ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಸಣ್ಣ ಕಥೆ
ಕಳ್ಳಗಂಜಿ ಕಾಡ ಹೊಕ್ಕಡೆ...
 
 

ಕಳ್ಳಗಂಜಿ ಕಾಡ ಹೊಕ್ಕಡೆ ಹುಲಿ ತಿನ್ನಬಿಟ್ಟೀತೆ? ಹುಲಿಗಂಜಿ ಹುತ್ತ ಹೊಕ್ಕಡೆ ಹಾವು ಕಚ್ಚಬಿಟ್ಟೀತೆ? ಕಾಲಕ್ಕಂಜಿ ಭಕ್ತನಾದೊಡೆ ಕರ್ಮ ತಿನ್ನ ಬಿಟ್ಟೀತೆ? ಇಂತೀ ಮೃತ್ಯುವಿನ ಬಾಯ ತುತ್ತಾದ ವೇಷ ಡಂಭಕರನೇನೆಂಬೆ ಗುಹೇಶ್ವರಾ -ಅಲ್ಲಮಪ್ರಭು ಮಾಸ್ತರರಿಗೆ ಬೆಳಿಗ್ಗೆ ಏಳೇಳುತ್ತಲೇ ಸಿಗರೇಟಿನ ತಲುಬಾಗತೊಡಗಿತು. ಥತ್ತೇರಿ... ಅಂತ ಹೊರಗೆ ಕೇಳಿಸುವಂತೆ ಸಣ್ಣಗೆ ಸಿಗರೇಟಿನ ಆಸೆಯನ್ನು ಬೈದುಕೊಂಡರೂ ಅದೇನೂ ಸುಲಭಕ್ಕೆ ಕೊಡವಿ ಹಾಕಬಹುದಾದಷ್ಟು ಕ್ಷೀಣ ಆಸೆಯಾಗಿರಲಿಲ್ಲವೆಂದು ಅವರ ಒಳಮನಸ್ಸು ಸಾರಿ ಸಾರಿ ಹೇಳುತ್ತಿದ್ದುದು ಅವರಿಗೆ ಕೇಳಿಸಿತು. ಅವರ ಬದುಕಿನಲ್ಲಿ ಹೀಗೆ ಬುದ್ಧಿ- ಭಾವಗಳ ಸಂಘರ್ಷಗಳು, ಸಣ್ಣ ಸಣ್ಣ ಕಾರಣಗಳ ನೆಪ ಮಾಡಿಕೊಂಡು ದಿನಕ್ಕಿಪ್ಪತ್ತು ನಡೆದೇ ನಡೆಯುತ್ತಿದ್ದವಾದ್ದರಿಂದ ಇನ್ನೂ 3೦ರ ಹರೆಯದಲ್ಲೇ ಅವರ ಗಲ್ಲಗಳು ಒಳ್ಳೆ ಮುದುಕಪ್ಪನ ತರಹ ಒಳಗಡೆ ಸೇರಿಕೊಂಡು ಬಿಟ್ಟಿದ್ದವು. ತಮ್ಮೊಂದಿಗೇ ಎದ್ದ ಈ ಸಿಗರೇಟಿನ ಆಸೆಯೇನೂ ಸುಮ್ಮನೆ ಬಂದಿರಲಿಲ್ಲ; ತನ್ನೊಂದಿಗೆ ಹಲವು ತರ್ಕ, ಸಮರ್ಥನೆ, ಸಮಜಾಯಿಷಿಗಳನ್ನು ಹಿಡಿದುಕೊಂಡೇ ಬುದ್ಧಿಯೊಂದಿಗಿನ ಸಂಘರ್ಷಕ್ಕೆ ಅಣಿಯಾಗಿ ಅಂದರೆ ಸಕಲ ಶಸ್ತ್ರಸನ್ನದ್ಧವಾಗಿ ಬಂದಿತ್ತು. ಹಾಗೆಂದು ಅದು ಒಳಗಿನಿಂದ ಗುದ್ದಿಕೊಂಡು ಬರುತ್ತಿರುವ ವೇಗ ನೋಡಿಯೇ ಮಾಸ್ತರರಿಗೆ ತಿಳಿಯಿತು. ಶೌಚಕ್ಕೆ ಮುನ್ನ ಮನೆಯ ಮುಂದಿನ ಕಾರಿಡಾರಿನಲ್ಲಿ ನಾಲ್ಕೂ ದಿಕ್ಕಿನಿಂದ ಬೀಸಿ ಬರುತ್ತಿರುವ ಈ ಅಪರೂಪದ ಬೆಳಗಿನ ಮಂದ ಮಾರುತದಲೆಗೆ ಕೂದಲು ಹಾರಿಸುತ್ತಾ ನಿಂತುಕೊಂಡು, ಖಾಲಿ ಹೊಟ್ಟೆಯಲ್ಲಿರುವಾಗಲೇ, ಒಂದು ಸಿಗರೇಟನ್ನು ನಿಧ ನಿಧಾನಕ್ಕೆ ಜುರಿ ಎಳೆದುಕೊಂಡಾಗ ಮೈಮನಗಳೆಲ್ಲಾ ಅಷ್ಟೇ ನಿಧಾನವಾಗಿ ಹಂತ ಹಂತವಾಗಿ ಬಿಸಿಯೇರುವ ಪರಿ ನೆನಪಾಗಿ ಮಾಸ್ತರರಿಗೆ ರೋಮಾಂಚನವಾಗಿ ಕೂದಲುಗಳು ನಿಮಿರಿ, ಗಾಳಿಗೆ ಮುತ್ತಿಕ್ಕಿದ್ದವು. ಅವರು ಮಾತ್ರ ಮಲಗೇ ಇದ್ದರು. ಬೆಳಿಗ್ಗೆ ಎದ್ದಾಗ ಇನ್ನೂ ಹಾಸಿಗೆಯ ಮೇಲಿರುವಾಗ ಎಷ್ಟೊಂದು ಆಲೋಚನೆಗಳು ಬರ್‍ತಾವೆ ಏನ್‌ಕತೆ? ಎಂದು ಬೈದುಕೊಂಡರು. ಮತ್ತೆ ಲಹರಿ ಶುರುವಾಯಿತು. ...ಹೀಗೆ ಬಿಟ್ಟ ಹೊಗೆ ಸೂತ್ರ ಕಿತ್ತ ಗಾಳಿಪಟದ ದಾರದಂತೆ ಹೇಗೆಂದರೆ ಹಾಗೆ, ಇಲ್ಲವೇ ಬಾಹುಬಲಿಯ ಗುಂಗುರು ಕೂದಲಿನಂತೆ ಸುರುಳಿ ಸುರುಳಿಯಾಗೆ, ತೆಳು ದಾರದ ಹಾಗೆ, ಬಿಳಿ ಮೋಡದ ಹಾಗೆ, ತನ್ನಿಂದಲೇ ಹುಟ್ಟಿ ತನ್ನನ್ನೇ ಕೇಂದ್ರವಾಗಿಸಿಕೊಂಡು ತರೇವಾರಿ ವಿಧಾನಗಳಲ್ಲಿ ಆವರಿಸಿಕೊಂಡು ಆಟವಾಡುವ ಪರಿ-ಒಂದು ರೀತಿಯಲ್ಲಿ ಚಿಕ್ಕವನಿದ್ದಾಗ ಬೇವಿನ ಕಡ್ಡಿಯ ತುದಿಯಲ್ಲಿಯೇ ಸುರುಳಿ ಸುತ್ತಿ ಸಾಬೂನಿನ ನೀರಿನಲ್ಲಿ ಅದನ್ನು ಅದ್ದಿ ತೆಗೆದು, ಗಾಳಿಯಲ್ಲಿ ಹಿಡಿದು ಊದಿದಾಗ ನೀರಿನ ಗುಳ್ಳೆಗಳು ತಮ್ಮ ಮೈಮೇಲೆ ಏಳು ಬಣ್ಣಗಳ ಪ್ರತಿಫಲನವನ್ನು ಮೂಡಿಸಿಕೊಂಡು ಸುತ್ತೆಲ್ಲಾ ಸುಳಿದಿರುಗುತ್ತಿದ್ದ ಪರಿಯ ಹಾಗೆಯೇ ಇರುತ್ತದಲ್ಲಾ, ಎಂದೊಮ್ಮೆ ಅನ್ನಿಸಿ, ಸಿಗರೇಟಿನ ಹೊಗೆಯ ಕಲ್ಪನೆಗೆ ಬಾಲ್ಯದ ಸ್ಮೃತಿಗಳನ್ನು ಅಭಿಜ್ಞಾಪಿಸುವ ಶಕ್ತಿ ಇದೆಯಲ್ಲಾ... ಅಕಟಕಟಾ ಇದು ಸಾಮಾನ್ಯವಲ್ಲ, ಸಾಮಾನ್ಯವಲ್ಲ ಎಂದುಕೊಂಡು ತಮ್ಮೊಳಗಿನ ಸೇದುವ ಬಯಕೆಗೆ ಒಂದು ತಕ್ಷಣದ ಸಮರ್ಥನೆ ದೊರಕಿಸಿಕೊಂಡರು. ಅಲ್ಲಿಗೆ ಮನಸ್ಸು ಬುದ್ಧಿಯ ವಿರುದ್ಧ ತಮಗೆ ಸಿಕ್ಕ ಈ ಸಣ್ಣ ಗೆಲುವಿಗೆ ಸಮಾಧಾನ ಪಟ್ಟುಕೊಂಡು ಅಲ್ಲೇ ಕೇಕೆ ಹಾಕಿ ಕುಣಿದಾಡಿತು. ಹಾಗೆ ನೊಡಿದರೆ ಮಾಸ್ತರರು ಸಿಗರೇಟು ಸೇದದವರೇನಲ್ಲ. ಆದರೆ ಬಿಟ್ಟು ಬಹಳ ದಿನಗಳಾಗಿವೆ. ಬಹಳವೆಂದರೆ 3 ದಿನವಲ್ಲ, ಮೂರು ವಾರವಲ್ಲ, ಮೂರು ತಿಂಗಳೂ ಅಲ್ಲ. ಅನಾಮತ್ತು ಮೂರು ವರ್ಷಗಳೇ ಸಂದಿವೆ. ಈ ದಿನಗಳಲ್ಲಿ ಸ್ನೇಹಿತರನ್ನು ತಮ್ಮೆದುರೇ ಕೂಡಿಸಿಕೊಂಡು ಸಿಗರೇಟು ಸೇದಿಸಿದ್ದಾರೆ. ಸೇದುವವರಿಗೆ ಕೊಡಿಸಿದ್ದಾರೆ. ಆದರೆ ತಾವೆಂದೂ ಸೇದಹೋಗಿಲ್ಲ. ತಮ್ಮದು ಭೀಷ್ಮ ಪ್ರತಿಜ್ಞೆಯೇ ಎಂಬಂತೆ ತುಂಬಾ ಕಟ್ಟುನಿಟ್ಟಿನಿಂದ ಪಾಲಿಸಿಕೊಂಡು ಬಂದು, ಹಲವಾರು ಸ್ನೇಹಿತರ ಹೊಟ್ಟೆಕಿಚ್ಚಿಗೂ, ಕೆಲವಾರು ಹಿತೈಷಿಗಳ ಮೆಚ್ಚುಗೆಗೂ ಪಾತ್ರರಾಗಿ ಬೀಗುತ್ತಾ ಬೆಳೆದಿದ್ದಾರೆ. ಒಂದು ಕಾಲಕ್ಕೆ ಈ ಮಾಸ್ತರರ ಸಿಗರೇಟ್ ವ್ಯಾಮೋಹದ ಬಗ್ಗೆಯೇ ಆಪ್ತ ವಲಯದಲ್ಲಿ ಕಥೆಗಳು ಹುಟ್ಟಿಕೊಂಡು ಹೊಗೆಯಂತೆಯೇ ತೇಲುತ್ತಿದ್ದವು. ಅವರು ತುಂಬಾ ಮೂಡಿನಲ್ಲಿದ್ದಾಗ, ವಿಶಾಲ ಆಕಾಶದೆಡೆ ಮುಖ ಮಾಡಿಕೊಂಡು ಬಾಯನ್ನು ಅದೊಂಥರಾ ಗೋಲ ಗೋಲ ಮಾಡಿ ಇನ್ನಿಲ್ಲದ ತನ್ಮಯತೆಯಿಂದ ಗಂಟಲಿನಾಳದಿಂದ ತುಟಿಯ ತುದಿಯವರೆಗಷ್ಟೇ ಬರುವಂತೆ ಗಾಳಿಯ ತಿದಿಯನ್ನು ಒಂದು ನಿರ್ದಿಷ್ಟ ಅಂತರ, ವೇಗೋತ್ಕರ್ಷ ಮತ್ತು ಜವಗಳಲ್ಲಿ ಊದುತ್ತಾ ಬಾಯಿಯ ಅಂಗಳದಲ್ಲಿ ಅದಾಗಲೇ ತುಂಬಿಟ್ಟುಕೊಂಡಿದ್ದ ಹೊಗೆಯನ್ನು ಇಷ್ಟಿಷ್ಟೇ ಬಳಸಿಕೊಂಡು ಒಂದೊಂದು ಹೀಗೆ ಒಂದರ ಹಿಂದೆ ಮತ್ತೊಂದು ನಿಧಾನವಾಗಿ ಹೊಗೆ ಸುರುಳಿಗಳನ್ನು ಬಿಡುತ್ತಿದ್ದರು. ಕೋಡುಬಳೆಯಷ್ಟು ಗಾತ್ರದಿಂದ ಶುರುವಾದ ಅವು ಅವಕಾಶದಲ್ಲಿ ಬರುತ್ತಾ ಬೆಳೆಯುತ್ತಾ ಸಾಗಿ, ಕೊನೆಗೆ ಸ್ಥೂಲಕಾಯದ ಹೆಂಗಸಿನ ಬಳೆಯಷ್ಟು ದೊಡ್ಡದಾಗಿ ಕೊನೆಗೆ ತಮ್ಮ ಪರಿಧಿ ಹರಿದುಕೊಂಡು ಅಲ್ಲೆಲ್ಲೋ ಲೀನವಾಗುತ್ತಿದ್ದವು. ಗೆಳೆಯರೆಲ್ಲ ಇವರನ್ನು ಆಗ ತದೇಕಚಿತ್ತದಿಂದ ನೋಡುತ್ತಿದ್ದುದು ಮಾಸ್ತರರಿಗೆ ಅನುಮಾನ ಮೂಡಿಸುತ್ತಿತ್ತು. ಅವರಿಗೆಂದೂ ಸಿಗರೇಟೆಂಬುದು ಬಿಡಬೇಕಾದ ದುಶ್ವಟವೆಂದೆನಿಸಿರಲಿಲ್ಲ. ಸಿಗರೇಟು ಬಿಡುವ ಬಗ್ಗೆ ಯಾರಾದರೂ ಕೇಳಿದರೆ ಒಂದೋ ಅವರು ರಾಗವಾಗಿ ಬಿ.ಆರ್. ಲಕ್ಷ್ಮಣರಾಯರ ಹಾಡು ಹೇಳುತ್ತಿದ್ದರು... ಬಿಡಲಾರೆ ನಾ ಸಿಗರೇಟು ಹುಡುಗಿ ನಿನ್ನಂತೆಯೇ ಅದು ಥೇಟು ಬಿಡಬಲ್ಲೆನೆ ನಾನು ನಿನ್ನ ಹುಡುಗಿ, ಹಾಗೇನೇ ಸಿಗರೇಟನ್ನ? ಇಲ್ಲವೇ ಕಡೇ ಪಕ್ಷ ಡಾ. ಬೂದಗುಪ್ಪ ಪ್ರಹ್ಲಾದ ರೆಡ್ಡಿಯವರ ಚುಟುಕವನ್ನಾದರೂ ಹೇಳುತ್ತಿದ್ದರು... ಸಿಗರೇಟೆಂದರೆ ನನಗೆ ಭಾರೀ ಸಿಟ್ಟು ಕಂಡಲ್ಲಿ ಸುಡುವೆ ಬಾಯಿಗಿಟ್ಟು! ಅವರು ಸೇದಿ ಬಿಸಾಡಿದ ಸಿಗರೇಟುಗಳ ವಿಸ್ತಾರ ವೈವಿಧ್ಯವೂ ಕೂಡ 'ಅಗ್ನಿಹೋತ್ರಿ' ಗೆಳೆಯರ ವಲಯದಲ್ಲಿ ಚರ್ಚೆಯ ವಸ್ತುವಾಗಿತ್ತು. ಸ್ವತಃ ಮಾಸ್ತರರೇ ಯಾವುದೇ ಮೆಹಫಿಲ್ಲಿರಲಿ, ಹೇಗಾದರೂ ಸಮಯ ಸಂದರ್ಭ ಹೊಂದಿಸಿಕೊಂಡು ಸಾಗುತ್ತಿದ್ದ ಹರಟೆಯ ಹಾದಿ ತಪ್ಪಿಸಿ ವಿಷಯಾಂತರ ಮಾಡಿ ತಾವು ಸೇದಿದ ತರಹೇವಾರಿ ಸಿಗರೇಟುಗಳ ಬಗೆಗೆ ತುಸು ಹೆಚ್ಚೇ ಎಂಬಂತೆ ಜಂಬ ಕೊಚ್ಚಿಕೊಳ್ಳದಿದ್ದರೆ ಅವರಿಗೆ ಆವತ್ತಿನ ಕೂಟ ಸಪ್ಪೆ ಎನಿಸಿಬಿಡುತ್ತಿತ್ತು. ಅದನ್ನು ಕೇಳಿ ಕೇಳಿ ಬೇಸತ್ತ ಗೆಳೆಯರು ಸಿಗರೇಟುಗಳ ಬಗೆಗಿನ ಈ ಗಂಟೆಗಟ್ಟಲೆ ಪುರಾಣ ಪ್ರಾರಬ್ಧವನ್ನು ಅವರ ಬಾಯಿಯಿಂದಲೇ ಅನುಭವಿಸುವುದೇಕೆಂದು ಅವರಿಗಿಂತ ಮೊದಲು ತಾವೇ ಪ್ರಸ್ತಾಪಿಸಿ ಒಂದೆರಡು ವಾಕ್ಯಗಳಲ್ಲಿ ಚುಟುಕಾಗಿ ಬಹುಪರಾಕ್ ಮಾಡಿ, ಹೆಡೆಯೆತ್ತಿ ಬುಸುಗುಟ್ಟುತ್ತಿದ್ದ ಅವರ ಅಹಂ ಅನ್ನು ಶಾಂತಗೊಳಿಸುತ್ತಿದ್ದರು. ಸಿಗರೇಟ್ ಮತ್ತು ಫಿಲ್ಟರ್ ಮಧ್ಯೆ ಸಣ್ಣ ಗೆರೆ ಕೂಡ ಇರದೆ ಥೇಟ್ ಚಾಕ್‌ಪೀಸಿನಂತೆಯೇ ಕಾಣುವ ಆಸ್ಟ್ರೇಲಿಯಾದ ಮಾರ್‍ಲ್‌ಬೋರೋ, ಹೆಬ್ಬೆರಳಿನಿಂದಷ್ಟೇ ಹಿಡಿದುಕೊಳ್ಳ ಬಹುದಾದಷ್ಟು ದಪ್ಪನೆಯ ಪ್ರತಿ ಸಿಗರೇಟಿಗೂ ಪ್ಲಾಸ್ಟಿಕ್ ಸೀಲ್ ಇರುವ 35 ರೂ.ಗೆ ಒಂದರ ಅಮೆರಿಕದ ಕಿಂಗ್ ಎಡ್ವರ್ಡ್, ಜಾಮೆಟ್ರಿ ಬಾಕ್ಸ್‌ನಂತಹ ತಗಡಿನ ಡಬ್ಬಿಯಲ್ಲಿ ತುದಿಯಲ್ಲಿ ಪ್ಲಾಸ್ಟಿಕ್ಕಿನ ಉದ್ದನೆಯ ಫಿಲ್ಟರ್ ಹೊಂದಿ ಬರುವ, ಸೇದಿದಾಗ ಕಾಫಿ ಆಸ್ವಾದವನ್ನೇ ಕೊಡುವ ಕೆಫೆ ಕ್ರೀಮ್, ಬೇರೆ ಬೇರೆ ಬಣ್ಣಗಳಲ್ಲಿ ಸಿಗುವ ಸೋಬ್ರೇನ್, ತುಳಸಿ- ಏಲಕ್ಕಿ ಹಾಕಿ ಮಾಡಿರುವ ಮತ್ತು ಫಿಲ್ಟರ್‌ಗೆ ಸಿಹಿ ಲೇಪಿಸಿಕೊಂಡಿರುವ ಇಂಡೋನೇಷಿಯಾದ ಗುಡಾಂಗ್‌ಗರಂ, ನೇಪಾಳದ ಕುಕುರು, ಬಾಂಗ್ಲಾದ ಘಾಟುಘಾಟಾದ ರಾಯಲ್, ಪಾಕಿಸ್ತಾನದ ವಂಡರ್, 555 ಆಸ್‌ಪೆನ್, ಬೆನ್‌ಸನ್ ಅಂಡ್ ಹೆಜಸ್‌ನಿಂದ ಹಿಡಿದು ಅವರಪ್ಪನ ಅರೆಸುಟ್ಟು ಬಿಸುಟ ಕೊರೆಚುಟ್ಟದವರೆಗೆ ದೇಶೀ-ವಿದೇಶೀ ಯಾವುದೇ ಭೇದ-ಭಾವವಿಲ್ಲದೇ ಎಲ್ಲ ನೂರೆಂಟು ಬಗೆಯ ಸಿಗರೇಟನ್ನು ಅವರು ತಮ್ಮ ಧೂಮಪಾನದ ಅಲ್ಪಾಯುಷ್ಯದಲ್ಲಿ ಸುಟ್ಟು ಬೂದಿ ಮಾಡಿ ಹೆಸರಾಗಿದ್ದರು. ಅಂಥವರು ಏಕಾಏಕಿ ಸ್ವಯಂ ನಿಗ್ರಹ ಘೋಷಿಸಿಕೊಂಡು ಅದನ್ನೊಂದು ತಪಸ್ಸಿನಂತೆ, ವ್ರತದಂತೆ, ಪೂಜೆಯಂತೆ ಕಟ್ಟುನಿಟ್ಟಾಗಿ ಪಾಲಿಸಿಕೊಂಡು ಮೂರು ವರ್ಷದ ದೀರ್ಘಾತೀದೀರ್ಘವಾದ ಧೂಮರಹಿತ ಹಾದಿಯನ್ನು ಸವೆಸಿ, ಸ್ವಲ್ವ ಸುಧಾರಿಸಿಕೊಂಡಿದ್ದರು. ಅಂಥದ್ದು ಇವತ್ತು ಬಿಟ್ಟೆನೆಂದರೆ ಬಿಡದೀ ಮಾಯೆ ಎಂಬಂತೆ ಸಿಗರೇಟಿನ ಹೊಗೆಯು ಏನು ಕಾರಣವಾಗಿ ಮೆದುಳು- ಹೃದಯಗಳ ಮೂಲೆಮೂಲೆಗಳನ್ನೆಲ್ಲ ಆವರಿಸಿಕೊಂಡಿದೆಯೋ ಎಂಬ ಚಿಂತೆ ಬೆಳಬೆಳಿಗ್ಗೆಯೇ ಕಾಡತೊಡಗಿತ್ತು. ಅಂತಹ ನಿಗ್ರಹ ಪುರುಷನಾದ ತನ್ನನ್ನು ಇಂತಹ ಯಕಃಶ್ಚಿತ್ ಮೋಹ ಕಾಡಿ ಕಟ್ಟಿಹಾಕುತ್ತಿರಬೇಕಾದರೆ ಏನು ಕಾರಣವು ಶಿವನೇ ಎಂದು ನಿನ್ನೆ ರಾತ್ರಿ ಬಿದ್ದಿರುವ ಕನಸುಗಳ ಬಾವಿಗೆ ತಮ್ಮ ಆಲೋಚನೆಯ ಅಂತರಗಂಗೆಯನ್ನು ಬಿಟ್ಟು ಅಳ್ಳಾಡಿಸಿ ನೋಡಿದರು- ಅಲ್ಲೇನಾದರೂ ಉತ್ತರದ ಹೊಳಹು ದೊರೆತೀತೆ? ಎಂದು. ಕನಸುಗಳು ತಮಗೆ ನೆನಪೇ ಇರುತ್ತಿರಲಿಲ್ಲವೆಂದು ಈಗ ನೆನಪಾಗಿ ಆ ಆಲೋಚನೆಯನ್ನು ಕೈಬಿಟ್ಟು ದೇವರಿಟ್ಟಂಗಾಗಲಿ ಎಂದು ಅವನ ಮೇಲೆ ಭಾರ ಹಾಕಿ ಕರಾಗ್ರೇ ವಸತೇ ಲಕ್ಷ್ಮಿ... ಹೇಳಿಕೊಳ್ಳುತ್ತ ಎದ್ದು ಹೊರನಡೆದರು. ಲ್ಯಾಟ್ರೀನಿನ ಏಕಾಂತದಲ್ಲಿ, ಸ್ನಾನಾನಂತರದ ಚಹಾ ಸೇವನೆಯಲ್ಲಿ, ಗಡದ್ದಾದ ನಾಷ್ಟಾ ಮುಗಿಸೆದ್ದು, ಹೊರಗೆ ಕಾರಿಡಾರ್‌ನಲ್ಲಿ ಗಾಳಿ ಸೇವಿಸುತ್ತ ನಿಂತಿರುವ ಕಾಲದಲ್ಲಿ ಹೀಗೆ ಹಲವಾರು ಕಡೆ ಅವರಿಗೆ ಏನೋ ಕೊರತೆಯಾಗಿದೆ ಎಂದೆನಿಸಿತು. ಆ ಸಂದರ್ಭಗಳೆಲ್ಲ ಒಂದು ಸಿಗರೇಟಿನ ಅರ್ಥಪೂರ್ಣ ಸಾಥಿ ಇಲ್ಲದೆ ಹೇಗಾದರೂ ಶೃತಿಬದ್ಧವಾದಾವು ಎಂಬ ಆಲೋಚನೆ ಒಳಗಿಂದ ಗುದ್ದಿಕೊಂಡು ಬಂದದ್ದೇ ತಿಳಿಯಿತು- ಕೊರತೆಯಾಗಿದ್ದು ಅದೇ. ಸಿಗರೇಟು. ಬೆಳಗಿನಿಂದ ಇವರ ಅನ್ಯಮನಸ್ಕತೆಯನ್ನು ಗುರುತಿಸಿದ್ದ ಹೆಂಡತಿ ಊರಿಗೆ ಹೊರಡುವ ತನ್ನ ಅವಸರ ಗಡಿಬಿಡಿಗಳ ಮಧ್ಯೆಯೇ ಏನೋ ಒಂದಿಷ್ಟು ಎಂಬಂತೆ ಬಿಡುವು ಮಾಡಿಕೊಂಡು ಬಯಲಾಟದಲ್ಲಿ ಪಾತ್ರಧಾರಿಯನ್ನು ಸಾರಥಿಯು ಮಾತಾಡಿಸುವಂತೆ ಎಂದಿನಂತೆ ಒಂದು ಬೊಗಸೆ ಕೊಂಕು ಬೆರೆಸಿ, ಮಾತಾಡಿಸಿ ನೋಡಿದಳು: ಏನ್ರೀ ಇಂದು ಮುಂಜಾಲಿಂದ ನೋಡಾಕತ್ತೀನಿ, ಕರೆಂಟು ಹೊಡೆದ ಕಾಗಿ ಹಂಗ ಪೆಕಪೆಕ ಒದ್ಯಾಡಕತ್ತೀರಿ. ಮುಂಜಾನೆ ಸರೀಗಿ ಬಂತಾ ಇಲ್ಲಾ? ಇಲ್ಲಂದ್ರ ಎರಡು ತಂಬಿಗಿ ನೀರು ಕುಡಿಯಿರಿ ತಾನೇ ಒತ್ತಿಕಂಡು ಬರತಾದ. ಒಳಗ ಅದನ್ನ ಹಂಗೇ ಇಟ್ಕಂಡು ಮತ್ತೆ ಮ್ಯಾಲೆ ಒತ್ತಿ ಒತ್ತಿ ನಾಷ್ಟಾ ತುಂಬ್ತೀರಿ! ಹೊಟ್ಟೆ ಗತಿ ಏನಾಗ್ಬೇಕು? ನನ್ ಪರಿಸ್ಥಿತಿ ಏನಾಗ್ಬೇಕು? ದಿನಾ ಎಂಟು ವಾಸು ಊದಿನಕಟ್ಟಿ ಹಚ್ಚಿದರೂ ಲೆಕ್ಕಕ್ಕಿಲ್ಲದಂಗ ಗಾಳೆಂಬ ಗಾಳಿ ಮನ್ಯಾಗ ಗಬ್ಬು ನಾರ್‍ತಿರತಾದ. ಮಾಸ್ತರರು ಆ ಮಾತಿಗೆ ಕಮಕ್‌ಕಿಮಕ್ ಎನ್ನದೇ ಆರಾಮದೀಯಾ ಅಂತ ಮಗುವಿನ ತಲೆ ಸವರುವಂತೆ, ಉಬ್ಬಿಕೊಂಡು ಬಂದಿರುವ ತಮ್ಮ ಉದರ ಮೃದಂಗದ ಮೇಲೆ ಪ್ರೀತಿಯಿಂದ ಟುಮ್ ಟುಮ್ ಎಂಬ ಶಬ್ದ ಬರುವಂತೆ ಎರಡು ಬೆರಳುಗಳಿಂದ ಹೊಡೆದು ಸುಮ್ಮನಾದರು. ತಕ್ಕ ಉತ್ತರ ಸಿಗದೇ ತನಗೆ ಬೇಕಿದ್ದಿದ್ದೂ ಅಷ್ಟೇ ಎಂದುಕೊಂಡೋ ಅಥವಾ ತನ್ನ ಜವಾಬ್ದಾರಿ ಮುಗಿಯಿತೆಂದುಕೊಂಡೋ ಪುನಃ ತನ್ನ ಕೆಲಸದಲ್ಲಿ ಅವರ ಹೆಂಡತಿ ಮುಳುಗಿಕೊಂಡಳು. ಸಿಗರೇಟಿನ ಗುಂಗಿನಿಂದ ಹೇಗೋ ತಮ್ಮನ್ನು ಸಂಭಾಳಿಸಿಕೊಂಡು ಮಾಸ್ತರರು ಶಾಲೆಗೆ ಹೊರಟರು. ತಲುಪಿದರೂ ಕೂಡ! ಹಾಜರಿಗೆ ಸಹಿ ಹಾಕಲೆಂದು ಬಾಗಿ ನಿಂತಿದ್ದಾಗ ಹಿಂದಿನಿಂದ ಎಂದಿನಂತೆ ಮೂಗು ಮುಚ್ಚಿಕೊಂಡು ಬಂದ ರಾಜಶ್ರೀ ಟೀಚರ್ ಸಹಿ ಮಾಡಲೆಂದು ಪೆನ್ನು ಕೇಳಿದರು- ಸೀರೆ ಸೆರಗಿನ ಕರವಸ್ತ್ರದಿಂದ ಭದ್ರವಾಗಿ ಮುಚ್ಚಿಟ್ಟಿದ್ದ ಬಾಯೊಳಗಿನಿಂದಲೇ. ದಿನವೂ ಅವರದು ಅದೇ ರೀತಿ, ಅದೇ ನೀತಿ ಎಂದು ಗೊತ್ತಿದ್ದೂ ಮಾಸ್ತರರಿಗೆ ಅದೇಕೋ ತಮ್ಮ ಸುತ್ತ ಒಂದು ಧೂಮ ವ್ಯೋಮ ದಟ್ಟೈಸಿಕೊಂಡಿರುವುದಾಗಿಯೂ ಅದರ ಗಬ್ಬು ವಾಸನೆ ಸಹಿಸಲಾಗದ ಟೀಚರು ಬಾಯಿ ಸಮೇತ ಮೂಗು ಮುಚ್ಚಿಕೊಂಡೇ ಪೆನ್ನು ಕೇಳುತ್ತಿರುವುದಾಗಿ ತರ್ಕಿಸಿ, ಕ್ಷಣ ವಿಚಲಿತರಾದರು. ಶಿಕ್ಷಕರ ಹಾಜರಿಯ ಪಕ್ಕದಲ್ಲಿಯೇ ತೆರಕೊಂಡು ಮಲಗಿದ್ದ ಸೂಚನಾ ಪುಸ್ತಕದಲ್ಲಿ ಅಂದು 'ವಿಶ್ವ ತಂಬಾಕು ದಿನ'ವಿರುವ ಕಾರಣ ಒಂದು ತನ್ನಮಿತ್ಯ ಸಮಾರಂಭವಿರುವುದಾಗಿಯೂ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳು ತಂಬಾಕು ಸೇವನೆಯ ರೂಪಗಳು, ಪರಿಣಾಮಗಳು ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ಉಪನ್ಯಾಸ ನೀಡುವವರಿದ್ದು, ಎಲ್ಲ ಶಿಕ್ಷಕ ವರ್ಗವು ಸಮಾರಂಭದಲ್ಲಿ ಪಾಲ್ಗೊಂಡು ಯಶಸ್ವಿಗೊಳಿಸಬೇಕೆಂದು ಸೂಚಿಸಲಾಗಿದ್ದನ್ನು ಟೀಚರರು ನೋಡಿ ಹೇಳಿದಾಗಲೇ ಮಾಸ್ತರರ ಗಮನ ಆ ಕಡೆ ಹರಿದದ್ದು. ಅದ್ಯಾಕೆ ತಮ್ಮನ್ನು ಇಂಥ ವಿಚಿತ್ರ ವಿಸ್ಮೃತಿ ಕವಿದುಕೊಂಡಿದೆ ಎಂದು ಕಳವಳಚಿತ್ತರಾದವರಿಗೆ ವಿಶ್ವತಂಬಾಕು ರಹಿತ ದಿನದಂದೇ ಸಿಗರೇಟು ಸೇವನೆಯ ತಲುಬು ಹುಟ್ಟಿ ಭೂತವಾಗಿ ಕಾಡುತ್ತಿರುವುದು ಎಂಥಾ ಸೋಜಿಗವೆಂದು ಸಖೇದಾಶ್ಚರ್ಯವಾಯಿತು. ಅಂತೂ ಹೇಗಾದರೂ ಈ ಯೋಚನೆಯಿಂದ ತಮ್ಮನ್ನು ನಿಗ್ರಹಸಿಕೊಳ್ಳಬೇಕೆಂದು ದೃಢ ನಿರ್ಧಾರ ಮಾಡಿಕೊಂಡು ೧೦ ನೇ ತರಗತಿಗೆ ನಡೆದರು. ಪೂರ್ವಾಹ್ನದ ಹೊತ್ತಿಗೆ ಸಮಾರಂಭ ಶುರುವಾಗಿ ವೈದ್ಯರು ತಮ್ಮ ಇನ್‌ಫಾರ್ಮೇಟಿವ್ ಭಾಷಣವನ್ನು ಮುಗಿಸಿ, ಹಣೆಯ ಮೇಲಿನ ಬೆವರನ್ನೊರೆಸಿಕೊಂಡರು. ತಿಳಿಯದ ವಿಷಯಗಳ ಬಗ್ಗೆ ಏನಾದರೂ ಕೇಳಬಹುದೆಂದು ವಿದ್ಯಾರ್ಥಿಗಳಿಗೆ ಹೇಳಲಾಯಿತಾದರೂ ಅಂದಿನ ಭಾಷಣ ಸ್ವತಃ ವೈದ್ಯರಿಗೆ ತಿಳಿದಿರುವ ಬಗ್ಗೆ ಖಚಿತತೆ ಇರಲಿಲ್ಲ. ಭಾಷಣ ಮಾಡಿ ಗೊತ್ತಿರದ ಅವರು ಒಂದು ವಾಕ್ಯಕ್ಕೆ ೪ ರಂತೆ ಇಂಗ್ಲೀಷ್ ಪದಗಳನ್ನು ಜೊತೆಗೆ ಕನಿಷ್ಠ ಒಂದಾದರೂ ಶುದ್ಧ ವೈದ್ಯಕೀಯ ಪಾರಿಭಾಷಿಕ ಪದವನ್ನು ಹಾಕಿ ಹಾಗೂ ಹೀಗೂ ತಮ್ಮ ಭಾರ ಕಡಿಮೆ ಮಾಡಿಕೊಂಡಿದ್ದರು. ಅಧ್ಯಕ್ಷೀಯ ಸ್ಥಾನದಲ್ಲಿದ್ದ ಮುಖ್ಯ ಗುರುಗಳು ಶಿಕ್ಷಕ ವೃಂದದೆಡೆಗೆ ನೋಡುತ್ತಾ ನೀವು ಯಾರಾದರೂ ಮಾತಾಡಿ ಎಂಬ ಅರ್ಥದಲ್ಲಿ ಹುಬ್ಬು ಹಾರಿಸಿದರಾದರೂ ಅದನ್ನು ನೋಡಿಯೂ ನೋಡದಂತೆ ಎಲ್ಲ ತಲೆಕೆಳಗೆ ಹಾಕಿ ಕುಳಿತಾಗ ಅದೆಲ್ಲಿತ್ತೋ ಹಾಳಾದ ಸಿಗರೇಟಿನ ನೆನಪು ವಿಪರೀತ ಒತ್ತಡದ ವೀರಾವೇಶದೊಂದಿಗೆ ಗುದ್ದಿಕೊಂಡು ಬಂದದ್ದೇ ಹೇಳದೆ, ಕೇಳದೆ ಎದ್ದು ನಿಂತು ಮಾಸ್ತರರು ಸಿಗರೇಟಿನ ಕುರಿತಾಗಿಯೇ ತಮ್ಮ ಭಾಷಣ ಶುರುವಿಟ್ಟು ಅದರ ರೂಪ, ರುಚಿ, ಸ್ವರೂಪ ವೈವಿಧ್ಯ, ಲಕ್ಷಣಗಳು, ಗುಣಗಳು ಇತ್ಯಾದಿಗಳ ಬಗ್ಗೆ ಸವಿವರವಾದ ಮಾಹಿತಿಯೊಂದಿಗೆ ಗುಣಗಾನದ ಮಾತಾಡತೊಡಗಿದರು. ತಮ್ಮನ್ನೇ ತಾವು ಮರೆತಂತೆ ಇದ್ದವರಿಗೆ ಚೀಟಿಯೊಂದು ಬಂದು ಎಚ್ಚರಿಸಿತು. ಚಾಲಾಕಿ ಮಾಸ್ತರ ತಕ್ಷಣ ಸಭಾ ಗಾಂಭೀರ್ಯ ಮತ್ತು ಮರ್ಯಾದೆಗಳನ್ನು ಲೆಕ್ಕಕ್ಕೆ ತೆಗೆದುಕೊಂಡು ನಾಜೂಕಾಗಿ ಪ್ಲೇಟ್ ತಿರುವಿ ಹಾಕಿ ...ಇಷ್ಟೆಲ್ಲಾ ಸಿಗರೇಟು ಮಾಡುತ್ತದೆ ಅಂತ ಏನು ಲೋಕ ಹೇಳುತ್ತದೆ, ನಂಬುತ್ತದೆ, ಆಚರಿಸುತ್ತದೆ ಅದೆಲ್ಲ ಒಂದು ಭ್ರಮೆ. ನಿಜವೆಂದರೆ ಅದೊಂದು ಸ್ಲೋ ಪಾಯಿಜನ್ ಅದರಲ್ಲಿರುವ ನಿಕೋಟಿನ್ ಅಂತೂ... ಇತ್ಯಾದಿಯಾಗಿ ಸರಿದಾರಿಗೆ ಹತ್ತಿ ವಿಷಯಕ್ಕೆ ಬಂದು ಸಭೆಯ ಮಾನ ಕಾಪಾಡಿ, ತಮ್ಮ ಮಾನವನ್ನೂ ಉಳಿಸಿಕೊಂಡು ಕುಸಿದು ಕೂತರು. ಮಧ್ಯಾಹ್ನ ಸ್ಟಾಫಿನೊಂದಿಗೆ ಊಟಕ್ಕೆ ಕುಳಿತಾಗ ಮಾಸ್ತರರ ಭಾಷಣದ್ದೇ ದೊಡ್ಡ ಚರ್ಚೆ. ಅದನ್ನು ನೆನೆದು ನಗುವವರು, ದಾರಿ ತಪ್ಪಿದ್ದ ಭಾಷಣವನ್ನು ಸರಿದಾರಿಗೆ ತಂದುಕೊಂಡ ಚಾಲಕಿತನವನ್ನು ಹೊಗಳುವವರು, ಚೀಟಿ ಬರದಿದ್ದರೆ ಭಾಷಣ ಅದೇ ದಿಕ್ಕಿನಲ್ಲಿ ಸಾಗಿ ಏನೇನಾಗಬಹುದಾಗಿತ್ತು ಎಂದು ಊಹಿಸಿಕೊಂಡು ಆಶ್ಚರ್ಯ- ಆತಂಕ- ಅನುಮಾನಗಳಿಂದ ಬೆರೆತ ನೂರೆಂಟು ಅಭಿಪ್ರಾಯಗಳನ್ನು ವ್ಯಕ್ತಪಡಿಸುವವರು. ಎಲ್ಲರೊಂದಿಗೆ ಇವರೂ ಸೇರಿ ಲಘುವಾಗಿ ಹರಟಿದರು. ಹೊಟ್ಟೆ ತುಂಬಾ ಉಂಡರು, ಮನತುಂಬಾ ನಕ್ಕರು. ಮುಗಿದಿದೆ ಎಂದುಕೊಂಡಿದ್ದ ಸಿಗರೇಟು ತಪನೆ ಹೀಗೆ ಧುತ್ತನೆ ಪ್ರಾರಂಭವಾಗಿ ತಮ್ಮನ್ನು ಪೇಚಿಗೆ ಸಿಲುಕಿಸಬಹುದೆಂದು ಅವರು ಕನಸು-ಮನಸ್ಸಿನಲ್ಲಿಯೂ ಊಹಿಸಿರಲಿಲ್ಲವಾದ್ದರಿಂದ ಅಂದಿನ ಆ ಘಟನೆಯ ನೆನಪು ಒಂದು ಎಚ್ಚರಿಕೆಯ ಗಂಟೆಯಾಗಿ ಎದೆಯಲ್ಲಿ ಹೊಡೆದುಕೊಳ್ಳುತ್ತಾ ಭಾರೀ ಸದ್ದು ಮಾಡುತ್ತಾ, ಆ ಸದ್ದಿನ ಗದ್ದಲದ ಕಾರಣವಾಗಿ ಅವರು ಮತ್ತೂ ಒಂದಷ್ಟು ಹೆಚ್ಚು ಗಲಿಬಿಲಿಗೊಳ್ಳುವಂತೆ ಬರುತ್ತಿದ್ದ ಅಂತಃಪ್ರೇರಣೆಗಳೆಲ್ಲವನ್ನು ಹತ್ತಿಕ್ಕಿಕೊಂಡು ನಕ್ಕರು. ನಕ್ಕರು. ನಕ್ಕರು. ನಕ್ಕು ಸುಸ್ತಾಗಿ ಒಂದು ಮಂಪರು ಕವಿದಂತಾಗಿ ಎಲ್ಲ ಶಿಕ್ಷಕ ಸಹೋದ್ಯೋಗಿಗಳು ತರಗತಿಗೆ ಹೋದ ಮೇಲೆ ನೆಲೆಗೊಂಡ ಪ್ರಶಾಂತ ವಾತಾವರಣದಲ್ಲಿ ತೂಕಡಿಕೆಗೆ ಶುರುವಿಟ್ಟುಕೊಂಡರು. ಎಚ್ಚರವಾದಾಗ ಮಧ್ಯಾಹ್ನದ ಕೊನೆಯ ಅವಧಿಯು ಕೊನೆಯ ಹಂತಕ್ಕೆ ಬಂದಿತ್ತು. ಇಡೀ ದಿನ ೧೦ನೇ ತರಗತಿ ಕಡೆಗೆ ತಲೆಯಿಟ್ಟು ಮಲಗಲೂ ಆಗಿಲ್ಲವೆಂಬುದು ನೆನಪಾಗಿ ಹೀಗಾದರೆ ಸಿಲೆಬಸ್ ಹೇಗೆ ಮುಗಿದೀತೆಂದುಕೊಂಡು ನಿರಾಳವಾಗಿಯೇ ಆತಂಕಪಡುತ್ತಾ, ಕ್ಲೋಜಿಂಗ್ ಪ್ರೇಯರ್‌ನಲ್ಲಿ ಅಂದು ಸಂಜೆ ಸ್ಪೆಷಲ್ ಕ್ಲಾಸು ಇರುವುದಾಗಿ ಏಕಾಏಕಿ ಘೋಷಿಸಿಬಿಟ್ಟರು. ಸ್ಪೆಷಲ್ ಕ್ಲಾಸ್‌ನಲ್ಲಿ ಅಂದು ಎಂದಿಗಿಂತ ಹೆಚ್ಚು ವಿಭೃಂಜಿಸಿದರು ಮಾಸ್ತರರು. ಪ್ರತಿಕ್ರಿಯೆಯೂ ಅದ್ಭುತವಾಗಿತ್ತು. ತನ್ನ ಹೆಸರನ್ನು 'ಸತ್ತಾನ ಕಷ್ಟ' ಎಂದೇ ಬರಕೊಳ್ಳುವಷ್ಟು ಬುದ್ಧಿವಂತನಾದ 'ಸಂತಾನ ಕೃಷ್ಣ'ನು ವ್ಯತ್ಯಸ್ಥ ಸಾಮಾನ್ಯ ಸ್ಪರ್ಶಕವನ್ನು ರಚಿಸಿ ತೋರಿಸಿ, ಇವರ ಆನಂದಾತೀರೇಕಕ್ಕೆ ಕಾರಣನಾಗಿದ್ದ. ೮ನೇ ತರಗತಿಯಿಂದ ೧೦ನೇ ತರಗತಿಗೆ ಬರುವವರೆಗೆ ಅವನಿಗೆ ತಿದ್ದಲು, ಅವನಿಗೆ ಕಲಿಸಲು ಸಕಲ ಶಿಕ್ಷಕವೃಂದ ಆದಿಯಾಗಿ ತಾವುಗಳೂ ಕೂಡ ಏನೆಲ್ಲಾ ಕಷ್ಟಪಟ್ಟದ್ದು, ಶಾಲೆ ಬಿಟ್ಟು ಬರೀ ಬಾವಿ, ಕೆರೆಗಳಿಗೆ ಈಜಲು ಹೋಗುತ್ತಿದ್ದ ಅವನನ್ನು ನಾಲ್ಕು ಹುಡುಗರನ್ನು ಕಳುಹಿಸಿ ಕೊಟ್ಟು ಅಕ್ಷರಶಃ ಹೆಣದಂತೆ ಕೈ ಕಾಲು ಕಟ್ಟಿ ಎತ್ತಿಕೊಂಡು ಬಂದು ಇಳಿಸಿದ ಮೇಲೆ ಎಲ್ಲ ಶಿಕ್ಷಕರು ಸರದಿ ಪ್ರಕಾರ ಅವನ ಮೇಲೆ ತಮ್ಮ ಶಕ್ತಿ ಪ್ರದರ್ಶನ ಮಾಡುತ್ತಿದ್ದುದು ಎಲ್ಲಾ ಸೇರಿ ಅ ಕ್ಷಣ ಸಿನಿಮಾ ರೀಲಿನಂತೆ ಕಣ್ಣ ಮುಂದೆ ಸುಳಿದಿರುಗತೊಡಗಿದವು. ನರಭಕ್ಷಕ ಅಂಗುಲೀಮಾಲನು ಮಹಾತ್ಮಾ ಬುದ್ಧನ ಪುರುಷ ಸ್ಪರ್ಶದಿಂದಾಗಿ ಪುಣ್ಯಾಕ್ಷನಾಗಿ ಪರಿವರ್ತಿತನಾದ ಕಥೆಗಿಂತ ಏನೂ ಕಡಿಮೆಯದಲ್ಲ ಎಂದು ಭಾವಿಸಿ, ತಮ್ಮನ್ನು ಆ ಲೆವೆಲ್ಲಿನಲ್ಲಿ ಕಲ್ಪಿಸಿಕೊಂಡು ಹುಚ್ಚೆದ್ದು ಹೋದರು. ಪ್ರಾಯೋಗಿಕ ರೇಖಾಗಣಿತ ಕಲಿಸಲು ೧೦ ನೇ ತರಗತಿಯವರಾದರೂ ಪ್ರತಿಯೊಬ್ಬರಿಗು ಮೊದಲು ಸ್ಕೇಲು, ಕೋನಮಾಪಕ, ಕೈವಾರಗಳನ್ನು ಹೇಗೆ ಹಿಡಿಯುವುದು, ಹೇಗೆ ಬಳಸುವುದು ಎಂಬ ಪೂರ್ವ ಪ್ರಾಥಮಿಕ ಸಂಗತಿಗಳಿಂದ ಶುರು ಮಾಡಿ ಹೇಳಿಕೊಟ್ಟುದರ ಫಲವಲ್ಲವೇ ಇದು? ಇವತ್ತಿಗೆ ಜನ್ಮ ಸಾರ್ಥಕವಾಯಿತು. ನಿನ್ನಿಂದಾಗಿ ತರಗತಿಯ ಪ್ರಜಾತಂತ್ರೀಕರಣ ಎಂಬ ಪರಿಕಲ್ಪನೆ ಇಲ್ಲಿ ಸಾಕಾರವಾದಂತಾಯಿತು ಸಂತಾನ ಕೃಷ್ಣಾ... ಎಂದು ಮನದಲ್ಲೇ ಖುಷಿಯಿಂದ ಕೇಕೇ ಹಾಕಿದರು. ಇನ್ನಿವತ್ತಿಗೆ ಈ ಪಾಠ ಸಾಕು, ಸದ್ಯಕ್ಕೆ ನಾನು ಬದುಕಿಗೆ ಬೇಕಿರುವ ಪಾಠ ಹೇಳ್ತಿನಿ ಅಂದು ಅಧಿಕೃತವಾಗಿಯೇ ವಿಷಯಾಂತರ ಘೋಷಿಸಿ ಶುರುವಿಟ್ಟುಕೊಂಡರು. ವಿದ್ಯಾರ್ಥಿಗಳೆಂದರೆ ಯಾರು? ಅವರು ಹೇಗಿರಬೇಕು? ಯಾರಿಗೆ ನಿಷ್ಠರಾಗಿರಬೇಕು? ಯಾರು ನಿಜವಾದ ವಿದ್ಯಾರ್ಥಿ? ಆ ನಿಜವಾದ ವಿದ್ಯಾರ್ಥಿಗಳಲ್ಲಿ ಯಾರು ಶೇಷ್ಠರು? ಎಂಬೆಲ್ಲ ಪ್ರಶ್ನೆಗಳನ್ನು ಹಾಕಿಕೊಂಡು ಉತ್ತರಿಸುತ್ತಾ ಸಾಗಿದ ಮೇಲೆ ಕೊನೆಗೆ ಶಿಕ್ಷಕ ಯಾರು? ಅವರು ಹೇಗಿರಬೇಕು? ಯಾರು ನಿಜವಾದ ಶಿಕ್ಷಕ? ಅಂಥ ನಿಜವಾದ ಶಿಕ್ಷಕರಲ್ಲಿ ಶ್ರೇಷ್ಠಾತಿಶ್ರೇಷ್ಠನು ಯಾರು? ಎಂಬ ಪ್ರಶ್ನೆಗಳನ್ನು ಎತ್ತಿಕೊಂಡು ತಮ್ಮನ್ನೇ ಮನಸ್ಸಿನಲ್ಲಿಟ್ಟುಕೊಂಡು ಆದರ್ಶ ಶಿಕ್ಷಕನ ಗುಣಗಳನ್ನು ಪಟ್ಟಿ ಮಾಡಿದರು. ಇದೇ ಚಾನ್ಸ್ ಎಂದು ಶಾಲೆಯಲ್ಲಿನ ತಮ್ಮ ಸಹೋದ್ಯೋಗಿಗಳ ಒಬ್ಬೊಬ್ಬರ ಒಂದೊಂದು ಹುಳುಕನ್ನು ಅವರಾರ ಹೆಸರನ್ನು ಎತ್ತದೆಯೂ ತಾವು ಯಾರ ಬಗ್ಗೆ ಹೇಳುತ್ತಿರುದೆಂಬುದು ಸ್ಪಷ್ಟವಾಗಿ ತಿಳಿವಂತೆ ಪರೋಕ್ಷವಾಗಿ ತಮ್ಮ ಮಾತುಗಳಿಂದ ಸ್ವಚ್ಛವಾಗಿ ಸಾಬೂನು ಹಚ್ಚಿ ತೊಳೆದರು. ಗುಟಖಾ ತಿನ್ನುವವರು, ಮಕ್ಕಳಿಂದಲೇ ಸಿಗರೇಟು ತರಿಸಿ ಶಾಲಾ ಆವರಣದಲ್ಲೇ ಸೇದುವವರಂತೂ ವಿಶೇಷವಾಗಿ ಅವರ ಬಾಯಿಗೆ ಸಿಕ್ಕು ಬಬ್ಬಲ್‌ಗಮ್ಮಾಗಿ ಹೋದರು. ಯಾವುದೇ ದುಶ್ಚಟವಿಲ್ಲದ ತಾವೂ ಸಂತಾನ ಕೃಷ್ಣನಂಥವನಿಂದಲೂ ಲೆಕ್ಕ ಮಾಡಿಸಬಲ್ಲ ತಾವು... ಹೀಗೆ ಇತ್ಯಾದಿಯಾದ ತಾವು ಮಾತ್ರವೇ ಶ್ರೇಷ್ಠರೆಂಬ ಕಲ್ಪನೆಯಲ್ಲಿ ಮುಳುಗಿ- ತೇಲಿ ಕ್ಲಾಸು ಬಿಟ್ಟಾಗ ಆರಕ್ಕಿನ್ನು ಮೂರೇ ನಿಮಿಷ ಬಾಕಿ ಇತ್ತು. ಅಯ್ಯೋ ಮನೆಯಲ್ಲಿ ಒಬ್ಬಳೇ ಇರುತ್ತಾಳೆ. ಇಷ್ಟೊತ್ತಿಗೆ ದುಸುಮುಸು- ದುಸುಮುಸು ಸುಟ್ಟು ಕೆಂಡವಾಗಿರಬೇಕೆಂದು ಕನಲುತ್ತ ಒಂದೇ ಜಂಪಿಗೆ ಮನೆಗೆ ತಲುಪಿಕೊಂಡಾಗ ಸ್ವಾಗತಿಸಿದ ಬೀಗ ಹಾಕಿದ ಬಾಗಿಲು ಅವಳು ಊರಿಗೆ ಹೋಗಿದ್ದನ್ನು ನೆನಪು ಮಾಡಿಕೊಟ್ಟಿತ್ತು. ಉಸ್ಸಪ್ಪಾ ಎಂದು ಕೀಲಿ ತೆರೆದು ಒಳಗೆ ಬಂದರು. ಏಕಾಂತ ಮುಖಕ್ಕೆ ರಾಚಿತು. ಗವ್ವೆನ್ನುವ ಮೌನ ಇಡೀ ಮನೆಯನ್ನು ನಾಲ್ಕು ದಿಕ್ಕುಗಳಿಂದ ಆವರಿಸಿಕೊಂಡಂತೆ ಭಣ ಭಣ ಎನ್ನುತ್ತಿತ್ತು. ಕಿಲಕಿಲ ಗೆಜ್ಜೆ, ಗಲ ಗಲ ಮಾತು, ಕವ ಕವ ಬೈಗುಳಗಳ ಮಡದಿಯ ಗೈರು ಎದ್ದು ಕಾಣುತ್ತಿತ್ತು. ಆವರಿಸಿಕೊಂಡ ಶೂನ್ಯದಲ್ಲಿ ಟೇಪಾದರೂ ಹಚ್ಚೋಣವೆಂಬ ಕಲ್ಪನೆಯೂ ಇವರಿಗೆ ಬರಲಿಲ್ಲ. ಚಾಪೆಯ ಸುರುಳಿ ಬಿಚ್ಚಿ ಅಂಗಾಂತ ಮಲಗಿಕೊಂಡರೆ ಜಂತಿಯಲ್ಲಿ ಹಲ್ಲಿ ಕಂಡು ಅಂಜಿಕೆಯಾಗಿ ಟುಕುಟುಕು ಅಂತು ಜೀವ. ಅವರಿಗೆ ಹಲ್ಲಿ ಎಂದರೆ ಪುಕುಪುಕು. ಈ ಏಕಾಂತ, ಮೌನ, ಹಲ್ಲಿ... ಎಲ್ಲಾ ಸೇರಿ ಮನಸ್ಸಿನಲ್ಲೊಂದು ಖಾಲಿ ಭಾವವನ್ನು ಸೃಷ್ಟಿಸಿ, ಮಾಸ್ತರರ ಮನಸ್ಸನ್ನು ಗೊಂದಲದ ಗೂಡನ್ನಾಗಿಸಿದವು. ಇಷ್ಟೇ ಸಾಕಿತ್ತು ನನಗೆ ಎನ್ನುತ್ತಾ ಬಂದೇ ಬಿಟ್ಟಿತ್ತು ಮತ್ತೆ ಸಿಗರೇಟಿನ ತಲುಬು. ಆಸರೆಗೆ ಶಬ್ದವಿಲ್ಲ, ಸಂಗೀತವಿಲ್ಲ. ಅವಳ ಸಾಂಗತ್ಯವೂ ಇಲ್ಲ. ಒಳಗಿನ ಟುಕುಟುಕಿ ಖಾಲಿತನಗಳು ಬೇರೆ ಸಣ್ಣಗೆ ಕೊರೆಯುತ್ತಿರುವಾಗ ಹೀಗೆ ಧುತ್ತೆನೆರಗಿದ ಸಿಗರೇಟಿನ ನೆನಪು ಅವರನ್ನು ಕ್ಷಣಕಾಲ ವಿಚಲಿತರನ್ನಾಗಿಸಿತ್ತು. ತಮ್ಮ ದೃಢ ನಿರ್ಧಾರದ ಬುಡವು ಅಲುಗಾಡುತ್ತಿದ್ದೆಯೇ? ಎಂಬ ಅನುಮಾನವೂ ಸುಳಿದು ಹೋಗಿ ಅವರ ಮೈ ಒಂದು ಸಣ್ಣ ಕಂಪನವನ್ನು ಅನುಭವಿಸಿತು. ಹೀಗೆ ನಿಸ್ಸಾಹಾಯಕ ಗಳಿಗೆಯಲ್ಲಿರುವ ತನ್ನ ಮೇಲೆ ಪೂರ್ವಸಜ್ಜಿತವಾಗಿ ಬಂದಿರುವ ಸಿಗರೇಟ್ ನೆನಪಿನ ದಾಳಿಯ ನಿರಾಯುಧನೊಬ್ಬನ ಮೇಲೆ ಏಕಾಏಕಿ ಎರಗಿದ ಅಕ್ಷೆಹಿಣಿ ಸೈನ್ಯದಂತೆನಿಸಿ, ಸೋಲಿನ ಸೂಚನೆಯ ವಾಸನೆಯು ಮೂಗಿಗಡರಿ ಮಂಕಾದರು. ಸರಿಯಾಗಿ ಒಂದು ಘಂಟೆಕಾಲ ಸಾಗಿದ ಈ ಬುದ್ಧಿ ಮನಸ್ಸುಗಳ ಸಂಘರ್ಷ ಪರ್ವದಲ್ಲಿ ಜರ್ಝರಿತವಾದ ಅವರ ದೇಹ ದಣಿದಂತಾಡತೊಡಗಿ ಬಾಯಾರಿದರೂ ಎದ್ದು ಹೋಗಲಾಗದ ಸ್ಥಿತಿಯಲ್ಲಿ ಚಾಪೆ ಮೇಲೆ ಅತ್ತಿತ್ತ ಅಸಹಾಯಕನಾಗಿ ಹೊರಳಾಡತೊಡಗಿದಾಗಲೇ ಅಂಜಿದವನ ಮೇಲೆ ಹಲ್ಲಿ ಬಿದ್ದಂತೆ, ಕರೆಂಟ್ ಫಕ್ಕನೆ ಹೋದುದರ ಫಲವಾಗಿ ಫ್ಯಾನು ನಿಂತು ಕತ್ತಲಾವರಿಸಿ, ಮಾಸ್ತರರ ದುಗುಡ ಮತ್ತಷ್ಟು ಹೆಚ್ಚಲಾರಂಭಿಸಿತ್ತು. ಈ ಭಯಗ್ರಸ್ತ ವಾತಾವರಣಕ್ಕೊಂದು ಅಭಯಕಾರಿ ಪ್ರತ್ಯುತ್ತರ ಕಂಡುಕೊಳ್ಳಬೇಕಾದರೆ ಒಂದು ಸಿಗರೇಟಿನ ಸಹಾಯವೇ ಮದ್ದೆಂಬ ಬಲವಾದ ಭಾವನೆ ನಿಧಾನವಾಗಿ ಚಿಗುರತೊಡಗಿತು. ಹೇಗೂ ಹೆಂಡತಿಯಿಲ್ಲ, ವಚನ ಮುರಿದುದನ್ನು ಕೇಳಲು ಗೆಳೆಯರೂ ಇಲ್ಲ. ಆಹಾ! ಅವಕಾಶವೇ ಎಂದುಕೊಂಡರು. ಯಾವುದನ್ನು ಮೆಟ್ಟಿ ನಿಲ್ಲಲು ಬೆಳಗಿನಿಂದ ಪ್ರಯತ್ನಿಸುತ್ತಿದ್ದರೋ ಆ ಉದ್ದೇಶವನ್ನೇ ಮರೆತು; ಒಂದು ಅಪೂರ್ವ ಅವಕಾಶದ ಗಳಿಗೆಗಾಗಿ ಕಾಯುತ್ತಿದ್ದವರಂತೆ, ಈಗ ಅಂತಹ, ಸ್ವತಂತ್ರ, ಸ್ವಚ್ಛಂದ, ಗಳಿಗೆಯ ಅವಕಾಶ ಸಿಕ್ಕಿರುವಂತೆ ಸಂಭ್ರಮಿಸಿ ಕತ್ತಲಲ್ಲೇ ತಡವರಿಸಿಕೊಂಡು ಎದ್ದು ಪ್ಯಾಂಟು ಶರ್ಟು ಹಾಕಿಕೊಂಡು ಚಿಲ್ಲೆರೆ ಚೆಕ್ ಮಾಡಿಕೊಂಡು ಹೊರಗೆ ನಡೆದಾಗ ಬುದ್ಧಿಗೆ ಮಂಕು ಕವಿದಿತ್ತು. ಮನಸ್ಸು ಮಾತ್ರ ಪ್ರಫುಲ್ಲ, ಪ್ರಫುಲ್ಲ! ಟ್ರಿಕ್ಕಿ ಫೆಲೋ ಅದು. ಹೇಗೂ ಕತ್ತಲಿತ್ತಲ್ಲ, ಊರ ಮುಂದಿನ ಚೌರಸ್ತಾಕ್ಕೆ ಬಂದು ನಿಂತರು. ಆ ಕಡೆ ರಸ್ತೆಗೆ ಹೋಗೋಣವೆಂದು ಅನಿಸಿದರೂ ಅಲ್ಲಿ ಆ ದಿಕ್ಕಿಗೆ ಬಾರ್ ಇರುವುದರಿಂದ ತಮ್ಮ ಇಮೇಜಿಗೆ ಇಲ್ಲದ ಧಕ್ಕೆ ಯಾಕೆ ತಂದುಕೊಳ್ಳುವುದೆಂದು ಯೋಚಿಸಿ, ಮುಖದ ಮೇಲೆ ಗಾಂಭೀರ್ಯವನ್ನು ಆರೋಪಿಸಿಕೊಂಡು ವಿರುದ್ಧ ದಿಕ್ಕಿನ ರಸ್ತೆಯಲ್ಲಿ ದೂರಕ್ಕೆ ನಡೆದು ಬಂದರು. ಯಾಕೋ ಎಲ್ಲರೂ ತಮ್ಮನ್ನೇ ನೋಡುತ್ತಿರುವಂತೆ ತಮ್ಮ ಉಪಾಯದ ಸುಳಿವು ಸಿಕ್ಕವರಂತೆ ಕಾಣಿಸತೊಡಗಿದ್ದರೂ ಮನಸ್ಸು ಸರಿಯಾದ ಹಾದಿ ಮೇಲೆ ನಡೆಸಿಕೊಂಡು ಸಾಗಿತ್ತು. ಒಂದು ಸಿಗರೇಟ್, ಒಂದಷ್ಟು ಮದ್ದಿನ ಕಾಗದ, ಒಂದು ಬೆಂಕಿ ಕಡ್ಡಿಯನ್ನು ಜೇಬಿಗೆ ಹಾಕಿಕೊಂಡರು. ಸಿಗರೇಟು ಕೊಟ್ಟ ಹುಡುಗಿ ಚಿಕ್ಕವಳಾಗಿದ್ದರಿಂದ ಪ್ರೈಮರಿ ಶಾಲೆಯದಾಗಿದ್ದು, ತನ್ನನ್ನೇನಾದರೂ ಗುರ್ತಿಸಿರಬಹುದೇ ಎಂಬ ಅಳುಕು ವಿನಾಕಾರಣ ಒಳಗೊಳಗೇ ಸುಳಿದುಹೋಯಿತು. ಹಾಗೆಂದೇ ಅವಳು ಹಚ್ಚಿಕೊಳ್ಳಲು ಲೈಟರ್ ಕೊಡಲು ಮುಂದಾದಾಗಲು ಅದರತ್ತ ಗಮನ ಹರಿಸದೇ ಬೆಂಕಿ ಕಡ್ಡಿ, ಮದ್ದಿನ ತುಂಡನ್ನು ಜೇಬಿಗಿಳಿಸಿಕೊಂಡು ಸರಸರನೇ ನಡೆದರು. ಮೂರು ಸರತಿ ಹಣೆಯೆಂಬ ಹಣೆ ತಣ್ಣೀರ ಬಟ್ಟೆಯಂತಾಗಿತ್ತು. ಅಂಗೈಯಿಂದ ಒರೆಸಿಕೊಳ್ಳುತ್ತ, ಮನೆ ಬಿಡುವಾಗ ಇದ್ದ ಪ್ರಫುಲ್ಲ ಭಾವ- ಪ್ರಶಾಂತ ಸ್ಥಿತಿಗಳನ್ನು ಮತ್ತೆ ತಂದುಕೊಳ್ಳಲು ವೃಥಾ ಹೆಣಗುತ್ತಾ ಕತ್ತಲಲ್ಲಿದ್ದ ಕಾಲುವೆ ಮೇಲಿನ ಸಣ್ಣ ಕಟ್ಟೆ ಮೇಲೆ ಕುಳಿತುಕೊಂಡರು. ಎದೆಯಲ್ಲಿ ಸಣ್ಣಗೆ ನಗಾರಿ. ಮತ್ತೆ ಹಣೆ ಒರೆಸಿಕೊಂಡಾಗ ತಂಗಾಳಿ ಹಾಯೆನಿಸಿತು. ಸ್ಥಿತಿ ಒಂದಿಷ್ಟು ತಹಬಂದಿಗೆ ಬಂದಂಥ ಭಾವನೆಯುಂಟಾಯಿತು. ತಮ್ಮ ಪಾಡಿಗೆ ತಾವು ಮಾತಿನಲ್ಲಿಯೇ ಮುಳುಗಿರುವ ಎರಡು ಆಕೃತಿಗಳು ಲೋಕ ಮರೆತು ಕುಳಿತಿದ್ದವು. ಉಸ್ಸಪ್ಪಾ ಎಂದುಕೊಂಡು ಕಷ್ಟಪಟ್ಟು ನಿರಾಳ ನಗೆಯೊಂದನ್ನು, ನೆಮ್ಮದಿಯ ನಿಟ್ಟುಸಿರನ್ನು ತುಟಿಯಂಚಿಗೆ ತಂದು ನಿಲ್ಲಿಸಿಕೊಂಡು ಅಲ್ಲಿಯೇ ಸಿಗರೇಟನ್ನು ಒಯ್ದು ಸೇರಿಸಿದರು. ಪರ್ರನೆ ಕಡ್ಡಿ ಗೀರಿ ದಟ್ಟ ಕತ್ತಲನ್ನು ಸೀಳಿ ಅದು ಪ್ರಖರವಾಗಿ ಉಂಟುಮಾಡಿದ ಬೆಳಕಿನ ಕನ್ನಡಿಗೆ ತಮ್ಮ ಮುಖವನ್ನು ಸ್ವಲ್ಪ ಹೊತ್ತು ಮಿನುಗಿಸಿ, ಸಿಗರೇಟಿಗೆ ತಗುಲಿಸಿಕೊಂಡು ಒಂದು ಜುರಿ ಎಳೆದುಕೊಂಡು ಹಾಯ್ ಎಂದರೋ ಇಲ್ಲವೋ... ಬೆಂಕಿ ಕಡ್ಡಿಯ ಪ್ರಖರ ಬೆಳಕಿನಲ್ಲಿ ಕಂಡ ಮಾಸ್ತರರ ಮುಖ ನೋಡಿ ಸಂತಾನ ಕೃಷ್ಣ ಸಟಕ್ಕನೆ ಎದ್ದು ನಿಂತು 'ಸರ್... ನಮಸ್ಕಾರ' ಎಂದುಬಿಟ್ಟ!

ಟಿಎಸ್‌ಐ

ಚಿದಾನಂದ ಸಾಲಿ