|
|
ಪ್ರಸೂನ್ ಮಜುಂದಾರ್ |
ವಾಣಿಜ್ಯ ಸಂಪಾದಕ
ದ ಸಂಡೆ ಇಂಡಿಯನ್
|
ರಿಯಲ್ ಎಸ್ಟೇಟ್ ಉದ್ಯಮಿಗಳು ಅಥವಾ ಕಟ್ಟಡ ನಿರ್ಮಾಣ ಕಂಪನಿಗಳು ಬಡವರಿಗಾಗಿ ವಾಸಯೋಗ್ಯ ಮನೆಗಳನ್ನು ಕಟ್ಟುವಂತೆ ಮಾಡಲು ಏನು ಮಾಡಬೇಕು? ಉತ್ತರ- ಏನೂ ಮಾಡಲು ಸಾಧ್ಯವಿಲ್ಲ!! ಛೇ ಛೇ ಎಂಥ ಪ್ರಶ್ನೆ; ಭೂಮಿಯ ಬೆಲೆ ಮುಗಿಲು ಮುಟ್ಟಿರುವ ಕಾಲದಲ್ಲಿ ಬಹು ಸೌಲಭ್ಯದ ಬಹು ಮಹಡಿ ಕಟ್ಟಡಗಳನ್ನು ಕಟ್ಟಿ ಲಾಭದ ಬೆಳೆ ಕೊಯ್ಯುತ್ತಿರುವಾಗ ಅವರನ್ನು ಬಡವರ ಕಡೆಗೆ ವಾಲಿಸುವುದು ಸಾಧ್ಯವೇ? ನಗರದ ಕೊಳಗೇರಿಗಳಲ್ಲಿ ಬದುಕು ಸವೆಸುತ್ತಿರುವ 25 ದಶಲಕ್ಷ (ಹಾಗೂ ಅಧಿಕವಾಗುತ್ತಲೇ ಇರುವ) ಬಡವರಿಗೆ 'ಯಾರಾದರೂ' 'ಯಾವುದಾದರೂ' ಒಂದು ದಿನ ಮನೆ ಕಟ್ಟಿ ಕೊಡುತ್ತಾರೆ- ಅವರ ಜೀವನವೂ ಹಸನಾಗುತ್ತದೆ ಎಂದು ಭ್ರಮಿಸುವುದು ಮೂರ್ಖತನದ ಪರಮಾವಧಿಯೇ ಸರಿ!
ಹಾಗಾದರೆ ಆ ಜನರ ಗತಿಯೇನು? ಕುಡಿಯುವ ನೀರು, ಶೌಚ ವ್ಯವಸ್ಥೆ, ಚರಂಡಿ, ಶಿಕ್ಷಣ- ಆಸ್ಪತ್ರೆ ಮುಂತಾದ ಮೂಲಸೌಕರ್ಯಗಳೇ ಇಲ್ಲದೆ ಬದುಕು ಸವೆಸುತ್ತಿರುವ ಜನರ ಕಣ್ಣುಗಳಲ್ಲಿರುವ 'ಸುಂದರ ಬದುಕಿನ' ಕಲ್ಪನೆಯನ್ನು ಹಾಗೇ ಕಮರಿ ಹೋಗಲು ಬಿಡಬೇಕೇ? ಸ್ವಂತ ಮನೆಯೊಂದಿದ್ದರೆ ಸಾಲದು. ಆ ಮನೆ ಆರೋಗ್ಯಕರ ಪರಿಸರದಲ್ಲಿರಬೇಕಾಗಿರುವುದು ಪ್ರತಿಯೊಬ್ಬನ ಪ್ರಾಥಮಿಕ ಅವಶ್ಯಕತೆ ಕೂಡ. 'ಎಎಸ್‌ಎಸ್‌ಒಸಿಎಚ್‌ಎಎಂ' ನಡೆಸಿದ ಅಧ್ಯಯನದ ಪ್ರಕಾರ ಪ್ರಸ್ತುತ ಸುಮಾರು 190 ದಶಲಕ್ಷ ಜನರು (ಅಂದರೆ ಒಟ್ಟು ನಗರವಾಸಿಗಳ ಶೇ.50ರಷ್ಟು!!) ಕೊಳಗೇರಿಗಳು, ಸೇತುವೆಗಳ ಅಡಿ, ಮೇಲ್ಸೇತುವೆಗಳು ಹಾಗೂ ಫುಟ್‌ಪಾತ್‌ಗಳ ಮೇಲೆ ಜೀವನ ನಡೆಸುತ್ತಿದ್ದಾರೆ. ಅವರು ಎಷ್ಟರ ಮಟ್ಟಿಗಿನ ಆರೋಗ್ಯಕರ ವಾತಾವರಣದಲ್ಲಿದ್ದಾರೆ? ಉತ್ತರ ನಿಮ್ಮ ಊಹೆಗೆ ಬಿಟ್ಟಿದ್ದು. ಹೆಚ್ಚೇಕೆ, ದಿನಗಳೆದಂತೆ ಈ ಸಂಖ್ಯೆ ಊರ್ಧ್ವಮುಖವಾಗೇ ಸಾಗುತ್ತಿದೆ. ಒಂದು ಅಂದಾಜಿನ ಪ್ರಕಾರ ಈ ಸಂಖ್ಯೆ ಮುಂಬರುವ ಏಳು ವರ್ಷಗಳಲ್ಲಿ 225 ದಶಲಕ್ಷ ದಾಟಿದರೂ ಆಶ್ಚರ್ಯವಿಲ್ಲ. ಅಪಾಯಕಾರಿ ರೀತಿಯಲ್ಲಿ ಬೆಳೆಯುತ್ತಿರುವುದು ಅಂಕಿ-ಅಂಶಗಳು ಮಾತ್ರವಲ್ಲ, ಅದಕ್ಕಿಂತ ಭಯಾನಕವಾಗಿರುವುದು ಕೊಳಗೇರಿ ಮಕ್ಕಳ ಸ್ಥಿತಿ. ವರದಿಗಳ ಪ್ರಕಾರ ಈ ಪ್ರದೇಶದ ಸುಮಾರು 80,000 ಮಕ್ಕಳು ಹುಟ್ಟಿದ ಒಂದು ತಿಂಗಳಲ್ಲೇ ಸಾವನ್ನಪ್ಪುತ್ತಾರೆ. ಅದರಲ್ಲಿ ಒಂದುವೇಳೆ ಶೇ.10ರಷ್ಟು ಮಕ್ಕಳು ಬದುಕುಳಿದರೂ ಅವರ ಆಯುಷ್ಯ ಆರು ವರ್ಷ ಮೀರುವುದಿಲ್ಲ. ಶೇ.50ರಷ್ಟು ಮಕ್ಕಳು ನಿರ್ದಿಷ್ಟ ಪ್ರಮಾಣಕ್ಕಿಂತ ಕಡಿಮೆ ತೂಕದವರಾಗಿದ್ದರೆ ಶೇ.30ರಷ್ಟು ಮಕ್ಕಳು ಮಲೇರಿಯ ಹಾಗೂ ಅತಿಸಾರ ಬೇಧಿಯ ಬಲಿಪಶುಗಳು.
ಇಂಥ ಸನ್ನಿವೇಶದಲ್ಲಿ ಸಮಸ್ಯೆಗೆ ಸೂಕ್ತ ಪರಿಹಾರ ಅತ್ಯವಶ್ಯಕ. ಅಂಥ ಪರಿಹಾರ ಈ ಬಿಕ್ಕಟ್ಟನ್ನು ಶಮನಗೊಳಿಸುವುದು ಮಾತ್ರವಲ್ಲದೆ ಆರೋಗ್ಯಕರ ಹಾಗೂ ಯೋಗ್ಯ ವಸತಿ ಸ್ಥಳಗಳನ್ನು ಸೃಷ್ಟಿಸುವ ಮೂಲಕ ಆರೋಗ್ಯವಂತ ಮಾನವ ಸಂಪನ್ಮೂಲಗಳನ್ನು ಸೃಷ್ಟಿಸಿ ಭವಿಷ್ಯದಲ್ಲಿ ಲಾಭದ ಕೊಯ್ಲನ್ನೇ ನೀಡಬೇಕು. ಸಣ್ಣ ಪುಟ್ಟ ಸುಧಾರಣೆಗಳು ಹೇಗೆ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತವೆ ಎಂಬುದಕ್ಕೆ ಮೆಕ್ಸಿಕೊ ಉತ್ತಮ ಉದಾಹರಣೆ. ಕೊಳಚೆ ನೆಲಕ್ಕೆ ಸಿಮೆಂಟ್ ಕಾಂಕ್ರೀಟ್ ಹಾಕಿಸುವ ಮೂಲಕ ಮೆಕ್ಸಿಕೊ ಆ ಪ್ರದೇಶದ ವಯಸ್ಕರ ಜೀವನದಲ್ಲಿ ತೃಪ್ತಿಕರ ಬದಲಾವಣೆಗಳನ್ನು ತಂದಿತು. ಅಷ್ಟೇ ಅಲ್ಲ ಅಲ್ಲಿನ ವಿದ್ಯಾರ್ಥಿಗಳ ಶೇ.೬9ರಷ್ಟು ಶೈಕ್ಷಣಿಕ ಪ್ರಗತಿಗೆ ಇದು ಕಾರಣವಾಯಿತು! ಹಾಗಾದರೆ 190 ದಶಲಕ್ಷ ಜನರಿಗೆ ಆರೋಗ್ಯಕರ ವಾತಾವರಣದಲ್ಲಿ ವಸತಿ ಕಲ್ಪಸಿದರೆ ಎಂಥಾ ವ್ಯಾಪಕ ಬದಲಾವಣೆಗೆ ಭಾರತ ಸಾಕ್ಷಿಯಾಗಬಹುದು!! ಖಾಸಗಿ ಕಂಪನಿಗಳು ಮುಂದೆ ಬರುವುದಿಲ್ಲ ಎಂಬುದು ಸಹಸ್ರಾರು ಬಾರಿ ಸಾಬೀತಾದ ಮೇಲೆ ಇಂಥ ಅಭಿವೃದ್ಧಿಗೆ ಸರ್ಕಾರ ಸ್ವಯಂಪ್ರೇರಣೆಯಿಂದ ಮುಂದೆ ಬರುವುದು ಅತ್ಯಗತ್ಯ. ಪರಿಣಿತರ ಪ್ರಕಾರ ಕಡಿಮೆ ವೆಚ್ಚದ ವಾಸ ಯೋಗ್ಯ ಮನೆಗಳನ್ನು ಕಟ್ಟಲು ಮುಂದೆ ಬರುವ ಖಾಸಗಿ ಕಂಪನಿಗಳಿಗೆ ತೆರಿಗೆ ರಿಯಾಯಿತಿ ನೀಡಿ ಏನೂ ಪ್ರಯೋಜನವಿಲ್ಲ. ಏಕೆಂದರೆ ರಿಯಲ್ ಎಸ್ಟೇಟ್ ಎಂಬ ಬೃಹತ್ ಉದ್ಯಮ ಕ್ಷೇತ್ರದಲ್ಲಿ ಏಕಾಏಕಿ ಬೃಹತ್ ಆದಾಯ ಪಡೆಯುವ ಉದ್ಯಮಿಗಳಿಗೆ ತೆರಿಗೆ ರಿಯಾಯಿತಿ ಆಕರ್ಷಣೀಯ ಕೊಡುಗೆ ಎಂದೆನಿಸುವುದಿಲ್ಲ.
ಆದ್ದರಿಂದ ನಿಜವಾದ ಬದಲಾವಣೆಯ ಹರಿಕಾರನಾಗಲು ಸರ್ಕಾರ ಮಾಡಬೇಕಾಗಿರುವುದಿಷ್ಟೇ; ಪಟ್ಟಣ-ನಗರ-ಮಹಾನಗರಗಳ ಹೊರ ವಲಯಗಳಲ್ಲಿ ವಿಶೇಷ ವಸತಿ ವಲಯ (ಸ್ಪೆಷಲ್ ಹೌಸಿಂಗ್ ಝೋನ್)ಗಳನ್ನು ಸ್ಥಾಪಿಸಲಿ. ವಿಶೇಷ ಆರ್ಥಿಕ ವಲಯದ ಕಾರ್ಯ ವೈಖರಿಯಂತೆಯೇ ಸರ್ಕಾರ, ಕಡುಬಡವರಿಗೆ ಕಡಿಮೆ ವೆಚ್ಚದಲ್ಲಿ ವಾಸಯೋಗ್ಯ ಮನೆಗಳನ್ನು ನಿರ್ಮಿಸುವ ಕಂಪನಿಗಳಿಗೆ ಗುತ್ತಿಗೆ ನೀಡಲಿ. ವಿಶೇಷ ಆರ್ಥಿಕ ವಲಯದಲ್ಲಿ ಖಾಸಗಿ ಕಂಪನಿಗಳ ಖಾಸಗಿ ಲಾಭಕ್ಕೆ ಭೂಮಿಯನ್ನು ಅತಿ ಕಡಿಮೆ ಬೆಲೆಯಲ್ಲಿ ಸರ್ಕಾರ ಮಾರಾಟ ಮಾಡಿರುವುದು ಹಳೆ ವಿಷಯ. ಹಾಗೆ ಸರ್ಕಾರ 200 ದಶಲಕ್ಷ ಜನರ ಅಭಿವೃದ್ಧಿಯೆಂಬ ರಾಷ್ಟ್ರೀಯ ಲಾಭಕ್ಕೆ ನೆರವಾಗುವುದು ಅದಕ್ಕೆ ದೊಡ್ಡ ವಿಷಯವಲ್ಲ; ಅದು ಸರ್ಕಾರದ ಕರ್ತವ್ಯವೂ ಹೌದು.
ಐಐಪಿಎಂ
'ಥಿಂಕ್ ಟ್ಯಾಂಕ್' |