ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
 
ಪತ್ರ ಚರಿತ್ರೆ
ಹೊ ಚಿ ಮಿನ್‌ಗೆ ಎಲ್‌ಬಿಜೆ ಬರೆದ ಪತ್ರ
 

1967ರ ಹೊತ್ತಿಗೆ ಅಮೆರಿಕ ಅಧ್ಯಕ್ಷ ಲಿಂಡನ್ ಬಿ. ಜಾನ್ಸನ್ ಅವರು ವಿಯೆಟ್ನಾಂ ವಿಷಯದಲ್ಲಿ ರಾಜತಾಂತ್ರಿಕ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದರು. ಅಷ್ಟರಲ್ಲಾಗಲೇ ಮೂರು ವರ್ಷಗಳಿಂದ ವಿಯೆಟ್ನಾಂ ವಿರುದ್ಧ ಯುದ್ಧ ನಿರತವಾಗಿದ್ದ ಅಮೆರಿಕ ಸೇನಾ ಪಡೆ ಸಾಧಿಸಿದ್ದು ಶೂನ್ಯ, ಇನ್ನು ಗೆಲುವು ದೂರದ ಮಾತಾಗಿತ್ತು. ಹಾಗಾಗಿ ಸಂಧಾನದ ಮೂಲಕ ಯುದ್ಧಕ್ಕೆ ತೆರೆ ಎಳೆಯಲು ನಿರ್ಧರಿಸಿದ ಲಿಂಡನ್ ಜಾನ್ಸನ್ ಉತ್ತರ ವಿಯೆಟ್ನಾಂ ನಾಯಕ ಹೊ ಚಿ ಮಿನ್ ಅವರಿಗೆ ಸಂಧಾನ ಪ್ರಸ್ತಾಪ ಪತ್ರ ಬರೆದರು. ಆದರೆ, ಪತ್ರಕ್ಕೆ ಖಾರವಾಗಿ ಪ್ರತಿಕ್ರಿಯಿಸಿದ ಹೊ ಚಿ ಮಿನ್, ಅಮೆರಿಕ ವಿಯೆಟ್ನಾಂ ವಿರುದ್ಧದ ಬಾಂಬ್ ದಾಳಿ ನಿಲ್ಲಿಸುವವರೆಗೆ ಸಂಧಾನದ ಪ್ರಶ್ನೆಯೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದರು. ಆದರೆ ಬಾಂಬ್ ದಾಳಿ ಮುಂದುವರಿದರೂ ಕೊನೆಗೂ ಅಮೆರಿಕವೇ ಭಾರೀ ಮುಖಭಂಗ ಅನುಭವಿಸಬೇಕಾಯಿತು.

8 ಫೆಬ್ರವರಿ 1967

ಆತ್ಮೀಯ ಅಧ್ಯಕ್ಷರೇ, ವಿಯೆಟ್ನಾಂ ಬಿಕ್ಕಟ್ಟಿಗೆ ಒಂದು ಅಂತ್ಯ ಹಾಡಬಹುದು ಎಂಬ ಭರವಸೆಯೊಂದಿಗೆ ನಿಮಗೆ ನಾನು ಈ ಪತ್ರ ಬರೆಯುತ್ತಿದ್ದೇನೆ. ಈ ಬಿಕ್ಕಟ್ಟಿನಿಂದಾಗಿ ಈಗಾಗಲೇ ಭಾರೀ ಪ್ರಮಾಣದ ಪ್ರಾಣ ಹಾನಿಯಾಗಿದೆ, ಅಷ್ಟೇ ಪ್ರಮಾಣದ ಜನ ಗಾಯಗೊಂಡಿದ್ದಾರೆ. ಜನಸಾಮಾನ್ಯರು ಯಾತನಾಮಯ ಜೀವನ ಸಾಗಿಸುತ್ತಿದ್ದು, ಸಾಕಷ್ಟು ಆಸ್ತಿ-ಪಾಸ್ತಿಗೆ ಕೂಡ ಹಾನಿಯಾಗಿದೆ. ಇಷ್ಟಾಗಿಯೂ ನಾವು ಶಾಂತಿಯುತ ಪರಿಹಾರ ಕಂಡುಕೊಳ್ಳುವಲ್ಲಿ ವಿಫಲವಾದರೆ ಇತಿಹಾಸ ನಮ್ಮನ್ನು ಕಠಿಣ ಶಿಕ್ಷೆಗೆ ಗುರಿಪಡಿಸದೇ ಇರದು. ಆದ್ದರಿಂದ ಶಾಂತಿ ಮಾರ್ಗವನ್ನು ಕಂಡುಕೊಳ್ಳುವ ಗುರುತರವಾದ ಜವಾಬ್ದಾರಿ ನಮ್ಮಿಬ್ಬರ ಮೇಲಿದೆ ಎಂದು ನಾನು ಭಾವಿಸುತ್ತೇನೆ. ಆ ಹೊಣೆಗಾರಿಕೆಯ ಭಾಗವಾಗಿಯೇ ನಾನೀಗ ನಿಮಗೆ ನೇರವಾಗಿ ಬರೆಯುತ್ತಿರುವೆ. ಕಳೆದ ಹಲವು ವರ್ಷಗಳಿಂದ ನಾವು ವಿವಿಧ ಪ್ರಯತ್ನಗಳ ಮೂಲಕ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಿದೆವು. ಹಾಗಾಗಿಯೇ ನಿಮ್ಮನ್ನು ಹಾಗೂ ನಿಮ್ಮ ಸಹವರ್ತಿಗಳನ್ನು ಸಂಪರ್ಕಿಸಿದ್ದೇವೆ. ಆದರೆ ಯಾವ ಕಾರಣಗಳಿಂದಾಗಿಯೋ ಅಂತಹ ಪ್ರಯತ್ನಗಳು ಫಲಪ್ರದವಾಗಿಲ್ಲ. ನಾವು ಬೇಷರತ್ತಾಗಿ'ನಿಮ್ಮ ದೇಶದ ವಿರುದ್ಧದ ಬಾಂಬ್ ದಾಳಿ ಹಾಗೂ ಎಲ್ಲಾ ವಿಧದ ಸೇನಾ ಕಾರ್ಯಾಚರಣೆಯನ್ನು ನಿಲ್ಲಿಸಿದ್ದಲ್ಲಿ ನಮ್ಮ ಸರ್ಕಾರದೊಂದಿಗೆ ದ್ವಿಪಕ್ಷೀಯ ಮಾತುಕತೆಗೆ ಸಿದ್ಧರಾಗುವುದಾಗಿ ನಿಮ್ಮ ಸರ್ಕಾರದ ಪ್ರತಿನಿಧಿಗಳು ಕಳೆದ ಎರಡು ವಾರಗಳಿಂದ ಸಾರ್ವಜನಿಕ ಹೇಳಿಕೆ ನೀಡುತ್ತಿರುವುದನ್ನು ಗಮನಿಸಿದ್ದೇನೆ. ಅದು ವಾಸ್ತವವಾಗಿ ನಿಮ್ಮದೇ ಪ್ರಸ್ತಾಪ ಎಂದು ಜವಾಬ್ದಾರಿಯುತ ಮೂಲಗಳು ಇತ್ತೀಚೆಗಷ್ಟೇ ತಿಳಿಸಿವೆ. ಆದರೆ ಇಲ್ಲಿ ಎದುರಾಗುವ ಎರಡು ಸಂದಿಗ್ಧ ಪರಿಸ್ಥಿತಿಗಳನ್ನು ನಾನು ನಿಮಗೆ ಯಾವ ಮುಚ್ಚುಮರೆಯಿಲ್ಲದೆ ತಿಳಿಸಬಯಸುತ್ತೇನೆ. ಅದರಲ್ಲಿ ಮೊದಲನೆಯದು; ಸಾರ್ವಜನಿಕವಾಗಿ ನಿಮಗಿರುವ ಸ್ಥಾನಮಾನ, ಜನಮನ್ನಣೆಯ ಕಾರಣದಿಂದಾಗಿ ನಾವು ಅಂತಹ ಕ್ರಮಕೈಗೊಳ್ಳುತ್ತಲೇ ಮಾತುಕತೆಗಳು ಆರಂಭವಾಗಿವೆ ಎಂಬ ಸೂಚನೆಯನ್ನು ಜಗಜ್ಜಾಹೀರು ಮಾಡಿಬಿಡುತ್ತವೆ. ಅಂತಹ ಬೆಳವಣಿಗೆ ಮಾತುಕತೆಯ ಗೌಪ್ಯತೆ ಮತ್ತು ಖಾಸಗಿತನಕ್ಕೆ ಧಕ್ಕೆ ತರಲಿದೆ. ಎರಡನೆಯದಾಗಿ, ನಾವು ನಮ್ಮ ದಾಳಿ ಸ್ಥಗಿತಗೊಳಿಸಿದ ಆ ಸಂದರ್ಭವನ್ನೇ ಬಳಸಿಕೊಂಡು ನೀವು ನಿಮ್ಮ ಸೇನೆಯ ನಿಯೋಜನೆಯನ್ನು ಇನ್ನಷ್ಟು ವಿಸ್ತರಿಸುವುದಿಲ್ಲ ಎಂಬ ವಿಶ್ವಾಸ ನಮಗಿಲ್ಲ. ಹಾಗಾಗಿ ಅದು ನಮ್ಮ ದೊಡ್ಡ ಆತಂಕ. ಈ ಸಮಸ್ಯೆಗಳ ಅರಿವಿದ್ದೂ, ಯುದ್ಧ ಕಾರ್ಯಾಚರಣೆ ಸ್ಥಗಿತಗೊಳಿಸುವಂತೆ ನಮ್ಮ ಪಡೆಗೆ ಸೂಚಿಸಲು ನಾನು ಚಿಂತಿಸಿದ್ದೇನೆ. ನೀವು ಮೊದಲು ಪ್ರಸ್ತಾಪಿಸಿದಂತೆ ಸಾರ್ವಜನಿಕ ಹೇಳಿಕೆಗಳು ಅಥವಾ ಖಾಸಗೀ ರಾಜತಾಂತ್ರಿಕ ಮಾರ್ಗಗಳ ಮೂಲಕವಂತೂ ಅಲ್ಲ. ನಿಮ್ಮ ದೇಶದ ವಿರುದ್ಧದ ಬಾಂಬ್ ದಾಳಿ ನಿಲ್ಲಿಸಲು ನಾವು ಸಂಪೂರ್ಣ ಸಿದ್ಧ ಮತ್ತು ದಕ್ಷಿಣ ವಿಯೆಟ್ನಾಂನಲ್ಲಿ ಹೆಚ್ಚುವರಿ ಸೇನಾ ಪಡೆಯನ್ನು ನಿಯೋಜಿಸುವುದನ್ನು ಕೈಬಿಡಲು ಕೂಡ ನಿರ್ಧರಿಸಿದ್ದೇವೆ. ದಕ್ಷಿಣ ವಿಯೆಟ್ನಾಂನ ಭೂಪ್ರದೇಶ ಹಾಗೂ ಸಮುದ್ರಗಳ ಮೂಲಕ ಸೇನಾ ಆಕ್ರಮಣ ಕೂಡ ಸಂಪೂರ್ಣ ನಿಂತಿದೆ ಎಂದು ನಿಮಗೆ ಸ್ಪಷ್ಟಪಡಿಸುತ್ತಿದ್ದೇನೆ. ಯುದ್ಧ ನಿಯಂತ್ರಣದ ಈ ಕ್ರಮಗಳು ನಮ್ಮ ನಡುವೆ ದ್ವಿಪಕ್ಷೀಯ ಗಂಭೀರ ಹಾಗೂ ಗೌಪ್ಯ ಮಾತುಕತೆಗೆ ನಾಂದಿ ಹಾಡಿ ನಿರೀಕ್ಷೆಗೂ ಮೊದಲೇ ಶಾಂತಿ ಸ್ಥಾಪನೆಗೆ ನೆರವಾಗಲಿವೆ ಎಂದುಕೊಂಡಿದ್ದೇನೆ. ವಿಯೆಟ್ನಾಂನ ಹೊಸ ವರ್ಷದ ರಜಾದಿನಗಳು ಸನ್ನಿಹಿತವಾಗಿರುವ ಹಿನ್ನೆಲೆಯಲ್ಲಿ ನಾನು ಬೇಡಿಕೆಯನ್ನು ಅತ್ಯಂತ ತುರ್ತಿನಿಂದ ನಿಮ್ಮ ಮುಂದಿಡುತ್ತಿದ್ದೇನೆ. ಒಂದು ವೇಳೆ ಈ ಬೇಡಿಕೆಗೆ ನೀವು ಒಪ್ಪಿಗೆ ಸೂಚಿಸಿದಲ್ಲಿ ಈ ವರ್ಷಾಂತ್ಯದಲ್ಲೇ ನಾವು ಮಹತ್ತರ ಬದಲಾವಣೆಗೆ ನಾಂದಿ ಹಾಡಬಹುದು. ಎರಡೂ ದೇಶದ ಜನರಿಗೆ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ದಕ್ಷಿಣ ವಿಯೆಟ್ನಾಂನ ಜನರಿಗೆ ಅಪಾರ ಹಾನಿ ಉಂಟು ಮಾಡಿದ ಈ ಯುದ್ಧಕ್ಕೆ ಕೊನೆಹಾಡುವುದು ತುರ್ತಾಗಿ ಆಗಬೇಕಿದೆ. ನನ್ನ ಈ ಪ್ರಸ್ತಾವನೆ ಸಂಬಂಧ ನಿಮ್ಮ ಕಡೆಯಿಂದ ಯಾವುದೇ ಅಭಿಪ್ರಾಯಗಳಿದ್ದಲ್ಲಿ ಅವುಗಳನ್ನು ಆದ್ಯತೆಯಾಗಿ ಪರಿಗಣಿಸಿ ಪ್ರತಿಕ್ರಿಯೆ ನೀಡಲು ಕಾತರನಾಗಿದ್ದೇನೆ.

ನಿಮ್ಮ ವಿಶ್ವಾಸಿ, ಲಿಂಡನ್ ಬಿ. ಜಾನ್ಸನ್

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .