ಇದು ನಮ್ಮ ವಿಶೇಷ , ಸಂಪೂರ್ಣ  ಓದಿ

  User ID
ದ ಸಂಡೆ ಇಂಡಿಯನ್ ಮಾಧ್ಯಮಲೋಕಕ್ಕೆ ಸುಸ್ವಾಗತ
       Search
ಇತರ ವಿಭಾಗಗಳು
 
ಬಣ್ಣದ ಲೋಕ
 
 

ಅಮೀರ್ ಅಪಜಯ

'ತಾರೆ ಜಮೀನ್ ಪರ್' ಚಿತ್ರ ನೋಡಿದವರಿಗೆ ಅಮೀರ್ ಖಾನ್ ಹೃದಯ ವೈಶಾಲ್ಯತೆ ಬಗ್ಗೆ ಇನ್ನೊಮ್ಮೆ ಹೇಳಬೇಕಾಗಿಲ್ಲ ತಾನೆ? ಆದರೆ ಮನೋವ್ಯಾಧಿ ಇರುವ ತಮ್ಮ ಸಹೋದರ ಫೈಸಲ್ ಖಾನ್‌ರನ್ನು ಪಡೆದುಕೊಳ್ಳುವ ಕಾನೂನು ಸಮರದಲ್ಲಿ ಮಾತ್ರ ಅವರು ಸೋತಿದ್ದಾರೆ. ಫೈಸಲ್ ಇಷ್ಟ ಪಟ್ಟಲ್ಲಿ ಜತೆಗಿರಬಹುದು. ಆದರೆ ಸ್ಕಿಜೋಫ್ರೇನಿಯಾ ಇರುವ ಕಾರಣ ಸೂಕ್ತ ಚಿಕಿತ್ಸೆ ಪಡೆಯುತ್ತಿರಬೇಕು ಎಂದು ಸ್ಥಳೀಯ ನ್ಯಾಯಾಲಯ ಆದೇಶಿಸಿದೆ. ಆದಷ್ಟು ಬೇಗ ಅವರು ಗುಣಮುಖವಾಗಲಿ ಎಂಬ ಹಾರೈಕೆ ನಮ್ಮದು.

ಬಿಪಾಶಾಗೆ ನೋ ಎಂಟ್ರಿ!

ಬೋನಿ ಕಪೂರ್ ನಿರ್ಮಾಣದ 'ನೋ ಎಂಟ್ರಿ' ನೋಡಿ ತಲೆಚಚ್ಚಿಕೊಂಡವರಿಗೆ ಈಗ 'ನೋ ಎಂಟ್ರಿ ಮೆ ಎಂಟ್ರಿ' ನೋಡೋ ಸೌಭಾಗ್ಯ! 'ನೋ ಎಂಟ್ರಿ'ಯಲ್ಲಿ ಸಲ್ಮಾನ್ ಖಾನ್, ಅನಿಲ್ ಕಪೂರ್, ಲಾರಾ ದತ್ತಾ... ಹೀಗೆ ನಟರ ದೊಡ್ಡ ದಂಡೇ ತುಂಬಿತ್ತು. ಬಿಪಾಶಾಳ ಚಮಕ್ ಚಮಕ್ ಐಟಂ ಹಾಡಂತೂ ಹುಚ್ಚೆಬ್ಬಿಸಿಬಿಟ್ಟಿತು. ಆದರೆ ಈ ಬಾರಿ ಮಾತ್ರ ಬಿಪಾಶಾಗೇ 'ಎಂಟ್ರಿ'ನೇ ಸಿಕ್ಕಿಲ್ಲ! ಸಲ್ಮಾನ್- ಜಾನ್ ಶೀತಲ ಸಮರ ಇನ್ನೂ ಬಿಸಿಬಿಸಿಯಾಗಿರೋ ಹಾಗಿದೆ? ಹೀಗಾಗಬಾರದಿತ್ತು ಬಿಪ್ಸ್.

ಕಾಫಿ ಘಮ ಘಮ...

ಎಂಥಾ ಕಾಲ ಬಂತಪ್ಪಾ? 'ಬೈ ೨ ಕಾಫಿ'ಗೆ ಇಷ್ಟೆಲ್ಲಾ ಹಾರಾಟಾನಾ? ಇದು ಸಾಮಾನ್ಯ ಕಾಫಿ ಅಲ್ಲಾ ಸ್ವಾಮಿ. ಹೊಸ ಸಿನಿಮಾ! ಸಿನಿಮಾ ಹೆಸರೇ 'ಬೈ ೨ ಕಾಫಿ'. ಆದರೆ ಏಟ್ರಿಯಾ ಹೊಟೇಲ್‌ನಲ್ಲಿ ನಡೆದ 'ಫುಲ್' ಪಾತ್ರ ಪರಿಚಯ ಏಕ್‌ದಂ ಭರ್ಜರಿಯಾಗಿತ್ತು. ನಾಯಕಿಯರಾದ ನದಿ ಮತ್ತು ರಾಗಿಣಿ ಎಂಬ ಹೊಸ ಅರಗಿಣಿಯರು ರ್‍ಯಾಂಪ್ ಮೇಲೆ ಕ್ಯಾಟ್‌ವಾಕ್ ಮಾಡಿ ಕಿಲಕಿಲ ಎನ್ನುತ್ತಾ ಪರಿಚಯಿಸಿಕೊಂಡರು. ಚಿತ್ರದ ನಿರ್ದೇಶಕ ಶೇಖರ್. ಅವರ ಸಹೋದರ ನವೀನ್ 'ಕಾಫಿ' ಕುಡಿಯೋ ಹೀರೋ! 'ಬೈ ೨ ಕಾಫಿ' ಅಂತ ಹೆಸರಿಟ್ಟ ಮೇಲೆ ಕಾಫಿ ಪರಿಮಳ ಬೇಕೇ ಬೇಕು. ಅದ್ಕೇ ಬಹುತೇಕ ಚಿತ್ರೀಕರಣ ಕಾಫಿ ಡೇನಲ್ಲೇ! ಸಿನೆಮಾ ಟಿಕೆಟೂ ಬೈಟೂ ಇದ್ರೆ ಚೆನ್ನಾಗಿರ್‍ತಿತ್ತು ಅಂದ್ರಾ? ನಮ್ದೂ ಅದೇ ಯೋಚ್ನೆ ಸ್ವಾಮಿ.

ದೀಪಿಕಾ ಪ್ರೇಮಲೋಕ

'ಓಂ ಶಾಂತಿ ಓಂ' ನಂತರ ದೀಪಿಕಾ ಪಡುಕೋಣೆ ಅಂತೆ- ಕಂತೆಗಳ ಸಂತೆಗೆ ಕೊನೆಯೇ ಇಲ್ಲ! ಚಿತ್ರ ಜಗತ್ತಿನಲ್ಲಿ ಬೆಳೆದಷ್ಟೇ ವೇಗವಾಗಿ ಆಕೆಯ ಪ್ರೇಮ ಕಥಾನಕಗಳ ಪಟ್ಟಿಯೂ ಹನುಮಂತನ ಬಾಲವಾಗುತ್ತಿದೆ! ರಣಬೀರ್‌ನಿಂದ ತೊಡಗಿ ನಿಹಾರ್‌ವರೆಗೆ ಧೋನಿಯಿಂದ ಹಿಡಿದು ಯುವರಾಜ್‌ವರೆಗೆ.... ಉಫ್! ಸದ್ಯಕ್ಕೆ ರೈಲು ರಣಬೀರ್ ಎಂಬ ನಿಲ್ದಾಣದಲ್ಲಿದೆ? ಹೌದು, ಮತ್ತೆ ರಣಬೀರ್- ದೀಪಿಕಾ 'ಜಬ್ ಸೆ ತೇರಿ ನೈನಾ....' ಎನ್ನುತ್ತಾ ಓಡಾಡುತ್ತಿದ್ದಾರೆ. ಇತ್ತೀಚೆಗೆ ಶಾರುಖ್ ಖಾನ್ ಜೊತೆ ಪೆಪ್ಸಿ ಜಾಹೀರಾತು ಚಿತ್ರೀಕರಣ ಸಂದರ್ಭದಲ್ಲಿ ಈ ಜೋಡಿ ತಮ್ಮ ಅದೇ ಹಳೇ ಮೂಡ್‌ನಲ್ಲಿ ಇದ್ದರಂತೆ! ಅಯ್ಯೋ, 'ಸಾವರಿಯಾ' ಹುಡುಗಿ ಕಥೆ ಏನಪ್ಪಾ?

ಬಿಂದಾಸ್ ಮೋಡಿ

'ಬಿಂದಾಸ್'ಗೆ ಒಳ್ಳೇ ವಿಮರ್ಶೆನೂ ಸಿಕ್ಕಿದೆ. ಭರ್ಜರಿ ಓಪನಿಂಗ್ ಕೂಡಾ. ಗುಬ್ಬಚ್ಚಿ ಗೂಡಲ್ಲಿ ಕುಚು ಕುಚು... ಮಾಡಿದ ಪುನೀತ್- ಹಂಸಿಕಾ ಜೋಡಿ ನೋಡಿ ಹರೆಯದ ಮನಗಳು ಹುಚ್ಚೆದ್ದು ಕುಣಿದಿವೆ. ಇದೆಲ್ಲಾ ಇರಲಿ ಬಿಡು ಗುರು. 'ಬಿಂದಾಸ್'ನಲ್ಲಿ ಇನ್ನೂ ಒಂದು ಮಜಾ ಐತೆ. ಅದೇ ಪುನೀತ್ ರಾಜ್‌ಕುಮಾರ್ ಬರೋಬ್ಬರಿ ಆಕ್ಷನ್ ಮತ್ತು ಡ್ಯಾನ್ಸಿಂಗ್! ಇದೆಲ್ಲಾ ಸುಮ್‌ಸುಮ್ನೆ ಆಗಿಲ್ಲಮ್ಮಾ. ಪುನೀತ್ ಆರು ತಿಂಗಳು ಹರ ಸಾಹಸ ಪಟ್ಟು ಈ ಪಾಟಿ ಆಕ್ಷನ್ ಮಾಡಿದ್ದಾನೆ. ಮಹಿಳಾ ಅಭಿಮಾನಿಗಳು ಹುಟ್ಕೊಳ್ಳೋದು ಅಂದ್ರೆ ಅಷ್ಟು ಸುಲಭವೇನು? ಎಲ್ಲಾದಕ್ಕೂ ಶ್ರಮ ಪಡ್ಲೇಬೇಕು. ಏನಂತೀರಾ?

ರಿಯಲ್ ಧಮಾಕಾ...

ಉಪೇಂದ್ರ 'ಬುದ್ಧಿವಂತ'ರಾಗುತ್ತಿದ್ದಾರೆ! ಅಯ್ಯೋ, ಇಲ್ಲಪ್ಪಾ. ಮತ್ತೊಮ್ಮೆ ನಿರ್ದೇಶನದ ದೀಕ್ಷೆ ತೆಗೆದುಕೊಂಡಿಲ್ಲ. 'ಬುದ್ಧಿವಂತರಿಗೆ ಮಾತ್ರ' ಎಂದು ತಮ್ಮ ಸಿನಿಮಾವನ್ನು ಬ್ರಾಂಡ್ ಕೂಡಾ ಮಾಡಿಲ್ಲ. ಆಗಿರೋದಿಷ್ಟೆ. ಅವರ ಹೊಸ ಚಿತ್ರ 'ಬುದ್ಧಿವಂತ' ತೆರೆಗೆ ಬರಲು ಸಿದ್ಧವಾಗುತ್ತಿದೆ. ಇದರಲ್ಲಿ ಅಭಿಮಾನಿಗಳಿಗೆ ರಿಯಲ್ ಉಪ್ಪಿ ದರ್ಶನವಾಗಲಿದೆ. ಹಾಗಂದ್ರೆ? ಇಲ್ಲಿ ಉಪ್ಪಿ ಐದು ಬೆಡಗಿಯರಿಗೆ ಕೈಕೊಡೋ ಸ್ವಪ್ನಮಿತ್ರ! ಒಂದೆಡೆ 'ಉಪೇಂದ್ರ' ಮತ್ತೊಂದೆಡೆ 'ರಕ್ತ ಕಣ್ಣೀರು' ಚಿತ್ರಗಳ ನೆರಳು ತಳಕು ಹಾಕಿಕೊಂಡಿವೆ ಎನ್ನುವುದು ಸಿನಿಮಾ ಪಂಡಿತರ ಅಂಬೋಣ! ಅದೇನೋ ಗೊತ್ತಿಲ್ಲ. ಆದರೆ ಜೆಮಿನಿ ಗಣೇಶನ್ ಅವರ 'ನಾನ್ ಅವನ್ ಇಲ್ಲೈ' ಚಿತ್ರದಿಂದ ಪ್ರೇರಣೆ ಪಡೆದದ್ದಂತೂ ನಿಜ!!

ನಾವಿಬ್ಬರು... ನಮಗೆ ಆರು!

ಬ್ರ್ಯಾಂಜಲೀನಾ ಕುಟುಂಬಕ್ಕೆ ಇನ್ನಿಬ್ಬರು ಬರಲಿರುವ ಸುದ್ದಿ ಗೊತ್ತೇ? ಅಷ್ಟೆಲ್ಲಾ ಕಣ್ಣರಳಿಸಬೇಡಿ! ಏಂಜಲೀನಾ ಜ್ಯೂಲಿ ಮತ್ತೆ ಗರ್ಭಿಣಿ. ಅದೂ ಅವಳಿ ಮಕ್ಕಳಿಗೆ! ಬ್ರ್ಯಾಂಜಲೀನಾ ಜೋಡಿ ಮದುವೆಗೆ ಎಷ್ಟು ಮಹತ್ವ ಕೊಡುತ್ತಿದ್ದಾರೆ ಎಂಬುದಕ್ಕೆ ಇದಕ್ಕಿಂತ ಸಾಕ್ಷಿ ಬೇಕೆ? ದಂಪತಿಗಳಿಬ್ಬರೂ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಈ ಜೋಡಿಯ ಮೂರು ದತ್ತು ಮಕ್ಕಳು ಮತ್ತು ಸ್ವಂತ ಮಗಳು ಶಿಲಾಹ್ ಮುಖ ಅರಳಿದೆ. ಎಷ್ಟೆಂದರೂ ಆಟವಾಡಲು ಹೊಸ ಜೊತೆಗಾರರು ಬರುತ್ತಿದ್ದಾರಲ್ಲವೇ?


 

ಎನ್.ಕೆ. ಸುಪ್ರಭಾ, ಪ್ರಸಿದ್ಧ ಮೆನನ್

 
   The Sunday Indian is also associated with :
©Copyright 2007, Planman Media Pvt. Ltd. An Arindam Chaudhuri Initiative. With Intellectual Support from IIPM & Malay Chaudhuri.

Copyright © Planman Media Pvt. Ltd. 2004-2006 All Rights Reserved.Best viewed in Internet Explorer Browser .