ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳೆಯರ ಭದ್ರತೆಯ ಜವಾಬ್ದಾರಿ ಆಯಾ ಕಂಪನಿಗಳ ಸಿಇಒಗೆ ಸೇರಿದ್ದೇ? ಬೆಂಗಳೂರಿನಲ್ಲಿ ನಡೆದಿದ್ದ ಪ್ರತಿಭಾ ಶ್ರೀಕಂಠ ಮೂರ್ತಿ ಅವರ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇತ್ತೀಚೆಗೆ ಸುಪ್ರೀಂಕೋರ್ಟ್ ಒಂದು ಆದೇಶ ಹೊರಡಿಸಿದ್ದು, ಆಗ ಅವರಿದ್ದ ಕಂಪನಿಯ ಸಿಇಒ, ಹಾಲಿ ನಾಸ್‌ಕಾಮ್ ಮುಖ್ಯಸ್ಥ ಸೋಮ್ ಮಿತ್ತಲ್ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳುವ ಪ್ರಕ್ರಿಯೆ ಮುಂದುವರಿಸುವಂತೆ ತಿಳಿಸಿದೆ. ಸುಪ್ರೀಂಕೋರ್ಟ್‌ನ ಈ ಆದೇಶ ಕಾರ್ಪೋರೇಟ್ ಜಗತ್ತನ್ನು ಅದುರುವಂತೆ ಮಾಡಿದೆ ಎನ್ನುತ್ತಾರೆ ಸತೀಶ್ ಚಪ್ಪರಿಕೆ
|
|
ಪ್ರತಿಭಾ ಶ್ರೀಕಂಠ ಮೂರ್ತಿ. ಈ ಹೆಸರು ಬೆಂಗಳೂರಿನ ಜನಮಾನಸದಿಂದ ಮರೆಯಾಗಲು ಸಾಧ್ಯವೇ ಇಲ್ಲ. 24ರ ಹರೆಯದ ಕಾಲ್ ಸೆಂಟರ್ ಉದ್ಯೋಗಿ ಪ್ರತಿಭಾ ಎರಡು ವರ್ಷಗಳ ಹಿಂದೆ ಭೀಕರವಾಗಿ ಅತ್ಯಾಚಾರಕ್ಕೆ ಒಳಪಟ್ಟು ಕೊಲೆಯಾಗಿ ಹೋದರೂ, ಈಗಲೂ ಜೀವಂತವಾಗಿದ್ದಾರೆ. ಒಂದೆಡೆ ಅವರ ಅತ್ಯಾಚಾರ-ಕೊಲೆ ಪ್ರಕರಣದ ವಿಚಾರಣೆ ಬೆಂಗಳೂರಿನ ನ್ಯಾಯಾಲಯದಲ್ಲಿ ನಡೆಯುತ್ತಿರುವಾಗಲೇ ಸುಪ್ರೀಂಕೋರ್ಟ್ ಒಂದು ಮಹತ್ವದ ಆದೇಶ ನೀಡಿದೆ. ಪ್ರತಿಭಾ ಕೊಲೆಯಾದ ಸಂದರ್ಭದಲ್ಲಿ ಅವರು ಎಚ್‌ಪಿ ಗ್ಲೋಬಲ್ ಸಾಫ್ಟ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ನಡುರಾತ್ರಿ ಕಚೇರಿಯ ವಾಹನದಲ್ಲಿ ಕೆಲಸಕ್ಕೆ ಹೊರಟಾಗಲೇ ಪ್ರತಿಭಾ, ಆ ವಾಹನದ ಡ್ರೈವರ್ ಶಿವಕುಮಾರ್ ಅವರು ನಡೆಸಿದ ಪಾಶವೀ ಕೃತ್ಯಕ್ಕೆ ಬಲಿಯಾಗಿದ್ದು ಎಂದು ಪೊಲೀಸರ ಆರೋಪ. ಈ ನಡುವೆ ಬೆಂಗಳೂರು ಪೊಲೀಸರು ಆಗ ಕಂಪನಿಯ ಮುಖ್ಯಸ್ಥರಾಗಿದ್ದ, ಈಗಿನ ನಾಸ್‌ಕಾಮ್ ಮುಖ್ಯಸ್ಥ ಸೋಮ್ ಮಿತ್ತಲ್ ವಿರುದ್ಧ ಕೂಡ ಈ ಕೊಲೆ ನಡೆಯಲು ಪರೋಕ್ಷ ಕಾರಣ ಎಂಬ ಆರೋಪ ಹೊರಿಸಿದ್ದರು.
ಮಿತ್ತಲ್ ತಮ್ಮ ವಿರುದ್ಧದ ಕಾನೂನು ಕ್ರಮ ಕೈಬಿಡಬೇಕು ಎಂದು ಕರ್ನಾಟಕ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟ್ ಅದು ಸಾಧ್ಯವಿಲ್ಲ ಎಂದು ಆದೇಶ ನೀಡಿತು. ಆ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟ್ ಮೆಟ್ಟಿಲು ಹತ್ತಿದ್ದ ಮಿತ್ತಲ್ ಮುಖಕ್ಕೆ ಈಗ ಮಸಿ ಅಂಟಿಕೊಂಡಿದೆ. ಒಂದೆಡೆ ಸುಪ್ರೀಂ ಕೋರ್ಟ್‌ನ ಈ ಆದೇಶ ನಿರಂತರ ರಾತ್ರಿ ಪಾಳಿಯ ಮೂಲಕ ಹಣದ ಕೊಳ್ಳೆ ಹೊಡೆಯತ್ತಿರುವ ಬಹುರಾಷ್ಟ್ರೀಯ ಕಂಪನಿಗಳ ಜವಾಬ್ದಾರಿ ಹೆಚ್ಚುವಂತೆ ಮಾಡಿದರೂ, ಮತ್ತೊಂದೆಡೆ ಭಾರತದ ಔದ್ಯಮಿಕ ರಂಗದ ಬೆನ್ನೆಲುಬಾಗಿ ಪರಿವರ್ತನೆಗೊಂಡಿರುವ ಐಟಿ ಮತ್ತು ಬಿಪಿಒ ಉದ್ಯಮದ ಕರಾಳ ಮುಖಗಳನ್ನು ಇನ್ನೊಮ್ಮೆ ಅವಲೋಕಿಸುವಂತೆ ಮಾಡಿದೆ.
ಏಕೆಂದರೆ ಸುತ್ತಲಿನ ಜಗತ್ತು ಮಲಗಿರುವಾಗ ಜೀವಂತವಾಗಿರುವ ಐಟಿ ಮತ್ತು ಬಿಪಿಒ ಉದ್ಯಮಗಳ ಒಳಗೆ ಮತ್ತು ಹೊರಗೆ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದಾಗ ಅಲ್ಲಿ ಕೆಲಸ ಮಾಡುವ ಮಹಿಳೆ ಎಷ್ಟು ಅತಂತ್ರಳು ಎನ್ನುವುದು ಅರ್ಥವಾಗುತ್ತದೆ. ಕಳೆದ ವರ್ಷ ಪುಣೆಯಲ್ಲಿ ಒಬ್ಬ ಬಿಪಿಒ ಉದ್ಯೋಗಿ ಮಹಿಳೆಯ ಮೇಲೆ ಆಸಿಡ್ ಎರಚಲಾಗಿತ್ತು. ಕಳೆದ ನವೆಂಬರ್ ಒಂದರಂದು ಅದೇ ಪುಣೆಯಲ್ಲಿಯೇ ಜ್ಯೋತಿ ಕುಮಾರಿ ಚೌಧರಿ ಎಂಬ 22 ವರ್ಷ ವಯಸ್ಸಿನ ಬಿಪಿಒ ಉದ್ಯೋಗಿಯೊಬ್ಬಳನ್ನು ಕ್ಯಾಬ್ ಡ್ರೈವರ್ ಮತ್ತು ಆತನ ಸ್ನೇಹಿತ ಅತ್ಯಾಚಾರ ಮಾಡಿ ಕೊಲೆ ಮಾಡಿದ್ದರು. ಅದೇ ತಿಂಗಳು ಮುಂಬೈನಲ್ಲಿ ಪ್ರೀತಿ ಗಂಗೂಲಿ ಎಂಬ ಬಿಪಿಒ ಉದ್ಯೋಗಿಯ ಮೇಲೆ ಹಲ್ಲೆ ನಡೆದಿತ್ತು...ಹೀಗೆ ವರದಿಯಾದ ಘಟನೆಗಳ ಸರಮಾಲೆಯೇ ಇದೆ. ಇನ್ನು ವರದಿಯಾಗದೇ ಇದ್ದ ಘಟನೆಗಳು!
ಈ ನಡುವೆ ಕಾನೂನಿನ ಕಲಸುಮೇಲೋಗರ. ನ್ಯಾಯಾಲಯ ಗಳಲ್ಲಿ ಪ್ರಕರಣದ ನಿರಂತರ ವಿಚಾರಣೆ ನಡೆಯುತ್ತಲೇ ಇರುತ್ತದೆ. ಪ್ರತಿಭಾ ಪ್ರಕರಣವನ್ನೇ ತೆಗೆದುಕೊಂಡರೆ ’ಕರ್ನಾಟಕ ಷಾಪ್ಸ್ ಅಂಡ್ ಎಸ್ಟಾಬ್ಲಿಷ್‌ಮೆಂಟ್ ಆಕ್ಟ್’ಗೆ ವಿರುದ್ಧವಾಗಿ ನಡೆದುಕೊಂಡ ಹಿನ್ನೆಲೆಯಲ್ಲಿ ಮಿತ್ತಲ್ ಅವರನ್ನೂ ಕೂಡ ಆರೋಪಿಯ ಸ್ಥಾನದಲ್ಲಿ ನಿಲ್ಲಿಸಲಾಗಿತ್ತು. ಆ ಕಾಯಿದೆಯ ಪ್ರಕಾರ ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಮಹಿಳಾ ಉದ್ಯೋಗಿಗಳ ಭದ್ರತಾ ಜವಾಬ್ದಾರಿ ಸಂಪೂರ್ಣವಾಗಿ ಆಯಾ ಕಂಪನಿಗಳದ್ದಾಗಿರುತ್ತದೆ. ಅಂತಹ ಭದ್ರತೆ ದೊರಕದೇ ಇರುವುದರಿಂದಲೇ ಪ್ರತಿಭಾ ಕೊಲೆಯಾಯಿತು ಎಂದು ಕೂಡ ಆರೋಪ ಪಟ್ಟಿಯಲ್ಲಿ ಹೇಳಲಾಗಿದೆ.
ಇಂತಹ ಸನ್ನಿವೇಶದಲ್ಲಿ ಸುಪ್ರೀಂಕೋರ್ಟ್ ನೀಡಿರುವ ಆದೇಶ ಕಾರ್ಪೋರೇಟ್ ವಲಯದಲ್ಲಿ ಒಂದು ತಾತ್ವಿಕ ಪ್ರಶ್ನೆಯನ್ನೇ ಹುಟ್ಟುಹಾಕಿದೆ. ದೂರದ ಆಸ್ಟ್ರೇಲಿಯ, ಬ್ರಿಟನ್, ಜರ್ಮನಿ, ಅಮೆರಿಕ ಮುಂತಾದ ಮುಂದುವರಿದ ದೇಶಗಳ ಜನರನ್ನು ಸುಖವಾಗಿಡುವ ಸಲುವಾಗಿಯೇ ಹುಟ್ಟಿಕೊಂಡ ಈ ಹೊರಗುತ್ತಿಗೆ ಉದ್ಯಮದಲ್ಲಿ ನಮ್ಮ ಯುವ ಪಡೆ ದುಡಿದು ಬಸವಳಿಯುವುದು ರಾತ್ರಿಯ ಹೊತ್ತು. ಸಾಮಾನ್ಯವಾಗಿ ಅದನ್ನು ಸ್ಮಶಾನ ಪಾಳಿ (ಗ್ರೇವ್‌ಯಾರ್ಡ್ ಶಿಫ್ಟ್) ಎಂದೇ ಕರೆಯಲಾಗುತ್ತದೆ. ಅಂತಹ ಸ್ಮಶಾನ ಪಾಳಿಯಲ್ಲಿ ಭಾರತೀಯ ಯುವ ಪಡೆ ಬೆವರು ಸುರಿಸುವ ಪರಿಣಾಮವಾಗಿಯೇ ನಮ್ಮಲ್ಲಿನ ಬಹುರಾಷ್ಟ್ರೀಯ ಐಟಿ ಮತ್ತು ಬಿಪಿಒ ಕಂಪನಿಗಳು ಯಶಸ್ಸಿನ ಉತ್ತುಂಗಕ್ಕೇರಿ ಕೂತಿರುವುದು.
ಹೀಗೆ ದೇಶದ ಸಾವಿರಾರು ಐಟಿ ಮತ್ತು ಬಿಪಿಒ ಕಂಪನಿಗಳಲ್ಲಿ ಸ್ಮಶಾನ ಪಾಳಿ ಚಾಲ್ತಿಯಲ್ಲಿದ್ದು, ಲಕ್ಷಾಂತರ ಮಹಿಳಾ ಉದ್ಯೋಗಿಗಳು ಅಲ್ಲಿ ಕಾರ್ಯ ನಿರ್ವಹಿಸುತ್ತಿರುತ್ತಾರೆ. ಈ ಪೈಕಿ ಹೆಚ್ಚಿನವರನ್ನು ಒಂದೇ ನಡುರಾತ್ರಿಯಾದ ಮೇಲೆ ಮನೆಯಿಂದ ಕರೆದುಕೊಂಡು ಬರಲಾಗುತ್ತವೆ ಅಥವಾ ಮನೆಗೆ ಕರೆದುಕೊಂಡು ಹೋಗಿ ಬಿಡಲಾಗುತ್ತದೆ. ಅದೂ, 8-10 ಜನರನ್ನು ಕಾರು ಅಥವಾ ಟಾಟಾ ಸುಮೊದಂತಹ ವಾಹನಗಳಲ್ಲಿ ಬಿಡಿ ಬಿಡಿಯಾಗಿ ಕರೆದುಕೊಂಡು ಹೋಗಿ ಬಿಡಲಾಗುತ್ತದೆ. ಬೆಂಗಳೂರು, ಹೈದರಾಬಾದ್, ಚೆನ್ನೈ, ಪುಣೆ, ದೆಹಲಿ-ಗುರಗಾಂವ್ ಮುಂತಾದ ದೇಶದ ಐಟಿ ಮತ್ತು ಬಿಪಿಒ ಕೇಂದ್ರಗಳಲ್ಲಿ ನಡುರಾತ್ರಿಯ ನಂತರ ರಸ್ತೆಯ ಮೇಲೆ ಇಂತಹ ಸಾವಿರಾರು ವಾಹನಗಳು ಓಡುತ್ತಿರುತ್ತವೆ. ಈಗ ಹುಟ್ಟಿಕೊಂಡಿರುವ ಜಿಜ್ಞಾಸೆ, ಅಂತಹ ವಾಹನಗಳಲ್ಲಿ ಓಡಾಡುವ ಮಹಿಳೆಯರ ಭದ್ರತೆಯದ್ದಾಗಿದೆ.
ಟಿಎಸ್‌ಐ ಜೊತೆ ಮಾತನಾಡಿದ ಚೆನ್ನೈನ ಐಟಿ ಕಂಪನಿಯೊಂದರ ಉದ್ಯೋಗಿ ವಿಜಯಕ್ಷ್ಮಿ ದಿನ ಆರಂಭವಾಗುವುದು ಬೆಳಗಿನ ಜಾವ 2.30ಕ್ಕೆ. ಇದು ಒಂದು ಅಭಾಸದಂತೆ ಇದೆಯಲ್ಲ. ಏನು ಮಾಡೋದು. ನಮ್ಮ ಶಿಫ್ಟ್ ಆರಂಭವಾಗೋದೇ ಅಷ್ಟು ಹೊತ್ತಿಗೆ. ಬೆಳಗಿನ ಜಾವ ಕಂಪನಿಯ ವಾಹನ ಬಂದು ನಮ್ಮನ್ನು ಪಿಕ್ ಮಾಡಿಕೊಂಡು ಹೋಗುತ್ತದೆ ಎನ್ನುತ್ತಾರೆ ಅವರು. ಕೇವಲ ಇವರೊಬ್ಬರಲ್ಲ. ಇಂತಹ ಸುಮಾರು 7,50,000 ಉದ್ಯೋಗಿಗಳು ದೇಶದಲ್ಲಿನ ವಿವಿಧ ಬಿಪಿಒಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆ ಪೈಕಿ ಶೇಕಡಾ 40ರಷ್ಟು ಮಂದಿ ಮಹಿಳೆಯರಾಗಿದ್ದಾರೆ.
ಮಹಿಳೆಯರಿಗೆ ಭದ್ರತೆ ಎಂಬ ವಿಷಯ ಮಾಧ್ಯಮದಲ್ಲಿ ರಾರಾಜಿಸುವುದು ಯಾರಾದಾದರೂ ಅತ್ಯಾಚಾರ ಮತ್ತು ಕೊಲೆ ಆದಾಗ ಮಾತ್ರ. ಇನ್ನು ಕಂಪನಿಯೊಳಗೆ ಮತ್ತು ಹಿರಿಯ ಪುರುಷ ಸಹೋದ್ಯೋಗಿಗಳು ನಡೆಸುವ ಲೈಂಗಿಕ ದೌರ್ಜನ್ಯದ ಬಗ್ಗೆ ಯಾರಿಗೆ ಹೇಳುವುದು? ಬೆಂಗಳೂರಿನ ಐಬಿಎಂ ಕಂಪನಿಯಲ್ಲಿ ದುಡಿಯುವ ಸುಷ್ಮ ಕೇಳುವ ಪ್ರಶ್ನೆಯಿದು.
ಕಂಪನಿಯ ಒಳಗೆ ಮತ್ತು ಹೊರಗೆ ಮಹಿಳಾ ಉದ್ಯೋಗಿಗಳಿಗೆ ಇರಬೇಕಾದಷ್ಟು ಭದ್ರತೆ ಇಲ್ಲ ಎಂದು ಅಧಿಕಾರಿಗಳು ಕೂಡ ಒಪ್ಪಿಕೊಳ್ಳುತ್ತಾರೆ. ಕಳೆದ ಐದು ವರ್ಷಗಳಿಂದ ನಾನು ಬಿಪಿಒ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದೇನೆ. ಯಾವ ಪ್ರಮಾಣದಲ್ಲಿ ಉದ್ಯೋಗಿಗಳ ಭದ್ರತೆಯ ಜವಾಬ್ದಾರಿ ತೆಗೆದುಕೊಳ್ಳಬೇಕೋ, ಆ ಪ್ರಮಾಣದಲ್ಲಿ ಕಂಪನಿಗಳು ಜವಾಬ್ದಾರಿ ತೆಗೆದುಕೊಳ್ಳುತ್ತಿಲ್ಲ ಎನ್ನುವುದು ನಿಜ. ಅದರಲ್ಲಿಯಂತೂ ಸಣ್ಣ ಪ್ರಮಾಣದ ಕಂಪನಿಗಳು ಮಹಿಳಾ ಉದ್ಯೋಗಿಗಳ ಭದ್ರತೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುವುದಿಲ್ಲ ಎನ್ನುತ್ತಾರೆ ದೆಹಲಿಯ ಹೊರವಲಯದ ಗುರಗಾಂವ್‌ನಲ್ಲಿರುವ ಹೀರೊ ಐಟಿಇಎಸ್ ಕಂಪನಿಯ ಹಿರಿಯ ಅಧಿಕಾರಿಯೊಬ್ಬರು.
ಈ ನಡುವೆ ಪ್ರತಿಭಾ ಅವರ ತಾಯಿ ಗೌರಮ್ಮ, ಕಂಪನಿಗಳ ಬೇಜವಾಬ್ದಾರಿ ನಡವಳಿಕೆಯನ್ನು ಬಹಿರಂಗ ಪಡಿಸುವ ನಿಟ್ಟಿನಲ್ಲಿಯೇ ನನ್ನ ಮಗಳು ಜೀವ ತೆತ್ತಳು. ಕನಿಷ್ಠ ಆ ಮೂಲಕವಾದರೂ ಪ್ರತಿಭಾ ಉಳಿದ ಮಹಿಳಾ ಉದ್ಯೋಗಿಗಳ ಭದ್ರತಾ ಮಟ್ಟ ಹೆಚ್ಚುವಂತೆ ಮಾಡುವಲ್ಲಿ ಯಶಸ್ವಿಯಾದಳು ಎಂದು ನೋವಿನಿಂದ ನುಡಿಯುತ್ತಾರೆ. ಆ ನೋವಿನ ನಡುವೆಯೂ ಸುಪ್ರೀಂಕೋರ್ಟ್ ಆದೇಶದ ಬಗ್ಗೆ ಸಂತಸ ವ್ಯಕ್ತಪಡಿಸಿರುವ ಅವರು, ರಾತ್ರಿ ಪಾಳಿಯಲ್ಲಿ ಮಹಿಳೆಯರನ್ನು ದುಡಿಸಿಕೊಳ್ಳುವ ಕಂಪನಿಗಳು ಅವರ ಭದ್ರತೆಯ ಬಗ್ಗೆ ಕೂಡ ಕಾಳಜಿ ವಹಿಸಬೇಕು ಎನ್ನುವ ಅಂಶವನ್ನು ಈ ಆದೇಶ ಒತ್ತಿ ಹೇಳುತ್ತದೆ ಎನ್ನುತ್ತಾರೆ.
ಆದರೆ, ಸುಪ್ರೀಂಕೋರ್ಟ್ ಆದೇಶದಿಂದ ಕಂಪನಿಗಳ ಆಡಳಿತ ಮಂಡಳಿಗಂತೂ ಸಂತಸವಾಗಿಲ್ಲ ಎನ್ನುವ ಅಂಶ ಈಗಾಗಲೇ ಬಹಿರಂಗವಾಗಿದೆ. ಇನ್ಫೋಸಿಸ್ ಬಿಪಿಒ ಲಿಮಿಟೆಡ್‌ನ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಅಮಿತಾಭ್ ಚೌಧರಿ, ನಮಗಂತೂ ಈ ಆದೇಶದಿಂದ ಗಾಬರಿಯಾಗಿದೆ. ಕಂಪನಿಯಲ್ಲಿರುವ ಸಾವಿರಾರು ಉದ್ಯೋಗಿಗಳ ಪೈಕಿ ಪ್ರತಿಯೊಬ್ಬರ ಭದ್ರತೆಯ ಜವಾಬ್ದಾರಿಯನ್ನು ಒಬ್ಬ ವ್ಯಕ್ತಿಯ ಭುಜದ ಮೇಲೆ ಹೊರಿಸುವುದು ಸರಿಯಲ್ಲ. ಭದ್ರತೆ ನೀಡುವ ಜವಾಬ್ದಾರಿ ಸರ್ಕಾರ ಮತ್ತು ಪೊಲೀಸರದ್ದು ಎಂಬ ಹೇಳಿಕೆ ನೀಡಿದ್ದಾರೆ.
ಟಿಎಸ್‌ಐ ಜೊತೆ ಮಾತನಾಡಿದ ಬೆಂಗಳೂರು ಜಂಟಿ ಪೊಲೀಸ್ ಆಯುಕ್ತ ಗೋಪಾಲ್ ಬಿ.ಹೊಸೂರ್ ಅವರು ಚೌಧರಿ ಮಾತನ್ನು ಅಲ್ಲಗಳೆಯುತ್ತಾರೆ. ಕಾಯಿದೆಯ ಪ್ರಕಾರ ಪ್ರತಿಯೊಂದು ಕಂಪನಿಯ ಆಡಳಿತ ಮಂಡಳಿಯೇ ಆಯಾ ಕಂಪನಿಯಲ್ಲಿನ ಉದ್ಯೋಗಿಗಳ ಭದ್ರತೆಯ ಜವಾಬ್ದಾರಿ ಹೊರಬೇಕು. ರಾಜ್ಯ ಸರ್ಕಾರ ಅಥವಾ ಪೊಲೀಸ್ ಇಲಾಖೆ ಖಾಸಗಿ ಐಟಿ ಮತ್ತು ಬಿಪಿಒ ಕಂಪನಿಗಳಲ್ಲಿ ಕೆಲಸ ಮಾಡುವ ಪ್ರತಿಯೊಬ್ಬ ಉದ್ಯೋಗಿಗೂ ಭದ್ರತೆ ನೀಡಲು ಸಾಧ್ಯವಿಲ್ಲ ಎನ್ನುತ್ತಾರೆ ಗೋಪಾಲ್ ಹೊಸೂರ್.
ಈ ನಡುವೆ ಮಹಿಳಾ ಉದ್ಯೋಗಿಗಳಿಗಾಗಿ ಮಹಿಳಾ ಚಾಲಕಿ ಮತ್ತು ಮಹಿಳಾ ಭದ್ರತಾ ಸಿಬ್ಬಂದಿ ಇರುವ ಪ್ರತ್ಯೇಕ ವಾಹನಗಳನ್ನು ಬಳಸುವ ಆಲೋಚನೆ ಕೂಡ ಹುಟ್ಟಿಕೊಂಡಿದೆ. ಇದೆಲ್ಲದರ ನಡುವೆಯೂ ಅರ್ಥವಾಗದ ಒಂದು ಪ್ರಶ್ನೆ ಮಾತ್ರ ನಿರಂತರವಾಗಿ ಎಲ್ಲರನ್ನೂ ಕಾಡಿಸುತ್ತಿದೆ. ಈ ಹಿಂದೆ ಕೂಡ ಕಾರ್ಖಾನೆಗಳು, ವಿಮಾನಯಾನ, ಪಂಚತಾರಾ, ವೈದ್ಯಕೀಯ ಕ್ಷೇತ್ರ... ಹೀಗೆ ವಿವಿಧ ಪ್ರಕಾರಗಳ ಉದ್ಯೋಗಗಳಲ್ಲಿ ಮಹಿಳೆಯರು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುತ್ತಿದ್ದರೂ, ಇಂತಹ ಭಯ ಹುಟ್ಟಿಸುವ ಪ್ರಕರಣಗಳು ವರದಿಯಾಗುತ್ತಿರಲಿಲ್ಲ. ಆದರೀಗ?
ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ಐಟಿ, ಬಿಪಿಒ ಕಂಪನಿಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವುದು ಮತ್ತು ಅವರ ಬದಲಾದ ಜೀವನ ಶೈಲಿಯೇ ಇಂತಹ ಪ್ರಕರಣಗಳಿಗೆ ಮೂಲ ಕಾರಣ ಎಂದು ಕೂಡ ಹೇಳಲಾಗುತ್ತಿದೆ. ಮಹಿಳೆಯರ ಮೇಲೆ ಹೀಗೆ ದೌರ್ಜನ್ಯ ನಡೆಯುತ್ತಿರುವುದಕ್ಕೆ ಅದೇ ಒಂದು ಕಾರಣ ಎಂದು ಸಾರಾಸಗಟಾಗಿ ಹೇಳುವ ಹಾಗಿಲ್ಲ. ಅಕಸ್ಮಾತ್ ಅದೇ ಒಂದು ಅಂಶ ಇಂತಹ ಪ್ರಕರಣಗಳಿಗೆ ಕಾರಣವಾಗಿದ್ದರೆ ಭಾರತದ ಆರ್ಥಿಕ ಶಕ್ತಿಯ ಬೆನ್ನೆಲುಬಾದ ಐಟಿ ಮತ್ತು ಬಿಪಿಒ ವಲಯವನ್ನು ’ದೇವರೇ’ ಕಾಪಾಡಬೇಕು.
ಟಿಎಸ್‌ಐ
ಪೂರಕ ಮಾಹಿತಿ: ಚೆನ್ನೈನಿಂದ ಎನ್.ಅಶೋಕನ್ ಮತ್ತು ನವದೆಹಲಿಯಿಂದ ಅಂಗ್ಷುಮಾನ್ ಪಾಲ್
|