ಲಿ ಬಂಧಿಯಾಗಿಸಿಕೊಂಡಿರುವ ಇಂತಹ ನೂರಾರು ಮಂದಿ ಭೋಲಾಗಳು ಸಿಗುತ್ತಾರೆ. ಅವರೆಲ್ಲಾ ಬಹುತೇಕ ಈಗಾಗಲೇ ಮಾದಕ ಲೋಕದಲ್ಲಿ ಬಹುದೂರ ಸಾಗಿದ್ದು, ತಮ್ಮ ಪ್ರಜ್ಞೆಯ ಮತ್ತು ಯೋಚನಾ ಕ್ರಮದ ಮೇಲೆ ಹಿಡಿತವನ್ನೇ ಕಳೆದುಕೊಂಡಿದ್ದಾರೆ. ಹಾಗಾಗಿ ಅವರ ದೈಹಿಕ ಸಹಜ ವಾಂಛೆಗಳು ಹದ್ದುಮೀರಿ ಕೆರಳಿ ನಿಂತಿವೆ!
ಅಲ್ಲಿನ ಬಸ್ ನಿಲ್ದಾಣದಲ್ಲಿ ನಾವು ಭೇಟಿಯಾದ ಮಾದಕ ದ್ರವ್ಯ ವ್ಯವಹಾರದ ಮಧ್ಯವರ್ತಿ ಪ್ರಮೋದ್ ಎಂಬಾತ ಅದಾಗಲೇ ಇಂಜೆಕ್ಷನ್ ತೆಗೆದುಕೊಳ್ಳಲು ತಡಬಡಿಸುತ್ತಿದ್ದ. ನಾವು ಮಾತಿಗೆ ಎಳೆದಾಗ ಆತ, ಎರಡು ನಿಮಿಷ ಮಾತನಾಡುವಷ್ಟೂ ತಾಳ್ಮೆ ವಹಿಸದೆ ಇಂಜೆಕ್ಷನ್ ತಗೋಬೇಕಿದೆ. ಅದಕ್ಕೆ ಅಡ್ಡಿಪಡಿಸಬೇಡಿ. ಹಾಗೇನಾದರೂ ಮಾಡಿದ್ರೆ ನಿಮ್ಮನ್ನು ಸಿಗಿದುಹಾಕ್ತೀನಿ ಎಂದು ಬೆದರಿಸಿದ.
ಈ ಭಾಗದಲ್ಲಿ ಮಾದಕ ವ್ಯಸನಿಗಳು ಯಾವ ಪರಿಯಲ್ಲಿ ಬದಲಾಗಿದ್ದಾರೆ, ಎಂತಹ ಹಿಂಸಾ ಕೃತ್ಯಕ್ಕೂ ಸಜ್ಜಾಗಿದ್ದಾರೆ ಎಂಬುದಕ್ಕೆ ಇದೊಂದು ನಿದರ್ಶನವಷ್ಟೇ! ಮಾದಕ ವ್ಯಸನಿಗಳು ಹಣಕ್ಕಾಗಿ ಕಳವು, ಜೇಬುಗಳ್ಳತನ, ದರೋಡೆ ಮಾಡುವುದು ಸಾಮಾನ್ಯವಾಗಿಬಿಟ್ಟಿದೆ. ಸುತ್ತಮುತ್ತಲ ಜಿಲ್ಲೆಗಳಲ್ಲಿ ಕೂಡ ಈ ಜಾಲ ವಿಸ್ತರಿಸಿದ್ದು, ನೆರೆಯ ಉತ್ತರಪ್ರದೇಶದ ಭೋಜ್‌ಪುರ, ಚಾಂದೌಲಿ, ಘಾಜಿಪುರ್, ಮುಘಲ್‌ಸರಯ್, ಜಾಮನಿಯಾ ಜಿಲ್ಲೆಗಳಲ್ಲಿ ವ್ಯಾಪಕವಾಗಿದೆ. ಈ ಪ್ರದೇಶದ ಜನರ ಆರೋಗ್ಯ ಮತ್ತು ಆರ್ಥಿಕ ಸಾಮರ್ಥ್ಯವನ್ನು ಮುಕ್ಕುತ್ತಿರುವ ಮತ್ತೊಂದು ಮಹಾಮಾರಿ ಎಂದರೆ ಏಡ್ಸ್!
ಬ್ರಿಟಿಷರ ಕಾಲದಲ್ಲಿ ಘಾಜಿಪುರ್‌ನಲ್ಲಿ ದೇಶದ ಅತಿದೊಡ್ಡ ಅಫೀಮು ಕಾರ್ಖಾನೆ ಇತ್ತು. ಆ ಕಾರ್ಖಾನೆ ಮುಚ್ಚಿದ ಬಳಿಕ ಮಾದಕ ದ್ರವ್ಯ ಮಾಫಿಯಾ ಅಫೀಮಿನಿಂದ ತಯಾರಿಸುವ ಹೆರಾಯಿನ್ ಮಾರಾಟ ಮಾಡಲು ತೊಡಗಿತು. ಹೆರಾಯಿನ್ ಮಾರಾಟದಿಂದ ಕೋಟಿಗಟ್ಟಲೆ ಗಳಿಸಬಹುದು ಎಂಬುದನ್ನ ಕಂಡುಕೊಂಡ ಅದು ನಂತರದ ದಿನಗಳಲ್ಲಿ ಸ್ಥಳೀಯ ಜನರನ್ನು ಕೂಡ ತನ್ನ ಮಾದಕ ತೆಕ್ಕೆಗೆ ಸೆಳೆದುಕೊಂಡಿತು.
90ರ ದಶಕದಲ್ಲಿ ಇಲ್ಲಿನ ಟೀ ಅಂಗಡಿಯೊಂದರ ಮುಂದೆ ಟೀ ಕುಡಿಯುವುದಕ್ಕಾಗಿ ಜನ ಹಗಲೂ- ರಾತ್ರಿಯೆನ್ನದೆ ಸರದಿ ಸಾಲಿನಲ್ಲಿ ನಿಲ್ಲುತ್ತಿದ್ದ ಪ್ರಕರಣ ಮಾದಕ ದ್ರವ್ಯ ಜಾಲ ಯಾವ ಮಟ್ಟಿಗೆ ಇಲ್ಲಿ ವಿಸ್ತರಿಸಿದೆ ಎಂಬುದಕ್ಕೆ ಒಂದು ನಿದರ್ಶನ. ಆ ಅಂಗಡಿಯೊಂದರ ಮುಂದೆಯೇ ನೂರಾರು ಜನ ಟೀಗಾಗಿ ಮುಗಿಬೀಳುತ್ತಿದ್ದರು. ಕಡೆಗೆ ಆ ಅಂಗಡಿ ಎಷ್ಟು ಜನಪ್ರಿಯವಾಯಿತು ಎಂದರೆ ಆ ಅಂಗಡಿಯ ಟೀ ರುಚಿಯ ರಹಸ್ಯದ ಬಗ್ಗೆ ಅನುಮಾನ, ಶಂಕೆಗಳು, ಊಹಾಪೋಹಗಳು ಹರಿದಾಡತೊಡಗಿದವು. ಆಗ ಸ್ವತಃ ಜಿಲ್ಲಾಧಿಕಾರಿಯೇ ಅಂಗಡಿಯ ಟೀ ರುಚಿ ನೋಡಿ ಅದರ ಗುಟ್ಟು ಬಯಲು ಮಾಡಬೇಕಾಯಿತು. ಆಗ ಅಂಗಡಿ ಮಾಲೀಕ ಟೀನಲ್ಲಿ ಮಾದಕ ದ್ರವ್ಯ ಬೆರೆಸುತ್ತಿದ್ದುದು ಬಯಲಾಯಿತು!
ಮಾದಕ ವ್ಯಸನದ ಪಾಠ ಆರಂಭವಾಗುವುದೇ ಅಫೀಮು ಸೇದುವುದರಿಂದ. ಬಳಿಕ ಹೆರಾಯಿನ್ ಸೇವನೆ, ಆ ನಂತರ ಇಂಜೆಕ್ಷನ್ ಮೂಲಕ ನೇರವಾಗಿ ದೇಹಕ್ಕೆ ಮದವೇರಿಸುವುದು! ಆದರೆ, ಇಂತಹ ಜಾಲದಲ್ಲಿ ಬಂಧಿಗಳಾಗಿರುವ ಇಡೀ ಈ ಪ್ರದೇಶದ ಜನರ ಬದುಕಿನ ಮತ್ತೊಂದು ದುರಂತವೆಂದರೆ, ಗಂಡಸರು ಮಾದಕ ವ್ಯಸನಿಗಳಾಗಿ ದುಡಿಮೆ, ಮನೆ-ಮಠ ಬಿಟ್ಟು ಬೀದಿಪಾಲಾದ ಮೇಲೆ ಮಹಿಳೆಯರ ಹೆಗಲ ಮೇಲೆ ಮನೆ ನಿರ್ವಹಣೆಯ ಹೊಣೆ ಬಿತ್ತು. ಅನಕ್ಷರಸ್ಥ ಮತ್ತು ಬಡ ಮಹಿಳೆಯರು ಬದುಕಿನ ಹಾದಿ ಸವೆಸಲು ವೇಶ್ಯಾವಾಟಿಕೆಯ ಕಸುಬಿಗೆ ಇಳಿಯುವ ದುರಂತ ಎದುರಾಯಿತು. ಈ ಪ್ರದೇಶದ ಮೂಲಕ ಹಾದುಹೋಗುವ ಜಿಟಿ ಹೆದ್ದಾರಿ ಕೂಡ ಅದಕ್ಕೆ ಪೂರಕವಾಯಿತು. ಹೆದ್ದಾರಿಯಲ್ಲಿ ಸಾಗುವ ಲಾರಿಗಳೇ ವೇಶ್ಯಾವಾಟಿಕೆಯ ಅಡ್ಡಾಗಳಾದವು. ಮಹಿಳೆಯರು ಕೈಮೂರ್ ಮತ್ತು ಚಾಂದೌಲಿಯಲ್ಲಿ ಲಾರಿ ಏರಿ ಗಯಾ ಜಿಲ್ಲೆಯಲ್ಲಿ ಇಳಿಯುತ್ತಾರೆ. ಈ ’ಫ್ಲೈಯಿಂಗ್ ಪರಸಂಗ’ ಏಡ್ಸ್‌ನ್ನೂ ಬಳುವಳಿಯಾಗಿ ಕೊಡುತ್ತಿದೆ. ಪರಿಣಾಮ ಮಾದಕ ವ್ಯಸನಿಗಳಂತೆಯೇ ಏಡ್ಸ್ ಸೋಂಕಿತರ ಸಂಖ್ಯೆ ಕೂಡ ಇಲ್ಲಿ ಏರುಗತಿಯಲ್ಲಿದೆ. ಹಾಗೇ ಜೀವನದ ಒಂದು ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಈ ದುರಂತದ ಮುಂದಿನ ಹಂತವೆಂದರೆ ಈ ಎರಡೂ ವ್ಯಸನಗಳು ಪರಸ್ಪರ ಕೈಜೋಡಿಸುವುದು. ಏಡ್ಸ್‌ಪೀಡಿತರು ದೇಹಕ್ಕೆ ಹುಮ್ಮಸ್ಸು ತುಂಬಲು ಇಂಜೆಕ್ಷನ್ ತೆಗೆದುಕೊಳ್ಳುವುದು, ಇಂಜೆಕ್ಷನ್ ತೆಗೆದುಕೊಳ್ಳುವವರು ದೇಹದ ದಾಹ ತಣಿಸಲು ವೇಶ್ಯೆಯರ ಸಂಗ ಮಾಡುವುದು ಮಾರಣಾಂತಿಕ ಮೈತ್ರಿಗೆ ಕಾರಣವಾಗಿಬಿಟ್ಟಿವೆ.
ಇಂತಹ ಅವನತಿ ಪ್ರಪಾತದಲ್ಲಿರುವ ಪ್ರದೇಶವನ್ನು ನಮ್ಮ ಸಂಸತ್ತಿನಲ್ಲಿ ಪ್ರತಿನಿಧಿಸುತ್ತಿರುವ ವ್ಯಕ್ತಿ ಕೇಂದ್ರ ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಚಿವೆಯಾಗಿರುವ ಮೀರಾ ಕುಮಾರ್ ಎಂಬುದಕ್ಕೆ ವಿಪರ್ಯಾಸಕರ ಸಂಗತಿ ಬೇರೊಂದು ಇರಲು ಸಾಧ್ಯವೇ?!
ಒಂದೆಡೆ ಮಾದಕ ವ್ಯಸನ ಮತ್ತು ಏಡ್ಸ್ ಪೀಡೆಗಳೆರಡೂ ಈ ಪ್ರದೇಶದಲ್ಲಿ ಮಿತಿಮೀರಿ ವೃದ್ಧಿಸುತ್ತಿವೆ. ಹಾಗೇ ಅಂತಹದ್ದರಿಂದೆಲ್ಲಾ ಜನರನ್ನು ಮುಕ್ತಿಗೊಳಿಸಿ ಅವರಿಗೆ ಹೊಸ ಬದುಕನ್ನು ಕಲ್ಪಿಸಬೇಕಾಗಿದ್ದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣದ ಸಚಿವೆಯ ನಿರ್ಲಕ್ಷ್ಯ ಕೂಡ ಏರುಗತಿಯಲ್ಲೇ ಇದೆ ಎಂಬುದು ದುರಂತ. ಈ ಮಾತಿಗೆ ಕಳೆದ ಐದು ವರ್ಷಗಳ ಕೇಂದ್ರ ಬಜೆಟ್‌ನಲ್ಲಿ ಈ ಇಲಾಖೆಗೆ ನೀಡಿರುವ ಅನುದಾನವೇ ಸಾಕ್ಷಿ. 2002-03ನಲ್ಲಿ 25.5 ಕೋಟಿ ರೂಪಾಯಿ ಅನುದಾನದಲ್ಲಿ ಇಲಾಖೆ 320 ಯೋಜನೆಗಳನ್ನು ಹಮ್ಮಿಕೊಂಡಿತ್ತು. 2005-06ರಲ್ಲಿ ಯೋಜನೆಗಳ ಸಂಖ್ಯೆ 295ಕ್ಕೆ ಕುಸಿದರೆ, ಅನುದಾನ 22.35 ಕೋಟಿಗೆ ಇಳಿಯಿತು. ಅದರರ್ಥ ಹಣಕಾಸು ಸಚಿವಾಲಯ ಅನುದಾನ ಕೊಡಲು ನಿರಾಕರಿಸಿತು ಎಂದಲ್ಲ, ಬದಲಾಗಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ನ್ಯಾಯಸಮ್ಮತವಾಗಿ ಸಮರ್ಥ ಕಾರ್ಯ ನಿರ್ವಹಣೆ ಮಾಡುವ ಸಬಲತೆ ಕಳೆದುಕೊಂಡಿರುವುದು. ಇಲಾಖೆಯ ಈ ಬಗೆಯ ನಿರ್ಲಕ್ಷ್ಯ ಧೋರಣೆಯನ್ನು ತರಾಟೆಗೆ ತೆಗೆದುಕೊಂಡಿದ್ದ ಹಣಕಾಸು ಸಚಿವಾಲಯ ಅನುದಾನವನ್ನು ಸದ್ಬಳಕೆ ಮಾಡಿಕೊಳ್ಳುವಂತೆ ಎಚ್ಚರಿಕೆ ನೀಡಿತ್ತು ಕೂಡ. ಆದರೆ, ಅಂತಹ ಎಚ್ಚರಿಕೆಗಳಿಗೆ ಕಿವಿಗೊಡುವ ಮಟ್ಟಿಗಿನ ಸೂಕ್ಷ್ಮತೆಯನ್ನೂ ಇಲಾಖೆ ಕಳೆದುಕೊಂಡಿದೆ.
ಇಲಾಖೆಯ ಹಿರಿಯ ಅಧಿಕಾರಿಗಳನ್ನು ಸಂಪರ್ಕಿಸಲು ನಾವು ಮಾಡಿದ ಎಲ್ಲಾ ಪ್ರಯತ್ನಗಳು ವ್ಯರ್ಥವಾಗಿದ್ದು, ಕಿರಿಯ ಅಧಿಕಾರಿಗಳು ತಮ್ಮ ಜವಾಬ್ದಾರಿಯನ್ನು ಇನ್ನೊಬ್ಬರ ಮೇಲೆ ಎತ್ತಿ ಹಾಕಿ ನುಣುಚಿಕೊಂಡದ್ದು ಕೂಡ ಇಲಾಖೆಯಲ್ಲಿ ತಾಂಡವವಾಡುತ್ತಿರುವ ದಿವ್ಯ ನಿರ್ಲಕ್ಷ್ಯಕ್ಕೆ ಜ್ವಲಂತ ನಿದರ್ಶನ.
ಕೊನೆಗೆ ಕೈಮೂರ್ ಜಿಲ್ಲಾಧಿಕಾರಿ ಮಸೂದ್ ಹಸನ್ ಅವರನ್ನು ಸಂಪರ್ಕಿಸಿದಾಗ ಜಿಲ್ಲೆಯಲ್ಲಿ ಕೆಲವರು ಮಾದಕ ವ್ಯಸನಿಗಳಿದ್ದಾರೆ ಎಂಬುದನ್ನು ನಾನೂ ಕೇಳಿದ್ದೇನೆ. ಅಂತಹವರನ್ನು ಪತ್ತೆ ಮಾಡಲು ಬಹಳ ದಿನಗಳಿಂದ ಪ್ರಯತ್ನಿಸುತ್ತಿದ್ದೇನೆ. ಆದರೆ, ಈವರೆಗೆ ಅಂತಹ ಒಬ್ಬನೇ ಒಬ್ಬ ಕೂಡ ಸಿಕ್ಕಿಲ್ಲ ಎಂದರು. ಅವರ ಕಚೇರಿಯಿಂದ ಅರ್ಧ ಕಿ.ಮೀ. ದೂರದಲ್ಲೇ ಸಾಕಷ್ಟು ಮಾದಕ ವ್ಯಸನಿಗಳನ್ನು ಭೇಟಿ ಮಾಡಿದ್ದ ನಮಗೆ ಇಂತಹ ಬೇಜವಾಬ್ದಾರಿಯ ಉತ್ತರ ತೀವ್ರ ದಿಗ್ಭ್ರಮೆ ಉಂಟುಮಾಡಿತು.
ಇನ್ನೂ ಏಡ್ಸ್ ವಿಷಯದಲ್ಲಿ ಕೂಡ ಹಾಗೇ. ಏಡ್ಸ್ ಜಾಗೃತಿ ಮೂಡಿಸಲು ತೆರಿಗೆದಾರರ ಹಣವನ್ನು ಮನಸೋ ಇಚ್ಛೆ ವ್ಯಯಿಸುತ್ತಿರುವ ಸರ್ಕಾರದ ಕಾರ್ಯಗಳು ನಿಜವಾಗಿಯೂ ತಲುಪಬೇಕಾದವರಿಗೆ ತಲುಪುತ್ತಿವೆಯೇ ಎಂದು ಪರಿಶೀಲಿಸಿದರೆ ಸಿಗುವ ಉತ್ತರ ನಿರಾಶಾದಾಯಕವೇ. ಈ ಪ್ರದೇಶ ಹಿಂದುಳಿದಿರುವುದು ಸಾಮಾಜಿಕ- ಆರ್ಥಿಕವಾಗಿ ಮಾತ್ರವಲ್ಲ, ಏಡ್ಸ್ ಕುರಿತ ಅರಿವಿನ ವಿಷಯದಲ್ಲೂ ತೀರಾ ಹಿಂದೆ ಬಿದ್ದಿದೆ. ಇಲ್ಲಿ ’ಇಂಜೆಕ್ಷನ್ ಮಾಯಾಂಗನೆ’ಯ ಹಿಂದೆ ಬಿದ್ದವರಲ್ಲಿ ಬಹುತೇಕ ಮಂದಿ ಏಡ್ಸ್ ಬಗ್ಗೆ ಕೇಳಿದ್ದಾರೆ. ಆದರೆ, ಇಂಜೆಕ್ಷನ್ ಸಿರಿಂಜ್ ಮೂಲಕ ಏಡ್ಸ್ ಒಬ್ಬರಿಂದೊಬ್ಬರಿಗೆ ಹರಡುತ್ತದೆ ಎಂದರೆ ಅದನ್ನು ನಂಬಲು ಅವರು ಸಿದ್ಧರಿಲ್ಲ!
ಈ ಪ್ರದೇಶದಲ್ಲಿ ಮಾದಕ ವ್ಯಸನ ತೊಲಗಿಸಲು ಪ್ರಯತ್ನಿಸುತ್ತಿರುವ ಸ್ವಯಂಸೇವಾ ಸಂಸ್ಥೆ ’ಎಕೋವಿಕ್’ನ ಕಾಮಾಕ್ಯ ಸಿಂಗ್ ಹೇಳುವ ಪ್ರಕರಣ ಇಲ್ಲಿನ ವ್ಯಸನಿಗಳ ಅಮಾಯಕತೆಗೆ ಒಂದು ನಿದರ್ಶನ. 40-45ರ ವಯೋಮಾನದ ವ್ಯಕ್ತಿಯೊಬ್ಬ ಅವರ ಕಚೇರಿಗೆ ಒಂದು ಬಕೆಟ್ ಹಿಡಿದುಕೊಂಡು ಬಂದು, ಒಂದು ಪ್ಯಾಕ್ ಕಾಂಡೋಮ್ ಕೇಳಿ ಪಡೆದ. ನಂತರ ಆತ, ಇದನ್ನು ಎಷ್ಟು ಲೀಟರ್ ನೀರಿನಲ್ಲಿ ಬೆರೆಸಿ ಕುಡಿಯಬೇಕು ಎಂದು ಕೇಳಿದ! ಈ ಪ್ಯಾಕ್‌ನಲ್ಲಿ ರಬ್ಬರ್ ಕ್ರಿಮಿನಾಶಕ ಔಷಧಿ ಇದೆ. ಅದನ್ನು ನೀರಿನಲ್ಲಿ ಬೆರೆಸಿ ಕುಡಿದರೆ ಏಡ್ಸ್ ವೈರಸ್ ಸತ್ತುಹೋಗುತ್ತದೆ ಎಂದು ಆತ ತಿಳಿದುಕೊಂಡಿದ್ದ.
ಇಂತಹ ಘಟನೆಗಳು, ಸರ್ಕಾರ ಏಡ್ಸ್ ಜಾಗೃತಿಗಾಗಿ ಪ್ರತಿವರ್ಷ ವ್ಯಯಮಾಡುವ ಕೋಟ್ಯಂತರ ರೂಪಾಯಿಗಳ ಅನುದಾನ ಎಲ್ಲಿಗೆ ಹೋಗುತ್ತದೆ ಎಂಬ ಪ್ರಶ್ನೆಯನ್ನು ಮತ್ತೆ- ಮತ್ತೆ ನಮ್ಮೆದುರಿಗೆ ತೋರುತ್ತವೆ. ಇನ್ನು ಕೆಲವು ಸ್ವಯಂಸೇವಾ ಸಂಸ್ಥೆಗಳಾದರೂ ಏಡ್ಸ್ ಜಾಗೃತಿಯ ನಿಟ್ಟಿನಲ್ಲಿ ಕೆಲಸ ಮಾಡುತ್ತಿವೆ. ಆದರೆ, ಅಧಿಕಾರಶಾಹಿಯ ವಿಳಂಬನೀತಿ ಅಂತಹ ಕೆಲವು ಸಂಸ್ಥೆಗಳನ್ನೂ ವಿಮುಖಗೊಳಿಸುತ್ತಿದೆ. ಬಿಹಾರದ ಸಾಸರಾಮ್‌ನಲ್ಲಿ ಮಾದಕ ವ್ಯಸನ ವಿಮುಕ್ತಿ ಕೇಂದ್ರ ನಡೆಸುತ್ತಿರುವ ಆರ್.ಎನ್. ತಿವಾರಿ ಹೇಳುತ್ತಾರೆ, ನಮಗೆ ಅನುದಾನದ ತೀವ್ರ ಕೊರತೆ ಇದೆ. ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ (ನ್ಯಾಕೋ) ನಿಯಮಾವಳಿ ಪಾಲಿಸಿದರೂ ಕೆಲವು ಸ್ವಯಂಸೇವಾ ಸಂಸ್ಥೆಗಳಿಗೆ ಎರಡು- ಮೂರು ವರ್ಷಗಳವರೆಗೆ ಅನುದಾನ ನೀಡುತ್ತಿಲ್ಲ. ಹಾಗಾಗಿ ಜಾಗೃತಿ ಕಾರ್ಯ ಹಿಂದೆ ಬಿದ್ದಿದೆ ಎಂದು.
ಹಿಂದಿನ ನಿಯಮಾವಳಿಗಳನ್ನು ಬದಲಿಸಿರುವ ಕೇಂದ್ರ ಸಾಮಾಜಿಕ ನ್ಯಾಯ ಸಚಿವಾಲಯ, ಇದೀಗ ರಾಜ್ಯ ಸರ್ಕಾರಗಳನ್ನೇ ನೋಡಲ್ ಏಜೆನ್ಸಿಯಾಗಿ ನೇಮಿಸಿದೆ. ಹಾಗಾಗಿ ಸ್ವಯಂಸೇವಾ ಸಂಸ್ಥೆಗಳ ಕಾರ್ಯನಿರ್ವಹಣೆಯಲ್ಲಿ ಸರ್ಕಾರದ ಹಸ್ತಕ್ಷೇಪ ಅತಿಯಾಗಿದೆ. ಡಿಎಂ ವರದಿ ಸಲ್ಲಿಸದೆ ಯಾವುದೇ ಸ್ವಯಂಸೇವಾ ಸಂಸ್ಥೆಗೆ ಅನುದಾನ ನೀಡುವಂತಿಲ್ಲವಾದ್ದರಿಂದ ವರದಿ ತಯಾರಿಸುವಲ್ಲಿ ತುಸು ವಿಳಂಬವಾದರೂ ಅನುದಾನ ಸಿಗಲಾರದ ಸ್ಥಿತಿ ಇದೆ. ಹಾಗಾಗಿ ಅನುದಾನವಿಲ್ಲದೆ ಹಲವು ಸ್ವಯಂಸೇವಾ ಸಂಸ್ಥೆಗಳು ಬಾಗಿಲು ಹಾಕುವ ಸ್ಥಿತಿಯಲ್ಲಿವೆ. ಪರಿಣಾಮವಾಗಿ 48 ಟಿಐ ಯೋಜನೆಗಳಲ್ಲಿ ಈಗ ಕೇವಲ 17 ಮಾತ್ರ ಮುಂದುವರಿದಿವೆ.
ಬಿಹಾರದಲ್ಲಿ 16,043 ಏಡ್ಸ್ ರೋಗಿಗಳನ್ನು ಗುರುತಿಸಲಾಗಿದೆ. ಕಿಶನ್‌ಘರ್, ಕಟಿಯಾರ್, ಪುರುನಿಯಾ, ಸಮಷ್ಟಿಪುರ್, ಮುಜಾಫರ್‌ಪುರ್, ಸಿತಾಮರ್‍ಹಿ, ದರ್ಭಾಂಗ, ಮಧುಬನಿ, ಬೆಟಿಯಾ ಮತ್ತು ರಾಕ್ಸುಲ್ ಜಿಲ್ಲೆಗಳನ್ನು ನ್ಯಾಕೋ ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಿದೆ. ಆದರೂ ಆ ಪ್ರದೇಶಗಳಲ್ಲಿ ಯಾವುದೇ ಸ್ವಯಂಸೇವಾ ಸಂಸ್ಥೆಗಳಾಗಲಿ, ಸರ್ಕಾರಿ ಯೋಜನೆಗಳಾಗಲಿ ಏಡ್ಸ್ ವಿರುದ್ಧದ ಜನಜಾಗೃತಿಯಲ್ಲಿ ತೊಡಗಿಲ್ಲ. ದೇಶದಲ್ಲಿ ಸದ್ಯಕ್ಕೆ 30 ಲಕ್ಷ ಏಡ್ಸ್ ಪೀಡಿತರಿದ್ದಾರೆ. ಆದರೆ, ಕೆಲವೇ- ಕೆಲವು ಆಸ್ಪತ್ರೆಗಳಲ್ಲಿ ಮಾತ್ರ ಏಡ್ಸ್ ಚಿಕಿತ್ಸೆಯ ಸೌಲಭ್ಯವಿದೆ ಎಂಬುದು ಕೂಡ ಪರಿಸ್ಥಿತಿಯ ವ್ಯಂಗ್ಯವಲ್ಲವೇ?
ಟಿಎಸ್‌ಐ |