|
ಚಳಿಗಾಳಿಯಲ್ಲಿ ನಡುಗುತ್ತಿದ್ದ ರಾಜಧಾನಿಯಲ್ಲಿ ಮೊನ್ನೆ ಸುಳಿದ ಸಂಗೀತದ ಸಿಹಿಗಾಳಿ ಬೆಚ್ಚನೆಯ ಅನುಭವ ತಂದದ್ದು ಸುಳ್ಳಲ್ಲ. ದೆಹಲಿಯಲ್ಲಿ ’ಈಸ್ಟ್‌ವಿಂಡ್’ ಸಂಗೀತ ಉತ್ಸವ ನಡೆಯಲಿದೆ, ಅದರಲ್ಲಿ ಭಾರತದ ಹಲವಾರು ಸಂಗೀತ ತಂಡಗಳು ಕಾರ್ಯಕ್ರಮ ನೀಡಲಿವೆ ಎಂಬುದು ತಿಳಿಯುತ್ತಲೇ ನಾನು ರೋಮಾಂಚನಗೊಂಡಿದ್ದೆ. ಇಡೀ ದೆಹಲಿಯನ್ನೇ ಅದು ಹೊಸ ಲೋಕಕ್ಕೆ ಕರೆದೊಯ್ಯಲಿದೆ ಎಂಬ ನಿರೀಕ್ಷೆಯಲ್ಲಿ! ’ಪಾಶ್ಚಿಮಾತ್ಯ ಚಂಡಮಾರುತ’ದ ’ಆಕ್ರಮಣ’ದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವ ಸಮಯದಲ್ಲಿ, ಈಸ್ಟ್‌ವಿಂಡ್ ಎಂಬ ಚೈತನ್ಯದಾಯಕ ಮಲಯಮಾರುತ ಗಾನ ರಾಜಧಾನಿಗೆ ರಸದೌತಣವಾಗಲಿದೆ ಎಂಬುದು ಸಂಘಟಕರು, ಸಂಗೀತಕಾರರು ಹಾಗೂ ನನ್ನಂಥ ಸಂಗೀತಪ್ರಿಯರ ಖುಷಿಯನ್ನು ಇಮ್ಮಡಿಗೊಳಿಸಿತ್ತು. ಆದರೆ ಈ ಕಾರ್ಯಕ್ರಮಕ್ಕೆ ದೆಹಲಿವಾಸಿಗಳ ಪ್ರತಿಕ್ರಿಯೆ ನಮ್ಮನ್ನು ಚಕಿತಗೊಳಿಸಿತು. ಓಕ್ಲಾದ ಎನ್‌ಎಸ್‌ಐಸಿ ಮೈದಾನದಲ್ಲಿ ನಡೆದ ಮೂರು ದಿನಗಳ ’ಈಸ್ಟ್‌ವಿಂಡ್ ನನ್ ಯೂಷ್ವಲ್ ಮ್ಯೂಸಿಕ್ ಫೆಸ್ಟಿವಲ್’ ಕಾರ್ಯಕ್ರಮದ ಮೊದಲ ಎರಡು ದಿನ ಬಿಕೋ ಎನ್ನುತ್ತಿತ್ತು. ಕಾರ್ಯಕ್ರಮದಲ್ಲಿ ಬೆರಳೆಣಿಕೆಯಷ್ಟು ಸಂಗೀತಪ್ರಿಯರು ಮಾತ್ರ ಇದ್ದರು. ಫೆಬ್ರುವರಿ 22 ಶುಕ್ರವಾರ; ಅಲ್ಲಿದ್ದ ನಾಲ್ಕು ವೇದಿಕೆಗಳಲ್ಲೊಂದಾದ ’ಆರ್‌ಎಸ್‌ಜೆ ಸ್ಟೇಜ್’ನಲ್ಲಿ ’ಇಂಡಿಯನ್ ಓಷನ್’ ತಂಡದ ಕಾರ್ಯಕ್ರಮ ನಡೆಯುತ್ತಿತ್ತು. ನನ್ನಂತೇ ಅಲ್ಲಿಗೆ ಬಂದಿದ್ದ ಪತ್ರಕರ್ತರು ಸ್ವರಮಾಧುರ್ಯದ ಬಗ್ಗೆ ಬಿಡುವಿಲ್ಲದೆ ಬರೆದುಕೊಳ್ಳುತ್ತಿದ್ದರು, ಛಾಯಾಗ್ರಾಹಕರೂ ಅಷ್ಟೇ, ವಿವಿಧ ಫೋಟೊ ಕ್ಲಿಕ್ಕಿಸುವುದರಲ್ಲಿ ತನ್ಮಯರಾಗಿದ್ದರು. ಇಡೀ ಟೆಂಟ್‌ನಲ್ಲಿ ಮಾಧ್ಯಮದವರೇ ಕಿಕ್ಕಿರಿದು ತುಂಬಿದ್ದರು. ಅವರ ನಡುವೆ ಟಿಕೆಟ್ ಕೊಂಡು ಬಂದವರು ಎಷ್ಟು ಮಂದಿಯೋ ಎಂಬುದು ತಿಳಿಯದು! ಅದಾಗಲೇ ಗಡಿಯಾರ ಮಧ್ಯಾಹ್ನದ ಎರಡು ಗಂಟೆ ತೋರಿಸುತ್ತಿದ್ದರೂ ಕಾರ್ಯಕ್ರಮದ ಯಶಸ್ಸನ್ನು ನಿರ್ಧರಿಸುವುದು ನನ್ನಿಂದ ಸಾಧ್ಯವಾಗಿರಲಿಲ್ಲ. ಆದ್ದರಿಂದ ಅದರ ಗೋಜಿಗೇ ಹೋಗದೆ, ಸಂಪೂರ್ಣವಾಗಿ ಸಂಗೀತ ಆಸ್ವಾದಿಸಲು ನಿರ್ಧರಿಸಿದೆ. ನೂರು (ಅಥವಾ ಅದಕ್ಕಿಂತ ಕೊಂಚ ಕಡಿಮೆಯಿದ್ದ) ಜನ ಸಮೂಹಕ್ಕೆ ಸಂಗೀತ ಕಾರ್ಯಕ್ರಮ ನೀಡಿದ ’ಬೂಮರಾಂಗ್’ ತಂಡದ ಪ್ರದರ್ಶನ ಅಮೋಘವಾಗಿತ್ತು. ಆದರೆ ಉಳಿದ ಮೂರು ಟೆಂಟ್‌ಗಳಲ್ಲಿ ಏನು ನಡೆಯುತ್ತಿರಬಹುದು ಎಂಬ ತಣಿಯದ ಕುತೂಹಲ ನನಗೆ! ಉಳಿದವರಂತೆ ನಾನೂ ಕೂಡಾ ಮಧ್ಯಾಹ್ನದ ಸುಳಿಗಾಳಿ ಎಬ್ಬಿಸುತ್ತಿದ್ದ ಧೂಳಿನ ಆಕ್ರಮಣಕ್ಕೆ ಕೈಯನ್ನು ಗುರಾಣಿಯನ್ನಾಗಿಸುತ್ತಾ ಉಳಿದ ಬಿಡಾರಗಳತ್ತ ನುಗ್ಗಿದೆ. ಅದೃಷ್ಟವಶಾತ್ ನಾನು ಏನನ್ನೂ ತಪ್ಪಿಸಿಕೊಂಡಿರಲಿಲ್ಲ. ’ಮೃಗ್ಯ’ ತಂಡ ಆಗಷ್ಟೇ ಕಾರ್ಯಕ್ರಮ ಶುರುವಿಟ್ಟುಕೊಂಡಿತ್ತು. ಕಿವಿಗಡಚಿಕ್ಕುವ ಕರತಾಡನ! ಪಿಟೀಲು, ತಬಲಾ ಹಾಗೂ ವೇದ ಶ್ಲೋಕಗಳಿಗೆ ಎಲೆಕ್ಟ್ರಿಕ್ ಗಿಟಾರ್ ಹಾಗೂ ಡ್ರಮ್‌ಗಳ ಸಾಥ್ ನೀಡುತ್ತಾ ಮೃಗ್ಯ ಪ್ರದರ್ಶನ ಅದ್ಭುತವಾಗಿ ಸಾಗುತ್ತಿತ್ತು. ಅದಕ್ಕೇ ಇರಬೇಕು ಆ ರಸದೌತಣವನ್ನು ಆಸ್ವಾದಿಸುವುದು ಬಿಟ್ಟು ವಿಚಿತ್ರ ನೋವೊಂದು ನನ್ನನ್ನು ಕಾಡುತ್ತಿತ್ತು; ಅಂತರ್ ರಾಷ್ಟ್ರೀಯ ಮಟ್ಟದ ಪ್ರದರ್ಶನಕ್ಕೂ ಭಾರತೀಯ ಸಂಗೀತ ಪ್ರಾಕಾರಗಳು ಯೋಗ್ಯವಲ್ಲವೇ? ಒಂದು ವೇಳೆ ಜನರ ಪ್ರತಿಕ್ರಿಯೆ ಉತ್ತಮವಾಗಿದ್ದರೆ ಆ ನಿಟ್ಟಿನಲ್ಲಿ ಇಂಥ ಸಂಗೀತ ಉತ್ಸವಗಳು ಉತ್ತಮ ಹೆಜ್ಜೆ.
1969ರಲ್ಲಿ ನಡೆದ ’ವುಡ್‌ಸ್ಟಾಕ್ ಮ್ಯೂಸಿಕ್ ಆಂಡ್ ಆರ್ಟ್ ಫೇರ್’ 32 ಕಲಾವಿದರಿಗೆ ವೇದಿಕೆಯಾದರೆ, ಇಂದು ಈಸ್ಟ್‌ವಿಂಡ್ ಸಂಗೀತ ಉತ್ಸವ ಇಲ್ಲಿ 60 ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಿತ್ತು. ಈಸ್ಟ್‌ವಿಂಡ್ ಕಾರ್ಯಕ್ರಮದ ಸಂಘಟಕರಾದ ’ಪ್ರಾಸ್ಪೆಕ್ಟ್ ಅಡ್‌ವೈಸರಿ ಆಂಡ್ ಮ್ಯಾನೇಜ್‌ಮೆಂಟ್’ಗೆ ದೇಶದ ಉದ್ದಗಲದ ಸುಮಾರು 500 ಸಂಗೀತ ತಂಡ (ಬ್ಯಾಂಡ್)ಗಳಿಂದ ಪ್ರತಿಕ್ರಿಯೆಗಳ ಮಹಾಪೂರವೇ ಹರಿದು ಬಂದಿತ್ತು. ಆ ಪೈಕಿ 60 ಕಲಾವಿದರಿಗೆ ಇಲ್ಲಿ ಅವಕಾಶ ನೀಡಲಾಗಿತ್ತು. ಸಂಗೀತ ಉತ್ಸವ ಎಂಬ ಪರಿಕಲ್ಪನೆ ನಮ್ಮ ದೇಶಕ್ಕೆ ಕೊಂಚ ಹೊಸತು. ಭಾರತದಲ್ಲಿ ಮೂರು ದಿನಗಳ ಸಮಕಾಲೀನ (ಕಾಂಟೆಂಪರರಿ) ಸಂಗೀತ ಕಾರ್ಯಕ್ರಮ ನಡೆಸಿದ ಮೊದಲ ತಂಡ ನಮ್ಮದು ಎಂದು ಅಭಿಮಾನ ತುಂಬಿದ ದನಿಯಲ್ಲಿ ಹೇಳುತ್ತಾರೆ ’ಪ್ರಾಸ್ಪೆಕ್ಟ್ ಮ್ಯೂಸಿಕ್ ಡಿವಿಷನ್’ನ ವ್ಯವಸ್ಥಾಪಕರಾದ ಸ್ಮೃತಿ ಜಾರ್ಜ್.
ಈ ಕಾರ್ಯಕ್ರಮದಲ್ಲಿ ಕೇವಲ ಶುದ್ಧ(ಸ್ವರಚಿತ) ಸಂಗೀತ ಪ್ರದರ್ಶನ ನಡೆಯುತ್ತದೆ ಎಂದು ಕೇಳಿದ ಕೂಡಲೇ ಅಷ್ಟಗಲ ಕಣ್ಣರಳಿಸಿ ಜೊತೆಯಲ್ಲಿದ್ದ ನನ್ನ ಗೆಳತಿ ಹಾಗಾದರೆ ಇಲ್ಲಿ ಪಿಂಕ್ ಫ್ಲಾಯಿಡ್ ತಂಡದ ಸಂಗೀತ ನುಡಿಸಲಾಗುವುದಿಲ್ಲವೇ? ಎಂದಳು. ಭಾರತದಲ್ಲಿ ಎಷ್ಟೋ ತಂಡಗಳಿಗೆ ಈ ರೀತಿ ಬೇರೆಯವರ ಸಂಗೀತ ನುಡಿಸುವುದೇ ತಮ್ಮ ಜೀವನೋಪಾಯದ ಭಾಗ. ಹಾಗೇ ಯೋಚಿಸುತ್ತಾ ಬ್ರಿಯನ್ ಆಡಮ್ಸ್‌ನ ’ಸಮ್ಮರ್ 69’ ರಾಕ್ ಮ್ಯೂಸಿಕ್ ಕಾಲದಿಂದ ನಾವು ಮತ್ತೆ ನಮ್ಮ ಕಾಲಕ್ಕೆ ಬಂದೆವು. ಈ ಮಣ್ಣಿನ ದೇಶಿ ಸಂಗೀತ- ಸ್ವರ ಮಾಧುರ್ಯಗಳನ್ನು ಅಳವಡಿಸಿಕೊಂಡರೆ, ದೇಶಿ ಸಂಗೀತ ತಂಡಗಳು ಪಾಶ್ಚಿಮಾತ್ಯ ಸಂಗೀತ ತಂಡಗಳನ್ನು ಮೀರಿಸಬಹುದಲ್ಲವೇ ಎಂಬ ಯೋಚನೆಯೂ ನನ್ನೊಳಗೆ ಸುಳಿಯಿತು. ವಿದೇಶದಲ್ಲಿ ಸಂಗೀತ ತಂಡಗಳಿಗೆ ದೊರಕುವಂತೆಯೇ, ನಮ್ಮಲ್ಲೂ ಪ್ರಾಯೋಜಕರು ಹಾಗೂ ರೆಕಾರ್ಡಿಂಗ್ ಕಂಪನಿಗಳು ಮುಂದೆ ಬಂದು ನಮ್ಮ ಕಲಾವಿದರಿಗೆ ಪ್ರೋತ್ಸಾಹ ನೀಡಿದರೆ, ಅವರ ಆಲ್ಬಂಗಳೂ ಟಿವಿ ವಾಹಿನಿಗಳಲ್ಲಿ ಬಿತ್ತರವಾದರೆ... ಹೀಗೆ ಯೋಚನೆ ಸಾಗಿತ್ತು. ಆದರೆ, ಕಣ್ಣೆದುರಿನ ವಾಸ್ತವ ಬೇರೆಯೇ ಆಗಿತ್ತು! ಈಸ್ಟ್‌ವಿಂಡ್ ಸಂಗೀತ ಉತ್ಸವದಲ್ಲಿ ಪ್ರದರ್ಶನ ನೀಡಿದ 60 ತಂಡಗಳಲ್ಲಿ ಕೆಲವೇ ಕೆಲವು ತಂಡಗಳು ಮಾತ್ರ ತಮ್ಮ ಸಂಗೀತದ ಆಲ್ಬಂಗಳನ್ನು ಮಾರಾಟಕ್ಕೆ ತಂದಿದ್ದವು.
ಶನಿವಾರ, ದೆಹಲಿಯಲ್ಲಿರುವ ಹೊರ ರಾಜ್ಯದವರು ಹಾಗೂ ಕಾಲೇಜು ವಿದ್ಯಾರ್ಥಿಗಳೇ ಅತೀ ಹೆಚ್ಚಿನ ಸಂಖ್ಯೆಯಲ್ಲಿ ಈಸ್ಟ್‌ವಿಂಡ್ ಸಂಗೀತ ಕಾರ್ಯಕ್ರಮವನ್ನು ಸವಿಯಲು ಬಂದಿದ್ದರು. ಅಲ್ಲಿಯವರೆಗಿನ ಮನರಂಜನೆಯನ್ನು ತಪ್ಪಿಸಿಕೊಂಡಿದ್ದವರಿಗೆ ಎಲೆಕ್ಟ್ರಾನಿಕ್ ಸಂಗೀತ ಉಪಕರಣಗಳು ಹಾಗೂ ವಿಭಿನ್ನ ನೃತ್ಯಗಳಿಂದ ’ಜಲೆಬೀ ಕಾರ್ಟಲ್’ ಎಲ್ಲವನ್ನೂ ಮೀರಿಸುವಂಥ ಅಮೋಘ ರಂಜನೆ ನೀಡಿತು. ಅದೇ ಸಂದರ್ಭದಲ್ಲಿ ಮತ್ತೊಂದು ಬಿಡಾರದಲ್ಲಿ ’ಗಲೀಜ್ ಗುರೂಸ್’ ಬೂಮರಾಂಗ್ ತಂಡಕ್ಕಿಂತ ಅಧಿಕ ಜನಸ್ತೋಮವನ್ನು ಆಕರ್ಷಿಸಿ ಭಾರಿ ಪ್ರದರ್ಶನ ನೀಡುತ್ತಿತ್ತು. ತಂಡದ ಪ್ರಧಾನ ಗಾಯಕ ನಾಥನ್ ಕಂಠ ಅಮೆರಿಕದ ಸಂಗೀತಗಾರ ಜಾನ್ ಬೊನ್ ಜೋವಿಯನ್ನೇ ಹೋಲುತ್ತಿತ್ತು! ಟೆಲಿವಿಷನ್‌ನಲ್ಲಿ ಏಕ ವ್ಯಕ್ತಿ ವೀಡಿಯೊ ಪ್ರದರ್ಶನಕ್ಕೆ ಹೆಸರುವಾಸಿಯಾದ ತಂಡಗಳಲ್ಲೊಂದು ’ಪೆಂಟಗ್ರಾಮ್’. ತಂಡದ ಮೊದಲ ಏಕವ್ಯಕ್ತಿ ಆಲ್ಬಂ ’ವಾಯ್ಸ್’ಗೂ ಉತ್ತಮ ಪ್ರತಿಕ್ರಿಯೆ ಬಂದಿತ್ತು. ತಮ್ಮ ಪ್ರದರ್ಶನಕ್ಕೆ ತೆರೆಬೀಳುವ ಮುನ್ನ ತಂಡ ನೆರೆದ ಜನಸ್ತೋಮಕ್ಕೂ ಸಂಗೀತ ರಸಧಾರೆಯ ಕಿಡಿ ಹಚ್ಚಿತು. ಹಾಗೆಯೇ ಕೊನೆಗೆ ತಂಡದ ಅಮೋಘ ಪ್ರದರ್ಶನಕ್ಕೆ ಜನ ಹುಚ್ಚೆದ್ದು ಕುಣಿದು ಕುಪ್ಪಳಿಸಿದರು.
ಭಾನುವಾರ ಸಂಜೆ ಪ್ರದರ್ಶನಕ್ಕೆ ಜನ ಕಿಕ್ಕಿರಿದಿದ್ದರು. ಹದಿನಾರರ ಹರೆಯದ ’ಪರಿಕ್ರಮ’ ತಂಡ ಆ ಸಂಜೆಯ ಆಕರ್ಷಣೆ. ತಮ್ಮ ಪ್ರದರ್ಶನದ ನಂತರ ಇದು ನಿಜಕ್ಕೂ ಅತ್ಯುತ್ತಮ ಪ್ರದರ್ಶನ. ಇಲ್ಲಿಯವರೆಗೆ ಪರಿಕ್ರಮ ಭಾರತದಲ್ಲಿ ನೀಡಿದ ಪ್ರದರ್ಶನಗಳಲ್ಲಿ ಶ್ರೇಷ್ಠವೆಂದರೆ ಇದು. ಇಲ್ಲಿಯ ಜನರ ಪ್ರತಿಕ್ರಿಯೆ ನನಗೆ ಖುಷಿ ನೀಡಿದೆ. ಪಾಸ್‌ಗಳನ್ನು ಕೇಳದೆ ಟಿಕೆಟ್ ಪಡೆದು ಜನ ಪ್ರದರ್ಶನ ನೋಡಲು ಕಿಕ್ಕಿರಿದು ನೆರೆದಿದ್ದು ನಿಜಕ್ಕೂ ಅದ್ಭುತ ಎಂಬ ತಂಡದ ಉತ್ಸಾಹದ ಚಿಲುಮೆ ಸುಬೀರ್ ಮಲಿಕ್ ಮಾತು ಅವರ ಯಶಸ್ಸಿಗೆ ಹಿಡಿದ ಕನ್ನಡಿ.
ಕಾರ್ಯಕ್ರಮಕ್ಕೆ ದೆಹಲಿಯನ್ನು ಆಯ್ಕೆ ಮಾಡಿಕೊಂಡ ಬಗ್ಗೆ ಹಲವರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಪಾಶ್ಚಿಮಾತ್ಯ ಸಂಗೀತ ಪ್ರದರ್ಶನಕ್ಕೆ ಬೆಂಗಳೂರು ಹೆಸರುವಾಸಿ. ಈ ಪ್ರದರ್ಶನವನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದರೆ ಇದಕ್ಕಿಂತ ಅಧಿಕ ಜನ ಸೇರುತ್ತಿರಲಿಲ್ಲವೇ? ಅಲ್ಲದಿದ್ದರೂ ಬೃಹತ್ ಅಂತರ್ ರಾಷ್ಟ್ರೀಯ ಪ್ರದರ್ಶನಗಳೆಲ್ಲಾ ಬೆಂಗಳೂರನ್ನೇ ಆಯ್ಕೆ ಮಾಡುತ್ತವೆ... ಅಂತರ್ ರಾಷ್ಟ್ರೀಯ ಸಂಗೀತ ಪ್ರದರ್ಶನಕ್ಕೆ ಬೆಂಗಳೂರು ಸೂಕ್ತ ಹೌದು. ಆದರೆ ’ಲೈವ್ ಮ್ಯೂಸಿಕ್’ನಲ್ಲಿನ ಹಲವು ರೀತಿ-ರಿವಾಜುಗಳು ಬದಲಾಗಿವೆ. ಅಲ್ಲಿನ ಅತಿಯಾದ ಮಡಿವಂತಿಕೆ ಅಂತಹದ್ದಕ್ಕೆ ಅಡ್ಡಬರುತ್ತದೆ. ಹಾಗಾಗಿ, ಇತ್ತೀಚೆಗೆ ಹೆಚ್ಚಾಗಿ ಅಂತರ್ ರಾಷ್ಟ್ರೀಯ ತಂಡಗಳು ದೆಹಲಿಯನ್ನೇ ಆರಿಸಿಕೊಳ್ಳುತ್ತಿವೆ. ಏಕೆಂದರೆ ದೆಹಲಿ ಜನ ಇಂಥ ಪ್ರದರ್ಶನಗಳಿಗೆ ಹಾಗೂ ಸಂಗೀತಗಳನ್ನು ತೆರೆದ ಮನಸ್ಸಿನಿಂದ ಸ್ವಾಗತಿಸುತ್ತಾರೆ ಎನ್ನುತ್ತಾರೆ ಸ್ಮೃತಿ ಜಾರ್ಜ್. ’ಪರಿಕ್ರಮ’ದ ಸುಬೀರ್ ಕೂಡಾ ಇದೇ ರೀತಿಯ ಪ್ರತಿಕ್ರಿಯೆಯನ್ನೇ ನೀಡಿದ್ದಾರೆ; ಮೊದಲೇ ಪಂಜಾಬಿ ಹಾಡು ಮತ್ತು ಬಟರ್ ಚಿಕನ್ ಮಾತ್ರ ದೆಹಲಿಗರಿಗೆ ಇಷ್ಟ ಎಂಬ ಅಪವಾದವನ್ನು ತೊಡೆದುಹಾಕುವ ನಿಟ್ಟಿನಲ್ಲಿ ಇದು ಒಳ್ಳೆಯ ಪ್ರಯತ್ನ ಎನ್ನುತ್ತಾರೆ ಸುಬೀರ್. ನಿಜವೇ? ಪ್ರತಿ ವರ್ಷ ನಡೆಯುವ ’ಗ್ರೇಟ್ ಇಂಡಿಯನ್ ರಾಕ್ ಶೋ’ಗಾಗಿ ಟಿಕೆಟ್ ಕೌಂಟರ್ ಬಳಿ ಜನ ಕಿಕ್ಕಿರಿದು ಸೇರುವುದಿಲ್ಲವೇ? ಈ ಬಾರಿ ’ಗ್ರೇಟ್ ಇಂಡಿಯನ್ ರಾಕ್ ಶೋ’ದ ಹನ್ನೆರಡನೇ ಪ್ರದರ್ಶನ. ಮೊದಲ ಪ್ರದರ್ಶನಕ್ಕೂ ಕಳೆದ ಬಾರಿಯ ಪ್ರದರ್ಶನಕ್ಕೂ ಸಾಕಷ್ಟು ವ್ಯತ್ಯಾಸಗಳಿದ್ದವು. ತಂಡದ ಒಬ್ಬ ಸದಸ್ಯನಾಗಿ ಹೇಳುತ್ತೇನೆ, ಈಸ್ಟ್‌ವಿಂಡ್ ರೀತಿಯ ಸಂಗೀತ ತಂಡವನ್ನು ನಾನು ಇದುವರೆಗೂ ಕಂಡಿಲ್ಲ. ಸ್ವಲ್ಪ ಕಾಲ ಕಳೆಯಲಿ ಇದು ಹೇಗೆ ಬೆಳೆಯಲಿದೆ ಎಂಬುದಕ್ಕೆ ನೀವೇ ಸಾಕ್ಷಿಯಾಗುವಿರಿ ’ದೆಮ್ ಕ್ಲೋನ್ಸ್’ ತಂಡದ ಸುರೋಜಿತ್ ದೇವ್ ಅವರ ರೋಮಾಂಚಕ ಪ್ರತಿಕ್ರಿಯೆ ಇದು.
ಸಂಗೀತವಂತೂ ಅಮೋಘ. ಹಳೆಯ- ಹೊಸ ತಂಡಗಳೆನ್ನದೆ ಎಲ್ಲಾ ತಂಡಗಳೂ ತಮ್ಮದೇ ಆದ ರೀತಿಯ ವಿಶಿಷ್ಟ ಪ್ರದರ್ಶನ ನೀಡಿದವು. ಪಾಶ್ಚಿಮಾತ್ಯ ರಾಕ್ ಗಾಯಕರಿಗೆ ಸಿಗುವ ಎಲ್ಲ ಮನ್ನಣೆ, ಆರಾಧನೆಗಳಿಗೆ ತಾವೂ ಯೋಗ್ಯರು ಎಂಬುದನ್ನು ಈ ಉತ್ಸವದ ಮೂಲಕ ಅವರೆಲ್ಲಾ ತೋರಿಸಿಕೊಟ್ಟಿದ್ದಾರೆ. ಉತ್ಸವ ಮುಗಿಸಿಕೊಂಡು ಮನೆಗೆ ಹೊರಟ ನನ್ನ ಕೈಯಲ್ಲಿ ’ಸ್ಕಿನ್ನಿ ಆಲಿ’ (ಶನಿವಾರ ಪ್ರದರ್ಶನ ನೀಡಿದ ಕೋಲ್ಕತ್ತಾದ ಅತ್ಯದ್ಭುತ ತಂಡ) ತಂಡದ ಸಿ.ಡಿ ಇತ್ತು. ಆದರೆ ಬಹುತೇಕ ದೆಹಲಿಗರು ಈ ಪ್ರದರ್ಶನವನ್ನು ತಪ್ಪಿಸಿಕೊಂಡರಲ್ಲಾ ಎಂಬ ಬೇಸರ ಕೂಡ ಜೊತೆಗಿತ್ತು. ಏನೇ ಆದರೂ ಮುಂದಿನ ವರ್ಷ ಮತ್ತೆ ದೆಹಲಿಗೆ ಬರುವ ’ಈಸ್ಟ್‌ವಿಂಡ್ ನನ್ ಯೂಷ್ವಲ್ ಮ್ಯೂಸಿಕ್ ಫೆಸ್ಟಿವಲ್’ನಲ್ಲಿ ನಮ್ಮ ’ಭಾರತೀಯ ಬೊನ್ ಜೋವಿ’ಗಳಿಗೇ ನನ್ನ ಜೈ ಎಂದುಕೊಂಡು ಹೆಜ್ಜೆಹಾಕಿದೆ.
ಟಿಎಸ್‌ಐ
ಪೂರಕ ಮಾಹಿತಿ: ನೇಹಾ ಸರೀನ್ ಮತ್ತು ಪ್ರಸಿದ್ಧ ಮೆನನ್
|