ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಪ್ರಸ್ತುತ:

ಡರ್ಟಿ ಪ್ರಕರಣ & ನಿರೀಕ್ಷೆಯ ನವೀಕರಣ!

 

 

ಕಳೆದ ಮಂಗಳವಾರ ಲಾಲೂ ಮಂಡಿಸಿದ ಸತತ ಐದನೇ ಜನಪ್ರಿಯ ರೈಲ್ವೆ ಬಜೆಟ್ ಬಗ್ಗೆ ನಮ್ಮ ಸಂಸದರಿಗೆ ಅಂತಹ ನಿರೀಕ್ಷೆಗಳೇನೂ ಇರಲಿಲ್ಲ. ಕನ್ನಡಿಗರಿಗೆ ಅವಹೇಳನ ಮಾಡಿದ 'ಡರ್ಟಿ ಪೀಪಲ್' ಪ್ರಕರಣದ ವಿಷಯ ತೆಗೆದು ಕರ್ನಾಟಕದ ಮಾನ-ಮರ್ಯಾದೆ ಕಾಪಾಡಬೇಕು ಎಂದು ಅವರೆಲ್ಲಾ ಅವುಡುಗಚ್ಚಿದ್ದರೆಂದು ಕಾಣುತ್ತದೆ.
ಆದರೆ ರಾಜ್ಯದ ಜನಸಾಮಾನ್ಯರಲ್ಲಿ ಒಂದಷ್ಟು ದೂರದ ನಿರೀಕ್ಷೆಗಳಿದ್ದವು. ರೈಲ್ವೆ ಇಲಾಖೆಯ ತಾರತಮ್ಯ ನೀತಿಯ ವಿರುದ್ಧ ಈ ಮುನ್ನ ರಾಜ್ಯದಲ್ಲಷ್ಟೇ ಅಲ್ಲ, ದೆಹಲಿಯಲ್ಲೂ ಪ್ರತಿಭಟನೆಗಳು ನಡೆದಿದ್ದವು. ಇದರಿಂದಾಗಿ ಮಾತ್ರವಲ್ಲದೆ ತಮ್ಮ 'ಡರ್ಟಿ ಪೀಪಲ್' ಪ್ರಕರಣದ ಕೊಳೆಯನ್ನು ತೊಳೆದುಕೊಳ್ಳಲಾದರೂ ಬಜೆಟ್ ಕಡಾಯಿಯಿಂದ ರಾಜ್ಯದ ತಟ್ಟೆಗೆ ಬಡಿಸುವಲ್ಲಿ ಲಾಲೂ ಕೈ ಸ್ವಲ್ಪ ಧಾರಾಳವಾಗುತ್ತದೆ ಎಂದು ಜನ ನಿರೀಕ್ಷಿಸಿದ್ದರಲ್ಲಿ ತಪ್ಪೇನೂ ಇರಲಿಲ್ಲ. ಆದರೆ ರಾಜ್ಯಕ್ಕೆ ಲಾಲೂ ಸಾಹೇಬರು ಬಡಿಸಿದ್ದು ಬರೀ ಉಪ್ಪಿನಕಾಯಿ. ಹೀಗಾಗಿ ಕಳೆದ ನಾಲ್ಕು ವರ್ಷಗಳಂತೆಯೇ 2008-09ರ ‘ಜನಪ್ರಿಯ ಬಜೆಟ್ ರೈಲು' ಕೂಡಾ ತಾರತಮ್ಯದ ಹಳಿಯ ಮೇಲೇ ಓಡಿದೆ.
ಇದು ಪ್ರಸಕ್ತ ಯುಪಿಎ ಮೈತ್ರಿಕೂಟದ ಕೊನೆಯ ರೈಲ್ವೆ ಬಜೆಟ್. ಮುಂಬರುವ ಚುನಾವಣೆಗೆ ಪೂರ್ವ ತಯಾರಿ ಬಜೆಟ್ ಎಂಬುದು ಎಲ್ಲರಿಗೂ ತಿಳಿದದ್ದೇ. ಚುನಾವಣೆ ಹಿನ್ನೆಲೆಯಲ್ಲಿಯೇ ಲಾಲೂ ಏನೆಲ್ಲಾ ಮಾಡಿದ್ದಾರೆ ನೋಡಿ: ಎಲ್ಲಾ ವರ್ಗದ ಪ್ರಯಾಣ ದರ ಇಳಿಕೆ ಮಾಡಿ ಮಧ್ಯಮ ವರ್ಗದವರನ್ನು ಮಾತ್ರವಲ್ಲ ಸರಕು ಸಾಗಣೆ ದರ ಇಳಿಸಿ ಉದ್ಯಮ ವರ್ಗದವರನ್ನೂ ಓಲೈಸಿದ್ದಾರೆ. 53 ಹೊಸ ರೈಲುಗಳು, 10 ಹೊಸ ಗರೀಬ್‌ರಥ್ ರೈಲುಗಳು; ಮುಂದಿನ ಐದು ವರ್ಷಗಳಲ್ಲಿ ಸಾರ್ವಜನಿಕ-ಖಾಸಗಿ ಸಹಯೋಗದ ಯೋಜನೆಗಳಿಗಾಗಿ ಒಂದು ಲಕ್ಷ ಕೋಟಿ ರೂ. ನಿಗದಿ... ಅಬ್ಬಬ್ಬಾ ಇನ್ನೂ ಏನೆಲ್ಲಾ?
ಬಜೆಟ್ ಮಾತು ಅತ್ತ ಇರಲಿ. ಐದು ವರ್ಷಗಳ ಹಿಂದೆ ನಷ್ಟದ ಸುರಂಗದೊಳಗೆ ಸಾಗುತ್ತಿದ್ದ ಭಾರತೀಯ ರೈಲ್ವೆಯೆಂಬ ಬಿಳಿಯಾನೆ ಈಗ ೨೫ ಸಾವಿರ ಕೋಟಿ ರೂ. ಲಾಭ ತಂದು ಕೊಡುತ್ತದೆ. ಅದೂ ಪ್ರಯಾಣಿಕರ ದರದಲ್ಲಿ ಸ್ವಲ್ಪವೂ ಏರಿಕೆಯಾಗದೆ! ಈ ಬದಲಾವಣೆ ಹೇಗೆ ಸಾಧ್ಯವಾಯಿತು? ಈ ಸ್ಥಿತ್ಯಂತರದ ಅಧ್ಯಯನಕ್ಕೆ ಕೇವಲ ಮ್ಯಾನೇಜ್‌ಮೆಂಟ್ ಕೋರ್ಸ್‌ಗಳಲ್ಲಿ ಒಂದೆರಡು ಪಠ್ಯ ರೂಪಿಸಿದರೆ ಸಾಲದು. ಒಂದು ಅಧ್ಯಯನ ಕೇಂದ್ರವನ್ನೇ ತೆರೆಯಬೇಕು. ಇದನ್ನು ವ್ಯಂಗ್ಯವಾಗಿ ಹೇಳುತ್ತಿಲ್ಲ; ಹಗರಣವೊಂದರಲ್ಲಿ ಸಿಕ್ಕಿಬಿದ್ದು, ಜೈಲಿಗೂ ತೆರಳಿ, ರಾಜಕೀಯ ಜೀವನ ಮುಗಿದೇ ಹೋಯಿತು ಎನ್ನುವ ಸ್ಥಿತಿಯಲ್ಲಿದ್ದ ನೇತಾರನೊಬ್ಬ ಕೇಂದ್ರಕ್ಕೆ ಬಂದು, ಅಲ್ಲಿಯೂ ತಾನು ಬೇಡಿದ್ದ ಖಾತೆ ಸಿಗದೆ, ಒಲ್ಲದ ಮನಸ್ಸಿನಲ್ಲೇ ರೈಲು ಎಂಜಿನ್ ಹತ್ತಿದ್ದ ಹಿನ್ನೆಲೆ ನೋಡಿದರೆ ಬಿಹಾರಿ ಭಯ್ಯನ ಸಾಧನೆಗೆ ಭೇಷ್ ಹೇಳಲೇಬೇಕು. 'ಲಾಲೂ ಜಾದೂ' ನಿಜವೇ ಆಗಿದ್ದಲ್ಲಿ ಅದು ಅಭಿವೃದ್ಧಿಶೀಲ ರಾಷ್ಟ್ರಗಳಿಗೆಲ್ಲಾ ಒಂದು ಮಾದರಿಯೇ.
ಇಂತಹ ಲಾಲೂ ಜಾದೂವಿನ ಕುರಿತು ಮಾತ್ರ ಅಧ್ಯಯನ ಮಾಡಿದರೆ ಸಾಲದು; ಲಾಲೂ ಬರುವ ಮುಂಚೆ ರೈಲ್ವೆ ಇಲಾಖೆಗೆ ನಿಜಕ್ಕೂ ನಷ್ಟದ ತುಕ್ಕು ಹಿಡಿದಿತ್ತೇ ಅಥವಾ ನಿಯಮಿತ ಆದಾಯ ಇದ್ದರೂ 'ಸೋರಿಕೆ'ಯಾಗಿ ಬಿಡುತ್ತಿತ್ತೆ? ಎಂಬುದು ಕೂಡಾ ಅಷ್ಟೇ ಗಂಭೀರವಾಗಿ ಅಧ್ಯಯನ ಮಾಡಬೇಕಾದ ವಿಚಾರ.
ಹೀಗೆ ಅಧ್ಯಯನ ಮಾಡ ಬೇಕಾದ ವಿಚಾರ ಮತ್ತೊಂದಿದೆ. ರೈಲ್ವೆ ಸಚಿವಾಲಯದಿಂದ ರಾಜ್ಯಕ್ಕೆ ಅನ್ಯಾಯವಾಗುತ್ತಿದ್ದರೂ ಅದೇಕೆ ನಮ್ಮ ಸಂಸದರು ಬರೀ ಮೊಸಳೆ ಕಣ್ಣೀರು ಸುರಿಸುತ್ತಿದ್ದಾರೆ? ರಾಜ್ಯದ ಬಹುತೇಕ ರಾಜಕಾರಣಿಗಳು 'ಟ್ರಾವೆಲ್ಸ್', ಸರಕು ಸಾಗಣೆ ಉದ್ಯಮದಲ್ಲಿರುವುದು ಇದಕ್ಕೆ ಕಾರಣವೇ? ಟ್ರಾವೆಲ್ಸ್ ಲಾಬಿಯೇ 'ರೈಲ್ವೆ ಅನ್ಯಾಯ'ಕ್ಕೆ ಮೂಲವೇ? ಈ ಅಧ್ಯಯನವಂತೂ ಅತಿ ಜರೂರು.
ಮತ್ತೊಂದೆಡೆ ಲಾಲೂ ಅವರ ಜಾದೂವನ್ನು ಯಾವುದೇ ಸಂದೇಹವಿಲ್ಲದೆ ನಂಬುವುದು ದುಸ್ತರ. ರೈಲ್ವೆ ಸಚಿವರ ಕುರ್ಚಿಯಲ್ಲಿ ಕುಳಿತು ಬಂದವರಿಗಂತೂ 'ತಮ್ಮ ಕೈಯಲ್ಲಿ ಮಾಡಲಾಗದ್ದನ್ನು ಅದು ಹೇಗೆ ಈ ಬಾಣಸಿಗ ಮಾಡಿಬಿಟ್ಟ?' ಎಂಬ ಪ್ರಶ್ನೆ ಕಿವಿಯಲ್ಲಿ ಸದಾ ಗುಂಯ್‌ಗುಡುತ್ತಿದೆ. ಹೀಗಾಗಿಯೇ ನಮ್ಮ ಜಾಫರ್ ಶರೀಫ್ ಅವರೂ ಶಂಕೆಯ ಕುರ್ಚಿ ಏರಿದ್ದಾರೆ. ರೈಲ್ವೆ ಸಚಿವರು ನೀಡಿದ ಅಂಕಿ-ಅಂಶಗಳನ್ನೆಲ್ಲಾ ತರಿಸಿ ನಿಜವಾಗಿ ರೈಲ್ವೆ ಅಷ್ಟು ಲಾಭ ಮಾಡಿದೆಯೇ ಎಂದು ಪರಿಶೀಲನೆ ನಡೆಸುವುದಾಗಿ ಹೇಳಿದ್ದಾರೆ.
ಇನ್ನು ಬಿಹಾರದವರೇ ಆದ ನಿತೀಶ್ ಕುಮಾರ್ ಅವರಂತೂ ಭಾರತೀಯ ರೈಲ್ವೆಯ ಈ ಸಾಧನೆಯೆಲ್ಲಾ ತಾವು ರೈಲ್ವೆ ಸಚಿವರಾಗಿದ್ದಾಗ ಬಿತ್ತಿದ್ದ ಬೀಜದ ಫಲವು ಎಂದು ತಮ್ಮ ಬೆನ್ನು ತಾವೇ ತಟ್ಟಿಕೊಂಡಿದ್ದಾರೆ. ಅತ್ತ ಬಿಜೆಪಿ ಮುಖಂಡರಂತೂ "ಇಡೀ ಭಾರತದ ಆರ್ಥಿಕ ವ್ಯವಹಾರ ಹೆಚ್ಚಾದುದರ ಫಲವಾಗಿ ರೈಲ್ವೆಗೆ ಕೂಡಾ ಲಾಭವಾಗಿದೆ. ಅದರಲ್ಲಿ ಲಾಲೂ ಸಾಧನೆ ಏನು ಎಂದು ಮೂಗು ಮುರಿದಿದ್ದಾರೆ. ಹೀಗಾಗಿ ಇಂದು ಲಾಲೂ ಪ್ರಸಾದ್ ಯಾದವ್ ಅವರು ಹೇಳುತ್ತಿರುವ ರೈಲ್ವೆ ಸಾಧನೆಯೆಲ್ಲಾ ನಿಜವೇ?
ಎಂಬ ಶಂಕೆ ವ್ಯಕ್ತಪಡಿಸಬೇಕಾದದ್ದೇ.
ಮತ್ತೆ ಬಜೆಟ್ ವಿಚಾರದತ್ತ ಹೊರಳಿ ಲಾಲೂ ಸಾಹೇಬರಿಗೇ ಮತ್ತೊಂದಿಷ್ಟು ನೇರ ಪ್ರಶ್ನೆ ಕೇಳೋಣ: ಲಾಲೂ ಅವರೇ, ನೀವು ಹೇಳುವಂತೆ ರೈಲ್ವೆಗೆ 25 ಸಾವಿರ ಕೋಟಿ ರೂ. ಲಾಭವಾದದ್ದೇ ನಿಜವಾದಲ್ಲಿ ಅದೇಕೆ ನೀವು ಕರ್ನಾಟಕದಂತಹ ರಾಜ್ಯಗಳ ಬಹು ಒತ್ತಾಯದ ಯೋಜನೆಗಳಿಗೆ ಹಣ ಒದಗಿಸಬಾರದು? ಅದೇಕೆ ನೀವು ಉತ್ತರ ಭಾರತವೆಂದರೆ ಬಿಹಾರ, ದಕ್ಷಿಣ ಭಾರತವೆಂದರೆ ತಮಿಳುನಾಡು ಮಾತ್ರ ಎಂದು ಭಾವಿಸುತ್ತೀರಿ? ಕನ್ನಡದವರೊಬ್ಬರನ್ನು ಪ್ರಧಾನಿಯನ್ನಾಗಿ ಮಾಡಿ ಪ್ರೀತಿಯ ಮಳೆ ಸುರಿದ ನೀವು (ತಾವೇ ಹೇಳಿದಂತೆ) ನಿಮ್ಮದೇ ಇಲಾಖೆಯಿಂದ ರಾಜ್ಯದ ಬೇಡಿಕೆ ಈಡೇರಿಸುವಲ್ಲಿ ಮಾತ್ರ ಅದೇಕೆ ಹಿಂದೇಟು ಹಾಕುತ್ತೀರಿ?
...ಪ್ರಶ್ನೆಗಳೇನೋ ಬಹಳಷ್ಟಿವೆ. ಆದರೆ ಲಾಲೂ ಇದಾವುದಕ್ಕೂ ಉತ್ತರಿಸಲಾರರು. ಏಕೆಂದರೆ ಅವರ ವೋಟ್‌ಬ್ಯಾಂಕ್ ಕರ್ನಾಟಕದಲ್ಲಿಲ್ಲ!
ಅಂದ ಹಾಗೆ ರೈಲ್ವೆ ಬಜೆಟ್ ಮಂಡನೆಯಾದ ಮರುದಿನವೇ ನಮ್ಮ ಸಂಸದರೆಲ್ಲಾ ಸಭೆ ಸೇರಿ ರಾಜ್ಯಕ್ಕಾದ ಅನ್ಯಾಯದ ಕುರಿತು ಬಿಸಿಬಿಸಿ ಚರ್ಚೆ ಮಾಡಿದರು. ಮುಂದಿನ ಕಾರ್ಯ ಯೋಜನೆ ರೂಪಿಸಲು ನಿರ್ಧರಿಸಿದರು. ಹೀಗಾಗಿ ಮುಂದಿನ ರೈಲ್ವೆ ಬಜೆಟ್‌ನಲ್ಲಿ ರಾಜ್ಯಕ್ಕೆ ಹೆಚ್ಚಿನ ಪಾಲು ನಿರೀಕ್ಷಿಸಬಹುದು. ಈ ನಿರೀಕ್ಷೆಯಷ್ಟೇ ತಾನೆ ಈಗ ಉಳಿದಿರುವುದು!

ಟಿಎಸ್‌ಐ

ಬಿ.ಎಸ್. ನಾರಾಯಣಸ್ವಾಮಿ

ಇತರ ಪ್ರಸ್ತುತ ಲೇಖನಗಳು

ಭಾರತದ ಮರು ಸಂಶೋಧನ

ಅಂಗಾಂಗ ಮಾರಾಟ ಜಾಲ: ನಿಥಾರಿ ತಿರುವು?

ಮುಂಬೈ ಸಂಘರ್ಷ :ಉರಿವ ಬೆಂಕಿಗೆ ತುಪ್ಪ ಸುರಿದವರು

   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .