|
ಭಯೋತ್ಪಾದಕರ ಆಡುಂಬೊಲ ಆಗದಿರಲಿ
ಕಳೆದ ಹಲವಾರು ದಶಕಗಳಿಂದ ಜಿಹಾದ್ (ಸತೀಶ್ ಚಪ್ಪರಿಕೆ) ಪಿಡುಗು ಕರ್ನಾಟಕದಲ್ಲಿ ವ್ಯಾಪಿಸಿರುವುದು ಶೋಚನೀಯ. ಒಂದು ದೇಶದ ರಾಜನೀತಿಯೆಂದರೆ ಅದು ಶತ್ರುವನ್ನು ಮೂಲದಲ್ಲಿ ನಾಶಪಡಿಸುವುದೆಂದು ಹೇಳಿದ್ದ ಚಾಣಕ್ಯ. ಯಾವುದೇ ಕಾರಣಕ್ಕಾಗಿ ಶತ್ರುತ್ವದ ಬೀಜ ಮೊಳಕೆಯೊಡೆದು ಸಸಿಯಾಗಿ, ಹೆಮ್ಮರವಾಗಿ ಬೆಳೆಯಲು ಆಸ್ಪದ ಕೊಡುವುದು ರಾಜಧರ್ಮ ಅಲ್ಲ. ಸ್ವಾರ್ಥ ರಾಜಕೀಯ ಎಂದೂ ದೇಶಕ್ಕೆ ಹಿತವನ್ನುಂಟುಮಾಡದು. ಹುಬ್ಬಳ್ಳಿಯ ’ಕಿಮ್ಸ್’ ಜಿಹಾದ್ ಕಾರ್ಯ ಚಟುವಟಿಕೆಗಳಿಗೆ ಕೇಂದ್ರವಾಗಿ ಪರಿಣಮಿಸಿದ್ದು ಆತಂಕಕಾರಿ. ಮೊದಲಿಗೆ ಕಾಶ್ಮೀರಕ್ಕೆ ಮಾತ್ರ ಸೀಮಿತವಾಗಿದ್ದು ಈಗ ದೇಶವ್ಯಾಪಿಯಾಗಿ, ಕರ್ನಾಟಕದಲ್ಲೂನೆಲೆಕಂಡುಕೊಂಡಿದೆ ಎಂದರೆ ಸರ್ಕಾರ ಕಣ್ಣುಮುಚ್ಚಿ ಕುಳಿತಿರುವುದಕ್ಕೆ ಸಾಕ್ಷಿ. ನಮ್ಮ ನೆರೆಯ ಪಾಕಿಸ್ತಾನ ಹಾಗೂ ಮ್ಯಾನ್ಮಾರ್ ದೇಶಗಳು ಪ್ರಜಾಪ್ರಭುತ್ವ ದ್ವೇಷಿಗಳು. ನಮ್ಮ ಒಡಲಲ್ಲೇ ಇಟ್ಟುಕೊಂಡ ’ಬಾಂಗ್ಲಾದೇಶ’ವೂ ಉಗ್ರರ ನೆಲೆಯಾಗಿ ಪರಿಣಮಿಸಿದೆ. ಇನ್ನು ದೇಶದ ದಕ್ಷಿಣದಲ್ಲಿ ಎಲ್‌ಟಿಟಿಇ ಬಾಧಿತ ಶ್ರೀಲಂಕಾ. ಹೀಗೆ ನಾವು ಸುತ್ತಮುತ್ತ ವಿಷ ಬಳ್ಳಿಯಲ್ಲಿ ಸುತ್ತಿಕೊಂಡಿದ್ದೇವೆ. ಒಂದು ಕಡೆ ಮತಗಳಿಗಾಗಿ ಪೈಪೋಟಿಗಳು ಒಳಗಿಂದೊಳಗೆ ಕೆಲಸ ಮಾಡುತ್ತಿರುವಾಗ, ಭಯೋತ್ಪಾದನೆಯ ಮೂಲೋತ್ಪಾಟನೆಗೆ ಸರ್ಕಾರ ಸಂಕಲ್ಪ ಕೈಗೊಳ್ಳುವಲ್ಲಿ ಹಿಂದೇಟು ಹಾಕುತ್ತಿದೆ. ದೇಶದ ಭದ್ರತೆ ಮುಂದೆ ಇತರ ಮಾತುಗಳು, ವಾದ ವಿವಾದಗಳು ಅರ್ಥಹೀನ. ದೇಶದಲ್ಲಿ ಅತಂತ್ರ ಸ್ಥಿತಿ, ಅಮಾಯಕರ ಹತ್ಯೆ, ಜನಜೀವನದಲ್ಲಿ ಭಯದ ವಾತಾವರಣ ಜೊತೆಗೆ ಅಭಿವೃದ್ಧಿಗೆ ಕಂಟಕಪ್ರಾಯವಾದ ಭಯೋತ್ಪಾದನೆ ದೇಶದಲ್ಲಿನ ಸ್ವಾತಂತ್ರ್ಯಪೂರ್ವದ ಸ್ಥಿತಿಯನ್ನು ನೆನಪಿಗೆ ತರುತಿವೆ. ದೇಶವನ್ನು ಭಯೋತ್ಪಾದಕರಿಗೆ ಅಥವಾ ಅನ್ಯದೇಶದ ವಿಧ್ವಂಸಕ ಸಂಘಟನೆಗಳ ಕಾರ್ಯ ಚಟುವಟಿಕೆಗಳ ಆಡುಂಬೊಲವಾಗದಂತೆ ನೋಡಿಕೊಳ್ಳುವುದೇ ನಮ್ಮ ಮುಂದಿರುವ ಪ್ರಥಮ ಪ್ರಾಶಸ್ತ್ಯವಾಗಬೇಕಿದೆ.
ಬಿ. ರಾಮರಾವ್,
ಗುಲ್ಬರ್ಗಾ
ಕಠಿಣ ಕ್ರಮ ಅಗತ್ಯ
ಕಳೆದ ವಾರದ ಸಂಚಿಕೆಯಲ್ಲಿ ಮೂಡಿಬಂದ ’ಜಿಹಾದ್’ ಮುಖಪುಟ ಲೇಖನ ಸಕಾಲಿಕ. ಜಿಹಾದಿ ಕನ್ನಡನಾಡಿಗೆ ಕಂಟಕಪ್ರಾಯ. ಕರ್ನಾಟಕದಲ್ಲಿ ದಿನನಿತ್ಯ ಪತ್ರಿಕೆಗಳನ್ನು ಗಮನಿಸಿದಾಗ ಮುಖಪುಟ ಸುದ್ದಿಯೇ ಭಯೋತ್ಪಾದನೆ! ಅಥವಾ ಜಿಹಾದ್! ಹೋರ ದೇಶಗಳಿಂದ ಬಂದಿರುವ ಅನಾಮಿಕ ಭಯೋತ್ಪಾದಕರೇ ನಾಡಿನ ಪ್ರತಿಭಾವಂತರನ್ನು ತಮ್ಮ ತೆಕ್ಕೆಗೆಳೆದುಕೊಂಡು ಜಿಹಾದ್ ಪ್ರಚಾರದಲ್ಲಿ ತೊಡಗಿದ್ದಾರೆಂದಾಗ ಭವಿಷ್ಯದ ಪ್ರಶ್ನೆಯೇನು?. ಇಂದು ಕರ್ನಾಟಕವಾದರೆ, ಮುಂದಿನ ದಿನಗಳಲ್ಲಿ ದೇಶದ ಎಲ್ಲಾ ಭಾಗಗಳೂ ಜಿಹಾದ್‌ನಲ್ಲಿ ಬೆಂದು ಹೋಗುತ್ತವೆ. ಧರ್ಮದ ಹೆಸರಿನಲ್ಲಿ ನಡೆಯುವ ಜಿಹಾದನ್ನು ಎಲ್ಲರೂ ಖಂಡಿಸಬೇಕು. ಭಯೋತ್ಪಾದನೆಯನ್ನು ವಿರೋಧಿಸಬೇಕು. ಪೊಲೀಸರು ಮತ್ತು ಸರ್ಕಾರ ಈ ನಿಟ್ಟಿನಲ್ಲಿ ಕಠಿಣ ಕ್ರಮ ಜಾರಿಗೊಳಿಸಬೇಕು.
ಸುಮನಾ ಆರ್. ಗೌಡ
ಹಳೆ ಮೂಡಿಗೆರೆ
ಭದ್ರತಾ ವ್ಯವಸ್ಥೆ ಬಲಪಡಿಸಬೇಕು.
ಕರ್ನಾಟಕ ಭಯೋತ್ಪಾದನೆಯ ಬೀಡಾಗುತ್ತಿರುವ ಸ್ಫೋಟಕ ಅಂಶಗಳು ದಿನೇ-ದಿನೇ ಬೆಳಕಿಗೆ ಬರುತ್ತಿದೆ. ಬೆಂಗಳೂರು ಕರ್ನಾಟಕದ ಕಾಶ್ಮೀರ ಆಗುತ್ತಿರುವುದು, ಕಾಲೇಜು ವಿದ್ಯಾರ್ಥಿಗಳು ಭಯೋತ್ಪಾದನೆಯಂಥ ಉಗ್ರ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಿರುವುದನ್ನು ಕೇಳಿದಾಗ ಮೈಜುಮ್ಮೆನಿಸುತ್ತಿದೆ. ಅದಲ್ಲದೆ ವಿದ್ಯಾವಂತರು, ಅದೂ ಎಂಜಿನಿಯರಿಂಗ್ ಪದವಿ ಗಳಿಸಿದ ವಿದ್ಯಾರ್ಥಿಗಳು ಇಂದು ದೇಶದ್ಧೋರಕರಾಗುವ ಬದಲು ದೇಶವನ್ನು ವಿನಾಶದೆಡೆಗೆ ಕೊಂಡೊಯ್ಯುತ್ತಿದ್ದಾರೆ. ತೆರೆಮರೆಯಲ್ಲೇ ಅನೇಕ ಯುವಕರು ಭಯೋತ್ಪಾದನೆ, ಜಿಹಾದ್ ಪರ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ರಾಜ್ಯದ ಅಭಿವೃದ್ಧಿ ಸಾಧ್ಯವೇ? ಇತ್ತೀಚೆಗೆ ಕರ್ನಾಟಕದ ಹೆಚ್ಚುವರಿ ಡಿಜಿಪಿ ಶಂಕರ್ ಬಿದರಿ ರಾಜ್ಯದಲ್ಲಿ ಭಯೋತ್ಪಾದನೆಯೇ ಇಲ್ಲ ಎಂದಿರುವುದು ರಾಜ್ಯದ ಭದ್ರತಾ ವ್ಯವಸ್ಥೆ ಮೇಲೆಯೇ ಅನುಮಾನ ಮೂಡುವಂತೆ ಮಾಡಿದೆ. ದಾವಣಗೆರೆಯಲ್ಲಿ ಬಂಧಿತರಾದ ಶಂಕಿತ ಉಗ್ರರು ಮಂಪರು ಪರೀಕ್ಷೆಯಲ್ಲಿ ನೀಡಿದ ಹೇಳಿಕೆಗಳೆಲ್ಲ ಸುಳ್ಳೇ? ಕರ್ನಾಟಕದಲ್ಲಿ ಭಯೋತ್ಪಾದನೆ ಸ್ವಲ್ಪ ಮಟ್ಟಿಗಾದರೂ ಕಡಿಮೆ ಆಗಬೇಕಾದರೆ, ಭದ್ರತಾ ವ್ಯವಸ್ಥೆ ಬಲಪಡಿಸಬೇಕು ಹಾಗೂ ಪ್ರಾಮಾಣಿಕತೆಯಿಂದ ಕಾರ್ಯನಿರ್ವಹಿಸಬೇಕು.
ಅಶೋಕ್ ಮುಂಡರಗಿ,
ಹುಬ್ಬಳ್ಳಿ
ನಾವೆಲ್ಲರೂ ಒಂದೇ
’ಮರಾಠಿ ಮಡಿಲಲ್ಲಿ ಕನ್ನಡದ ಹಳ್ಳಿ’(ಸತೀಶ್ ಚಪ್ಪರಿಕೆ) ಲೇಖನ ಮನಸೂರೆಗೊಂಡಿದೆ. ಚೊಂಡಿ ಮುಖೇಡ್ ಹಳ್ಳಿಯ ಬಗ್ಗೆ ಹೆಮ್ಮೆಯೆನಿಸಿತು. ಇಂದು ಭಾರತ ದೇಶ ಪ್ರಾದೇಶಿಕ ಭಾವನೆಗಳಿಂದ ಹೊತ್ತಿ ಉರಿಯುತ್ತಿದೆ. ಇದಕ್ಕೆ ಉತ್ತಮ ಉದಾಹರಣೆ ಮುಂಬೈ. ಉತ್ತರ ಭಾರತೀಯರನ್ನು ಮುಂಬೈಯಿಂದ ಹೊರ ಹಾಕಬೇಕು ಎಂಬ ರಾಜ್ ಠಾಕ್ರೆ ನಿರ್ಧಾರ ನಿಜಕ್ಕೂ ಖಂಡನೀಯ. ಭಾರತೀಯ ಪ್ರಜೆ ದೇಶದ ಯಾವುದೇ ಭಾಗದಲ್ಲಿದ್ದರೂ ಆತ ಭಾರತೀಯನೇ, ದೇಶ ಭಾರತವೇ. ಹೀಗಿರುವಾಗ ಪ್ರಾದೇಶಿಕ ಭಾವನೆಗಳು ಸಮಂಜಸವಾದುದಲ್ಲ. ರಾಜ್ ಠಾಕ್ರೆ ಅಂಥವರು ಚೊಂಡಿ ಮುಖೇಡ್‌ದಂತಹ ಐಕ್ಯತಾ ಭಾವವಿರುವ ಹಳ್ಳಿಯನ್ನು ನೋಡಿ ಕಲಿಯಬೇಕು. ಇಂದು ಮುಂಬೈ ಮಾತ್ರವಲ್ಲ, ದೇಶದ ಎಲ್ಲಾ ರಾಜ್ಯಗಳಲ್ಲಿಯೂ ಈ ರೀತಿಯ ವಾತಾವರಣ ನಿರ್ಮಾಣವಾಗಿದೆ. ಇದು ಅಭಿವೃದ್ಧಿಪರ ಬೆಳವಣಿಗೆಯಲ್ಲ. ದೇಶದ ನಾಗರಿಕರಲ್ಲಿ ತಾವೆಲ್ಲರೂ ಒಂದೇ, ಭಾರತೀಯರೆಂಬ ಮನೋಭಾವ ಬೆಳೆಯಬೇಕು. ಹೀಗಿದ್ದರೆ ಮಾತ್ರ ಒಂದು ದೇಶ ಅಭಿವೃದ್ಧಿಯಾಗಲು ಸಾಧ್ಯ.
ಎನ್.ಎಂ. ತಿರುಮಲೇಶ್ವರ
ಹುಣಸೆಮರದ
ಎಲ್ಲವೂ ಮತಬ್ಯಾಂಕ್‌ಗಾಗಿ!
ಉರಿವ ಬೆಂಕಿಗೆ ತುಪ್ಪ ಸುರಿದವರು(ದೇವದಾಸ್ ಮಠಾಲೆ) ಲೇಖನ ಚಿಕ್ಕದಾಗಿದ್ದರೂ ಚೆನ್ನಾಗಿತ್ತು. ರಾಜಕಾರಣಿಗಳು ತಮ್ಮ ಸ್ವಾರ್ಥ ಸಾಧನೆಗಾಗಿ ಬಡಪಾಯಿಗಳನ್ನು ಭಾಷೆಯ ಗಾಳಕ್ಕೆ ಸಿಕ್ಕಿಸಿ, ಅಧಿಕಾರವೆಂಬ ತಿಮಿಂಗಿಲಕ್ಕೆ ಹೊಂಚು ಹಾಕುತ್ತಿದ್ದಾರೆ. ಇಲ್ಲಿ ಪ್ರತಿಯೊಬ್ಬರ ಲೆಕ್ಕಾಚಾರವೂ ನಿಗೂಢ ಮತ್ತು ಎಲ್ಲವೂ ಮತಬ್ಯಾಂಕ್‌ಗಾಗಿ. ಯಾರ ಪರ-ವಿರೋಧ ದನಿಯೆತ್ತಿದ್ದರೆ ಅಲ್ಲಿ ಎಷ್ಟು ಮತಗಳು ತಮ್ಮ ಪಾಲಿಗೆ ಬಿದ್ದವೆಂಬ ಆಸೆ ರಾಜಕೀಯ ಪುಢಾರಿಗಳದ್ದು. ಈಗ ರಾಜ್ ಠಾಕ್ರೆ ಸರದಿ. ಎರಡು ದಶಕಗಳ ಹಿಂದೆ ರಾಜ್ ಠಾಕ್ರೆ ಮಾವ ಬಾಳ ಠಾಕ್ರೆ ದಕ್ಷಿಣ ಭಾರತೀಯರ ವಿರುದ್ಧ ಮರಾಠಿಗರನ್ನು ಪ್ರಚೋದಿಸಿಯೇ ತನ್ನ ನೆಲೆ ಕಂಡುಕೊಂಡಿದ್ದು. ಅವರಿಂದ ಸಿಡಿದ ರಾಜ್ ಠಾಕ್ರೆ ಇದೀಗ ಅದೇ ದಾರಿ ಹಿಡಿದಿರುವುದು ಅಚ್ಚರಿಯೇನಲ್ಲ.
ಅಹ್ಮದ್,
ಕುದ್ರಡ್ಕ
ಸ್ವಾಗತಾರ್ಹ
ಅನಾವರಣದಲ್ಲಿ ಮೂಡಿಬಂದ ’ಮುಸ್ಸಂಜೆಯ ಕ(ವಿ)ತಾ ಪ್ರಸಂಗ’(ಎನ್.ಕೆ. ಸುಪ್ರಭಾ) ಚೆನ್ನಾಗಿತ್ತು. ಪಿ. ಲಂಕೇಶ್ ’ಮುಸ್ಸಂಜೆಯ ಕಥಾಪ್ರಸಂಗ’ ಕಾದಂಬರಿಯನ್ನು ತೆರೆಮೇಲೆ ತರುವ ಪ್ರಯತ್ನ ಮಾಡಿದ್ದಕ್ಕೆ ಕವಿತಾ ಲಂಕೇಶ್ ಅವರನ್ನು ಅಭಿನಂದಿಸಲೇಬೇಕು. ಜನಪ್ರಿಯತೆಯ ಬೆನ್ನೇರಿ ಫಾರ್ಮುಲಾ ಚಿತ್ರ ಮಾಡುವ ಬದಲು ಹೊಸತನದ ಪ್ರಯತ್ನಗಳನ್ನೇ ಮಾಡುತ್ತೇನೆ ಎನ್ನುವ ಕವಿತಾ ಅವರಿಂದ ನಾವು ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ಚಿತ್ರಗಳನ್ನು ನಿರೀಕ್ಷಿಸಬಹುದು. ಕನ್ನಡ ಚಿತ್ರರಂಗ ಗಳಿಕೆ ಮತ್ತು ಜನಪ್ರಿಯತೆಯ ಸುತ್ತಲೇ ಗಿರಕಿ ಹೊಡೆಯುತ್ತಿರುವಾಗ ಇಂತಹ ಸಂವೇದನಾಶೀಲ ನಿರ್ದೇಶಕಿಯರೂ ಇದ್ದಾರೆ ಎಂಬುದೇ ಸಮಾಧಾನಕರ.
ಕಾರುಣ್ಯ ಶೇಖರ್,
ಹಂಪಸಾಗರ
| ಬಹುಮಾನಿತ ಪತ್ರಗಳು |
ದೇಶವನ್ನು ಬಾಧಿಸುವ ವೈರಸ್!
ದಿನ ಸರಿದಂತೆ ದೇಶದಲ್ಲಿ ಮಾವೋವಾದಿಗಳು ತಮ್ಮ ನೆಲೆಯನ್ನು ಇನ್ನಷ್ಟು ಭದ್ರಪಡಿಸಿಕೊಳ್ಳು ತ್ತಿದ್ದಾರೆ. ಪ್ರತಿ ವರ್ಷ ಸುಮಾರು 500 ಮಂದಿ ಮಾವೋವಾದಿಗಳ ಅಟ್ಟಹಾಸಕ್ಕೆ ಬಲಿಯಾಗುತ್ತಿದ್ದಾರೆ. ’ರೋಚಕ ಮಾವೋವಾದಿ ಲೋಕ’ ಮುಖಪುಟ ಲೇಖನ ನಿಜಕ್ಕೂ ರೋಚಕವಾಗಿತ್ತು! ಸಂಜಯ್ ಬಾಸಕ್ ಮತ್ತು ರಂಜನ್ ಬಸು ಅವರ ದಿಟ್ಟತನವನ್ನು ಮೆಚ್ಚಲೇಬೇಕು. ಉತ್ತಮ ವಿಚಾರಗಳನ್ನೇ ಓದುಗರಿಗೆ ನೀಡಲಾಗಿದೆ. ಒಂದು ರೀತಿಯಲ್ಲಿ ಹೇಳುವುದಾರೆ ಮಾವೋವಾದ ಭಾರತೀಯರನ್ನು ಬಾಧಿಸುತ್ತಿರುವ ’ವೈರಸ್’! ದೇಶ ಮಾವೋವಾದಿಗಳೊಂದಿಗೆ ಹೋರಾಟಕ್ಕಿಳಿದರೂ, ಇದರಲ್ಲಿ ಯಶಸ್ಸು ಪಡೆದಿರುವುದು ತೀರಾ ಕಡಿಮೆ. ಇದಕ್ಕೆ ಕಾರಣವೇನು? ಇದನ್ನು ಅರ್ಥೈಸಿಕೊಳ್ಳುವುದು ಕಷ್ಟವೇನಲ್ಲ. ರಾಜ್ಯ ಪೊಲೀಸರ ಅಸಮರ್ಪಕ ಸಿದ್ಧತೆ, ಕಳಪೆ ತರಬೇತಿ ಮತ್ತು ಪ್ರೋತ್ಸಾಹದ ಕೊರತೆ, ಹೊಂದಾಣಿಕೆಯ ಕೊರತೆ ಅಂತಹ ವೈಫಲ್ಯಕ್ಕೆ ಕಾರಣ. ಕೇಂದ್ರ ಸರ್ಕಾರದ ಅಧಿಕಾರಿಗಳು ಕೇಂದ್ರ ಪಡೆಗಳನ್ನು ಸ್ಥಾಪಿಸುವುದು ಆಯಾ ರಾಜ್ಯಗಳಿಗೆ ಬಿಟ್ಟದ್ದು ಎಂದು ಹೇಳುತ್ತಾರೆ. ಇನ್ನೊಂದೆಡೆ ರಾಜ್ಯಗಳು, ಕೇಂದ್ರ ಸರ್ಕಾರ ಮಾವೋವಾದಿಗಳ ನಿಯಂತ್ರಣಕ್ಕೆ ಅಗತ್ಯ ಮಾನವ ಶಕ್ತಿಯನ್ನು ಪೂರೈಕೆ ಮಾಡುತ್ತಿಲ್ಲ ಎಂದು ಆರೋಪಿಸುತ್ತಿವೆ.
ರಾಮ್ ಜೀ ಪಾಂಡೆ
ರಾಜ್ಯಗಳ ವೈಫಲ್ಯ ಕಾರಣ
ದೇಶದಲ್ಲಿ ಕಳೆದ ವರ್ಷ ಸಂಭವಿಸಿದ ಒಟ್ಟು ಸಾವಿನಲ್ಲಿ ಶೇ.೨೭ರಷ್ಟು ಮಂದಿ ಮಾವೋವಾದಿ ಮತ್ತಿತರ ಎಡಪಂಥೀಯ ಹಿಂಸಾಚಾರಕ್ಕೆ ಬಲಿಯಾಗಿದ್ದಾರೆ. ದೇಶದ ಭದ್ರತಾ ವ್ಯವಸ್ಥೆ ಗಂಭೀರ ಆತಂಕ ತಂದಿರುವ ಮಾವೋವಾದಿ ಪಡೆಗಳು ದೇಶದ ಬಹುದೊಡ್ಡ ಪ್ರದೇಶದ ಮೇಲೆ ಹಿಡಿತ ಸ್ಥಾಪಿಸಿದ್ದು, ನಮ್ಮ ಭದ್ರತಾ ವ್ಯವಸ್ಥೆ ಮತ್ತು ಆಡಳಿತದ ಅಂಗಗಳ ಮೇಲೆ ಉದ್ದೇಶಪೂರ್ವಕ ದಾಳಿ ಮಾಡುತ್ತಿವೆ. ಛತ್ತೀಸಗಢ ಇಂದು ದೇಶದ ಅತ್ಯಂತ ಪ್ರಮುಖ ಮಾವೋವಾದಿ ನೆಲೆಯಾಗಿದ್ದು, ಕಳೆದ ವರ್ಷ 361 ಸಾವಿನೊಂದಿಗೆ ಜಮ್ಮು-ಕಾಶ್ಮೀರ ಹೊರತುಪಡಿಸಿದರೆ ಅತಿ ಹೆಚ್ಚು ಹಿಂಸಾಪೀಡಿತ ರಾಜ್ಯ. ದುರದೃಷ್ಟವೆಂದರೆ ಮಾವೋವಾದಿಗಳ ಪ್ರಾಬಲ್ಯವಿರುವ ಪ್ರದೇಶಗಳ ಪೊಲೀಸ್ ಠಾಣೆ, ಅರೆಸೇನಾ ಪಡೆ ಶಿಬಿರಗಳನ್ನು ಸುಸಜ್ಜಿತಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಗಂಭೀರ ಪ್ರಯತ್ನಗಳನ್ನು ಮಾಡಿಲ್ಲ. ಹಾಗಾಗಿ ಮಾವೋವಾದಿಗಳ ದಾಳಿಗೆ ಅವು ಸುಲಭವಾಗಿ ತುತ್ತಾಗುತ್ತಿವೆ. ಮಾವೋವಾದಿ ಚಟುವಟಿಕೆ ಎಂದರೆ, ರಾಜಕೀಯ ಕ್ರಿಯೆ, ಜನ ಸಂಘಟನೆ, ಶಸ್ತ್ರಾಸ್ತ್ರ ತರಬೇತಿ, ಸೇನಾ ಹೊಂದಾಣಿಕೆಗಳನ್ನು ಒಳಗೊಂಡ ಸಂಕೀರ್ಣ ಪ್ರಕ್ರಿಯೆ ಎಂಬುದನ್ನು ಟಿಎಸ್‌ಐ ಪರಿಣಾಕಾರಿಯಾಗೇ ತೋರಿಸಿಕೊಟ್ಟಿದೆ.
ಮೊಹಾಂತಿ ಸಿಂಗಲ್
ದೆಹಲಿ
ಇದು ಚಳುವಳಿಯ ಆರಂಭ
ಭಾರತ ಸರ್ಕಾರ ತಸ್ಲೀಮಾ ನಸ್ರೀನ್ ಅವರನ್ನು ದೇಶಭ್ರಷ್ಟರನ್ನಾಗಿಸಿದರೆ ಅಥವಾ ಅಕ್ರಮ ವಲಸಿಗರು ಎಂದು ಪರಿಗಣಿಸಿದರೆ ಅದೊಂದು ನಾಚಿಕೆಗೇಡಿನ ಸಂಗತಿಯೇ ಸರಿ. ವಿಶ್ವಮಟ್ಟದಲ್ಲಿ ಭಾರತ ಆಧುನಿಕ ಪ್ರಜಾಪ್ರಭುತ್ವ ಎಂದು ಬೀಗುತ್ತಾ, ಅಂತರ್ ರಾಷ್ಟ್ರೀಯ ಮಟ್ಟದ ಸಾಹಿತ್ಯ ಸಮ್ಮೇಳನ ಮತ್ತು ಪುಸ್ತಕ ಮೇಳಗಳನ್ನು ನಡೆಸುತ್ತಿರುವ ಈ ಸಂದರ್ಭದಲ್ಲಿ ಇಂತಹದ್ದು ನಡೆದರೆ ಅದರಂತಹ ಅವಮಾನ ಮತ್ತೊಂದಿರದು. ’ತಸ್ಲೀಮಾ ನಸ್ರೀನ್ ಅವರನ್ನು ನಡೆಸಿಕೊಳ್ಳುತ್ತಿರುವ ರೀತಿ ಅತಿದೊಡ್ಡ ಪ್ರಜಾಪ್ರಭುತ್ವ ಭಾರತಕ್ಕೆ ಅವಮಾನಕಾರಿ. ಯಾರಾದರೂ ನ್ಯಾಯ ಒದಗಿಸುತ್ತೀರಾ?’(ಅರಿಂದಮ್ ಚೌಧುರಿ) ಸಂಪಾದಕೀಯ ಕೇವಲ ಒಂದು ಬರಹವಷ್ಟೇ ಅಲ್ಲ, ಅದು ಒಂದು ಮಹತ್ತರ ಚಳವಳಿಯ ಆರಂಭ, ಅದು ಅಲ್ಲಿಗೆ ನಿಲ್ಲುವುದಿಲ್ಲ ಎಂಬ ಆಶಾಭಾವ ನನ್ನದು. ಅಭಿವ್ಯಕ್ತಿ ಸ್ವಾತಂತ್ರ್ಯ ಯಾರಿಗೂ ಪರಭಾರೆ ಮಾಡಲಾಗದಂಥ ಹಕ್ಕು ಹಾಗೂ ಆಧುನಿಕ ಪ್ರಜಾಪ್ರಭುತ್ವದ ಮೂಲಾಧಾರ.
ಪಂಕಜ್ ಸಚ್‌ದೇವ
ಲೂಧಿಯಾನ
|
ಭಾವನೆಗಳನ್ನು ಮುಚ್ಚಿಡಲು ಸಾಧ್ಯವಿಲ್ಲ!
"ಇದನ್ನು ನನ್ನ ಸಂಪಾದಕೀಯವಾಗಿ ಬರೆಯುತ್ತಿಲ್ಲ" ಎಂದು ಆರಂಭಿಸಿದ ಸಂಪಾದಕೀಯ ಮನ ಮುಟ್ಟುವಂತಿತ್ತು. ಶಬ್ದ ಭಂಡಾರದ ಅಬ್ಬರವಿಲ್ಲದೆ ಕನ್ನಡದಲ್ಲಿ ಸರಳವಾಗಿ ಪ್ರಸ್ತುತ ಪರಿಸ್ಥಿತಿಯ ಚಿತ್ರಣ ಕೊಟ್ಟ ಸಂಪಾದಕರಿಗೆ ಕೃತಜ್ಞತೆಗಳು. ಎಲ್ಲರೂ ಮರೆತು ಹೋಗಿದ್ದ ತಸ್ಲೀಮಾ ವಿಷಯವನ್ನು ಅರ್ಥಗರ್ಭಿತವಾಗಿ ಕಟ್ಟಿಕೊಟ್ಟಿದ್ದೀರಿ. ಜೊತೆಗೆ ತಸ್ಲೀಮಾ ಅವರ ಕವನವನ್ನೂ ಪ್ರಕಟಿಸಿದ್ದು ಸಂಪಾದಕೀಯದ ಹಾಗೂ ಚರ್ಚಿತ ವಿಷಯದ ಗಹನತೆ ಹೆಚ್ಚಿಸಿದೆ. ವಿಲಕ್ಷಣ ಪರಿಸ್ಥಿತಿಯಲ್ಲಿ ನಲುಗುತ್ತಿರುವ ಮಹಿಳೆಯೊಬ್ಬಳ ತುಮುಲಕ್ಕೆ ಹಿಡಿದ ಕನ್ನಡಿ ಆ ಕವನಗಳು. ಮುಖ್ಯವಾಹಿನಿಯ ವಿರುದ್ಧವಾಗಿ ಈಜುವವರನ್ನು ನಮ್ಮ ಸಮಾಜ ಸಹಿಸುವುದಿಲ್ಲ ಎಂಬುದನ್ನು ತಸ್ಲೀಮಾ ಪ್ರಕರಣ ಮತ್ತೊಮ್ಮೆ ಸಾಬೀತು ಮಾಡಿದೆ ಅಷ್ಟೆ. ಎಲ್ಲೇ ಕೂಡಿಟ್ಟರೂ, ಸರಪಳಿ ಹಾಕಿ ಬಿಗಿದರೂ ಭಾವನೆಗಳ ಮೇಲೆ ಹಿಡಿತ ಸಾಧಿಸಲು ಯಾರಿಂದಲೂ ಸಾಧ್ಯವಿಲ್ಲ. ತುಟಿಗೆ ಬೀಗ ಜಡಿದರೂ ಭಾವನೆಗಳ ನಾಗಾಲೋಟವನ್ನು ಹತ್ತಿಕ್ಕುವುದು ಸಾಧ್ಯವೇ? ಆ "ಕಿಟಕಿಗಳನ್ನು ಮುಚ್ಚಿದ ಮನೆಯಲ್ಲಿದ್ದರೂ" ಭಾವನೆಗಳು ಕವಿತೆಯ ರೂಪದಲ್ಲಾದರೂ ಹೊರಗೆ ಬಂದೇ ಬರುತ್ತದೆ. ಮನುಷ್ಯತ್ವದ ಒಂದಂಶವೂ ಇಲ್ಲದೆ ಇಲ್ಲೂ ಮತಬ್ಯಾಂಕ್ ಆಧಾರದ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿರುವ ರಾಜಕಾರಣಿಗಳ ಅಗತ್ಯ ಭಾರತಕ್ಕಿದೆಯೇ? ಎಂಬ ಮೂಲಭೂತ ಪ್ರಶ್ನೆ ಎತ್ತಿರುವ ಅರಿಂದಮ್ ಅವರ ಸಂಪಾದಕೀಯಕ್ಕೆ ಅಭಿನಂದನೆಗಳು.
ಕಲ್ಪನಾ ಶ್ರೀನಿವಾಸ್
ಎನ್.ಆರ್. ಪುರ
ಸುದ್ದಿಯ ಹೂರಣ
ಎಲ್ಲಾ ಕ್ಷೇತ್ರಗಳ ಓದುಗರನ್ನು ಗಮನದಲ್ಲಿಟ್ಟುಕೊಂಡು ಮೂಡಿಬರುವ ಟಿಎಸ್‌ಐ ವಿಭಿನ್ನ ಪತ್ರಿಕೆ ಎಂಬುದರಲ್ಲಿ ಸಂಶಯವಿಲ್ಲ. ಜೋಧಾ ಅಕ್ಬರ್ ಚಿತ್ರ ಬಿಡುಗಡೆಗೂ ಮುಂಚೆ ಸಕಾಲಿಕ ಸಂದರ್ಶನ ಪ್ರಕಟಿಸಿ ಪತ್ರಿಕೆ ತಾನು ಎಲ್ಲರಂತಲ್ಲ
ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದೆ. ಪೂರ್ವಭಾವಿಯಾಗಿ ಸಂದರ್ಶನ ಓದಿ ಚಿತ್ರ ನೋಡಿದ್ದರಿಂದ ಚಿತ್ರದ ಹರವು- ಬೀಸು ಅರ್ಥೈಸಿಕೊಳ್ಳುವುದು ಸಾಧ್ಯವಾಯಿತು. ಇಂಥ ಅಧ್ಯಯನಶೀಲ ನಿರ್ದೇಶಕರು ಭಾರತೀಯ ಸಿನಿಮಾ ರಂಗಕ್ಕೆ ಅವಶ್ಯಕ. ಪ್ರೀತಿ- ಪ್ರೇಮದ ಸುತ್ತ ಒಂದೇ ರೀತಿಯ ’ಅಳಿಯ ಅಲ್ಲ ಮಗಳ ಗಂಡ’ ಎನ್ನುವ ರೀತಿ ಚಿತ್ರ ನಿರ್ಮಿಸುವ ಕಾಲದಲ್ಲಿ ಜೋಧಾ ಅಕ್ಬರ್ ಸಂಪೂರ್ಣ ಭಿನ್ನ ಪ್ರಯತ್ನ. ಚಿತ್ರದ ಪ್ರಧಾನ ಅಂಗಗಳಾದ ಮೂವರ ಸಂದರ್ಶನ ಉತ್ತಮವಾಗಿತ್ತು. ಜಿಹಾದ್, ಶಿಶುಪಾಲ್‌ಗಢ್ ಉತ್ಖನನ, ಚೊಂಡಿ ಮುಖೇಡ್, ಕವಿತಾ ಲಂಕೇಶ್ ಸಂದರ್ಶನ, ಮುಂಬೈ ಸಂಘರ್ಷ, ಜೋಧಾ ಅಕ್ಬರ್... ಎಲ್ಲಾ ಕ್ಷೇತ್ರಗಳ ಸುದ್ದಿಯನ್ನೂ ಹದವಾಗಿ ಕಟ್ಟಿಕೊಟ್ಟ ಟಿಎಸ್‌ಐ ತಂಡದ ಪರಿಶ್ರಮ ಶ್ಲಾಘನೀಯ.
ಆಯಿಷಾ ಬಾನು,
ಉಲ್ಲಾಳ
ಚುರುಕು ಸುದ್ದಿ
ಪುಟ್ಟ ಸುದ್ದಿಗಳನ್ನೂ ಅರ್ಥಗರ್ಭಿತವಾಗಿ, ಕುತೂಹಲಕರವಾಗಿ ಬಿಂಬಿಸುವ ರೀತಿ ಅಮೋಘ. ‘ನಡೆದದ್ದು’, ‘ಅಂತೆಕಂತೆ’ ‘ಚಿತ್ರಶಾಲೆ’ ಚಿಕ್ಕದಾದರೂ ಚೊಕ್ಕವಾಗಿ ಮೂಡಿಬರುತ್ತಿವೆ. ಐದಾರು ಸಾಲುಗಳಲ್ಲಿ ಸಂಪೂರ್ಣ ಸುದ್ದಿಯನ್ನು ಕಟ್ಟಿಕೊಡುವ ಈ ಪುಟಗಳು ಹಾಗೂ ತಕ್ಕುದಾದ ವಿನ್ಯಾಸ ಆಕರ್ಷಣೀಯ. ವಾರದ ವ್ಯಂಗ್ಯ ಚುಟುಕಾಗಿ ಚುರುಕು ಮುಟ್ಟಿಸಿದರೆ, ‘ನಂಬಿದರೆ ನಂಬಿ’ ಹುಬ್ಬೇರಿಸಿ ಬಿಡುತ್ತದೆ. ನುಡಿದದ್ದು ವ್ಯಕ್ತಿತ್ವದ ಪ್ರತಿರೂಪ. ಆದರೆ ‘ಆ ಮುಖ ಈ ಮುಖ’ ಬೇಕೆ? ಎಂಬ ಪ್ರಶ್ನೆ ಮೂಡಿದೆ. ಹಲವಾರು ಕ್ಷೇತ್ರಗಳ ಚರ್ಚೆಯನ್ನು ಒಂದೇ ಚಾವಡಿಯ ಅಡಿ ಮಾಡಿದಂತೆ ಎಲ್ಲಾ ಕ್ಷೇತ್ರಗಳ ಸುದ್ದಿಗಳೂ ಕಲಸುಮೇಲೋಗರ ಎನಿಸದಂತೆ ಚೊಕ್ಕವಾಗಿ ಮೂಡಿಬರುತಿವೆ. ಈ ಪುಟಗಳು ಪತ್ರಿಕೆಯ ವರ್ಚಸ್ಸು ಹೆಚ್ಚಿಸುತ್ತಿವೆ ಎಂದರೆ ತಪ್ಪಾಗಲಾರದು.
ವಿಕಾಸ್ ಪಿಂಟೊ,
ರಾಣೆಬೆನ್ನೂರು
ನಕ್ಸಲರೊಡನೆ ಹತ್ತು ದಿನ: ಮೆಚ್ಚಲೇಬೇಕು
|
ಸತ್ಯ,ಪ್ರಾಮಾಣಿಕತೆ ಮತ್ತು ಸಂಪೂರ್ಣ ಸಮರ್ಪಣಾ ಮನೋಭಾವವಿರುವ ಪತ್ರಿಕೋದ್ಯಮ ಇನ್ನೂ ಜೀವಂತವಾಗಿದೆ ಎಂಬುದನ್ನು ತಿಳಿಸಿಕೊಟ್ಟಿದಕ್ಕೆ ತುಂಬಾ ಕೃತಜ್ಞತೆಗಳು. ಮಸಾಲೆ ಬೆರೆಸಿ ಜನರನ್ನು ಗೆಲ್ಲಬಯಸುವ ವ್ಯಾಪಾರೀ ಪ್ರವೃತ್ತಿಯ ಪತ್ರಿಕೋದ್ಯಮವೇ ಎಲ್ಲೆಡೆ ವಿಜೃಂಭಿಸುತ್ತಿರುವಾಗ, ಬದ್ಧತೆ ಮತ್ತು ಶ್ರಮವಹಿಸಿ ಪರಿಣಾಮಕಾರಿ ಸುದ್ದಿ ನೀಡಿರುವ ಸಂಜಯ್ ಬಾಸಕ್ ಮತ್ತು ರಂಜನ್ ಬಸು ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ. ’ರೋಚಕ ಮಾವೋವಾದಿ ಲೋಕ’ ಮುಖಪುಟ ಲೇಖನ ಅತ್ಯುತ್ತಮ ಮಾತ್ರವಲ್ಲ ಮಾವೋವಾದಿಗಳ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದೆ. ನಕ್ಸಲರ ಬಗ್ಗೆ ಸಾಕಷ್ಟು ಕೇಳುತ್ತಿದ್ದೇವೆ. ದಾಳಿಯಲ್ಲಿ ಪೊಲೀಸರು ಮತ್ತು ನಕ್ಸಲರು ಸಾವಿಗೀಡಾಗಿರುವ ಸುದ್ದಿ ಹೊರತುಪಡಿಸಿದರೆ ಇನ್ಯಾವುದೂ ಸುದ್ದಿಯಾಗುವುದಿಲ್ಲ. ಟಿಎಸ್‌ಐ ಈ ಹೋರಾಟಗಾರರ ಮಾನವೀಯ ಮುಖಗಳನ್ನು ತೆರೆದಿಟ್ಟಿದೆ. ನಕ್ಸಲರ ಬಗ್ಗೆ ಸಂಪಾದಕೀಯ ಹಾಗೂ ಪುಸ್ತಕಗಳು ಹೊರಬರುತ್ತಿವೆ. ನಾನು ಉದಯೋನ್ಮುಖ ಪತ್ರಕರ್ತನಾಗಿ ಮಾಧ್ಯಮ ಇಂಥ ವಿಷಯಗಳ ಮೇಲೆ ಬೆಳಕು ಚೆಲ್ಲಬೇಕು ಎಂಬದನ್ನು ನಿರೀಕ್ಷಿಸುತ್ತೇನೆ. ಹಾಗಾದಾಗಲೇ ನಮ್ಮ ಸರ್ಕಾರ ನಕ್ಸಲ್ ಸಮಸ್ಯೆ ನಿವಾರಣೆಗೆ ಮುಂದಡಿಯಿಡುವುದು. ಹತ್ತು ದಿನಗಳ ಕಾಲ ಮಾವೋವಾದಿ ಪಡೆಯ ಜೊತೆಗಿರುವುದು ಅತಿ ಕಷ್ಟದ ಅನುಭವ. ಆದರೆ ಸಂಜಯ್ ಬಾಸಕ್ ಮತ್ತು ರಂಜನ್ ಬಸು ಅವರು ಆ ಸಾಧನೆ ಮಾಡಿರುವುದನ್ನು ಮೆಚ್ಚಲೇಬೇಕು.
ಎಸ್. ಆಶೀರ್ವಾದ್ ರಹಾ
|
|