|
ಅಭಿನಂದನೆಗಳು. ಅತ್ಯುತ್ತಮ ಚಿತ್ರಕಥೆಗಾಗಿ ಫಿಲ್ಮ್‌ಫೇರ್ ಪುರಸ್ಕಾರ ಮುಡಿಗೇರಿಸಿಕೊಂಡಿದ್ದೀರಿ. ಆ ಕ್ಷಣಗಳ ಬಗ್ಗೆ ಏನನ್ನುತ್ತೀರಿ?
ಓಹ್... ನನಗೆ ಬಹಳ ಖುಷಿಯಾಗಿದೆ. ೫೩ ವರ್ಷಗಳ ಇತಿಹಾಸವಿರುವ ಫಿಲ್ಮ್‌ಫೇರ್ ಪ್ರತಿಷ್ಠಾನ ನನ್ನ ಕಥೆಗೆ ಪ್ರಾಶಸ್ತ್ಯ ನೀಡಿದೆ. ಇದು ನನಗೆ ಸಿಕ್ಕ ಜನಪ್ರಿಯ ಪ್ರಶಸ್ತಿ ಅಲ್ಲ. ಬದಲಿಗೆ ಯೋಗ್ಯ ತೀರ್ಪುಗಾರರು ಜನಪ್ರಿಯ ಸಿನಿಮಾ ರೂಪದಲ್ಲಿ ಮೂಡಿಬಂದ ನನ್ನ ಕಥೆಗೆ ನೀಡಿದ ಪುರಸ್ಕಾರ. ನನ್ನ ಕಥೆ ಜನಮಾನಸದ ಆಳದಲ್ಲಿ ಬೇರುಬಿಟ್ಟಿದೆ ಎಂಬುದಕ್ಕೂ ಇದು ಸಾಕ್ಷಿ. ನನ್ನ ಪ್ರಕಾರ ಇದು ನನ್ನ ವಿಜಯವಲ್ಲ. ಇದು ಮಕ್ಕಳು ಹಾಗೂ ಹೆತ್ತವರ ಕಾಳಜಿಗೆ ಸಿಕ್ಕ ಯಶಸ್ಸು. ಮಕ್ಕಳ ಪೋಷಣೆ ಹೇಗಾಗಬೇಕು ಎಂಬುದಕ್ಕೆ ಹೊಸ ಭಾಷ್ಯ ಬರೆದ ಚಿತ್ರವಿದು. ಸಾಮಾಜಿಕ ತಳಹದಿಯ ಮೇಲೆ ಮಕ್ಕಳಿಗೆ ದೊರಕಿದ ಯಶಸ್ಸು ಈ ಪುರಸ್ಕಾರ. ನಿಜಕ್ಕೂ ರೋಮಾಂಚನಗೊಂಡಿದ್ದೇನೆ.
ಭಾರತೀಯ ಸಿನಿಮಾ ಲೋಕದಲ್ಲೇ 'ತಾರೇ ಜಮೀನ್ ಪರ್' ಯಶಸ್ಸಿನ ಮೈಲಿಗಲ್ಲಾಗಿದೆ. ಈ ಕುರಿತು...
ಪರಿಶ್ರಮಕ್ಕೆ ದೊರೆತ ಪ್ರತಿಫಲದಂತೆ ಈ ಚಿತ್ರದ ಯಶಸ್ಸು ನನಗೆ ಸಂತೃಪ್ತಿ ನೀಡಿದೆ. ಪ್ರೇಕ್ಷಕ ನೀಡಿದ ಕೊನೆಯ ಹಾಗೂ ಪರಿಪೂರ್ಣ ಪ್ರಶಸ್ತಿ ಇದು ಎನ್ನುವುದು ನನ್ನ ಭಾವ. ಏಕೆಂದರೆ ಇತರ ಚಿತ್ರಗಳನ್ನು ನೋಡಿ, ತುಲನೆ ಮಾಡಿ ಅದರ ಯಶಸ್ಸನ್ನು ನಿರ್ಧರಿಸುವುದೂ ಇದೇ ಪ್ರೇಕ್ಷಕ ವರ್ಗ. ಚಿತ್ರಗಳಲ್ಲಿ ಸೃಷ್ಟಿಸಿದ ಪಾತ್ರಗಳ ಬಗ್ಗೆ ಪ್ರಶ್ನೆಗಳು ಏಳುತ್ತಲೇ ಇದ್ದವು. ನಾಯಕ ಸಿನಿಮಾದ ಅರ್ಧದಲ್ಲಿ ಪ್ರವೇಶಿಸುತ್ತಾನೆ, ಮಗು ಪ್ರಧಾನ ಪಾತ್ರಧಾರಿಯಾಗುತ್ತದೆ, ನಾಯಕಿಯೇ ಇಲ್ಲ... ನೀವು ಇದೇನು ಮಾಡುತ್ತಿದ್ದೀರಿ? ಈ ಎಲ್ಲಾ ಪ್ರಶ್ನೆಗಳಿಗೂ ನಾನು ಕೊಟ್ಟ ಉತ್ತರ ಒಂದೇ. ಕಾಲವೇ ಖುದ್ದಾಗಿ ಎಲ್ಲಕ್ಕೂ ಉತ್ತರ ನೀಡಲಿದೆ. ಸಿನಿಮಾದ ಜೀವಾಳ ಇರುವುದೇ ಅದರ ಶೈಲಿಯಲ್ಲೇ ಹೊರತು ಕೇವಲ ಮಕ್ಕಳ ಬಗೆಗೆ ಇರುವ ನನ್ನ ಮಮಕಾರವಷ್ಟೇ ಚಿತ್ರಕಥೆಯಲ್ಲಿ ಬಿಂಬಿತವಾಗಿಲ್ಲ. ಒಂದು ಪರಿಪೂರ್ಣ ಕಲಾಮಾಧ್ಯಮವಾದ ಸಿನಿಮಾ ಮೂಲಕ ಅವನ್ನೆಲ್ಲಾ ಹೊರತರುವ ಪ್ರಯತ್ನ ಮಾಡಿದ್ದೇನೆ. ಈ ಕಲಾಸೇವೆಗೆ ನನ್ನ ಜೀವನ ಮುಡಿಪಾಗಿಟ್ಟು 27 ವರ್ಷಗಳೇ ಉರುಳಿಹೋಗಿವೆ. ಕಳೆದ 26-27 ವರ್ಷಗಳಿಂದ ನಾನು ಕಲಿಯುತ್ತಿರುವ ಇದೇ ಶೈಲಿಯೇ ಚಿತ್ರದಲ್ಲಿ ತುಂಬಿಕೊಂಡಿರುವುದು. ಇದು ಭಾವನಾತ್ಮಕ ಚಿತ್ರ. ಆದರೆ ಭಾವಾತಿರೇಕ ಪ್ರಧಾನವಾಗಿರುವ ಚಿತ್ರವಲ್ಲ. ಸಿನಿಮಾ ಹಾಗೂ ವೀಕ್ಷಕನ ನಡುವೆ ಭಾವನಾತ್ಮಕ ಸಂಬಂಧ ಬೆಸೆಯಲು ಚಿತ್ರ ಪ್ರಯತ್ನಪಟ್ಟಿದೆ ಅಷ್ಟೆ.
ಅಂದರೆ ಸಿನಿಮಾ ಜಗತ್ತಿನಲ್ಲಿ ಇಪ್ಪತೈದು ವರ್ಷದಿಂದ ಇದ್ದೀರಿ. ಆ ಪಯಣದ ಅನುಭವ?
1981ರಿಂದ ಈ ಕ್ಷೇತ್ರಕ್ಕೆ ನನ್ನನ್ನು ನಾನು ಸಮರ್ಪಿಸಿಕೊಂಡಿದ್ದೇನೆ. 'ಕಭೀ ಹಾಂ ಕಭೀ ನಾ' ಸಿನಿಮಾದ ಚಿತ್ರಕಥೆಗಾಗಿ ಕುಂದನ್ ಶಾ ಜೊತೆ ಕೆಲಸ ಮಾಡಿದ್ದೆ. ಅಲ್ಲದೆ 'ನಸೀಂ' ಚಿತ್ರಕ್ಕಾಗಿ ಸಯೀದ್ ಮಿರ್ಜಾ ಜೊತೆ ಕೆಲಸ ಮಾಡಿದ ಅನುಭವವೂ ಇದೆ. ಪುಣೆಯ ಎಫ್‌ಟಿಐಐನಲ್ಲಿ ಎಂಟು ವರ್ಷ ಕಳೆದಿದ್ದೇನೆ. ಅಲ್ಲದೆ ಅಲ್ಲಿ ಬರಹಗಾರನಾಗಿ ಮತ್ತು ನಟನಾಗಿ ಸುಮಾರು 100ಕ್ಕೂ ಹೆಚ್ಚು ಅಭ್ಯಾಸ ಸಿನಿಮಾಗಳಿಗೆ ಕಾರ್ಯ ನಿರ್ವಹಿಸಿದ್ದೇನೆ. ನಾನು ಎಂದೂ ಕೋರ್ಸ್ ಕಲಿಯದಿದ್ದರೂ ಅಲ್ಲಿ ಹಲವು ಬಾರಿ ಸಂದರ್ಶಕ ಉಪನ್ಯಾಸಕನಾಗಿ ಹೋಗಿದ್ದೇನೆ.
ಮಕ್ಕಳೊಂದಿಗೆ ನೀವು ಕೆಲಸ ಮಾಡಿದ ಅನುಭವವೇ 'ತಾರೇ ಜಮೀನ್ ಪರ್' ಆಗಿ ಮೂಡಿಬಂದಿದೆ ಎಂಬ ಅಭಿಪ್ರಾಯವಿದೆ. ನೀವು ಮಕ್ಕಳೊಂದಿಗೆ ಕೆಲಸ ಮಾಡಲು ತೊಡಗಿದ್ದು ಹೇಗೆ?
1995ರಲ್ಲಿ ನಾನು ವರ್ಣಚಿತ್ರ ರಚಿಸುತ್ತಿದ್ದೆ. ಆಗ ಸಂಜನಾ ಕಪೂರ್ 'ಪೃಥ್ವಿ ಆರ್ಟ್ ಗ್ಯಾಲರಿ'ಯನ್ನು ನೋಡಿಕೊಳ್ಳುತ್ತಿದ್ದರು. ಕಲೆಯ ಪ್ರದರ್ಶನ ಮತ್ತು ಮಾರಾಟದಲ್ಲಿ ನಿನಗೆ ಆಸಕ್ತಿ ಇಲ್ಲವೇ? ಎಂದು ಪ್ರಶ್ನಿಸಿ ಆರ್ಟ್ ಗ್ಯಾಲರಿಯಲ್ಲಿ ನನ್ನ ಪ್ರದರ್ಶನ ಏರ್ಪಡಿಸಿದ್ದರು. ಹಾಗೇ 1999ರವರೆಗಿನ ನನ್ನ ಸಿನಿಮಾ ಅನುಭವ ಹಾಗೂ ಕಲೆಯ ತಿಳಿವಳಿಕೆಯನ್ನೆಲ್ಲಾ ಮಕ್ಕಳ ಮುಂದಿಡುವ ನಿರ್ಧಾರ ಮಾಡಿದೆ. ನಾನು ಶಾಲೆಗಳಿಗೆ, ಅದರಲ್ಲೂ ಸಾಮಾನ್ಯ ಶಾಲೆಗಳಿಗೆ ಭೇಟಿ ನೀಡಿದೆ. ಅಲ್ಲಿನ ಮಕ್ಕಳಿಗೆ 'ನೀವು ಮನಸ್ಸಿಗೆ ಸಂತೋಷ ನೀಡುವ ವರ್ಣಚಿತ್ರಗಳನ್ನು ಬಿಡಿಸಿ ಮತ್ತು ಅದನ್ನೊಂದು ಕಾರ್ಯಾಗಾರ ಎಂದು ಭಾವಿಸಿ ನಿಮ್ಮನ್ನು ನೀವು ಪ್ರತಿಭಾವಂತ ಚಿತ್ರಗಾರ ಎಂದು ಕರೆದುಕೊಳ್ಳಿ. ನಾನಂತೂ ಕ್ರಿಯಾಶೀಲ ಚಿತ್ರಕಲಾವಿದನೊಬ್ಬ ಮುಗ್ಗರಿಸುವುದನ್ನು ಇಷ್ಟಪಡಲಾರೆ' ಎಂದಿದ್ದೆ. ನಾನು ಈ ಭಾವನೆಗಳನ್ನೆಲ್ಲಾ ಮಕ್ಕಳೊಂದಿಗೆ ಹಂಚಿಕೊಳ್ಳುವ ಸಂದರ್ಭಕ್ಕಾಗಿ ಕಾಯುತ್ತಿದ್ದೆ. ಮಕ್ಕಳು ಈ ಅವಕಾಶ ಬಳಸಿಕೊಳ್ಳಲು ನಾನು ಉಚಿತವಾಗಿ ವ್ಯವಸ್ಥೆ ಮಾಡಿದೆ. ಬಹುಶಃ ಬೇಡಿಕೆಯನ್ನು ಉಚಿತವಾಗಿ ಶಾಲೆಯ ಮುಂದಿಟ್ಟ ಕಾರಣ ಖುಷಿಯಾಗಿಯೇ ನನ್ನ ಮಾತನ್ನು ಅವರು ಒಪ್ಪಿಕೊಂಡರು. ಮತ್ತೆ ಇದು ಉಚಿತವಾಗಿ ಇರಬೇಕು ಎಂದು ಹೇಳಿದ್ದಕ್ಕೆ ಇನ್ನೊಂದು ಕಾರಣವೂ ಇದೆ. ಶಿಕ್ಷಣಕ್ಕಾಗಿ ಹಣ ಸುರಿದ ಮಾತ್ರಕ್ಕೆ ಉತ್ತಮ ಶಿಕ್ಷಣ ದೊರಕುತ್ತದೆ ಎಂದಲ್ಲ. ಹ್ಞಾಂ.. ಆದರೆ ನೀವು ಬೆಂಚ್ ಬದಲು ಮೆತ್ತನೆಯ ಪೀಠದಲ್ಲಿ ಕುಳಿತು ಪಾಠ ಕೇಳಬಹುದಷ್ಟೇ ಹೊರತು, ಉತ್ತಮ ಶಿಕ್ಷಣ ಹಣದಿಂದಲೇ ದೊರೆಯುತ್ತದೆ ಎಂಬುದು ಹಾಸ್ಯಾಸ್ಪದ. 'ತಾರೆ ಜಮೀನ್ ಪರ್' ಚಿತ್ರ ದೇಶದ ಜನತೆಯ ಪ್ರಜ್ಞೆಯ ಆಳಕ್ಕಿಳಿದಿರಬಹುದು. ಆದರೆ ಮಕ್ಕಳ ಜೊತೆಗಿನ ನನ್ನ ಒಡನಾಟ ಮಾತ್ರ ಚಿರಂತನವಾದದ್ದು. ಏಕೆಂದರೆ ಇದು ಶಾಶ್ವತವಾದ ಗೆಳೆತನ. ಮಕ್ಕಳೊಂದಿಗೆ ನಾನು ನನ್ನ ಜೀವಮಾನವಿಡೀ ಮಾಡಿಕೊಂಡ ಒಪ್ಪಂದ. ಈ ಅಂಶಗಳೇ ಕಥಾಹಂದರವಾಗಿ ಸ್ವಾಭಾವಿಕವಾಗಿ ಸೃಷ್ಟಿಗೊಂಡವು. ಇನ್ನಿತರ ಅಂಶಗಳು ಕಥೆ ಬೆಳೆಯುತ್ತಿದ್ದಂತೆ ಅದಕ್ಕೆ ಪೂರಕವಾಗಿ ಹುಟ್ಟಿಕೊಂಡವು. ನಾನು ಮಕ್ಕಳಿಗಾಗಿ ಬೇಸಿಗೆ ಕಾರ್ಯಾಗಾರ ನಡೆಸುತ್ತಿದ್ದ ಸಂದರ್ಭದಲ್ಲಿ ವಿಶೇಷ ತರಬೇತಿಗಾಗಿ ಮಕ್ಕಳು ಬರುತ್ತಿದ್ದರು. ಅಲ್ಲೊಬ್ಬ ಪುಟ್ಟ ಹುಡುಗ ನನ್ನನ್ನು ಸ್ವಾಗತಿಸಿದ್ದು ನೆನಪಾಗುತ್ತದೆ.... ಅದೂ ಉಚಿತವಾಗಿ ಮತ್ತು ಅಷ್ಟೇ ಸರಳವಾಗಿ!
ಜಗತ್ತನ್ನು ಪುಟ್ಟ ಬಾಲಕನೊಬ್ಬನ ದೃಷ್ಟಿಕೋನದಿಂದ ಪ್ರಸ್ತುತಪಡಿಸಿದ ರೀತಿ ಚಿತ್ರದ ವಿಶೇಷ. ಅಂತಹ ಕಾರ್ಯಕ್ಕೆ ನಿಮ್ಮ ಬಾಲ್ಯದ ಅನುಭವಗಳು ಎಷ್ಟರಮಟ್ಟಿಗೆ ನೆರವಿಗೆ ಬಂದವು?
ಓಹ್... ಚಿತ್ರದ ಬಹುಪಾಲು ಅಂಶಗಳು ನನ್ನ ಬಾಲ್ಯ ಅನುಭವಗಳನ್ನೇ ಒಳಗೊಂಡಿದೆ. ಇಶಾನ್ ತನ್ನ ಅಣ್ಣನ ಕೈಯಿಂದ ರಜಾ ಅರ್ಜಿ ಬರೆಸುವುದು ಇದಕ್ಕೆ ಒಂದು ನಿದರ್ಶನ. ನನಗೆ ಅಣ್ಣ ಇರಲಿಲ್ಲ. ಹಾಗಾಗಿ ನಾನು ನಮ್ಮ ಪಕ್ಕದ ಮನೆಯ ಹುಡುಗಿ ಬಳಿ ತೆರಳಿ ನನ್ನ ತಾಯಿಯ ಬದಲಿಗೆ ಆಕೆಯ ಕೈಯಲ್ಲಿ ರಜಾ ಅರ್ಜಿ ಬರೆಸುತ್ತಿದ್ದೆ. ಆಗ ನನ್ನ ಅಪ್ಪ ಕೆಲಸದ ನಿಮಿತ್ತ ಗೋವಾಕ್ಕೆ ಹೋಗಿದ್ದರು. ನನ್ನ ಅಮ್ಮನಿಗೆ ಇಂಗ್ಲಿಷ್ ಬರುತ್ತಿರಲಿಲ್ಲ. ಅವರಿಗೆ ಮರಾಠಿ ಮಾತ್ರ ಗೊತ್ತಿತ್ತು. ಯಾವುದೋ ಯೋಚನೆಯಲ್ಲಿ ಆ ಹಾಳೆಯನ್ನು ಸುತ್ತಿ ಹೂದಾನಿ ಒಳಗೆ ಎಸೆದಿದ್ದೆ. ಅದು ಅಪ್ಪನ ಕೈಗೆ ಹೇಗೋ ಸಿಕ್ಕಿಬಿಟ್ಟಿತ್ತು. ಇನ್ನು ಅಪ್ಪ ನನಗೆ ಕೊಟ್ಟ ಶಿಕ್ಷೆ ಚಿತ್ರದಲ್ಲಿ ಇಶಾನ್ ತಂದೆ ಆತನಿಗೆ ಕೊಟ್ಟ ಶಿಕ್ಷೆಗಿಂತ ಕೆಟ್ಟದಾಗಿತ್ತು. ಹಾಗೆಂದು ನಾನು ನನ್ನ ತಂದೆಯನ್ನು ಕೆಟ್ಟವರು ಎನ್ನುತ್ತಿಲ್ಲ. ಅವರು ಶ್ರೇಷ್ಠ ತಂದೆ ಮತ್ತು ನನಗೆ ಬಾಲ್ಯದಿಂದಲೇ ಸಂಪೂರ್ಣ ಸ್ವಾತಂತ್ರ್ಯ ನೀಡಿದ್ದರು. ಇದೇ ನಾನು ಮರಾಠಿ ಸಂಗೀತ ಮತ್ತು ರಂಗ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಲು ಸಹಾಯ ಮಾಡಿದ್ದು. ನನ್ನ ತಂದೆಗೆ ಈ ಕ್ಷೇತ್ರಗಳೆಡೆ ಇದ್ದ ಅಪಾರ ಆಸಕ್ತಿಯೇ ನನ್ನನ್ನೂ ರಂಗದೆಡೆಗೆ ಸೆಳೆಯಿತು. ಚಿತ್ರಕಲೆ ಮತ್ತು ಸಿನಿಮಾದಲ್ಲಿ ತೊಡಗುವಂತೆ ಮಾಡಿತು. ಅವೆಲ್ಲಾ ನಿಜವಾಗಿಯೂ ಒಂದು ಅದ್ಭುತ ಅನುಭವ.
ನಿಮ್ಮ ಭವಿಷ್ಯದ ಯೋಜನೆಗಳೇನು? ಸದ್ಯಕ್ಕೆ ಏನು ಮಾಡುತ್ತಿದ್ದೀರಿ?
ನಾನು ಪಾಚಿಗಟ್ಟಿದ ಕಲ್ಲಿನಂತೆ ತಟಸ್ಥವಾಗಿರದೆ ಸದಾ ಉರುಳುತ್ತಿರುವ ಬಂಡೆಯಂತೆ ಕ್ರಿಯಾಶೀಲವಾಗಿರುವವ. ಅದಕ್ಕಾಗಿ ಆ ದೇವರಿಗೆ ಎಷ್ಟು ಕೃತಜ್ಞನಾಗಿದ್ದರೂ ಸಾಲದು. ನನ್ನ ಜೀವಮಾನವಿಡೀ ಕಾಲಿಗೆ ಚಕ್ರ ಕಟ್ಟಿಕೊಂಡಂತೆ ಕೆಲಸ ಮಾಡಿದ್ದೇನೆ. ಹಾಗೆಂದು ನಾನು ಯಾವಾಗಲೂ ಹೀಗೇ ಇರುತ್ತೇನೆ ಎಂದಲ್ಲ. ನಾನು ಆಹಾರ ಪ್ರಿಯ. ಅಡುಗೆ ಮಾಡುವುದು ಕೂಡ ನನಗೆ ಒಂದು ಸಿನಿಮಾ ಮಾಡಿದಂತೆ, ಒಂದು ಹಾಡು ಬರೆದಂತೆಯೇ ಖುಷಿ ಕೊಡುವ ಕೆಲಸ. ಅತ್ಯಂತ ಸರಳವಾದ ಆಲೂಗೆಡ್ಡೆ ಬಾಜಿ ತಯಾರಿಸುವುದು ಕೂಡ ಒಂದು ಸಿನಿಮಾ ಮಾಡುವುಷ್ಟೇ ತ್ರಾಸದಾಯಕ ಮತ್ತು ಕ್ರಿಯಾಶೀಲ ಕೆಲಸ ಎಂದುಕೊಂಡವನು ನಾನು. ಈಗ ಒಂದು ಆಹಾರದ ಕುರಿತ ಚಿತ್ರಕತೆಯಲ್ಲಿ ಮುಳುಗಿದ್ದೇನೆ. ಅದು ಪಕ್ಕಾ ಹಾಸ್ಯಚಿತ್ರ. ಮತ್ತೊಂದು ಹಳ್ಳಿ-ನಗರ ನಡುವಿನ ಕಂದಕವನ್ನು ಮಕ್ಕಳ ದೃಷ್ಟಿಯಲ್ಲಿ ತೋರಿಸುವ 'ಇಂಡಿಯಾ ಐಟಂ' ಎಂಬ ಚಿತ್ರದ ಕೆಲಸವೂ ಸಾಗಿದೆ.
'ತಾರೆ....' ಚಿತ್ರದ ಪಾತ್ರಹಂಚಿಕೆ ಅತ್ಯಂತ ಅಮೋಘ. ಪಾತ್ರಕ್ಕಾಗಿ ನಟರನ್ನು ಆಯ್ಕೆ ಮಾಡಲು ಬಹಳ ಕಷ್ಟಪಟ್ಟಿರಬೇಕಲ್ಲವೇ?
ಚಿತ್ರದ ಸಾರವಿದ್ದದ್ದೇ ಪಾತ್ರ ಹಂಚಿಕೆಯಲ್ಲಿ. ಹಾಗಾಗಿ ಅದು ಬಹಳ ಸವಾಲಿನ ಕೆಲಸವಾಗಿತ್ತು. ನೀವು 'ಸೂಕ್ತ' ಮಗುವನ್ನು ಹುಡುಕುವುದಾದರೂ ಹೇಗೆ? ಜಾಹೀರಾತಿನಲ್ಲಿ ಅಭಿನಯಿಸುವ ಮಕ್ಕಳಿಂದ ಇಂತಹ ಪಾತ್ರ ನಿರೀಕ್ಷಿಸುವುದು ಸಾಧ್ಯವೇ? ಖಂಡಿತ ಇಲ್ಲ. ಏಕೆಂದರೆ ಅಲ್ಲೆಲ್ಲಾ ಮಗು ಕ್ಯಾಮರಾದ ಎದುರಿರುತ್ತದೆ. ಅವರ ತಾಯಂದಿರು ಪಕ್ಕದಲ್ಲೇ ನಿಂತಿರುತ್ತಾರೆ. ಆ ಮಗುವಿನ ಬಳಿ ಅದರ ಹೆಸರೋ, ಮೊಬೈಲ್ ನಂಬರೋ ಅಥವಾ ಇನ್ನೇನನ್ನೋ ಹೇಳಿಸಲಾಗುತ್ತದೆ. ಸಂಪೂರ್ಣ ತಂಡ ಮತ್ತು ಕ್ಯಾಮರಾದ ದೃಷ್ಟಿ ಮಗುವಿನೆಡೆಗೆ ಇರುತ್ತದೆ. ಇವೆಲ್ಲದರ ನಡುವೆ ಗಲಿಬಿಲಿಗೊಂಡು ನಿಂತ ಮಗುವಿಗೆ ಸೋಲುತ್ತೇನೆಂಬ ಭಯ ಕಾಡದೆ ಇರುತ್ತದೆಯೇ? ಹಾಗಾಗಿಯೇ ನಾನು ಶಾಲೆಗಳಿಗೆ ಹೋಗುವ ನಿರ್ಧಾರ ಮಾಡಿದೆ. ಅಲ್ಲಿನ ಮಕ್ಕಳೊಂದಿಗೆ ನಾನು ಮಾಡುತ್ತಿರುವುದು ಸಿನಿಮಾ ಆಯ್ಕೆಗಾಗಿ ಎಂಬುದನ್ನು ತಿಳಿಸದೆ ಅವರೊಂದಿಗೆ ಮಾತಿಗೆ ತೊಡಗಿದೆ. ಆ ಮಕ್ಕಳಿಗೆ 'ಹೈ ಜಂಪ್' ಕಥೆ ಹೇಳಲು ಆರಂಭಿಸಿದೆ. 'ತಾರೇ ಜಮೀನ್ ಪರ್' ಎಂದು ಚಿತ್ರಕ್ಕೆ ಹೆಸರಿಡುವ ಮೊದಲು ನಾವು ಇದನ್ನು ಈ ಹೆಸರಿನಿಂದ ಕರೆಯುತ್ತಿದ್ದೆವು). ಇವೆಲ್ಲವನ್ನೂ ದೂರದಿಂದಲೇ ರೆಕಾರ್ಡ್ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ನಾನು ಮಕ್ಕಳಿಗೆ ಕೆಲವೊಂದು ಸನ್ನಿವೇಶಗಳನ್ನು ವಿವರಿಸುತ್ತಿದ್ದೆ. ಇಶಾನ್ ಶಾಲೆಗೆ ಗೈರುಹಾಜರಾಗಿ ತನ್ನ ಅಣ್ಣನ ಬಳಿ ರಜಾ ಅರ್ಜಿ ಬರೆಸುವುದಕ್ಕಾಗಿ ಆತನನ್ನು ಎಬ್ಬಿಸುವ ಸನ್ನಿವೇಶವನ್ನೇ ನಿದರ್ಶನಕ್ಕೆ ತೆಗೆದುಕೊಳ್ಳಿ. ಅಲ್ಲಿ ಇಶಾನ್ 'ದಾದಾ, ದಾದಾ... ಇಲ್ಲಿ ಕೇಳು...' ಎನ್ನುತ್ತಾನೆ. ನಾನು ಈ ಸಾಲನ್ನೇ ಅಲ್ಲಿರುವ ಮಕ್ಕಳ ಬಳಿ ಹೇಳಿಸುತ್ತಿದ್ದೆ. ಇಶಾನ್ ಆ ಸಾಲುಗಳನ್ನು ಹೇಗೆ ಮುಂದುವರಿಸುತ್ತಿದ್ದ ಎಂಬ ಕಲ್ಪನೆಯಲ್ಲೇ ಮಗು ಅದನ್ನು ಹೇಳಿ ಮುಗಿಸಬೇಕು. ಹೀಗೇ ನಾನು ಶಾಮಕ್ ದಾವರ್ ಅವರ 'ಸಮ್ಮರ್ ಫಂಕ್'ಗೂ ಹೋಗಿದ್ದೆ. ಅಲ್ಲಿ ಮಧ್ಯಮವರ್ಗದ ಹುಡುಗ ದರ್ಶೀಲ್ ಅಂದರೆ ನಮ್ಮ ಇಶಾನ್ ರಜಾ ಕಳೆಯಲು ಬಂದಿದ್ದ. ಇನ್ನು ಇಶಾನ್ ಅಣ್ಣ ಯೋಹಾನ್ ಪಾತ್ರ ವಹಿಸಿದ ಸಚೇತ್ ಎಂಜಿನಿಯರ್ ಆಯ್ಕೆ ವೇಳೆಯಲ್ಲೂ ಬಂದಿರಲಿಲ್ಲ ಅಥವಾ ಯಾವ ಶಾಲೆಗಳಲ್ಲೂ ಇರಲಿಲ್ಲ! ಅವನು 'ಸಮ್ಮರ್ ಫಂಕ್'ನಲ್ಲಿದ್ದ ತನ್ನ ತಮ್ಮನನ್ನು ಕರೆದೊಯ್ಯಲು ಬಂದಿದ್ದ. ಅವನು 'ಬಾ ಹೋಗೋಣ... ಅಮ್ಮ ಕಾಯುತ್ತಿದ್ದಾರೆ' ಎಂದು ತನ್ನ ತಮ್ಮನನ್ನು ಕರೆದ ವಿಧಾನವೇ ನನಗೆ ಸಾಕಾಯಿತು. ನನಗೆ ಯೋಹಾನ್ ಅಲ್ಲೇ ಸಿಕ್ಕಿಬಿಟ್ಟಿದ್ದ. ಈ ಎಲ್ಲಾ ಪಾತ್ರಗಳು ಕಥೆಗೆ ರೂಪು ನೀಡಲು ಅಗಾಧವಾದ ನೆರವು ನೀಡಿವೆ. ಇಶಾನ್ ಕಥೆಯ ಮುಖ್ಯ ಪಾತ್ರಧಾರಿ.
ಆದರೆ ಏಕೆ ಆ ಪಾತ್ರವೇ ಕಥೆಯ ಕೇಂದ್ರ ಮತ್ತು ಅತ್ಯಂತ ಪ್ರಮುಖ ಪಾತ್ರವಾಗಬೇಕು? ಚಿತ್ರದಲ್ಲಿ ಬರುವ ಅಂಗವಿಕಲ ಹುಡುಗನ ಪಾತ್ರ ಯಾಕಾಗಬಾರದು? ಯಾರೂ ರಾಜನ್ ದಾಮೋದರ್ ಬಗ್ಗೆ ಮಾತನಾಡುವುದಿಲ್ಲ ಅಥವಾ 'ಇಶಾನ್ ಹೋಂವರ್ಕ್ ಮಾಡಿದ್ದೀಯಾ?' ಎನ್ನುವ ಹುಡುಗನ ಕುರಿತು ಮಾತನಾಡುವುದಿಲ್ಲ. ಇವರೆಲ್ಲರೂ ಪಾತ್ರಕ್ಕೆ ಜೀವ ತುಂಬಿದ ಪರಿ ಮೆಚ್ಚುವಂತಹುದು.
ಹಾಗಾಗಿಯೇ ಸಿನಿಮಾ ಜನರ ಮನ ಮುಟ್ಟುವಲ್ಲಿ ಯಶಸ್ವಿಯಾಯಿತು.
ಟಿಎಸ್‌ಐ
ತಾರೀಖ್ ಲಷ್ಕರ್ ಮತ್ತು ಪ್ರಸಿದ್ಧ ಮೆನನ್
|