ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಪ್ರಜಾಪ್ರಭುತ್ವ
 
ಭಾರತೀಯ ಸಂವಿಧಾನದ ಪವಿತ್ರ ಒಪ್ಪಂದ
 

ವಿದೇಶಿ ಒಪ್ಪಂದಕ್ಕೆ ಮುಂದಾಗುವ ಕಾರ್ಯಾಂಗದ ಅಧಿಕಾರವೂ ಶಾಸಕಾಂಗದ ನಿಯಂತ್ರಣಕ್ಕೊಳಗಾಗಬೇಕು

 
ವಿ.ಆರ್. ಕೃಷ್ಣ ಅಯ್ಯರ್

ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ

ಆರು ದಶಕಗಳ ಹಿಂದೆ ಭಾರತ ವಿಧಿಯೊಂದಿಗೆ ಪ್ರಜಾಪ್ರಭುತ್ವದ ಒಪ್ಪಂದ ಮಾಡಿಕೊಂಡು ಸ್ವಾತಂತ್ರ್ಯದ ಪರಿಪೂರ್ಣತೆಗೆ ಅಡಿಯಿಟ್ಟಿತು. ಲೋಕಸಭೆಯಲ್ಲಿ ಬಹುಮತ ಪಡೆದು ಅಧಿಕಾರ ವಹಿಸಿಕೊಳ್ಳುವ ಸಚಿವ ಸಂಪುಟದ ಸದಸ್ಯರು ಭಾರತೀಯ ಮಾನವೀಯತೆಯ ಧರ್ಮದರ್ಶಿಗಳೇ ವಿನಾ ಪಿತೂರಿ ಕೂಟಗಳ ಸಂಚು ಹೊತ್ತ ವೈಟ್‌ಹೌಸ್ ಸದಸ್ಯರಂತಲ್ಲ. ಸ್ವರಾಜ್ಯ ಕಲ್ಪನೆ ಮತ್ತು ಸ್ವದೇಶಿ ಚಿಂತನೆಗಳಂತೂ ಸಂವಿಧಾನದಲ್ಲಿ ತಿದ್ದುಪಡಿ ಮಾಡಲಾಗದ ಅಂಶಗಳು. ಅಧಿಕಾರದಲ್ಲಿರುವ ಯಾವುದೇ ಸಚಿವರ ನಡವಳಿಕೆ ಬಗ್ಗೆಯೂ ಸಂಸತ್ತಿನಲ್ಲಿ ಚರ್ಚೆ ನಡೆಸಬಹುದು. ಜನಮತ ಸಂಗ್ರಹಿಸಬಹುದು. ಹಾಗೆಯೇ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯ ನೀಡುವ ಹೊಣೆ ಹೊತ್ತವರು ಸಂಸದೀಯ ಪುನರ್‌ವಿಮರ್ಶೆ ಮಾಡಬಹುದು. ಸಚಿವ ಸಂಪುಟ ಶಾಸಕಾಂಗದ ವಿಶ್ವಾಸ ಸಂಪಾದಿಸಿರಬೇಕು. ಸಚಿವ ಸಂಪುಟ ಸಂಸತ್ತಿನಲ್ಲಿ ಬಹುಮತ ಪಡೆಯಲು ವಿಫಲವಾದಲ್ಲಿ ಅದು ಅಧಿಕಾರ ತೊರೆಯಲೇಬೇಕು. ನಮ್ಮ ಸಂವಿಧಾನದ ಸರ್ವೋತ್ಕೃಷ್ಟ ಪ್ರತಿಪಾದನೆ ಇದು. ಕಾಲಕಾಲಕ್ಕೆ ನಡೆಯುವ ಸ್ವತಂತ್ರ ಮತ್ತು ನಿಷ್ಪಕ್ಷಪಾತ ಚುನಾವಣೆಯ ಫಲಿತಾಂಶವಾಗಿ ಚುನಾಯಿತ ಶಾಸಕಾಂಗ ರಚನೆಯಾಗುತ್ತದೆ. ಕೇಂದ್ರ ಸಚಿವರ ವಿದೇಶಿ ಒಪ್ಪಂದಗಳು ಮತ್ತು ಒಡಂಬಡಿಕೆಗಳು ಸಂಸದೀಯ ತನಿಖೆ ಮತ್ತು ಜನಮತ ಸಮೀಕ್ಷೆಯ ವ್ಯಾಪ್ತಿ ಮೀರಿವೆ ಎಂದು ಸಂವಿಧಾನ ಅರಿಯದ ಕೆಲವು ರಾಜಕಾರಣಿಗಳು ಮತ್ತು ಎಳಸು ನ್ಯಾಯಶಾಸ್ತ್ರಜ್ಞರಷ್ಟೇ ಹೇಳುತ್ತಾರೆ. ಹಾಗಿದ್ದಲ್ಲಿ ಸಚಿವಾಲಯ ಬಯಸಿದ ಕೂಡಲೇ ನಮ್ಮ ಸ್ವರಾಜ್ ಕಲ್ಪನೆಗೆ ಗರ ಬಡಿಯಬಹುದು ಅಥವಾ ವಸಾಹತುಶಾಹಿ ಪರಾಧೀನತೆಗೆ ಅದನ್ನು ಮಾರಬಹುದು! ಈ ಜೂಲಿಯಸ್ ಸೀಸರ್ ಅವತಾರವನ್ನು ಪ್ರಶ್ನಿಸುವವರೂ ಇಲ್ಲ! ಇದು ಸಂಸದೀಯ ಪ್ರಜಾಪ್ರಭುತ್ವದ ವಿವೇಚನಾಶೂನ್ಯ ವಿನಾಶ! ಎಲ್ಲಾ ವಿದೇಶಿ ಸಂಬಂಧಗಳೂ ನಮ್ಮ ಆಂತರಿಕ ಸ್ವಾಯತ್ತತೆಯ ಮೇಲೆ ಪರಿಣಾಮ ಬೀರುತ್ತವೆ. ತೃಣ ಸಮಾನ ಎನಿಸಿದ ಗೋಧಿ ಆಮದು, ಅಮೆರಿಕದ ತ್ಯಾಜ್ಯ ವಿಲೇವಾರಿ ಮತ್ತು ಸಮರ ಪೀಡಿತ ಪ್ರದೇಶಗಳಲ್ಲಿ ಭಯೋತ್ಪಾದಕರ ಶರಣಾಗತಿಯೂ ಕೂಡ. ನಾಯಕರು ಒಪ್ಪಂದಕ್ಕೆ ಚಾಲನೆ ನೀಡಬಹುದು. ಆದರೆ ಸಂಸತ್ತಿನ ಅಂತಿಮ ನಿರ್ಣಯ ಸಚಿವ ಸಂಪುಟವನ್ನೂ ನಿಯಂತ್ರಿಸುತ್ತದೆ. ಬಹುಮತದ ಅವಿಶ್ವಾಸ ನಿರ್ಣಯ ಸಚಿವ ಸಂಪುಟವನ್ನೇ ವಜಾ ಮಾಡಬಲ್ಲುದು, ಅದರ ವಿದೇಶಿ ನೀತಿ, ಒಪ್ಪಂದ ಮತ್ತು ಬದ್ಧತೆಯನ್ನು ಕೈ ಬಿಡಬಹುದು. ನಮ್ಮ ಸಂವಿಧಾನ ಬ್ರಿಟಿಷ್ ಮಾದರಿಯದು. ನಮ್ಮ ಸಂಸತ್ತಿನಲ್ಲಿರುವ ಅಧಿಕಾರವನ್ನೇ 'ಹೌಸ್ ಆಫ್ ಕಾಮನ್ಸ್' ಕೂಡ ಹೊಂದಿದೆ. ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಬ್ರಿಟಿಷ್ ಪಡೆಗಳು ಕೆಲ ತುಕಡಿಗಳಿಂದ ಹಿಂದೆ ಸರಿಯಬೇಕಾಗಿ ಬಂದಾಗ ಪ್ರಧಾನ ಮಂತ್ರಿ ಚರ್ಚಿಲ್ ಮತ್ತು ಅವರ ಯುದ್ಧ ಕಾರ್ಯತಂತ್ರಗಳ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸಲಾಗಿತ್ತು. ಪ್ರಧಾನ ಮಂತ್ರಿ ಮೇಲೆ ಅದಕ್ಷತೆಯ ಆರೋಪ ಹೊರಿಸಲಾಗಿತ್ತು. ಇದಕ್ಕೆ ಪ್ರತಿಯಾಗಿ ಚರ್ಚಿಲ್ ನಾಜಿ ಆಕ್ರಮಣದ ವಿರುದ್ಧ ತಮ್ಮ ಐತಿಹಾಸಿಕ ಪ್ರತಿರೋಧವನ್ನು ಕೆಚ್ಚೆದೆಯಿಂದ ಸಮರ್ಥಿಸಿಕೊಂಡರು. ವಿದೇಶಿ ನೀತಿ ಸಚಿವ ಸಂಪುಟದ ಪ್ರತ್ಯೇಕ ಅಧಿಕಾರ ಎಂದು ಹೇಳುತ್ತಾ ಹೌಸ್ ಆಫ್ ಕಾಮನ್ಸ್ ಟೀಕೆಗಳಿಂದ ಪ್ರತಿರಕ್ಷೆ ಪಡೆಯಲಿಲ್ಲ. ಬದಲಾಗಿ ಪ್ರತಿ ಆಕ್ಷೇಪಣೆಯನ್ನೂ ಚರ್ಚೆಯ ಮೂಲಕ ನಿವಾರಿಸಿಕೊಂಡರು. "ಆರೋಪಗಳೆಲ್ಲವೂ ಸರ್ಕಾರದ ವಿಶ್ವಾಸಾರ್ಹತೆಯನ್ನು ಕುಂದಿಸಲೆಂದೇ ಸೃಷ್ಟಿಸಲಾದವು. ಸಚಿವರೆಲ್ಲಾ ಅದಕ್ಷರು ಎಂದು ಸಾಧಿಸಲು ಮತ್ತು ಸಚಿವರ ಆತ್ಮವಿಶ್ವಾಸವನ್ನು ಕುಗ್ಗಿಸಲು, ಸೇನೆಗೆ ನಾಗರಿಕರ ಬೆಂಬಲ ದೊರೆಯದಂತೆ ತಡೆಯಲು, ಸಾಧ್ಯವಾದರೆ ದೇಶದ ಜನತೆಯೆದರು ಪ್ರಧಾನ ಮಂತ್ರಿಯವರನ್ನು ಕೀಳಾಗಿ ಕಾಣಲೆಂದೇ ಇಂತಹ ಚಿಂತನೆಗಳನ್ನು ಜಗತ್ತಿನಾದ್ಯಂತ ರೇಡಿಯೋ ಮತ್ತು ಕೇಬಲ್ ಮೂಲಕ ಹರಡಲಾಗುತ್ತಿದೆ..." ಎಂದು ಚರ್ಚಿಲ್ ತಮ್ಮನ್ನು ಸಮರ್ಥಿಸಿಕೊಂಡಿದ್ದರು. ಕಾರ್ಯಾಂಗದ ಪ್ರತಿ ಚಟುವಟಿಕೆಯೂ ಸಂಸತ್ತಿನ ವಿಮರ್ಶೆಗೆ ಒಳಗಾಗಬೇಕೆನ್ನುವುದು ಪ್ರಶ್ನಾತೀತ. ಕಾರ್ಯಾಂಗದ ಸದಸ್ಯರು ಅಂದರೆ ಸಚಿವರು ಶಾಸಕಾಂಗವನ್ನು ಮೀರಿ ಪರಮಾಧಿಕಾರ ಪಡೆಯಲು ಸಂವಿಧಾನದ ಮೂಲ ತತ್ವಗಳನ್ನೇ ಮೂಲೆಗುಂಪು ಮಾಡುವುದು ವಿಲಕ್ಷಣ ವಾದ. ಪ್ರಜಾಪ್ರಭುತ್ವದ ಕುಸಿತ ಅಂದರೆ ಸ್ವರಾಜ್ಯ ಕಲ್ಪನೆಗೆ ಕಳಂಕ ತಂದಂತೆಯೇ ಸರಿ. ಇದು ಎಂದಿಗೂ ಸಂಭವಿಸಬಾರದು. ವಿದೇಶಿ ಒಪ್ಪಂದವನ್ನು ಅಂಗೀಕರಿಸುವ ಕಾರ್ಯಾಂಗದ ಅಧಿಕಾರವನ್ನು ಪುನರ್ ವಿಮರ್ಶಿಸಬೇಕೆಂಬುದು ಈಗಿನ ತುರ್ತು. ಒಪ್ಪಂದ ಅಂಗೀಕಾರಕ್ಕೆ (7ನೇ ಪರಿಚ್ಛೇದದ 14ನೇ ವಿಷಯ, 1ನೇ ಪಟ್ಟಿ) ಉಭಯ ಸದನಗಳ ಒಪ್ಪಿಗೆ ಕಡ್ಡಾಯವಾಗಬೇಕು ಎಂಬುದರ ಕುರಿತು ತುರ್ತಾಗಿ ಶಾಸನ ಜಾರಿಯಾಗಬೇಕಿದೆ. ಭಾರತಕ್ಕೆ ಸಂಬಂಧಪಟ್ಟ ಯಾವುದೇ ಅಂತರ್ ರಾಷ್ಟ್ರೀಯ ಒಪ್ಪಂದ, ಪ್ರಕಟಣೆ ಅಥವಾ ಸಮ್ಮೇಳನಕ್ಕೆ ಲೋಕಸಭೆಯ ಪೂರ್ವಾನುಮತಿ ಇಲ್ಲದೆ ಅಥವಾ ಉಭಯಸದನಗಳ ಒಪ್ಪಿಗೆ ಇಲ್ಲದೆ ಪ್ರಧಾನ ಮಂತ್ರಿಯವರು ಸಹಿ ಹಾಕುವ ಅವಕಾಶವಿರಬಾರದು. ಒಪ್ಪಂದದ ವಿಷಯದಲ್ಲಿ ರಾಷ್ಟ್ರೀಯ ಚರ್ಚೆಯಾಗುತ್ತಿದ್ದಲ್ಲಿ ಜನಮತ ಸಂಗ್ರಹದ ಮೂಲಕ ನಿರ್ಣಯ ಕೈಗೊಳ್ಳುವ ಕಟ್ಟಳೆ ತರಬೇಕು. ಮಾರುಕಟ್ಟೆ ಆಧಾರಿತ ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣಗಳೆಂಬ ಪ್ರಭಾವೀ ಶಕ್ತಿಗಳ ಒತ್ತಡದಲ್ಲಿರುವ ಭಾರತೀಯ ಸಚಿವರು ಅಭಿವೃದ್ಧಿ, ರಕ್ಷಣೆ ಮತ್ತು ಶಾಂತಿಯನ್ನು ಗಮನದಲ್ಲಿರಿಸಿಕೊಂಡು ಒಪ್ಪಂದಗಳತ್ತ ಗಮನಹರಿಸುವಂತಾಗಬೇಕು. ಅದಕ್ಕಾಗಿ ಒಪ್ಪಂದಗಳನ್ನು ಕಾನೂನಿನ ಚೌಕಟ್ಟಿನಲ್ಲಿ ತರಬೇಕು. ವ್ಯಕ್ತಿಗಳು ಮಾತ್ರವಲ್ಲ, ನಮ್ಮ ಭ್ರಷ್ಟ ಜಗತ್ತಿನಲ್ಲಿ ದುಡ್ಡೂ ಮಾತನಾಡುತ್ತದೆ! ಸಾರ್ವಜನಿಕ ವ್ಯವಹಾರದಲ್ಲಿ ನೈತಿಕತೆಯೇ ಸತ್ತು ಹೋಗಿದೆ. ಏನೇ ಆದರೂ ಒಪ್ಪಂದಗಳು -ಅವು ನಾಗರಿಕ, ಸೇನೆ, ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಕಾರ್ಯಕ್ಷೇತ್ರಗಳಿಗೆ ಸಂಬಂಧಿಸಿದ್ದಿರಬಹುದು. ಸರ್ವಾಧಿಕಾರಿ ಧೋರಣೆಯಿಂದ ನೆರವೇರಬಾರದು. ಶಾಸಕಾಂಗದ ಚರ್ಚೆಗೆ ಬದ್ಧವಾಗಿರಬೇಕು. ಒಂದು ಕಲ್ಪನೆ... ಜಾಗತಿಕ ರಂಗ ಸಮಾನತಾವಾದದ ಕಡೆಗೆ ಪರಿವರ್ತನೆಯಾಗುವುದನ್ನು ಕಾಣುವುದೇ ನನ್ನ ಮಹತ್ವಾಕಾಂಕ್ಷೆ. ಇಲ್ಲಿ ಎರಡು ಆಶಯಗಳನ್ನು ತಿಳಿಸಲೇಬೇಕು. ಕಮ್ಯುನಿಸ್ಟ್ ರಾಷ್ಟ್ರ ಚೀನಾಗೆ ಭೇಟಿ ನೀಡಿದ ರಾಷ್ಟ್ರೀಯ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಪ್ರಗತಿಪರ ಪ್ರೇರಣೆ ಪಡೆದು ವಾಪಾಸಾಗಿದ್ದಾರೆ. ಸಮಾಜವಾದಿ ಅರ್ಥ ವ್ಯವಸ್ಥೆ ಮತ್ತು ಅತ್ಯುತ್ತಮ ನ್ಯಾಯಾಂಗ ವ್ಯವಸ್ಥೆ ಇರುವ ಲೆನಿನ್ ಅವರ ರಷ್ಯಾಗೆ ಪ್ರಧಾನ ಮಂತ್ರಿ ಡಾ. ಮನಮೋಹನ್ ಸಿಂಗ್ ಭೇಟಿ ನೀಡಿದ್ದಾರೆ. 21ನೇ ಶತಮಾನದ ಬೌದ್ಧಿಕ ಮತ್ತು ತಾರ್ಕಿಕವಾಗಿ ಶಕ್ತ ರಾಷ್ಟ್ರಗಳಾದ ರಷ್ಯಾ, ಭಾರತ ಮತ್ತು ಚೀನಾಗಳು ವಿಶ್ವ ಶಾಂತಿ ಮತ್ತು ಮಾನವೀಯತೆ ಹರಡುವ ಬದ್ಧತೆ ಇರುವ ಮಿತ್ರರಾಷ್ಟ್ರಗಳು. ಈ ತ್ರಿರಾಷ್ಟ್ರಗಳು ತಮ್ಮ ವಿಧಿಯೊಂದಿಗಿನ ಒಪ್ಪಂದದ ಅನ್ವಯ ಅಮೆರಿಕದ ಜೊತೆ ಐಹಿಕ- ಧಾರ್ಮಿಕ ವ್ಯವಹಾರ ನಡೆಸುತ್ತವೆ. ಪರಮಾಣು ದೈತ್ಯನ ಜೊತೆಗಲ್ಲ! ಬದಲಾಗಿ ಸ್ವಾತಂತ್ರ್ಯದ ಅನ್ವೇಷಕ, ಏಕತೆ ಮತ್ತು ಸರ್ವ ಸುಖಿನೋಭವಂತು ಎನ್ನುವ ಅಮೆರಿಕದ ಜೊತೆ. ಭಾರತದ ಶತಕೋಟಿ ಬಡವರು ಹಿಂದುಳಿಯುವಿಕೆಯಿಂದ ಹೊರಬರಬೇಕು. ದಿನೇ ದಿನೇ ಸಮೃದ್ಧರಾಗುತ್ತಿರುವ ಶತಕೋಟ್ಯಧಿಪತಿಗಳು ಮಾನವೀಯ ಗುಣಗಳನ್ನು ಮೈಗೂಡಿಸಿಕೊಳ್ಳಬೇಕು. ಮತ್ತೊಂದು ವಿಚಾರ: ಪ್ರಭಾವಿಗಳ ಒತ್ತಡವಿದ್ದರೂ ನಮ್ಮ ಸಂಸತ್ತು ಪ್ರತಿಭಟಿಸಿದರೆ ಮತ್ತು ಸುಪ್ರೀಂ ಕೋರ್ಟು ಸಂವಿಧಾನಕ್ಕೆ ವಿರೋಧ ಎಂದರೆ ಸಾಕು ಕೇಂದ್ರದ ಸಚಿವರು ಪ್ರಶಂಸಿಸುವ ಒಪ್ಪಂದಗಳು ತರಗಲೆಗಳಂತೆ ಉದುರಿಹೋಗುತ್ತವೆ. ಭಾರತೀಯ ಮಾನವೀಯತೆಯ ಪವಿತ್ರ ಒಪ್ಪಂದವೇ ಸಂವಿಧಾನ. ಅದುವೇ ಪರಮಾಧಿಕಾರ.

ಟಿಎಸ್‌ಐ

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .