|
ವಿಲಿಯಂ ಕ್ರಿಸ್ಟಲ್
|
ರಾಜನೀತಿಜ್ಞ
’ದ ನ್ಯೂಯಾರ್ಕ್ ಟೈಮ್ಸ್’ ಅಂಕಣಕಾರ
|
ಕಳೆದ ಅಕ್ಟೋಬರ್‌ನಲ್ಲಿ ಪತ್ರಕರ್ತನೋರ್ವ ಬಾರಕ್ ಒಬಾಮ ಅವರಲ್ಲಿ ಒಂದು ಪ್ರಶ್ನೆ ಕೇಳಿದ್ದ: ಸೆಪ್ಟೆಂಬರ್ ೧೧ರ ಘಟನೆಯ ನಂತರ ಬಹಳಷ್ಟು ಅಮೆರಿಕನ್ ಅಧಿಕಾರಿಗಳಂತೆ, ಒಬಾಮ ಅವರು ಧರಿಸುತ್ತಿದ್ದ ಅಮೆರಿಕ ಧ್ವಜವನ್ನೊಳಗೊಂಡ ಕೋಟಿನ ಕ್ಲಿಪ್ಪನ್ನು ಇತ್ತೀಚೆಗೆ ಏಕೆ ಧರಿಸುತ್ತಿಲ್ಲ? ಅದಕ್ಕೆ ಒಬಾಮ ಅವರು ಸರಳತೆಯ ತಮ್ಮ ಹೊಸ ವಿಚಾರ ಅಂತಹ ಮಹತ್ವದ್ದೇನಲ್ಲ ಎಂದು ಹೇಳಿದ್ದ ನೆನಪು. ನಿಜ, ಇಷ್ಟಕ್ಕೂ ನಾವೇನನ್ನು ನಂಬುತ್ತೇವೆ ಹಾಗೂ ಯಾವ ರೀತಿ ನಡೆದುಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆಯೇ ಹೊರತು, ನಾವು ಏನನ್ನು ಧರಿಸುತ್ತೇವೆ ಎಂಬುದಲ್ಲ.
ಆದರೆ ಒಬಾಮ ಅವರು ತಾವು ಧ್ವಜದ ಕ್ಲಿಪ್ ಧರಿಸುವುದನ್ನು ನಿಲ್ಲಿಸಿದ್ದರತ್ತ ಗಮನ ಸೆಳೆಯಲು ನಿರ್ಧರಿಸಿದರು. ಸೆಪ್ಟೆಂಬರ್ 11ರ ದುರ್ಘಟನೆಯ ನಂತರ ನಾನು ಕ್ಲಿಪ್ ಧರಿಸುತ್ತಿದ್ದುದು ನಿಮಗೆಲ್ಲಾ ಗೊತ್ತು. ಆಗ ಅದು ದೇಶಭಕ್ತಿಯ ಪ್ರತೀಕವಾಗಿತ್ತು. ಆದರೆ ಈಗ ಸೆಪ್ಟೆಂಬರ್ 11ರ ವಿಷಯಕ್ಕಿಂತ ಇರಾಕ್ ಯುದ್ಧ ಮಹತ್ವ ಪಡೆದಿದೆ. ಇದರ ಬಗ್ಗೆ ಮಾತನಾಡುವುದೇ ನಿಜವಾದ ದೇಶಪ್ರೇಮ ಎನಿಸಿದೆ. ಆದ್ದರಿಂದ ನಾನು ಆ ಕ್ಲಿಪ್ಪನ್ನು ನನ್ನ ಎದೆಯ ಮೇಲೆ ಧರಿಸದೇ ಇರಲು ನಿರ್ಧರಿಸಿದ್ದೇನೆ ಎಂದರು.
ಕೇವಲ ಇರಾಕ್ ಯುದ್ಧದ ಕುರಿತು ಮಾತನಾಡುವುದೇ ನಿಜವಾದ ದೇಶಭಕ್ತಿ ಎಂಬ ಹೇಳಿಕೆಯ ಸತ್ಯಾಸತ್ಯತೆಯನ್ನು ಬದಿಗಿಡೋಣ. ಆದರೆ ಅಚ್ಚರಿಯ ವಿಚಾರವೆಂದರೆ, ಈ ರೀತಿಯ ಡಾಂಭಿಕ ವಿವರಣೆಗಳನ್ನು ನೀಡುವುದರಿಂದ ಒಬಾಮ ಅವರೂ ಹೊರತಾಗಲಿಲ್ಲ. ಒಬಾಮ ಅವರ ಈ ವಿವೇಕಹೀನ ಮಾತು ದೇಶಭಕ್ತಿಯ ಪ್ರತೀಕವಾಗಿ ಇನ್ನೂ ಧ್ವಜವನ್ನು ಧರಿಸುತ್ತಿರುವವರ ಬದ್ಧತೆ ಹಾಗೂ ಬುದ್ಧಿಮತ್ತೆಯ ಮೇಲೆ ದಾಳಿ ಮಾಡುತ್ತದೆ. ಆದರೆ ಇಲ್ಲಿಯೂ ಒಣ ಪ್ರತಿಷ್ಠೆಯೇ ಗೆದ್ದಿದೆ. ಮೂಲತಃ ಒಬಾಮ ಅವರು ಎದೆಯ ಮೇಲೆ ಅಮೆರಿಕ ಧ್ವಜ ಧರಿಸುವ ಮೂಲಕ ತಾನೊಬ್ಬ ಅತ್ಯುತ್ತಮ ಹಾಗೂ ದೇಶಭಕ್ತ ನಾಯಕನೆಂದು ತೊರಿಸಿಕೊಳ್ಳಬೇಕೆಂದಿದ್ದರು.
ಕಳೆದ ಸೋಮವಾರ ವಿಸ್ಕಾನ್ಸಿನ್‌ನಲ್ಲಿ ನಡೆದ ಘಟನೆಯನ್ನು ಒಮ್ಮೆ ನೆನಪಿಸಿಕೊಳ್ಳಿ. ಒಬಾಮ ಅವರ ಪತ್ನಿ ಮಿಶೆಲ್ ಒಬಾಮ, ತಮ್ಮ ಭಾಷಣದಲ್ಲಿ, ’ನಾನು ವಯಸ್ಕಳಾದ ಮೇಲೆ ಮೊತ್ತ ಮೊದಲ ಬಾರಿಗೆ ನನ್ನ ದೇಶದ ಬಗ್ಗೆ ನನಗೆ ಹೆಮ್ಮೆ ಎನಿಸುತ್ತಿದೆ: ಬಾರಕ್ ಉತ್ತಮ ಸಾಧನೆ ಮಾಡಿದ್ದಾರೆ ಎಂದಲ್ಲ, ಬದಲಿಗೆ ಜನರು ಬದಲಾವಣೆ ಬಯಸುತ್ತಿದ್ದಾರಲ್ಲ ಎಂಬ ಕಾರಣಕ್ಕಾಗಿ’ ಎಂದರು.
ಮಿಶೆಲ್ ಒಬಾಮ ವಯಸ್ಕಳಾದ ಮೇಲೆ, ಅಂದರೆ 1980ರ ದಶಕದಿಂದೀಚೆಗೆ. ಹಾಗಾದರೆ ಅಮೆರಿಕ ಈ ಅವಧಿಯಲ್ಲಿ ಮಾಡಿದ ಯಾವುದೇ ಸಾಧನೆ ಮಿಶೆಲ್ ಅವರನ್ನು ಹೆಮ್ಮೆ ಪಡುವಂತೆ ಮಾಡಲಿಲ್ಲವೆ? ಇದರ ಜೊತೆಗೆ ಅವರು ಹೇಳಿದ ಮತ್ತೊಂದು ಮಾತನ್ನೂ ಗಮನಿಸಿ, ’ರಿಪಬ್ಲಿಕನ್ ಹಾಗೂ ಡೆಮಾಕ್ರೆಟಿಕ್ ಆಡಳಿತಗಳಿಂದಾಗಿ ಸಾಮಾನ್ಯ ಜನರ ಜೀವನ ಹದಗೆಡುತ್ತಲೇ ಬಂದಿದೆ. ಅದು ಈವರೆಗೂ ಸುಧಾರಿಸಿಲ್ಲ!’.
ಆದರೆ ಎಲ್ಲಾ ಮೂಲಗಳಿಂದ ಗಮನಿಸಿದರೂ, ಅಮೆರಿಕದ ಜನಜೀವನ ಕಳೆದ ಕಾಲು ಶತಮಾನಗಳಿಂದ ತುಂಬಾ ಬದಲಾಗಿದೆ. ಅಲ್ಲದೆ ಬಹಳಷ್ಟು ಅಮೆರಿಕನ್ನರು ಹಾಗೂ ಡೆಮಾಕ್ರೆಟ್‌ಗಳು ಆ ಅವಧಿಯನ್ನು ‘ವ್ಯರ್ಥ’ ಎಂದು ಭಾವಿಸಿಲ್ಲ. ಆದ್ದರಿಂದ ತಕ್ಷಣವೇ ಎಚ್ಚೆತ್ತ ಬಾರಕ್ ಒಬಾಮ ತಮ್ಮ ಪತ್ನಿಯ ಹೇಳಿಕೆಯನ್ನು ಸರಿಪಡಿಸಲು ಮುಂದಾದರು. ’ಆಕೆ ಹೇಳಬಯಸಿದ್ದು ಅಮೆರಿಕದ ರಾಜಕಾರಣದ ಬಗ್ಗೆ. ಆಕೆ ಹೆಮ್ಮೆಪಟ್ಟದ್ದು ಇದೇ ಮೊದಲು. ಏಕೆಂದರೆ ಆಕೆ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಕೊಂಚ ನಿರಾಶಾದಾಯಕ ದೃಷ್ಟಿಕೋನ ಹೊಂದಿದವಳು. ಆದರೆ ಈ ರೀತಿಯ ಮನೋಭಾವ ಹೊಂದಿರುವವರ ಪೈಕಿ ಆಕೆ ಒಬ್ಬಳೇ ಅಲ್ಲ’ ಎಂದು ಬಾರಕ್ ಒಬಾಮ ಹೇಳಿದರು. ಆನಂತರ ಈ ವಾರದಲ್ಲಿ ಮಿಶೆಲ್ ಒಬಾಮ, ’ನನ್ನ ಹೇಳಿಕೆಯ ನಿಜವಾದ ಅರ್ಥವೆಂದರೆ, ಅಮೆರಿಕನ್ನರು ರಾಜಕೀಯದಲ್ಲಿ ಹೇಗೆ ಸಕ್ರಿಯವಾಗಿದ್ದಾರೆ ಎಂಬುದರ ಕುರಿತು ನನಗೆ ಹೆಮ್ಮೆಯಾಗಿದೆ’ ಎಂದು ಮತ್ತೊಮ್ಮೆ ಸ್ಪಷ್ಟಪಡಿಸಿದರು. ಆದರೆ ನಿಜವಾಗಿಯೂ ಆಕೆ ಮಾತನಾಡುತ್ತಿದ್ದುದು ಅದರ ಕುರಿತಾಗಿ ಅಲ್ಲ. ವಿಸ್ಕಾನ್ಸಿಸ್‌ನಲ್ಲಿ ಆಕೆ ಮಂಡಿಸಿದ ವಾದದ ಪ್ರಕಾರ ಅಮೆರಿಕದ ಅನಾರೋಗ್ಯಕರ ವಾತಾವರಣ ಹಾದಿ ತಪ್ಪಿದ ರಾಜಕಾರಣವನ್ನು ಮೀರಿ ನಿಲ್ಲುತ್ತದೆ. ’ಬಾರಕ್ ಅವರಿಗೆ ಕೆಲವೊಂದು ಹಂತದಲ್ಲಿ ನಮ್ಮೊಳಗೆ ಹುಳುಕಿರುವುದು ತಿಳಿದಿದೆ’ ಎಂದು ಈಗ ಅವರು ಹೇಳುತ್ತಾರೆ.
ಈ ಮೊದಲು ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಆಕೆ ಉಪಯೋಗಿಸಿದ್ದ ಪದಗಳೇ ಬೇರೆಯಾಗಿದ್ದವು: ’ಸಮಸ್ಯೆಗಳಿಗೆ ಪರಿಹಾರ ಹುಡುಕುವ ಮೊದಲು ನಮ್ಮೊಳಗಿನ ಹುಳುಕುಗಳನ್ನು ಸರಿಪಡಿಸಿಕೊಳ್ಳಬೇಕೆನ್ನುವುದನ್ನು ಅರಿತುಕೊಂಡಿರುವ ಏಕೈಕ ಸ್ಪರ್ಧಾಳು ಬಾರಕ್ ಒಬಾಮ. ಈ ದೇಶದಲ್ಲಿ ನಮ್ಮ ಆತ್ಮಗಳು ಒಡೆದು ಚೂರಾಗಿವೆ. ಅದನ್ನು ನಾವು ಜೋಡಿಸಬೇಕಿದೆ’ ಎಂದಿದ್ದರು ಆಕೆ.
ಆದರೆ ಅವುಗಳನ್ನೆಲ್ಲಾ ಮತ್ತೆ ಜೋಡಿಸಬಹುದು ಬಿಡಿ. ಲಾಸ್ ಏಂಜಲೀಸ್‌ನಲ್ಲಿ ವಾರಗಳ ಮೊದಲು ಅವರಾಡಿದ ವಾಕ್ಯಗಳಲ್ಲೇ ಹೇಳುವುದಾದರೆ, ’ಒಬಾಮ ನಿಮ್ಮ ನಿರಾಶದಾಯಕ ಮನೋಭಾವವನ್ನು ತೊರೆಯುವಂತೆ ವಿನಂತಿಸಲಿದ್ದಾರೆ. ನಿಮ್ಮ ಪ್ರತ್ಯೇಕತಾ ಮನೋಭಾವದಿಂದ ಹೊರಬನ್ನಿ; ನಿಮ್ಮ ಸುರಕ್ಷಿತ ವಲಯದಿಂದ ಹೊರಬನ್ನಿ; ಪ್ರಗತಿಯತ್ತ ಸಾಗುವ ಪ್ರಕ್ರಿಯೆಯಲ್ಲಿ ಭಾಗಿಯಾಗಿ; ಮಾಹಿತಿ ಇಲ್ಲದ, ಬಗೆಹರಿಯದ ಸಮಸ್ಯೆಗಳಿರುವ ನಿಮ್ಮ ಹಳೆಯ ಜೀವನಕ್ಕೆ ಹಿಂದಿರುಗಲು ಬಾರಕ್ ನಿಮ್ಮನ್ನು ಬಿಡುವುದಿಲ್ಲ’. ಹೀಗಾಗಿ ನಮ್ಮ ಹುಳುಕುಗಳನ್ನು ಸರಿಪಡಿಸಿಕೊಳ್ಳಲು ನಾವು ಹೆಚ್ಚೇನೂ ಶ್ರಮಪಡಬೇಕಾಗಿಲ್ಲ. ಕೇವಲ ಬಾರಕ್ ಒಬಾಮ ಅವರಿಗೆ ಮತ ಹಾಕುವುದರ ಮೂಲಕ ನಮ್ಮ ಛಿದ್ರಗೊಂಡ ಆತ್ಮಗಳನ್ನು ಸರಿಪಡಿಸಿಕೊಳ್ಳಬಹುದು. ನಮ್ಮ ದೇಶಕ್ಕಾಗಿ ನಾವು ಹೋರಾಟ ಅಥವಾ ಬಲಿದಾನ ಮಾಡಬೇಕಾಗಿಲ್ಲ. ಯಾವುದರಲ್ಲೂ ತೊಡಗಿಸಿಕೊಳ್ಳದ ನಮ್ಮ ಜೀವನವನ್ನು, ಕೇವಲ ಬಾರಕ್ ಒಬಾಮ ಅವರನ್ನು ಆರಿಸುವುದರ ಮೂಲಕ ಸರಿಪಡಿಸಿಕೊಳ್ಳಬಹುದು. ಒಬಾಮ ಅವರಿಗೆ ನಾಯಕತ್ವ ನೀಡುವ ಮೂಲಕ ಅಮೆರಿಕವನ್ನು ಹೆಮ್ಮೆಯ ನಾಡಾಗಿಸಬಹುದು!
ಒಬಾಮ ಅವರನ್ನು ಆಗಾಗ ಜಾನ್ ಕೆನಡಿ ಅವರಿಗೆ ಹೋಲಿಸಲಾಗುತ್ತದೆ. ಕೆನಡಿ ಅವರು ಅಮೆರಿಕದ ಜನತೆಗೆ ನಾಗರಿಕ ಹಾಗೂ ದೇಶಪ್ರೇಮದ ನಡತೆಯ ಸವಾಲೆಸೆದಿದ್ದರು. ಆದರೆ ಒಬಾಮ ಅವರು ನಮ್ಮ ಜೀವನಶೈಲಿ ಉತ್ತಮಗೊಳಿಸುವುದಕ್ಕೆ ಹೆಚ್ಚು ಮಹತ್ವ ಕೊಡುತ್ತಾರೆ. ಒಬಾಮ, ’ನಾವು ಅರಸುತ್ತಿರುವ ಬದಲಾವಣೆ ನಾವೇ’ ಮತ್ತು ’ನಾವು ನಿರೀಕ್ಷಿಸುತ್ತಿರುವ ನಾಯಕರು ನಾವೇ’ ಎಂದು ಹೇಳಲು ಇಚ್ಚಿಸುತ್ತಾರೆ. ಒಬಾಮ ಅವರ ವಾಕ್ಚಾತುರ್ಯ ಮತ್ತು ಕೌಶಲ್ಯ ಅವರ ಸ್ಪರ್ಧೆಯನ್ನು ವೈಯಕ್ತಿಕಕ್ಕಿಂತ ಹೆಚ್ಚಾಗಿ ಸಾಮೂಹಿಕವನ್ನಾಗಿಸಿದೆ. ಅದು ಅವರಿಗೆ ಪ್ರಜಾಪ್ರಭುತ್ವ ನೀಡಿರುವ ವರವಾದರೆ, ಅವರ ಬೆಂಬಲಿಗರಿಗೆ ಆಕರ್ಷಣೀಯ ಅಂಶ. ಆದರೆ ಈ ಮೂಲಕ ಒಬಾಮ ಹೇಳಲು ಪ್ರಯತ್ನಿಸುತ್ತಿರುವುದೆಂದರೆ, ‘ನಾವೆಲ್ಲರೂ ಕಾಯುತ್ತಿರುವ ವ್ಯಕ್ತಿ ತಾವೇ’ ಎಂಬುದು.
ಬಾರಕ್ ಒಬಾಮ ಒಬ್ಬ ಅತ್ಯಂತ ಸಮರ್ಥ ರಾಜಕಾರಣಿ. ಆದರೆ ಮುಂದಿನ ನವಂಬರ್ ವೇಳೆಗೆ ಅವರ ಕ್ಲಿಂಟನ್‌ರಂತಹ ವ್ಯಕ್ತಿತ್ವ, ಅಲ್‌ಗೋರ್ ಅವರಂತಹ ದೇಶಪ್ರೇಮ ಹಾಗೂ ಜಾನ್ ಕೆರ್ರಿ ಅವರಂತಹ ಉದಾರ ನೀತಿಗಾಗಿ ಜನತೆ ಅವರನ್ನು ಮೆಚ್ಚಿಕೊಳ್ಳುವುದೇ?
ಒಬಾಮ ಅವರಿಗೆ ಸೂಕ್ತವಾದ ಪರ್ಯಾಯ ಅಭ್ಯರ್ಥಿ ಜಾನ್ ಮೆಕೈನ್ ಆಗಬಹುದು. ನಮ್ಮ ಹುಳುಕುಗಳನ್ನು ಸರಿಪಡಿಸಲು ಅವರು ಅಬ್ಬರದ ಹೇಳಿಕೆಗಳನ್ನು ನೀಡುವುದಿಲ್ಲ. ‘ಎಲ್ಲರೂ ನಿರೀಕ್ಷಿಸುತ್ತಿರುವ ನಾಯಕ ತಾನೇ’ ಎಂದು ಯೋಚಿಸುವುದಿಲ್ಲ. ಅವರು ತಮಗಿಂತ ಹೆಚ್ಚಾಗಿ ತಮ್ಮ ದೇಶದ ಬಗ್ಗೆ ಹೆಮ್ಮೆ ಪಡುತ್ತಾರೆ. ಕೊನೆಯದಾಗಿ, ಅವರ ದೇಶಪ್ರೇಮದ ಕಾರ್ಯಗಳು ಕೇವಲ ಮಾತುಗಳಲ್ಲಿ ಅಲ್ಲದೆ ಕೃತಿಗಳಲ್ಲೂ ಮೂಡಿಬಂದಿವೆ.
ಟಿಎಸ್‌ಐ |